ನೀನು ಪುಟ್ಟ ಮಗುವಿದ್ದಾಗ ಎಂಥ ರಚ್ಚೆ ಹಿಡಿದು ಅಳುತ್ತಿದ್ದರೂ ಮನೆಯ ಮುಂದಿನ ಕೈತೋಟದಲ್ಲಿ ಪರ‍್ರೆಂದು ಹಾರುತ್ತ ಚೀಂವ್ ಚೀಂವ್ ಎನ್ನುತ್ತಿದ್ದ ಪುಟ್ಟ ಗುಬ್ಬಚ್ಚಿಗಳನ್ನು ನೋಡುತ್ತಲೇ ಅಳು ನಿಲ್ಲಿಸಿ ಜೋರಾಗಿ ನಗುತ್ತಿದ್ದೆ. ಈಗಲೂ ಕಿಟಕಿಯ ಹೊರಗೆ ಅವೇ ಸುಂದರ ಗುಬ್ಬಚ್ಚಿಗಳು ಚಿಲಿಪಿಲಿಗುಟ್ಟುತ್ತ ನಿನ್ನ ನೆನಪನ್ನು ಉಕ್ಕೇರಿಸುತ್ತಿವೆ. ನೀನು ನನ್ನ ತೋಳಲ್ಲೆ ಇದ್ದೀಯೇನೋ ಎಂಬ ಭ್ರಮೆಯನ್ನು ಹುಟ್ಟಿಸುತ್ತಿವೆ. ತೋಟದಲ್ಲಿ ಅರಳಿರುವ ಬಣ್ಣ ಬಣ್ಣದ ಹೂಗಳು ಕಣ್ಣುಗಳು ಹೋದಲ್ಲೆಲ್ಲ ನನ್ನನ್ನೇ ನಿಟ್ಟಿಸುತ್ತಿವೆ. ನಿಸರ್ಗದ ಈ ಸಂಭ್ರಮವೇ ನನ್ನಲ್ಲಿ ಬದುಕುವ ಶಕ್ತಿಯನ್ನು ಉಳಿಸಿವೆ ಕಂದಾ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಪಾರ್ವತಿ ಜಿ.ಐತಾಳ್ ಕತೆ “ಬಲಿಪಶುಗಳು”

ಫೋನ್ ಕರೆ ಬಂದ ತಕ್ಷಣ ಹಸೀನಾ ಲಗುಬಗನೆ ರಿಕ್ಷಾ ಹತ್ತಿ ಆಸ್ಪತ್ರೆಗೆ ಹೊರಟಳು. ಗೆಳತಿ ಸುಶೀಲಾಳ ಸಾವು ನಿರೀಕ್ಷಿಸಿದ್ದೇ ಆದರೂ ಅವಳ ಎದೆ ಮಿತಿ ಮೀರಿ ಡವಗುಟ್ಟುತ್ತಿತ್ತು. ರಿಕ್ಷಾದಿಂದ ಇಳಿದವಳೇ ಅವಳು ಆಸ್ಪತ್ರೆಯ ಒಳಗೋಡಿದಳು. ಮೂರನೆಯ ಮಾಳಿಗೆಯಲ್ಲಿ ಎರಡನೇ ವಾರ್ಡು. ಪ್ರತಿದಿನ ಸಂಜೆಗೆ ಇಷ್ಟೇ ಹೊತ್ತಿಗೆ ಅವಳು ಬರುತ್ತಿದ್ದಳಾದರೂ ಇವತ್ತಿನ ಪರಿಸ್ಥಿತಿ ಎಂದಿನಂತಲ್ಲ. ಅವಳೀಗ ಸುಶೀಲಳ ಅಂತಿಮ ದರ್ಶನಕ್ಕೆ ಹೊರಟಿದ್ದಾಳೆ.

ಎರಡು ದಿನಗಳಿಂದ ಆಸ್ಪತ್ರೆಯ ಲಿಫ್ಟ್ ಕೆಟ್ಟು ಹೋಗಿತ್ತು. ಹಸೀನಾ ದಡಬಡನೆ ಮೆಟ್ಟಲುಗಳನ್ನು ಹತ್ತಿ ಗೆಳತಿಯಿದ್ದ ವಾರ್ಡು ತಲುಪಿದಳು. ಅಲ್ಲಿ ನೋಡಿದರೆ ಯಾರೂ ಇಲ್ಲ. ಆಸ್ಪತ್ರೆಯವರು ಮೊದಲು ತಿಳಿಸಿದ್ದು ಹಸೀನಾಗೆ. ಅವಳೇ ಇನ್ನು ನಗರದ ಒಂದು ಫ್ಲಾಟಿನಲ್ಲಿ ವಾಸವಾಗಿದ್ದ ಸುಶೀಲಳ ಮಗಳು ನಂದಿನಿ ಮತ್ತು ಅವಳ ಗಂಡ ಪ್ರಕಾಶನಿಗೆ ತಿಳಿಸಬೇಕು. ಎರಡು ತಿಂಗಳ ಹಿಂದೆ ಅಮ್ಮನನ್ನು ಪ್ಯಾಲಿಯೇಟಿವ್ ಕೇರ್‌ಗೆ ತಂದು ಬಿಡಬೇಕಾಗಿ ಬಂದಾಗ ನಂದಿನಿ ಹಸೀನಾ ಬಳಿ ಕೇಳಿಕೊಂಡಿದ್ದಳು.

‘ಆಂಟಿ, ಇಲ್ಲಿ ಪೇಷಂಟನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ನಾವೂ ಆಗಾಗ ಬಂದು ವಿಚಾರಿಸಬೇಕಲ್ಲ? ದಯವಿಟ್ಟು ದಿನಾ ಸಂಜೆ ಬಂದು ಅಮ್ಮನನ್ನು ಒಮ್ಮೆ ಮಾತನಾಡಿಸಿಕೊಂಡು ಹೋಗಿ. ನನ್ನಿಂದ ದಿನಾ ಬರಲಿಕ್ಕೆ ಸಾಧ್ಯವಾಗದು. ಇವರು ಆಫೀಸಿಗೆ ಹೋಗುತ್ತಾರೆ. ಮಕ್ಕಳನ್ನು ಸ್ಕೂಲಿಗೆ ಕಳಿಸಬೇಕು. ಮನೆ ನೋಡ್ಕೊಳ್ಳಬೇಕು. ನಿಮ್ಮ ಮನೆ ಇಲ್ಲೇ ಹತ್ತಿರ ಇದೆಯಲ್ಲ? ಅಲ್ಲದೆ ಅಮ್ಮನಿಗೆ ನೀವೆಂದರೆ ಪಂಚಪ್ರಾಣ.’
ಹಸೀನಾ ಪ್ರೀತಿಯಿಂದಲೇ ಒಪ್ಪಿಕೊಂಡಿದ್ದಳು.

‘ನಂದಿನಿಗೆ ತಿಳಿಸಬೇಕು’ ಹಸೀನಾ ಫೋನ್ ತೆಗೆದಳು: ‘ನಂದೂ, ಎಲ್ಲಾ ಮುಗಿಯಿತು ಮಗಳೇ. ತಕ್ಷಣವೇ ಹೊರಟು ನೀವಿಬ್ಬರೂ ಬನ್ನಿ.’ ಎಂದಳು. ಸಿಸ್ಟರ್ ಹತ್ತಿರ ಹೋಗಿ ಆಂಬುಲೆನ್ಸ್ ಸಿದ್ಧ ಮಾಡಲು ಹೇಳಿದಳು.

ಸುಶೀಲಾಳ ಶವಕ್ಕೆ ಕತ್ತಿನ ತನಕ ಬಿಳಿ ಬಟ್ಟೆ ಹೊದೆಸಲಾಗಿತ್ತು. ಗೆಳತಿಯ ನಿಸ್ತೇಜವಾದ ಮುಖ, ಬತ್ತಿ ಹೋದ ಕೆನ್ನೆಗಳು, ಕೂದಲಿಲ್ಲದ ಹುಬ್ಬುಗಳು, ಮೇಲೆ ಹೊರಳಿದ ಕಣ್ಣು ಗುಡ್ಡೆಗಳು, ಬೋಳು ತಲೆ, ವಿಕಾರವಾದ ಮುಖ… ಅಬ್ಬಾ! ಹಸೀನಾಳಿಂದ ನೋಡಲಾಗಲಿಲ್ಲ. ಸಾವು ಇಷ್ಟೊಂದು ಭೀಕರವೇ? ಅವಳು ನಡುಗಿದಳು.

ಸಿಸ್ಟರ್ ಲೀನಾ ಈಗ ಒಳಗೆ ಬಂದಳು. ಪ್ರಶಾಂತವಾದ, ಸಾತ್ವಿಕ ಕಳೆಯಿಂದ ತುಂಬಿದ ಮುಖ. ಸುಶೀಲಾಗೆ ಅವಳೆಂದರೆ ತುಂಬಾ ಇಷ್ಟ. ಸುಶೀಲಾ ಹಸೀನಾಳ ಬಳಿ ಅವಳನ್ನು ಹೊಗಳದ ದಿನವಿರಲಿಲ್ಲ. ಲೀನಾಳನ್ನು ಸುಶೀಲಾ ತುಂಬಾ ಹಚ್ಚಿಕೊಂಡಿದ್ದಳು. ಲೀನಾಳೂ ಅಷ್ಟೆ, ಸುಶೀಲಾಳನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಳು.

ಕಳೆದ ಇಪ್ಪತ್ತು ವರ್ಷಗಳಿಂದ ಸುಶೀಲಾಳ ಹೆತ್ತ ಕರುಳು ಅಸಹನೀಯ ನೋವಿನಿಂದ ನರಳುತ್ತಿದ್ದುದನ್ನು ಹಸೀನಾ ನೋಡುತ್ತಲೇ ಬಂದಿದ್ದಳು. ಅವರಿಬ್ಬರೂ ಸಮವಯಸ್ಕ ತಾಯಂದಿರು. ಒಂದೇ ವಠಾರದಲ್ಲಿ ಬಾಡಿಗೆಗಿದ್ದ ಅವರು ಜೀವದ ಗೆಳತಿಯರಾಗಿ ಬೆಳೆದುಬಿಟ್ಟಿದ್ದರು. ಅದೊಂದು ದಿನ ನಡೆದ ಕರಾಳ ಘಟನೆಯು ಸುಶೀಲಾಳನ್ನು ದುಃಖದ ಪ್ರಪಾತಕ್ಕೆ ತಳ್ಳಿತ್ತು. ಅವಳ ಐದು ವರ್ಷದ ಪುಟ್ಟ ಮಗ ಅವರೆಲ್ಲರನ್ನೂ ಇದ್ದಕ್ಕಿದ್ದಂತೆ ತೊರೆದು ದೂರ ನಡೆದುಬಿಟ್ಟಿದ್ದ.

‘ಬೆಳಗಿನಿಂದ ಒಂದೇ ಸಮನೆ ಏನೋ ಬರೆಯುತ್ತಿದ್ದರು. ಬಹಳ ಆತಂಕಗೊಂಡವರ ಹಾಗೆ. ಮಧ್ಯಾಹ್ನ ಊಟ ಕೊಡಲು ಹೋದಾಗಲೂ ಬರೆಯುತ್ತಲೇ ಇದ್ದರು. ಸಂಜೆ ಹೊತ್ತಿಗೆ ಒಮ್ಮೆ ಜೋರಾಗಿ ‘ಸಿಸ್ಟರ್’ ಅಂತ ಕೂಗಿದರು. ಹೊಟ್ಟೆಯಲ್ಲಿ ವಿಪರೀತ ನೋವು. ಸಹಿಸಲಿಕ್ಕಾಗ್ತಾ ಇಲ್ಲ ಅಂತ ನರಳುತ್ತಿದ್ದರು. ನಾನು ಹತ್ತಿರ ಹೋದ ಕೂಡಲೇ ‘ಸಿಸ್ಟರ್, ಇದನ್ನು ಹಸೀನಾ…ʼ ಅಂತ ಹೇಳುತ್ತಿದ್ದ ಹಾಗೆ ಅವರಿಂದ ಮುಂದೆ ಮಾತನಾಡಲಾಲಿಲ್ಲ. ಒಂದೆರಡು ಗಂಟೆ ಅಷ್ಟೆ. ಒಮ್ಮೆ ಜೋರಾಗಿ ನರಳಿದರು. ಅಷ್ಟರಲ್ಲಿ ಜೀವ ಹೋಗಿಬಿಟ್ಟಿತು…’ ಸಿಸ್ಟರ್ ಹೇಳಿ ಹಸೀನಾ ಕೈಯಲ್ಲಿ ಒಂದು ಕಾಗದಗಳ ಕಂತೆಯನ್ನಿಟ್ಟಳು.

ನಂದಿನಿ ಮತ್ತು ಪ್ರಕಾಶ್ ಬಂದರು. ಇಬ್ಬರೂ ಶವದ ಬಳಿ ಕುಳಿತು ಮೌನವಾಗಿ ಅತ್ತರು. ಆಂಬುಲೆನ್ಸ್ ಹೊರಗೆ ಸಿದ್ಧವಾಗಿತ್ತು. ಆಯಾಗಳು ಬಂದು ಸುಶೀಲಾಳ ಶವವನ್ನು ಸ್ಟ್ರೆಚರ್‌ನಲ್ಲಿ ಹಾಕಿ ಉರುಳಿಸಿಕೊಂಡು ರ‍್ಯಾಂಪ್ ಮೂಲಕ ಕೆಳಗೆ ಹೋದರು. ಹಸೀನಾಳೊಂದಿಗೆ ನಂದಿನಿ ಪ್ರಕಾಶರು ಆಂಬುಲೆನ್ಸ್ ಹತ್ತಿ ಶ್ಮಶಾನಕ್ಕೆ ಹೋಗಿ ಸುಶೀಲಳ ಶವ ಸಂಸ್ಕಾರ ಮುಗಿಸಿ ಬಂದರು. ಹಸಿನಾ ತನ್ನ ಮನೆಗೆ ತೆರಳಿ ಕುತೂಹಲದಿಂದ ಕಾಗದಗಳನ್ನು ಬಿಡಿಸಿ ಓದತೊಡಗಿದಳು.

*****

ಕಂದಾ ಮುರಳಿ,

ನಾನು ನನ್ನ ಜೀವನದ ಕೊನೆಯ ದಿನಗಳ ಬಳಿಗೆ ಬಂದಿದ್ದೇನೆ. ನಿನ್ನ ತಂಗಿ ನಂದಿನಿ ‘ಹೆಚ್ಚಿನ ಚಿಕಿತ್ಸೆಗಾಗಿ ನಿನ್ನನ್ನಿಲ್ಲಿಗೆ ಕರೆದುಕೊಂಡು ಬಂದಿದ್ದೇವೆ ಅಮ್ಮಾ. ಇಲ್ಲಿ ಚಿಕಿತ್ಸೆ ಮಾಡಿದರೆ ಒಂದೆರಡು ತಿಂಗಳಲ್ಲಿ ನೀನು ಸಂಪೂರ್ಣ ಗುಣಮುಖಳಾಗುತ್ತೀ ಅಂತ ಡಾಕ್ಟರ್ ಭರವಸೆ ಕೊಟ್ಟಿದ್ದಾರೆ. ಗುಣ ಹೊಂದಿದ ನಂತರ ಮತ್ತೆ ನೀನು ನಿನ್ನ ಮೊಮ್ಮಕ್ಕಳ ಜತೆಗೆ ಹಾಯಾಗಿ ಕಳೆಯಬಹುದು’ ಅಂದಿದ್ದಾಳೇನೋ ನಿಜ. ಆದರೆ ನನಗೆ ಕ್ಯಾನ್ಸರ್ ಆಗಿರುವ ಬಗ್ಗೆ ನನಗೇನೂ ಗೊತ್ತಿಲ್ಲವೆಂದು ಅವಳು ತಿಳಿದುಕೊಂಡಿದ್ದಾಳೆ, ಪಾಪ. ಪಾಲಿಯೇಟಿವ್ ಕೇರ್‌ಗೆ ಕ್ಯಾನ್ಸರ್ ಪೀಡಿತರನ್ನು ಯಾಕೆ ಸೇರಿಸುತ್ತಾರೆ ಅನ್ನುವುದು ನನಗೆ ಗೊತ್ತಿಲ್ಲವೇ?

ಇಲ್ಲಿ ನನಗೀಗ ರಾಜ ಮರ್ಯಾದೆ ಕಣೋ. ಡಾಕ್ಟರುಗಳು, ಸಿಸ್ಟರುಗಳು, ಆಯಾಗಳು ಬಂದು ಬಂದು ವಿಚಾರಿಸುವುದೇನು, ತಿನ್ನಲು ಒತ್ತಾಯಿಸುವುದೇನು, ಉಪಚಾರ ಹೇಳುವುದೇನು? ಅಬ್ಬಬ್ಬ! ನನಗೀಗ ಆಹಾರದ ಬಗ್ಗೆ ಏನೂ ಕಟ್ಟುನಿಟ್ಟಿಲ್ಲ ಗೊತ್ತಾ?

ಆದರೆ ಪುಟ್ಟಾ, ಈ ಕಳೆದ ಇಪ್ಪತ್ತು ವರ್ಷಗಳಿಂದ ಎಡೆಬಿಡದೆ ನಿನ್ನೊಂದಿಗೆ ಮಾತನಾಡುತ್ತಲೇ ಬಂದಿರುವ ನನಗೆ ನನ್ನ ಮನದಾಳದ ನೋವು ತುಂಬಿದ ಭಾವನೆಗಳಿಗೆ ಅಕ್ಷರ ರೂಪವಿತ್ತು ನಿನಗೆ ತಲುಪಿಸಬೇಕೆಂಬ ಆಸೆ ಅಮರಿಕೊಂಡಿದೆ. ನೀನು ನಿನ್ನ ಪ್ರೀತಿಯ ಅಮ್ಮನನ್ನು ನೋಡಲು ಬಂದೇ ಬರುತ್ತೀ ಅನ್ನುವ ಆಸೆಯೊಂದಿಗೆ ಇಷ್ಟು ದಿನ ಕಾಯುತ್ತಲೇ ಕಳೆದುಹೋಗಿದೆ. ಅಂದಿನಿಂದ ಇಷ್ಟು ಕಾಲ ಆಸೆ-ನಿರಾಸೆಗಳ ಉಯ್ಯಾಲೆಯಲ್ಲಿ ತೂಗಿದೆ. ನೀನು ಬರಲಿಲ್ಲ. ಎಂದು ಬರುವಿಯೋ ಗೊತ್ತಿಲ್ಲ. ಕಾಯುವಿಕೆಯ ರೂಪಕವಾಗಿ ನಿಂತ ಶಬರಿಗೆ ಕನಿಷ್ಠ ಪಕ್ಷ ಕೊನೆಯ ಹಂತದಲ್ಲಾದರೂ ರಾಮ ಬಂದ. ನೀನೋ ಈ ಅಮ್ಮನ ಮೇಲೆ ಕರುಣೆ ತೋರುತ್ತಾನೇ ಇಲ್ಲ. ಯಾವಾಗ ಬರುವೆ ಹೇಳು. ಇನ್ನು ನಾನು ಕಾಯಲಾರೆ ಕಣಪ್ಪಾ. ನೀನು ನನ್ನ ಮಡಿಲನ್ನು ಬರಿದು ಮಾಡಿ ಹೋದ ನಂತರ ನಾನು ಅನುಭವಿಸಿದ ನರಕ ಯಾತನೆಯನ್ನು ಇಂಚು ಇಂಚಾಗಿ ನಿನಗೆ ಹೇಳಬೇಕು. ಅದಕ್ಕಾಗಿ ನಾನು ಕಂಡುಕೊAಡ ದಾರಿ ಇದೊಂದೇ- ಪತ್ರ ಬರೆಯುವುದು. ಇದನ್ನು ನಿನಗೆ ತಲುಪಿಸುವ ಬಗೆ ಹೇಗೋ ತಿಳಿಯದು. ಏನಾದರೂ ದಾರಿ ಸಿಕ್ಕೀತು ಬಿಡು.
ತುಂಬಾ ಹೇಳಲಿಕ್ಕಿದೆ ಮುರಳಿ. ಒಳಗಿನ ಒತ್ತಡ ತಡೆಯಲಾರೆ. ಆದರೆ ರಾತ್ರಿ ಹನ್ನೊಂದಾಯಿತು. ಸಿಸ್ಟರ್ ಲೀನಾಗೆ ನನ್ನ ಬಗ್ಗೆ ಅಪಾರ ಕಾಳಜಿ. ‘ಅಮ್ಮಾ, ಮಲಗಿ. ಹೊತ್ತಾಯಿತು. ಇನ್ನು ನಾಳೆ ಬರೆಯಿರಿ’ ಅನ್ನುತ್ತಿದ್ದಾಳೆ. ಸರಿ, ನಾಳೆಯೇ ಬರೆಯುತ್ತೇನೆ, ಆಗದೇ?
ನಿನ್ನ ಪ್ರೀತಿಯ ಅಮ್ಮ.

*****

ಮುದ್ದು ಕಂದ ಮುರಳಿ,
ಬೆಳಗ್ಗೆ ಹಾಸಿಗೆಯಿಂದೆದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಬಂದು ಕುಳಿತಿದ್ದೇನೆ. ಕಿಟಕಿಯಿಂದ ಹೊರಗಿನ ಉದ್ಯಾನವನ ಕಾಣಿಸುತ್ತಿದೆ. ನಿಸರ್ಗವು ವಸಂತದೊಂದಿಗೆ ಅರಳಿ ನಗುತ್ತಿದೆ. ಉದ್ಯಾನದಲ್ಲಿ ಬಣ್ಣ ಬಣ್ಣದ ಹೂಗಳ ನಡುವೆ ಸೌಂದರ್ಯ ಸ್ಪರ್ಧೆ ನಡೆಯುತ್ತಿದೆಯೇನೋ ಅನ್ನುವ ಹಾಗೆ ಕಾಣುತ್ತಿದೆ. ಆದರೆ ಅದು ನನ್ನ ಮನಸ್ಸಿಗೆ ಆಹ್ಲಾದ ನೀಡುವುದಕ್ಕೆ ಬದಲಾಗಿ ನೋವಿನ ನೆನಪುಗಳನ್ನು ಕೆದಕುತ್ತಿದೆ. ನೆನಪುಗಳು ಗುಂಯೆಂದು ಗಿಜಿಗುಡುತ್ತಿವೆ.

ಹೌದು, ಇದು ನನ್ನ ಬದುಕಿನ ಅರುವತ್ತನೇ ವಸಂತ. ಆದರೆ ನೀನು ಬಿಟ್ಟು ಹೋದ ನಂತರ ಯಾವ ವಸಂತವೂ ನನ್ನ ಪಾಲಿಗೆ ನಿಜವಾದ ಅರ್ಥದಲ್ಲಿ ವಸಂತವಾಗಲಿಲ್ಲ. ಒಂಟಿತನ ನನ್ನನ್ನು ಕೊಲ್ಲುತ್ತಿದೆ. ಹಿಂದೆ-ಮುಂದೆ-ಎಡ-ಬಲಗಳಲ್ಲಿ ಕಾಡುವ ಈ ನೆನಪುಗಳ ಗೋಡೆಗಳ ನಡುವೆ ಬಂದಿಯಾಗಿದ್ದೇನೆ. ದಿನ ಬೆಳಗಾದರೆ ಓಡತೊಡಗುತ್ತೇನೆ… ಹಿಂದಕ್ಕೆ… ಹಿಂದಕ್ಕೆ…

ನೆನಪುಗಳ ಸೂಜಿಯಿಂದ ಚುಚ್ಚಿಸಿಕೊಳ್ಳುತ್ತ ಕಾಲೆಳೆಯುತ್ತಿರುವ ಈ ಅಮ್ಮ… ನನ್ನ ಕಣ್ಮಣಿಯು ನನ್ನನ್ನು ತೊರೆದು ಹೋದಂದಿನಿಂದ ದಿನಗಳು ಕಳೆದಂತೆ ನನ್ನೀ ಎದೆ ಭಾರವಾಗುತ್ತಿದೆ. ಕರುಳು ಬೇಯುತ್ತಿದೆ. ತಾಯಾದವಳ ಈ ಯಾತನೆ ಯಾರಿಗೆ ತಾನೇ ಅರ್ಥವಾದೀತು? ಇನ್ನೆಷ್ಟು ಕಾಲ ನಾನು ಹೀಗೆ ತಳ್ಳಬೇಕೋ ತಿಳಿಯದು. ಯಾಕೆ ನಾನು ನಿನ್ನನ್ನು ಹೀಗೆ ನೆನಪಿಸಿಕೊಳ್ಳುತ್ತಿದ್ದೇನೆ? ಓ ಮನಸ್ಸೇ, ಯಾಕೆ ಹೀಗೆ ಚಡಪಡಿಸುತ್ತಿದ್ದೀ? ಕ್ಷಣ ಕ್ಷಣವೂ ನನ್ನ ಕಂದ ಬಾಗಿಲ ಹಿಂದೆ ಅವಿತು ನಿಂತು ‘ಅಮ್ಮಾ, ನಾನೆಲ್ಲಿದ್ದೇನೆ. ಹೇಳು ನೊಡೋಣ’ ಎಂದು ಕಣ್ಣಾ ಮುಚ್ಚಾಲೆ ಆಡಿ ಅಣಕಿಸಿದಂತೆ ಏಕೆ ಭಾಸವಾಗುತ್ತಿದೆ?

ನನ್ನ ಕೊನೆಯ ಕ್ಷಣಗಳು ನನ್ನನ್ನು ಆಹ್ವಾನಿಸುತ್ತಿವೆಯೇ? ಕಣ್ಣುಗಳೇಕೆ ಕೆಂಪಾಗುತ್ತಿವೆ? ಇಲ್ಲ, ನನ್ನ ಕಣ್ಮಣಿಯನ್ನು ಕಾಣದೆ ನಾನು ಹೋಗುವುದಿಲ್ಲ. ಆದರೆ ಮುರಳಿ, ನನ್ನ ಕೊನೆಯ ದಿನಗಳು ಸಮೀಪಿಸುತ್ತಿರುವ ಈ ಕ್ಷಣಗಳಲ್ಲಾದರೂ ದರ್ಶನ ಕೊಡುತ್ತೀಯಾ? ನೀನು ಬಳಿ ಬಂದಾಗ ನಿನಗೆ ಕೊಡಲು ನನ್ನ ಬಳಿ ಏನಿದೆ ಎಂದು ಆಲೋಚಿಸುತ್ತೇನೆ. ಒಂದೊಂದು ವರ್ಷವೂ ನಿನ್ನ ಹುಟ್ಟು ಹಬ್ಬಕ್ಕೆಂದು ನಾನು ಖರೀದಿಸಿ ತಂದ ಸುಂದರ ಗ್ರೀಟಿಂಗ್ ಕಾರ್ಡುಗಳು, ಅವುಗಳ ಮೇಲೆ ಬರೆದ ಅಕ್ಷರಗಳ ಮೇಲೆ ಕಣ್ಣೀರ ಹನಿಗಳು ಬಿದ್ದು ಹರಡಿದ ಮಸಿ-ಎಲ್ಲ ಕಪಾಟುಗಳಲ್ಲೂ ವಿಳಾಸವಿಲ್ಲದೆ ಕುಳಿತಿವೆ. ಈ ಎಲ್ಲ ಕಾರ್ಡುಗಳನ್ನೂ ನಿನಗೆ ಸ್ವತಃ ನೀಡಬೇಕೆಂದು ಎಣಿಸಿದ್ದೆ. ಆದರೆ..

ಹೊರಗೆ ರಾತ್ರಿಯ ಗಾಢಾಂಧಕಾರ… ನೀರವತೆ.. ಸಿಸ್ಟರ್ ಲೀನಾ ಕೋಣೆಯೊಳಗೆ ಇಣಿಕಿ ಕೇಳುತ್ತಿದ್ದಾಳೆ:

‘ಅಮ್ಮಾ, ಏನು ನಿದ್ರೆ ಬರುತ್ತಿಲ್ಲವೆ?ನಿದ್ರೆ ಮಾತ್ರೆ ಏನಾದರೂ ಬೇಕೇ?’

‘ಇರಲಿ, ಕೊಡು’ ಎಂದು ನಾನು ತಲೆಯಾಡಿಸುತ್ತೇನೆ.

ಅವಳು ಮಾತ್ರೆ-ನೀರು ತಂದು ಕೊಟ್ಟು, ನನ್ನ ಕೂದಲಿಲ್ಲದ ಬೋಳು ತಲೆಯನ್ನು ಒಮ್ಮೆ ಪ್ರೀತಿಯಿಂದ ನೇವರಿಸಿ ‘ಇನ್ನು ನಿದ್ರೆ ಮಾಡಿ’ ಎಂದು ಮೃದುವಾಗಿ ಹೇಳಿ ಹೋದಳು. ನಾನು ನನ್ನ ಶೆಲ್ಫ್ ನೋಡಿದೆ. ಅದು ಔಷಧಿ-ಮಾತ್ರೆಗಳಿಂದ ತುಂಬಿ ಬಿಟ್ಟಿದೆ. ನಿನ್ನ ನೆನಪುಗಳಿಂದ ಕೂಡಾ.
ಈ ಅಮ್ಮನಿಗೇನಾಗಿ ಬಿಟ್ಟಿದೆ ಅಂದುಕೊಳ್ಳುತ್ತಿದ್ದೀಯಾ ಪುಟ್ಟಾ? ಇದೇನೂ ಹೊಸತಲ್ಲ. ನೀನು ಬಿಟ್ಟು ಹೋದಂದಿನಿಂದ ಆರಂಭವಾದ ಈ ಹುಡುಕಾಟ, ಕಾಯುವಿಕೆ ಮತ್ತು ನೀನು ಬೇಕೆಂಬ ಪ್ರೀತಿಯ ಕೂಗು. ನಿನ್ನನ್ನು ಬೆಳೆಸಿದ ಈ ಕೈಗಳು. ನಿನ್ನನ್ನು ಪ್ರೀತಿಸಿದ ಈ ಹೃದಯ… ಪ್ರೀತಿಯನ್ನಲ್ಲದೆ ಬೇರೇನನ್ನು ತಾನೇ ಸುರಿಸೀತಪ್ಪಾ ಇದು? ಆನಂದಾನ್ವಿತವಾದ ಜೀವನದ ಈ ತೋಟವನ್ನು ಸ್ಪರ್ಶಿಸಿದ್ದೀಯಾ ನೀನು? ತುಂಬು ಪ್ರೀತಿ… ಹೃದಯದೊಳಗೆ ಭೋರ್ಗರೆಯುತ್ತಿರುವ ಪ್ರೀತಿ…

ನೀನೀಗ ಎಲ್ಲಿರುವೆ ಕಂದಾ? ನಿನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಒಬ್ಬಳು ಹೆಂಡತಿಯ ಜತೆಗೆ ಇದ್ದೀಯ? ನನಗೆ ಮೊಮ್ಮಕ್ಕಳು ಹುಟ್ಟಿದ್ದಾರೆಯೆ? ಅವರನ್ನು ನನ್ನ ಹತ್ತಿರ ಯಾವಾಗ ಕರೆದುಕೊಂಡು ಬರುತ್ತೀ? ನಿನ್ನ ಮತ್ತು ನಿನ್ನ ಹೆಂಡತಿಯ ತಲೆ ನೇವರಿಸಿ ಪ್ರೀತಿ ಸುರಿಸಬೇಕೆನ್ನಿಸುತ್ತಿದೆ. ನಿನ್ನ ಮಕ್ಕಳನ್ನು ಮಡಿಲಲ್ಲಿರಿಸಿಕೊಂಡು ‘ಆನೆ ಬಂತೊಂದಾನೆ’ ಆಡಿಸಬೇಕೆನ್ನಿಸುತ್ತಿದೆ.

ಯಾಕೋ ಕಣ್ಣು ನೋಯುತ್ತಿದೆ. ನಿದ್ದೆ ಬರುತ್ತಿದೆ ಅನ್ನಿಸುತ್ತಿದೆ. ಈಗ ನಿಲ್ಲಿಸಲೆ? ನಾಳೆ ಬರೆಯುವೆ.

ನಿನ್ನ ಪ್ರೀತಿಯ, ಅಮ್ಮ.

*****

ನನ್ನ ಪುಟ್ಟ ಮುರಳಿ,
ಹೊರಗೆ ಹಕ್ಕಿಗಳ ಕಲರವ ಕೇಳಿ ನನಗೆ ಬೇಗ ಎಚ್ಚರವಾಗಿದೆ. ಕತ್ತಲೆಯ ಕಪ್ಪಿನ್ನೂ ಕರಗಿಲ್ಲ. ಆಕಾಶದಲ್ಲಿ ಅಸ್ಪಷ್ಟವಾಗಿ ನಸುಗೆಂಪು ಕಾಣಿಸಹತ್ತಿದೆ. ನಾನು ಆಗಲೇ ಶುಭ್ರಸ್ನಾತಳಾಗಿ ನನ್ನ ಪ್ರೀತಿಯ ಮುರಳಿಕೃಷ್ಣನ ಮುಂದೆ ಕುಳಿತು ಧ್ಯಾನ ಮಾಡಿದೆ. ನನ್ನ ಕಂದ ಆದಷ್ಟು ಬೇಗ ನನ್ನ ಬಳಿ ಬರುವಂತೆ ಮಾಡು ಎಂದು ಎಂದಿನಂತೆ ಪ್ರಾರ್ಥಿಸಿದೆ. ‘ಬದುಕಿನಲ್ಲಿ ಭರವಸೆಯಿಡು’ಎಂದು ಎಂದು ನನ್ನಲ್ಲಿ ಧೈರ್ಯ ತುಂಬುವವನು ಅವನು ಮಾತ್ರ. ನನ್ನ ಇಡೀ ಬದುಕನ್ನು ಅವನಿಗೇ ಸಮರ್ಪಿಸಿದ್ದೇನೆ. ಅವನ ಮೇಲೆ ಭಾರ ಹಾಕಿ ಚಿಂತೆಗಳನ್ನು ಬಿಟ್ಟು ತಿಳಿನೀರ ಝರಿಯಂತೆ ಪ್ರವಹಿಸಲು ಕಲಿತಿದ್ದೇನೆ.
ನಿನ್ನ ತಂಗಿ ನಂದಿನಿಯ ಮನೆಯಲ್ಲಿ ಅವಳ ಮಕ್ಕಳ ಜತೆಗಿದ್ದಾಗ ಮನಸ್ಸು ಆಹ್ಲಾದಗೊಳ್ಳುತ್ತಿತ್ತು. ಆದರೆ ಆ ಆನಂದದ ಸ್ಥಿತಿಯಲ್ಲೂ ನೀನು ನನ್ನ ಅಂತಃಚಕ್ಷುಗಳನ್ನು ತುಂಬಿಕೊಳ್ಳುತ್ತಿದ್ದೆ. ನಂದಿನಿಯ ಮಗ ನಟೇಶನಿಗೀಗ ಐದು ವರ್ಷ. ನೀನು ನನ್ನನ್ನು ಬಿಟ್ಟು ಹೋದ ಅದೇ ವಯಸ್ಸು. ನಿನ್ನದೇ ಮುಖ ಅವನಿಗೆ.

ಮುರಳಿ, ನಿನಗೆ ನೆನಪಿದೆಯೆ ನಿನ್ನ ಆಟಿಕೆಗಳನ್ನು ನಾನು ಹಾಕಿಡುತ್ತಿದ್ದ ಆ ಕೆಂಪು ಪೆಟ್ಟಿಗೆ? ನೀನು ಆ ಪೆಟ್ಟಿಗೆಯನ್ನು ಅದೆಷ್ಟು ಪ್ರೀತಿಸುತ್ತಿದ್ದೆ! ರಾತ್ರಿ ಮಲಗುವಾಗ ಕೆಲವೊಮ್ಮೆ ಅದನ್ನು ಅಪ್ಪಿಕೊಂಡೇ ನಿದ್ದೆ ಹೋಗುತ್ತಿದ್ದುದೂ ಇತ್ತು. ಎಲ್ಲಿಗಾದರೂ ಹೋಗುವಾಗ ಅದನ್ನು ಕೈಯಲ್ಲಿ ಹಾಗೇ ಹಿಡಿದುಕೊಳ್ಳವುದೂ ಇತ್ತು. ಹುಚ್ಚು ಹುಡುಗ! ಅದರೊಳಗಿಡುತ್ತಿದ್ದ ಆಟಿಕೆಗಳು, ಮಾತನಾಡುವ ಬೊಂಬೆಗಳು, ಪೀಪಿಗಳು, ಕೈತಟ್ಟುವ ಕೋತಿಗಳು, ಶಾಲೆಯಲ್ಲಿ ನಿನಗೆ ಸಿಕ್ಕಿದ ಬಹುಮಾನಗಳು, ನೀನು ಬಹುವಾಗಿ ಇಷ್ಟಪಟ್ಟ ಚಿತ್ರಗಳು – ನಿನ್ನ ಒಂದು ಪುಟ್ಟ ಜಗತ್ತೇ ಅದರೊಳಗಿರುತ್ತಿತ್ತು. ಅದು ಈಗಲೂ ನನ್ನ ಬಳಿ ಭದ್ರವಾಗಿದೆ ಆಯ್ತಾ? ನೀನು ಬಂದಾಗ ಕೊಡಬಹುದೆಂಬ ಭರವಸೆಯಿಂದ ಅದನ್ನು ಜೋಪಾನವಾಗಿ ಇಟ್ಟಿದ್ದೇನೆ.
ಅಂದು ಶಾಲೆಗೆ ಹೋಗುವಾಗ ‘ಅಮ್ಮಾ ಟಾ ಟಾ, ಚಂಜೆ ಬತ್ತೀನಿ’ ಅಂತ ನನ್ನ ಕೆನ್ನೆಗೊಂದು ಮುತ್ತು ಕೊಟ್ಟು ಹೋಗಿದ್ದೆ. ಕೆಲವೊಮ್ಮೆ ಪ್ರೀತಿ ಉಕ್ಕಿ ಬಂದಾಗ ತೊದಲು ಮಾತಾಡುತ್ತಿದ್ದೆ ನೀನು. ನನಗೂ ಅದು ಇಷ್ಟವೇ ಆಗಿತ್ತು. ಬರುವೆನೆಂದು ಹೇಳಿ ಹೋದ ನೀನು ಬರಲೇ ಇಲ್ಲ. ಏನಾಯಿತು ಕಂದಾ ನಿನಗೆ? ನಿನ್ನನ್ನು ಕೊನೆಯ ಬಾರಿ ನೊಡಿದಾಗ ನೀನು ಧರಿಸಿದ ನೀಲಿ ಚಡ್ಡಿ-ಬಿಳಿಯ ಷರಟು, ಬೆನ್ನ ಮೇಲಿನ ಕಪ್ಪು ಬ್ಯಾಗು-ಎಲ್ಲವೂ ನನ್ನ ಕಣ್ಣೆದುರಿಗೆ ಇಗಲೂ ಸ್ಪಷ್ಟವಾಗಿ ಕಾಣುತ್ತಿವೆ. ನಿನಗೆ ಗೊತ್ತೇ ಮುರಳಿ, ಅವತ್ತು ನಿನ್ನ ಗೆಳೆಯರಿಗೆ, ನಿನಗೆ ಕಲಿಸಿದ ಕೆಲ ಮಂದಿ ಅಧ್ಯಾಪಕರಿಗೆ, ನಿಮ್ಮನ್ನೆಲ್ಲ ಕರೆದೊಯ್ದ ಆ ವ್ಯಾನ್ ಡ್ರೈವರ್ ರಹೀಮಣ್ಣನಿಗೆ ಏನಾಯಿತೆಂದು?

ನನಗೆ ಚೆನ್ನಾಗಿ ನೆನಪಿದೆ. ಅದೊಂದು ಕರಾಳ ಮಂಗಳವಾರ. ಸಂಜೆಯಾಗುತ್ತಿದ್ದಂತೆಯೇ ಸ್ಕೂಲ್ ವ್ಯಾನಿನಿಂದ ಇಳಿದು ಓಡೋಡಿ ಬರುತ್ತ ‘ಅಮ್ಮಾ, ಹಸಿವು.. ಬೇಗ ತಿಂಡಿ ಕೊಡು..’ ಎಂದು ಕೂಗುವ ನಿನಗಾಗಿ ನಿನ್ನಿಷ್ಟದ ಹೆಸರು ಬೇಳೆ ಖಿಚಡಿ ಮಾಡಿ ದಾರಿ ಕಾಯುತ್ತ ಕುಳಿತಿದ್ದೆ. ಅಷ್ಟರಲ್ಲಿ ಗೆಳತಿ ಹಸೀನ ಗಾಬರಿಯೇ ಮೈಯಾಗಿ ಏದುಸಿರು ಬಿಡುತ್ತ ಓಡೋಡಿ ಬಂದು ಹೇಳಿದಳು: ಸುಶೀಲಾ, ನಗರದಲ್ಲೆಲ್ಲ ಗಲಭೆಯಂತೆ. ಹಿಂದೂ-ಮುಸ್ಲಿಂ ಜಗಳವಂತೆ-ಬಸ್ಸು ಕಾರುಗಳನ್ನೆಲ್ಲ ಅಡ್ಡ ಹಾಕಿ ನಿಲ್ಲಿಸುತ್ತಿದ್ದಾರಂತೆ.. ಬೆದರಿಕೆ ಹಾಕುತ್ತಿದ್ದಾರಂತೆ… ವಿರೋಧಿಸಿದವರನ್ನು ಹೊಡೆದು ಬಡೆದು… ಕಟ್ಟಡಗಳಿಗೆ ಬೆಂಕಿ ಹಾಕಿ… ಅಯ್ಯೋ..’

‘ನಿನಗೆ ಯಾರು ಹೇಳಿದರು?’ ನಾನು ಕಂಪಿಸುವ ಧ್ವನಿಯಲ್ಲಿ ಕೇಳಿದೆ.

‘ನನ್ನ ಮಗ ಇಕ್ಬಲ್ ಈಗಷ್ಟೇ ಕಾಲೇಜಿನಿಂದ ಬಂದ. ಅವನು ಬರ್ತಾ ಇದ್ದ ಬಸ್ಸನ್ನೂ ನಿಲ್ಲಿಸಿದ್ರಂತೆ. ಆದರೆ ಅವನು ಅಲ್ಲೇ ಇಳಿದು ಹೇಗೋ ಗುಂಪಿನಲ್ಲಿ ನುಸುಳಿ ಇಲ್ಲಿಗೆ ಓಡೋಡಿ ಬಂದನಂತೆ..’

‘ಅಯ್ಯೋ ಭಗವಂತಾ, ಈಗೇನು ಮಾಡಲಪ್ಪಾ… ಇವರು ಬೇರೆ ಮಂಗಳೂರಿಗೆ ಹೋಗಿದ್ದಾರೆ…’ ನಾನು ಅಳತೊಡಗಿದೆ.

ಅಷ್ಟು ಹೊತ್ತಿಗೆ ಗಲಭೆಯ ಕಿಚ್ಚು ನಮ್ಮ ವಠಾರವನ್ನೂ ತಲಪಿತ್ತು. ಬೀದಿಯಲ್ಲೆಲ್ಲ ಕಲ್ಲು ತೂರಾಟ, ಮಾರಾಮಾರಿ, ಟಯರಿಗೆ ಬೆಂಕಿ ಹಚ್ಚುವುದು ನಡೆದಿತ್ತು. ಪೋಲೀಸರು ಗುಂಡು ಹಾರಿಸಿದ್ದೂ ಕೇಳಿಸಿತು. ಹೊರಗೆಲ್ಲ ಹೊಗೆ ಆಗಲೇ ಮುಗಿಲೆತ್ತರಕ್ಕೇರಿತ್ತು. ಇಂಥ ಸ್ಥಿತಿಯಲ್ಲಿ ನಾವ್ಯಾರೂ ಹೊರಗೆ ಬರುವಂತಿರಲಿಲ್ಲ. ಏಳು ಗಂಟೆಯಾದರೂ ನೀನೂ ಬರಲಿಲ್ಲ.

ನಮ್ಮ ಮನೆಯ ಮುಂದಿದ್ದ ಸಾರ್ವಜನಿಕ ಗ್ರಂಥಾಲಯ ಶಾಖೆಯ ಕಟ್ಟಡ ಬೆಂಕಿಗಾಹುತಿಯಾಗಿ ಧಗಧಗನೆ ಉರಿಯುತ್ತಿತ್ತು. ನಾನು ವಾರಕ್ಕೊಂದು ಬಾರಿ ಓದಲೆಂದು ಪುಸ್ತಕಗಳನ್ನು ತರುತ್ತಿದ್ದ ನನ್ನ ಪ್ರೀತಿಯ ಗ್ರಂಥಾಲಯ. ಪುಸ್ತಕಗಳೊಳಗಿನ ಜ್ಞಾನ ಲೋಕದ ಗಂಧ ಗಾಳಿಯೂ ಇಲ್ಲದ ಪಾಪಿಗಳು ಎಲ್ಲವನ್ನೂ ಸುಟ್ಟು ಹಾಕಿದ್ದರು.

ನಾನು, ಹಸೀನ ಮತ್ತು ಇಕ್ಬಲ್ ಬಾಗಿಲು ಭದ್ರ ಪಡಿಸಿ ಒಳಗೆ ಉಸಿರು ಬಿಗಿ ಹಿಡಿದು ಭಯದಿಂದ ಹಿಪ್ಪೆಯಾಗಿ ಕುಳಿತಿದ್ದೆವು. ಪುಟ್ಟ ಪಾಪು ನಂದಿನಿ ಒಳಗೆ ನಿದ್ರಿಸುತ್ತಿದ್ದಳು. ಕ್ಷಣ ಕ್ಷಣಕ್ಕೂ ನಿನಗೇನಾಗಿರಬಹುದೆಂಬ ಚಿಂತೆ ನನ್ನನ್ನು ಹಿಂಡುತ್ತಿತ್ತು. ನಾನು ‘ಹೊರಗೆ ಹೋಗ್ತೀನಿ… ನೋಡಿ ಬರ್ತೀನಿ…’ ಅಂತ ಹೊರಟರೆ ಹಸೀನಾ ‘ಬಾಯಿ ಮುಚ್ಚಿ ಸುಮ್ಮನೆ ಕುಳಿತಿರು… ಹೊರಗೆ ಕೇಳಿಸಿದರೆ ಅಪಾಯ ತಪ್ಪಿದ್ದಲ್ಲ…’ ಎಂದು ಹಿಂದೆ ಜಗ್ಗುತ್ತಿದ್ದಳು. ನಾನು ವಿಲವಿಲನೆ ಒದ್ದಾಡಿದೆ.

ಅವಳು ಮಾತ್ರೆ-ನೀರು ತಂದು ಕೊಟ್ಟು, ನನ್ನ ಕೂದಲಿಲ್ಲದ ಬೋಳು ತಲೆಯನ್ನು ಒಮ್ಮೆ ಪ್ರೀತಿಯಿಂದ ನೇವರಿಸಿ ‘ಇನ್ನು ನಿದ್ರೆ ಮಾಡಿ’ ಎಂದು ಮೃದುವಾಗಿ ಹೇಳಿ ಹೋದಳು. ನಾನು ನನ್ನ ಶೆಲ್ಫ್ ನೋಡಿದೆ. ಅದು ಔಷಧಿ-ಮಾತ್ರೆಗಳಿಂದ ತುಂಬಿ ಬಿಟ್ಟಿದೆ. ನಿನ್ನ ನೆನಪುಗಳಿಂದ ಕೂಡಾ.
ಈ ಅಮ್ಮನಿಗೇನಾಗಿ ಬಿಟ್ಟಿದೆ ಅಂದುಕೊಳ್ಳುತ್ತಿದ್ದೀಯಾ ಪುಟ್ಟಾ? ಇದೇನೂ ಹೊಸತಲ್ಲ. ನೀನು ಬಿಟ್ಟು ಹೋದಂದಿನಿಂದ ಆರಂಭವಾದ ಈ ಹುಡುಕಾಟ, ಕಾಯುವಿಕೆ ಮತ್ತು ನೀನು ಬೇಕೆಂಬ ಪ್ರೀತಿಯ ಕೂಗು.

ಬೀದಿಯಲ್ಲಿ ಜನರ ಚೀರಾಟ, ಹಾರಾಟ ಜೋರಾಗುತ್ತಲೇ ಇತ್ತು. ಹಿಂದಿನಿಂದ ಬೂಟುಗಾಲುಗಳ ಓಡಾಟ. ಹಸಿ ರಕ್ತದ ವಾಸನೆ ಮೂಗಿಗೆ ಅಡರುತ್ತಿತ್ತು. ನನ್ನ ಪುಟ್ಟ ಕಂದನಿಗೆ ಏನಾಗಿರಬಹುದು?…

ಸ್ವಲ್ಪ ಹೊತ್ತಿನಲ್ಲಿ ಪೋಲೀಸು ವಾಹನಗಳು ಧ್ವನಿ ವರ್ಧಕದಲ್ಲಿ ಘೋಷಿಸುತ್ತ ಹೋದವು: ‘ಎಲ್ಲರೂ ಶಾಂತರಾಗಿ ಅವರವರ ಮನೆಗಳಿಗೆ ತೆರಳಿ. ನಗರದಲ್ಲಿ ಶಾಂತಿ ಕಾಪಾಡಿ… ಯಾರೂ ಮನೆಯಿಂದ ಹೊರಗೆ ಬರಬೇಡಿ. ಯಾರೂ ಗಾಬರಿ ಪಡುವ ಅಗತ್ಯವಿಲ್ಲ… ಏನೂ ದುರ್ಘಟನೆ ಸಂಭವಿಸಿಲ್ಲ.’

ನನ್ನ ಕಂದ ಮನೆಗೆ ಬಂದಿಲ್ಲ. ಇದು ನನ್ನ ಪಾಲಿಗೆ ದುರ್ಘಟನೆಯಲ್ಲವೆ? ನನ್ನ ಕಣ್ಣುಗಳಿಂದ ಅಶ್ರುಧಾರೆ ಒಂದೇ ಸಮನೆ ಹರಿಯುತ್ತಿತ್ತು. ಹಸೀನಾ ನನ್ನ ಬೆನ್ನು ತಟ್ಟಿ ಧೈರ್ಯ ಹೇಳುತ್ತಿದ್ದಳು. ಮನೆಯೊಳಗೆ ದೀಪ ಕೂಡಾ ಹಚ್ಚದೆ ನಾವು ಮುದುಡಿ ಕುಳಿತಿದ್ದೆವು.

ರಾತ್ರಿ ಸುಮಾರು ಹತ್ತು ಗಂಟೆಯಾಗಿರಬಹುದು. ಬೀದಿಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಯಾರೋ ಬಂದು ಬಾಗಿಲು ತಟ್ಟಿದಂತಾಯಿತು. ನಾವು ಭಯದಿಂದ ತತ್ತರಿಸಿದೆವು. ಯಾರಿರಬಹುದು ಇಷ್ಟು ಹೊತ್ತಿನಲ್ಲಿ? ಒಳಗೂ ಹೊರಗೂ ಕಗ್ಗತ್ತಲು. ಮುರಳಿಯನ್ನು ಕರೆದುಕೊಂಡು ಯಾರಾದರೂ ಬಂದಿರಬಹುದೆ? ಅಥವಾ…? ಇಂದಿನ ಗಲಭೆಗೆ ಕಾರಣವೇನೆಂದು ತಿಳಿಯದು. ಹಿಂದೂ-ಮುಸ್ಲಿಂ ಜಗಳವೆಂದು ಹಸೀನ ಹೇಳಿದಳು. ಅದೇನೂ ಹೊಸತಲ್ಲ. ನಗರದಲ್ಲಿ ಇದಕ್ಕೆ ಮೊದಲು ಹಲವಾರು ಬರಿ ಕಲ್ಲೆಸೆತ-ಹೊಡೆದಾಟಗಳು ನಡೆದಿವೆ. ಆದರೆ ಇಂದು ಒಂದು ಘನಘೋರ ಕದನವೇ ನಡೆದಿದೆಯೆ? ಯಾರು ಬಾಗಿಲು ತಟ್ಟುತ್ತಿರಬಹುದು? ಯಾರಾದರೂ ನಮ್ಮನ್ನು ಹೊಡೆಯಲು ಬಂದಿರಬಹುದೆ? ಆದದ್ದಾಗಲಿ ಎಂದು ಧೈರ್ಯ ಮಾಡಿ ಎದ್ದು ಹೋಗಿ ಬಾಗಿಲು ತೆರೆದೆ.

ಮುರಳಿಯ ಮೇಷ್ಟ್ರು ರಂಗನಾಥರು ನನ್ನ ಮುಂದೆ ನಿಂತಿದ್ದರು. ಮೊದಲಿನಿಂದಲೂ ಅವರಿಗೆ ನಮ್ಮ ಬಗ್ಗೆ ಬಲು ಅಕ್ಕರೆ. ಸಮಯ ಸಿಕ್ಕಾಗಲೆಲ್ಲ ನಮ್ಮ ಮನೆಗೆ ಬಂದು ಮಾತನಾಡಿಸಿ ಮುರಳಿಯ ಬೆನ್ನು ತಟ್ಟಿ ಹೋಗುವುದಿತ್ತು. ಸ್ನೇಹಮಯ ವ್ಯಕ್ತಿತ್ವ. ಇಂದು ಮಬ್ಬುಗತ್ತಲಲ್ಲಿ ಅವರ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಅವರ ಧ್ವನಿಯಲ್ಲಿ ತುಂಬಿದ ಗಾಬರಿ ಗರಬಡಿಸುವಂತಿತ್ತು.

‘ಅಕ್ಕಾ… ಮುರಳಿ-ಮುರಳಿ…!’

‘ಏನಾಯ್ತು ಮೇಷ್ಟ್ರೆ, ಬೇಗ ಹೇಳಿ…’

‘ಅವನಿಗೆ ಏನಾಯ್ತು ಅಂತ ನನಗೂ ಗೊತ್ತಿಲ್ಲ ಅಕ್ಕಾ… ನಾವೆಲ್ಲರೂ ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿರಬೇಕಾದರೆ… ನಗರದ ಗಾಂಧಿ ಚೌಕದ ಬಳಿ ಎರಡು ಗುಂಪುಗಳ ನಡುವೆ ಜೋರು ಹೊಡೆದಾಟ ನಡೆಯುತ್ತಿತ್ತು. ಒಂದಷ್ಟು ಜನ ಆರ್ಭಟಿಸುತ್ತ ಬಸ್ಸುಗಳನ್ನು ವಿನಾಕಾರಣ ತಡೆಯುತ್ತಿದ್ದರು. ಆದರೆ ನಮ್ಮ ಬಸ್ಸಿನ ಡ್ರೈವರ್ ಅವರ ಬೆದರಿಕೆಗೆ ಮಣಿಯದೆ ಬಸ್ಸು ನಿಲ್ಲಿಸದಿದ್ದಾಗ ಅವರೆಲ್ಲರೂ ಬಸ್ಸಿಗೆ ಕಲ್ಲೆಸೆಯತೊಡಗಿದರು.’

‘ಕೂಡಲೇ ನಮ್ಮ ಡ್ರೈವರ್ ಬಸ್ಸು ನಿಲ್ಲಿಸಬೇಕಾಯ್ತು. ಅವರೆಲ್ಲರೂ ಬಸ್ಸಿನ ಒಳಗಿದ್ದ ಮಕ್ಕಳನ್ನೆಲ್ಲ ಹೊರಗೆಳೆದು ಹಿಗ್ಗಾ ಮುಗ್ಗಾ ಹಿಡಿದು ಥಳಿಸಿದರ. ಕೆಲವು ಮಕ್ಕಳು ಪ್ರಾಣ ಭಯದಿಂದ ಸಿಕ್ಕ ಸಿಕ್ಕ ದಿಕ್ಕುಗಳಲ್ಲಿ ಓಡಿದರು.. ಅವರು ಹೊಡೆದ ರಭಸಕ್ಕೆ ನಾನು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದೆ. ನನಗೆ ಪ್ರಜ್ಞೆ ಬರುವ ಹೊತ್ತಿಗೆ ಎಲ್ಲವೂ ಕೈ ಮೀರಿ ಹೊಗಿತ್ತು… ಗಲಭೆಯ ಗುಂಪು ಅಲ್ಲಿಂದ ಹೊರಟು ಹೋಗಿತ್ತು. ಆದರೆ ನನ್ನ ಇಬ್ಬರು ಸಹೋದ್ಯೋಗಿಗಳು ಮತ್ತು ನಾಲ್ಕು ಮಂದಿ ಮಕ್ಕಳು ಅಲ್ಲೇ ಬಿದ್ದು ಸತ್ತೇ ಹೋಗಿದ್ದರು’ – ಮೇಷ್ಟ್ರು ಅಳುತ್ತಿದ್ದರು.

‘ಮುರಳಿಗೆ ಏನಾಯಿತೆಂದು ಗೊತ್ತಿಲ್ಲ ಅಕ್ಕಾ. ಅದೃಷ್ಟವಶಾತ್ ಅವನು ಮನೆಗೆ ಬಂದು ತಲುಪಿದ್ದಾನೆಯೇ ಎಂದು ಕೇಳೋಣವೆಂದು ಇಲ್ಲಿಗೆ ಬಂದೆ. ಆದರೆ ಇಲ್ಲಿ ಕರ್ಫ್ಯೂ ಜಾರಿ ಮಾಡಿದ್ದಾರೆ. ಬೀದಿಯಲ್ಲಿ ಓಡಾಡಲು ಯಾರನ್ನೂ ಬಿಡುತ್ತಿಲ್ಲ. ಆದರೂ ಕಷ್ಟಪಟ್ಟು ಕದ್ದು ಮುಚ್ಚಿ ಬಂದೆ..’
ಅತ್ತೂ ಅತ್ತೂ ನನ್ನ ಕಣ್ಣೀರು ಬತ್ತಿ ಹೋಗಿತ್ತು. ಮಾತನಾಡಲು ಸ್ವರವೇ ಹೊರಡುತ್ತಿರಲಿಲ್ಲ. ತಿಳಿಯುವ ಪ್ರಯತ್ನ ಮಾಡುತ್ತೇನೆ, ಚಿಂತಿಸಬೇಡಿ ಎಂದು ಸಾಂತ್ವನ ಹೇಳಿ ರಂಗನಾಥ ಮೇಷ್ಟ್ರು ಹೊರಟು ಹೋದರು. ನಾವೆಲ್ಲರೂ ಭಯ-ಆತಂಕಗಳಿಂದ ಮುದ್ದೆಯಾಗಿ ನಿದ್ದೆಯಿಲ್ಲದೆ ರಾತ್ರಿ ದೂಡಿದೆವು.

ಮರುದಿನದ ಪತ್ರಿಕೆಗಳ ತುಂಬ ರಕ್ತದೋಕುಳಿಯೇ ಹರಿದಿತ್ತು. ಮುಸ್ಲಿಂ ಹುಡುಗ ಶಮೀರನನ್ನು ಹಿಂದೂ ಹುಡುಗಿ ರೇಶ್ಮಾ ಪ್ರೀತಿಸಿದ್ದಳಂತೆ. ಅವರಿಬ್ಬರೂ ನಗುನಗುತ್ತ ಗಾಂಧಿ ಚೌಕದ ಬಸ್ ಸ್ಟಾಪಿನಲ್ಲಿ ನಿಂತಿದ್ದರಂತೆ. ಅದೇನೋ ಲವ್ ಜಿಹಾದ್ ಅಂತೆ. ಇದರ ಹಿಂದೆ ಹಿಂದೂ ಹುಡುಗಿಯರನ್ನು ಮತಾಂತರ ಮಾಡುವ ಮುಸ್ಲಿಮರ ಹುನ್ನಾರವಿದೆಯಂತೆ. ರೇಶ್ಮಾಳ ಮಾವ, ನಗರದ ಸ್ವಾಭಿಮಾನಿ ಸಂಘಟನೆಯ ಅಧ್ಯಕ್ಷ ಕಾರಿನಲ್ಲಿ ಅದೇ ದಾರಿಯಾಗಿ ಹೋಗುತ್ತಿದ್ದಾಗ ಈ ದೃಶ್ಯವನ್ನು ಕಂಡು ಕೆಂಡಾಮಂಡಲವಾದರಂತೆ. ಕಾರಿನಲ್ಲಿ ಅವರ ಜತೆಗಿದ್ದ ಜನರನ್ನು ಕಳಿಸಿ ಶಮೀರನ ಮೇಲೆ ಹಲ್ಲೆ ನಡೆಸಿದರಂತೆ. ಅಲ್ಲಿಂದ ಆರಂಭವಾದ ಜಗಳ-ಹೊಡೆದಾಟಗಳು ಹಿಂಸೆ-ರಕ್ತಪಾತಗಳ ತನಕ ಹೋಗಿ ನನ್ನಂಥವರ ಬದುಕಿನಲ್ಲಿ ತುಂಬಲಾರದ ನಷ್ಟವನ್ನುಂಟು ಮಾಡಿದ್ದವು.

ನಿಸರ್ಗ ಸಹಜವಾದ ಗಂಡು-ಹೆಣ್ಣಿನ ನಡುವಣ ಪ್ರೀತಿಯೂ ಇಂಥ ಘನ ಘೋರ ಹಿಂಸೆಗೆ ಕಾರಣವಾಗಬಲ್ಲುದೆ? ಪರಿಶುದ್ಧ ಪ್ರೀತಿಗೆ ಜಾತಿ, ಧರ್ಮ-ವರ್ಗ-ವರ್ಣಗಳ ಹಂಗಿದೆಯೆ? ಇದನ್ನು ಅರ್ಥ ಮಾಡಿಕೊಳ್ಳಲಾರದ ಸಂವೇದನಾಶೂನ್ಯ ಮಂದಿಗೆ- ಸ್ವಾರ್ಥ, ಅಹಂಕಾರ, ಸಿಟ್ಟು, ಸೇಡು, ಅಸೂಯೆಗಳ ಸುತ್ತ ಗಿರಕಿ ಹೊಡೆಯುವವರಿಗೆ ಈ ಜಗತ್ತು ಹೇಗೆ ಸುಂದರವಾಗಬೇಕು ಎಂಬುದರ ಕಲ್ಪನೆಯೂ ಇಲ್ಲದೆ ಹೋಯಿತಲ್ಲ? ನಮ್ಮ ಅಕ್ಕ ಪಕ್ಕ ನಮ್ಮ ಜತೆಗೇನೇ ನಿಂತು ಸೂರ್ಯ-ಚಂದ್ರ-ನಕ್ಷತ್ರಗಳನ್ನು ಹಂಚಿಕೊಳ್ಳುವ ಜನರು ಯಾಕೆ ಅನ್ಯರಾಗಿ ಕಾಣುತ್ತಾರೆ?

ಬಾಗಿಲು ತೆರೆದು ಹೊರಗೆ ಕಿವಿಗೊಟ್ಟರೆ ಅಕ್ಕ ಪಕ್ಕದ ಮನೆಗಳಿಂದ ರೋದನ ಕೇಳಿಬಂದಿತ್ತು: ‘ಅಯ್ಯೋ.. ಅಪ್ಪಾ.. ಹೋದೆಯಾ? ಅಯ್ಯೋ ಕಂದಾ… ಅಯ್ಯೋ ಮಗಳೆ..’… ನನ್ನಿಂದ ಕೇಳಲಾಗಲಿಲ್ಲ. ಕಪ್ಪು ಕೆಂಪು ಬಣ್ಣಗಳೊಂದಿಗೆ ಮೇಲೇರುತ್ತಿದ್ದ ಹೊಗೆ ಇನ್ನೂ ಭೀಕರವಾಗಿ ಕಾಣುತ್ತಿತ್ತು- ಬೀದಿ ಬದಿಯ ಮನೆಯ ಗೋಡೆಗಳ ಮೇಲೆ ಕೆಂಪು ಕಲೆಗಳು… ಸಾವಿನ ಚುಂಬನಕ್ಕೊಳಗಾದ ಮನೆಗಳು… ನನ್ನ ಮುರಳಿ… ನೀನೆಲ್ಲಿರುವೆ? ನಾನಿಲ್ಲಿ ಅತ್ತು ಅತ್ತು ಕಲ್ಲಾಗಿ ಬಿಟ್ಟಿರುವೆ… ನೀನು ಬಂದರಷ್ಟೇ ಈ ಕಲ್ಲಿಗೆ ಜೀವ ಬಂದೀತು ಕಂದಾ….

ನಿನ್ನ ಅಪ್ಪ ಮಂಗಳೂರಿನಿಂದ ಎರಡು ದಿನಗಳ ನಂತರ ಬಂದರು. ಈಗಿನಂತೆ ದೂರಸಂಪರ್ಕದ ಯಾವುದೇ ಸೌಲಭ್ಯವಿಲ್ಲದಿದ್ದ ಕಾಲವದು. ಕೆಲಸದ ವ್ಯಸ್ತತೆಯಲ್ಲಿದ್ದ ಅಪ್ಪ ಪತ್ರಿಕೆಯನ್ನೂ ಓದಿರಲಿಲ್ಲ. ಯಾವ ವಾರ್ತೆಯೂ ಅವರ ಕಿವಿಗೆ ಬಿದ್ದಿರಲಿಲ್ಲ. ಬಸ್ಸು ಹತ್ತಿ ಬೆಳಗಿನ ಹೊತ್ತಿಗೆ ನಗರ ತಲುಪುತ್ತಲೇ ವಿನಾಶದ ಅವಶೇಷಗಳನ್ನು ಕಂಡ ಅವರು ಬೆಚ್ಚಿ ಬಿದ್ದರು. ಸ್ವಭಾವತಃ ಮೃದು ಮನಸ್ಸಿನ ನಿನ್ನ ಅಪ್ಪ ನೀನು ಕಾಣೆಯಾದ ಸುದ್ದಿ ಕಿವಿಗೆ ಬೀಳುತ್ತಲೇ ಕುಸಿದು ಬಿದ್ದರು. ಬಿದ್ದವರು ಹಾಸಿಗೆ ಹಿಡಿದರು. ಯಾರ ಸಾಂತ್ವನದ ಮಾತುಗಳೂ ಅವರನ್ನುಳಿಸಲಿಲ್ಲ. ಕೆಲವೇ ದಿನಗಳಲ್ಲಿ… ಹೇಗೆ ಹೇಳಲಿ ಕಂದಾ… ನಾನು ಅವರನ್ನೂ ಕಳೆದುಕೊಂಡು ಅನಂತವಾದ ಈ ಬಾಳ ಬಯಲಲ್ಲಿ ಏಕಾಂಗಿಯಾಗಿ ನಿಂತಿದ್ದೆ.

ನೀನು ಬರುವಿಯೇನೋ ಎಂಬ ಆಸೆಯನ್ನು ಬಿಟ್ಟರೆ ನನ್ನಲ್ಲಿ ಏನೂ ಉಳಿದಿರಲಿಲ್ಲ. ರಾತ್ರಿ ತುಂಬಾ ತಡವಾಗಿದೆ. ಇನ್ನು ಮಲಗುತ್ತೇನೆ. ನಾಳೆ ಮುಂದುವರಿಸುವೆ, ಆಗದೇ?
ನಿನ್ನ ಪ್ರೀತಿಯ ಅಮ್ಮ.

*****

ನನ್ನ ಕಂದಾ,
ಬೆಳಗಾಗಿದೆ. ಮತ್ತೆ ನಿನ್ನೊಂದಿಗೆ ಮಾತನಾಡಲು ಕುಳಿತಿರುವೆ. ಕಣ್ಣು ಚುಚ್ಚುವ ಸೂರ್ಯರಶ್ಮಿಯೊಂದಿಗೆ ಇಂದಿನ ಬೆಳಗು ಅರಳಿದೆ. ಗಾಜಿನ ಕಿಟಕಿಯ ಮೂಲಕ ಬಂದ ಸೂರ್ಯನ ಕಿರಣಗಳು ಇನ್ನಷ್ಟು ಬಿಸಿಯಾಗಿ ನನ್ನ ಕೋಣೆಯೊಳಗೆ ಹರಡಿಕೊಳ್ಳುತ್ತಿವೆ. ಅವು ಅದೃಷ್ಟ ಸೂಚಕ ಕಿರಣಗಳು ಎಂಬುದು ನಮ್ಮ ಜನರ ನಂಬಿಕೆ.

ಬೆಳಗಿನ ನರ್ಸ್ ಬಾಗಿಲು ತಳ್ಳಿ ಒಳಗೆ ಬಂದಳು. ಕಿಟಕಿಗಳನ್ನು ತೆರೆದಿಟ್ಟಳು. ನನ್ನ ಮನಸ್ಸಿನಲ್ಲೂ ಅದೇಕೋ ಉಲ್ಲಾಸ ತುಂಬಿಕೊಳ್ಳುತ್ತಿದೆ. ನೀನು ಪುಟ್ಟ ಮಗುವಿದ್ದಾಗ ಎಂಥ ರಚ್ಚೆ ಹಿಡಿದು ಅಳುತ್ತಿದ್ದರೂ ಮನೆಯ ಮುಂದಿನ ಕೈತೋಟದಲ್ಲಿ ಪರ‍್ರೆಂದು ಹಾರುತ್ತ ಚೀಂವ್ ಚೀಂವ್ ಎನ್ನುತ್ತಿದ್ದ ಪುಟ್ಟ ಗುಬ್ಬಚ್ಚಿಗಳನ್ನು ನೋಡುತ್ತಲೇ ಅಳು ನಿಲ್ಲಿಸಿ ಜೋರಾಗಿ ನಗುತ್ತಿದ್ದೆ. ಈಗಲೂ ಕಿಟಕಿಯ ಹೊರಗೆ ಅವೇ ಸುಂದರ ಗುಬ್ಬಚ್ಚಿಗಳು ಚಿಲಿಪಿಲಿಗುಟ್ಟುತ್ತ ನಿನ್ನ ನೆನಪನ್ನು ಉಕ್ಕೇರಿಸುತ್ತಿವೆ. ನೀನು ನನ್ನ ತೋಳಲ್ಲೆ ಇದ್ದೀಯೇನೋ ಎಂಬ ಭ್ರಮೆಯನ್ನು ಹುಟ್ಟಿಸುತ್ತಿವೆ. ತೋಟದಲ್ಲಿ ಅರಳಿರುವ ಬಣ್ಣ ಬಣ್ಣದ ಹೂಗಳು ಕಣ್ಣುಗಳು ಹೋದಲ್ಲೆಲ್ಲ ನನ್ನನ್ನೇ ನಿಟ್ಟಿಸುತ್ತಿವೆ. ನಿಸರ್ಗದ ಈ ಸಂಭ್ರಮವೇ ನನ್ನಲ್ಲಿ ಬದುಕುವ ಶಕ್ತಿಯನ್ನು ಉಳಿಸಿವೆ ಕಂದಾ.

ಕಂದಾ, ನೀನೆಲ್ಲಿರುವೆ? ಹೇಗಿರುವೆ? ನಿನಗೆ ನನ್ನ ನೆನಪಿದೆಯೆ? ನಿನಗೆ ಗೊತ್ತೇ ನೀನು ಬದುಕಿನಲ್ಲಿ ಏನನ್ನು ಕಳೆದುಕೊಂಡಿರುವೆ ಎಂದು? ಅಮ್ಮನ ಪ್ರಿತಿಗಾಗಿ ನಿನ್ನ ಮನಸ್ಸು ಹಂಬಲಿಸುವುದಿಲ್ಲವೇ ಕಂದಾ? ಅಮ್ಮನ ಸಾನ್ನಿಧ್ಯವನ್ನು ನೀನು ಕಳೆದುಕೊಳ್ಳಲು ಕಾರಣರು ಯಾರೆಂಬುದು ನಿನಗೆ ಗೊತ್ತೇ? ಅವರನ್ನು ಮಾತ್ರ ನೀನೆಂದೂ ಕ್ಷಮಿಸಬೇಡ ಮಗೂ. ಮನುಷ್ಯರ ನಡುವಣ ಸಂಬಂಧಗಳಿಗೆ ಕಿಲುಬು ಕಾಸಿನ ಬೆಲೆ ಕೊಡದ ನರಾಧಮರು ಅವರು. ತಾವು ನಂಬಿಕೊಂಡು ಆಚರಿಸುವ ಧರ್ಮವೇ ಹೆಚ್ಚು, ಬೇರೆ ಧರ್ಮವನ್ನು ಅನುಸರಿಸುವವರಿಗೆ ಬದುಕುವ ಹಕ್ಕೆ ಇಲ್ಲ ಎಂದು ತಿಳಿದುಕೊಂಡ ರಾಕ್ಷಸರವರು. ಒಂದು ಕ್ಷಣದ ತಮ್ಮ ಅಹಂಕಾರದ ವಿಲಕ್ಷಣ ತೃಪ್ತಿಗಾಗಿ ಸಾವಿರಾರು ಜನರ ಬದುಕನ್ನು ಮೂರಾಬಟ್ಟೆ ಮಾಡಿದ ಪಾಪಿಗಳವರು. ಧರ್ಮ ರಕ್ಷಣೆಯ ಹೆಸರಿನಲ್ಲಿ ನರಬಲಿ ಕೊಡಲು ಹೇಸದ ಕ್ರೂರ ಮೃಗಗಳು ಮನುಷ್ಯರು ಹೇಗಾದಾರು, ಹೇಳು? ಈ ಜಗತ್ತನ್ನು ಸರ್ವಶಕ್ತನಾದ ಆ ಭಗವಂತ ಸೃಷ್ಟಿಸಿರುವುದು ಬರೇ ಒಂದು ವರ್ಗದವರಿಗೆ ಮಾತ್ರವೇನು? ಎಲ್ಲ ದೇಶ, ಭಾಷೆ, ಜಾತಿ, ಜನಾಂಗ, ಧರ್ಮಗಳಿಗೆ ಸೇರಿದವರೂ, ಪ್ರಾಣಿ, ಪಕ್ಷಿ, ಜಲಚರಾದಿ ಸಕಲ ಜೀವಿಗಳೂ ಆ ಭಗವಂತನ ಮಕ್ಕಳು, ಎಲ್ಲರಿಗೂ ತಮ್ಮ ತಮ್ಮ ನಂಬಿಕೆಗಳೊಂದಿಗೆ ಈ ಜಗತ್ತಿನಲ್ಲಿ ಜೀವಿಸಲು ಸಮಾನವಾದ ಹಕ್ಕಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟು ವಿವೇಚನೆಯಿಲ್ಲದ ಇಂಥ ಕ್ರೂರ ಮನಸ್ಸುಗಳನ್ನು ಬದಲಾಯಿಸುವವರು ಯಾರು? ಇಂಥ ಯೋಚನೆಗಳು ತೀವ್ರವಾಗಿ ನನ್ನನ್ನು ಕಾಡಿದಾಗ ನಾನು ದೇವರ ಕೋಣೆಗೆ ಓಡಿ ಹೋಗಿ ನನ್ನ ಮುರಳೀಕೃಷ್ಣನ ಮುಂದೆ ನಿಂತು ಕೈಜೋಡಿಸಿ ಮೊರೆಯಿಡುತ್ತೇನೆ: ಕೃಷ್ಣ, ಧರ್ಮಗ್ಲಾನಿಯಾದಾಗ ‘ಧರ್ಮ ಸಂಸ್ಥಾಪಾನಾರ್ಥಾಯ ಸಂಭವಾಮಿ ಯುಗೇ ಯುಗೇ ಅಂದೆಯಲ್ಲಾ, ಬರಬಾರದೇ ಈಗ? ನೀನು ಕೃಷ್ಣನಾಗಿಯಾದರೂ ಬಾ, ಅಲ್ಲಾ ಆಗಿಯಾದರೂ ಬಾ ಅಥವಾ ಯೇಸುವಾಗಿಯಾದರೂ ಬಾ, ಒಟ್ಟಿನಲ್ಲಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡು. ಇಂಥ ಮೂಢ ಮನಸ್ಸುಗಳ ತೆವಲಿಗೆ ನಮ್ಮಂಥ ನಿರಪರಾಧಿಗಳನ್ನು ಬಲಿಪಶುಗಳನ್ನಾಗಿ ಮಾಡಬೇಡ’ ಎಂದು.
ಪುಟ್ಟಾ, ನಿದ್ರೆ ಬರುತ್ತಿದೆ. ನಾÀಳೆ ಬರೆಯುವೆ, ಆಗದೇ?
ನಿನ್ನ ಪ್ರೀತಿಯ ಅಮ್ಮ

*****

ನನ್ನ ಕಂದಾ, ಮುರಳಿ,
ಮಳೆಗಾಲ ಆರಂಭವಾಯಿತೆಂದು ತೋರುತ್ತಿದೆ. ಹೊರಗೆ ಜೋರಾಗಿ ಮಳೆ ಸುರಿಯುತ್ತಿದೆ. ಮಳೆ ಮತ್ತು ನೆನಪುಗಳ ನಡುವೆ ಏನೋ ಅವಿನಾಭಾವ ಸಂಬಂಧವಿದೆ ಅಲ್ಲವೆ? ಇವತ್ತು ಎಂದಿಗಿಂತ ಹೆಚ್ಚು ತೀವ್ರವಾಗಿ ನಿನ್ನ ಬಗೆÀಗಿನ ಯೋಚನೆಗಳು ನನ್ನ ಮನಸ್ಸನ್ನು ತುಂಬಿಕೊಳ್ಳುತ್ತಿವೆ. ಅದಕ್ಕೆ ಇನ್ನೊಂದು ಕಾರಣವೇನೆಂದು ಗೊತ್ತೇ ಕಂದಾ?

ಇಂದು ನನ್ನ ಕಿವಿಗೆ ಬಿದ್ದ ಆ ಸಕ್ಕರೆಯಂತಹ ಸುದ್ದಿ.. ದಿನಾ ನಿನ್ನ ದಾರಿ ಕಾಯುತ್ತ ನಿಂತ ನನಗೆ ನನ್ನ ತಪಸ್ಸಿನ ಫಲ ಅತ್ಯಂತ ಸಮೀಪ ಬಂದಿದೆ ಅನ್ನುವ ಸುದ್ದಿ. ಇವತ್ತು ಸಂಜೆ ಏನಾಯಿತು ಗೊತ್ತಾ? ಇದ್ದಕ್ಕಿದ್ದಂತೆ ನಂದಿನಿ ಮತ್ತು ಪ್ರಕಾಶ್ ಓಡೋಡಿ ಬಂದು ಏದುಸಿರು ಬಿಡುತ್ತ ಒಂದು ಮಹಾನ್ ವಾರ್ತೆಯನ್ನು ಹೇಳಿದರು. ನಾನು ನನ್ನ ಕಿವಿಗಳನ್ನೇ ನಂಬದಾದೆ. ‘ಅಮ್ಮಾ, ಮುರಳಿಯಣ್ಣ ಬದುಕಿದ್ದಾನಂತೆ. ದಿಲ್ಲಿಯಲ್ಲಿ ನಮ್ಮ ಗೋವಿಂದಮಾಮ ಇದ್ದಾರಲ್ಲ, ಅವರ ಕಂಪೆನಿಗೆ ಹೊಸದಾಗಿ ಸೇರಿದ ಮ್ಯಾನೇಜರ್ ಚಂದೂಲಾಲ್ ಅವರ ಮನೆಯಲ್ಲಿ ಒಂದು ಚಹಾಕೂಟಕ್ಕೆ ಹೋಗಿದ್ದಾಗ ಅವರು ತಮ್ಮ ದತ್ತುಪುತ್ರನನ್ನು ಎಲ್ಲರಿಗೂ ಪರಿಚಯಿಸಿದ್ರಂತೆ. ಅವನನ್ನು ನೋಡಿದಾಗ ಮಾಮನಿಗೆ ಇವನನ್ನು ಎಲ್ಲೋ ನೋಡಿದ್ದೇನೆ ಅನ್ನಿಸಿತಂತೆ. ಅಲ್ಲದೆ, ಅವನ ಕೆನ್ನೆಯ ಬಳಿ ಒಂದು ದೊಡ್ಡ ಮಚ್ಚೆಯಿತ್ತಲ್ಲ, ಅದನ್ನು ನೋಡಿದಾಗಲಂತೂ ‘ಅರೆ! ಇವನು ಮುರಳಿಯೆ?’ ಅನ್ನಿಸಿತಂತೆ. ಕೂಡಲೇ ಚಂದೂಲಾಲ್ ಅವರಲ್ಲಿ ವಿಚಾರಿಸಿದರಂತೆ. ಕೊನೆಗೆ ಮುಂಬಯಿನ ಒಂದು ಬೀದಿ ಬದಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಪುಟ್ಟ ಬಾಲಕನನ್ನು ತಾನು ಕರೆತಂದು ಸಾಕಿದ್ದೆಂದು ಅವರು ಹೇಳಿದರಂತೆ. ಅವರು ಹಾಗೆ ಆ ಸಲ ಮುಂಬಯಿಗೆ ವ್ಯವಹಾರದ ವಿಚಾರವಾಗಿ ಬಂದಿದ್ದಾಗ ಮತೀಯ ಗಲಭೆ ಮತ್ತು ಹಿಂಸಾಕಾಂಡ ಸಂಭವಿಸಿದ್ದೂ ಹೌದೆಂದು ಅವರು ಹೇಳಿದರಂತೆ. ಮಾಮ ಅವನನ್ನು ಮಾತನಾಡಿಸಿದಾಗ ಅವನಿಗೆ ಅಲ್ಪಸ್ವಲ್ಪ ಕನ್ನಡ ಬರುತ್ತಿರುವುದೂ ಗೊತ್ತಾಯಿತಂತೆ. ಅವನು ಮುರಳಿಯೇ ಎಂದು ಖಚಿತವಾಗಿ ಮಾಮ ಅವನ ಹತ್ತಿರ ಎಲ್ಲ ವಿಷಯವನ್ನೂ ಹೇಳಿ ‘ಅಮ್ಮನನ್ನು ನೋಡಲು ನನ್ನ ಜೊತೆಗೆ ಕೂಡಲೇ ಬಾ’ ಅಂದರಂತೆ.

‘ಅಮ್ಮಾ, ಅವನಿಲ್ಲಿಗೆ ಇನ್ನೆರಡು ದಿನಗಳಲ್ಲಿ ಬಂದುಬಿಡುತ್ತಾನೆ’ ಅಂದಳು ನಂದಿನಿ. ನಾನು ಸಂಪೂರ್ಣ ಮೂಕಳಾಗಿಬಿಟ್ಟಿದ್ದೆ. ಮುರಳೀ, ಈ ಕಳೆದ ಇಪ್ಪತ್ತು ವರ್ಷಗಳಲ್ಲಿ ಪ್ರತಿ ಕ್ಷಣವೂ ನಿನ್ನ ಬರುವಿಕೆಯ ಮೇಲೆ ಭರವಸೆಯಿಟ್ಟು ಕಳೆದರೂ ನೀನು ಇನ್ನೆರಡೇ ದಿನಗಳಲ್ಲಿ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತೀ ಅಂತ ತಿಳಿದಾಗ ಹೃದಯವು ಆನಂದದಿಂದ ಒಡೆದು ಹೋಗುವಂತಾಗಿದೆ ಕಂದಾ. ನನಗೆ ನನ್ನನ್ನು ಹಿಡಿದಿಡಲಾಗುತ್ತಿಲ್ಲ.
ಆದರೆ ನೀನು ನಿನ್ನ ಅಮ್ಮನನ್ನು ಗುರುತಿಸಬಲ್ಲೆಯಾ ಕಂದಾ? ನನ್ನ ವಯಸ್ಸು, ವಾರ್ಧಕ್ಯ ಮತ್ತು ಕಾಯಿಲೆಗಳು ನನ್ನನ್ನಿಂದು ವಿಕಾರವಾಗಿಸಿವೆ. ನೋಡಲು ಅಸಹ್ಯವೆನ್ನಿಸುವಷ್ಟು ನಾನು ಬದಲಾಗಿದ್ದೇನೆ. ಆದರೂ ನಿನ್ನನ್ನು ತಬ್ಬಿಕೊಂಡು ಎದೆಗೊರಗಿಸಿ ‘ನನ್ನ ಕಂದಾ’ ಎಂದು ಅಶ್ರುಧಾರೆ ಹರಿಸಬೇಕೆಂಬ ಅದಮ್ಯ ಬಯಕೆಯನ್ನು ಹತ್ತಿಕ್ಕಲಾರೆ.

ಹಾ..! ಹೊಟ್ಟೆಯೊಳಗೆ ಇದೇನು ನೋವು… ಯಾರೋ ನನ್ನ ಕರುಳನ್ನು ಬಗೆ ಬಗೆದು ಒಗೆದಂತೆ.. ಅಯ್ಯೋ.. ಸಹಿಸಲಾರೆ.. ಸಿಸ್ಟರ್.. ಸಿಸ್ಟರ್..!
ಕೊನೆಯ ಪತ್ರ ಅಲ್ಲಿಗೆ ನಿಂತಿತ್ತು.

‘ಇಷ್ಟು ದೀರ್ಘಕಾಲ ತಪಸ್ವಿನಿಯಂತೆ ಕಾದು ಫಲಪ್ರಾಪ್ತಿಯ ಕ್ಷಣ ಬಂದಾಗ ಪ್ರಾಣಪಕ್ಷಿ ಹಾರಿಹೋಗಬೇಕೆ? ಎಂಥ ವಿಧಿ ವಿಪರ್ಯಾಸ..! ಅಲ್ಲಾ! ಇದೇನು ನಿನ್ನ ಲೀಲೆ!’ ಹಸೀನಾ ದೀರ್ಘವಾಗಿ ನಿಟ್ಟುಸಿರಿಟ್ಟು ಶೂನ್ಯದತ್ತ ನೋಡುತ್ತ ಕುಳಿತಳು.

*****
ನನಗೆ ಯಾಕೆ ನನ್ನ ಈ ಕಥೆ ಇಷ್ಟ?…
ನಾನು ಬಹಳ ನೊಂದ ಮನಸ್ಸಿನಿಂದ ಬರೆದ ಕಥೆಯಿದು. ಜಗತ್ತಿನಲ್ಲಿ ಜಾತಿ, ಜನಾಂಗ, ಮತ-ಧರ್ಮ, ವರ್ಣ-ವರ್ಗಗಳ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳು, ಜಗಳ-ಕಲಹ- ರಕ್ತಪಾತ-ಕೊಲೆಗಳು ಅನೇಕರ ಸಾಂಸ್ಕೃತಿಕ ಶೂನ್ಯ ಮನಸ್ಸುಗಳ ಪ್ರತೀಕವಾಗಿ ಸಾಮಾಜಿಕ ಬದುಕನ್ನು ನರಕವಾಗಿಸಿದ ಇಂದಿನ ಸಂದರ್ಭದಲ್ಲಿ ಇಂಥ ಪ್ರತಿಯೊಂದು ಘಟನೆಗಳ ಬಗ್ಗೆ ಕೇಳಿದಾಗಲೂ ಸಂಕಟದಿಂದ ನರಳುವ ನನ್ನ ಮನಸ್ಸಿಗೆ ಇಂಥದೊಂದು ಕಥೆ ಬರೆದು ಜನರಲ್ಲಿ ಅರಿವು ಮೂಡಿಸಿ ಹಗುರಾಗಬೇಕೆಂದೆನ್ನಿಸಿತು. ಮನುಷ್ಯರ ಜೀವಹಾನಿಯಾದಾಗ ಎಲ್ಲಕ್ಕಿಂತ ಹೆಚ್ಚು ಯಾತನೆಯನ್ನು ಅನುಭವಿಸುವುದು ತಾಯಿ. ತಾಯಿ ಯಾವುದೇ ಧರ್ಮಕ್ಕೆ ಜಾತಿಗೆ ಅಥವಾ ಜನಾಂಗಕ್ಕೆ ಸೇರಿದವಳಾಗಿರಲಿ, ಆಕೆ ಅನುಭವಿಸುವ ಸಂಕಟ ಒಂದೇ ತೆರನಾಗಿರುತ್ತದೆ. ರಾಜಕೀಯ ಪಕ್ಷಗಳು ತಮ್ಮ ಅಧಿಕಾರ ಲಾಲಸೆಯಿಂದ, ತಮ್ಮ ಸ್ವಾರ್ಥ-ಲಾಭಗಳಿಗೋಸ್ಕರ ಜನಸಾಮಾನ್ಯರನ್ನು ದಾಳವಾಗಿಸುವ ಪ್ರವೃತ್ತಿ ಹೊಸದೇನಲ್ಲ. ಕೋಮುಗಲಭೆಗಳು ಹುಟ್ಟಿಕೊಂಡು, ತನ್ನ ಮಕ್ಕಳು ಸತ್ತಾಗ, ಕಣ್ಮರೆಯಾದಾಗ ಅಥವಾ ಕಳೆದು ಹೋದಾಗ ತಾಯಿ ಅನುಭವಿಸುವ ನೋವು, ಆತಂಕ, ಭಯ, ಸಂಕಟಗಳು ವರ್ಣನೆಗೆ ನಿಲುಕದಂಥದ್ದು. ಈ ಕಥೆಯಲ್ಲಿ ಅದಕ್ಕೊಂದು ರೂಪು ಕೊಡುವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಾನು ಬರೆದುದರಲ್ಲಿ ನನಗೆ ಅತ್ಯಂತ ಹೆಚ್ಚು ತೃಪ್ತಿ ಕೊಟ್ಟ ಕಥೆಯಿದು.