ನೊಂದವರ ಕಹಳೆ
ವಾಷಿಂಗ್ ಮಷೀನ್‌ನಲ್ಲಿ ಹಾಕಿದ ಬಟ್ಟೆ
ತಿರುಗುವಂತೆ, ಡ್ರಾಯರ್‌ನಲ್ಲಿ
ಒಣಗುವಂತೆ ಭೂಕಂಪಕ್ಕೆ ಅಲಗುವ
ಜಪಾನ್‌ನಂತೆ ನೊಂದವರು
ನೋಯುತ್ತಲೇ ಇದ್ದಾರೆ
‘ನನ್ನ ನೋವು’ ದೊಡ್ಡ ರಸ್ತೆ
‘ನಿನ್ನದು’ ಬರಿ ಚಿಕ್ಕ ಗಲ್ಲಿ
ಹೋಲಿಕೆಗಳ ಮಾಲೆ ಒಬ್ಬರನ್ನೊಬ್ಬರು
ನೋಯಿಸಿದರೆ ಮತ್ತೆ ಉಕ್ಕುವ ಪ್ರವಾಹದ
ನೋವು ಇಬ್ಬರಿಗೂ
ಬಡವನ, ಜಾತಿಹೀನನ
ದುರ್ಬಲನ, ತುಳಿತಕ್ಕೊಳಗಾದವನ
ನೋವಿಗೆ ತೂಕದ
ತಕ್ಕಡಿಯಿದೆಯೇ?
ಸಮಾನ ಗುಂಪಿಗೆ ಸೇರಿದ
ಇಬ್ಬರೂ ಸಮಾನರು ನೋವಲ್ಲಿ
ಕಡಿಮೆ ಹೆಚ್ಚುಗಳ ತೂಕ
ಮೂರನೆಯವನ ನಗೆ ಪಾಟಲಿನ
ಆಹಾರ ಯಾವಾಗಲೂ
ರಾಜ ರಂಕನನ್ನೂ ಬಿಡದ
ಮಲ್ಲಿಗೆಯ ದಾರಿ ನೋವು
ಘಮವ ರುಚಿಸುತ್ತಲೇ
ನೋವ ಅನುಭವಿಸಬೇಕು
ಹೋಲಿಕೆಗಳಿಗೆ ಅವಕಾಶ ಕೊಡದೇ
ಹೋಲಿಕೆ ಚಂದ ಕವಿತೆಯಲಿ
ಜೀವನ ಚಂದ ಅನ್ವಯಿಸದಿರೆ ಹೋಲಿಕೆ
ಜೀವನವೇ ಕವಿತೆ
ಕವಿತೆ ಜೀವನವಾಗುವುದು
ಕಷ್ಟ ಕಷ್ಟ ಕಷ್ಟ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ
ಚಂದದ ಕವಿತೆ ನೊಂದವರ ನೋವಿನ ಪ್ರತಿರೂಪದಂತಿದೆ
Tq sir