ಆಸ್ಟ್ರೇಲಿಯಾದಲ್ಲಿ ಫೋರ್ ವೀಲ್ ಡ್ರೈವಿಂಗ್ ಕ್ಲಬ್ ಎನ್ನುವುದು ಬಹಳ ಹಳೆಯ ಕಲ್ಪನೆ. ಬ್ರಿಟಿಷರೊಡನೆ ಆ ಕಲ್ಪನೆ ಮತ್ತು ಹವ್ಯಾಸ ಈ ದೇಶಕ್ಕೆ ಆಮದಾಗಿ ಬಂದದ್ದು. ಒಂದು ಶತಮಾನಕ್ಕೂ ದೀರ್ಘ ಕಾಲ ಫೋರ್ ವೀಲ್ ಡ್ರೈವಿಂಗ್ ಹವ್ಯಾಸವು ಲಂಗುಲಗಾಮಿಲ್ಲದೆ ಬೇಕಾಬಿಟ್ಟಿ ನಡೆದಿತ್ತು. ಅದಕ್ಕೆ ಕಾನೂನಿನ ಹಿಡಿತವಾಗಲಿ, ಒಂದಷ್ಟು ಚೌಕಟ್ಟಾಗಲಿ ಇಲ್ಲದೇ ಇದ್ದಾಗ, ಪ್ರಕೃತಿಗೆ, ಜೀವಸಂಕುಲಕ್ಕೆ ಆದ ಹಾನಿಗೆ ಲೆಕ್ಕವಿರಲಿಲ್ಲ. ದೊಡ್ಡದೊಡ್ಡ ಫೋರ್ ವೀಲ್ ವಾಹನಗಳನ್ನು ಹೊಂದುವುದು, ಅವನ್ನು ಎಲ್ಲೆಂದರಲ್ಲಿ ನುಗ್ಗಿಸಿ ಯದ್ವಾತದ್ವಾ ಓಡಿಸುವುದು ತಮ್ಮ ಗಂಡಸುತನದ ಹೆಗ್ಗುರುತು ಎನ್ನುವ ಅನೇಕ ಬಿಳಿಯ ಗಂಡಸರು ಪ್ರಾಣಿಪಕ್ಷಿ ಮರಗಿಡಗಳ ಸಂಕುಲಗಳನ್ನು ನಾಶ ಮಾಡುತ್ತಾ ಆನಂದಿಸುತ್ತಿದ್ದರು.
ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ
ಹೋದ ವಾರ ಕೌನ್ಸೆಲಿಂಗ್ ವಿಭಾಗದ ಒಬ್ಬ ಸ್ನಾತಕೋತ್ತರ ವಿದ್ಯಾರ್ಥಿನಿಯೊಡನೆ ಮಾತನಾಡುತ್ತಿದ್ದೆ. ತನ್ನ ವ್ಯಾಸಂಗದ ಭಾಗವಾಗಿ ಆಕೆ ಕೈಗೊಂಡಿರುವ ಪ್ರಾಜೆಕ್ಟಿನ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಮಾತು ಅಲ್ಲಿಇಲ್ಲಿ ಹೊರಳಿ ಕಡೆಗೆ ಬಂದು ನಿಂತದ್ದು ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲಾಗದ ಗಂಡಸರ ಭಾವನಾತ್ಮಕ ಪ್ರಪಂಚದ ಬಗ್ಗೆ. ಈ ವಿದ್ಯಾರ್ಥಿನಿಯ ಪ್ರಾಜೆಕ್ಟ್ ವಿಷಯ ‘ಬಂಜೆತನವನ್ನು ಗಂಡು-ಹೆಣ್ಣು ದಂಪತಿಗಳು ಎದುರಿಸುವಾಗ ಅವರಿಗೆ ಲಭ್ಯವಿರುವ ಸೇವೆಸಲಹೆಗಳಲ್ಲಿ ಯಾವುವು ಹೆಚ್ಚು ಪರಿಣಾಮಕಾರಿಯಾಗಿವೆ’ ಎಂದು. ಸ್ವತಃ ಆಕೆಯೆ ನುರಿತ ಕೌನ್ಸೆಲ್ಲರ್ (ಆಪ್ತ ಸಮಾಲೋಚನೆ ಮತ್ತು ಸಲಹಾಸೇವೆ) ಮತ್ತು ಬಂಜೆತನ ವಿಷಯದ ಬಗ್ಗೆ ಕೆಲಸ ಮಾಡುತ್ತಿರುವ ಕೆಲ ಸಂಸ್ಥೆಗಳ ಆಡಳಿತಮಂಡಳಿ ಸದಸ್ಯೆ ಕೂಡ. ವಿಷಯದಲ್ಲಿ ಆಕೆಗೆ ಪರಿಣಿತಿಯಿದ್ದರೂ ಯಾವ್ಯಾವ ಸೇವೆಸಲಹೆಗಳು ಮತ್ತು ಮಧ್ಯಸ್ಥಿಕೆ ಪ್ರಕ್ರಿಯೆಗಳು (interventions) ಹೇಗೆಲ್ಲ ಪರಿಣಾಮಕಾರಿಯಾಗಿವೆ ಎನ್ನುವುದರ ಬಗ್ಗೆ ಅವರು ಅಧ್ಯಯನ ನಡೆಸುತ್ತ ಸಾಕ್ಷಾಧಾರಗಳನ್ನು ಸಂಗ್ರಹಿಸುತ್ತಿದ್ದರು. ಆಸ್ಟ್ರೇಲಿಯಾದಲ್ಲಿ ಬಂಜೆತನವೆಂಬುದು, ಮಕ್ಕಳನ್ನು ದತ್ತು ಪಡೆಯುವುದು ಎರಡೂ ಬಹುದೊಡ್ಡ ವಿಷಯಗಳು. ಒಟ್ಟಾರೆ ದೇಶದ ಜನಸಂಖ್ಯೆ ಕಡಿಮೆಯಿದ್ದರೂ (೨೫ ಮಿಲಿಯನ್) ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲಾಗದ ಸಂಖ್ಯೆ ದೊಡ್ಡದು. ಉದಾಹರಣೆಗೆ ಹೇಳುವುದಾದರೆ ಪ್ರಪಂಚದಾದ್ಯಂತ ಸುಮಾರು ೪೮ ಮಿಲಿಯನ್ ಮಕ್ಕಳಾಗದ ದಂಪತಿಗಳಿದ್ದಾರೆ ಎಂದು ೨೦೧೮ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ತಮಗೆ ಬಂಜೆತನವಿದ್ದು (ಗಂಡು ಅಥವಾ ಹೆಣ್ಣು ಇಬ್ಬರಿಗೂ ಸಲ್ಲುವ ಪದ) ಮಗುವನ್ನು IVF ವಿಧಾನದ ಮೂಲಕ ಪಡೆಯುವ ಪ್ರತಿ ೨೦ ಗಂಡು-ಹೆಣ್ಣು ಜೋಡಿಗಳಲ್ಲಿ (ಜಾಗತಿಕ ಮಟ್ಟದಲ್ಲಿ) ಒಂದು ಜೋಡಿ ಆಸ್ಟ್ರೇಲಿಯಾದವರು. ದುಃಖದ ಸತ್ಯವೆಂದರೆ ಆಸ್ಟ್ರೇಲಿಯಾದ ಜೋಡಿಗಳಲ್ಲಿ ಎಷ್ಟೆಲ್ಲಾ ಐವಿಫ್ ಪ್ರಯತ್ನ ನಡೆಸಿದರೂ ಫಲ ಕೊಡದೆ ಪ್ರತಿ ಮೂರು ಜೋಡಿಗಳಲ್ಲಿ ಎರಡು ಜೋಡಿಗಳಿಗೆ ಮಗುವಾಗದೇ, ಉಳಿದುಬಿಡುತ್ತಾರೆ.
ಕಾಕತಾಳೀಯವೆಂಬಂತೆ ಮೊನ್ನೆ ಸುದ್ದಿಯಲ್ಲಿ ಕೇಳಿದ್ದು ದೇಶದಲ್ಲಿ ಈಗ ಗರ್ಭ ಧರಿಸುವ ಸಾಮರ್ಥ್ಯವಿರುವ ಪ್ರತಿಯೊಬ್ಬ ಹೆಣ್ಣಿಗೂ ಸರಾಸರಿ ೧.೯೬ (ಎರಡಕ್ಕೂ ಕಡಿಮೆ) ಮಕ್ಕಳಿದ್ದಾರೆ, ಇದು ಆತಂಕದ ವಿಷಯವಾಗಿದೆ. ಯಾಕಪ್ಪ ಎಂದರೆ ೨೦೦೬ನೇ ಇಸವಿಯಲ್ಲಿ ಆಗಿನ ಖಜಾಂಚಿಯಾಗಿದ್ದ ಪೀಟರ್ ಕಾಸ್ಟೆಲೊ ‘ಮಕ್ಕಳನ್ನು ಪಡೆಯಿರಿ. ಅಮ್ಮನಿಗೊಂದು, ಅಪ್ಪನಿಗೊಂದು, ದೇಶಕ್ಕೊಂದು ಮಗು ಇರಲಿ’ ಎಂದು ದೇಶದ ಜನತೆಯನ್ನು ಹುರಿದುಂಬಿಸಿದ್ದರು. ಮೂರು ಮಕ್ಕಳ ಮಾತು ಮರೆತೇಹೋಯ್ತು, ಎರಡಕ್ಕೂ ಕಡಿಮೆಯಾಯ್ತು ಎನ್ನುವುದು ಈಗಿನ ಸ್ಥಿತಿ!
ತಾವೆಷ್ಟೇ ಬಯಸಿದರೂ, ಪ್ರಯತ್ನಿಸಿದರೂ, ತಮ್ಮ ಬಯಕೆಯಂತೆ ಸ್ವಾಭಾವಿಕವಾಗಿ ಮಕ್ಕಳಾಗದವರ ದುಃಖ ಆಳವಾದದ್ದು ಎಂದು ಅನೇಕ ಅಧ್ಯಯನಗಳು ಹೇಳಿವೆ. ಬಂಜೆತನವನ್ನು ಅನುಭವಿಸುವ ಗಂಡು-ಹೆಣ್ಣುಗಳ ದುಃಖದಲ್ಲಿ ಬೇಕಾದಷ್ಟು ವ್ಯತ್ಯಾಸವಿದೆ. ಅದು ಸ್ವಲ್ಪ ಮಟ್ಟಿಗೆ ಜೈವಿಕವಾದದ್ದು ಆಗಿದ್ದರೂ ಬಂಜೆತನದ ನೋವು ಅನೇಕ ಮಾನಸಿಕ ಅಸ್ವಸ್ಥತೆ ಮತ್ತು ರೋಗಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಮಾನಸಿಕ ಖಿನ್ನತೆ, ಆತಂಕ, ಕೊನೆಯಿಲ್ಲದ ವ್ಯಥೆ, ಕೊರಗು, ಶೋಕದೊಡನೆ ಒಬ್ಬಂಟಿತನದ ವ್ಯಸನ, ತನ್ನ ಅಸ್ತಿತ್ವಕ್ಕೇ ಬೆಲೆಯಿಲ್ಲದಾಗಿದ್ದು ಮತ್ತು ಅರ್ಥವಿಲ್ಲವೆಂಬ ಗೋಳು ಮುಂತಾದ ಮಾನಸಿಕ ಮತ್ತು ಸಾಮಾಜಿಕ ಭಾವನೆಗಳು ಮನೆ ಮಾಡಿ ಜೀವನಪರ್ಯಂತ ಕಾಡಬಹುದು. ಬಂಜೆತನವನ್ನು ಅನುಭವಿಸುವ ಎಲ್ಲಾ ಜೋಡಿಗಳನ್ನೂ ಇವೆಲ್ಲ ಭಾವನೆಗಳು ಸದಾ ಪೀಡಿಸುತ್ತವೆ ಎಂದೇನೂ ಇಲ್ಲ. ಅವರವರ ಮನೋಬಲ, ಅರೋಗ್ಯ, ಆರ್ಥಿಕ ಪರಿಸ್ಥಿತಿ, ಕುಟುಂಬದ ಸಂದರ್ಭವನ್ನು ಆಧರಿಸಿ ನೋವಿನ ಮಜಲುಗಳು ಬೇರೆಬೇರೆ ರೀತಿ ಇರಬಹುದು.
೨೦೦೬ನೇ ಇಸವಿಯಲ್ಲಿ ಆಗಿನ ಖಚಾಂಚಿಯಾಗಿದ್ದ ಪೀಟರ್ ಕಾಸ್ಟೆಲೊ ‘ಮಕ್ಕಳನ್ನು ಪಡೆಯಿರಿ. ಅಮ್ಮನಿಗೊಂದು, ಅಪ್ಪನಿಗೊಂದು, ದೇಶಕ್ಕೊಂದು ಮಗು ಇರಲಿ’ ಎಂದು ದೇಶದ ಜನತೆಯನ್ನು ಹುರಿದುಂಬಿಸಿದ್ದರು. ಮೂರು ಮಕ್ಕಳ ಮಾತು ಮರೆತೇಹೋಯ್ತು, ಎರಡಕ್ಕೂ ಕಡಿಮೆಯಾಯ್ತು ಎನ್ನುವುದು ಈಗಿನ ಸ್ಥಿತಿ!
ಆ ವಿದ್ಯಾರ್ಥಿನಿಯ ಜೊತೆ ಮಾತನಾಡುವಾಗ ಗಂಡಸರು ಹೇಗೆ ತಮ್ಮ ಬಂಜೆತನಕ್ಕೆ ಸಂಬಂಧಿಸಿದ ನೋವನ್ನು ನಿಭಾಯಿಸುತ್ತಾರೆ ಎನ್ನುವ ವಿಷಯ ಬಂತು. ಕೌನ್ಸೆಲ್ಲಿಂಗ್, ಬೇರೆಬೇರೆ ಥೆರಪಿಗಳ ಜೊತೆಗೆ ಅವರು ತಮ್ಮ ಸ್ನೇಹಿತರ ಜೊತೆ ಕಳೆಯುವ ಸಮಯವು ಬಹು ಮುಖ್ಯವಾಗುತ್ತದೆ ಅನ್ನುತ್ತಾ ಆಕೆ ತನ್ನ ವೃತ್ತಿಗೆ ಸಂಬಂಧಿಸಿದಂತೆ ಗಂಡಸರಿಗೆ ಹೊಸ ರೀತಿಯ ಥೆರಪಿ ನೀಡುವ ಫೋರ್ ವೀಲ್ ಡ್ರೈವಿಂಗ್ ಕ್ಲಬ್ ಒಂದಕ್ಕೆ ಸದಸ್ಯಳಾಗಿದ್ದೀನಿ ಎಂದರು.
ಆಸ್ಟ್ರೇಲಿಯಾದಲ್ಲಿ ಫೋರ್ ವೀಲ್ ಡ್ರೈವಿಂಗ್ ಕ್ಲಬ್ ಎನ್ನುವುದು ಬಹಳ ಹಳೆಯ ಕಲ್ಪನೆ. ಬ್ರಿಟಿಷರೊಡನೆ ಆ ಕಲ್ಪನೆ ಮತ್ತು ಹವ್ಯಾಸ ಈ ದೇಶಕ್ಕೆ ಆಮದಾಗಿ ಬಂದದ್ದು. ಒಂದಕ್ಕೂ ಹೆಚ್ಚು ಶತಮಾನದುದ್ದಕ್ಕೂ ಈ ಫೋರ್ ವೀಲ್ ಡ್ರೈವಿಂಗ್ ಹವ್ಯಾಸವು ಲಂಗುಲಗಾಮಿಲ್ಲದೆ ಬೇಕಾಬಿಟ್ಟಿ ನಡೆದಿತ್ತು. ಅದಕ್ಕೆ ಕಾನೂನಿನ ಹಿಡಿತವಾಗಲಿ, ಒಂದಷ್ಟು ಚೌಕಟ್ಟಾಗಲಿ ಇಲ್ಲದ ಅದರಿಂದ ಪ್ರಕೃತಿಗೆ, ಜೀವಸಂಕುಲಕ್ಕೆ ಆದ ಹಾನಿಗೆ ಲೆಕ್ಕವಿರಲಿಲ್ಲ. ದೊಡ್ಡದೊಡ್ಡ ಫೋರ್ ವೀಲ್ ವಾಹನಗಳನ್ನು ಹೊಂದುವುದು, ಅವನ್ನು ಎಲ್ಲೆಂದರಲ್ಲಿ ನುಗ್ಗಿಸಿ ಯದ್ವಾತದ್ವಾ ಓಡಿಸುವುದು ತಮ್ಮ ಗಂಡಸುತನದ ಹೆಗ್ಗುರುತು ಎನ್ನುವ ಅನೇಕ ಬಿಳಿಯ ಗಂಡಸರು ಪ್ರಾಣಿಪಕ್ಷಿ ಮರಗಿಡಗಳ ಸಂಕುಲಗಳನ್ನು ನಾಶ ಮಾಡುತ್ತಾ ಆನಂದಿಸುತ್ತಿದ್ದರು. ಅದರ ಜೊತೆಗೆ ನಿಸರ್ಗದಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳನ್ನು ಕೂಡ ಯಾವುದೇ ಹಿಂಜರಿಕೆಯಿಲ್ಲದೆ ಕೊಲ್ಲುತ್ತಿದ್ದರು. ಫೋರ್ ವೀಲ್ ಡ್ರೈವಿಂಗ್ ಹವ್ಯಾಸಕ್ಕೆ ಕೆಟ್ಟ ಹೆಸರಿತ್ತು.
ಕಾಲಕ್ರಮೇಣ ಕೆಟ್ಟತನ ಕಡಿಮೆಯಾಗಿ ಫೋರ್ ವೀಲ್ ಡ್ರೈವಿಂಗ್ ಹವ್ಯಾಸವು ಒಂದು ಸಾಹಸ ಕ್ರೀಡೆಯಾಗಿ ಪರಿವರ್ತನೆ ಹೊಂದಿದೆ. ಅಂತಹ ಸಾಹಸ ಕ್ರೀಡೆಗೆ ಅದರದ್ದೇ ಆದ ನೀತಿನಿಯಮಗಳು ಮತ್ತು ಕಾನೂನು ಕಟ್ಟುಪಾಡುಗಳ ಹಿಡಿತವಿದೆ. ಕ್ರೀಡೆಗೆ ಅನುಕೂಲವಾಗುವಂತೆ ಆದರೆ ಅದರಿಂದ ಯಾವುದೇ ತೊಂದರೆಯಾಗದಂತೆ ವಾಹನಗಳನ್ನು ಓಡಿಸಲು ನಗರ, ಪಟ್ಟಣಗಳಿಂದ ದೂರದಲ್ಲಿ ನಿಗದಿತ ಪ್ರದೇಶಗಳಿವೆ. ಕೆಲವು ಕಡೆ ಅಲ್ಲಿ ಹೋಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪರವಾನಗಿ ಕೂಡ ಇರಬೇಕು. ಕೆಲವೊಮ್ಮೆ ಅತಿ ಕಟ್ಟುನಿಟ್ಟು ಎಂದೆನಿಸಿದರೂ ಮಾನವ ಮತ್ತು ಪರಿಸರದ ಹಿತದೃಷ್ಟಿಯಿಂದ ಅದು ಅವಶ್ಯಕ.
ಇತ್ತೀಚೆಗೆ ಫೋರ್ ವೀಲ್ ಡ್ರೈವಿಂಗ್ ಹವ್ಯಾಸಿ ಸಾಹಸ ಕ್ರೀಡೆಯು ಗಂಡಸರಿಗೆ ಒಂದು ಥೆರಪಿಯಾಗಿದೆ ಎಂದು ಆ ವಿದ್ಯಾರ್ಥಿನಿ ಹೇಳಿದಾಗ ನಮ್ಮಿಬ್ಬರ ಮಾತು ಪರ್ಯಾಯ ಥೆರಪಿ, ಅಂದರೆ ಅಸಂಪ್ರದಾಯಕ ಥೆರಪಿಗಳ, ಅವುಗಳ ಉಪಯುಕ್ತತೆ ಕಡೆ ಹೊರಳಿತು. ಫೋರ್ ವೀಲ್ ಡ್ರೈವಿಂಗ್ ಸಾಹಸ ಕ್ರೀಡೆಯಲ್ಲಿ ತೊಡಗುವ ಗಂಡಸರಲ್ಲಿ ಕೆಲವರಾದರೂ ಮಾನಸಿಕ ಕ್ಲೇಶ, ಖಿನ್ನತೆ ಇತ್ಯಾದಿ ಮಾನಸಿಕ ಅಸ್ವಸ್ಥತೆಗಳನ್ನು ಅನುಭವಿಸುತ್ತಾರೆ. ಅವರಲ್ಲಿ ಬಂಜೆತನವನ್ನು ಅನುಭವಿಸುತ್ತಿರುವವರೂ ಇದ್ದಾರೆ. ಇಂತಹ ಸಾಹಸಕ್ರೀಡೆಯಲ್ಲಿ ಅವರು ಗುರಿ, ಏಕಾಗ್ರತೆ, ಕೌಶಲ್ಯ, ಸಮಸ್ಯೆಯನ್ನು ನಿವಾರಿಸುವ ಉಪಾಯಗಳು ಮತ್ತು ಏರುತಗ್ಗು, ಹಳ್ಳಕೊಳ್ಳಗಳಲ್ಲಿ ಡ್ರೈವಿಂಗ್ ಮಾಡುವಾಗ ಉಂಟಾಗಬಹುದಾದ ಅಪಾಯಗಳನ್ನು ಎದುರಿಸುವ ತಂತ್ರಗಳನ್ನು ಕಲಿತು ಚಾಕಚಕ್ಯತೆಯಿಂದ ಅವನ್ನು ಬಳಸುವುದನ್ನು ಕರಗತ ಮಾಡಿಕೊಳ್ಳಬೇಕು. ಹೀಗೆಲ್ಲ ತೊಡಗಿಕೊಂಡಾಗ ಅವರಿಗೆ ಪರ್ಯಾಯ ಕಲ್ಪನೆಗಳು, ಜೀವನೋತ್ಸಾಹ, ನಿರ್ದಿಷ್ಟ ಚಟುವಟಿಕೆಯತ್ತ ಗಮನ ಕೊಡಬೇಕಾದ ಏಕಾಗ್ರತೆಗಳಿಂದ ಅವರ ಮಾನಸಿಕ ಅಸ್ವಸ್ಥತೆಗಳು ಕಡಿಮೆಯಾಗುತ್ತವೆ.
ಹೊರಾಂಗಣಕ್ಕೆ ಸಂಬಂಧಿಸಿದ ವೃತ್ತಿಗಳಲ್ಲಿ ಇರುವ ಅನೇಕರು ಹೊರಾಂಗಣ ಪರಿಸರವೇ ಒಂದು ಥೆರಪಿ ಎಂದು ವಾದಿಸುತ್ತಾರೆ. ಇಂತಹ ಥೆರಪಿಗಳಿಗೆ ಇರುವ ಹೆಸರುಗಳು ಆಸಕ್ತಿ ಹುಟ್ಟಿಸುತ್ತವೆ. ಫಾರೆಸ್ಟ್ ಥೆರಪಿ, ಫಾರೆಸ್ಟ್ ಬೇತಿಂಗ್, ನೇಚರ್ ಥೆರಪಿ, ವಿಲ್ಡರ್ನೆಸ್ ಥೆರಪಿ, ಬುಷ್ ಥೆರಪಿ, ಹೊರಾಂಗಣ ಸಾಹಸ ಥೆರಪಿ, ರಿವರ್ ಥೆರಪಿ, ಪ್ರಾಣಿಗಳನ್ನು ಉಪಯೋಗಿಸಿಕೊಳ್ಳುವ ಥೆರಪಿಗಳು (ನಾಯಿ, ಬೆಕ್ಕು, ಕುದುರೆ) – ಪಟ್ಟಿ ಬೆಳೆಯುತ್ತಲೆ ಇದೆ. ಇಂತಹ ನಿಸರ್ಗ-ಸಂಬಂಧಿತ ಮತ್ತು ನಿಸರ್ಗ-ಆಧಾರಿತ ಥೆರಪಿಗಳು ಬಹು ಪ್ರಯೋಜನಕಾರಿ, ಅದರಲ್ಲೂ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿರುವವರಿಗೆ ಬಹಳ ಲಾಭವಾಗಿದೆ, ಎಂದು ವೃತ್ತಿಪರರು ಮತ್ತು ಅವನ್ನು ಬಳಸುವ ಗ್ರಾಹಕರು ಹೇಳುತ್ತಾರೆ. ದುರದೃಷ್ಟಕರವೆಂದರೆ ಇವಲ್ಲಿ ಅನೇಕ ಥೆರಪಿಗಳಿಗೆ ಸರಕಾರದ ಮಾನ್ಯತೆಯಿಲ್ಲ. ಉದಾಹರಣೆಗೆ, ಫೋರ್ ವೀಲ್ ಡ್ರೈವಿಂಗ್ ಹವ್ಯಾಸಿ ಸಾಹಸ ಕ್ರೀಡೆಯು ಖಾಸಗಿಮಟ್ಟದಲ್ಲಿ ಇದೆ. ಉತ್ಸಾಹವಿರುವ ಹಲವರು ಗಂಡಸರು ಒಟ್ಟಾಗಿ ಸೇರಿ ಒಂದು ಕ್ಲಬ್ ಸ್ಥಾಪಿಸಿ ತಮ್ಮದೇ ಆದ ಸಮುದಾಯ ವ್ಯವಸ್ಥೆಯನ್ನು ಮಾಡಿಕೊಂಡು ನಿಯಮಗಳನ್ನು ಪಾಲಿಸುತ್ತಾರೆ. ಕನಿಷ್ಠ ತಿಂಗಳಿಗೆ ಎರಡು ಬಾರಿ ಸಂಧಿಸಿ ಡ್ರೈವಿಂಗ್ ಮಾಡುತ್ತಾರೆ. ಸಾಮಾನ್ಯವಾಗಿ ಮನಸ್ಸು ಬಿಚ್ಚಿ ಮಾತನಾಡದ ಗಂಡಸರು ಇಲ್ಲಿ ಪರಸ್ಪರ ವಿಷಯ ಹಂಚಿಕೆ, ಕೌಶಲ್ಯ ಹಂಚಿಕೆ ಮಾಡುತ್ತಾ ಒಬ್ಬರಿಗೊಬ್ಬರು ಆಗುತ್ತಾರೆ. ಪರಸ್ಪರ ಕುಶಲೋಪರಿ ವಿಚಾರಿಸುತ್ತಾ ಸುಖದುಃಖಗಳನ್ನು ತೋಡಿಕೊಳ್ಳುತ್ತಾರೆ. ಅವರಲ್ಲಿ ಸ್ನೇಹ ಬೆಳೆಯಬಹುದು, ಸಂಬಂಧಗಳೇ ಉಂಟಾಗಬಹುದು. ಒಟ್ಟಾರೆ ಮಾನಸಿಕ ಸೌಹಾರ್ದತೆ, ಸಮಾಧಾನ ದೊರೆತು ಚಿಂತೆ ಕಡಿಮೆಯಾಗುತ್ತದೆ. ನಿಜಕ್ಕೂ ಡ್ರೈವಿಂಗ್ ಮಾಡುವುದು ಒಂದು ತರಹದ ಥೆರಪಿಯಾದರೆ ಆ ನೆಪದಲ್ಲಿ ಒಂದೇ ರೀತಿಯ ಅಭಿರುಚಿಯಿರುವ ಗಂಡಸರು ಪರಸ್ಪರ ಬೆರೆಯುವುದು, ಮಾತನಾಡುತ್ತಾ ಹಗುರಾಗುವುದು ಮತ್ತೊಂದು ರೀತಿಯ ಥೆರಪಿ. ಕೌನ್ಸೆಲರ್ ಹತ್ತಿರ ತುಟಿ ಬಿಚ್ಚದ ಗಂಡಸರು ಫೋರ್ ವೀಲ್ ಡ್ರೈವಿಂಗ್ ಸಮಯದಲ್ಲಿ ಮನಬಿಚ್ಚಿ ಮಾತನಾಡುತ್ತಾರೆ. ಅದಕ್ಕಾಗೇ ತಾನು ಕೂಡ ಅವರ ಸಾಹಸ ಕ್ರೀಡೆ ಕ್ಲಬ್ಬಿಗೆ ಸೇರಿ ಸದಸ್ಯಳಾದೆ, ಎಂದು ನಕ್ಕರು ನಮ್ಮ ವಿದ್ಯಾರ್ಥಿನಿ.
ಈ ಲೇಖನವನ್ನು ಬರೆಯುವಾಗ ನೆನಪಾಗುತ್ತಿರುವವರು ನಮ್ಮ ಕನ್ನಡತಿ ಧಾರವಾಡ-ಬೆಂಗಳೂರು ಮೂಲದ ನಿಧಿ ಸಾಲ್ಗಮೆ. ನಿಧಿ ಭಾರತದಲ್ಲಿ ಫೋರ್ ವೀಲ್ ಡ್ರೈವಿಂಗ್ ಸಾಹಸ ಕ್ರೀಡೆಯನ್ನು ನಡೆಸುತ್ತಾರೆ. ತಮ್ಮದೇ ಆದ Wander Beyond Boundaries ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಸಾಹಸ ಮನೋಭಾವದ ನಿಧಿ ಮತ್ತು ಅವರ ತಂಡ ಫೋರ್ ವೀಲ್ ಡ್ರೈವಿಂಗ್ ಸಾಹಸ ಕ್ರೀಡೆಯನ್ನು (extreme overlander) ಪರಿಸರ-ಪರ ಕಾಳಜಿಯಿಂದ ನಡೆಸುತ್ತಾ, ತಮ್ಮ ಸಾಹಸಯಾತ್ರೆಗಳ ಮೂಲಕ ದೂರಪ್ರದೇಶಗಳಲ್ಲಿ ಪ್ರಕೃತಿಯೊಡನೆ ಬೆಸೆದುಕೊಂಡಿರುವ ಸಮುದಾಯಗಳ ಬಗ್ಗೆ, ಅವರ ಜೀವನದೃಷ್ಟಿಗಳನ್ನು ಗಮನಿಸುತ್ತಾ, ತಮ್ಮ ಅವಲೋಕನಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿನಿತ್ಯ ನಾವು ಅನುಭವಿಸುವ ಸೌಲಭ್ಯ ಸೌಕರ್ಯಗಳಿಂದ ದೊರವೇ ಉಳಿದಿರುವ ಅಪರೂಪದ ಜನಜೀವನ ಕ್ರಮಗಳನ್ನು ದಾಖಲಿಸುತ್ತಾರೆ. ಈ ರೀತಿಯ ಸಾಹಸ ಕ್ರೀಡೆಯನ್ನು ಕೈಗೊಳ್ಳುವ ಜನರು ನಿರಂತರ ಕಲಿಯುವಿಕೆ, ಹೊಂದಾಣಿಕೆ, ಪರಸ್ಪರ ಸಹಕಾರ ಮತ್ತು ಆತ್ಮ-ನಿಗ್ರಹವನ್ನು ಅನುಭವಿಸುತ್ತಾರೆ. ನಿಸರ್ಗವೆ ತಮ್ಮ ಮಾರ್ಗದರ್ಶಿ ಎನ್ನುತ್ತಾರೆ. ಮುಂಬರುವ ದಿನಗಳಲ್ಲಿ ನಮ್ಮನಮ್ಮ ದುಃಖಗಳನ್ನು ಮರೆಯಲು ನಾವು ವೈದ್ಯರ ಬಳಿ ಹೋಗುವುದನ್ನು ಕಡಿಮೆ ಮಾಡಿ ಮರಳಿ ಪ್ರಕೃತಿಮಾತೆಗೆ ಶರಣು ಹೋಗಬೇಕಾದೀತು. ಈ ಗುರಿಯತ್ತ ಈಗಾಗಲೇ ಸಾವಿರಾರು ವೃತ್ತಿಪರರು ನಡೆದಿದ್ದಾರೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಸಾಮಾಜಿಕ ಪರಿಸ್ಥಿತಿಯನ್ನು ಸಮಾಜಕಾರ್ಯ ಮತ್ತು ಮನೋಸಾಮಾಜಿಕ ಚಿಕಿತ್ಸೆಯ ಹಿನ್ನೆಲೆಯಲ್ಲಿ ಕೇಸ್ ವರ್ಕ್ ಸ್ವರೂಪದಲ್ಲಿ ಹಿಡಿದಿಟ್ಟುಕೊಂಡು ವಿವರಿಸಿರುವುದು ಮನಮುಟ್ಟುವಂತಿದೆ.
ಪ್ರಾಯಶಃ ಭಾರತದ ಪರಿಸರದಿಂದ ನಿಮ್ಮ ಲೇಖನ ಓದುತ್ತಿರುವ ನನಗೆ ನಮ್ಮ ಸಮಾಜಕಾರ್ಯ ಕ್ಷೇತ್ರ ತನ್ನೊಳಗೇ ಸುತ್ತುತ್ತಿರುವ ಕೆಲ ಮಿತಿಗಳನ್ನು ದಾಟಿ ಹೊರಬೇಕು ಎನ್ನುವ ಸ್ಪಷ್ಟ ದನಿ ಕಾಣುತ್ತಿದೆ.
ಕ್ಷೇತ್ರ ಕಾರ್ಯಕರ್ತರು ಮತ್ತು ಶಿಕ್ಷಕರು ನಿಮ್ಮ ಲೇಖನಗಳನ್ನು ಓದಲೇಬೇಕು.