ಈ ಹೂ ಮುಡಿಯುವ ವಿಷಯದಲ್ಲಿ ಒಂದು ರೀತಿಯ ಸ್ಪರ್ಧೆಯಿದ್ದ ಕಾಲವದು. ತಾವು ಮುಡಿದು, ಗೆಳತಿಯರಿಗೂ ತರುವವರೂ ಇದ್ದರು. ಆದರೆ ನನ್ನ ಜಡೆ ಏರುತ್ತಿದ್ದ ಈ ಸೊಬಗಿನ ಡೇರೆ ಹೂಗಳ ಮೇಲೆ ಗೆಳತಿಯರ ಕಣ್ಣು. ಅವರ ಆಸೆಗೆ ಮಣಿದು ಸಂಜೆಯಾದರೂ ಬಾಡದೇ ನಗುತ್ತಿದ್ದ ಡೇರೆ ಹೂವನ್ನು ಮುಡಿಯಿಂದ ತೆಗೆದು ಕೊಟ್ಟು ಬಂದದ್ದು ಇತ್ತು. ಈ ಡೇರೆಯ ವೈಜ್ಞಾನಿಕ ಹೆಸರು ಡೇಲಿಯಾ. ಇದು ಬೇಸಿಗೆಯಲ್ಲಿ ಬೆಳೆಯಲಾರದು. ಬೇಸಿಗೆಯಲ್ಲಿ ಇದರ ಗೆಡ್ಡೆಗಳನ್ನು ಒಣ ಮಣ್ಣಿನಲ್ಲಿ ಸಂಗ್ರಸಿಟ್ಟು, ಮಳೆ ಬಿದ್ದೊಡನೆ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟು ಬೆಳೆಯುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಹೊಸ ಬರಹ
ಅವಳ ಜಡೆ ನೋಡೆ; ಅದೆಷ್ಟು ಚಂದದ ಬಂಗಾರದ ಬಣ್ಣದ ಡೇರೆ ಹೂ ಮುಡ್ಕೊಂಡು ಬಂದಿದಾಳೆ… ಅಂತ ಸಹಪಾಠಿ ಗೆಳತಿ ಹೊಟ್ಟೆ ಕಿಚ್ಚಲ್ಲಿ ಪಕ್ಕದ ಗೆಳತಿಗೆ ತೋರ್ಸ್ತಾ ಇದ್ರೆ, ಹೂವು… ಚೆಲುವೆಲ್ಲಾ ನಂದೆಂದಿತು.. ಹೆಣ್ಣು… ಹೂವ ಮುಡಿದು ಚೆಲುವೇ ತಾನೆಂದಿತು ಎಂಬ ಗತ್ತಿನಲ್ಲಿ ನಾನು ಮತ್ತು ನನ್ನ ಮುಡಿಗೇರಿದ ಹೂವು ಕುಳಿತಿದ್ದೆವು. ಇದು ನಾನು ಪ್ರಾಥಮಿಕ ಶಾಲೆಗೆ ಹೋಗುವಾಗ ಮಲೆನಾಡಿನ ಮನೆಯಂಗಳದ ಹೂದೋಟದಲ್ಲಿ ಬಿರಿದ ಹೂ ಮುಡಿದು ನಲಿದ ದಿನದ ಕತೆ.
ಮಲೆನಾಡಿನ ಮನೆಯ ಅಂಗಳವೆಂದರೆ ಅದು ಹೂ ಚೆಲುವೆಯರು ನಲಿವ ನಂದನವನ. ತಮ್ಮ ಕೆಲಸಗಳ ಒತ್ತಡದ ನಡುವೆಯೂ ಅಮ್ಮಂದಿರು ಮನೆಯೆದುರು ಪುಟ್ಟ ಹೂದೋಟ ಮಾಡಿ ದೇಸೀ ಹೂಗಿಡಗಳನ್ನು ನೆಟ್ಟು ಸಮಯ ಸಿಕ್ಕಾಗೆಲ್ಲಾ ಪುಟ್ಟ ಮಕ್ಕಳಂತೆ ಅವುಗಳನ್ನು ಲಾಲಿಸಿ ಪೋಷಿಸುತ್ತಾರೆ. ಅವರ ಪ್ರೀತಿಗೆ ಮನಬಿಚ್ಚಿ ನಗುಅರಳಿಸುವ ಈ ಪುಷ್ಪ ಸುಂದರಿಯರು ಮಲೆನಾಡಿನ ಮನೆಗಳಿಗೆ ಹೊಸ ಮೆರುಗು ಮೂಡಿಸುತ್ತವೆ. ನನ್ನಮ್ಮ ಸಹ ಮನೆಯಂಗಳದ ಪುಟ್ಟ ಜಾಗದಲ್ಲಿ ಹಲವಾರು ಜಾತಿಯ ಹೂಗಿಡಗಳನ್ನು ಜತನದಿಂದ ಬೆಳೆಸಿ ಕಾಯುವವಳು. ಅವಳು ಹೀಗೆ ಶ್ರಮವಹಿಸಿ ಬೆಳೆಸಿದ ಗಿಡ ಹೂ ಕಾಣಿಕೆ ಕೊಟ್ಟಾಗ ಅವಳೆದೆಯಲ್ಲಿ ಬಣ್ಣಿಸಲಾರದ ಸಂಭ್ರಮ.
ಮಳೆಹಿಡಿಯುತ್ತಿದ್ದಂತೆ ಅಮ್ಮನಂಗಳದಲ್ಲಿ ಕುಸುಮ ಕೃಷಿ ಶುರು. ಡೇರೆ ಗೆಡ್ಡೆಗಳು, ಸೇವಂತಿಗೆ, ಗುಲಾಬಿ, ದಾಸವಾಳಗಳ ಹಲವು ಜಾತಿಗಳನ್ನು ಮಣ್ಣೊಡಲಿಗೆ ಊರುತ್ತಿದ್ದಳು. ಅವಳ ಕೈಗುಣವೋ ಎಂಬಂತೆ ನೆಟ್ಟ ಗಿಡಗಳೆಲ್ಲಾ ಚಿಗುರಿ ಹಸಿರ ಹಾಸಿ, ಹೂ ಬಿರಿದು ನಗುತ್ತಾ ನಿಂತುಬಿಡುತ್ತಿದ್ದವು. ಅವುಗಳಿಗೆ ಕಾಲಕಾಲಕ್ಕೆ ಗೊಬ್ಬರ, ಮಣ್ಣು, ನೀರು ಹದವಾಗಿ ನೀಡುವ ಕಲೆ ಅಮ್ಮನಿಗೆ ಕರಗತ. ಇಂದಿಗೂ ಅಮ್ಮನಂಗಳ ಖಾಲಿಯೆನಿಸಿದ್ದೇ ಇಲ್ಲ.
ನೆಂಟರ ಮನೆಗೆ ಹೋದಾಗೆಲ್ಲಾ ವಿಶೇಷ ಗಿಡಗಳನ್ನು ಕೇಳಿ ತರದೇ ಇರುವವಳಲ್ಲ ಅಮ್ಮ. “ಇದೊಂದು ದಾಸವಾಳದ ಹೆರೆ ಕೊಡಿ, ಹಾಂ ಇದೊಂದು ಸೇವಂತಿಗೆ ನಮ್ಮನೇಲಿ ಇಲ್ಲ…” ಅನ್ನುತ್ತಾ ಮನೆಗೆ ಸಾಕಷ್ಟು ಹೂ ತಳಿಗಳನ್ನು ಸಂಗ್ರಹಿಸಿ ತರುವ ಹವ್ಯಾಸ ಅವಳದ್ದು. ಹಾಗೆ ಅವಳ ಅಂಗಳದಲ್ಲಿ ಅರಳಿದ ಹೂಗಳ ಪ್ರದರ್ಶನ ನನ್ನ ಜಡೆಯಲ್ಲಿ ನಡೆಯುತಿತ್ತು. ಬೇರೆ ಸಮಯದಲ್ಲಿ ಕನಕಾಂಬರದ ಮಾಲೆ, ಮಲ್ಲಿಗೆ ಮಾಲೆ, ಗೊರಟೆ ಹೂವಿನ ಮಾಲೆ ನನ್ನೆರಡು ಜಡೆಯ ಒಂದರಲ್ಲಿ ತೂಗುತ್ತಾ ಮೆರೆದರೆ, ಮಳೆಗಾಲದಲ್ಲಿ ನಕ್ಷತ್ರಾಕೃತಿಯಲ್ಲಿ ಅರಳಿ ಕಿರೀಟದ ಸೊಗಸು ಹೊತ್ತ ಬಣ್ಣಬಣ್ಣದ ಡೇರೆ ಹೂಗಳು ಮುಡಿಗೆ ಬೆಳಕಿನಂತೆ ಕಳೆ ನೀಡುತ್ತಿದ್ದವು.
ಈ ಹೂ ಮುಡಿಯುವ ವಿಷಯದಲ್ಲಿ ಒಂದು ರೀತಿಯ ಸ್ಪರ್ಧೆಯಿದ್ದ ಕಾಲವದು. ತಾವು ಮುಡಿದು, ಗೆಳತಿಯರಿಗೂ ತರುವವರೂ ಇದ್ದರು. ಆದರೆ ನನ್ನ ಜಡೆ ಏರುತ್ತಿದ್ದ ಈ ಸೊಬಗಿನ ಡೇರೆ ಹೂಗಳ ಮೇಲೆ ಗೆಳತಿಯರ ಕಣ್ಣು. ಅವರ ಆಸೆಗೆ ಮಣಿದು ಸಂಜೆಯಾದರೂ ಬಾಡದೇ ನಗುತ್ತಿದ್ದ ಡೇರೆ ಹೂವನ್ನು ಮುಡಿಯಿಂದ ತೆಗೆದು ಕೊಟ್ಟು ಬಂದದ್ದು ಇತ್ತು. ಈ ಡೇರೆಯ ವೈಜ್ಞಾನಿಕ ಹೆಸರು ಡೇಲಿಯಾ. ಇದು ಬೇಸಿಗೆಯಲ್ಲಿ ಬೆಳೆಯಲಾರದು. ಬೇಸಿಗೆಯಲ್ಲಿ ಇದರ ಗೆಡ್ಡೆಗಳನ್ನು ಒಣ ಮಣ್ಣಿನಲ್ಲಿ ಸಂಗ್ರಸಿಟ್ಟು, ಮಳೆ ಬಿದ್ದೊಡನೆ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟು ಬೆಳೆಯುತ್ತಾರೆ. ಹತ್ತರಿಂದ ಇಪ್ಪತ್ತು ಬಣ್ಣಗಳ ಡೇರೆ ಹೂಗಳು ಅಮ್ಮನಂಗಳಕ್ಕೆ ಕಳೆ ತರುತ್ತಿದ್ದವು.
ಗುಲಾಬಿ ಅದರಲ್ಲೂ ಕಡುಗೆಂಪಿನ ಕಸಿ ಗುಲಾಬಿ, ಬಿಳಿ, ಹಳದಿ ಗುಲಾಬಿಗಳು ತಮ್ಮದೇ ಆದ ಸೌಂದರ್ಯವನ್ನು ಹೊತ್ತಿರುತ್ತಿದ್ದವು. ದಾಸವಾಳಗಳಂತೂ ನೀಲಿ ಒಳಗೆ ಕಡು ನೀಲಿ, ಹಳದಿ ಒಳಗೆ ಕಡುಕಂದು, ಬಿಳಿ, ಕೆನೆ ಬಣ್ಣ, ಕೇಸರಿ ಬಣ್ಣಗಳಿಂದ ಕಣ್ಮನಗಳಿಗೆ ಮುದ ನೀಡುತ್ತಿದ್ದವು. ಬಿಳಿ, ಕೆಂಪು, ಗುಲಾಬಿ ಬಣ್ಣದ ನಿತ್ಯಪುಷ್ಪಗಳು, ಗಾಢ ಮತ್ತು ತಿಳಿ ಬಣ್ಣದ ನೀರ್ ಸೋನೆ ಹೂಗಳು, ಚೆಂಡು ಹೂವು, ನಂದಿಬಟ್ಟಲು, ಗೊಂಡೆಗೊಂಡೆಯಾಗಿ ಬಿಡುವ ಕೆಂಪುಬಣ್ಣದ ಅಶೋಕ ಹೂವುಗಳು, ಸೂಜಿಮಲ್ಲಿಗೆ, ಕಾಕಡ ಮಲ್ಲಿಗೆ, ಕನಕಾಂಬರ, ಗೊರಟೆ ಹೀಗೆ ಹಲವು ಬಗೆಯ ಹೂಸುಂದರಿಯರು ನಿತ್ಯ ತಮ್ಮ ನಗು, ಸೌಂದರ್ಯ, ಸುಗಂಧದಿಂದ ಹೃನ್ಮನಗಳಿಗೆ ಆಹ್ಲಾದ ನೀಡುತ್ತಿದ್ದವು.
ದಾರಿಹೋಕರಿಗೆ ಅಮ್ಮನಂಗಳ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮನೆಗೆ ಬಂದು ಹೂಗಿಡಗಳನ್ನು ಕೇಳಿ ಪಡೆಯುತ್ತಾರೆ. ಮಳೆಗಾಲದ ಆರಂಭದಲ್ಲಿ ಸುತ್ತಮುತ್ತಲಿನ ಹೂಪ್ರಿಯರು, “ಈ ಸಾರಿ ಮಳೆಗಾಲ್ದಲಿ ನಿಮ್ಮನೆಗೆ ಬತ್ತೀವಿ ಅವತ್ ಹೇಳಿದ್ನಲ್ಲಾ… ಆ ದಾಸ್ವಾಳ್ದ್ ಹೆರೆ ಕೊಡಬಕು… ಮತ್ ನೋಡಿ ಕೊಡ್ದಿದ್ರೆ… ಕದ್ಕುಂಡೆ ಹೋತೀನಿ ನೀವ್ ಇಲ್ದಿದಾಗ ಬಂದು” ಅಂತ ಕದಿಯುವ ಬೆದರಿಕೆ ಹಾಕುವವರೂ ಇದ್ದಾರೆ. ಇನ್ನೂ ಕೆಲವರು ಮಾತಾಡ್ಕೊಂಡು ಹೋಗೋಕೆ ಅಂತ ಬಂದು ಅಲ್ಲಿ ಇಲ್ಲಿ ಕೈ ಹಾಕಿ ಸಾಕಷ್ಟು ಗಿಡಗಳನ್ನು ಹೊತ್ತು ನಡೆಯುತ್ತಾರೆ. ಬಸ್ಸಲ್ಲಿ ದೂರದ ನೆಂಟರ ಮನೆಯಿಂದ ಬರವಾಗಲೂ ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಹೂಗಿಡಗಳನ್ನು ಹಾಕಿಕೊಂಡು ಸಹ ಪ್ರಯಾಣಿಕರಿಗೆ ತಾಕಿಸಿ, ಬೈಸಿಕೊಳ್ಳುತ್ತಾ, ಏನಾಗಲಿ ಮುಂದೆ ಸಾಗು ನೀ… ಎಂದು ಹೂಗಿಡಗಳಿಗಾಗಿ ಏನು ಬೇಕಾದರೂ ಸಹಿಸುತ್ತೇವೆ ಎಂಬ ಮನೋಧೋರಣೆ ಪ್ರದರ್ಶಿಸುತ್ತಾರೆ.
ತಂದ ಗಿಡಗಳನ್ನೆಲ್ಲಾ ಅಂಗಳದಲ್ಲಿ ನೆಡುವವರೆಗೂ ಸಮಾಧಾನವಿರುವುದಿಲ್ಲ. ನೆಟ್ಟ ದಿನದಿಂದಯಾವ ಗಿಡ ಉಳಿಯಿತು, ಯಾವುದು ಚಿಗುರಲಿಲ್ಲ ಎಂದು ನೋಡಿ ನೋಡಿ ಅಂತು ಚಿಗುರಿದರೆ ಗೆಲುವಿನ ನಗೆ ಧರಿಸಿ ಹೂಲೋಕದಲ್ಲಿ ವಿಹರಿಸುತ್ತಾರೆ. ಮನೆಬಿಟ್ಟು ಒಂದೆರೆಡು ದಿನ ತವರಿಗೋ, ನೆಂಟರ ಮನೆಗೋ ಹೋದರೂ ಗಿಡಗಳದ್ದೇ ಚಿಂತೆ ಮನದೊಳಗೆ. ಈಗೆಲ್ಲಾ ವಿವಿಧ ವಿನ್ಯಾಸದ ಮಣ್ಣಿನ, ಸಿಮೆಂಟಿನ ಹೂ ಕುಂಡಗಳು ಸಿಗುತ್ತವೆ. ಆದರೆ ಮೊದಲೆಲ್ಲ ಮನೆಯಲ್ಲಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಚೀಲಗಳು, ಕವರ್ಗಳು, ಸಿಮೆಂಟ್, ಗೊಬ್ಬರ ತಂದ ಚೀಲಗಳನ್ನೇ ಮಡಚಿ ಮಣ್ಣು ತುಂಬಿ ಅದರಲ್ಲಿ ಹೂವಿನ ಗಿಡಗಳನ್ನು ನೆಡುತ್ತಿದ್ದರು. ಇದು ಪರಿಸರಸ್ನೇಹಿಯೂ ಆಗಿತ್ತು. ಕೊಟ್ಟಿಗೆಯಲ್ಲಿ ಹಸುಗಳಿದ್ದಾಗ ಈ ಗಿಡಗಳಿಗೆ ಉತ್ತಮ ಗೊಬ್ಬರ ಸಿಗುತ್ತಿತ್ತು. ಕೆಲವರು ಗಿಡಗಳಿಗೆ ಗೊಬ್ಬರ ಮಾಡಲೆಂದೇ ಬಯಲೆಲ್ಲಾ ಅಲೆದು ಹಸುವಿನ ಸಗಣಿ ಹೆಕ್ಕಿ ತಂದು ಗೊಬ್ಬರ ಮಾಡುತ್ತಾರೆ.
ಹೂದೋಟವೆಂದರೆ ಬರೀ ಹೂವು, ಎಲೆ, ಗಿಡವಲ್ಲ ಅದೊಂದು ಭಾವನಾತ್ಮಕ ಬೆಸುಗೆ. ಅಲ್ಲಿ ಅಮ್ಮನ ಸಂತಸದ ಘಮವಿದೆ. ಅಜ್ಜಿಯ ಆರೈಕೆಯ ಹಿತವಿದೆ. ಸಂಸಾರದ ಜಂಜಾಟಗಳ ನಡುವೆ, ದೈನಂದಿನ ಕೆಲಸಗಳ ಏಕತಾನತೆ ನಡುವೆ ಮಲೆನಾಡಿನ ಹೆಣ್ಮಕ್ಕಳಿಗೆ ಸಿಗುವ ಸಂಜೆ ಅಥವಾ ಬೆಳಗಿನ ಬಿಡುವು ಅವರ ಮನಸ್ಸಿಗೆ ಒಂದು ನಿರಾಳತೆ ನೀಡಬೇಕೆಂದರೆ ಈ ಹೂ ಹಸಿರಿನ ಸಾಂಗತ್ಯ ಅತ್ಯಂತ ಮುಖ್ಯವಾಗುತ್ತದೆ. ಮನೆ ಎಷ್ಟೇ ವೈಭವಯುತವಾಗಿದ್ದರೂ ಅಂಗಳದಲ್ಲಿ ಒಂದೆರಡು ಹೂ ನಗು ಬಿರಿಯದಿದ್ದರೆ ಅದೆಂತಹ ಖಾಲಿತನವೆನಿಸಿಬಿಡುತ್ತದೆ. ಮನೆ ಹಳತಾಗಿರಲಿ, ಸಾಧಾರಣವಿರಲಿ ಮನೆಯಂಗಳದಲ್ಲಿ ಹತ್ತಾರು ಹೂ ನಕ್ಷತ್ರಗಳು ಬೆಳಕು ಬೀರುತ್ತಿದ್ದರೆ ಅದು ಎಲ್ಲರ ಆಕರ್ಷಣೆಯ ಕೇಂದ್ರವಾಗುತ್ತದೆ. ಅಮ್ಮನ ಈ ಕುಸುಮ ಕೃಷಿ ಹೀಗೆ ಅಡೆತಡೆಯಿಲ್ಲದೆ ಸಾಗುತಿರಲಿ. ಅವಳೆದೆಯ ಬತ್ತದ ಪ್ರೀತಿಯೊರತೆ ಹೂ ಮಕ್ಕಳ ತಲೆ ನೇವರಿಸುತ ಅಂಗಳವ ಬೆಳಗುತಿರಲಿ.
