ಹೆಣ ಬೀಳಬಹುದು!

ನಡೆದಿತ್ತು ಘಟನೆ; ಕೇಳಿತ್ತು ಕಿವಿ
ಗ್ರಹಚಾರ ಕೆಟ್ಟಿರಬಹುದು;
ಅಪ್ಪನ ನಿನಾದ!
ಶಾಸ್ತ್ರ ಕೇಳಲೇಬೇಕು
ಅವ್ವನ ವಾದ.

ಕವಡೆ ಬಿಡು ಹೀಗೆ,
ನಾಲ್ಕು ಬಿತ್ತು..
ಹೆಣ ಬೀಳಬಹುದು
ಶಾಂತಿ ಮಾಡಿಸಬೇಕು!

ಮೊನ್ನೆ ಮಚ್ಚೆತ್ತಿದ್ದ ಬಾಮೈದ?!
ಅವನೇ… ಅವನಿಂದಲೇ
ಗ್ರಹಚಾರ…
ಹುಣಸೆಮರದ ಗುಟ್ಟು
ಸುತ್ತಿ ಸುಳಿದು ಬಾ ಮಡಿಯುಟ್ಟು!

ಕವಡೆ ಮಾತು ಸುಳ್ಳಾಗದು ಕಂದ
ಇಡು ಕಾಣಿಕೆ, ಬಿಡು ಗಾಡಿ
ವಾರ ಕಳೆಯುವುದರೊಳಗೆ
ವಾತಾವರಣ ಶಾಂತ !

ಸಾವಿರ ಸುಲಿದ; ಮನೆಗೆ ನಡೆದೆವು
ಅದೋ.. ಆ ಪೂಜಾರಿ ಬಂದಿದ್ದ
ನಿನಗೂ ಬಾಮೈದನಿಗೂ ಜಗಳವಂತೆ;
ವಿಚಾರಿಸಿ ಹೋದ ಹೀಗೆ!
ಪಕ್ಕದ ಮನೆಯವಳು ನುಡಿದಳು

ನನ್ನದೇ ಮನೆಯ ಕಥೆ ಕೇಳಿ
ಕವಡೆ ತೂರಿ ಭವಿಷ್ಯ ನುಡಿದವ
ಮತ್ತೊಂದು ಗೋಡೆಗೆ ಕಿವಿಯಾಗಿದ್ದ ಕದ್ದು,
ನಾಳೆ ಆ ಮನೆಯ ಭವಿಷ್ಯ
ಹೇಳಬಾರದೆ ಖುದ್ದು!