ಅಂದು ಮಲಗಿದ ಜಾನಕಮ್ಮನವರು ಮತ್ತೆ ಮೇಲೇಳಲೇ ಇಲ್ಲ. ಒಂದು ವಾರದ ನಂತರ ಇದ್ದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ದಿಕ್ಕು ದೆಸೆಯಿಲ್ಲದ ನರಸಿಂಹರಾಯರು ಅಮ್ಮನನ್ನು ಕಳೆದುಕೊಂಡ ಪುಟ್ಟ ಮಗುವಿನಂತೆ ಗೋಳಾಡಿದರು. ಪಕ್ಕದಲ್ಲೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದ ನಮ್ಮ ಮನೆಯವರಿಗೆ ಅವರ ಒಂಟಿತನ ಕರಳು ಕಿವುಚುತ್ತಿತ್ತು. ಇಷ್ಟೇ ಆಗಿದ್ದರೆ ಇದೊಂದು ದೊಡ್ಡ ವಿಷಯವೇ ಆಗಿರುತ್ತಿರಲಿಲ್ಲ. ಆದರೆ ಮುಂದಿನ ಕೆಲವೇ ದಿನಗಳಲ್ಲಿ ಮಕ್ಕಳಿಲ್ಲದ ಜಾನಕಮ್ಮನ ಆಸ್ತಿಗೆ ಎಲ್ಲೆಲ್ಲಿಂದಲೋ ಕಂಡು ಕೇಳಿರದ ಹದ್ದುಗಳು ಬಂದು ಎಡತಾಕತೊಡಗಿದವು. ಇಳಿ ವಯಸ್ಸಿಗೆ ಆಸರೆಯಾಗಿದ್ದ ಜಾನಕಿಯನ್ನು ಕಳೆದುಕೊಂಡು ಈಗ ನರಸಿಂಹರಾಯರು ಅಕ್ಷರಶಃ ಅನಾಥರಾಗಿದ್ದರು.
ಮಧುರಾಣಿ ಎಚ್. ಎಸ್. ಅಂಕಣ

 

ಉತ್ತರಾದಿ ಮಠದ ಬೀದಿಯ ಪಕ್ಕದ ಸಮಾನಾಂತರ ರಸ್ತೆಯೇ ನಮ್ಮೂರಿನ ಸಾಬರ ಬೀದಿ. ಮಠದ ಮುಖ್ಯಪ್ರಾಣನ ಗುಡಿಯ ಬೆನ್ನಿಗೆ ಬೆನ್ನಾಗಿ ಒಂದು ದರ್ಗಾ ಕೂಡ ಅಲ್ಲಿತ್ತು. ಅದರ ಹೆಸರು ‘ಹಜರತ್ ಖಾಸಿಂ ಷಾ ವಲಿ ದರ್ಗಾ’ ಎಂಬ ನೆನಪು. ಆ ಎರಡು ಮೂರು ಬೀದಿಗಳ ಜನರು ಈ ಹಬ್ಬ, ಸಂಸ್ಕೃತಿ, ಹಾಳುಮೂಳು ಎಲ್ಲವನ್ನೂ ಮೀರಿದ ಜೀವನ ಶೈಲಿಯೊಂದನ್ನು ರೂಢಿಸಿಕೊಂಡಿದ್ದರು. ಎರಡು ಬೀದಿಗಳ ಗಂಡಸರಂತೂ ಎಷ್ಟು ಮುಂದುವರಿದಿದ್ದರೆಂದರೆ ಹಲವೊಮ್ಮೆ ಕಣ್ಸನ್ನೆಯಲ್ಲೇ ಮಾತನಾಡಿಕೊಂಡು ಮನೆಯಿಂದ ಕಾಲು ಕೀಳುತ್ತಿದ್ದರು. ನಾಲ್ಕು ಬೀದಿ ಕೆಳಗಿಳಿದು ಅಲ್ಲಿ ಇಳಿಜಾರಿನಲ್ಲಿದ್ದ ಮಡಿವಾಳೆಪ್ಪನ ಅಂಗಡಿಯ ಮುಂದೆ ಟೀ ಕಾಫಿ ಸಿಗರೇಟು ಎಲ್ಲವೂ ಒಟ್ಟೊಟ್ಟಿಗೇ ಆಸ್ವಾದಿಸುತ್ತಿದ್ದರು. ಮಡಿ ಬಟ್ಟೆ ಒಗೆದು ಮುಗಿದ ಮೇಲೆ ಮಠದ ಬೀದಿ ಹೆಂಗಸರೂ, ಬೀಡಿ ಕಟ್ಟಿ ಮುಗಿದ ಮೇಲೆ ಸಾಬರ ಕೇರಿ ಹೆಂಗಸರೂ ಇಳಿ ಮಧ್ಯಾಹ್ನ ಒಟ್ಟಿಗೆ ಕುಳಿತು ತಮ್ಮ ತಮ್ಮ ಗಂಡಸರ ಗುಣಗಾನ ಮಾಡಿದ್ದೇ ಮಾಡಿದ್ದು..! ಹೀಗೆ ಎರಡೂ ಬೀದಿಯ ಮನೆಮನೆಗಳಲ್ಲೂ ಒಂದೊಂದು ಕತೆಯಿರುತ್ತಿತ್ತು.

ಎರಡೂ ಬದಿ ಗಂಡಹೆಂಡಿರ ನಡುವೆ ಶೀತಲ ಯುದ್ಧ ಯಾವಾಗಲೂ ನಡೆಯುತ್ತಿರುತ್ತಿತ್ತು. “ಸಂಜೆವರೆಗೂ ಎಲ್ಲಾರ ಸಾಯ್ರಿ.. ಸಂಜೆನಾದ್ರೂ ಸರಿಯಾಗಿ ಮನೆಗೆ ಬಂದು ಕೈಕಾಲು ತೊಳೆದು ಸಂಧ್ಯಾವಂದನೆ ಮಾಡ್ರಿ..” ಅನ್ನೋ ಘೋಷ ವಾಕ್ಯ ಈ ಬೀದಿಯಲ್ಲೂ,” ಎಲ್ಲಾದರೂ ಹಾಳಾಗಿ ಸಾಯಿ, ಶುಂಠಿ ಬೆಳ್ಳುಳ್ಳಿ ಒಂದಷ್ಟು ಚಿಕನ್ ತಂದಿಟ್ಟು ಸಾಯಿ..” ಎನ್ನುವ ಮಾತು ಆ ಬೀದಿಯಲ್ಲೂ ಸಾಮಾನ್ಯವಾಗಿತ್ತು.

ಇಂತಹ ಕ್ಲಿಷ್ಟ ಪರಂಪರೆಯೊಂದರಲ್ಲಿ ಏರ್ಪಟ್ಟ ನಮ್ಮಂಥ ಮಕ್ಕಳು ಇವೆಲ್ಲವನ್ನೂ ಅನುಭವಿಸುತ್ತಲೇ ಖುಷಿಯಿಂದಲೇ ಬೆಳೆದೆವು. ನನ್ನ ತಮ್ಮ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಕದ ಬೀದಿಯ ಮುಫೀಸನೊಟ್ಟಿಗೆ ಒಂದು ಆಟದ ಗ್ಯಾರೇಜು ತೆರೆದ. ಸಂಜೆ ಸ್ಕೂಲಿನಿಂದ ಬಂದವನೇ ಗ್ಯಾರೇಜಿನ ಕೆಲಸಕ್ಕೆ ಇಳಿಯುತ್ತಿದ್ದನು. ಇದು ಕೆಲವೇ ದಿನಗಳಲ್ಲಿ ಮನೆಮನೆ ಮಾತಾಗಿ ವಾಣಿಯ ಮಗ ದತ್ತಾತ್ರೇಯನು ಈ ವಯಸ್ಸಿಗೇ ಆ ಬೀದಿ ಹುಡುಗರ ಸಂಗ ಬಿದ್ದು ಕೆಟ್ಟ ಎಂಬ ಹಣೆಪಟ್ಟಿ ಧಾರಾಳವಾಗಿ ದಕ್ಕಿಸಿಕೊಂಡನು. ಈ ವಿಷಯ ಮನೆಯಲ್ಲಿ ತಿಳಿದು ಬೈಸಿಕೊಂಡರೂ ಅವನ ರಾಜಾರೋಷದ ಸ್ನೇಹ ಕಡಿಮೆಯಾಗಲಿಲ್ಲ. ಅವನ ಆ ಸ್ವೇಚ್ಛೆಯ ಬಗ್ಗೆ ಸ್ವಲ್ಪ ಉರಿದುಕೊಳ್ಳುತ್ತಿದ್ದ ನಾವು ಸಂಜೆಯಿಂದ ರಾತ್ರಿಯವರೆಗೂ ಪುಸ್ತಕಗಳಿಗೆ ಅಂಟಿ ಕೂರುತ್ತಿದ್ದೆವು.

ದೀಪಾವಳಿಯ ದಿನಗಳು ಹತ್ತಿರವಾಗುತ್ತಿದ್ದವು. ಕೇರಿಯಲ್ಲಿ ಸಂಭ್ರಮ, ತೊಳಿ-ಬಳಿ ಕೆಲಸಗಳು ದೊಡ್ಡವರಿಗಾದರೆ ಪಟಾಕಿ ಶೇಖರಣೆ ನಮ್ಮ ಪಾಲು. ಹೆಚ್ಚು ಸದ್ದಿನ ಪಟಾಕಿಗಳನ್ನು ನಮ್ಮ ಮನೆಯಲ್ಲಿ ತರುವ ಪದ್ಧತಿ ಇಲ್ಲದ್ದರಿಂದ ಅಂತಹ ಪಟಾಕಿಗಳ ವ್ಯವಸ್ಥೆಯನ್ನು ಬೇರೆ ಸ್ನೇಹಿತರ ಜೊತೆ ಡೀಲ್ ಕುದುರಿಸಿಕೊಂಡು ಮಾಡಬೇಕಿತ್ತು. ತಮ್ಮನ ಸ್ನೇಹಸಾಗರ ದೊಡ್ಡದು, ಹಾಗಾಗಿ ಅವನು ನಮ್ಮಿಂದ ಸುರಸುರ ಬತ್ತಿಗಳನ್ನು ಒಯ್ದು ಅಲ್ಲಿಗೆ ತಲುಪಿಸಿ, ಅಲ್ಲಿಂದ ಲಕ್ಷ್ಮಿ ಪಟಾಕಿ ಆನೆ ಪಟಾಕಿ ಕುದುರೆ ಪಟಾಕಿ ತರುತ್ತಿದ್ದನು. ಹೀಗಾಗಿ ದೊಡ್ಡವರಿಂದ ಅವನನ್ನು ಶತಾಯಗತಾಯ ಕಾಪಾಡುವ ಹೊಣೆ ನಮ್ಮ ಮೇಲಿರುತ್ತಿತ್ತು.

ದೀಪಾವಳಿಯ ದಿನ ಬಂದೇ ಬಂತು, ಕಾಯುತ್ತಿದ್ದ ಸಂಜೆಯೂ ಆಯಿತು. ಪೂಜೆ ಮುಗಿದು ದೀಪ ಹಚ್ಚಿದ ಮೇಲೆ ಎಲ್ಲರ ಕಣ್ಣೊರೆಸಲು ಒಂದೋ ಎರಡೋ ಸುರಸುರ ಬತ್ತಿಗಳನ್ನು ಹಚ್ಚಿ ಮೆಲ್ಲನೆ ನಮ್ಮ ಭಂಡಾರ ಬಿಚ್ಚಿ ಢಮ್ ಢಮಾರ್ ಪಟಾಕಿಗಳನ್ನು ಶುರು ಹಚ್ಚಿದೆವು. ಗಂಟೆ ಕಳೆಯುವಷ್ಟರಲ್ಲಿ ನಮ್ಮ ಸಂಭ್ರಮ ಮುಗಿಲು ಮುಟ್ಟಿತ್ತು. ಕೇರಿಯ ಇತರ ಮನೆಗಳವರು ನಮ್ಮನ್ನು ನೋಡಿ ಮೂತಿ ತಿರುವಿಕೊಂಡು ಬಾಗಿಲು ಮುಚ್ಚಿ ಒಳಹೋದರು. ಅವರೆಲ್ಲ ಎದ್ದು ಒಳ ಹೋದ ಮೇಲೆ ನಮ್ಮ ಸ್ವೇಚ್ಛೆ ಮುಗಿಲು ಮುಟ್ಟಿ ಅಲ್ಲಿಯವರೆಗೂ ಊದಿನ ಕಡ್ಡಿಯಲ್ಲಿ ಹಚ್ಚುತ್ತಿದ್ದ ಪಟಾಕಿಗಳನ್ನು ಈಗ ಕೈಲಿ ಹಿಡಿದು ಹಚ್ಚಿ ಆಕಾಶದೆಡೆಗೆ ತೂರತೊಡಗಿದೆವು.

ಅಷ್ಟರಲ್ಲೇ ಪಕ್ಕದ ಮನೆಯ ಜಾನಕಮ್ಮನವರು ಹಬ್ಬದ ಮಡಿಯೂಟ ಮುಗಿಸಿ ಬಾಳೆಲೆಯನ್ನು ಬೀದಿ ಕೊನೆಯ ತಿಪ್ಪೆಗೆ ಬಿಸಾಡಲೆಂದು ಹೊರಟರು. ಮಕ್ಕಳಿಲ್ಲದ ಅವರ ಮನೆಯಲ್ಲಿ ಹಬ್ಬವೆಂದರೆ ಬರೀ ದೀಪ, ಊಟ ಹಾಗೂ ಮಡಿ ಅಷ್ಟೇ. ಇದೆಲ್ಲಾ ಮುಗಿಸಿ ನಮ್ಮ ಮನೆಯ ಪಡಸಾಲೆಯನ್ನು ದಾಟಿ ಹೊರಟವರ ಕಾಲಿನಲ್ಲೇ ಒಂದು ಲಕ್ಷ್ಮೀ ಪಟಾಕಿ ದುಸುಮುಸುಗುಡುತ್ತಿತ್ತು. ನಾವು ಕೂಗಲೂ ಮೊದಲೇ ಪಟಾಕಿಯ ಮೇಲೆ ಬಂದ ಇವರನ್ನು ನೋಡಿ ಕಥೆ ಮುಗಿಯಿತೆಂದು ನಾವೆಲ್ಲರೂ ಕಣ್ಣು ಕಿವಿ ಮುಚ್ಚಿಕೊಂಡೆವು. ಇನ್ನೇನು ಪಟಾಕಿಯ ಬೆಂಕಿ ಅವರ ರೇಷ್ಮೆ ಸೀರೆಯ ಅಂಚಿಗೆ ಅಂಟಿಕೊಂಡು ಮುಂದೇನಾಗಬಹುದೆಂಬ ಭಯಕ್ಕೆ ಉಸಿರೇ ನಿಂತು ಹೋಯಿತು. ಆಗಬಹುದಾದ ಅನಾಹುತವನ್ನು ನಿರೀಕ್ಷಿಸಿದ ದತ್ತನು ಅವರನ್ನು ಹೇಗಾದರೂ ಪಾರು ಮಾಡಬೇಕೆಂದು ಆಂಟೀ ಎಂದು ಕೂಗುತ್ತಲೇ ಓಡಿದನು. ಸ್ವಲ್ಪ ಕಿವುಡಿದ್ದ ಜಾನಕಮ್ಮನವರಿಗೆ ಇದು ಕೇಳಲೇ ಇಲ್ಲ. ಇವನು ಏನೂ ಮಾಡಲು ತೋಚದೇ ಧಿಗ್ಗನೆ ಮುಂದಕ್ಕೋಡಿ ಅವರನ್ನು ನೂಕಿಬಿಟ್ಟನು. ಪಟಾಕಿ ಏನೋ ಸೀರೆಗೆ ತಗುಲದೇ ಸಿಡಿಯಿತು, ಆದರೆ ಜಾನಕಮ್ಮನವರ ಹಿಂದಲೆ ರಸ್ತೆಯ ಮೇಲೆ ಹೊರಟಿದ್ದ ಕೂಳೆಗಲ್ಲಿನ ಮೇಲೆ ಧಡ್ಡನೆ ಬಿತ್ತು.

ಚೂಪಾದ ಕಲ್ಲು ಕುತ್ತಿಗೆಯ ನರಕ್ಕೆ ಬಲವಾಗಿ ಕಚ್ಚಿಕೊಂಡಿತು. ಜಾನಕಮ್ಮನವರು ಏಳಲಾಗದೆ ಬಿದ್ದ ಜಾಗದಲ್ಲಿಯೇ ಮುಲಮುಲನೆ ಒದ್ದಾಡಿದರು. ಏನಾಯಿತೆಂದು ನಮಗೆ ತಿಳಿಯುವದರೊಳಗೆ ಅಕ್ಕಪಕ್ಕದ ಮೂರ್ನಾಲ್ಕು ಮನೆಯವರು ಹೊರಗೆ ಬಂದಿದ್ದರು. ಜಾನಕಮ್ಮನ ಪತಿ ನರಸಿಂಹರಾಯರು “ಅಯ್ಯೋ ಅಯ್ಯೋ ಅಯ್ಯೋ.. ಏನಾಯ್ತೇ ಏನಾಯ್ತೇ ನಿಂಗೇ..” ಎನ್ನುತ್ತಾ ಗಾಬರಿಯಲ್ಲಿ ಓಡಿ ಬಂದರು. ನಮ್ಮ ಮನೆಯಿಂದ ಅದಾಗಲೇ ನಮ್ಮ ಮೇಲೆ ಕೆಂಗಣ್ಣುಗಳು ಕೇಂದ್ರೀಕೃತವಾಗುತ್ತಿದ್ದವು. ತಿರುಗಿ ನೋಡುವಷ್ಟರಲ್ಲಿ ಆಚೆ ಬೀದಿಯ ಸ್ನೇಹಿತರು ಕಾಲು ಕಿತ್ತಿದ್ದರು. ನಾವಿಬ್ಬರೂ ಬೆಪ್ಪರಂತೆ ನಿಂತು ಏನೂ ಹೇಳಲಾಗದೆ ಪಿಳಿಪಿಳಿ ನೋಡುತ್ತಿದ್ದೆವು. ಅಕ್ಕಪಕ್ಕದ ಮನೆಯವರು ಕಥೆಯ ಪೂರ್ಣ ಸ್ವರೂಪವನ್ನು ತಮ್ಮದೇ ಶೈಲಿಯಲ್ಲಿ ಕಟ್ಟುತ್ತಿದ್ದರು. ಹೆಂಗಳೆಯರು ದತ್ತನನ್ನು ದೂರುವುದರಲ್ಲಿ ಸಂಪೂರ್ಣ ಮಗ್ನರಾಗಿದ್ದರು. ಇಬ್ಬರು ಗಂಡುಮಕ್ಕಳು ಜಾನಕಮ್ಮನವರನ್ನು ಎತ್ತಿ ಮನೆಗೆ ಕೊಂಡೊಯ್ದರು.

ತಮ್ಮನ ಸ್ನೇಹಸಾಗರ ದೊಡ್ಡದು, ಹಾಗಾಗಿ ಅವನು ನಮ್ಮಿಂದ ಸುರಸುರ ಬತ್ತಿಗಳನ್ನು ಒಯ್ದು ಅಲ್ಲಿಗೆ ತಲುಪಿಸಿ, ಅಲ್ಲಿಂದ ಲಕ್ಷ್ಮಿ ಪಟಾಕಿ ಆನೆ ಪಟಾಕಿ ಕುದುರೆ ಪಟಾಕಿ ತರುತ್ತಿದ್ದನು. ಹೀಗಾಗಿ ದೊಡ್ಡವರಿಂದ ಅವನನ್ನು ಶತಾಯಗತಾಯ ಕಾಪಾಡುವ ಹೊಣೆ ನಮ್ಮ ಮೇಲಿರುತ್ತಿತ್ತು.

ಅಂದು ಮಲಗಿದ ಜಾನಕಮ್ಮನವರು ಮತ್ತೆ ಮೇಲೇಳಲೇ ಇಲ್ಲ. ಒಂದು ವಾರದ ನಂತರ ಇದ್ದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ದಿಕ್ಕು ದೆಸೆಯಿಲ್ಲದ ನರಸಿಂಹರಾಯರು ಅಮ್ಮನನ್ನು ಕಳೆದುಕೊಂಡ ಪುಟ್ಟ ಮಗುವಿನಂತೆ ಗೋಳಾಡಿದರು. ಪಕ್ಕದಲ್ಲೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದ ನಮ್ಮ ಮನೆಯವರಿಗೆ ಅವರ ಒಂಟಿತನ ಕರಳು ಕಿವುಚುತ್ತಿತ್ತು. ಇಷ್ಟೇ ಆಗಿದ್ದರೆ ಇದೊಂದು ದೊಡ್ಡ ವಿಷಯವೇ ಆಗಿರುತ್ತಿರಲಿಲ್ಲ. ಆದರೆ ಮುಂದಿನ ಕೆಲವೇ ದಿನಗಳಲ್ಲಿ ಮಕ್ಕಳಿಲ್ಲದ ಜಾನಕಮ್ಮನ ಆಸ್ತಿಗೆ ಎಲ್ಲೆಲ್ಲಿಂದಲೋ ಕಂಡು ಕೇಳಿರದ ಹದ್ದುಗಳು ಬಂದು ಎಡತಾಕತೊಡಗಿದವು. ಇಳಿ ವಯಸ್ಸಿಗೆ ಆಸರೆಯಾಗಿದ್ದ ಜಾನಕಿಯನ್ನು ಕಳೆದುಕೊಂಡು ಈಗ ನರಸಿಂಹರಾಯರು ಅಕ್ಷರಶಃ ಅನಾಥರಾಗಿದ್ದರು. ಪೂಜೆ, ಮಡಿ, ಜಪ, ಅಡುಗೆ ಬಿಟ್ಟು ಬೇರೆ ಪ್ರಪಂಚವೇ ಗೊತ್ತಿರದ ಅವರು ಇಂತಹ ಪರಿಸ್ಥಿತಿಯನ್ನು ಹೇಗೂ ನಿಭಾಯಿಸದಾದರು. ನೋಡುನೋಡುತ್ತಾ ಒಂದು ತಿಂಗಳಲ್ಲೇ ಅವರ ಮನೆ ರಣರಂಗವಾಗಿ ಹೋಯಿತು.

ಸಭ್ಯತೆಯ ಸೋಗು ಹಾಕಿಕೊಂಡಿದ್ದ ಒಂದು ಬ್ರಾಹ್ಮಣ ಕುಟುಂಬವು ಆಸ್ತಿಗಾಗಿ ನರಸಿಂಹರಾಯರನ್ನು ಒಂದೇ ತಿಂಗಳಿನಲ್ಲಿ ಮಠ ಸೇರಿಸಿತು. ಪಕ್ಕದ ಮನೆ ಈಗ ಖಾಲಿಯಾಗಿತ್ತು. ಜೊತೆಗೆ ಬೆನ್ನ ಹಿಂದೆ ಆಡಿಕೊಳ್ಳುತ್ತಿದ್ದ ಧ್ವನಿಗಳು ಈಗ ನಮ್ಮ ಮನೆಗೇ ನೇರವಾಗಿ ತಲುಪತೊಡಗಿದವು. “ವಾಣೀ ನಿನ್ನ ಮಗನನ್ನು ಹೊರಗೆ ಬಿಡಬೇಡಮ್ಮಾ.. ಅವನಿಗೆ ಇನ್ನೂ ಎಷ್ಟು ಬಲಿ ಬೇಕೋ ಏನೋ.. ವಯಸ್ಸಾದವರು ಇರೋ ಕೇರಿ, ಇವನ ಹುಚ್ಚಾಟಕ್ಕೆ ಮತ್ತೆ ಬಲಿಯಾಗಬೇಕಾದೀತು.” ಅನ್ನುವವರು ಒಬ್ಬರಾದರೆ, ನನ್ನ ತಮ್ಮನು ಕೇರಿ ಬೀದಿಯನ್ನು ಹಾಯ್ದರೆ ಸಾಕು “ಅವನೇ ನೋಡ್ರೇ ಜಾನಕಮ್ಮನ್ನ ಕೊಂದೋನು. ಸಾಕಾಣಿಕೆ ನೆಟ್ಟಗಿಲ್ಲದಿದ್ದರೆ ಇದೇ ಕಥೆ.” ಎನ್ನುವ ಬಾಯಿಗಳು ಹಲವು. ನೀರು ಸೇದಲು ಮಠದ ಬಾವಿಯ ಬಳಿ ಹೋದರೆ ಸಾಕು “ಇರಪ್ಪಾ.. ಬಾವಿಯೊಳಗೆ ತಳ್ಳಿ ಬಿಟ್ಟೀಯಾ.. ಮೊದಲೇ ಕೈಲಾಗದವರು ನಾವು” ಎಂಬ ಕುಹಕ, ಏಕಾದಶಿ ಪೂಜೆಗೆಂದು ಮಠದೊಳಗೆ ಹೋದರೆ ಸಾಕು “ಬಂದ ನೋಡಿ ಅಮಾಯಕ, ದಾರಿ ಬಿಡಿ, ಹೆಹ್ಹೆಹ್ಹೇ..” ಎನ್ನುವ ಜನ.

ಕೆಲವೇ ದಿನಗಳಲ್ಲಿ ಕೇರಿಯ ಮಾತುಗಳು ಹುಚ್ಚು ಹಿಡಿಸಿ ಬಿಟ್ಟಿದ್ದವು. ಮನೆಯಲ್ಲಿ ಅಮ್ಮನೂ ಅಸಹಾಯಕಳಾಗಿದ್ದಳು. ಆದ ಪ್ರಮಾದದಲ್ಲಿ ಇವನ ಪಾತ್ರವೇನು ಎಂದು ಅವಳಿಗೆ ತಿಳಿಯಲೇ ಇಲ್ಲ. ನಾನು ಎಷ್ಟೇ ಬಿಡಿಸಿ ಹೇಳಲು ಪ್ರಯತ್ನಿಸಿದರೂ ಸಾಬರ ಹುಡುಗರ ಜೊತೆಗಿನ ಸ್ನೇಹ ಎಂಬ ಹಣೆಪಟ್ಟಿಯೇ ದೊಡ್ಡದಾಯಿತು. ಅದೇನೋ ಪ್ರಾಣ ತೆಗೆಯಲೆಂದೇ ಪಟಾಕಿ ಹಚ್ಚಿದನು ಎಂಬಂತೆ ಎಲ್ಲರೂ ಆಡತೊಡಗಿದರು. ಪರಿಸ್ಥಿತಿ ಕೈಮೀರಿ ತಮ್ಮನನ್ನು ಮಾನಸಿಕ ಖಿನ್ನತೆಗೆ ನೂಕಲು ಹೆಚ್ಚು ದಿನ ಬೇಕಾಗಲಿಲ್ಲ. ಖುಷಿಯಿಂದ ಸ್ವಚ್ಛಂದ ಹಕ್ಕಿಯ ಹಾಗೆ ಇರುತ್ತಿದ್ದ ಅವನು ಈಗ ಅಟ್ಟ ಬಿಟ್ಟು ಕೆಳಗೆ ಇಳಿಯುತ್ತಿರಲಿಲ್ಲ. ಗ್ಯಾರೇಜು ಕೆಲಸವನ್ನಂತೂ ನಿಲ್ಲಿಸಿಯೇ ಬಿಟ್ಟನು. ಆಚೆ ಬೀದಿಯ ಮುಫೀಸ್ ಕರೆಯಲು ಬಂದರೂ ಹೋಗುತ್ತಿರಲಿಲ್ಲ. ಶಾಲೆಗೆ ಹೋಗಿ ಒಂದು ವಾರವೇ ಕಳೆದಿತ್ತು. ಹೀಗೇ ಮುಂದುವರಿದರೆ ಅವನನ್ನು ನಾವು ಕಳೆದುಕೊಳ್ಳುವುದರಲ್ಲಿ ಸಂಶಯವೇ ಇರಲಿಲ್ಲ.

ಅದೊಂದು ದಿನ “ನಾನೇ ಸಾಯಿಸಿದ್ದು… ನಾನೇ ಸಾಯಿಸಿದ್ದು..” ಎಂದು ಜೋರಾಗಿ ಅಳುತ್ತಾ ದೋಸೆ ಮಗುಚುವ ಕೈಯನ್ನು ಕಾಯಿಸಿ ಮೈಮೇಲೆಲ್ಲಾ ಬರೆ ಬಳಿದುಕೊಂಡನು. ಕಣ್ಣೆದುರೇ ಇದೆಲ್ಲಾ ನಡೆಯುತ್ತಿದ್ದರೂ ಕೇರಿಯ ಮಾತುಗಳನ್ನು ಅರಗಿಸಿಕೊಳ್ಳಲಾಗದ ಪೋಷಕರು… ಏನೂ ಹೇಳಲಾಗದ, ಹೇಗೂ ಎದುರಿಸಲಾಗದ ನೆರೆಹೊರೆಯವರು… ತಮ್ಮನ ಅಸಹಾಯಕ ಸ್ಥಿತಿ… ಇವೆಲ್ಲವೂ ಯಾಕೋ ಭಯಾನಕವಾಗಿ ಕಂಡವು. ಹೀಗೇ ಬಿಟ್ಟರೆ ಇನ್ನು ನಾವು ಪುಟ್ಟನನ್ನು ಕಳೆದುಕೊಂಡುಬಿಡುವೆವು ಎಂದು ಭಯವಾಗುತ್ತಿತ್ತು.

ಶಾಲೆಯಲ್ಲಿ ನಡೆದದ್ದನ್ನೆಲ್ಲ ಸವಿವರವಾಗಿ ತಿಳಿಸಿ, ಇನ್ನೂ ಕೆಲವು ದಿನ ಕಳಿಸುವುದಿಲ್ಲವೆಂದು ಹೇಳಿ, ಅದೇ ದಿನ ಸಂಜೆ ಅಮ್ಮನಿಗೆ ಹೇಳಿದವಳೇ ಯಾರ ಉತ್ತರಕ್ಕೂ ಕಾಯದೇ ಅವನನ್ನು ಕರೆದುಕೊಂಡು ನಮ್ಮ ಮನೆಯಿಂದ ನಾಲ್ಕೈದು ಕಿ.ಮೀ. ದೂರದ ಚಿಕ್ಕಪ್ಪನ ಮನೆಗೆ ಹೋಗಿಬಿಟ್ಟೆನು. ಹದಿನೈದು ದಿನಗಳು ಅವನನ್ನು ಓಲೈಸುವುದರಲ್ಲೇ ಕಳೆದುಹೋಯಿತು. ಅವನಿಂದ ಯಾವ ತಪ್ಪೂ ಆಗಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವಷ್ಟರಲ್ಲಿಯೇ ನನ್ನ ಅರ್ಧ ಕಸುವು ತೀರಿ ಹೋಗಿತ್ತು. ನಾನು ಸಹ ಅವನಿಗಿಂತ ತುಂಬಾ ದೊಡ್ಡವಳೇನೂ ಆಗಿರಲಿಲ್ಲ. ನಮಗೆ ಕೇವಲ ಮೂರು ವರ್ಷದ ಅಂತರ ಅಷ್ಟೆ! ಚಿಕ್ಕಮ್ಮ ಚಿಕ್ಕಪ್ಪ ಸಹ ನನ್ನ ಪ್ರಯತ್ನದಲ್ಲಿ ಕೈಜೋಡಿಸಿದರು. ಎರಡು ವಾರ ಕಳೆಯುವಷ್ಟರಲ್ಲಿ ಪುಟ್ಟನಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂತು. ಈಗ ಅವನು ನಗುನಗುತ್ತಾ ನಮ್ಮೆಲ್ಲರ ಜೊತೆ ಕೂತು ಮಾತನಾಡುವಷ್ಟು ಹುಷಾರಾಗಿದ್ದನು.

ಸ್ವಲ್ಪ ಕಾಲ ಕಳೆದು ಅಮ್ಮನ ಜೊತೆಗೊಮ್ಮೆ ಶಾಲೆಗೆ ಕರೆದುಕೊಂಡು ಹೋಗಿ ನಡೆದದ್ದನ್ನೆಲ್ಲಾ ಅವನ ಶಿಕ್ಷಕರಿಗೆ ವಿವರಿಸಿ ಅವನಿಗೆ ಸ್ವಲ್ಪ ಸಮಯ ಕೊಡುವಂತೆ ವಿನಂತಿಸಿಕೊಂಡೆವು. ಪುಣ್ಯಕ್ಕೆ ಶಾಲೆಯವರು ಸಹಕರಿಸಿದರು. ಪುಟ್ಟನನ್ನು ಅಮ್ಮನ ಹಾಗೆ ಪ್ರೀತಿಸುತ್ತಿದ್ದ ಅವನ ಕ್ಲಾಸ್ ಟೀಚರ್ ಹೋದ ಕೂಡಲೇ ಅವನನ್ನು ತಬ್ಬಿ ಹಣೆಗೆ ಮುತ್ತಿಟ್ಟು “ಎಲ್ಲೋ ಹೋಗಿದ್ದೆ? ಇಷ್ಟು ದಿನ ಎಷ್ಟು ಬೇಜಾರಾಯ್ತು ಗೊತ್ತಾ..” ಎಂದು ತರಗತಿಯ ಒಳಗೆ ಕರೆದುಕೊಂಡು ಹೋದರು. ನಾನು ಅಮ್ಮ ಇಬ್ಬರು ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟೆವು. ಕೆಲವು ದಿನಗಳಲ್ಲೇ ಎಲ್ಲವೂ ಮಾಮೂಲಿನಂತಾಯಿತು. ಅವನು ಸಂಪೂರ್ಣ ಸರಿ ಹೋಗುವವರೆಗೂ ನಾವು ಅವನ ಬೆನ್ನ ಹಿಂದೆಯೇ ಇರುತ್ತಿದ್ದೆವು. ಯಾರಾದರೂ ಅವನನ್ನು ಕುಹಕವಾಡಿದರೆ ಮುಖಕ್ಕೆ ರಾಚುವಂತೆ ನಾನೇ ಉತ್ತರ ಕೊಡುತ್ತಿದ್ದೆ. ಹಲವು ದಿನಗಳವರೆಗೆ ನನ್ನ ಬೆನ್ನ ಹಿಂದೆಯೇ ಅಡಗಿಕೊಂಡಿರುತ್ತಿದ್ದ ಅವನನ್ನು ನನ್ನ ಹೆತ್ತ ಕೂಸಿನಂತೆಯೇ ನೋಡಿಕೊಂಡದ್ದು ಈಗ ನೆನಪು.

ಯುಗಾದಿ ಬರುವಷ್ಟರ ಹೊತ್ತಿಗೆ ಅವನು ಮಾಮೂಲಿನಂತಾಗಿದ್ದ. ಮತ್ತೆ ಪಕ್ಕದ ಬೀದಿಯ ಸ್ನೇಹಿತರೊಂದಿಗೆ ಸೈಕಲ್ನಲ್ಲಿ ಹೋಗಿ ಮಾವಿನ ಸೊಪ್ಪು ಕಿತ್ತು ತಂದಿದ್ದ. ಹೋಗುವಾಗ ಜೇಬಿನಲ್ಲಿ ಬೆಲ್ಲ ಮುರಿದುಕೊಂಡು ಬೇವಿನ ಹೂವಿನ ಜೊತೆಗೆ ಬೆಲ್ಲ ತಿಂದಾಗ ಹೇಗಿರುತ್ತದೆಂದು ಮುಫೀಜ್ ನಿಗೂ ಅವನ ಸ್ನೇಹಿತರಿಗೂ ತೋರಿಸಿದ್ದ. ಅವರ ಗ್ಯಾರೇಜಿನಲ್ಲಿ ಸ್ವಂತದ ಕಾರು ತಯಾರಿ ಮತ್ತೆ ಶುರುವಾಗಿತ್ತು. ತಾನೇ ತಯಾರಿಸಿದ ಕಾರಿನಲ್ಲಿ ಮನೆಯವರನ್ನೆಲ್ಲಾ ಪ್ರವಾಸ ಕರೆದುಕೊಂಡು ಹೋಗಬೇಕೆಂಬುದು ಅವನ ಕನಸು. ಕೆಲವೇ ವರುಷಗಳ ಕೆಳಗೆ ನಿಜವಾದ ಕಾರೊಂದನ್ನು ಕೊಂಡು ಎಲ್ಲರನ್ನೂ ಪ್ರವಾಸ ಕರೆದೊಯ್ಯುವಾಗ ನಾನು ಒಂದು ಕೂಸಿನ ತಾಯಿ. ನಡೆದದ್ದನ್ನೆಲ್ಲಾ ಆ ಕಾರಿನಲ್ಲಿ ಕೂತು ನೆನೆಯುವಾಗ ಒಂದು ಕನಸಿನಂತೆ ಭಾಸವಾಗುತ್ತಿತ್ತು.

ಈಗಲೂ ಮಠದ ಕೇರಿಯ ಅದೇ ಹನುಮನ ಗುಡಿಯಲ್ಲಿ ನನ್ನ ಮಗಳು ಶನಿವಾರದ ಭಜನೆ ಮಾಡುತ್ತಿದ್ದರೆ ಗುಡಿಯ ಮುಂದಿನ ಪ್ರಾಂಗಣ ನನಗೆ ಬೇರೆಯದೇ ಕಥೆ ನೆನಪಿಸುತ್ತದೆ. ದೀಪಾವಳಿಗಳಂತೂ ಈ ನೆನಪಿಲ್ಲದೆ ಮುಗಿಯುವುದೇ ಇಲ್ಲ.