ವಿಷಗಾಳಿ!

ನನ್ನ ನಂಬಿದುದೇ ತಪ್ಪೆಂದು ವಾದಿಸಬೇಡ.
ನೀನು ಇದೇ ತಟ್ಟೆಯೊಳಗೆ ಬೆರಳಾಡಿಸಿ
ತುತ್ತು ಸವಿದಾಗ ನಮ್ಮ ನಡುವೆ
ಜಾತಿಯ ಅಂತರವಿರಲಿಲ್ಲ,
ಸುಮ್ಮನಿದ್ದೆ!

ನಿನ್ನ ಹಿಡಿತವಿಲ್ಲದ ನಾಲಿಗೆ
ಅತ್ತಿಂದಿತ್ತ ಹೊರಳಿ ಕೊಳೆಗೆಟ್ಟು ನಿಂತಾಗ,
ಏನೂ ಅರಿಯದವಳೆಂದು ಅಲಕ್ಷ್ಯಗೈಯ್ದು
ಪ್ರೀತಿಸಿದ್ದೆ!

ಕಣ್ಬೆಳಕ ತಪ್ಪಿಸಿ ನಿರಾಕರಿಸಿ ಹೋಗಿ,
ಎಣಿಸಿ ಮಣಿಸಿ, ಅಳೆದು ತೂಗಿ
ನೀನೇ ಬೇಕೆಂದು ಮರಳಿ ಬಂದಾಗ
ಅತ್ತು ಕರೆದು ಅಲಾಪಗೈದು,
ಅಪ್ಪಿ ಹಿಡಿದಿದ್ದೆ!

ಕತ್ತಲೊಳು ಬೆತ್ತಲಾಗಿ, ಕಾಮದ ಹೇಟಿಗೆ
ಪ್ರೀತಿಯ ಬಲಿಕೊಟ್ಟು
ನಿನ್ನ ಸಹವಾಸವೇ ಸಾಕೆಂದು
ಹೊರಟು ನಿಂತಾಗ
ಕರುಳು ಹಿಂಡುವಂತೆ ನೀನೇ ಬೇಕೆಂದು
ಕೂಗಿ ಕರೆದಿದ್ದೆ!

ನೀನು ಹೆಣ್ಣು..! ಎಷ್ಟೇ ಹೀನ
ಕೃತ್ಯವೆಸಗಿದರೂ‌ ಜನ… ನಿನ್ನ ಪರ!
ಆದರೆ ನಾನು? ಗಂಡೆಂಬ ಕಾರಣಕ್ಕೆ
ಕಾನೂನು ಕಣ್ಣುಮುಚ್ಚಿ
ದುಂಬಾಲು ಹಾಕಿದಾಗ
ಬೆರಳು ಕಚ್ಚಿ, ಮಂಡಿಯೂರಿ
ನೋವ ನೆಲಕ್ಕೆ ಇಳಿಬಿಟ್ಟಿದ್ದೆ!

ಈಗ ನೀನು ಗೆದ್ದೆಯೆಂದು ಬೀಗಬಹುದು;
ಅಕ್ಷರ ಸಹ ಗೆಲುವಿನ ರುಚಿ ಕಂಡಿಲ್ಲ ನೀನು!
ಅನುರಾಗ, ಅನುಬಂಧದ ಅಲೆಗಳೆದುರು
ಹೀನಾಯವಾಗಿ ಸೋತು ಬಿಟ್ಟೆ!

ನಿರಾಕರಣೆಯ ಮಾತಿಲ್ಲ ಇನ್ನೂ?
ನಿರ್ಲಕ್ಷ್ಯದ ವಿಷಗಾಳಿ
ಹೀಗೆ ಬಿಸಿ, ಹಾಗೆ ಮರೆಯಾಗಿ ಹೋಗಿದೆ.
ನಿಜಾ! ನಾನೀಗ ಸರಾಗವಾಗಿ
ಉಸಿರಾಡುತ್ತಿದ್ದೇನೆ!