ಆಷಾಢ ಮಳೆಯ ಸಂಜೆ
ಬಿಟ್ಟೂ ಬಿಡದೆ ದಬಾಯಿಸಿ ಸುರಿಯುವ
ಈ ಮಳೆಯ ಕಂಡು ನಖಶಿಖಾಂತ
ಅದುರುತ್ತಾಳೆ ಏಕಾಂಗಿ ಹುಡುಗಿ
ಅರಿವು ಮರೆತಿದೆ, ಮಳೆ ಬೀಳುತಿದೆ
ಪ್ರತೀ ಆಷಾಡವೂ ಅವಳಿಗೆ ಸಕಾರಣ
ಉನ್ಮಾದ ಹೆಚ್ಚಿಸುವ ಋತುವನವಾಸ
ನದಿ ದಂಡೆಯ ಮೇಲೆ ನಿಂತು ಸೋತಿದೆ
ಅವಳ ಮೃದುವಲ್ಲದ ಪಾದಗಳು
ಮನೆಯಲ್ಲಿ ಚಾಪೆ ಅಪ್ಪಿದ ಅಮ್ಮ
ಗೂಡಂಗಡಿ ಉದ್ಧರಿಸುವ ಅಪ್ಪ
ಬಟ್ಟೆಗಳ ಮೈಯೆಲ್ಲ ಕಿಂಡಿಕೊರಕು
ಇದ್ದ ನಾಲ್ಕಾರು ಪಾತ್ರೆಗಳ ತುಂಬೆಲ್ಲ
ಬಿದ್ದ ಮಳೆ ನೀರಿನ ಪಲುಕು
ದಾಸೋಹ ಸಾಮಗ್ರಿಗಳಿಗೆ ಬರಗಾಲ
ಸಂಪೂರ್ಣ ಮಳೆಗಾಲದಲ್ಲೂ ಶುದ್ಧ-
-ವಾಗಿ ಬಡವಾಗುವ ಅಡುಗೆ ಕೋಣೆ
ಕಳೆದ ಬಿರುಮಳೆಯಲ್ಲೂ ಹೀಗೇ
ಹಕ್ಕಿಗೂಡ ಕಚ್ಚಿಹಾರಿದ ಗಿಡುಗನ ಹಾಗೆ
ಕೊಚ್ಚಿ ಹೋಗಿದ್ದ ಬದುಕಿನ್ನೂ ತಲುಪಿಲ್ಲ
ನಿರ್ಣಾಯಕ ಹಂತಕ್ಕೆ ದಡಕ್ಕೆ
ಅಷ್ಟಕ್ಕೂ ಅಂತದ್ದೇನಿತ್ತು ಗುಡಿಸಲಲ್ಲಿ
ಹಾಸಿ ಹೊದ್ದು ಅಭ್ಯಾಸವಾಗಿದ್ದ
ಖಾಲಿಖಾಲಿಯೆನಿಸುವ ಬಾಳಿನಲ್ಲಿ,
ಆಷಾಡದ ಇದೇ ಸಂಜೆ ಋತುಘಾತಕ್ಕೆ
ಸಿಲುಕಿ ಕೆಂಪಾಗಿದ್ದಳು ಹುಡುಗಿ
ತುಡುಗು ದನ ಕೋಣಗಳ ಕಣ್ಣಲ್ಲಿನ
ದಾಹಬೆದರಿಕೆಗೆ ಬೆದರಿದ್ದಳು ಬೆಡಗಿ
ನದಿಬಸಿದ ನೀರು ನೆಲ ಕುಸಿದ
ಮನೆಯಂಗಳಕ್ಕೆ ನುಗ್ಗಿ ಎಷ್ಟೆಲ್ಲಾ
ದಾಂಧಲೆಮಾಡಿತ್ತು ಪರಪಾಟಲು
ಬಿಡಿಗಾಸನ್ನೂ ಕಾಣದ ಅಪ್ಪನ
ಕೈತುಂಬ ಏನಿದು ಇದ್ದಕ್ಕಿದ್ದಂತೆ
ಹೊನ್ನು ಚಿಲ್ಲರೆ ನೋಟು ಪ್ರವಾಹ
ಸಂಕುಚಿಸಿ ಹಣೆ, ಕೊಳಗಳಾಗಿ ಕಣ್ಣು
ಬಡಿದಾಟದ ಬಡಿವಾರ ವರ್ಷಕಾಲ ಸಾಗಿ
ಬಚ್ಚಿಟ್ಟುಕೊಂಡದ್ದೇ ಹೆಚ್ಚು ಬೆದರುತ್ತಾ
ಬೆಚ್ಚುತ್ತಾ, ಜೀವ, ಹೆಣ್ತನ, ಮೊದಲಾಗಿ
ಆಷಾಡದ ಇದೇ ಘಳಿಗೆಯಲ್ಲಿ
ಜೋಡೆತ್ತಿನಂತೆ ಹೂಟಿ ಮಾಡುತ್ತಿದ್ದ
ಗೊರಬು ಹೊದ್ದು ಗದ್ದೆಗೆ ನಾಟಿ ಕಾಣಿಸಿದ
ಅಣ್ಣನ್ನ ತೇಲಿಸಿಕೊಂಡೊಯ್ದದ್ದು ಪಕ್ಕದ್ದೇ ಕಾಲುವೆ
ಹೇಗೆ ತಿರುಗಿತ್ತೊ ಹಾಗೆ ನಿಂತ ಬದುಕಿನಲ್ಲಿ
ಕಾಣುವುದು ಕಷ್ಟ ಚಿತ್ರ ಚಿತ್ತಾರ ಎಳೆ
ಹುಡುಗಿಯ ಕಣ್ಣ ಕೆಳಗಿನ ಕಪ್ಪು ವರ್ತುಲದಲ್ಲಿ
ಧುಮುಕುವುದು ನಿಲ್ಲಿಸಿಲ್ಲ ನಿಲ್ಲುವುದೂ ಇಲ್ಲ
ಬಾನ ಕೊಳಗದ ಮುಸಲ ಧಾರೆ
ಬಂಡೆಯಾಗಿ ಇಂಚಿಂಚೇ ಸವೆಯಬೇಕಷ್ಟೆ ಹುಡುಗಿ
ಪರವಾಗಿ ಯಾರಾದರೂ ಯಾಕಾಗಿ ಬರುತ್ತಾರೆ
ಮಮತಾ ಹಾಸನ ಜಿಲ್ಲೆಯ ಅರಸೀಕೆರೆಯವರು. ‘ಸಂತೆ ಸರಕು’ ಅವರ ಕವನ ಸಂಕಲನ.
‘ಕಾಲಡಿಯ ಮಣ್ಣು’ ಎಂಬ ಅನುವಾದಿತ ಕೃತಿ ಪ್ರಕಟಿಸಿದ್ದಾರೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಪ್ರಕೃತಿ, ಪ್ರವಾಹ, ಆಷಾಡ, ಹೆಣ್ಣಿನ ಬದುಕು, ಬಡತನ , ಅಣ್ಣನ ಸಾವು….
ಕಥನ ಕವನ ಮಾದರಿ ಇಷ್ಟವಾಯಿತು. ಆಲನಹಳ್ಳಿ ಕೃಷ್ಣರ ಕತೆಯ ಒಂದು ಪ್ಯಾರಾ ಓದಿದಂತೆ ಅನ್ನಿಸಿದರೂ…
ಕವಿತೆ ನಮ್ಮನ್ನು ತಟ್ಟುತ್ತದೆ…
ಅದ್ಭುತ