ಅಂಥ ಬಡತನದಲ್ಲೂ, ಅಪ್ಪಯ್ಯ ಉಮೇದಿಯಿಂದ, ಅದಕ್ಕೆ ಬೇಕಾಗುವ ವಿವಿಧ ಬಣ್ಣದ ಹಾಳೆ, ಝರಿ ಎಲ್ಲವನ್ನೂ ಕೊಂಡು ತರುತ್ತಿದ್ದರು. ಆಗೆಲ್ಲ ಈಗಿನಂತೆ ವಿದ್ಯುತ್ ಸೌಲಭ್ಯ ನಮ್ಮಲ್ಲಿ ಇರಲಿಲ್ಲ. ಆದರೂ ಅದೊಂದು ಬಗೆಯ ಬಣ್ಣದ ಹಾಳೆಗಳನ್ನು ಕಲಾತ್ಮಕವಾಗಿ ಕತ್ತರಿಸಿ ಅಂಟಿಸಿ, ಕೇವಲ ಎಣ್ಣೆಯ ದೀಪದಲ್ಲೂ ಆ ಮಂಟಪ ಝಗಮಗಿಸುವಂತೆ ಮಾಡುತ್ತಿದ್ದರು. ಕೈಲಿ ಹಿಡಿದರೆ, ಸಣ, ಸಣ ಎಂದು ಸದ್ದಾಗುವಂತಿದ್ದ ಆ ಬಣ್ಣದ ಕಾಗದವನ್ನು “ಸಂತ್ರ ತಗಡು” ಅಂತ ಕರೆಯುತ್ತಿದ್ದರು. ಅದನ್ನು ಕಲಾತ್ಮಕವಾಗಿ ಕತ್ತರಿಸಿ, ಗುಬ್ಬಿ ಮಾಡಿ, ಮಂಟಪದ ಕಂಬಕ್ಕೆ, ಅಕ್ಕ ಪಕ್ಕದ ಪಟ್ಟಿಗಳಿಗೆ ಅಂಟಿಸಿ, ಅದಕ್ಕೆ ಝರಿಯ ಪುಡಿಯನ್ನು ಅಂಟಿಸಿ, ನಮ್ಮಣ್ಣ ಅದ್ಭುತವಾದ ಝಗಮಗ ಮಂಟಪ ಮಾಡುತ್ತಿದ್ದ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಆರನೆಯ ಕಂತು
ಆಷಾಢ ಮುಗಿದು, ಶ್ರಾವಣ ಕಾಲಿಟ್ಟಿತೆಂದರೆ ಸಾಕು, ಸಾಲು ಸಾಲು ಹಬ್ಬಗಳು ಮೆಲ್ಲ ಮೆಲ್ಲಗೆ ಮನೆಯ ಹೊಸಿಲು ದಾಟಿ ಒಳಬಂದು, ಎಲ್ಲರ ಮನೆ ಮನಗಳಲ್ಲಿ ಒಂದು ರೀತಿಯ ಸಡಗರ ಸಂಭ್ರಮವನ್ನು ತುಂಬುತ್ತವೆ. ಅಚ್ಚುಕಟ್ಟಾಗಿ ಹಬ್ಬಗಳನ್ನು ಮಾಡಿ, ದೇವ ದೇವತೆಗಳನ್ನು ಆರಾಧಿಸಿ ಸಂತುಷ್ಠರಾಗುವ ತವಕ, ಎಲ್ಲೆಡೆ ಕಂಡುಬರುತ್ತದೆ.
ಹಾಗೆ ನೋಡಿದರೆ, ನಮ್ಮ ಮಲೆನಾಡಿನಲ್ಲಿ ಬೆರಳೆಣಿಕೆಯಷ್ಟು ಹಬ್ಬಗಳನ್ನು ಮಾತ್ರ, ತುಂಬ ವಿಜೃಂಭಣೆಯಿಂದ ಆಚರಿಸುತ್ತಾರೆ. ನಮ್ಮ ಪ್ರಮುಖ ಹಬ್ಬಗಳೆಂದರೆ, ಗಣೇಶ ಚತುರ್ಥಿ ಮತ್ತೂ ದೀಪಾವಳಿ. ಉಳಿದವೆಲ್ಲ ತೀರ ಸರಳ ಮತ್ತೂ ಸಾಂಕೇತಿಕವಾಗಿ ಆಚರಿಸಲ್ಪಡುವ ಹಬ್ಬಗಳಾಗಿವೆ. ನಾವು ಚಿಕ್ಕವರಿರುವಾಗ, ಯಾವ ಹಬ್ಬವೇ ಬರಲಿ, ಎಲ್ಲಿಲ್ಲದ ಸಂಭ್ರಮದಿಂದ ಜಿಗಿದಾಡುತ್ತಿದ್ದೆವು. ಕಾರಣವಿಷ್ಟೇ. ಆ ಹಬ್ಬಗಳಿಗೆ ಮಾಡುವ ವಿವಿಧ ತಿಂಡಿ, ತಿನಿಸುಗಳನ್ನು ತಿನ್ನುವ ಚಪಲ ನಮಗೆ. ಆ ಕಾಲವೇ ಹಾಗಿತ್ತು. ಈಗಿನಂತೆ ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಪೇಟೆಯಿಂದ ಕೊಂಡು ತರುವ ಪದ್ಧತಿ ಇರಲೇ ಇಲ್ಲ. ದಿನಾ ಬೆಳಗ್ಗೆ ಮಕ್ಕಳಿಗೆ ಗಂಜಿ ಊಟ. ಸಂಜೆ ಶಾಲೆ ಬಿಟ್ಟು ಬಂದ ಮೇಲೆ ತಿನ್ನಲು, ಬೆಳಗ್ಗೆಯೇ ಮಾಡಿಟ್ಟಿದ್ದ ತಣ್ಣನೆಯ ದೋಸೆ, ಬೆಲ್ಲ. ಕುಡಿಯಲು ಬಿಸಿ ನೀರು. ಏನಾದರೂ ವಿಶೇಷವಾಗಿದ್ದು ತಿನ್ನಬೇಕೆಂದರೆ, ಅದಕ್ಕೆ ಹಬ್ಬವೇ ಬರಬೇಕು. ಹಾಗಾಗಿ ನಾವು ಹಬ್ಬಗಳಿಗಾಗಿ ಕಾದು ಕುಳಿತಿರುತ್ತಿದ್ದೆವು.
ಶ್ರಾವಣದ ಆರಂಭದಲ್ಲೇ ಬರುವ ಮೊದಲ ಹಬ್ಬವೆಂದರೆ, ನಾಗರ ಪಂಚಮಿ. ಆ ದಿನ ಬೆಳಗ್ಗೆ ಅಪ್ಪಯ್ಯ ಸ್ನಾನ ಮಾಡಿ, ನಮ್ಮ ತೋಟದಲ್ಲಿ ಸ್ಥಾಪನೆಯಾಗಿರುವ ನಾಗರ ಕಲ್ಲಿಗೆ ಹಾಲೆರೆದು ಪೂಜೆ ಮಾಡಿಕೊಂಡು ಬರುತ್ತಿದ್ದರು. ನಮ್ಮದೇನೂ ಪೂಜೆಯ ಗೋಜಲಿಲ್ಲ. ನಮ್ಮ ಲಕ್ಷ್ಯವೆಲ್ಲ ನಾಗಪ್ಪನಿಗೆ ತೋರಿಸುವ ನೈವೇದ್ಯದ ಮೇಲಿರುತ್ತಿತ್ತು. ಅವತ್ತಿನ ವಿಶೇಷವೆಂದರೆ, ಹಲಸಿನ ಬೇಳೆಯ (ಬೀಜ) ಒಬ್ಬಟ್ಟು. ಬೇಸಿಗೆಯಲ್ಲಿ ಯಾವಾಗ ಹಲಸಿನ ಹಣ್ಣು ಕತ್ತರಿಸಿದರೂ, “ವಬ್ಬಟ್ಟಿಗೆ ಬ್ಯಾಳೆ ಬೇಕು” ಎಂದು ಶ್ರದ್ಧೆಯಿಂದ ಆ ಬೀಜವನ್ನು ಕಾಯ್ದಿಡುತ್ತಿದ್ದೆವು. ಆ ಬೀಜ ಸಂಸ್ಕರಣೆಯ ಪದ್ಧತಿಯೂ ಚಂದವೇ. ಹಣ್ಣಿನ ತೊಳೆಯಿಂದ ಬೀಜ ಬೇರ್ಪಡಿಸಿ, ಅದಕ್ಕೆ ಗದ್ದೆಯ ಮಣ್ಣನ್ನು ದಪ್ಪವಾಗಿ ಲೇಪಿಸಿ, ಹರವಿ ಇಟ್ಟರಾಯ್ತು. ವರ್ಷಗಟ್ಟಲೇ ಬೀಜ ಟೊಳ್ಳಾಗದೇ, ಕೆಟ್ಟು ಕಹಿಯಾಗದೇ, ತಾಜಾ ಇರುತ್ತಿತ್ತು. ಒಬ್ಬಟ್ಟು ಮಾಡುವ ವಿಧಾನವೂ ಅಪರೂಪದ್ದು. ಹಿಂದಿನ ದಿನವೇ ಹಲಸಿನ ಬೀಜಗಳನ್ನು ಚೆನ್ನಾಗಿ ತೊಳೆದು, ನೀರಲ್ಲಿ ನೆನೆಸಿಡಲಾಗುತ್ತಿತ್ತು. ಬೆಳಗ್ಗೆ ನೀರು ಬಸಿದು, ಕಲ್ಲಲ್ಲಿ ತುಸು ಜಜ್ಜಿ, ಸಿಪ್ಪೆ ತೆಗೆಯಲಾಗುತ್ತಿತ್ತು. ನಂತರ ತಾಸುಗಟ್ಟಲೇ ಬೇಯಿಸಿ, ಒರಳು ಕಲ್ಲಲ್ಲಿ ರುಬ್ಬಿ, ಬೆಲ್ಲದ ಪಾಕದಲ್ಲಿ ಹೂರಣ ಮಾಡುತ್ತಿದ್ದರು. ಅದನ್ನು ಚಿಕ್ಕ ಉಂಡೆಗಳನ್ನು ಮಾಡಿಕೊಂಡು, ಎರಡೂ ಮೈ ಸ್ವಲ್ಪ ಚಪ್ಪಟೆಯಾಗಿ ತಟ್ಟಿ, ದೋಸೆಯ ಹಂಚಿನ ಮೇಲೆ ಇಟ್ಟು, ಎಣ್ಣೆ ಹಾಕಿ ಎರಡೂ ಮೈ ನೀಟಾಗಿ ಬೇಯಿಸಿ ಬಿಟ್ಟರೆ ಒಬ್ಬಟ್ಟು ರೆಡಿ. ಕೆಲವು ಕಡೆ ಈ ಒಬ್ಬಟ್ಟಿಗೆ “ಬುಡ್ಣಾ” ಅಂತಲೂ ಕರೆಯುತ್ತಾರೆ. ಈ ಒಬ್ಬಟ್ಟು ತುಪ್ಪದಲ್ಲಿ ಅದ್ದಿ ಬಾಯಲ್ಲಿಟ್ಟರೆ, ಆಹಾ… ಎಂಥ ರುಚಿ!! ಮುಂದಿನ ಎಂಟು ಹತ್ತು ದಿನಗಳ ತನಕ, ನಾವು ದಿನಾ ಶಾಲೆ ಬಿಟ್ಟು ಬಂದಮೇಲೆ ಒಬ್ಬಟ್ಟು ಮೆಲ್ಲುತ್ತಿದ್ದೆವು.
ಮುಂದಿನ ಹಬ್ಬವೆಂದರೆ, ಕೃಷ್ಣಾಷ್ಟಮಿ. ಅಂದು ದಿನವಿಡೀ ಊಟವಿಲ್ಲ. ಹಾಗಂತ, ಉಪವಾಸ ಖಂಡಿತ ಇರುತ್ತಿರಲಿಲ್ಲ. ಅವತ್ತು ದಿನವಿಡೀ ಅವಲಕ್ಕಿಯ ಸಮಾರಾಧನೆ. ರಾತ್ರಿ ಕೃಷ್ಣನ ಪೂಜೆಮಾಡಿ, ನೈವೇದ್ಯ ತೋರಿಸುತ್ತಿದ್ದರು. ಆ ದಿನ ನೈವೇದ್ಯಕ್ಕಾಗಿ ಮಾಡುವ ತಿಂಡಿಯೆಂದರೆ, “ಉಂಡ್ಲೇ ಕಾಳು”. ಅದು ಉಪ್ಪು ನೀರಲ್ಲಿ ಸಂಸ್ಕರಿಸಿಟ್ಟ ಹಲಸಿನ ತೊಳೆಯಿಂದ ಮಾಡುವ ಖಾದ್ಯ. ತೊಳೆ ಬೇಯಿಸಿ, ರುಬ್ಬಿ, ಗೋಲಿ ಗಾತ್ರದ ಚಿಕ್ಕ ಚಿಕ್ಕ ಉಂಡೆ ಮಾಡಲಾಗುತ್ತಿತ್ತು. ಸದಾ ಬೆಣ್ಣೆ ಮೆಲ್ಲುವ ಕೃಷ್ಣನಿಗೆ ಉಪ್ಪಿನ ರುಚಿಯ ಉಂಡ್ಲೇಕಾಳು ಬಲು ಪ್ರೀತಿಯಂತೆ.
ಮುಂದೆ ಬರುವ ಭಾದ್ರಪದ ಚೌತಿಯೇ ಗಣೇಶ ಚತುರ್ಥಿ. ಇದು ಮಲೆನಾಡಿಗರ ಬಲು ದೊಡ್ಡ ಹಬ್ಬ. ನಮ್ಮಲ್ಲಿ ಇದನ್ನು “ಚೌತಿ ಹಬ್ಬ” ಎಂದೇ ಕರೆಯುವ ರೂಢಿ. ದೂರದ ಊರಲ್ಲಿ ಕೆಲಸದಲ್ಲಿದ್ದವರೂ ಸಹಾ, ಈ ಹಬ್ಬದ ಸಲುವಾಗಿಯೇ ಊರಿಗೆ ಬರುತ್ತಾರೆ. ನಮ್ಮನೆಯಲ್ಲಿ ಗಣಪತಿ ತರುವ ಪದ್ಧತಿ ಇತ್ತು. ಹಾಗಾಗಿ, ಹಬ್ಬಕ್ಕೆ ಎರಡು ಮೂರು ದಿನಗಳಿರುವಾಗಲೆ, ನಮ್ಮಣ್ಣ ಗಣಪತಿಯನ್ನು ಕೂರಿಸಲು ಭರ್ಜರಿ ಮಂಟಪದ ತಯಾರಿ ಶುರುಮಾಡಿಬಿಡುತ್ತಿದ್ದ. ಅಂಥ ಬಡತನದಲ್ಲೂ, ಅಪ್ಪಯ್ಯ ಉಮೇದಿಯಿಂದ, ಅದಕ್ಕೆ ಬೇಕಾಗುವ ವಿವಿಧ ಬಣ್ಣದ ಹಾಳೆ, ಝರಿ ಎಲ್ಲವನ್ನೂ ಕೊಂಡು ತರುತ್ತಿದ್ದರು. ಆಗೆಲ್ಲ ಈಗಿನಂತೆ ವಿದ್ಯುತ್ ಸೌಲಭ್ಯ ನಮ್ಮಲ್ಲಿ ಇರಲಿಲ್ಲ. ಆದರೂ ಅದೊಂದು ಬಗೆಯ ಬಣ್ಣದ ಹಾಳೆಗಳನ್ನು ಕಲಾತ್ಮಕವಾಗಿ ಕತ್ತರಿಸಿ ಅಂಟಿಸಿ, ಕೇವಲ ಎಣ್ಣೆಯ ದೀಪದಲ್ಲೂ ಆ ಮಂಟಪ ಝಗಮಗಿಸುವಂತೆ ಮಾಡುತ್ತಿದ್ದರು. ಕೈಲಿ ಹಿಡಿದರೆ, ಸಣ, ಸಣ ಎಂದು ಸದ್ದಾಗುವಂತಿದ್ದ ಆ ಬಣ್ಣದ ಕಾಗದವನ್ನು “ಸಂತ್ರ ತಗಡು” ಅಂತ ಕರೆಯುತ್ತಿದ್ದರು. ಅದನ್ನು ಕಲಾತ್ಮಕವಾಗಿ ಕತ್ತರಿಸಿ, ಗುಬ್ಬಿ ಮಾಡಿ, ಮಂಟಪದ ಕಂಭ (ಅಡಕೆಯ ಕಂಭ)ಕ್ಕೆ, ಅಕ್ಕ ಪಕ್ಕದ ಪಟ್ಟಿಗಳಿಗೆ (ಅಡಿಕೆ ದಬ್ಬೆಯದ್ದು) ಅಂಟಿಸಿ, ಅದಕ್ಕೆ ಝರಿಯ ಪುಡಿಯನ್ನು ಅಂಟಿಸಿ, ನಮ್ಮಣ್ಣ ಅದ್ಭುತವಾದ ಝಗಮಗ ಮಂಟಪ ಮಾಡುತ್ತಿದ್ದ. ಗೌರಿ ತದಿಗೆಯ ದಿನ, ಮನೆಯ ಜಮಾನನೋ ಅಥವಾ ಆಳುಗಳೋ ಊರಿಂದ ಐದು ಕಿ.ಮೀ ದೂರ ನಡೆದು ಹೋಗಿ, ಗುಡಿಗಾರನ ಮನೆಯಿಂದ ಗಣಪತಿ ಖರೀದಿಸಿ, ಬುಟ್ಟಿಯಲ್ಲಿಟ್ಟು ತಲೆಯ ಮೇಲೆ ಹೊತ್ತುಕೊಂಡೇ ಬರುತ್ತಿದ್ದರು. ಕಾರಣ ಆಗ ನಮ್ಮಲ್ಲಿನ್ನೂ ಸಾರಿಗೆ ಸಂಪರ್ಕವೇ ಏರ್ಪಟ್ಟಿರಲಿಲ್ಲ. ಗಣಪತಿ ಬರುವ ಹೊತ್ತಿಗೆ, ಸಂಜೆ ದೀಪ ಹಚ್ಚುವ ಹೊತ್ತಾಗಿರುತ್ತಿತ್ತು. ನಮಗಂತೂ ಮನೆಗೆ ಗಣಪ ಬಂದರೆ, ಯಾರೋ ಆತ್ಮೀಯ ನೆಂಟರು ಬಂದಷ್ಟು ಖುಶಿಯಾಗುತ್ತಿತ್ತು. ಬುಟ್ಟಿಯೊಳಗೆ, ಕಾಗದ ಕೊಟ್ಟೆಯನ್ನು ತಲೆಯ ಮೇಲೆ ಮುಚ್ಚಿಕೊಂಡು, ಬೆಚ್ಚಗೆ ಕುಳಿತ ಗಣಪನನ್ನು ನೋಡುತ್ತಲೇ ನಾವೆಲ್ಲ ಭಾವ ಪರವಶರಾಗಿ, ಭಜನೆ ಶುರುಮಾಡಿಕೊಂಡು ಬಿಡುತ್ತಿದ್ದೆವು. ನಮ್ಮನೆಯಲ್ಲಿ ನಾಲ್ಕು ದಿನ ಗಣಪತಿ ಇಡುವ ಪದ್ಧತಿ ಇತ್ತು. ಸಾಮನ್ಯವಾಗಿ ನಮ್ಮಲ್ಲೆಲ್ಲ, ೨, ೪, ೬, ೮, ೧೦ ಹೀಗೆ ಸರಿ ದಿನಕ್ಕೆ ಕಳಿಸುವ ಪದ್ಧತಿ. ಆ ಗಣಪತಿ ಕಳಿಸುವಾಗಲೂ ಅಷ್ಟೇ; ನಾವೆಲ್ಲ ಗೋಳೋ ಅಂತ ಅತ್ತು ಬಿಡುತ್ತಿದ್ದೆವು. ಎರಡು ದಿನ ಆ ಬೇಸರ ಹಾಗೇ ಇರುತ್ತಿತ್ತು.
ಇದು ಗಣಪತಿಯ ಸಂಭ್ರಮವಾದರೆ, ಅವನಿಗಾಗಿ ಮಾಡುವ ನೈವೇದ್ಯವೂ ಅಷ್ಟೇ ವೈವಿಧ್ಯವಾಗಿರುತ್ತಿತ್ತು. ನಮ್ಮಲ್ಲಿ ಗಣಪತಿಯ ನೈವೇದ್ಯಕ್ಕೆ ೧೧ ಬಗೆಯ ಭಕ್ಷ್ಯಗಳನ್ನು ಮಾಡುವ ಪದ್ಧತಿ ಇತ್ತು. ಇನ್ನೂ ಅನೇಕರ ಮನೆಯಲ್ಲಿ ೨೧ ಬಗೆಯ ಭಕ್ಷ ಮಾಡುತ್ತಿದ್ದರು. ಅದಕ್ಕೇ ಗೌರಿ ತದಿಗೆಯ ದಿವಸವೇ ಮಡಿಯಲ್ಲಿ ಬಹುತೇಕ ಭಕ್ಷ್ಯಗಳನ್ನು ಮಾಡಿ ಮುಚ್ಚಿಟ್ಟು ಬಿಡುತ್ತಿದ್ದರು. ನಮ್ಮಲ್ಲಿ ಮಾಡುತ್ತಿದ್ದ ಭಕ್ಷಗಳೆಂದರೆ, ಕೆಂಪು ಕಡಲೆಯ ಪಂಚ ಕಜ್ಜಾಯ, ಮೋದಕ, ಕರಜೀ ಕಾಯಿ, ಲಡ್ಡುಗೆ ಉಂಡೆ, ಎಳ್ಳುಂಡೆ, ಅತಿರಸ, ಅಪ್ಪಾಲು, ಚಕ್ಕುಲಿ, ಕೋಡುಬಳೆ, ಅಕ್ಕಿ ಹಿಟ್ಟಿನ ವಡೆ, ಇತ್ಯಾದಿ. ಇವಿಷ್ಟು ಮೊದಲನೆಯ ದಿನವೇ ಸಿದ್ಧವಾಗುತ್ತಿತ್ತು. ಮರುದಿನ ಪಾಯಸ, ಮತ್ತೂ ಉದ್ದಿನ ಕಡುಬುಗಳ ಜೊತೆ ಎಲ್ಲವೂ ಗಣಪನಿಗೆ ನೈವೇದ್ಯವಾಗುತ್ತಿದ್ದವು. ನನಗಂತೂ ಇದು ಅತ್ಯಂತ ಪ್ರೀತಿಯ ಹಬ್ಬವಾಗಿತ್ತು. ಕಾರಣ, ಹಬ್ಬ ಮುಗಿದು ತಿಂಗಳ ತನಕ, ರುಚಿ ರುಚಿಯಾದ ತಿಂಡಿಗಳನ್ನು ತಿನ್ನಬಹುದಾಗಿತ್ತಲ್ಲಾ..
ಹಬ್ಬದ ದಿನ ಪೂಜೆ, ಊಟ ಮುಗಿಸಿ, ನಾವು ಎಲ್ಲರ ಮನೆಯ ಗಣಪತಿ ನೋಡಲು ಹೊರಡುತ್ತಿದ್ದೆವು. ಆ ದಿನ ಕನಿಷ್ಟ ಐದು ಗಣಪತಿಯನ್ನಾದರೂ ನೋಡಬೇಕು ಎಂದು ಆಯಿ ಹೇಳುತ್ತಿದ್ದರು. ನಮಗೆ ಗಣಪತಿ ನೋಡುವುದಕ್ಕಿಂತ ಅವರು ಕೊಡುವ ಪಂಚ ಕಜ್ಜಾಯ ತಿನ್ನುವುದರಲ್ಲೇ ಹೆಚ್ಚು ಒಲವು. ಎಲ್ಲರ ಮನೆಗಳಲ್ಲೂ ಗಣಪತಿಯ ಮಂಟಪ ಅಷ್ಟು ಚೆನ್ನಾಗಿ ಇರುತ್ತಿತ್ತು. ಒಬ್ಬೊಬ್ಬರಂತೂ ಬ್ಯಾಟರಿ ಶೆಲ್ ಉಪಯೋಗಿಸಿ, ಪುಟ್ಟ ಪುಟ್ಟ ಬೆಳಕಿನ ಬಲ್ಬ್ ಕೂಡಾ ಹಾಕಿರುತ್ತಿದ್ದರು. ಮುಂದೆ ವಾರದ ತನಕ, ಈ ವಿವಿಧ ಮಂಟಪಗಳ ಚಂದದ ಕುರಿತೇ ನಾವೆಲ್ಲ ಮಾತಾಡಿಕೊಳ್ಳುವುದಿತ್ತು.
ಚೌತಿ ಹಬ್ಬದ ಇನ್ನೊಂದು ಗಮ್ಮತ್ತೆಂದರೆ, ಪಟಾಕಿ ಹೊಡೆಯುವುದು. ನಾವೆಲ್ಲ ಪಟಾಕಿ ಹೊಡೆಯುವುದು, ಇದೊಂದೇ ಹಬ್ಬಕ್ಕೆ. ಆಗೆಲ್ಲ ಮಕ್ಕಳಿಗೋಸ್ಕರವಾಗಿಯೇ ಅಪ್ಪಯ್ಯ ಅನೇಕ ರೀತಿಯ ನಿರುಪದ್ರವಿ ಪಟಾಕಿಗಳನ್ನು ತರುತ್ತಿದ್ದರು. ಅದರಲ್ಲಿ ಬಹಳ ಅಪರೂಪದ್ದು ಹಾಗೇ ತೀರಾ ಪಾಪದ ಪಟಾಕಿಯೆಂದರೆ, ‘ನೆಲ ಗುಮ್ಮ’ ಅದು ಪುಟ್ಟ ಬೆಳ್ಳುಳ್ಳಿ ಗಾತ್ರದ ಬಣ್ಣದ ಕಾಗದದ ಉಂಡೆಯಂತೆ ಇರುತ್ತಿತ್ತು. ಕೈಲಿ ಹಿಡಿದು, ಬಾಯಿಂದ “ಉಫ್ ಉಫ್” ಎಂದು ಊದಿ, ಬಿಸಿಯಾಗಿಸಿ, ಬಲವಾಗಿ ನೆಲಕ್ಕೆ ಅಪ್ಪಳಿಸಿದರೆ ಸಾಕು “ಢಮ್” ಎಂಬ ಅದರ ಸಪ್ಪಳ ಎಂಥವರನ್ನೂ ರೋಮಾಂಚನ ಗೊಳಿಸುತ್ತಿತ್ತು. ಇನ್ನೊಂದು ‘ಹಾವಿನ ಗುಳಿಗೆ’ ಅದರ ಮೂತಿಯನ್ನು ಚಿಮಣಿಗೆ ಹಿಡಿದು ಸುಟ್ಟು ಬಿಸಾಡಿದರೆ ಸಾಕು, ಬುಸ ಬುಸ ಎಂಬ ಶಬ್ಧದೊಡನೆ ಬಣ್ಣ ಬಣ್ಣದ ಬೆಳಕಿನೊಡನೇ ಇಷ್ಟುದ್ದ ಬಿಚ್ಚಿಕೊಂಡು ಹೊರಳಾಡಿದಂತೇ ಅನ್ನಿಸುತ್ತಿತ್ತು. ಆದರೆ, ಅದು ಸುಟ್ಟ ನಂತರ, ಕೆಟ್ಟ ವಾಸನೆ ಸೂಸುತ್ತಿತ್ತು. ಆಗ ನಾವೆಲ್ಲ “ಥೂ ನಾತಾ” ಎಂದು ಮೂಗು ಮುಚ್ಚಿಕೊಂಡು ಮಾರುದೂರ ಓಡುತ್ತಿದ್ದೆವು. ಮರುಕ್ಷಣಕ್ಕೆ ಎಲ್ಲ ಮರೆತು, ಮತ್ತೆ ಹಾವಿನ ಗುಳಿಗೆಯನ್ನು ಚಿಮಣಿ ದೀಪಕ್ಕೆ ಹಿಡಿಯುತ್ತಿದ್ದೆವು. ಹುಡುಗಾಟಿಕೆಯ ಆ ವಯಸ್ಸಿನಲ್ಲಿ ನಮಗೆ ಅದೂ ಒಂದು ಮಜ ಕೊಡುವ ವಿಷಯವೇ ಆಗಿತ್ತು. ಹಾಗೇ ಸುರ್ ಸುರ್ ಬತ್ತಿ ಕೂಡಾ ಮೋಜಿನದ್ದೇ ಆಗಿತ್ತು. ಆದರೆ, ಅದರ ಕಿಡಿ ಒಮ್ಮೊಮ್ಮೆ ಸಿಡಿದು, ಅಂಗಿಯನ್ನು ತೂತು ಮಾಡುತ್ತಿತ್ತು.
ಅಣ್ಣಯ್ಯ ನೆಲ ಚಕ್ರ, ಕುಡಿಕೆ, ರಾಕೇಟು, ಗರ್ನಾಲು, ಲಕ್ಷ್ಮೀ ದಡಾಕಿಯಂತಾ ದೊಡ್ಡ ಪಟಾಕಿಯನ್ನೇ ಹಚ್ಚುತ್ತಿದ್ದ. ನಾವು ದೂರ ನಿಂತು ಅದನ್ನೆಲ್ಲ ನೋಡಿ, ಹೋ ಎಂದು ಕಿರುಚಾಡುತ್ತ ಕುಣಿದು ಖುಶಿ ಪಡುತ್ತಿದ್ದೆವು.
ಈ ಗಣೇಶ ಚತುರ್ಥಿಯ ಮರುದಿನವೇ ಅವನ ವಾಹನಕ್ಕೂ ಹಬ್ಬ. ಅದೇ ‘ಇಲಿ ಪಂಚಮಿ’. ಭೂಮಿಯೊಳಗೆ ಬಿಲಮಾಡಿ ಬದುಕುವ ಇಲಿಗೆ ಆ ದಿನ ಮೀಸಲು. ಅದೇ ಕಾರಣಕ್ಕೇ ಆ ದಿನ ಭೂಮಿಯನ್ನು ಕೊಚ್ಚುವುದು, ಅಗೆಯುವುದು ವರ್ಜ್ಯ.
ನಂತರದ ಇನ್ನೊಂದು ಪ್ರಮುಖ ಹಬ್ಬವೆಂದರೆ, ಅದು ದೀಪಾವಳಿ. ನಮ್ಮ ಮಲೆನಾಡಲ್ಲಿ ಅದನ್ನು “ದೊಡ್ಡಬ್ಬ” ಎಂದೇ ಕರೆಯುವ ಪದ್ಧತಿ. ನಿಜಕ್ಕೂ ಅದು ಎಲ್ಲಕ್ಕಿಂತ ದೊಡ್ಡ ಹಬ್ಬ. ಅದು ಮನೆಯ ಜನರಿಗೆ ಮಾತ್ರವಲ್ಲ, ಕೊಟ್ಟಿಗೆಯಲ್ಲಿರುವ ದನ ಕರುಗಳಿಗೂ ಖುಶಿ ಕೊಡುವ ಹಬ್ಬ. ಹಬ್ಬಕ್ಕೆ ನಾಲ್ಕು ದಿನ ಮೊದಲು, ದನಗಳ ಕೊಟ್ಟಿಗೆಯನ್ನು ಹೊಸ ಮಣ್ಣು ಹಾಕಿ ಸರಿ ಮಾಡಿ, ಮನೆಯ ಗೋಡೆಗೆ ಶೇಡಿ, ಕೆಮ್ಮಣ್ಣು ಹಚ್ಚಿ, ಅಲಂಕರಿಸುವುದನ್ನು ‘ಮಣ್ಣು ಬೂರೆ ಹಬ್ಬ’ ಅಂತ ಕರೆಯುವ ವಾಡಿಕೆ. ಮರುದಿನ ಬೆಳ್ಳಂಬೆಳಗ್ಗೆ ಮನೆಯೊಡತಿ ಮಿಂದು ಮಡಿಯುಟ್ಟು ಭಾವಿಯಿಂದ ನೀರು ತಂದು, ಶೇಡಿ ಕೆಮ್ಮಣ್ಣಿನಿಂದ ಅಲಂಕೃತಗೊಂಡ ಹಿತ್ತಾಳೆಯ ತಂಬಿಗೆಗೆ ತುಂಬಿ ತಂದು ದೇವರ ಮುಂದಿಟ್ಟು ಪೂಜಿಸುತ್ತಾಳೆ. ಅದು ನೀರುಬೂರೆ ಹಬ್ಬ, ಮುಂದೆ ಅದೇ ನೀರನ್ನು ತುಸು ಸ್ನಾನದ ಹಂಡೆಗೂ ಹಾಕುತ್ತಿದ್ದರು. ಅವತ್ತೇ ಬಲಿವೇಂದ್ರ ಕೂಡಾ ಬಂದು ದೇವರ ಮುಂದೆ ಕೂರುತ್ತಾನೆ.
ಅವತ್ತಿನ ವಿಶೇಷ ಭಕ್ಷವೆಂದರೆ ‘ಗೋವೆ ಕಾಯಿʼ (ಸಿಹಿಗುಂಬಳ) ಕಡುಬು. ಆ ಸಿಹಿ ಕಡುಬು ವಿಶೇಷವಾಗಿ ಕೊಟ್ಟಿಗೆಯ ದನಗಳಿಗಾಗಿಯೇ (ಉಪ್ಪು ಹಾಕದೇ) ಮಾಡುತ್ತಾರೆ. ಮತ್ತೆ ಸ್ವಲ್ಪಭಾಗ (ಉಪ್ಪು ಹಾಕಿ) ಮನೆಯವರಿಗೆ. ಸಂಜೆಗೆ ದನ ಕೊಟ್ಟಿಗೆಗೆ ಬಂದ ಮೇಲೆ, ಅವುಗಳಿಗೆ ಕಡುಬು ತಿನ್ನಿಸುವುದೇ ಒಂದು ಸಂಭ್ರಮ.
ಇವೆಲ್ಲವುಗಳಿಗಿಂತ, ನಮಗೆ ಖುಶಿಕೊಡುತ್ತಿದ್ದುದು ಗೋ ಪಾಡ್ಯ. ಆ ದಿನ ಬೆಳಗ್ಗೆ ನಾವೆಲ್ಲ ಕೊಟ್ಟಿಗೆಯ ದನಗಳ ಮೈ ತೊಳೆದು ಶೇಡಿ, ಕೆಮ್ಮಣ್ಣಿನ ಅಚ್ಚು ಹೊಡೆದು,(ಬೆಚ್ಚಾಲು ಹನಿಸುವುದು) ಅಡಿಕೆಯ ದಂಡೆ, ಗೊಂಡೇರು ಹೂ (ಚೆಂಡು ಹೂ) ಮಾಲೆ ಎಲ್ಲ ಕಟ್ಟಿ ಅಲಂಕರಿಸುತ್ತಿದ್ದೆವು. ಜೊತೆಗೆ ಅಟ್ಟದ ಮೇಲಿದ್ದ ಗಂಟೆ, ಗಗ್ಗರ, ಗೆಜ್ಜೆ ಎಲ್ಲವನ್ನು ಇಳಿಸಿ ತಂದು ಅವೆಲ್ಲವುಗಳ ಕೊರಳಿಗೆ ಕಟ್ಟುತ್ತಿದ್ದೆವು. ಆ ಗಗ್ಗರದ ಸಪ್ಪಳಕ್ಕೆ ಸ್ಪೂರ್ತಿಗೊಂಡು, ಪುಟ್ಟ ಕರುಗಳನ್ನು ಛಂಗನೆ ಜಿಗಿಯುತ್ತ, ಕೊಟ್ಟಿಗೆ ತುಂಬ ಓಡುತ್ತಿದ್ದರೆ, ಆ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿತ್ತು. ಇವೆಲ್ಲದರ ನಡುವೆ, ಒಂದರ ಕೊರಳಲ್ಲಿ ನೇತಾಡುತ್ತಿದ್ದ ಗೊಂಡೆ ಹೂವಿನ ಮಾಲೆ ತಿನ್ನಲು ಇನ್ನೊಂದು ದನದ ಗುದ್ದಾಟ ನಡೆದಿರುತ್ತಿತ್ತು. ಕೊನೆಗೆ ಪೂಜೆಯ ಹೊತ್ತಿಗೆ ಎಲ್ಲದರ ಕುತ್ತಿಗೆಯ ಮಾಲೆಗಳು ಅವುಗಳ ಹೊಟ್ಟೆ ಸೇರಿ, ಬರೀ ಬಳ್ಳಿ ಮಾತ್ರ ಉಳಿದಿರುತ್ತಿತ್ತು.
ಆ ದಿನ ಗೋ ಪೂಜೆ ಆದ ಕೂಡಲೇ ಎಲ್ಲ ದನಗಳಿಗೂ ಹೊಸ ಮೊರದಲ್ಲಿ ತುಂಬಿಸಿ ತಂದ “ದೊಡ್ಡಬ್ಬದ ದೋಸೆ” ಯನ್ನು ತಿನ್ನಲು ಕೊಡುವುದೇ ತುಂಬ ಖುಶಿಕೊಡುವ ಕೆಲಸವಾಗಿತ್ತು. ಒಂದೋದೇ ದೋಸೆಯನ್ನು ದನಗಳ ಮುಂದೆ ಹಿಡಿದರೆ ಸಾಕು, ಅವು ಇಷ್ಟುದ್ದ ನಾಲಿಗೆ ಸುಳಿದು, ಒಂದೇ ತುತ್ತಿಗೆ ಗುಳುಂ ಮಾಡುತ್ತಿದ್ದರೆ, ನಮಗೆಲ್ಲ ಅದೊಂದು ಮೋಜಿನ ಆಟವೆನ್ನಿಸುತ್ತಿತ್ತು.
ಸಂಜೆ ‘ದನ ಬೈಲು’ ಕಾರ್ಯಕ್ರಮ. ಅಂದರೆ ನಮ್ಮೂರ ದೇವಸ್ಥಾನದ ಹತ್ತಿರದ ವಿಶಾಲವಾದ ಬಯಲಲ್ಲಿ, ಅಲಂಕರಿಸಿದ ಹೋರಿಗಳನ್ನು ಓಡಿಸುವ ಕಾರ್ಯಕ್ರಮ. ಪ್ರಾಯದ ಯುವಕರು, ತಮ್ಮ ತಮ್ಮ ಹೋರಿಗಳನ್ನು ಅಲಂಕರಿಸಿ ತಂದು, ಅವುಗಳ ಹಗ್ಗ ಹಿಡಿದು, ಜೊತೆಯೇ ಓಡಿ, ತಮ್ಮ ಶಕ್ತಿಯನ್ನೂ ಪ್ರದರ್ಶಿಸುತ್ತಿದ್ದರು. ಆ ಸೊಕ್ಕಿನ ಹೋರಿಗಳು ಅದೆಷ್ಟೋ ಸಾರಿ ಹಗ್ಗ ಹಿಡಿದವನನ್ನು ಕೆಡವಿ ಓಡಿಬಿಡುತ್ತಿದ್ದವು. ಆತ ಮತ್ತೆ ಮೇಲೆದ್ದು ಪೌರುಷ ಮೆರೆಯುತ್ತ ಅದನ್ನು ಬೆನ್ನು ಹತ್ತುತ್ತಿದ್ದ. ಮತ್ತೆ ಕೆಲವು ಸೋಮಾರಿ ಹೋರಿಗಳು ದೊಪ್ಪನೆ ಕೆಳಗೆ ಮಲಗಿ, ತಮಗೆ ಓಡಲು ಸಾಧ್ಯವೇ ಇಲ್ಲವೆಂದು ಹಟ ತೆಗೆಯುತ್ತಿದ್ದವು. ನಮಗೆ ಇದೆಲ್ಲ ಬಹಳ ಮಜ ಕೊಡುತ್ತಿತ್ತು. ಮುಂದಿನ ವರ್ಷದ ತನಕ, ನೆನಪಾದಾಗಲೆಲ್ಲಾ ಇಂಥದ್ದೇ ವರ್ಣರಂಜಿತ ಮಾತಾಡುತ್ತ, ನಗುತ್ತ ಇದ್ದು ಬಿಡುತ್ತಿದ್ದೆವು.
ಈ ಹಬ್ಬಗಳ ಹೊರತಾಗಿಯೂ ನಮ್ಮಲ್ಲಿ ಒಂದಿಷ್ಟು ಪ್ರಾದೇಶಿಕ ಹಬ್ಬಗಳಿದ್ದವು. ಮಳೆ ಹಿಡಿದ ಆರಂಭದಲ್ಲಿ ಮಾಡುವ ‘ಹುಲಿ ದೇವರ ಹಬ್ಬ’ ವೂ ಇದರಲ್ಲಿ ಒಂದು. ಆ ದಿನ ಬೆಳಗ್ಗೆ, ಊರವರೆಲ್ಲ ಸೇರಿ, ತಾವು ಸ್ಥಾಪಿಸಿದ ಹುಲಿಯಪ್ಪನ ಮೂರ್ತಿಗೆ ಪೂಜೆ ಮಾಡಿ, ಅಲ್ಲಿಯೇ ಅಡಿಗೆ ಮಾಡಿ, ನೈವೇದ್ಯ ತೋರಿಸಿ “ಹುಲಿಯಪ್ಪಾ ನಾವು ಸಾಕಿದ ದನಕರುಗಳನ್ನು ಹಿಡಿಯ ಬೇಡಪ್ಪಾ” ಎಂದು ಪ್ರಾರ್ಥಿಸುತ್ತಾರೆ. ಹಾಗೇ ತೋಟ, ಗದ್ದೆ ಕಾಯುವ ಜಟಕ, ಬೀರಲು, ಮನೆ ಮಕ್ಕಳನ್ನು ಕಾಪಾಡುವ ಹಕ್ಕಲ ಚೌಡಿ, ಕಾನು ಚೌಡಿ ಹೀಗೇ ಅನೇಕ ಅಲೌಕಿಕ ಶಕ್ತಿಗಳನ್ನು ಆರಾಧಿಸುವ ಪದ್ಧತಿಯೂ ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದಿದೆ.
ನಮ್ಮಲ್ಲಿಯ ಇನ್ನೊಂದು ವಿಶೇಷ ಹಬ್ಬವೆಂದರೆ, ‘ಹೊಸ ಅಕ್ಕಿ ಹಬ್ಬ’. ವರ್ಷದ ಪೈರು ಕೈ ಸೇರಿದೊಡನೆ, ಆ ಹೊಸ ಭತ್ತವನ್ನು ಅಕ್ಕಿ ಮಾಡಿಸಿ ತಂದಾಗ, (ತೀರ ಮೊದಲು, ಮನೆಯಲ್ಲೇ ಭತ್ತ ಕುಟ್ಟಿ, ಅಕ್ಕಿ ಮಾಡುವುದಿತ್ತು) ಅದನ್ನು ನಾವು ಮೊದಲು ಉಣ್ಣುವಂತಿಲ್ಲ. ಮನೆಯ ಹೊರಗಡೆಯ ಅಂಗಳದಲ್ಲೋ ಅಥವಾ ಭತ್ತದ ಕಣದಲ್ಲೋ ಕಲ್ಲು ಹೂಡಿ, ಒಲೆ ಮಾಡಿ, ಹೊಸಕ್ಕಿಯ ಅನ್ನ, ಪಾಯಸ ಮಾಡಿ, ಎರಡೋ, ಮೂರೋ ಜೋಡಿ (ಈ ಸಂಖ್ಯೆ ಒಬ್ಬೊಬ್ಬರ ಮನೆತನದಲ್ಲಿ ಒಂದೊಂದು ಇರುತ್ತದೆ) ತೊಳೆದು ಶುದ್ಧೀಕರಿಸಿದ ಕುಡಿಬಾಳೆಗಳನ್ನು ಸಾಲಾಗಿ ಜೋಡಿಸಿ, ಅದರ ಮೇಲೆ ಅನ್ನ ಪಾಯಸದ ಎಡೆ ಬಡಿಸುತ್ತಾರೆ. ಅದು ವರ್ಷವಿಡೀ ನಮ್ಮ ಪೈರನ್ನು ಕಾದು, ರಕ್ಷಣೆ ಮಾಡಿಕೊಟ್ಟ ಅನೇಕ ಅದೃಶ್ಯ ಶಕ್ತಿಗಳಿಗಾಗಿ ಕೃತಜ್ಞತಾ ಪೂರ್ವಕವಾಗಿ ಏರ್ಪಡಿಸುವ ಔತಣ ಅದು. ಮನೆಯ ಯಜಮಾನನೇ ಆ ಎಡೆ ಬಡಿಸಿ, ಕೈ ಮುಗಿದು ಪ್ರಾರ್ಥಿಸಿ, ಅವರನ್ನೆಲ್ಲ ಭೋಜನಕ್ಕೆ ಆಹ್ವಾನಿಸಿ, ತಿರುಗಿಯೂ ನೋಡದೇ ಮನೆಗೆ ಬಂದು ಬಿಡುತ್ತಾನೆ. ಇದಾದ ನಂತರವೇ ಹೊಸಕ್ಕಿಯನ್ನು ಮನೆಯವರು ಬಳಸಬಹುದು.
ಇಂಥ ಆಚಾರಗಳ ಹಿಂದೆ ನಮ್ಮ ಹಿರಿಯರ ಅಪಾರ ಜಾಣತನ ಅಡಗಿದೆ. ಇಂದು ಖಡ್ಗಕ್ಕೆ ಖಡ್ಗವೇ ಉತ್ತರವೆಂದು ನಂಬಿದ ಜನ, ದ್ವೇಷಾಸೂಯೆಯಲ್ಲಿ ಪ್ರಪಂಚವಿಡೀ ಹೊಡೆದಾಡಿ ಸಾಯುತ್ತಿರುವ ಹೊತ್ತಿಗೆ, ಅಂದಿನ ಹಿರಿಯರ ಉದಾತ್ತ ವಿಚಾರವನ್ನು ನೆನೆದರೆ, ಮನುಕುಲ ಅಂದಿನಿಂದ ಇಂದಿಗೆ ಅದೆಷ್ಟು ಬದಲಾಯಿತು! ಅನ್ನಿಸಿಬಿಡುತ್ತದೆ. ಎಂಥ ಕ್ರೂರತ್ವವನ್ನೂ ಪ್ರೀತಿಯಿಂದ, ಸ್ನೇಹ ಸೌಹಾರ್ದತೆಯಿಂದ ಮಣಿಸಬಹುದು ಎಂದು ಪೂರ್ವಜರು ನಂಬಿದ್ದರು. ಜೊತೆಗೆ, ತಮಗೆ ಅನ್ನ, ನೀರು, ಉಸಿರು ನೀಡುವ ಪ್ರಕೃತಿಗೆ, ಅಲ್ಲಿರುವ ಅದೃಶ್ಯ ಶಕ್ತಿಗಳಿಗೆ ಸದಾ ಋಣಿಯಾಗಿದ್ದರು. ಗಿಡ, ಮರ, ಪ್ರಾಣಿ, ಪಕ್ಷಿಗಳ ಜೊತೆ, ಕಾಣದ ಶಕ್ತಿಗಳನ್ನೂ ಆದರಿಸಿ, ಔತಣ ನೀಡಿ, ಕೃತಜ್ಞತೆ ಸಲ್ಲಿಸುವ ಆ ಅಪಾರ ಮಾನವೀಯ ಮೌಲ್ಯ ಇವತ್ತೆಲ್ಲಿ ಕಳೆದು ಹೋಯ್ತು? ಒಬ್ಬರ ತುತ್ತನ್ನು ಕಸಿದು ತಿನ್ನುವುದರಲ್ಲೇ ಸಂತೃಪ್ತಿ ಅನುಭವಿಸುವ ಈ ಪೈಶಾಚಿಕತೆ ಯಾವಾಗ ಮೈದೋರಿತು? ಎಂಬುದೇ ಅರ್ಥವಾಗುತ್ತಿಲ್ಲ. ಈ ಬದಲಾವಣೆಗಳೆಲ್ಲ ಮನುಷ್ಯನನ್ನು ಎಲ್ಲಿಗೆ ಹೋಗಿ ತಲುಪಿಸುತ್ತವೆಯೋ ಕಾಲವೇ ಹೇಳಬೇಕು.

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
ಗ್ರಾಮೀಣ ಹಬ್ಬಗಳ ಸಂಭ್ರಮವನ್ನು ಕಣ್ಣೆದುರಿಗೆ ತಂದು ನಿಲ್ಲಿಸಿದಂತಾಯಿತು.ಆ ಸಂಭ್ರಮದ ಬಹುಪಾಲು ಕಡಿಮೆಯಾದರೂ ನಮ್ಮ ಹಬ್ಬಗಳು ಹೊಸ ಮಜಲನ್ನು ಪಡೆಯುತ್ತಿವೆ.
ರವಿ ಪಾಟೀಲ ಪಟ್ಟಣ ( ಕಲಬುರಗಿ)