ವ್ಯಭಿಚಾರಿ ಹೂವು!

ವ್ಯಭಿಚಾರಿ ಹೂವಷ್ಟೇ;
ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,
ಮೊನ್ನೆಯಷ್ಟೇ ಅರಳಿ,
ದೇವರ ಮುಡಿಯನ್ನೇರುವ ಹೊತ್ತಿಗೆ,
ಕಿಡಿಗೇಡಿಗಳ ಕೈಯೊಳಗೆ
ಕೀಲುಬೊಂಬೆಯಂತೆ ಕಿತ್ತು, ಹರಿದ,
ಬೆಂದು, ಬಳಲಿ,
ದಳವಿಲ್ಲದೆ, ದಡ ಸೇರದೆ
ಬೀದಿ ಪುಷ್ಪವಾದ ನಾನು,
ವ್ಯಭಿಚಾರಿ ಹೂವಷ್ಟೇ..!!

ಅಲೆದವಳು….
ಅಲ್ಲಿ… ಇಲ್ಲಿ… ಬೀದಿಗಳೆನ್ನದೇ
ಹೆತ್ತೊಡಲು ಹೇಸಿ ನಿಂತಾಗ,
ಬೆಂಬಲವಿಲ್ಲದ ಬೆಂಗಾಡಿನೊಳಗೆ
ಬೆಂಡಾಗಿ ನಿಂತು,
ಹೊಟ್ಟೆ ತುಂಬಿಸಿಕೊಳ್ಳಲು
ಹೆಣಗಾಡಿದವಳು..
ತಪ್ಪಿಲ್ಲದೆ ತವರಿಗೆ ಎರವಾಗಿ
ಇದ್ದೂ ಸತ್ತವಳು!

ಹಿಂಜರಿದವಳು…
ಇನ್ನೊಬ್ಬರ ಮುಂದೆ ಕೈಚಾಚುವಲ್ಲೂ,
ಸ್ವಾಭಿಮಾನಕ್ಕೆ ಕಟ್ಟು ಬಿದ್ದವಳು.
ಹೊಟ್ಟೆ ಪಾಡಿಗಾಗಿ ಅರಿತೊ ಮರೆತೊ,
ಕೈ ಮುಂದೆ ಬಂದಾಗ,
ಜೀವ ತೆತ್ತುವುದೇ ಲೇಸೆನಿಸಿದರೂ
ಹೊಟ್ಟೆ ಮುಟ್ಟಿ ಎದೆಗಟ್ಟಿ
ಮಾಡಿಕೊಂಡವಳು.

ಗೊತ್ತಿದ್ದೂ ಬೇಡಿದುದರ ಫಲ;
ದಿಕ್ಕು ತಪ್ಪಿಸಿದ ಕೈಗಳು..
ಮಡಿಲೊಳಗಿರೊ ಹಸುಕಂದನ ಬದಿಗೊತ್ತಿ
ಉರುಳಾಡ ಬಯಸಿದ ಮೈಗಳು.
ದೌರ್ಜನ್ಯಕ್ಕೆ ಮನ ಧಿಕ್ಕಾರವೆನ್ನುತ್ತಿರಲು,
ಅಪ್ಪನಿಲ್ಲದ ಹಸುಗೂಸ ಆರೈಕೆಗಾಗಿ,
ವಿಧಿಯಿರದೆ ಒಪ್ಪಿಕೊಂಡ,
ಇನ್ನೊಬ್ಬನ ಮೈ ಅಪ್ಪಿಕೊಂಡ ನಾನು
ವ್ಯಭಿಚಾರಿ ಹೂವಷ್ಟೇ..!!

ಹೆತ್ತೊಡಲ ಹೊರೆಯೊತ್ತು,
ಹೊಟ್ಟೆಯೊರೆಯಲಷ್ಟೇ ಬದುಕಿದವಳು..
ಇನ್ನೊಬ್ಬರ ಹೊಟ್ಟೆ ಮೇಲೊಡೆವ
ಕಾಂಚಾಣಗಿತ್ತಿಯಲ್ಲ..
ಕಾಕಡದಂತೆ ಪವಿತ್ರಳೂ ಅಲ್ಲ.
ಸುಟ್ಟ ಕನಸುಗಳ ಜೊತೆ ಜೊತೆಯೇ
ಮುದುಡಿ ಬಾಡಿರೆ ನಾನು,
ವ್ಯಭಿಚಾರಕ್ಕೆ ಸಿಕ್ಕ ಹೂವಷ್ಟೇ..
ಲೋಕ ಕಂಟಕಿಯಲ್ಲ..!!