ಏರಿಯಾದ ಹತ್ತಿರದ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಡ್ರೋನ್ ಹಾರಿಸಿ ಸೆರೆಹಿಡಿದ ದೃಶ್ಯಗಳನ್ನು ಅಂತರ್ಜಾಲದ ಪುಟಕ್ಕೆ ಮಿನ್ನೇರಿಸುತ್ತಿದ್ದ ನೆವಾಡಾ ನಿವಾಸಿಯ ಲ್ಯಾಪ್ಟಾಪ್, ಡ್ರೋನ್ ಮತ್ತಿತರ ಸಲಕರಣೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಹೀಗೆ ಅದಮ್ಯ ಕುತೂಹಲ ತಡೆಯಲಾರದೆ ಎಲ್ಲೆ ಮೀರಿ ವರ್ತಿಸುವರಿಗೆ, ಡ್ರೋನ್ ಹಾರಿಸಿ, ಕ್ಯಾಮೆರಾ ಮೂತಿಯನ್ನು ಬೇಲಿಯ ತೂತಿಗೆ ತೂರಿಸಿ ಒಳಗೆ ಇಣುಕಿ ನೋಡುವ ಚಪಲ ಚನ್ನಿಗರಾಯರಿಗೆ ದೊಡ್ಡ ಮೊತ್ತದ ದಂಡ ಹಾಗು ದೀರ್ಘ ಕಾಲದ ಕಾರಾಗೃಹ ಸಜೆಯಾಗಿದೆ.
ಲಾಸ್ ವೇಗಸ್‌ನಲ್ಲಿ ನಡೆದ ಪ್ರಸಂಗವೊಂದರ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ

ಕೋವಿಡ್ ಎಂಬ ಚಂಡ ಮಾರುತದ ಅಬ್ಬರ ವಿಶ್ವದಾದ್ಯಂತ ಬೊಬ್ಬಿರಿಯುವ ಕೆಲ ತಿಂಗಳ ಮುಂಚಿನ ಮಂದ ಮಾರುತದ ಸಮಯ. ಮ್ಯಾಟಿ ರಾಬರ್ಟ್ಸ್ ಎಂಬ ಹದಿ ಹರೆಯದ ತರುಣನಿಗೆ ತನ್ನ ಕೋಣೆಯಲ್ಲಿ ಕುಳಿತು ಕೋಕ್ ಹೀರುತ್ತಾ ವಿಡಿಯೋ ಗೇಂ ಆಡುತ್ತ ಆಡುತ್ತ ‘ಫಿರ್ ವಹಿ ಶಾಮ್ ವಹಿ ಗಮ್ ತನ್ಹಾಯೀ ಹೈ’ ಎಂದು ಹಾಡುವಷ್ಟು ಬೇಸರವಾಗಿತ್ತು. ಅದೇನು ತೋಚಿತೋ ಏನೋ, ತನ್ನ ಫೇಸ್ ಬುಕ್ ಪುಟದಲ್ಲಿ “ಸೆಪ್ಟೆಂಬರ್ ಇಪ್ಪತ್ತರಂದು ಏರಿಯಾ ಐವತ್ತೊಂದಕ್ಕೆ ಲಗ್ಗೆ ಹಾಕುವ: ನಮ್ಮನ್ನು ಯಾರು ತಡೆಯಲಾರರು” ಎನ್ನುವ ತಲೆ ಬರಹ ಹೊತ್ತ ಈವೆಂಟ್ ಒಂದನ್ನು ಪ್ರಕಟಿಸಿದ. ಅಂತರ್ಜಾಲದಲ್ಲಿ ಮಿಂಚು ಸಂಚಾರವಾಗಿ ವಿಷಯ ವೈರಲ್ ಆಯಿತು. ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಸ್ಪಂದಿಸಿ, ಏರಿಯಾ ಐವತ್ತೊಂದಕ್ಕೆ ಮುತ್ತಿಗೆ ಹಾಕಲು ತಾವು ತಯ್ಯಾರು ಎಂದು ಸೂಚಿಸಿದರು.

ಏನಿದೀ ಏರಿಯಾ ಐವತ್ತೊಂದು?

ಲಾಸ್ ವೇಗಸ್‌ನಿಂದ ಸುಮಾರು ಎಂಭತ್ತು ಮೈಲಿ ವಾಯುವ್ಯ ದಿಕ್ಕಿನಲ್ಲಿ, ದಟ್ಟ ಮರಳುಗಾಡಿನ ಮಧ್ಯೆ, ‘ಏರಿಯಾ ಐವತ್ತೊಂದು’ ಎಂಬ ಹೆಸರಿನಿಂದ ಗುರುತಿಸಿಕೊಳ್ಳುವ ವಾಯುಪಡೆಯ ಮಿಲಿಟರಿ ನೆಲೆ ಒಂದಿದೆ. ಮೂವತ್ತೆಂಟು ಸಾವಿರ ಎಕರೆ ವಿಸ್ತೀರ್ಣ ಹೊಂದಿರುವ ಈ ನೆಲೆಯ ಕೇಂದ್ರಭಾಗದಲ್ಲಿ ಬೃಹತ್ತಾದ ಒಂದು ರಹಸ್ಯ ಸೇನಾ ವಿಮಾನ ನಿಲ್ದಾಣವಿದೆ. ಪ್ರಾಯೋಗಿಕ ಯುದ್ಧ ವಿಮಾನಗಳು ಮತ್ತು ತತ್ಸಂಬಂದೀ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಹಾಗೂ ಪರೀಕ್ಷಾ ಕಾರ್ಯಗಳಿಗೆ ಬೆಂಬಲ ನೀಡುವುದು ಈ ನೆಲೆಯ ಪ್ರಾಥಮಿಕ ಉದ್ದೇಶ. ಸಹಜವಾಗಿಯೇ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ಸಂರಕ್ಷಿತ ಪ್ರದೇಶದ ಗಡಿ ಮೀರಲು ಪ್ರಯತ್ನಿಸುವ ಉಲ್ಲಂಘನಕಾರರಿಗೆ ಕಟು ಎಚ್ಚರಿಕೆ ನೀಡುವ ಫಲಕವೊಂದನ್ನು ಎತ್ತರದ ಬೇಲಿಯ ಮೇಲೆ ನೇತು ಹಾಕಲಾಗಿದೆ.

ಏರಿಯಾದಲ್ಲಿ ಹಾರುವ ತಟ್ಟೆಗಳು

ಹಾರುವ ತಟ್ಟೆಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದ ಚಿತ್ರಲಿಪಿಗಳಲ್ಲಿ, ರೆನೈಸಾನ್ಸ್ ವರ್ಣ ಚಿತ್ರಗಳಲ್ಲಿ, ಚರ್ಚುಗಳ ಪುರಾತನ ಕಡತಗಳಲ್ಲಿ ಇಂತಹ ಅಸಾಧಾರಣ ವಿದ್ಯಮಾನಗಳು ಘಟಿಸಿದ ವರದಿಗಳಿವೆ. ಏಲಿಯನ್ ಸಂಬಂಧಿ ಪುಕಾರು ಹಾಗು ವರದಿಗಳು ಸಹಸ್ರಗಟ್ಟಳೆ ಲೆಕ್ಕದಲ್ಲಿ ಜಗತ್ತಿನಾದ್ಯಂತ ದಾಖಲಾಗಿವೆ, ದಾಖಲಾಗುತ್ತಲೇ ಇರುತ್ತವೆ. ಇತ್ತೀಚಿಗಷ್ಟೇ ಮಣಿಪುರದ ಇಂಪಾಲ್ ವಿಮಾನ ನಿಲ್ದಾಣದ ನಿಯಂತ್ರಿತ ವಾಯು ಪ್ರದೇಶದಲ್ಲಿ ಅಜ್ಞಾತ ಹಾರುವ ವಸ್ತುವೊಂದು(UFO ) ಕಾಣಿಸಿಕೊಂಡ ವರದಿಯಾಗಿತ್ತು. ಪಶ್ಚಿಮ ದಿಕ್ಕಿನೆಡೆ ನಿಧಾನವಾಗಿ ತೇಲುತ್ತಿದ್ದ ಅಪರಿಚಿತ ಆಕಾಶಕಾಯದ ತನಿಖೆ ಮಾಡಲು ಹಾರಿದ ಭಾರತೀಯ ವಾಯು ಪಡೆಯು ಫೈಟರ್ ಜೆಟ್ಟುಗಳು ಬರಿಗೈಯಲ್ಲಿ ಹಿಂದಿರುಗಿದ್ದವು.

ಕುಚೋದ್ಯಕ್ಕಾಗಿ ಮ್ಯಾಟ್ಟಿ ರಾಬರ್ಟ್ಸ್ ಬರೆದ ಫೇಸ್ಬುಕ್ ಪೋಸ್ಟನ್ನು ಲಕ್ಷಾಂತರ ಜನರು ಅನುಮೋದಿಸಿ ಸಕಾರಾತ್ಮಕ ಪ್ರತಿಕ್ರಿಯೆ ತೋರಲು ಕಾರಣವಿದೆ. ಏರಿಯಾ ಐವತ್ತೊಂದರಲ್ಲಿ, ಅನ್ಯಗ್ರಹ ಜೀವಿಗಳ ಅಂತರಿಕ್ಷ ನೌಕೆಗಳನ್ನು ಗೋಪ್ಯವಾಗಿ ಇರಿಸಿಕೊಳ್ಳಲಾಗಿದೆ ಮತ್ತು ರಿವರ್ಸ್ ಇಂಜಿನಿಯರಿಂಗ್ ಮುಖಾಂತರ ಏಲಿಯನ್ ತಂತ್ರಜ್ಞಾನವನ್ನು ಅರಿಯುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಗಾಳಿಮಾತು ಅನೇಕಾನೇಕ ವರ್ಷಗಳಿಂದ ಚಾಲ್ತಿಯಲ್ಲಿದೆ. ಬಾಲಿಶವಾದ ಊಹಾಪೋಹಗಳು ಎಂದು ಸುಮಾರು ಜನ ಮೂಗು ಮುರಿದರೂ ಈ ಪಿತೂರಿಯ ವಿಚಾರಧಾರೆಯನ್ನು ಸಮರ್ಥಿಸಿಕೊಂಡು ಹೋಗುವ ಅನೇಕ ಸಂಸ್ಥೆಗಳಿವೆ, ಭೌತ ವಿಜ್ಞಾನಿಗಳಿದ್ದಾರೆ. ಪುಕಾರಿಗೆ ಪುಷ್ಟಿ ನೀಡುವಂತಹ ಹಾರುವ ತಟ್ಟೆಗಳು ಮತ್ತಿತರ ಅಪರಿಚಿತ ಆಕಾಶಕಾಯಗಳ ಅಸಾಧಾರಣ ವೀಕ್ಷಣೆಯ ವರದಿಗಳು ಏರಿಯಾ ಐವತ್ತೊಂದರ ಸುತ್ತ ಮುತ್ತದಿಂದ ಬರುತ್ತಲೇ ಇರುತ್ತದೆ.

ಏರಿಯಾ ಐವತ್ತೊಂದರ ನೆಲೆಗೆ ಹಾರುವ ತಟ್ಟೆಗಳು ಎಗರಿ ಬಂದು ಸೇರಿಕೊಂಡ ಕತೆ ಶುರುವಾದದ್ದು ಯು‌ಎಸ್ ಮಿಲಿಟರಿ ಮಾಡಿಕೊಂಡ ಅವಾಂತರದಿಂದ ಅಥವಾ ಬೇಕಂತಲೇ ಹೆಣೆದ ಕುಶಲ ಕಾರ್ಯತಂತ್ರದಿಂದ. ಎರಡನೆಯ ಜಾಗತಿಕ ಯುದ್ಧ ಮುಗಿದು ಕ್ರೆಮ್ಲಿನ್ ಹಾಗು ವೈಟ್ ಹೌಸ್ ನಡುವೆ ಶೀತಲ ಸಮರ ಆರಂಭವಾಗಿದ್ದ ಸಮಯ. ರಷ್ಯಾ ನಡೆಸುತ್ತಿದ್ದ ಅಣ್ವಸ್ತ್ರ ಪರೀಕ್ಷೆಗಳ ಮೇಲೆ ಕಣ್ಣಿಡುವ ಗುಪ್ತ ಕಾರ್ಯಾಚರಣೆಯ ಸಲುವಾಗಿ ಅಮೇರಿಕ ಬಳಸುತ್ತಿದ್ದ ಬೃಹತ್ ಮಿಲಿಟರಿ ಬಲೂನೊಂದು ಕುಸಿದು ರಾಸ್ವೆಲ್(ನ್ಯೂ ಮೆಕ್ಸಿಕೊ) ನಗರದ ಹೊರವಲೆಯದ ಹುಲ್ಲುಗಾವಲೊಂದರ ಬಳಿ ಬಿದ್ದಿತು. ಅತಿ ಗೌಪ್ಯ ಮಿಲಿಟರಿ ಕಾರ್ಯಾಚರಣೆಯ ಸಂಕೀರ್ಣ ವಿವರಗಳು ಕೂಲಂಕುಷವಾದ ಚರ್ಚೆಗೆ ಗ್ರಾಸವಾಗುವುದು ಬೇಡವಾಗಿದ್ದರಿಂದಲೋ ಏನೋ ‘ಅನ್ಯಗ್ರಹದಿಂದ ಬಂದ ಹಾರುವ ತಟ್ಟೆಯ ಭಗ್ನಾವಶೇಷಗಳು ದೊರಕಿವೆ’ ಎನ್ನುವ ಮಿಲಿಟರಿ ವಕ್ತಾರರ ಸೆನ್ಸೇಷನಲ್ ಹೇಳಿಕೆಯೊಂದನ್ನು ತಾರಾತುರಿಯಾಗಿ ಬಿಡುಗಡೆ ಮಾಡಲಾಯಿತು. ಪ್ರಾಯಶಃ ಜನಮಾನಸವನ್ನು ದಿಗ್ಭ್ರಾಂತಗೊಳಿಸಿ ಬೇರೆ ದಿಕ್ಕಿಗೆ ತಿರುಗಿಸುವ ಕಾರ್ಯತಂತ್ರ ಇದ್ದರೂ ಇರಬಹುದು. ಬಾನುಲಿಯಲ್ಲಿ ಹಾಗು ದೇಶಾದ್ಯಂತದ ವೃತ್ತಪತ್ರಿಕೆಗಳಲ್ಲಿ ಸುದ್ದಿ ಬಿತ್ತರವಾದ ಕೆಲವೇ ಘಂಟೆಗಳಲ್ಲಿ ಮಿಲಿಟರಿ ವಕ್ತಾರರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು. ರಾಸ್ವೆಲ್ ಹುಲ್ಲುಗಾವಲಲ್ಲಿ ದೊರಕಿದ್ದು ವಾತಾವರಣದಲ್ಲಿ ಗಾಳಿಯ ವೇಗ, ಆದ್ರತೆ, ತಾಪಮಾನ ಮುಂತಾದವುಗಳನ್ನು ಅಳೆಯುವ ಹವಾಮಾನ ಬಲೂನ್ ಎಂಬ ಮರು ಹೇಳಿಕೆಯನ್ನು ಬಿಡುಗಡೆ ಮಾಡಲಾಯಿತು. ಮುಖಂಡರ ಅಸ್ಪಷ್ಟ ನಡವಳಿಕೆಯಿಂದ ಜನತೆಯಲ್ಲಿ ಅನುಮಾನದ ಬೀಜ ಮೊಳಕೆಯೊಡೆದು ಹೆಮ್ಮರವಾಯಿತು, ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗಿ ಹರಡುತ್ತಾ ಹರಡುತ್ತಾ ಏರಿಯಾ ಐವತ್ತೊಂದನ್ನು ತಲುಪಿತು.

ರಾಸ್ವೆಲ್ ಭಗ್ನಾವಶೇಷಗಳನ್ನು ಕಣ್ಣಾರೆ ಕಂಡ ನಿವೃತ್ತ ವಾಯುಪಡೆ ಅಧಿಕಾರಿ, ಏರಿಯಾ ಐವತ್ತೊಂದರಲ್ಲಿ ಕೆಲಸ ಮಾಡಿರುವ ಇಂಜಿನಿಯರ್, ವಿಮಾನ ಚಾಲಕ ಹೀಗೆ ಹತ್ತು ಹಲವಾರು ಪರಿಣಿತರು ಮುಂದೆ ಬಂದು ಏಲಿಯನ್ ಪುಕಾರುಗಳಿಗೆ ಸಮರ್ಥನೆ ಕೊಟ್ಟರು. ಗೋಜಲು ಗೋಜಲಾದ ವಾರ್ತೆ ವರ್ತಮಾನಗಳ ದಸೆಯಿಂದ ಒಳಸಂಚುಗಳ ಸಿದ್ಧಾಂತಗಳು ಒಂದಾದರ ಮೇಲೊಂದರಂತೆ ಹುಟ್ಟಿಕೊಂಡು ಬೆಳೆಯುತ್ತಲೇ ಹೋದವು.

ಏಲಿಯನ್ ಸ್ಟಾಕ್ ಉತ್ಸವ

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ ಎಂಬಂತೆ ಮ್ಯಾಟಿ ರಾಬರ್ಟ್ಸ್ ಮುಖಂಡತ್ವದಲ್ಲಿ ನಡೆಯಲಿರುವ ಮಿಲಿಟರಿ ನೆಲೆಯ ಘೇರಾವಿಗೆ ಮಾಧ್ಯಮಗಳು ಸಿಕ್ಕಾಪಟ್ಟೆ ಹವಾ ಕೊಟ್ಟು ರಾಷ್ಟ್ರಮಟ್ಟದ ಸುದ್ದಿಯಾಗುವಂತೆ ಮಾಡಿದವು. ನಗರಪಾಲಿಕೆ ಹಾಗು ವಾಯುಪಡೆಯ ಅಧಿಕಾರಿಗಳು ಪ್ರತಿಭಟನೆ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿಕೊಂಡರು. ಗಲಭೆ, ದುಷ್ಕೃತ್ಯಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದರು. ನಮ್ಮ ನಿಮ್ಮ ಮನೆಗಳಲ್ಲಿ ಹದಿ ಹರೆಯದ ಮಕ್ಕಳು ಇಷ್ಟೆಲ್ಲಾ ರಾದ್ಧಾಂತ ಮಾಡಿಕೊಂಡರೆ ಕಿವಿ ಹಿಂಡಿ ಏನು ಮಾಡಿದೆಯೋ ಮುಂಡೇದೆ ಅಂತ ಬೈದು ಕೂರಿಸಬಹುದು. ಮ್ಯಾಟಿ ವಿಷಯದಲ್ಲಿ ಹಾಗೇನು ಆಗಲಿಲ್ಲ. ನೋ ಪಬ್ಲಿಸಿಟಿ ಈಸ್ ಬ್ಯಾಡ್ ಪಬ್ಲಿಸಿಟಿ ಎಂದು ಹುಡುಗ ಆನಂದ ತುಂದಿಲನಾದ. ಘೇರಾವ್ ಮಾಡಲು ಬರುವ ಲಂಕ್ಷಾಂತರ ಜನರಿಗಾಗಿ ‘ಏಲಿಯನ್ ಸ್ಟಾಕ್’ ಹೆಸರಿನ ಸಂಗೀತೋತ್ಸವವನ್ನು ಏರಿಯಾ ಐವತ್ತೊಂದರ ಹತ್ತಿರವಿರುವ ರೇಚಲ್ ಎನ್ನುವ ಹಳ್ಳಿಯಲ್ಲಿ ಆಯೋಜಿಸುವ ತಯ್ಯಾರಿ ನಡೆಸಲು ಶುರು ಮಾಡಿದ. ಇವನ ಚೂಟಿತನದ ಚಟುವಟಿಕೆಗಳಿಂದ ಸ್ಫೂರ್ತಿಯ ಕಿಚ್ಚು ಹಚ್ಚಿಸಿಕೊಂಡು ಇನ್ನೊಂದೆರಡು ಸಂಘಟನೆಗಳು ಸುತ್ತಲಿನ ಹಳ್ಳಿಗಳಲ್ಲಿ ಏಲಿಯನ್ ಉತ್ಸವಗಳನ್ನು ಹಮ್ಮಿಕೊಂಡವು. ಅಂಚೆ ಕಚೇರಿಯೂ ಸಹ ಇರದ ರೇಚಲ್ ಒಂದು ಅತಿ ಪುಟ್ಟ ಹಳ್ಳಿ. ಶಾಂತ ವಾತಾವರಣದಲ್ಲಿ ಸರಳ ಜೀವನಶೈಲಿ ನಡೆಸಿಕೊಂಡು ಹೋಗುವ ಹಳ್ಳಿಯ ಜನ ಆಗಮಿಸಲಿರುವ ಜನಸಾಗರದ ಸುದ್ದಿಯಿಂದ ಗಾಬರಿ ಬಿದ್ದರು. ಗಲಭೆ ಗಲಾಟೆಗಳಾಗುವ ಸಂಭಾವ್ಯತೆಯನ್ನು ಪರಿಗಣಿಸಿ ಲಿಂಕನ್ ಕೌಂಟಿಗೆ ತುರ್ತು ಪರಿಸ್ಥಿತಿ ಜಾರಿಗೊಳಿಸುವಂತೆ ಮನವಿ ಮಾಡಿಕೊಂಡರು.

ಸೆಪ್ಟೆಂಬರ್ ಇಪ್ಪತ್ತರಂದು ಸಾಲು ಸಾಲು ಪೊಲೀಸ್ ವಾಹನಗಳ ಪಹರೆ ಏರಿಯಾ ಐವತ್ತೊಂದರ ಸುತ್ತ ನೆರೆಯಿತು. ಮಾಧ್ಯಮಗಳ ವರದಿಗಾರರು ಗಂಟಲು ಸರಿಮಾಡಿಕೊಂಡು ಗಂಟೆಗಟ್ಟಲೆ ವರದಿ ವದರಲು ತಯಾರಾದರು. ಕಿಕ್ಕಿರುವ ಜನಸಮೂಹ ನೋಡುವ ಆಸೆ ಇಟ್ಟುಕೊಂಡವರಿಗೆಲ್ಲ ಕಿರಿಕಿರಿ ಆಗುವಂತೆ ಬೆರಳೆಣಿಕೆಯ ಜನ ಉತ್ಸವದಲ್ಲಿ ಭಾಗಿಯಾಗಲು ಹಾಜರಾದರು. ಬಂದವರು ಏರಿಯಾ ಐವತ್ತೊಂದರ ಮುಖ್ಯ ದ್ವಾರದ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ರಾಕ್ ಸಂಗೀತಕ್ಕೆ ಕಾಲು ಕುಣಿಸಿ , ಮನೆಯಿಂದಲೇ ಗೀಚಿಕೊಂಡು ಬಂದಿದ್ದ “ಗ್ರೀನ್ ಲೈವ್ಸ್ ಮ್ಯಾಟರ್”, “ಈ.ಟಿ ಬಿಡಿ ಆಟ ಬೇಡಿ” ಮುಂತಾದ ಬಾವುಟ ಬ್ಯಾನರ್‌ಗಳನ್ನೂ ಅತ್ತಿಂದಿತ್ತಿಗೆ ಹಾರಾಡಿಸಿ ಜಾಗ ಖಾಲಿ ಮಾಡಿದರು. ಮೂರು ನಾಲ್ಕು ದಿನ ನಡೆಯಬೇಕಿದ್ದ ಏಲಿಯನ್ ಸ್ಟಾಕ್ ಉತ್ಸವ ಕೆಲವೇ ಘಂಟೆಗಳಲ್ಲಿ ಮುಕ್ತಾಯವಾಯಿತು.

ಗುಟ್ಟನ್ನು ರಟ್ಟು ಮಾಡಿಬಿಡುವ ಹುಂಬತನದ ಹಂಬಲಗಳು

ಕೆಲ ವರುಷಗಳ ಹಿಂದೆ ಲಾಸ್ ವೇಗಸ್ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ನೋಡಲು ಬಂದ ಪ್ರವಾಸಿ ಬಸ್ಸೊಂದು ಏರಿಯಾ ಐವತ್ತೊಂದರ ಸರಹದ್ದು ದಾಟಿ ಮುಖ್ಯ ದ್ವಾರದಿಂದಲೇ ಒಳಗೆ ನುಗ್ಗುವ ಪ್ರಯತ್ನ ಮಾಡಿತ್ತು. ಏಲಿಯನ್ ಸಂಬಂಧೀ ಉಹಾಪೋಹಗಳಿಂದ ಮಂತ್ರಮುಗ್ಧವಾದ ನೆದರ್ಲ್ಯಾಂಡಿನ ಯುವ ಯೂಟ್ಯೂಬರ್‌ಗಳ ತಂಡವೊಂದು ನೆವಾಡಾಕ್ಕೆ ಬಂದಿಳಿಯಿತು. ಲಾಸ್ ವೇಗಸ್ ಕೆಸಿನೋಗಳ ಕಡೆ ತಲೆಯೂ ಕೂಡ ಹಾಕದೆ ನೆಟ್ಟ ಏರಿಯಾದ ನಿರ್ಬಂಧಿತ ಪ್ರದೇಶದೊಳಗೆ ನುಸುಳಿ ವಿಡಿಯೋ ಚಿತ್ರೀಕರಣ ಮಾಡುತ್ತಾ ಪೋಲೀಸರ ಕೈವಶವಾಯಿತು. ಅವರ ಚಾನಲ್ ಚಂದಾದಾರರು ತಮ್ಮ ನೆಚ್ಚಿನ ವರದಿಗಾರರು ಕೋಳ ಧರಿಸಿ ಪೋಲೀಸರ ಗಾಡಿ ಏರಿದ್ದನ್ನು ಯೂಟ್ಯೂಬಿನಲ್ಲೇ ನೋಡಿದರು.

ಏರಿಯಾದ ಹತ್ತಿರದ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಡ್ರೋನ್ ಹಾರಿಸಿ ಸೆರೆಹಿಡಿದ ದೃಶ್ಯಗಳನ್ನು ಅಂತರ್ಜಾಲದ ಪುಟಕ್ಕೆ ಮಿನ್ನೇರಿಸುತ್ತಿದ್ದ ನೆವಾಡಾ ನಿವಾಸಿಯ ಲ್ಯಾಪ್ಟಾಪ್, ಡ್ರೋನ್ ಮತ್ತಿತರ ಸಲಕರಣೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಹೀಗೆ ಅದಮ್ಯ ಕುತೂಹಲ ತಡೆಯಲಾರದೆ ಎಲ್ಲೆ ಮೀರಿ ವರ್ತಿಸುವರಿಗೆ, ಡ್ರೋನ್ ಹಾರಿಸಿ, ಕ್ಯಾಮೆರಾ ಮೂತಿಯನ್ನು ಬೇಲಿಯ ತೂತಿಗೆ ತೂರಿಸಿ ಒಳಗೆ ಇಣುಕಿ ನೋಡುವ ಚಪಲ ಚನ್ನಿಗರಾಯರಿಗೆ ದೊಡ್ಡ ಮೊತ್ತದ ದಂಡ ಹಾಗು ದೀರ್ಘ ಕಾಲದ ಕಾರಾಗೃಹ ಸಜೆಯಾಗಿದೆ.

ನಿರಂತರವಾಗಿ ಹರಿದು ಬರುವ ವದಂತಿ, ತರ್ಕ ಕುತರ್ಕಗಳ ಕಲಸುಮೇಲೋಗರದಿಂದ ಜನ ಮನದಲ್ಲಿ ಇಲ್ಲಿನ ಕಾರ್ಯಾಚರಣೆಗಳ ಬಗ್ಗೆ ಅನುಮಾನ ಸ್ಥಾಯಿಯಾಗಿದೆ. ಅನುಮಾನದ ಎಳೆಯನ್ನು ಮತ್ತೂ ಬಲಪಡಿಸಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು, ಏರಿಯಾ ಐವತ್ತೊಂದರ ನೆಲೆಯ ಸಮೀಪದಿಂದ ಹಾದು ಹೋಗುವ ನೆವಾಡಾ ಹೆದ್ದಾರಿಯೊಂದನ್ನು ಪ್ರವಾಸೋದ್ಯಮ ಇಲಾಖೆಯು ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಹೆದ್ದಾರಿ ಎಂದು ಮರು ನಾಮಕರಣ ಮಾಡಿದೆ.