ನೂರು ವರ್ಷಗಳಿಂದ ಗಣಿ ಸುರಂಗಗಳಿಂದ ತೆಗೆದ ಕಲ್ಲುಗಳ ಅದಿರನ್ನು ಪುಡಿಮಾಡಿ ಚಿನ್ನ ತೆಗೆದುಕೊಂಡು ಬಿಸಾಕಿರುವ ಗಣಿ ತ್ಯಾಜ್ಯದ ಗುಡ್ಡ ಅದು. ನೆಲದ ಮೇಲೆ ಇಷ್ಟು ದೊಡ್ಡ ಗುಡ್ಡ ಬಿದ್ದಿದೆ ಎಂದರೆ ಎಷ್ಟು ಜನರು ಗಣಿ ಸುರಂಗಗಳಲ್ಲಿ ಕೆಲಸ ಮಾಡಿರಬೇಕು? ಎಷ್ಟು ಬೆವರು ಸುರಿದಿರಬೇಕು? ಎಷ್ಟು ಜನರು ಸತ್ತಿರಬೇಕು? ಈ ಗುಡ್ಡಗಳು ಬೀಳಲು ನಮ್ಮ ಪೂರ್ವಜರೆ ಕಾರಣ ಎಂದುಕೊಂಡ. ಮಣಿ ತಂದೆ ಸೆಲ್ವಮ್. ಸೆಲ್ವಮ್ ತಂದೆ ಕುಪ್ಪ ಹೇಳುತ್ತಿದ್ದ ಅನೇಕ ಗಣಿ ದುರಂತಗಳ ಕರಾಳ ಕಥೆಗಳು ಮಣಿ ತಲೆಯಲ್ಲಿ ಹಾವುಗಳಂತೆ ಹರಿದಾಡತೊಡಗಿದವು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಎರಡನೆಯ ಕಂತು ನಿಮ್ಮ ಓದಿಗೆ

ಸೆಲ್ವಮ್ ಸೆಕಲ್‌ಅನ್ನು ಮನೆಯ ಹಿಂದೆ ನಿಲ್ಲಿಸಿ ಬಂದು ಮನೆ ಮುಂದೆ ಕಲ್ಲುಬಂಡೆಯ ಮೇಲೆ ಕುಳಿತುಕೊಂಡು ಬೂಟುಗಳನ್ನು ಬಿಚ್ಚಿ ಒಂದು ಸಲ ನೆಲಕ್ಕೆ ಹಾಕಿ ಕುಕ್ಕಿ ಧೂಳನ್ನು ಜಾಡಿಸಿದ. ಬೂಟುಗಳನ್ನು ಬಾಗಿಲಲ್ಲೆ ಬಿಟ್ಟು ಮನೆ ಒಳಕ್ಕೆ ಬಂದು ಬಟ್ಟೆಗಳನ್ನು ಬಿಚ್ಚಿ ಲುಂಗಿ ಕಟ್ಟಿಕೊಂಡು ಮತ್ತೆ ಮನೆ ಹೊರಕ್ಕೆ ಬಂದು ಬಟ್ಟೆಗಳನ್ನು ಒದರಿ ಒಳಗಡೆ ಬರುವುದರಲ್ಲಿ ಕನಕ ಅವುಗಳನ್ನು ತೆಗೆದುಕೊಂಡು ನೀರಿನ ಬಕೆಟ್‌ಗೆ ಹಾಕಿ ನೆನೆಸಿದಳು. ನಂತರ ಕನಕ ಸಣ್ಣದಾದ ಬಚ್ಚಲು ಮನೆಯಲ್ಲಿ ದೊಡ್ಡ ಬಕೆಟ್‌ನಲ್ಲಿ ನೀರಿಟ್ಟು ತನ್ನ ಕೆಲಸದಲ್ಲಿ ತೊಡಗಿಕೊಂಡಳು. ಸೆಲ್ವಮ್ ಮೈಮೇಲೆ ಬಿಸಿಬಿಸಿ ನೀರಾಕಿಕೊಂಡು ಮೊದಲಿಗೆ ಒಂದು ಸಲ ಕೈಕಾಲು ಮೈ ಉಜ್ಜಿ ತೊಳೆದುಕೊಂಡನು. ಅನಂತರ ಸಾಬೂನಾಕಿಕೊಂಡು ಮತ್ತೊಮ್ಮೆ ಚೆನ್ನಾಗಿ ಮೈ ಉಜ್ಜಿಕೊಂಡು ನೀರಾಕಿಕೊಂಡನು. ಇದರ ನಡುವೆ ಕನಕ ಸೆಲ್ವಮ್ ಬೆನ್ನನ್ನು ಚೆನ್ನಾಗಿ ತಿಕ್ಕಿದ್ದಳು. ಮೈಮೇಲೆ ಪ್ರತಿಸಲ ನೀರು ಹಾಕಿಕೊಂಡಾಗಲೂ ಬೂದು ಬಣ್ಣದ ಸಿಲಿಕಾ ಮಣ್ಣು/ಧೂಳು ಮೈಯಿಂದ ಹರಿದು ಬರುತ್ತಿತ್ತು. ಮುಖ ಮತ್ತು ತಲೆಯನ್ನು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಂಡು ಹೊಸ ಮನುಷ್ಯನಾಗಿ ಭೂಮಿಗೆ ಬಂದವನಂತೆ ಸೊಂಟಕ್ಕೆ ಟವೆಲ್ ಸುತ್ತಿಕೊಂಡು ಬಚ್ಚಲು ಮನೆಯಿಂದ ಹೊರಕ್ಕೆ ಬಂದ. ನಂತರ ನಿಕ್ಕರ್ ಹಾಕಿಕೊಂಡು ಅದೇ ಟವೆಲ್‌ನಲ್ಲಿ ಮುಖ ಕೈಕಾಲು ದೇಹವನ್ನು ಉಜ್ಜಿಕೊಂಡು ಮನೆ ಹೊರಕ್ಕೆ ಬಂದು ಬಂಡೆ ಮೇಲೆ ಕುಳಿತುಕೊಂಡಾಗ ಹಾಯೆನಿಸಿತು.

ಮನೆ ಮುಂದೆ ದಾರಿಯಲ್ಲಿ ಜನರು ದಿನನಿತ್ಯದ ಜಂಜಾಟಗಳೊಂದಿಗೆ ಓಡಾಡುತ್ತಿದ್ದರು. ಮಕ್ಕಳು ಕೂಗಾಡುತ್ತ ಆಡಿಕೊಳ್ಳುತ್ತಿದ್ದರು. ಸುಮತಿ ಅಂಗಡಿಯಿಂದ ಏನೊ ತೆಗೆದುಕೊಂಡು ಬಂದು ಮನೆ ಒಳಕ್ಕೆ ಹೋದಳು. ಕನಕ, “ನಿಮ್ಮ ಅಪ್ಪನಿಗೆ ಟೀ ತೆಕೊಂಡೋಗಿ ಕೊಡು” ಎಂದಿದ್ದೆ ಸುಮತಿ, ಸೆಲ್ವಮ್‌ಗೆ ಟೀ ತಂದುಕೊಟ್ಟಳು. ಸೆಲ್ವಮ್, “ಸುಮತಿ, ಮನೆಯಲ್ಲಿ ಕಳಿತುಕೊಂಡು ಓದಿಕೊಂಡೆ ತಾನೇ?” ಎಂದರು. ಸುಮತಿ, “ಬೆಳಿಗ್ಗೆಯಿಂದ ಮನೆಯಲ್ಲೆ ಇದ್ದೆ ಅಪ್ಪ. ಈಗತಾನೆ ಅಂಗಡಿಗೆ ಹೋಗಿ ಬಂದೆ” ಎಂದಳು. ಸೆಲ್ವಮ್, “ನಾನು ಕೆಲಸದಿಂದ ಬಂದು ಅರ್ಧ ಗಂಟೆ ಆಯಿತು” ಎಂದ. ಸೆಲ್ವಮ್ ಗ್ರಾನೈಟ್ ಕಲ್ಲಿನ ಮೇಲೆ ಕುಳಿತುಕೊಂಡು ಎಡಕಾಲಿನ ಮೇಲೆ ಬಲಕಾಲನ್ನು ಹಾಕಿಕೊಂಡು ಫೈವ್ ಸ್ಟಾರ್ ಹೋಟಲ್‌ನಲ್ಲಿ ಟೀ ಕುಡಿದಂತೆ ಟೀ ಕುಡಿದು ಗ್ಲಾಸ್ ಪಕ್ಕದಲ್ಲಿಟ್ಟ. ಗ್ಲಾಸ್ ಕೆಳಗಿಟ್ಟ ಸದ್ದು ಕೇಳಿದ ಸುಮತಿ ಗ್ಲಾಸ್ ತೆಗೆದುಕೊಂಡು ಒಳಗೋಗಿ ತೊಳೆದಿಟ್ಟಳು.

*****

ಕಾರ್ಮಿಕರಿಗೆ ತಿಂಗಳಿಗೆ ಒಮ್ಮೆ ಸಂಬಳ ಸಿಕ್ಕಿದ ದಿನ ಮತ್ತು ಮರುದಿನ ಇಡೀ ಕ್ಯಾಂಪ್‌ಗಳೆ ಅಲ್ಲದೇ ರಾಬರ್ಟ್ಸನ್‌ಪೇಟೆ ಮತ್ತು ಅಂಡರ‍್ಸನ್‌ಪೇಟೆಯ ಮಾರುಕಟ್ಟೆಗಳು ತುಂಬಿ ತುಳುಕಾಡುತ್ತಿರುತ್ತವೆ. ದಿನಸಿ ಅಂಗಡಿ, ಹಣ್ಣು ತರಕಾರಿ, ಬಟ್ಟೆ ಅಂಗಡಿ, ಪಾತ್ರೆ ಅಂಗಡಿ, ಮತ್ತು ಮಟನ್ ಚಿಕನ್ ಅಂಗಡಿಗಳಲ್ಲೂ ಭರ್ಜರಿ ವ್ಯಾಪಾರವಾಗುತ್ತದೆ. ಆ ದಿನ ಸಾಯಂಕಾಲ ಸಾರಾಯಿ ಅಂಗಡಿಗಳು, ಮನೆಗಳಲ್ಲೇ ತಯಾರು ಮಾಡುವ ಕಲಕಲ್ ಅಂಗಡಿಗಳಲ್ಲಿಯೂ ಒಳ್ಳೆ ವ್ಯಾಪಾರ ನಡೆಯುತ್ತದೆ. ಕಲ್‌ಕಲ್ ಎಂದರೆ ಅನೇಕ ರೀತಿಯ ವಸ್ತುಗಳನ್ನು ಮಿಶ್ರಣ ಮಾಡಿ ಕೆಜಿಎಫ್‌ನವರೆ ಕಂಡುಹಿಡಿದಿರುವ ನಾಟಿ ಮದ್ಯ. ಅದರಲ್ಲಿ ಬ್ಯಾಟರಿ ಸೆಲ್ಲುಗಳು, ಕೊಳೆತ ಹಣ್ಣುಗಳು, ಬೆಂಕಿ ಪೊಟ್ಟಣದ ಮದ್ದು, ತಲೆಬುರುಡೆ, ವಾರ್ನಿಷ್, ನವಸಾಗರ ಮತ್ತು ಬೆಲ್ಲ ಇತ್ಯಾದಿಗಳನ್ನು ಹಾಕಿ ತಯಾರುಮಾಡುತ್ತಿದ್ದರು.

ಒಂದು ವಾರದ ನಂತರ ಗಣಿ ಕಾರ್ಮಿಕರ ವ್ಯಾಪಾರ ಅವರ ಕ್ಯಾಂಪ್‌ಗಳಿಗೆ ಸೀಮಿತವಾಗಿಬಿಡುತ್ತಿತ್ತು. ಇನ್ನು ಕೊನೆ ವಾರದಲ್ಲಿ ಎಲ್ಲೆಲ್ಲೂ ವ್ಯಾಪಾರ ಡಲ್ ಆಗಿಬಿಡುತ್ತಿತ್ತು. ಆಗ ಅಲ್ಲಿ-ಇಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದರು. ಏನೂ ಇಲ್ಲದ ಸಮಯದಲ್ಲಿ ಮನೆಯಲ್ಲಿ ಸಣ್ಣಪುಟ್ಟ ಸಾಮಾನುಗಳನ್ನೇ ತೆಗೆದುಕೊಂಡೋಗಿ ಗಿರವಿ ಅಂಗಡಿಗಳಲ್ಲಿ ಅಡಮಾನ ಇಡುತ್ತಿದ್ದರು. ಬಹಳಷ್ಟು ಸಲ ಹೆಣ್ಣು ಮಕ್ಕಳ ತಾಳಿಗಳು ಇದಕ್ಕೆ ಬಲಿಯಾಗುತ್ತಿದ್ದವು. ಗಣಿಗಳಲ್ಲಿ ಕೊಡುತ್ತಿದ್ದ ಸಂಬಳ ಯಾವ ಕಾಲಕ್ಕೂ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಸಾಲುತ್ತಿರಲಿಲ್ಲ. ಅದು ಏನಿದ್ದರೂ ಕೈ ಬಾಯಿಗೆ ಮಾತ್ರ ನಡೆಯುತ್ತಿತ್ತು. ಆದರೆ ಅವರಿಗಿದ್ದ ಏಕೈಕ ಧೈರ್ಯವೆಂದರೆ ತಿಂಗಳಿಗೆ ಒಮ್ಮೆ ಖಂಡಿತ ಸಂಬಳ ದೊರಕುತ್ತದೆ ಎನ್ನುವುದು.

ಪ್ರತಿ ಭಾನುವಾರ ರಜಾ ದಿನವಾಗಿದ್ದು ಬೆಳಿಗ್ಗೆ ಸ್ನಾನ ಮಾಡಿ ತಿಂಡಿ ತಿಂದು ಎಲ್ಲೆಲ್ಲೂ ಕಾರ್ಮಿಕರು ಕುಳಿತು ನಿಂತು ವಿಶ್ರಾಂತಿ ತೆಗೆದುಕೊಳ್ಳುತ್ತಾ ಹರಟೆ ಹೊಡೆಯುವುದು ಸಾಮಾನ್ಯ. ಆ ದಿನ ಕೆಲವರು ಬೆಳಿಗ್ಗೆ ಅಥವಾ ಸಾಯಂಕಾಲ ಸ್ಥಳೀಯ ಮಾರಮ್ಮ, ಕಾಟೇರಮ್ಮ ಇತ್ಯಾದಿ ದೇವಸ್ಥಾನಗಳಿಗೆ ಹೋಗಿ ಬರುತ್ತಾರೆ. ಇನ್ನೂ ಕೆಲವರು ಕುಟುಂಬಗಳು ಸಮೇತ ಬೆಳಿಗ್ಗೆ ಚರ್ಚ್‌ಗಳಿಗೆ ಹೋಗಿಬಂದು ಸಾಯಂಕಾಲ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸೆಲ್ವಮ್ ತಿಂಡಿತಿಂದು ಬಟ್ಟೆ ಹಾಕಿಕೊಂಡು ಚಪ್ಪಲಿ ತೊಟ್ಟು ಮೈದಾನದ ಕಡೆಗೆ ಹೊರಟ. ಕ್ಯಾಂಪ್ ಮಧ್ಯೆ ಒಂದು ಸಣ್ಣ ಮೈದಾನ ಇದ್ದು ಹುಡುಗರು ಫುಟ್‌ಬಾಲ್ ಆಟ ಆಡುತ್ತಿದ್ದರು. ಮೈದಾನದ ಎದುರಿಗಿರುವ ಕಮ್ಯೂನಿಟಿ ಹಾಲ್ ಕಟ್ಟೆಯ ಮೇಲೆ ಕುಳಿತುಕೊಂಡಿರುವ ಜನರು ಫುಟ್ಬಾಲ್ ಆಟ ನೋಡುತ್ತಿದ್ದರು. ಮೈದಾನದ ಇನ್ನೊಂದು ಮೂಲೆಯಲ್ಲಿರುವ ಸಣ್ಣಸಣ್ಣ ದಿನಸಿ ಅಂಗಡಿಗಳಲ್ಲಿ ಒಂದಷ್ಟು ಜನ ಸಾಮಾನುಗಳನ್ನು ಕೊಂಡುಕೊಳ್ಳುತ್ತಿದ್ದರು. ಅದರಲ್ಲಿ ಮಹಿಳೆಯರೂ, ಮಕ್ಕಳೂ ಕೂಡ ಇದ್ದರು. ಟೀ ಅಂಗಡಿ ಮುಂದೆ ಕೆಲವರು ನಿಂತುಕೊಂಡು ಟೀ ಕುಡಿಯುತ್ತಿದ್ದರೆ ಕೆಲವರು ಎರಡೂ ಕಡೆ ಹಾಕಿದ್ದ ಬೆಂಚುಗಳ ಮೇಲೆ ಕುಳಿತುಕೊಂಡು ಬೀಡಿ ಸೇದುತ್ತ ಟೀ ಕುಡಿಯುತ್ತಿದ್ದರು.

ಸೆಲ್ವಮ್ ಹೋಗಿದ್ದೆ ಆತನ ಗೆಳೆಯನೊಬ್ಬ “ಏ ಮದಿ, ಸೆಲ್ವಮ್ ಬಂದಿದ್ದಾನೆ. ಒಂದು ಒಳ್ಳೇ ಟೀ ಹಾಕು” ಎಂದ. ಸೆಲ್ವಮ್ ಉದ್ದನೆ ಬೆಂಚ್ ಮೇಲೆ ಅಡ್ಜಸ್ಟ್ ಮಾಡಿಕೊಂಡು ಗೆಳೆಯರ ನಡುವೆ ಕುಳಿತುಕೊಂಡನು. ಹುಡುಗ ಟೀ ತಂದುಕೊಟ್ಟ. “ಏ ಮದಿ, ಟೀ ಜೊತೆಗೆ ಒಂದು ಬನ್ ಕೊಡೊ” ಎಂದಿದ್ದೆ, ಸೆಲ್ವಮ್, “ಬನ್ ಬೇಡಪ್ಪ. ಈಗತಾನೆ ತಿಂಡಿ ತಿಂದುಬಂದಿದ್ದೀನಿ” ಎಂದ. ಕಾರ್ಮಿಕರು ಒಬ್ಬರನ್ನೊಬ್ಬರು ಗೇಲಿ ಮಾಡಿಕೊಳ್ಳುತ್ತ ನಗಾಡುತ್ತ ಮಾತು ಮುಂದುವರಿಸಿದರು.

ಪಕ್ಕದಲ್ಲಿಯೇ ಇದ್ದ ಎರಡು ಮಾಂಸದ ಅಂಗಡಿಗಳಲ್ಲಿ ಜನರು ಮುತ್ತಿಕೊಂಡಿರುವುದನ್ನು ನೋಡಿದ ಸೆಲ್ವಮ್, “ಏನು ಈ ಹೊತ್ತು ಮಟನ್ ಅಂಗಡಿ ಮುಂದೆ ಇಷ್ಟೊಂದು ಜನ” ಎಂದ. ಪಕ್ಕದಲ್ಲಿದ್ದಾತ, “ಸಂಬಳ ಹೋದವಾರ ತಾನೇ ಬಂದಿರುವುದು” ಎಂದ. ಸೆಲ್ವಮ್, “ಇರ‍್ರಪ್ಪ. ನಾನೂ ಒಂದಷ್ಟು ಕೊಂಡುಕೊಂಡುಬಿಡ್ತೀನಿ. ಎಲ್ಲರೂ ಒಳ್ಳೊಳ್ಳೆ ಭಾಗಗಳು, ಮುಂದಿನ ಕಾಲುಗಳನ್ನು ತೆಗೆದುಕೊಂಡು ಹೋಗಿಬಿಟ್ರೆ ನಮಗೆ ಆಮೇಲೆ ಬರೀ ಹಿಂದಿನ ಕಾಲುಗಳು ಬಲಿತ ಮಟನ್ ಮಾತ್ರ ಸಿಕ್ಕುತ್ತೆ. ಅದು ಬೇಯುವುದೇ ಇಲ್ಲ” ಎಂದು ಎದ್ದು ನಿಂತ. ಕುಳಿತಿದ್ದಾತ “ಯಾಕೆ ಕೊನೆ ಅಂಗಡಿಗೆ ಹೋಗಲಿಲ್ಲವೇ?” ಎಂದ. ಸೆಲ್ವಮ್, “ಏಯ್ ನಾವು ಈಗ ಅದನ್ನು ತಿನ್ನೂದಿಲ್ಲಪ್ಪ. ತೆಕೊಂಡುಹೋದರೂ ಮಕ್ಕಳು ನಾವು ಮನೆಯಲ್ಲೇ ಇರುವುದಿಲ್ಲ ಅಂತಾರೆ” ಎಂದ. ಆತ, “ಅವರಿಗೇನು ಗೊತ್ತು ಅದರ ಮಹಿಮೆ? ಹುಃ ಮಕ್ಕಳು ತಿನ್ನೂದಿಲ್ಲ ಅಂದರೆ ಏನು ಮಾಡುವುದು? ನೀನು ಮಾತ್ರ ಬಿಡಬೇಡ. ಅಂಡರ್‌ಗ್ರೌಂಡ್ ಕೆಲಸ ಮಾಡೋರೆಲ್ಲ ವಾರಕ್ಕೆ ಒಂದು ದಿನವಾದ್ರು ಅದನ್ನ ತಿನ್ನಲೇಬೇಕು” ಎಂದ. ಸೆಲ್ವಮ್ ನಗುತ್ತಾ, “ನಮಗೆ ಇದೆಯಲ್ಲ ಸಾಯಂಕಾಲ ಚಾಕ್ನಾ ಅಂಗಡಿ” ಎಂದು ಅಂಗಡಿಯವನಿಗೆ “ಒಂದು ಟೀ ನನ್ನ ಅಕೌಂಟ್ನಲ್ಲಿ ಬರೆದುಬಿಡು” ಎನ್ನುತ್ತಾ ಮಟನ್ ಅಂಗಡಿ ಹತ್ತಿರಕ್ಕೆ ಹೋಗಿ ನಿಂತುಕೊಂಡ.

ಸೆಲ್ವಮ್ ಮಾಂಸ ತೆಗೆದುಕೊಂಡು ಮನೆಯ ಕಡೆಗೆ ಹೊರಟಿದ್ದೆ ಪಕ್ಕದ ಮನೆ ಗೋವಿಂದ ತರಕಾರಿ ಬಂಡಿ ತಳ್ಳಿಕೊಂಡು “ತರಕಾರಿ.. ತರಕಾರಿ..” ಎಂದು ಕೂಗಿಕೊಂಡು ಎದುರಿಗೆ ಬಂದ. ಸೆಲ್ವಮ್ “ಅರೇ ಗೋವಿಂದ ಇದೇನು ಈ ಹೊತ್ತು ಈ ಕಡೆ?” ಎಂದ. ಗೋವಿಂದ, “ಹೊಟ್ಟೆಪಾಡಿಗೆ ಯಾವುದೊ ಒಂದು ಕಡೆಗೆ ಹೋಗಬೇಕಲ್ಲ. ಇಂಥದ್ದೆ ಕಡೆಗೆ ಹೋಗಬೇಕಂತ ಏನೂ ಇಲ್ಲವಲ್ಲ. ಗಾಳಿ ಯಾವ ಕಡೆ ಬೀಸುತ್ತೊ ಆ ಕಡೆಗೆ ಹೋಗ್ತಾ ಇರುವುದು” ಎಂದ. ಸೆಲ್ವಮ್, “ನಮ್ಮ ಮನೆ ಕಡೆಗೋದರೆ ಇದನ್ನ ಮನೆಯಲ್ಲಿ ಕೊಟ್ಟುಬಿಡು” ಎಂದು ಕೈಯಲ್ಲಿದ್ದ ಕಪ್ಪು ಪ್ಲ್ಯಾಸ್ಟಿಕ್ ಬ್ಯಾಗನ್ನು ಗೋವಿಂದನ ಕೈಗೆ ಕೊಟ್ಟ. ಗೋವಿಂದ, “ಏನಿದು ಮಟನ್ನಾ? ಹತ್ತು ನಿಮಿಷದ ಒಳಗೆ ನಿಮ್ಮ ಮನೆ ತಲುಪಿಸ್ತೀನಿ ಬಿಡು. ಅದು ಸರಿ. ನೀನು ಎಲ್ಲಿಗೋಗ್ತಾ ಇದ್ದೀಯಾ?” ಎನ್ನುತ್ತಾ ಮಟನ್ ಇರುವ ಪ್ಲ್ಯಾಸ್ಟಿಕ್ ಬ್ಯಾಗನ್ನು ಕೈಗೆ ತೆಗೆದುಕೊಂಡು ಬಂಡಿಯಲ್ಲಿ ತರಕಾರಿ ಪಕ್ಕದಲ್ಲಿ ಇಟ್ಟುಕೊಂಡ. ಸೆಲ್ವಮ್, “ಬೆಳಿಗ್ಗೇನೆ ಮನೇಗೋಗಿ ಏನು ಮಾಡುವುದು? ಕಮ್ಯೂನಿಟಿ ಹಾಲ್ ಕಡೆಗೋಗಿ ಪೇಪರ್ ಓದಿಕೊಂಡು ಬರ್ತೀನಿ. ಭದ್ರ ನೀನು ಅದನ್ನ ಮನೆಯಲ್ಲಿ ಬೇಗನೆ ಕೊಟ್ಟುಬಿಡು. ಕನಕ ಕಾಯ್ತಿರ್ತಾಳೆ” ಎನ್ನುತ್ತಾ ಸೆಲ್ವಮ್ ಹೊರಟ. ಗೋವಿಂದ, “ತರಕಾರಿ.. ತರಕಾರಿ..” ಎಂದು ಕೂಗಿಕೊಳ್ಳುತ್ತ ಬಂಡಿಯನ್ನು ತಳ್ಳುತ್ತಾ ಹೊರಟ.

ಒಂದು ದೊಡ್ಡ ಹಾಲ್‌ಅನ್ನು ಎರಡು ಭಾಗಗಳಾಗಿ ವಿಭಾಗಿಸಲಾಗಿದ್ದು ಒಂದು ಭಾಗವನ್ನು ಕಮ್ಯೂನಿಟಿ ಹಾಲ್ ಮಾಡಿದ್ದು ಇನ್ನೊಂದು ಭಾಗವನ್ನು ರೀಡಿಂಗ್ ರೂಮ್ ಮಾಡಿ ಜೊತೆಗೆ ಅಲ್ಲಿ ಕೆಲವು ಒಳಾಂಗಣ ಆಟಗಳ ವಸ್ತುಗಳನ್ನು ಇಡಲಾಗಿತ್ತು. ಅದರಲ್ಲಿ ಕ್ಯಾರಮ್ ಮತ್ತು ಚೆಸ್ ಆಟದ ವಸ್ತುಗಳೂ ಇದ್ದವು. ಇನ್ನೊಂದು ಕಡೆ ಟೇಬಲ್ ಟೆನ್ನೀಸ್ ಕೂಡ ಇತ್ತು. ಸೆಲ್ವಮ್ ನೇರವಾಗಿ ಕಮ್ಯೂನಿಟಿ ಹಾಲ್ ಒಳಕ್ಕೆ ಹೋದ. ಕೆಲವು ವಿದ್ಯಾರ್ಥಿಗಳು ಸಿಮೆಂಟ್ ನೆಲದ ಮೇಲೆ ಹಾಸಿದ್ದ ಚಾಪೆಗಳ ಮೇಲೆ ಕುಳಿತುಕೊಂಡು ಓದಿಕೊಳ್ಳುತ್ತಿದ್ದರು.

ಸೆಲ್ವಮ್, “ಏನೋ ಹುಡುಗರಾ ಭಾನುವಾರ ಕೂಡ ಓದ್ತಾ ಇದ್ದೀರಿ?” ಎಂದ. ಹುಡುಗರು ಒಟ್ಟಾಗಿ “ಅಂಕಲ್ ನಾಳೆ ಪರೀಕ್ಷೆ ಇದೆ. ಅದಕ್ಕೆ ಓದ್ತಾ ಇದ್ದೀವಿ” ಎಂದರು. ಸೆಲ್ವಮ್, “ಓ ಹೌದಾ! ಯಾವ ತರಗತಿ?” ಎಂದಿದ್ದಕ್ಕೆ, ಹುಡುಗರು “ಹತ್ತನೇ ತರಗತಿ ಅಂಕಲ್” ಎಂದರು. “ಓ ಹಾಗಾದರೆ ಚೆನ್ನಾಗಿ ಓದಿಕೊಳ್ಳಿ. ಓದಿ ಡಿಗ್ರಿ ಮಾಡಿಕೊಂಡು ಒಳ್ಳೆ ಕೆಲಸಗಳಿಗೆ ಸೇರಿಕೊಳ್ಳಿ. ಗಣಿಯಲ್ಲಿ ಮಾತ್ರ ಕೆಲಸಕ್ಕೆ ಸೇರಬೇಡಿ. ಸೇರಿದರೂ ಆಫೀಸರ್‌ಗಳಾಗಿ ಸೇರಿಕೊಳ್ಳಬೇಕು. ಕಾರ್ಮಿಕರಾಗಿ ಕೆಲಸಕ್ಕೆ ಸೇರಬೇಡಿ. ಆಯಿತು ಓದಿಕೊಳ್ಳಿ” ಎನ್ನುತ್ತಾ ಇನ್ನೊಂದು ಭಾಗದಲ್ಲಿದ್ದ ರೀಡಿಂಗ್ ರೂಮ್ ಒಳಕ್ಕೆ ಹೋಗಿ ತಮಿಳು ಪತ್ರಿಕೆ “ದಿನಮಣಿ” ತೆಗೆದುಕೊಂಡು ಕುರ್ಚಿ ಮೇಲೆ ಕುಳಿತುಕೊಂಡು ಓದತೊಡಗಿದ. ಗೋಡೆ ಮೇಲೆ ಮಧ್ಯದಲ್ಲಿ ಮೂರು ಫೋಟೋಗಳನ್ನು ನೇತು ಹಾಕಲಾಗಿತ್ತು; ಬುದ್ಧನ ಫೋಟೋ ಮಧ್ಯದಲ್ಲಿದ್ದು ಅಯೋಥಿದಾಸರ್ ಮತ್ತು ಡಾ. ಅಂಬೇಡ್ಕರ್ ಅವರ ಫೋಟೋಗಳನ್ನು ಎರಡೂ ಕಡೆ ಹಾಕಲಾಗಿತ್ತು.

ಸೆಲ್ವಮ್ ಪತ್ರಿಕೆಯನ್ನು ಗಂಭೀರವಾಗಿ ಓದುತ್ತಿದ್ದಂತೆ ಒಬ್ಬಾತ ಬಂದು ಪಕ್ಕದಲ್ಲಿ ಕುಳಿತುಕೊಂಡು, “ಸೆಲ್ವಮ್ ಏನು ಅಷ್ಟೊಂದು ಸೀರಿಯಸ್ ಆಗಿ ಓದ್ತಾಇದ್ದೀಯ?” ಎಂದ. ಸೆಲ್ವಮ್ ಪಕ್ಕಕ್ಕೆ ತಿರುಗಿಕೊಂಡು “ಅಯೋಥಿದಾಸರ್ ಬಗ್ಗೆ ಒಂದು ಲೇಖನ ಬಂದಿದೆ. ಅದನ್ನ ಓದ್ತಾ ಇದ್ದೀನಿ. ಅಯೋಥಿದಾಸರ್ ಫೋಟೋ ಅಲ್ಲಿದೆ ನೋಡು” ಎಂದು ಗೋಡೆ ಮೇಲಿದ್ದ ಅವರ ಫೋಟೋ ಕಡೆಗೆ ಕೈತೋರಿಸಿದ. ಆತ ಫೋಟೋ ಕಡೆಗೆ ನೋಡಿದ್ದೆ ಸೆಲ್ವಮ್, “ಅಯೋಥಿದಾಸರ್, ದಕ್ಷಿಣ ಭಾರತದಲ್ಲಿ ಮೊದಲಿಗೆ ಬೌದ್ಧಮತವನ್ನು ಸ್ಥಾಪನೆ ಮಾಡಿದವರು. ಪೆರಿಯಾರ್ ರಾಮಸ್ವಾಮಿ ಮತ್ತು ಅಂಬೇಡ್ಕರ್ ಅವರುಗಳಿಗಿಂತ ಮುಂಚೆ ಜಾತಿ, ಅಸ್ಪೃಶ್ಯತೆಗಳ ವಿರುದ್ಧ ಆಂದೋಳನ ನಡೆಸಿದವರು. ಸಿದ್ಧ ಔಷಧಿಯನ್ನು ಅಭ್ಯಾಸ ಮಾಡಿದವರು. ನಾವೆಲ್ಲ ಮೂಲವಾಗಿ ಬೌದ್ಧರು ಎಂಬುದಾಗಿ ಅಯೋಥಿದಾಸರ್ ಹೇಳುತ್ತಿದ್ದರು” ಎಂದ. ಸ್ವಲ್ಪ ಹೊತ್ತಿನ ನಂತರ ಗೋಡೆ ಮೇಲಿದ್ದ ಗಡಿಯಾರವನ್ನು ನೋಡಿದ ಸೆಲ್ವಮ್, “ಓ ಆಗಲೇ 1 ಗಂಟೆ ಆಗ್ತಾಇದೆ” ಎಂದು ಎದ್ದುನಿಂತ.

ಮನೆ ಒಳಕ್ಕೆ ಬರುತ್ತಾ ಸೆಲ್ವಮ್, “ಏನು ಬಿಸಿಲು ಹೊರಗಡೆ” ಎನ್ನುತ್ತಾ ಸ್ಟೂಲ್ ಮೇಲೆ ಕುಳಿತುಕೊಂಡ. ಮಾಂಸದ ಸಾರು ಗಮ್ಮನೇ ವಾಸನೆ ಬರುತ್ತಿದ್ದು, “ಕನಕ, ಏನು ಈಗ ಸಾರು ಮಾಡ್ತಾಇದ್ದೀಯಾ ಬೆಳಿಗ್ಗೇನೆ ಗೋವಿಂದನ ಕೈಯಲ್ಲಿ ಕಳಿಸಿದೆನಲ್ಲ?” ಎಂದ. ಕನಕ, “ಬೆಳಗ್ಗೇನೆ ಕಳಿಸಿದರಾ? ಗೋವಿಂದಣ್ಣ ಈಗ ತಂದುಕೊಟ್ಟನಲ್ಲ” ಎಂದಳು. ಪಾಪ! ಗೋವಿಂದಣ್ಣನ ಕತೆ ನೋಡಿ. ಗೋವಿಂದ ತಳ್ಳುಗಾಡಿಯಲ್ಲಿ ತರಕಾರಿ ಮಾರಿಕೊಂಡು ಸೆಲ್ವಮ್ ಮನೆ ಹತ್ತಿರಕ್ಕೆ ಬಂದು ಮಾಂಸದ ಪೊಟ್ಟಣ ನೋಡುತ್ತಾನೆ. ಕಾಣಿಸಲಿಲ್ಲ. ಅವನ ಎದೆ ಧಸಕ್ಕೆಂದು ತರಕಾರಿ ಬಂಡಿಯಲ್ಲೆಲ್ಲ ಹುಡುಕಾಡುತ್ತಾನೆ. ಕಾಣಿಸಲಿಲ್ಲ. ಬಂಡಿಯನ್ನು ಸೆಲ್ವಮ್ ಮನೆಯಿಂದ ದೂರಕ್ಕೆ ತಳ್ಳಿಕೊಂಡೋಗಿ ಮತ್ತೆ ಮತ್ತೆ ಬಂಡಿಯೆಲ್ಲ ಹುಡುಕಿ ನೋಡುತ್ತಾನೆ. ಹುಃಹುಂ… ಕಾಣಿಸಲಿಲ್ಲ. ಯಾರೋ ತರಕಾರಿ ಕೊಂಡುಕೊಂಡು ಹೋಗುವಾಗ ಮಾಂಸದ ಪೊಟ್ಟಣವನ್ನು ಎಗರಿಸಿಕೊಂಡು ಹೋಗಿದ್ದರು. ಹೋಗಲಿಬಿಡು ಪಾಪ! ಎಷ್ಟು ದಿನಾ ಆಗಿತ್ತೋ ಏನೋ ಮಾಂಸ ತಿಂದು. ಭಾನುವಾರದ ಶ್ರಮಕ್ಕೆ ಖೋತಾ ಬಿತ್ತಲ್ಲಪ್ಪ ಎಂದುಕೊಂಡು ಬೆಳಿಗ್ಗೆಯಿಂದ ತರಕಾರಿ ಮಾಡಿದ್ದ ಹಣವನ್ನೆಲ್ಲ ಲೆಕ್ಕ ಹಾಕಿ ನೋಡಿದ.

ಒಂದು ಕೇಜಿ ಮಾಂಸ ಕೊಂಡುಕೊಳ್ಳುವುದಕ್ಕೆ ಇನ್ನೂ 20 ರೂಪಾಯಿ ಕಡಿಮೆ ಇತ್ತು. ಸೆಲ್ವಮ್ ಗೋವಿಂದನ ಕೈಗೆ ಕೊಟ್ಟಿದ್ದ ಮಾಂಸ ಒಂದು ಕೇಜಿ ತೂಕ ಇರಬೇಕು ಎಂದುಕೊಂಡ. ಮತ್ತೆ 20 ರೂಪಾಯಿಗಳ ತರಕಾರಿ ಮಾರಿಕೊಂಡು ಮತ್ತೆ ಮಾಂಸದ ಅಂಗಡಿ ಹತ್ತಿರಕ್ಕೆ ತಳ್ಳುಗಾಡಿಯನ್ನು ತಳ್ಳಿಕೊಂಡು ಓಡಿದ. ಅಂಗಡಿಯವನಿಗೆ “ಬೆಳಿಗ್ಗೆ ಸೆಲ್ವಮ್ ಎಷ್ಟು ಮಾಂಸ ತೆಗೆದುಕೊಂಡ?” ಎಂದಿದ್ದಕ್ಕೆ ಅಂಗಡಿಯವನು ಯೋಚಿಸಿ “ಒಂದು ಕೇಜಿ” ಎಂದ. ಗೋವಿಂದ, “ಹಾಗಾದರೆ ಅದೇ ತರಹ ಒಂದು ಕೇಜಿ ಮಾಂಸ ಕೊಡು” ಎಂದು ಹಣ ಕೊಟ್ಟ. ಗೋವಿಂದ ತಡವಾಗಿ ಮಾಂಸವನ್ನು ಸೆಲ್ವಮ್ ಮನೆಗೆ ತಲುಪಿಸಿದ್ದನು. ಸೆಲ್ವಮ್, ಮಣಿ, ಸುಮತಿ ಎಲ್ಲರೂ ಮಧ್ಯಾಹ್ನ ಊಟ ಮಾಡುವಾಗ, ಸೆಲ್ವಮ್, “ಮಾಂಸ ಚೆನ್ನಾಗಿದೆ ತಾನೇ?” ಎಂದಿದ್ದಕ್ಕೆ ಕನಕ, “ಯಾಕೆ ಚೆನ್ನಾಗೆ ಇದೆಯಲ್ಲ!” ಎಂದಳು. ಗೋವಿಂದ ಯಾಕೆ ಅಷ್ಟು ಲೇಟಾಗಿ ಮಾಂಸ ತಂದುಕೊಟ್ಟ ಎಂದು ಆಲೋಚಿಸತೊಡಗಿದ.

ರಾತ್ರಿ ಊಟ ಆದ ಮೇಲೆ ಸೆಲ್ವಮ್ ಮನೆ ಹೊರಕ್ಕೆ ಬಂದು ಕಲ್ಲು ಬಂಡೆ ಮೇಲೆ ಕುಳಿತುಕೊಂಡು ಬೀಡಿ ಹೊತ್ತಿಸಿ ಹೊಗೆ ಬಿಡತೊಡಗಿದ. ಅಷ್ಟರಲ್ಲಿ ಎಂದಿನಂತೆ ಪಕ್ಕದ ಮನೆ ಗೋವಿಂದ ಬಂದು ಕಲ್ಲಿನ ಮೇಲೆ “ಉಸ್ಸಪ್ಪ” ಎನ್ನುತ್ತಾ ಕುಳಿತುಕೊಂಡ. ಸೆಲ್ವಮ್ ಬೀಡಿ ತೆಗೆದುಕೊಡುತ್ತ “ಏನು ಗೋವಿಂದ ಭಾನುವಾರ ವ್ಯಾಪಾರ ಜೋರಾ?” ಎಂದ. ಗೋವಿಂದ, “ಅಯ್ಯೊ ಅದ್ಯಾಕೇಳ್ತೀಯ ನನ್ನ ವ್ಯಾಪಾರ? ಬಿಡಪ್ಪ. ನಮ್ಮ ಹಣೆಬರಹ ಅದೇನೊ ಕತ್ತೆ …ನಲ್ಲಿ ಬರೆದುಕೊಂಡು ಬಂದಿದ್ದರೆ ಏನಾಗುತ್ತೆ ಬಿಡು” ಎಂದ. ಸೆಲ್ವಮ್ ಕುತೂಹಲದಿಂದ “ಯಾಕೆ? ಏನಾಯಿತು? ಅದಿರಲಿ ಮಾಂಸ ಯಾಕೆ 12 ಗಂಟೆಗೆ ತಂದುಕೊಟ್ಟಿದ್ದು?” ಎಂದ. ಗೋವಿಂದ, “ಅದನ್ನೇ ನಾನು ಈಗ ಹೇಳಿದ್ದು” ಎಂದ. ಸೆಲ್ವಮ್ ಕತ್ತಲಲ್ಲಿ ಗೋವಿಂದನ ಕಡೆಗೆ ನೋಡಿದ. ಗೋವಿಂದ, “ಅದೊಂದು ದೊಡ್ಡ ಕತೆ ಆಯಿತು ನೋಡು. ನೀನು ಪಾಕೆಟ್ ಕೊಟ್ಟ ಮೇಲೆ ಬರೋದಾರಿಯಲ್ಲಿ ಒಂದಷ್ಟು ಮಹಿಳೆಯರು ಎರಡು ಕಡೆ ತರಕಾರಿ ಕೊಂಡುಕೊಂಡರು. ಅವರ ಜೊತೆಗೆ ಒಂದಷ್ಟು ಪೋಲಿ ಹುಡುಗರೂ ಇದ್ದರು. ನೀನು ಕೊಟ್ಟಿದ್ದ ಪಾಕೆಟ್‌ನ್ನು ಯಾರೋ ಎಗರಿಸಿಬಿಟ್ಟರು ನೋಡು?” ಎಂದ.

ಸೆಲ್ವಮ್, “ಅಡೆ ಪಾವಿಂಗಳಾ! ಅನಂತರ ಮಾಂಸ ಹೇಗೆ ತಂದೆ?” ಎಂದ. ಗೋವಿಂದ, “ಹೇಗೆ ತಂದೆ ಅಂದರೆ! ತರಕಾರಿ ಮಾರಿ ತಂದೆ. ಅದಕ್ಕೆ ಲೇಟಾಯಿತು” ಎಂದ. ಸೆಲ್ವಮ್, “ಅಯ್ಯೋ ಕಡವಳೇ! ತಪ್ಪು ನನ್ನದೆ. ನಾಲ್ಕು ಹೆಜ್ಜೆ ಮನೆಗೆ ತಂದುಕೊಟ್ಟಿದ್ದರೆ ಆಗೋಗಿರೋದು. ತುಃ ಏನು ಜನಾನಪ್ಪ ನಮ್ಮವರು” ಎಂದ. ಗೋವಿಂದ, “ಯಾರೋ ತಿಂದುಕೊಂಡೋಗಲಿ ಬಿಡು. ಅವರ ಬಾಯಲ್ಲಿ ಬರೆದಿತ್ತು” ಎಂದ. ಕನಕ ಮತ್ತು ಸುಮತಿ ಕೂಡ ಗೋವಿಂದನ ಮಾತುಗಳನ್ನು ಮನೆಯ ಒಳಗಿಂದಲೆ ಕೇಳಿಸಿಕೊಳ್ಳುತ್ತಿದ್ದರು. ಸೆಲ್ವಮ್, “ಕನಕ, ಗೋವಿಂದನಿಗೆ ನನ್ನ ಶರ್ಟ್ ಜೇಬಿನಲ್ಲಿ ಒಂದು ನೂರು ರೂಪಾಯಿ ಇದೆ. ತಂದು ಕೊಡು” ಎಂದರೆ ಗೋವಿಂದ, “ಬೇಡ ಬಿಡು ಸೆಲ್ವಮ್. ನೀನು ಖರ್ಚಿಗೆ ಇಟ್ಟುಕೊಂಡಿರ್ತೀಯಾ” ಎಂದ. ಗೋವಿಂದ, “ಅದು ಹೇಗೊ ಆಗುತ್ತೇ ಬಿಡು” ಎಂದ. ಕನಕ, “ಅಯ್ಯೋ ತೆಕೊ ಗೋವಿಂದಣ್ಣ” ಎಂದು ಮನೆ ಒಳಗಿಂದ ನೂರು ರೂಪಾಯಿ ನೋಟನ್ನು ತಂದುಕೊಟ್ಟಳು. ಗೋವಿಂದ, “ನಲವತ್ತು ರೂಪಾಯಿ ಕೊಡಮ್ಮ ಸಾಕು” ಎಂದ.

ಬೆಳಿಗ್ಗೆ 6 ಗಂಟೆ. ಕಮ್ಯೂನಿಟಿ ಹಾಲ್‌ನಲ್ಲಿ ಎಲ್ಲಾ ಹುಡುಗರು ಅಡ್ಡಾದಿಡ್ಡಿ ಮಲಗಿಕೊಂಡಿದ್ದಾರೆ. ಪ್ರತಿಯೊಂದು ಕಾಲೋನಿಯಲ್ಲೂ ಒಂದು ಕಮ್ಯೂನಿಟಿ ಹಾಲ್ ಇದ್ದು ಅಲ್ಲಿ ರಾತ್ರಿಯೊತ್ತು ಬಹಳಷ್ಟು ವಿದ್ಯಾರ್ಥಿಗಳು ಓದಿಕೊಂಡು ಅಲ್ಲೇ ಮಲಗಿಕೊಳ್ಳುತ್ತಾರೆ. ಕಾರಣ ಕಾಲೋನಿಯ ಸಣ್ಣಸಣ್ಣ ಮನೆಗಳಲ್ಲಿ ಎಲ್ಲರೂ ಮಲಗಿಕೊಳ್ಳಲು ಸ್ಥಳ ಇಲ್ಲದಿರುವುದು. ಅಲ್ಲಿಗೆ ರಾತ್ರಿಯೊತ್ತು ಕೆಲವು ವಿದ್ಯಾವಂತರು ಬಂದು ಉಚಿತವಾಗಿ ಪಾಠಗಳನ್ನು ಹೇಳಿಕೊಡುತ್ತಾರೆ. ಹಾಗಾಗಿ ಬಹಳಷ್ಟು ವಿದ್ಯಾರ್ಥಿಗಳು ರಾತ್ರಿ ಮನೆಗಳಲ್ಲಿ ಊಟ ಮಾಡಿಬಂದು ಅಲ್ಲೇ ಓದಿಕೊಂಡು ಅಲ್ಲೇ ಮಲಗಿಕೊಳ್ಳುತ್ತಾರೆ. ನಮ್ಮ ಕಥೆಯ ಹೀರೋ ಸುಬ್ರಮಣಿ ಅರ್ಥಾತ್ ಮಣಿ ವಿದ್ಯಾರ್ಥಿಗಳ ಮಧ್ಯೆ ಎದ್ದು ಕುಳಿತುಕೊಂಡು ಕಣ್ಣುಗಳನ್ನು ಉಜ್ಜಿಕೊಂಡನು. ನಂತರ ಗೋಡೆಯ ಮೇಲಿದ್ದ ಬುದ್ಧ, ಅಯೋಥಿದಾಸರ್ ಮತ್ತು ಅಂಬೇಡ್ಕರ್ ಪಟಗಳ ಕಡೆಗೆ ನೋಡುತ್ತ ಕೈಗಳಿಂದ ಕೆನ್ನೆಗಳಿಗೆ ಹೊಡೆದುಕೊಂಡು ಏನೋ ಹೇಳಿಕೊಂಡ. ನಿಷ್ಕಲ್ಮಷವಾದ ಬುದ್ಧನ ತಲೆಯ ಹಿಂದಿರುವ ಬೆಳಕಿನ ಪ್ರಭೆಯನ್ನು ನೋಡಿ ಮನಸ್ಸಿನಲ್ಲೆ ಏನೋ ಪ್ರಶ್ನೆ ಮಾಡಿಕೊಂಡ. ಬಹಳ ದಿನಗಳಿಂದಲೂ ಈ ಪ್ರಶ್ನೆ ಅವನನ್ನು ಕಾಡುತ್ತಿತ್ತು.

ಮಣಿ ತನ್ನ ಪುಸ್ತಕಗಳನ್ನು ಚಾಪೆಯೊಂದಿಗೆ ಮಡಚಿ ಮೂಲೆಯಲ್ಲಿಟ್ಟು ಮೈಮುರಿದುಕೊಂಡು ತಣ್ಣಗೆ ಬೀಸುತ್ತಿರುವ ಗಾಳಿಯಲ್ಲಿ ಕಮ್ಯೂನಿಟಿ ಹಾಲ್‌ನಿಂದ ಹೊರಕ್ಕೆ ನಡೆದ ಬಂದ. ಕೈಯಲ್ಲಿ ಒಂದು ಪ್ಲ್ಯಾಸ್ಟಿಕ್ ಚೆಂಬು ಹಿಡಿದುಕೊಂಡು ಕೊಳಾಯಿ ಹತ್ತಿರಕ್ಕೋಗಿ ಅಲ್ಲಿದ್ದ ತೊಟ್ಟಿಯಲ್ಲಿ ನೀರು ತುಂಬಿಕೊಂಡು ಕಾಲೋನಿ ಹಿಂದಿನ ರಸ್ತೆಯಲ್ಲಿ ಸೈನಾಟ್ ಗುಡ್ಡದ ಕಡೆಗೆ ನಡೆದ. ಅಷ್ಟೊತ್ತಿಗೆ ಅಲ್ಲಿಇಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಯಾರೂ ಇರಲಿಲ್ಲ. ಸೈನಾಟ್ ಗುಡ್ಡದ ಎದುರಿಗೆ ನಿಂತುಕೊಂಡು ಅದನ್ನೇ ದಿಟ್ಟಿಸಿ ನೋಡಿದ. ನೂರು ವರ್ಷಗಳಿಂದ ಗಣಿ ಸುರಂಗಗಳಿಂದ ತೆಗೆದ ಕಲ್ಲುಗಳ ಅದಿರನ್ನು ಪುಡಿಮಾಡಿ ಚಿನ್ನ ತೆಗೆದುಕೊಂಡು ಬಿಸಾಕಿರುವ ಗಣಿ ತ್ಯಾಜ್ಯದ ಗುಡ್ಡ ಅದು. ನೆಲದ ಮೇಲೆ ಇಷ್ಟು ದೊಡ್ಡ ಗುಡ್ಡ ಬಿದ್ದಿದೆ ಎಂದರೆ ಎಷ್ಟು ಜನರು ಗಣಿ ಸುರಂಗಗಳಲ್ಲಿ ಕೆಲಸ ಮಾಡಿರಬೇಕು? ಎಷ್ಟು ಬೆವರು ಸುರಿದಿರಬೇಕು? ಎಷ್ಟು ಜನರು ಸತ್ತಿರಬೇಕು? ಈ ಗುಡ್ಡಗಳು ಬೀಳಲು ನಮ್ಮ ಪೂರ್ವಜರೆ ಕಾರಣ ಎಂದುಕೊಂಡ. ಮಣಿ ತಂದೆ ಸೆಲ್ವಮ್. ಸೆಲ್ವಮ್ ತಂದೆ ಕುಪ್ಪ ಹೇಳುತ್ತಿದ್ದ ಅನೇಕ ಗಣಿ ದುರಂತಗಳ ಕರಾಳ ಕಥೆಗಳು ಮಣಿ ತಲೆಯಲ್ಲಿ ಹಾವುಗಳಂತೆ ಹರಿದಾಡತೊಡಗಿದವು.

*****

ಮಣಿ ಹಾಗೇ ಸೈನಾಟ್ ಗುಡ್ಡದ ಮೇಲೆಕ್ಕೆ ಹತ್ತಿಕೊಂಡುಹೋದ. ಬೆಟ್ಟದ ಮೇಲೆ ವಿಶಾಲವಾದ ಮಣ್ಣಿನ ಬಯಲು ಫುಟ್ಬಾಲ್ ಮೈದಾನದಂತೆ ಕಾಣಿಸುತ್ತಿತ್ತು. ಅದರ ಮೇಲೆ ನಿಂತುಕೊಂಡು ಸುತ್ತಲೂ ನೋಡಿದ. ಸೂರ್ಯ ಪೂರ್ವ ದಿಕ್ಕಿನಲ್ಲಿ ಏಳುತ್ತಿದ್ದಂತೆ ಮೋಡಗಳು ಓಕುಳಿ ಹಬ್ಬದ ಬಣ್ಣಗಳನ್ನು ಹಚ್ಚಿಕೊಳ್ಳುತ್ತಿದ್ದವು. ಮಣಿ ಗುಡ್ಡದ ಒಂದು ಅಂಚಿನಲ್ಲಿ ಕುಳಿತುಕೊಂಡು ಪೂರ್ವಕ್ಕೆ ನೋಡತೊಡಗಿದ. ಅಷ್ಟರಲ್ಲಿ ಇನ್ನಷ್ಟು ಹುಡುಗರು ಗುಡ್ಡ ಏರಿಬಂದು ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡರು. ಸೂರ್ಯ ದೊಡ್ಡದಾಗಿ ಕೆಂಪಾಗಿ ಕಾಣಿಸಿಕೊಂಡು ನಿಧಾನವಾಗಿ ಆಕಾಶದಲ್ಲಿ ಏರಿ ಬರತೊಡಗಿದ. ಸುತ್ತಲೂ ಮುತ್ತಿಕೊಂಡಿದ್ದ ಮೋಡಗಳು ಚದುರಿಹೋಗುತ್ತ ಸೂರ್ಯನಿಗೆ ದಾರಿ ಮಾಡಿಕೊಟ್ಟವು. ಈಗ ಗಾಳಿ ಬೀಸತೊಡಗಿ ಸೈನಾಟ್ ಗುಡ್ಡದ ಒಂದು ಅಂಚಿನಿಂದ ಧೂಳು ಮಣ್ಣು ಹಾರಾಡುತ್ತ ಎದ್ದಿತು. ಅಲ್ಲಿ ಕುಳಿತಿದ್ದವರೆಲ್ಲ ಎದ್ದು ಗುಡ್ಡವನ್ನು ಇಳಿಯತೊಡಗಿದರು.


ಮಣಿ ಸೈನಾಟ್ ಗುಡ್ಡದಿಂದ ಇಳಿದು ಬಂದು ಕಮ್ಯೂನಿಟಿ ಹಾಲ್ ಕಡೆಗೆ ಹೋಗಿ ಪುಸ್ತಕಗಳನ್ನು ತೆಗೆದುಕೊಂಡು ಮನೆ ಕಡೆಗೆ ಬಂದ. ಅಷ್ಟರಲ್ಲಿ ಮಣಿ ತಂದೆ ಸೆಲ್ವಮ್ ಸೈಕಲ್‌ನಲ್ಲಿ ಕೆಲಸಕ್ಕೆ ಹೊರಟಿದ್ದರು. ಸೆಲ್ವಮ್ ಮಣಿಯನ್ನು ನೋಡಿದ್ದೆ, “ಮಣಿ” ಎಂದ. ಮಣಿ, “ಅಪ್ಪ” ಎಂದ. ಸೆಲ್ವಮ್, “ನಾನು ಕೆಲಸಕ್ಕೆ ಹೋಗಿ ಬರ್ತೀನಿ. ಚೆನ್ನಾಗಿ ಓದಿಕೊ ಮಣಿ” ಎಂದು ಸೈಕಲ್ ತುಳಿಯುತ್ತ ಹೊರಟುಹೋದರು. ಕನಕ, ಸೆಲ್ವಮ್ ಹೋದ ಮೇಲೆ ಮನೆ ಒಳಕ್ಕೆ ಬಂದಳು. ಪುಸ್ತಕಗಳನ್ನು ಮನೆ ಒಳಗಿಟ್ಟ ಮಣಿ “ನಾನು ಹುಡುಗಿಯಾಗಿ ಹುಟ್ಟಿದ್ದರೆ ಚೆನ್ನಾಗಿತ್ತು. ಮನೆಯಲ್ಲೇ ಸುಮತಿಯಂತೆ ಬೆಚ್ಚಗೆ ಮಲಗಿಕೊಳ್ಳುತ್ತಿದ್ದೆ” ಎಂದು ಅಪ್ಪನ ಮಂಚದ ಮೇಲೆ ಮಲಗಿಕೊಂಡು ಬಟ್ಟೆ ಹೊದ್ದುಕೊಂಡ. ಕನಕ, “ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೋದರೆ ಎಲ್ಲಾ ತನಗೆತಾನೇ ಬರುತ್ತೆ” ಎಂದಳು.

(ಮುಂದುವರಿಯುವುದು…)

ಹಿಂದಿನ ಕಂತು: ಗಣಿ ಕಾಮಿಕರು ಮತ್ತು ಗಣಿ ಕಾಲೋನಿಗಳು