ಯಾವ ಪುಸ್ತಕ, ಸಿನಿಮಾ, ವ್ಯಕ್ತಿ, ಘಟನೆಗಳು ಪ್ರಭಾವಿಸಲು ಸಾಧ್ಯವಾಗದಂತೆ, ತಮ್ಮ ಸುತ್ತ ಅಭೇದ್ಯ ಕೋಟೆ ನಿರ್ಮಿಸಿ, ತಮ್ಮ ನೋವಿನಲ್ಲೇ ಸುಖವನ್ನು ಕಾಣುವ ಜನರವರು. ಸ್ವಲ್ಪ ಯಾಮಾರಿದರೂ, ಯಾರನ್ನಾದರೂ ನಿರಾಶೆ, ನಕಾರಾತ್ಮಕ ಮನಃಸ್ಥಿತಿಯ ಕುಳಿಯೊಳಗೆ ಸೆಳೆಯುವ ತಾಕತ್ತು ಅವರಿಗಿರುತ್ತದೆ. ಕೆಟ್ಟವರಲ್ಲ. ಬೇರೆಯವರಿಗೆ ಕೆಟ್ಟದ್ದನ್ನು ಹಾರೈಸುವುದಿಲ್ಲ. ಪರೋಪಕಾರಿಗಳಾಗಿಯೇ ಕಾಣುತ್ತಾರೆ. ಆದರೆ ನಿರಂತರ ನಿರಾಶೆ, ನೋವು, ದುಃಖದ ಕಥೆಗಳನ್ನೇ ನೆನಪು ಮಾಡಿಕೊಳ್ಳುತ್ತಾ, ಒಳ್ಳೆಯ ಬದಲಾವಣೆಯ ಸಾಧ್ಯತೆಯನ್ನೇ ಅಲ್ಲಗೆಳೆಯುತ್ತಾ ಬದುಕುವವರ ನಡುವೆ ಸಂತೋಷಪರ ವ್ಯಕ್ತಿಗಳು ಹೆಚ್ಚುಕಾಲ ಉಳಿಯಲಾಗುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

“ಮನೆಯಲ್ಲಿ ಅಸ್ತು ದೇವತೆಗಳು ಸದಾಕಾಲ ಅಸ್ತು ಅಸ್ತು ಅಂತಿರುತ್ತಾರೆ. ನೀನು ಒಳ್ಳೆಯದು ಹೇಳಿದರೂ, ಕೆಟ್ಟದ್ದು ಕೋರಿದರೂ, ಹಾಗೆಯೇ ಆಗಲಿ… ಹಾಗೆಯೇ ಆಗಲಿ ಎನ್ನುವರಷ್ಟೇ. ಅವರು ದೇವತೆಗಳಲ್ವಾ? ಅವರು ಅಸ್ತು ಅಂದಿದ್ದು ಆಗಿಯೇ ಬಿಡತ್ತೆ. ಒಳ್ಳೆಯ ಮಾತಾಡಬೇಕು ಮಗು.” ಅಂತ ಅಜ್ಜಿ ಮೂರುವರ್ಷದ ಆಗಷ್ಟೇ ಮಾತು ಕಲಿತ ಮಗುವಿಗೆ ಪಾಠ ಹೇಳುತ್ತಿದ್ದರು. ಇಂತಹ ಪಾಠಗಳು ನಿಧಾನಕ್ಕೆ ನಮ್ಮ ಮನಸ್ಸು, ಬುದ್ಧಿಯಿಂದ ಅಳಿಸಿಹೋಗುವುದೋ, ಹಿನ್ನಲೆಗೆ ಸರಿಯುವುದೋ ಆಗಿ ಒಂದು ತೀವ್ರ ಘಟ್ಟದಲ್ಲಿ ನೆನಪಿಗೆ ಬರುತ್ತವೆ. ಅದೇ ಹಾದಿಯಲ್ಲಿ ನಡೆದಿದ್ದರೆ ಬದುಕು ಚೆಂದವಿರುತ್ತಿತ್ತೇನೋ ಎನಿಸಿ ಪೆಚ್ಚಾಗುತ್ತೇವೆ. ಹಾಗೆಯೇ, ಎಚ್ಚರಿಸುವ ಘಳಿಗೆ ಈಗಾದರೂ ಒದಗಿಬಂದಿತಲ್ಲ ಎಂಬ ನೆಮ್ಮದಿ ಸುಖ ನೀಡುತ್ತದೆ.

“ನಿನ್ನ ಹಾಗೆ ಎಲ್ಲರ ಬಗ್ಗೆ, ಎಲ್ಲದರ ಬಗ್ಗೆ ಸುಖಾಸುಮ್ಮನೆ ಹೊಗಳುತ್ತಾ, ಅವರಿವರನ್ನು ಮೆಚ್ಚಿಸುತ್ತಾ ಕೂರಲು ನನಗಿಷ್ಟವಾಗಲ್ಲ ಕಣೆ. ನಮ್ಮದೇನಿದ್ರೂ ನ್ಯೂಸ್ ಚಾನಲ್ ಥರ. ನೇರ, ದಿಟ್ಟ, ನಿರಂತರ. ಮುಖಕ್ಕೆ ಹೊಡೆದ ಹಾಗೆ ಹೇಳಿಬಿಡೋದೇ. ಯಾರೇನು ಅಂದುಕೊಂಡರೆ ನಮಗೇನು? ದಾಕ್ಷಿಣ್ಯಕ್ಕೆ ಬಸಿರಾಗೋ ಪೈಕಿಯಲ್ಲ ನಾನು. ಬೈದು ಹೇಳೋರು ಒಳ್ಳೆಯದಕ್ಕೆ ಹೇಳಿದ್ರು. ಹೊರಗೆ ಸಿಡಸಿಡ ಅಂದ್ರೂ ಮನಸ್ಸು ಒಳ್ಳೆಯದು ಅಂತ ನಮ್ಮನ್ನ ಮೆಚ್ಚುವ ಜನರು ಇರ್ತಾರೆ. ಬರೀ ಹೊಗಳುಭಟರದೇ ಸಾಮ್ರಾಜ್ಯ ಅನ್ಕೋಬೇಡ” ಎನ್ನುವುದು ಕೊಂಕು ಮಾತಾಡುವುದನ್ನೇ ಹೆಚ್ಚುಗಾರಿಕೆ ಮಾಡಿಕೊಂಡವರ ವರಸೆ. ನೀವೆಷ್ಟೇ ಪ್ರಯತ್ನಿಸಿದರೂ ಅವರಿಂದ ಒಳ್ಳೆಯ ಮಾತಿರಲಿ. ಮೆಚ್ಚುಗೆಯ ಕಣ್ಣೋಟವನ್ನೂ ಪಡೆಯುವುದು ಅತ್ಯಂತ ಕಷ್ಟ. ಅವರ ಮುಂದೆ ಯಾರನ್ನೇ, ಯಾವುದನ್ನೇ ಮೆಚ್ಚಿದರೂ, “ಅಯ್ಯೋ… ಸುಮ್ಮನೆ ವಹಿಸಿಕೊಂಡು ಬರಬೇಡ. ನಂಗೆಲ್ಲಾ ಗೊತ್ತು. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ನನ್ನ ಕಣ್ಣಂದಾಜು ತಪ್ಪಾಗಿದ್ದು ಇತಿಹಾಸದಲ್ಲೇ ಇಲ್ಲ. ಥಳಕು ಬಳಕು ನೋಡಿ ಮೋಸಬಿದ್ದಿದ್ದಲ್ಲದೇ ಈಗ ಹೊಗಳ್ಕೊಂಡು ತಿರುಗ್ತಿದ್ದೀಯಲ್ಲ. ನಿನ್ನ ಬಗ್ಗೆನೇ ಅಯ್ಯೋ ಅನ್ಸತ್ತೆ. ಇವೆಲ್ಲ ಅರ್ಥ ಆಗಲ್ಲ ಬಿಡು. ಅದಕ್ಕೆ ಬೇಕಾದ ಸೂಕ್ಷ್ಮಬುದ್ಧಿ ಎಲ್ಲರಿಗೂ ಒಲಿಯಲ್ಲ.” ಎಂದು ನಿಮ್ಮನ್ನೇ ಹೀಗಳೆದು ಗೆಲುವಿನ ನಗೆ ಬೀರುತ್ತಾರೆ. ಇದು ಹೊರಗಿನವರಿಗೆ ಒಳ್ಳೆಯ ಮಾತನಾಡದವರ ವಿಷಯವಾದರೆ, ಸ್ವಂತಕ್ಕೆ ಒಳ್ಳೆಯನ್ನೇ ಕೋರಿಕೊಳ್ಳದ, ಸದಾ ಕಷ್ಟ, ನೋವು, ಬೇಸರವನ್ನೇ ಮೈಮೇಲೆಳೆದುಕೊಂಡು ದುರದೃಷ್ಟಕ್ಕಾಗಿ ನಿಟ್ಟುಸಿರಿಡುವವರ ಕಥೆ ಇನ್ನೊಂದು ರೀತಿಯದು.

“ಈ ಜನ್ಮದಲ್ಲಿ ನಾವು ಸುಖಪಡೋದನ್ನ ಪಡೆದುಕೊಂಡು ಬಂದಿಲ್ಲ. ಎಲ್ಲಿ ಕೈ ಹಾಕಿದರೂ ನಷ್ಟ, ಕಷ್ಟ, ಅವಮಾನ. ನಮ್ಮ ಕೈಲಿ ಸಹಾಯ ಪಡೆದವರು, ನಮಗಿಂತ ಕೆಳಗಿದ್ದವರು, ಈಗ ಎಷ್ಟೆಲ್ಲ ಒಳ್ಳೆಯ ಸ್ಥಾನದಲ್ಲಿದ್ದಾರೆ. ನಮ್ಮದು ಹೀನ ಅದೃಷ್ಟ. ಯಾರೇನು ಮಾಡೋಕಾಗುತ್ತೆ? ಪ್ರತಿ ವಿಷಯಕ್ಕೂ ನೂರು ಸಲ ಸೋತು, ಕಾರ್ಯ ಸಾಧಿಸಬೇಕು. ಅಂದುಕೊಂಡಿದ್ದೆಲ್ಲ ಚಿಟಿಕೆ ಹೊಡೆದಂಗೆ ಆಗುವವರಿಗೆ ನಮ್ಮ ಕಷ್ಟ ಅರ್ಥವಾಗಲ್ಲ. ಬಿಟ್ಟಿ ಉಪದೇಶ ಕೊಡೋಕೆ ಸರತಿಸಾಲಲ್ಲಿ ನಿಂತು ಬರ್ತಾರೆ ಬೇಕಿದ್ರೆ. ಈ ಪ್ರಪಂಚದಲ್ಲಿ ಬುದ್ಧಿವಾದ ಒಂದು ಧಂಡಿಯಾಗಿ ಸಿಗತ್ತೆ. ನಮಗೆ ಧಾರಾಳವಾಗಿ ಸಿಕ್ಕಿದ್ದು ಅದೊಂದೇ ನೋಡು. ನಾವಂತೂ ಉದ್ಧಾರ ಆಗಲ್ಲ. ಈ ಜನ್ಮಕ್ಕೆ ಇಷ್ಟೇ ಅಂತ ತೀರ್ಮಾನ ಮಾಡಿಕೊಂಡು ಹೇಗೋ ಬಂದಂಗೆ ಬದುಕು ನಡೆಸುತ್ತಾ ಕಾಲ ಕಳೆಯುತ್ತಿದ್ದೀವಿ.” ಎಂದು ಮರುಮಾತಿಗೆ ಆಸ್ಪದವಿಲ್ಲದಂತೆ ವಾದ ಹೂಡಿರುತ್ತಾರೆ. ಯಾವ ಪುಸ್ತಕ, ಸಿನಿಮಾ, ವ್ಯಕ್ತಿ, ಘಟನೆಗಳು ಪ್ರಭಾವಿಸಲು ಸಾಧ್ಯವಾಗದಂತೆ, ತಮ್ಮ ಸುತ್ತ ಅಭೇದ್ಯ ಕೋಟೆ ನಿರ್ಮಿಸಿ, ತಮ್ಮ ನೋವಿನಲ್ಲೇ ಸುಖವನ್ನು ಕಾಣುವ ಜನರವರು. ಸ್ವಲ್ಪ ಯಾಮಾರಿದರೂ, ಯಾರನ್ನಾದರೂ ನಿರಾಶೆ, ನಕಾರಾತ್ಮಕ ಮನಃಸ್ಥಿತಿಯ ಕುಳಿಯೊಳಗೆ ಸೆಳೆಯುವ ತಾಕತ್ತು ಅವರಿಗಿರುತ್ತದೆ. ಕೆಟ್ಟವರಲ್ಲ. ಬೇರೆಯವರಿಗೆ ಕೆಟ್ಟದ್ದನ್ನು ಹಾರೈಸುವುದಿಲ್ಲ. ಪರೋಪಕಾರಿಗಳಾಗಿಯೇ ಕಾಣುತ್ತಾರೆ. ಆದರೆ ನಿರಂತರ ನಿರಾಶೆ, ನೋವು, ದುಃಖದ ಕಥೆಗಳನ್ನೇ ನೆನಪು ಮಾಡಿಕೊಳ್ಳುತ್ತಾ, ಒಳ್ಳೆಯ ಬದಲಾವಣೆಯ ಸಾಧ್ಯತೆಯನ್ನೇ ಅಲ್ಲಗೆಳೆಯುತ್ತಾ ಬದುಕುವವರ ನಡುವೆ ಸಂತೋಷಪರ ವ್ಯಕ್ತಿಗಳು ಹೆಚ್ಚುಕಾಲ ಉಳಿಯಲಾಗುವುದಿಲ್ಲ. ಅವರಿಂದ ದೂರವಾದ ಕ್ಷಣದಿಂದಲೇ, “ಹೇಳಲಿಲ್ವಾ ನಾನು? ಯಾರೂ ನಮ್ಮೊಂದಿಗೆ ಶಾಶ್ವತವಾಗಿ ಇರಲ್ಲ. ಆ ದೇವರಿಗೇ ಬೇಡವಾದ ನಾವು, ಇನ್ಯಾರಿಗೆ ಹತ್ತಿರವಾಗೋಕೆ ಸಾಧ್ಯ? ಕೊಡೋಕೆ ಹುಟ್ಟಿದವರು ನಾವು. ಪ್ರೀತಿ, ವಿಶ್ವಾಸ, ಸ್ನೇಹವನ್ನು ಕೂಡ ಮನಸಾರೆ ಅನುಭವಿಸಬಾರದು ಅಂತ ಬರೆಸಿಕೊಂಡು ಬಂದಿದ್ದೀವಿ. ಎಲ್ಲರೂ ನಡುನೀರಿನಲ್ಲಿ ಕೈಬಿಟ್ಟು ಹೋಗುವವರೇ. ಚಿಂತೆಯಿಲ್ಲ. ದೇವರು ಇನ್ನಷ್ಟು ಕಷ್ಟ ಕೊಡಲಿ. ನೋವು ಕೊಡಲಿ. ನನ್ನ ಪ್ರಾಣವನ್ನೇ ತೆಗೆದುಕೊಂಡು ಹೋಗಲಿ. ನಾನೆಲ್ಲಕ್ಕೂ ಸಿದ್ಧ.” ಎಂದು ಮತ್ತಷ್ಟು ಕಷ್ಟಕ್ಕೆ ಸಜ್ಜುಗೊಳ್ಳುತ್ತಾ, ಅಸ್ತು ದೇವತೆಗಳ ಕೈಲಿ ಅಸ್ತು ಎನ್ನಿಸಿರುತ್ತಾರೆ.

ನಾವು ಈ ಬಗೆಯ ಜನರ ನಡುವೆಯೇ ಇದ್ದು, ಒಳ್ಳೆಯದನ್ನೇ ಯೋಚಿಸುತ್ತಾ, ನಮಗೂ ಪರರಿಗೂ ಒಳಿತನ್ನೇ ಕೋರುವ ಸ್ವಭಾವ ರೂಢಿಸಿಕೊಳ್ಳುವುದೇ ಸವಾಲಿನ ಕೆಲಸ. ಸಕಾರಾತ್ಮಕ ಮನೋಭಾವ ಎನ್ನುವುದು ತನ್ನಿಂದತಾನೇ ಜನ್ಮಸಿದ್ಧವಾಗಿ ಬರುವ ರಕ್ತದ ಗುಂಪಲ್ಲ. ಪ್ರಯತ್ನಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾದ ಮನಃಸ್ಥಿತಿ. ಒಮ್ಮೆ ಅಭ್ಯಾಸವಾದರೆ, ಬದುಕಿನ ರುಚಿ ಹೆಚ್ಚಿಸುವ ರಹಸ್ಯ ಸಾಮಗ್ರಿ. ಒಂದಿಷ್ಟು ಕಾಲ ಪ್ರಯತ್ನಿಸಿ ನೋಡಲಡ್ಡಿಯಿಲ್ಲ. ಬದುಕಿನ ಪ್ರಯೋಗಶಾಲೆ ಸಮ್ಮತಿಸುತ್ತದೆ ಅಲ್ಲವೇ?