ಅವಳ ಕಡಲಿನ ಪೂರಾ ಅವನದೇ ನಾವೆಗಳು. ಕಡುಗತ್ತಲಲ್ಲಿ ಬೀಳುವ ಕನಸುಗಳಿಗೆ ಆತನೇ ಕಂದೀಲು. ಇಂತಹ ಪ್ರೇಮದ ಪರಿಯ ವಿವರಣೆ ಆಕೆ ನೀಡುವುದು ಸ್ವತಃ ಆತನ ಮಗನಿಗೆ. ಆದರೆ ಡೇವಿಡ್‌ಗೆ ಎರಡು ಕಹಿ ಗುಳಿಗೆಗಳು ನೆನಪಿದೆ. ಒಂದು ತನ್ನ ಹೆತ್ತವ್ವ ಜನನಿಯಲ್ಲ ಎಂದು. ಮತ್ತು ತನ್ನ ತಂದೆ ಅನಿರೀಕ್ಷಿತ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆಂದು. ಅರ್ಥಾತ್ ಜನನಿಯ ಪ್ರೇಮ ತನ್ನ ನಿಗದಿತ ತಂಗುದಾಣವನ್ನು ತಲುಪುವುದಿಲ್ಲ ಎಂಬುದೇ ಆಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮರ್ಫಿ’ ಸಿನಿಮಾದ ವಿಶ್ಲೇಷಣೆ
ಅವಳೆಂದರೆ ಮನದಾಳದ ಕೊನೆಯಾಸೆಯಂತೆ
ಅವಳಿಲ್ಲದ ಕಡು ಹುಣ್ಣಿಮೆ ಸುಡುಗಾಡಿನಂತೆ
ನೆನಪೆನ್ನಲೇ ಕನಸೆನ್ನಲೇ ನನಸೆನ್ನಲೇ
ಈ ಒಲವೆಂಬುದು ಮಳೆಗಾಲ ಬಾಯಾರಿದಂತೆ
-ಯೋಗರಾಜ್ ಭಟ್
ಈ ನೆನಪುಗಳೆಂದರೆ ಹಾಗೆಯೇ. ತಿರು ತಿರುಗಿ ಬರುವ ಅನುಬಂಧದ ಪಲ್ಲವಿಯದು. ಎಲ್ಲೆಯೇ ಇಲ್ಲದ, ಅನಂತ ಮೈಲುಗಳತ್ತ ಕಂಬಳಿ ಹೊದ್ದ ಬಾನಿನಂತೆ ಅಗಾಧ ಈ ನಿತ್ಯ ಮಲ್ಲಿಗೆ ನೆನಪಿನ ಜಾದೂ. ಆದರೆ ವಾಸ್ತವದ ವಿರುದ್ಧವದು. ಮಾಸಿ ಹೋದ ವಾಕ್ಯಗಳು ಮರಳಿ ಮೂಡಬಲ್ಲವಾದರೂ, ಅದು ಪುನರಾವರ್ತನೆಯೆನಿಸಿಕೊಳ್ಳುತ್ತದೆ. ಮತ್ತೆ ಸಂಜೆ ಮರಳಿದರೂ ಅದು ನಿನ್ನೆಯದಲ್ಲ. ಕಾಲವೂ ಅಷ್ಟೇ. ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ಇಂದಿಗೆ. ಎಲ್ಲವೂ ರದ್ದಿ ಹಗಲಿನ ನಶೆ ಕಳೆಯುವುದರೊಳಗೆ. ಸಾಗರದ ಅಲೆಗಳು ಬೊಗಸೆಯಲ್ಲಿ ಹಿಡಿದುಕೊಂಡುಹೋದ ಮರಳು, ಮಳೆ ಬಿಟ್ಟು ಹೋದ ಹನಿಗಳು, ಪಯಣವೊಂದು ದಾಟಿದ ಅಪರಿಮಿತ ಹಾದಿಗಲ್ಲುಗಳು ಎಲ್ಲವೂ ಇಲ್ಲಿ ನೆನಪಿನಂತೆಯೇ. ಆದರೆ ಕೈಜಾರಿ ಬಿದ್ದ ಎಲೆ ಮತ್ತೆ ಮರವ ಕೂಡುವಂತಾದರೆ, ಸಂತೆಯ ಸುಳಿಯಲ್ಲಿ ಕಳೆದುಹೋದ ಪುಟ್ಟ ಅಂಗೈ ಮರಳಿ ತಾಯಿಯ ಗಲ್ಲವ ಸವರಿದರೆ, ಹೇಳದೆ ಹೋದ ಅವಳು ಸೂಚನೆಯೇ ನೀಡದೆ ಮರಳಿದರೆ, ಮರದ ದಿಮ್ಮಿಗಳು ನುಂಗಿದ ಅಮ್ಮ ವಾಪಸು ಬಂದು ನಕ್ಕರೆ ಹೀಗೆ ಅದೆಷ್ಟೋ ‘ಆದರೆ’ಗಳನ್ನು ಬದುಕು ಬಯಸುತ್ತದೆ.

(ಬಿ ಎಸ್ ಪಿ ವರ್ಮಾ)
ಆದರೆ ಇಲ್ಲೊಂದು ವಿಧಿಯೆoಬ ಪಾತ್ರವಿದೆ. ಇದು ಭ್ರಮೆಯೋ ಅಥವಾ ಕಾಲದ ಮುಖವಾಡವೋ ಒಟ್ಟಾರೆಯಾಗಿ ಇಲ್ಲಿ ನಡೆವ ಬಹುತೇಕ ಸಂಗತಿಗಳು ನಮ್ಮ ನಿಯಂತ್ರಣಕ್ಕೂ ಮೀರಿದವು. ‘Everything is already decided; we are merely the face of it.ʼ ಎಂಬುದು ಬದುಕಿನ ಹಾದಿ ಹಾಡುವ ಪರಿ. ಹೀಗೆ ಘಟಿಸಿದ ಸಂಗತಿಗಳು ಮತ್ತೆ ಮರಳಿದರೆ, ದಾಟಿದ ನೆನಪಿನ ನದಿಯ ಒಡಲಿಗೆ ಮತ್ತೆ ಮರಳುವಂತಾದರೆ ಜೀವಗಳ ಹಾಡು ಪಾಡೇನು ಎಂದು ವಿವರಿಸುವ ಭಾವುಕ ಬದುಕಿನ ಸಂಚಿಯೇ ‘ಮರ್ಫಿ’.
ಆತ ಡೇವಿಡ್ ಮರ್ಫಿ. ಅಜ್ಜ ರಿಚ್ಚಿಯೊಂದಿಗೆ ವಾಸ. ಮನೆಯಲ್ಲೊಂದು ಹಳೆಯ ಮರ್ಫಿ ರೇಡಿಯೋ. ಗಂಟಲು ನೋವಿನಿಂದ ಬಳಲುತ್ತಿದ್ದ ಅದು ಕ್ರಮೇಣ ಮಾತು ಬಿಟ್ಟಿದೆ. ತಜ್ಞರ ತಹಬದಿಗೂ ಸಿಲುಕದೆ ಮೌನವಾಗಿದೆ. ಅಷ್ಟಲ್ಲದೆ, ತಾತ ರಿಚ್ಚಿ ಆ ಬಾನುಲಿಯನ್ನು ತನ್ನ ಮೊಮ್ಮಗನಿಗೆ ಯಾವುದೋ ಕಾರಣವೊಂದರ ಹಿನ್ನೆಲೆಯಲ್ಲಿ ಮುಟ್ಟಲೂ ಬಿಡುತ್ತಿರಲಿಲ್ಲ. ಹೀಗೆ ರಿಚ್ಚಿ ಮನೆಯಲ್ಲಿ ಇಲ್ಲದೇ ಹೋದಾಗ ಡೇವಿಡ್ ಕೆಲವು ಸೂಚನಾ ಪತ್ರಿಕೆಗಳ ಸಹಾಯದಿಂದ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ. ಅತ್ಯಾಶ್ಚರ್ಯವೆಂಬಂತೆ ಆ ಆಕಾಶವಾಣಿ ಮಾತು ಹೊರಡಿಸುತ್ತದೆ. ಆದರೆ ಆ ಕಡೆಯಿಂದ ಹೆಣ್ಣಿನ ದನಿ. ಥೇಟು ಟೆಲಿಫೋನಿಂತೆ ಮಾತನಾಡಲು ಸಾಧ್ಯವಾಗಿದೆ, ಕೇಳಿಸಿಕೊಳ್ಳಲೂ ಕೂಡ. ಅತ್ತ ಕಡೆಯಿಂದ ಬಂದ ದನಿ ಜನನಿಯದ್ದು. ಹಾಗಾದರೆ ಯಾರವಳು? ಡೇವಿಡ್ ಅವಳೊಂದಿಗೆ ಮಾತನಾಡುತ್ತಾ ಸಾಗುತ್ತಾನೆ. ಅವಳು 90 ರ ದಶಕದ ವಿಶ್ವಕಪ್ ನೇರಪ್ರಸಾರದ ಬಗ್ಗೆಯೂ, ಮ್ಯಾಚಿನ ಸ್ಥಿತಿಗತಿ, ಸಚಿನ್ ತೆಂಡುಲ್ಕರ್ ಹೊಡೆಯಬಹುದಾದ ರನ್ನುಗಳೆಲ್ಲವನ್ನೂ ಊಹಿಸುತ್ತಾ ಕುಳಿತಿರುತ್ತಾಳೆ. ಆದರೆ ಡೇವಿಡ್‌ನ ಕಾಲಘಟ್ಟ ಬಹಳಷ್ಟು ಮುಂದಿದೆ. ಆ ಪಂದ್ಯದ ಫಲಿತಾಂಶವೂ ಡೇವಿಡ್‌ಗೆ ತಿಳಿದಿದೆ. ಯಾಕೆಂದರೆ ಅದು ಡೇವಿಡ್‌ನ ಪ್ರಸಕ್ತ ಸಮಯಕ್ಕೆ ಹೋಲಿಸಿದರೆ ಭೂತಕಾಲ. ಹಾಗಾದರೆ ರೇಡಿಯೋದಲ್ಲಿ ಕಂಠವಿಟ್ಟ ಜನನಿ ಈ ಕಾಲಘಟ್ಟದವಳಲ್ಲ. ‘ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ ಎತ್ತಣಿoದೆತ್ತ ಸಂಬಂಧವಯ್ಯ’ ಎಂಬಂತೆ ಡೇವಿಡ್ ಮತ್ತು ಜನನಿಯ ಸಂಬಂಧಗಳು ರೂಪುಗೊಂಡು ಬಿಡುತ್ತವೆ. ಹೀಗೆ ಮಾತು ಬೆಳೆದು, ವಿಚಾರಗಳು ಮಂಥನಗೊಂಡು ತಿಳಿವ ಅಂಶವೆಂದರೆ ಜನನಿ ಡೇವಿಡ್ ಮರ್ಫಿಯ ತಂದೆಯ ಪ್ರಿಯತಮೆ. ತನ್ನ ಬೋಧಕರಾಗಿದ್ದ ಡೇವಿಡ್ ತಂದೆಯ ಮೇಲೆಯೇ ಆಕೆಗೆ ಅನುರಾಗ. ಅವಳ ಕಡಲಿನ ಪೂರಾ ಅವನದೇ ನಾವೆಗಳು. ಕಡುಗತ್ತಲಲ್ಲಿ ಬೀಳುವ ಕನಸುಗಳಿಗೆ ಆತನೇ ಕಂದೀಲು. ಇಂತಹ ಪ್ರೇಮದ ಪರಿಯ ವಿವರಣೆ ಆಕೆ ನೀಡುವುದು ಸ್ವತಃ ಆತನ ಮಗನಿಗೆ. ಆದರೆ ಡೇವಿಡ್‌ಗೆ ಎರಡು ಕಹಿ ಗುಳಿಗೆಗಳು ನೆನಪಿದೆ. ಒಂದು ತನ್ನ ಹೆತ್ತವ್ವ ಜನನಿಯಲ್ಲ ಎಂದು. ಮತ್ತು ತನ್ನ ತಂದೆ ಅನಿರೀಕ್ಷಿತ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆಂದು. ಅರ್ಥಾತ್ ಜನನಿಯ ಪ್ರೇಮ ತನ್ನ ನಿಗದಿತ ತಂಗುದಾಣವನ್ನು ತಲುಪುವುದಿಲ್ಲ ಎಂಬುದೇ ಆಗಿದೆ. ಹೀಗೆ ಎರಡು ವಿಭಿನ್ನ ಕಾಲಮಾನಗಳ ಮಧ್ಯೆ ಕಥೆ ಕಾಲಿಟ್ಟು ಸಾಗುತ್ತದೆ. ಒಂದೆಡೆ ಭೂತದ ಸಂತಸದ ಸಮಯಗಳು. ಇನ್ನೊಂದೆಡೆ ಅಮಾನುಷ ಪ್ರಸ್ತುತ. ಎರಡರ ಮಧ್ಯದ ತಾಕಲಾಟಗಳು, ಬದುಕಿನ ಸುತ್ತಲೂ ಗಡಿಯಾರದ ಮುಳ್ಳಿನಂತೆ ಸುತ್ತು ಹೊಡೆಯುವ ಪರಿಯ ಸಂಕಲನವೇ ‘ಮರ್ಫಿ’
ಭಗವದ್ಗೀತೆಯಲ್ಲಿ ಕಾಲದ ಕುರಿತು ಕೃಷ್ಣನ ಮಾತೊಂದಿದೆ. ‘ಕಾಲಾಯ ತಸ್ಮೈ ನಮಃ’ ಎಂದು. ಅಂದರೆ ಕಾಲದ ಮುಂದೆ ನಾವೆಲ್ಲಾ ತರಗೆಲೆಗಳು. ಸಣ್ಣ ಗಾಳಿಗೂ ತಲೆ ತಿರುಗಿ ಉದುರಬಹುದು. ಬಿರುಗಾಳಿಗೂ ಯಾರು ತಿಳಿಯರು ನನ್ನ ಭುಜ ಬಲದ ಪರಾಕ್ರಮ ಎಂದು ಸೆಟೆದು ನಿಲ್ಲಬಹುದು. ಹಾಗೆಯೇ ವಿಜ್ಞಾನದ ಪ್ರಮುಖ ‘Relative’ ‘ಅಲ್ಬರ್ಟ್ ಐನ್ ಸ್ಟೈನ್’ ಮಾತೊಂದಿದೆ. ‘Time is an illusion. Past, Present, Future will not changeʼ ಎಂದು. ತತ್ವಶಾಸ್ತ್ರ, ಭೌತಶಾಸ್ತ್ರ ಹಾಗೂ ಅಧ್ಯಾತ್ಮದ ಕನ್ನಡಿಯಲ್ಲಿ ಸಮಯವೆಂದರೆ ಅದೊಂದು ಭ್ರಮೆ. ಭೌತಶಾಸ್ತ್ರದ ದೃಷ್ಟಿಯಲ್ಲಿ, ಅಂದರೆ ಐನ್ ಸ್ಟೈನ್‌ರ Theory of Relativity ಪ್ರಕಾರ, ಸಮಯ ಒಂದು ಸ್ಥಿರತೆಯಲ್ಲ, ಅದು ವಸ್ತು ಮತ್ತು ವೇಗದ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಹೆಚ್ಚು ವೇಗದಲ್ಲಿ ಚಲಿಸುವ ವ್ಯಕ್ತಿಗೆ ಸಮಯ ನಿಧಾನಗತಿಯಲ್ಲಿರುವಂತೆ ಅನುಭವವಾಗಬಹುದು. ಇನ್ನು ತತ್ತ್ವಶಾಸ್ತ್ರದಲ್ಲಿ, ಸಮಯವು ನಮ್ಮ ಮನಸ್ಸಿನ ಕಲ್ಪನೆಯಾಗಿರಬಹುದು ಎಂಬ ಮಾತಿದೆ. ಜರ್ಮನ್ ತತ್ತ್ವಜ್ಞ ‘ಇಮ್ಮಾನುಯೆಲ್ ಕಾಂಟ್’ ಪ್ರಕಾರ, ಸಮಯ ಮತ್ತು ಸ್ಥಳ ನಮ್ಮ ಮನಸ್ಸು ಜಗತ್ತನ್ನು ಹೇಗೆ ಗ್ರಹಿಸುತ್ತದೆ ಎಂಬುದಕ್ಕೆ ಸಂಬಂಧಿತವಾಗಿದೆ. ಅರ್ಥಾತ್, ಕಾಲವು ವಾಸ್ತವವಲ್ಲ, ಅದು ಕೇವಲ ನಮ್ಮ ಅನುಭವದ ಒಂದು ಭಾಗ. ಹಾಗೂ ಸಮಯವು ಮಾನವನ ಮನಸ್ಸಿನಿಂದಲೇ ಸೃಷ್ಟಿಯಾಗುತ್ತದೆ ಮತ್ತು ಅದು ಅಸ್ತಿತ್ವದಲ್ಲಿಲ್ಲ ಎಂದು ಆಧ್ಯಾತ್ಮ ಹೇಳುತ್ತದೆ. ಇವೆಲ್ಲದರ ಬೆಳಕನ್ನು ಹಿಡಿದು ಪ್ರಸ್ತುತ ಮತ್ತು ಭೂತಕಾಲಕ್ಕೊಂದು ಸೇತುವೆಯ ಹಾಕಿ, ಬದಲಿಸಬಹುದೇ ಸಮಯದ ಆಟವನ್ನು ಎಂದು ವಿಮರ್ಶೆಯ ನೆಲೆಗಟ್ಟಿನಲ್ಲಿ ನೋಡುವ ಕಥಾನಕ ಇಲ್ಲಿದೆ. ‘Time Travel’ ಜಾನರಿಗೆ ಸೇರುವ ಈ ಚಿತ್ರ ಅದಕ್ಕೂ ಮಿಗಿಲಾದ ಚಿಂತಾನಾತ್ಮಕ ನೆಲೆಗಟ್ಟಿಗೆ ರಹದಾರಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಈ ಚಿತ್ರದ ಮೆರುಗು ಪ್ರಭು ಮುಂಡ್ಕೂರು, ರೋಶಿನಿ ಪ್ರಕಾಶ್ ಮತ್ತು ದತ್ತಣ್ಣ. ಕೊಂಕಣ ಮನೆತನದ ಹುಡುಗ ಡೇವಿಡ್ ಮರ್ಫಿಯಾಗಿ ಪ್ರಭು ಮುಂಡ್ಕೂರು ಅಭಿನಯ ಅದ್ಭುತ. ಕೊಂಕಣಿ ಮತ್ತು ಇಂಗ್ಲಿಷ್ ಮಾತಿನ ವೈಖರಿ ಎಲ್ಲವೂ ತೀರಾ ಸ್ವಾಭಾವಿಕ. ಇನ್ನು ರೋಶಿನಿ ಪ್ರಕಾಶ್. ಸರಳ ಪಾತ್ರಗಳಲ್ಲಿರುವ ಸಂಕೀರ್ಣತೆಗಳನ್ನು ಅತ್ಯುತ್ತಮವಾಗಿ ಪ್ರಸ್ತುತ ಪಡಿಸಬಲ್ಲ ಕನ್ನಡದ ಕೆಲವೇ ನಟಿಯರ ಪೈಕಿ ಮುಂದಿನ ಸಾಲಿನಲ್ಲಿರುವವರು. ಅವರ ಕವಲುದಾರಿಯ ಪ್ರಿಯಾ, ಇಲ್ಲಿನ ಜನನಿ ಅದೆಷ್ಟು ಸಲೀಸು ಪಾತ್ರ ಪ್ರಸ್ತುತಿ ಅನ್ನಿಸುವಂತೆ ಮಾಡುವಂಥದ್ದು. ಇನ್ನು ದತ್ತಣ್ಣ, ಮೆಸ್ಸಿ ಗೋಲುಗಳ ಸುರಿಮಳೆಯ ಹೊಡೆಯುವುದು ಹೇಗೆ ಮಾಮೂಲಿಯೋ, ಹಾಗೆಯೇ ಇವರ ಅಭಿನಯ ನೈಪುಣ್ಯತೆ. ಇಲ್ಲಿನ ಇನ್ನೊಂದು ಪ್ರಮುಖ ಅಂಶ ಸಿನಿಮಾಟೋಗ್ರಾಫಿ. ಆದರ್ಶರ ಕೆಲಸ, ಮಬ್ಬುಗತ್ತಲನ್ನು ಮೀರಿ ಸಾಗುವ ಹ್ಯಾಲೋಜನ್ ಬಲ್ಬಿನ ಕಣ್ಣಿನಂತೆ ಪ್ರಖರ ಮತ್ತು ನಿರ್ದಿಷ್ಟವಾಗಿದೆ. ಹಾಗೂ ವಿಶ್ವಶ್ರೇಷ್ಟ ಗುಣ ಮಾನ್ಯಗಳನ್ನು ಹೊಂದಿವೆ. ಅರ್ಜುನ್ ಜನ್ಯಾ, ರಜತ್ ಹೆಗ್ಡೆ, ಕೀರ್ತನ್ ಹೊಳ್ಳ ಹಾಗೂ ಪ್ರದೀಪ್ ಇವರೆಲ್ಲರ ಕೆತ್ತನೆ ಕೇಳುಗನಿಗೆ ತಲುಪುತ್ತದೆ. ‘ಇಳೆಗೆ ಬಂದ ಮಳೆಯೇ’ ಸವಿ ಜೇನಿನಂತೆ ಸಿಹಿಯಾಗಿದೆ. ಇನ್ನು ಬಿ ಎಸ್ ಪಿ ವರ್ಮಾರ ನಿರ್ದೇಶನ. ಕನ್ನಡದ ಕಥೆಗಳಲ್ಲಿ ತಾಜಾ ಎನಿಸಿಕೊಂಡಿರುವ ‘ಟೈಮ್ ಟ್ರಾವೆಲ್’ ಮಾದರಿಯ ಕಥಾನಕವನ್ನು ಅರಿಸಿಕೊಂಡು ಅದಕ್ಕೆ ಅಧ್ಯಾತ್ಮ, ವಿಜ್ಞಾನ ಮತ್ತು ತತ್ವದ ಲೇಪನ ನೀಡಿ ಸಿನಿಮಾಕ್ಕಿಂತ ಮಿಗಿಲಾದ ಅನುಭವವನ್ನು ನೀಡಿರುವ ಪರಿಗೆ ಒಂದು ದೊಡ್ಡ ಅಭಿನಂದನೆ ಸಲ್ಲಲೇಬೇಕು. ಗಲ್ಲಾ ಪೆಟ್ಟಿಗೆಗಳ ಲೆಕ್ಕಾಚಾರವೆಲ್ಲವ ಹೊರತುಪಡಿಸಿ ಈ ಚಿತ್ರ ತನ್ನ ಅಗಾಧ ವ್ಯಾಪ್ತಿ ಹಾಗೂ ವಿಚಾರಗಳಿಂದ ಖಂಡಿತ ಗೆಲ್ಲುತ್ತದೆ.
ಮುಗಿಸುವ ಮುನ್ನ:
ಇಲ್ಲೊಂದು ದೃಶ್ಯವಿದೆ. ತನ್ನ ತಂದೆ ಮತ್ತು ಆತನ ಪೂರ್ವ ಕಾಲಘಟ್ಟದ ಗೆಳತಿ ಜನನಿಯ ಪ್ರೇಮವ ಉಳಿಸಲು ಪ್ರಯತ್ನ ಪಡುತ್ತಾನೆ ಮರ್ಫಿ. ಆಗ ಮರ್ಫಿಯ ಪ್ರಸ್ತುತ ಕಾಲದ ಗೆಳತಿ ಜೆಸ್ಸಿ ಹೇಳುತ್ತಾಳೆ, ‘ಅವರ ಪ್ರೀತಿ ಉಳಿದರೆ ನೀನು ಇರುವುದೇ ಇಲ್ಲ’ ಎಂದು. ಚಿತ್ರದ High Point ಇದು. ಇಲ್ಲಿ ಎಲ್ಲವೂ ಬರೆದು ಮುಗಿದಿರುವ ಕಥೆಗಳು. ನಾವು ಈಗಷ್ಟೇ ಅವುಗಳ ಪಾತ್ರಗಳoತೆ ನಟಿಸುತ್ತಿದ್ದೇವೆ. ನಾಳೆಯ ದಿನ ಸಿಹಿಯೋ ಕಹಿಯೋ, ಕಥೆಯಲ್ಲಿ ಏನಾದರು ತಿರುವು ಸಿಗಬಹುದೇ ಎಂದು. ಹೀಗೆ ಬದಲಾಯಿಸಲಾಗದ ನಾಟಕರಂಗದಲ್ಲಿನ ಸೀಮಿತ ಅವಕಾಶದಲ್ಲಿಯೇ ನಮ್ಮ ಪಾತ್ರಗಳು ಮರೆತು ಹೋಗದಂತೆ ಬದುಕಬೇಕು. ನಾಳೆಯೆಂಬುದು ಇಲ್ಲವೆಂದು ಇಂದಿನ ದಿನವ ಬೆಳಗಿಸಬೇಕು, ಕಥೆಯು ಅವಕ್ಕೆ ಅನುವು ಮಾಡಿಕೊಡುತ್ತದೆ ಎಂದು ನಂಬುತ್ತಾ……

ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….
ಆಹಾ ದತ್ತಣ್ಣನವರ ಅಭಿನಯಕ್ಕೂ ಮೆಸ್ಸಿಯ ಗೋಲುಗಳಿಗೂ ಎಂತಹ ಹೋಲಿಕೆ! ಎರಡನ್ನೂ ಕಂಡುಂಡು ಸುಖಿಸಿರುವ ನನಗಂತೂ ಹೇಳತೀರದ ಸಂತಸ. ಮರ್ಫಿ ಸಿನೆಮಾ ಬಗ್ಗೆ ನಾನು ಕೇಳಿದ, ಓದಿದ ವಿಮರ್ಶೆಗಳಲ್ಲೇ ಇದು ಅತ್ಯಂತ ವಿಭಿನ್ನ, ವಿಶೇಷ. ಧನ್ಯವಾದಗಳು