ಈ ನೆಲವನ್ನು ಮಕ್ಕಳ ಕೈಗೆ ಒಪ್ಪಿಸುವ
ನಾವು ಕೆಲವು ದಿನಗಳ
ಮಟ್ಟಿಗೆ ಈ ನೆಲವನ್ನು
ಮಕ್ಕಳ ಕೈಗೆ ಒಪ್ಪಿಸುವ.
ಬಹುಶಃ ಅವರಾದರೂ ಈ
ಕೊಳೆಯನ್ನು ತೊಳೆದು
ಆಕರ್ಷಕ, ಹೊಳೆಯುವ
ನಕ್ಷತ್ರ ಪುಂಜವನ್ನು ಸೃಷ್ಟಿಸಿಯಾರು.
ದುಗುಡಗಳನ್ನು ಗಾಳಿಪಟ
ಮಾಡಿ ಹಾರಿಸುವ
ಒತ್ತಡಗಳನ್ನು ಬಲೂನಿನಂತೆ
ಊದಿ ಉಡಾಯಿಸುವ
ಕಲೆಯೊಂದು ಅವರಲ್ಲಿ
ಅಂತರ್ಗತವಾಗಿರಬಹುದು.
ಅವರು ಬಹುಶಃ
ಮನಸು ಮನಸ್ಸುಗಳ ನಡುವೆ
ಬೆಚ್ಚಗಿನ ಆರ್ದ್ರತೆಯನ್ನು
ತುಂಬಿಸುವರು
ಕಂಗೆಡಿಸುವ ಗೋಡೆಗಳ
ಕೆಡವಿ ಹೂದೋಟಗಳನ್ನು
ನಡು ನಡುವೆ ಕಾರಂಜಿಗಳನ್ನು
ಚಿಮ್ಮಿಸುವರು.
ತಮ್ಮ ಸಹಜ ಆಟಗಳನ್ನು ಆಡುತ್ತಾ
ದೇವರು ಧರ್ಮದ ಕುರುಹುಗಳನ್ನು
ದ್ವೇಷಾಸೂಯೆಗಳ ಚಹರೆಗಳನ್ನು
ಮರಳಿನಲ್ಲಿ ಕಟ್ಟಿ
ಅಲ್ಲಲ್ಲಿಯೇ ಕೆಡವಿಬಿಡುವರು.
ಪ್ರೀತಿ ಮಾಧುರ್ಯದ ಸಹಿತ
ಕೆಲವೇ ದಿನಗಳಿಗಾದರೂ
ನಮ್ಮ ಜನ, ಜಗತ್ತು
ಸ್ನೇಹಮಯವಾಗಿರಲು
ಅವರಿಂದ ಕಲಿಯಬೇಕಿದೆ.
ಏನಾದರೂ ಸರಿ
ಮುಂದಿನ ಭವಿಷ್ಯವನ್ನೂ, ಭೂಮಿಯನ್ನೂ ಕಾಪಿಡಲು
ಮಕ್ಕಳು ಈ ಜಗತ್ತನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕು.
ಮತ್ತು ಅವರು ಜಗತ್ತಿನಲ್ಲಿ ಶಾಶ್ವತ
ವಿಶ್ವ ಮಾನವತೆಯನ್ನು ಸಂರಕ್ಷಿಸಲು ಹೋರಾಡಬೇಕು
ಮಮತಾ ಹಾಸನ ಜಿಲ್ಲೆಯ ಅರಸೀಕೆರೆಯವರು.
‘ಸಂತೆ ಸರಕು’ ಅವರ ಕವನ ಸಂಕಲನ.
‘ಕಾಲಡಿಯ ಮಣ್ಣು’ ಎಂಬ ಅನುವಾದಿತ ಕೃತಿ ಪ್ರಕಟಿಸಿದ್ದಾರೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ