Advertisement
ಮಿಂಚಿಹೋದ ಕಾಲ….: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮಿಂಚಿಹೋದ ಕಾಲ….: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೋಮಲ ಮಾತು ಕೇಳಿದ ಸೆಲ್ವಿಗೆ ಏನೇನೊ ಆಲೋಚನೆಗಳು ಸುತ್ತಿಕೊಂಡವು. ಸೆಲ್ವಿ ಗಣಿ ಕಾರ್ಮಿಕ ಮಣಿಯನ್ನು ಮದುವೆ ಮಾಡಿಕೊಂಡಿದ್ದು. ಮಣಿ ತಂದೆ ಸೆಲ್ವಮ್ ಅಪಘಾತದಲ್ಲಿ ಸತ್ತುಹೋಗಿದ್ದು. ಅವಳ ತಂದೆ ಅಯ್ಯಪ್ಪನಿಗೆ ಸಿಲಿಕೋಸಿಸ್ ಬಂದು ಸತ್ತುಹೋಗಿದ್ದು. ಮಣಿ ಮತ್ತು ಸೆಲ್ವಿಯ ಮಧ್ಯೆ ತೊಂದರೆಗಳು; ಹೀಗೆ ಸಾಲು ಸಾಲಾಗಿ ಅವಳನ್ನು ಕಾಡತೊಡಗಿದವು. ಇಪ್ಪತ್ತು ವರ್ಷಗಳ ಹಿಂದೆ ಸೆಲ್ವಿ ತಾನು ಬಸರಿಯಾದಾಗ ಅಪ್ಪ ಅಮ್ಮನಿಗೆ ಹೇಳಿ ಬಸರಿ ತೆಗೆಸಿ ಡಿಗ್ರಿ ಮುಗಿಸಿ ಒಂದು ಕೆಲಸಕ್ಕೆ ಸೇರಿಕೊಂಡು ಬೇರೆ ಯಾರನ್ನಾದರೂ ಮದುವೆ ಮಾಡಿಕೊಂಡಿದ್ದರೆ? ತನ್ನ ಬದುಕು ಈ ರೀತಿ ಇರುತ್ತಿರಲಿಲ್ಲ!
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

ಒಂದು ಭಾನುವಾರ ಮಧ್ಯಾಹ್ನ ಆರ್ಮುಗಮ್, ಅಲಮೇಲು ಜೊತೆಗೆ ಒಂದು ದಂಪತಿ ಮತ್ತು ಒಬ್ಬ ಯುವಕನೂ ಬಂದರು. ಅವರೂ ಕೂಡ ಕನಕಳ ಸಂಬಂಧಿಗಳೇ ಆಗಿದ್ದರು. ಕನಕ ಬಂದವರ ಕೈಕಾಲುಗಳಿಗೆ ನೀರು ಕೊಟ್ಟು ಎಲ್ಲರೂ ಕೈಕಾಲುಗಳನ್ನು ತೊಳೆದುಕೊಂಡು ಒಳಗೋಗಿ ಇದ್ದ ಸ್ಥಳದಲ್ಲೆ ಹೊಂದಿಕೊಂಡು ಕುಳಿತುಕೊಂಡರು. ಮನೆ ಒಳಗಿದ್ದ ಮಣಿ ಎಲ್ಲರನ್ನೂ ಮಾತನಾಡಿಸಿ ಹೊರಕ್ಕೆ ಬಂದು ಕುಳಿತುಕೊಂಡ. ಆದರೆ ಆರ್ಮುಗಮ್, ಮಣಿಯ ಮುಖ ನೋಡಿ ಸರಿಯಾಗಿ ಮಾತನಾಡಲಿಲ್ಲ. ಎಲ್ಲರೂ ತಿಂಡಿ ತಿಂದ ಮೇಲೆ ಆರ್ಮುಗಮ್, “ಏನಮ್ಮ ಎಲ್ಲಾ ಚೆನ್ನಾಗಿದ್ದೀರಾ?” ಎಂದ. ಕನಕ, “ನೀವು ಮಣಿ ಮದುವೆಗೆ ಬರಲೇ ಇಲ್ಲ. ಕೆಜಿಎಫ್‌ಗೆ ಬಂದು 20 ವರ್ಷ ಆಯಿತು. ಈಗ ಬಂದಿದ್ದೀರಿ” ಎಂದಳು. ಆರ್ಮುಗಮ್, “ಸಂಬಂಧ ಬಿಡುವುದಕ್ಕಾಗುತ್ತ? ನನ್ನ ಮಗಳನ್ನು ನೀವು ಮಣಿಗೆ ಮದುವೆ ಮಾಡಿಕೊಳ್ಳಲಿಲ್ಲ. ಹೋಗಲಿ ಈಗಲಾದರೂ ನಿಮ್ಮ ಮೊಮ್ಮಗಳನ್ನು ಈ ಹುಡುಗನಿಗೆ ಕೊಡಿ” ಎಂದ. ಕನಕ, ಸೆಲ್ವಿ ಒಬ್ಬರನ್ನೊಬ್ಬರು ನೋಡಿಕೊಂಡರು. ಮತ್ತೆ ಆರ್ಮುಗಮ್, “ಏನಮ್ಮ ಇಬ್ಬರೂ ಮುಖ ಮುಖ ನೋಡಿಕೊಳ್ತೀರಾ? ನಾನೇನು ಹೊಸಬನಾ? ನಿಮ್ಮ ಹುಡುಗೀನ ಈ ಹುಡುಗನಿಗೆ ಕೊಡ್ತೀರಿ ಅಂತ, ಮಾತು ತೆಕೊಂಡು ಹೋಗುವುದಕ್ಕೆ ಬಂದಿದ್ದೀವಿ” ಎಂದ. ಆರ್ಮುಗಮ್ ಜೊತೆಗೆ ಬಂದಿದ್ದ ದಂಪತಿಗೆ “ತಂದಿರುವ ವಸ್ತುಗಳನ್ನು ತಟ್ಟೆಯಲ್ಲಿ ಇಟ್ಟು ಕೊಡ್ರಮ್ಮ” ಎಂದ.

ಮನೆ ಒಳಕ್ಕೆ ಬಂದ ಮಣಿ, “ಮಾವ ಕೋಮಲಾಗೆ ಇನ್ನೂ 18 ವರ್ಷ ಆಗಿಲ್ಲ. ಅಷ್ಟು ಬೇಗನೆ ಮದುವೆ ಮಾಡುವುದಕ್ಕಾಗುತ್ತ?” ಎಂದ. ಆರ್ಮುಗಮ್, “ಮದುವೆ ನಿಧಾನವಾಗೇ ಮಾಡಿಕೊಳ್ಳೋಣ. ಈಗ ಮಾತುಕೊಡಿ. ನೀವು ಕೆಜಿಎಫ್‌ನವರನ್ನು ನಂಬುವುದಕ್ಕೆ ಆಗುವುದಿಲ್ಲ” ಎಂದ. ಕನಕ, “ಸ್ವಲ್ಪ ಯೋಚನೆ ಮಾಡೋಣ ಇರಣ್ಣ” ಎಂದಿದ್ದೆ, “ನೋಡಮ್ಮ ಇದರಲ್ಲಿ ಯೋಚನೆ ಮಾಡುವುದು ಏನೂ ಇಲ್ಲ. ಹುಡಗನ್ನ ನೋಡಿಕೊಳ್ಳಿ. ಬಂಗಾರದಂತಹ ಹುಡುಗ. ನಾಲ್ಕು ಎಕರೆ ನೆಲ ಇದೆ. ಒಂದು ವರ್ಷ ಬೆಳೆದರೆ ನಾಲ್ಕು ವರ್ಷ ಕುಳಿತುಕೊಂಡು ತಿನ್ನಬಹುದು. ನಿಮ್ಮ ಹುಡುಗೀನ ಕೂಲಿನಾಲಿ ಮಾಡುವುದಕ್ಕೆ ಕಳುಹಿಸುವುದಿಲ್ಲ. ಅವಳು ನಾಲ್ಕು ಎಕರೆಗೆ ಒಡತಿ ಆಗ್ತಾಳೆ. ಮೂವರು ಹುಡುಗಿಯರಿಗೆ ಮದುವೆ ಆಗಿ ಹೋಗಿದೆ. ಉಳಿದಿರುವುದು ಇವನು ಒಬ್ಬನೇ” ಎಂದ. ಮಣಿ, “ಮಾವ, ಅಷ್ಟು ಅವಸರ ಮಾಡಬೇಡಿ” ಎಂದ. ಆರ್ಮುಗಮ್, “ಕನಕ ಇದೇ ಮಾತಾದರೆ ನಾನು ಎದ್ದು ಹೊರಟೋಗ್ತೀನಿ. ನಾನು ಸತ್ತರೂ ನೀವು ನನ್ನನ್ನ ನೋಡುವುದಕ್ಕೆ ಬರಬಾರದು” ಎಂದು ಎದ್ದುನಿಂತುಕೊಂಡ. ಮಣಿ, “ಮಾವ ಸಮಾಧಾನವಾಗಿ ಕುಳಿತುಕೊಳ್ಳಿ ಮಾತನಾಡೋಣ” ಎಂದ. ಆರ್ಮುಗಮ್, “ಆಯಿತು ಸಮಾಧಾನವಾಗೇ ಇರ್ತೀನಿ. ಸಾಯಂಕಾಲದ ಒಳಗೆ ಹೇಳಿ” ಎಂದು ಮನೆ ಹೊರಕ್ಕೆ ಬಂದು ಕಲ್ಲು ಬಂಡೆ ಮೇಲೆ ಕುಳಿತುಕೊಂಡ.

ಸಾಯಂಕಾಲ ನಾಲ್ಕು ಗಂಟೆಗೆಲ್ಲ ಮಣಿ ಟೌನ್‌ಗೆ ಹೋಗಿ ಎರಡು ಕೇಜಿ ಚಿಕನ್ ತಂದುಕೊಟ್ಟ. ಸೆಲ್ವಿ ಮತ್ತು ಕನಕ ಇಬ್ಬರೂ ಸೇರಿಕೊಂಡು ಅಡಿಗೆ ಮಾಡಿದರು. ಸಾಯಂಕಾಲ ಆಯಿತು. ರಾತ್ರಿ ಊಟದ ಸಮಯ ಆಯಿತು. ಕನಕ ಮತ್ತು ಮಣಿ, ಆರ್ಮುಗಮ್ ಮುಂದೆ ಕೋಮಲಳ ಮದುವೆ ಬಗ್ಗೆ ಪ್ರಸ್ತಾಪ ಮಾಡಲೇ ಇಲ್ಲ. ಇಷ್ಟಕ್ಕೂ ಮಣಿ ಚಿಕನ್ ತಂದುಕೊಟ್ಟು ಹೋದವನು ವಾಪಸ್ ಬರಲೇ ಇಲ್ಲ. ಹೊರಗೆ ಕುಳಿತಿದ್ದ ಆರ್ಮುಗಮ್‌ಗೆ ಕೋಪ ನೆತ್ತಿಗೆ ಏರಿತ್ತು. ಆರ್ಮುಗಮ್, “ಕನಕ, ನಿಮ್ಮ ಮಗ ನಮಗೆ ಕೊಡ್ತಾ ಇರುವ ಗೌರವ ನೋಡಿದೇನಮ್ಮ?” ಎಂದ. ಕನಕ, “ಎಲ್ಲಿಗೊ ಹೋಗಿದ್ದಾನೆ ಬರ್ತಾನೆ ಇರಣ್ಣ. ಊಟ ಮಾಡಿದ ಮೇಲೆ ಮಾತಾಡೋಣ” ಎಂದಳು. ಆರ್ಮುಗಮ್, “ಅಲ್ಲಮ್ಮ ಕೋಳಿ ತಿಂದುಕೊಂಡು ಮದುವೆ ವಿಚಾರ ಮಾತಾಡ್ತಾರೇನಮ್ಮ?” ಎಂದ. ಕನಕ ಮುಂದಕ್ಕೆ ಮಾತನಾಡಲಿಲ್ಲ. ಕುದಿಯುತ್ತಿರುವ ಮಸಾಲೆ ಚಿಕನ್ ವಾಸನೆ ಒಂದೇ ಸಮನೆ ಗಮಗಮ ಎಂದು ಬೀದಿಗೆ ಬರುತ್ತಿದೆ. ಅಲಮೇಲು ಮತ್ತು ಜೊತೆಗೆ ಬಂದಿರುವ ಮಹಿಳೆ ಗೋವಿಂದನ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಆರ್ಮುಗಮ್ ಮತ್ತು ಜೊತೆಗೆ ಬಂದಿರುವ ಗಂಡಸು ಹೊರಗೆ ಕಲ್ಲುಬಂಡೆಯ ಮೇಲೆ ಕುಳಿತುಕೊಂಡಿದ್ದಾರೆ. ಜೊತೆಗೆ ಬಂದಿದ್ದ ಯುವಕ ಟೌನ್ ಕಡೆಗೆ ಸುತ್ತಾಡಲು ಹೋಗಿದ್ದಾನೆ.

ರಾತ್ರಿ 8:3ಂ ಗಂಟೆಗೆ ಮಣಿ ಬಂದು ಬಾಗಿಲಲ್ಲಿ ಇಣಿಕಿನೋಡಿ “ಸೆಲ್ವಿ ಅಡಿಗೆ ಆಯಿತಾ?” ಎಂದ. ಸೆಲ್ವಿ, “ಆಗಿದೆ. ಎಲ್ಲರನ್ನೂ ಒಳಕ್ಕೆ ಕರೆಯಿರಿ. ಕೋಮಲ, ನೀನೋಗಿ ಅಲಮೇಲು ಅತ್ತೆ, ಇನ್ನೊಬ್ಬ ಅತ್ತೆ ಗೋವಿಂದ ಮಾವನ ಮನೆಯಲ್ಲಿದ್ದಾರೆ. ಊಟ ಮಾಡಲು ಕರ್ಕೊಂಡು ಬಾ” ಎಂದಳು. ಮಣಿ, “ಮಾವ ಮನೆ ಒಳಗಡೆ ನಡೆಯಿರಿ” ಎಂದ. ಸ್ವಲ್ಪ ಸಾರಾಯಿ ಕುಡಿದು ಬಂದಿದ್ದ ಆರ್ಮುಗಮ್ “ಊಟ ಒಂದು ಕಡೆ ಇರ್ಲಿ. ನಾನು ಮಧ್ಯಾಹ್ನ ಹೇಳಿದ ಮಾತು ಏನಾಯಿತು?” ಎಂದ. ಮಣಿ, “ಊಟ ಮಾಡಿದ ಮೇಲೆ ಮಾತಾಡೋಣ. ನೀವು ಒಳಕ್ಕೆ ನಡೆಯಿರಿ” ಎಂದಿದ್ದೆ, ಆರ್ಮುಗಮ್ “ಕೋಳಿ ತಿಂದುಕೊಂಡು ಯಾರಾದರು ಮದುವೆ ವಿಷಯ ಮಾತಾಡ್ತಾರೇನು? ಮನೆಯಲ್ಲಿ ಕೋಳಿಸಾರು ವಾಸನೇ ಬಂದಾಗಲೇ ಅಂದುಕೊಂಡೆ. ನೀನು ಸರಿಯಾದ ಕೆಲಸಾನೆ ಮಾಡಿದ್ದೀಯ ಅಂತ” ಎಂದ.

ಕೋಮಲ ಪಕ್ಕದ ಮನೆಯಲ್ಲಿದ್ದ ನೆಂಟರನ್ನು ಕರೆದುಕೊಂಡು ಬಂದಳು. ಅಲಮೇಲು ಪಕ್ಕದ ಮನೆಯಿಂದ ಬಂದಿದ್ದೆ ಆರ್ಮುಗಮ್, “ಅಲಮೇಲು ಹುಡುಗೀನ ನಮ್ಮ ಹುಡುಗನಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ಮೇಲೇನೇ ನಾನು ಊಟ ಮಾಡುವುದು” ಎಂದು ಆಜ್ಞೆ ಮಾಡಿದ. ಅಲಮೇಲು, “ಆಯಿತು. ಬೀದಿಯಲ್ಲಿ ಎಲ್ಲಾ ನೋಡ್ತಾರೆ. ಒಳಗಡೆಗೆ ಎದ್ದು ಬನ್ನಿ” ಎಂದಳು. ಆರ್ಮುಗಮ್, “ನಾನು ಬರುವುದಿಲ್ಲ. ನಿನಗೆ ಮಾನ ಮರ್ಯಾದೆ ಇಲ್ಲದಿದ್ದರೆ ನನಗಿಲ್ಲವ? ನೀನು ಕುಳಿತುಕೊಂಡು ಚೆನ್ನಾಗಿ ತಿನ್ನು. ನಿಮ್ಮ ಅಣ್ಣನ ಮನೆಯಲ್ಲಿ. ನೀನು ಬಿಟ್ಟುಕೊಡ್ತಿಯ ಅಣ್ಣನ್ನ, ಅಣ್ಣನ ಮಗನ್ನ” ಎಂದ. ಮಣಿ, “ಮಾವ ಬೆಳಿಗ್ಗೆ ಮಾತಾಡೋಣ. ಈಗ ಬಂದು ಊಟ ಮಾಡಿ” ಎಂದ. ಆರ್ಮುಗಮ್ ಏನೂ ಹೇಳಿದರೂ ಕಲ್ಲು ಬಂಡೆ ಮೇಲೆ ಇನ್ನೊಂದು ಬಂಡೆಯಂತೆ ಕುಳಿತೇ ಇದ್ದನು.

ಬಂದಿದ್ದ ನೆಂಟರನ್ನು ಒಳಗೆ ಕೂರಿಸಿ ಊಟ ಹಾಕಿ ಎಲ್ಲರೂ ತಿಂದರೂ ಆರ್ಮುಗಮ್ ಮಾತ್ರ ಮನೆ ಒಳಕ್ಕೆ ಬರಲಿಲ್ಲ. ಅಲಮೇಲು ತಟ್ಟೆಯಲ್ಲಿ ಊಟ ಹಾಕಿಕೊಂಡು ಬಂದು ಆರ್ಮುಗಮ್ ಪಕ್ಕದಲ್ಲಿ ಕುಳಿತುಕೊಂಡು ಊಟ ಮಾಡುವಂತೆ ಬೇಡಿಕೊಂಡಳು. ಮಣಿ, ಸುಮತಿ, ಕನಕ ಊಟ ಮಾಡುತ್ತಿದ್ದು ಸೆಲ್ವಿ ಊಟ ಬಡಿಸುತ್ತಿದ್ದಳು. ಅಷ್ಟರಲ್ಲಿ ಯಾರೋ ಬಂದು “ಮಣಿ.. ಮಣಿ..” ಎಂದಿದ್ದೆ ಮಣಿ ಎದ್ದು ಹೊರಕ್ಕೆ ಬಂದ. “ಮಣಿ ನಿಮ್ಮ ಮಾವ ಆಸ್ಪತ್ರೆಯಲ್ಲಿ ಹೋಗಿಬಿಟ್ಟರು” ಎಂದ. ಸೆಲ್ವಿ “ಅಯ್ಯೊ ಅಪ್ಪಾ..” ಎಂದು ಜೋರಾಗಿ ಕೂಗಿಕೊಂಡಳು. ಅವಳ ಕೂಗು ಕೇಳಿದ ಪಕ್ಕದ ಮನೆ ಗೋವಿಂದ ಮತ್ತು ಆತನ ಪತ್ನಿ ಇನ್ನಷ್ಟು ಜನರು ಮಣಿ ಮನೆ ಕಡೆಗೆ ಓಡಿ ಬಂದರು. ಮಣಿ ಊಟದ ತಟ್ಟೆಯನ್ನು ಹಾಗೇ ಬಿಟ್ಟು ಸೆಲ್ವಿ ಜೊತೆಗೆ ಅಯ್ಯಪ್ಪನ ಮನೆ ಕಡೆಗೆ ಅಳುತ್ತಾ ಕತ್ತಲಲ್ಲಿ ಓಡಿಹೋದರು. ಅವರ ಹಿಂದೆ ಕಾರ್ತಿಕ್ ಕೂಡ ಓಡಿದ. ಕನಕ, ಕೋಮಲ ಜೊತೆಗೆ ಕುಳಿತುಕೊಂಡಳು. ಎಲ್ಲರೂ ಆ ಕಡೆಗೆ ಓಡಿದ್ದೆ ಆರ್ಮುಗಮ್, “ಸಾಲದ್ದಕ್ಕೆ ಇದೊಂದಾಯಿತಾ? ಇನ್ನು ನಮ್ಮ ಕೆಲಸ ಆದಂತೆಯೇ” ಎಂದು ಪಕ್ಕದಲ್ಲಿದ್ದ ತಟ್ಟೆಯನ್ನು ತೆಗೆದುಕೊಂಡು ಊಟ ಮಾಡತೊಡಗಿದ. ಆರ್ಮುಗಮ್ ಮತ್ತು ಜೊತೆಗೆ ಬಂದಿದ್ದ ನೆಂಟರೆಲ್ಲರೂ ಬೆಳಿಗ್ಗೆ ಎದ್ದು ಊರಿಗೆ ಹೋಗುವುದಾಗಿ ತೀರ್ಮಾನ ಮಾಡಿಕೊಂಡರು.

***

ಮರುದಿನ ಮಧ್ಯಾಹ್ನ ಅಯ್ಯಪ್ಪನ ಮನೆ ಮುಂದೆ ಇಕ್ಕಟ್ಟಾದ ರಸ್ತೆಯಲ್ಲಿ ಬ್ಯಾಂಡ್ ವಾದ್ಯಗಳನ್ನು ಒಂದೇ ಸಮನೆ ಢಂ.. ಢಂ.. ಎಂದು ಬಾರಿಸುತ್ತಿದ್ದಾರೆ. ಆ ಭಯಂಕರ ಸದ್ದಿಗೆ ಕಾಲೋನಿಯ ಬಿದಿರು ದಟ್ಟಿ ಮನೆಗಳೆಲ್ಲ ಎದ್ದು ಕುಣಿದಾಡುವಂತೆ ಕಾಣಿಸುತ್ತಿವೆ. ಸಾಲದ್ದಕ್ಕೆ ಯುವಕರು, ಪುಡಿ ಹುಡುಗರು ವಾದ್ಯಗಳ ಮುಂದೆ ಹೇಗೆಂದರೆ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಬೀಸುತ್ತಿರುವ ಗಾಳಿ ಸುತ್ತಲಿನ ಸೈನಾಟ್ ಗುಡ್ಡಗಳ ಮಣ್ಣನ್ನು ಅವರ ಮೇಲೆ ತಂದೂತಂದೂ ಚೆಲ್ಲುತ್ತಿದೆ. ಕಣ್ಣೂ, ಬಾಯಿ, ಮೂಗು, ತಲೆ, ಮೈಯಲ್ಲಾ, ಮಣ್ಣು ಮುತ್ತಿಕೊಳ್ಳುತ್ತಿದೆ. ಅಯ್ಯಪ್ಪನ ಹೆಣವನ್ನು ಪೆಂಡಾಲ್ ಕೆಳಗೆ ಇಡಲಾಗಿದೆ. ಇನ್ನೇನು ಮೂರು ಗಂಟೆಯಾಗಿ ಸೂರ್ಯ ಪಶ್ಚಿಮದ ಕಡೆಗೆ ಇಳಿಯಲು ಪ್ರಾರಂಭಿಸಿದ್ದಾನೆ. ಬಂದಿದ್ದವರಲ್ಲಿ ಕೆಲವರು, ಇನ್ನೂ ಯಾರಾದರು ಬರುವವರಿದ್ದಾರೆಯೇ ಎಂದು ಪದೇ ಪದೇ ಕೇಳುತ್ತಿದ್ದಾರೆ.

ಆಯಿತು, ಉಳಿದ ಕಾರ್ಯಗಳನ್ನು ಮಾಡುವುದರಲ್ಲಿ ನಾಲ್ಕು ಗಂಟೆ ಆಗಿಯೇ ಹೋಗುತ್ತದೆ. ಸರಿಯಾಗಿ ನಾಲ್ಕು ಗಂಟೆಗೆ ಮೃತ ದೇಹವನ್ನು ಸುಡುಗಾಡಿನ ಕಡೆಗೆ ಕೊಂಡೊಯ್ಯಲು ಪ್ರಾರಂಭಿಸಿದರೆ ಒಂದು ಅಥವಾ ಒಂದೂವರೆ ಗಂಟೆ ಆಗಬಹುದು ಎನ್ನುತ್ತಾ ಎಲ್ಲವನ್ನೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಷ್ಟರಲ್ಲಿ ಹೆಣಗಳನ್ನು ಸಾಗಿಸುವ ರಾಬರ್ಟ್ಸನ್‌ಪೇಟೆ ಪುರಸಭೆಯ ಕಪ್ಪು ವಾಹನ ನಿಧಾನವಾಗಿ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡಿತು. ವಾಹನವನ್ನು ಮುಂದಕ್ಕೆ ಹೋಗಿ ತಿರುಗಿಸಿಕೊಂಡು ಹಿಂದಕ್ಕೆ ಬಂದು ನಿಲ್ಲಿಸುವಂತೆ ಹೇಳಿದರು. ಚಾಲಕ ಹಾಗೇ ಮಾಡಿದ.

ಅಯ್ಯಪ್ಪನ ದೇಹದ ಮೇಲೆ ಬಿದ್ದಿದ್ದ ಹೂವಿನ ಹಾರಗಳನ್ನು ತೆಗೆದೂ ತೆಗೆದೂ ಕಲ್ಲು ಬಂಡೆಯ ಮೇಲೆ ಗುಡ್ಡೆಯಾಕಿದರು. ನಾಲ್ಕಾರು ಜನರು ಸೇರಿಕೊಂಡು ಮೃತ ದೇಹವನ್ನು ನಿಧಾನವಾಗಿ ಎತ್ತಿ ಮನೆ ಪಕ್ಕದಲ್ಲಿಯೇ ಸ್ನಾನ ಮಾಡಿಸತೊಡಗಿದರು. ಸುತ್ತಲೂ ಮಹಿಳೆಯರು ಸುತ್ತಿಕೊಂಡು ಒಂದೇ ಸಮನೆ ರೋದನೆ ಮಾಡುತ್ತಿದ್ದರು. ಅಯ್ಯಪ್ಪನ ತಲೆಗೆ ಎಲ್ಲಾ ನೆಂಟರು ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ನಿಧಾನವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಚಟ್ಟದ ಮೇಲೆ ಮಲಗಿಸಿದರು. ಅದನ್ನು ಹಸಿ ಬಿದಿರು ದಬ್ಬೆಗಳು ಮತ್ತು ಭತ್ತದ ಹುಲ್ಲಿನಿಂದ ಮಾಡಲಾಗಿತ್ತು. ಹೆಣವನ್ನು ಅದರ ಮೇಲೆ ಮಲಗಿಸಿ ಎರಡೂ ಕಡೆ ಭತ್ತದ ಹುಲ್ಲಿನ ಹುರಿಗಳಿಂದ ದೇಹವನ್ನು ಎಳೆದು ಬಿಗಿಯಾಗಿ ಕಟ್ಟಲಾಯಿತು. ನಂತರ ಚಟ್ಟವನ್ನು ಹಾಗೇ ಎತ್ತಿ ಪುರಸಭೆ ವಾಹನದ ಒಳಕ್ಕೆ ಇಡಲಾಯಿತು. ಅದಕ್ಕೆ ಮುಂಚೆ ಯಾರಾದರೂ ಮುಖ ನೋಡುವವರಿದ್ದರೆ ಮುಖ ನೋಡಿಬಿಡಿ ಎಂದು ಹೇಳಲಾಯಿತು.

ನೆಂಟರ ಜೊತೆಗೆ ಸಾಕಷ್ಟು ಗಣಿ ಕಾರ್ಮಿಕರು, ಸುತ್ತಮುತ್ತಲಿನ ಜನರು ಬಂದಿದ್ದರು. ಆಕ್ರಂದನದ ಮಧ್ಯೆ ಕಪ್ಪು ಬಣ್ಣದ ಯಮರಾಜನ ಪುರಸಭೆ ವಾಹನ ನಿಧಾನವಾಗಿ ಆಂಡರ‍್ಸನ್‌ಪೇಟೆಯ ದಾರಿಯಲ್ಲಿ ರೋಜರ್ಸ್ ಕ್ಯಾಂಪ್ ಹತ್ತಿರ ಇರುವ ಸುಡುಗಾಡಿನ ಕಡೆಗೆ ಹೊರಟಿತು. ಮುಂದೆ ಬ್ಯಾಂಡ್ ವಾದ್ಯಗಾರರು ಒಂದೇ ಸಮನೆ ಬಾರಿಸುತ್ತಿದ್ದರೆ ಅವರ ಮಧ್ಯೆ ಯುವಕರು, ಹುಡುಗರು ಕುಣಿಯುತ್ತಿದ್ದರು. ಪಠಾಕಿಗಳು ಸಿಡಿಯುತ್ತಿದ್ದವು. ಹೂವುಗಳನ್ನು ದಾರಿಯ ಉದ್ದಕ್ಕೂ ಎಸೆಯುತ್ತಿದ್ದರು. ಜೊತೆಗೆ ಪುರಿ, ಚಿಲ್ಲರೆ ಕಾಸುಗಳನ್ನು ಚೆಲ್ಲುತ್ತಿದ್ದರು. ಅಂತೂ ಕೊನೆಗೆ ಅಯ್ಯಪ್ಪನ ಹೆಣ ರೋಜರ್ಸ್ ಕ್ಯಾಂಪ್ ಹತ್ತಿರದ ಸುಡುಗಾಡಿನಲ್ಲಿ ಚಿರನಿದ್ರೆಯಲ್ಲಿ ಮಲಗಿಕೊಂಡಿತು. ದಶಕಗಳ ಕಾಲ ವಿಷ ಧೂಳನ್ನು ಉಸಿರಾಡುತ್ತ ಕಪ್ಪು ಸುರಂಗಗಳಲ್ಲಿ ಗಾಳಿಯಿಲ್ಲದೆ ನೀರಿಲ್ಲದೆ ಸರಿಯಾಗಿ ಆಹಾರ ಇಲ್ಲದೇ ಕೆಲಸ ಮಾಡಿದ್ದಕ್ಕಾಗಿ ಇನ್ನೊಬ್ಬ ಪ್ರಮಾಣಿಕ ಗಣಿ ಕಾರ್ಮಿಕ ತನ್ನ ಪ್ರಾಣ ಕಳೆದುಕೊಂಡಿದ್ದನು. ಗಣಿಗಳಲ್ಲಿ ಕೆಲಸ ಮಾಡಿ ಸಿಲಿಕೋಸಿಸ್ ರೋಗಕ್ಕೆ ಪ್ರಾಣ ಕಳೆದುಕೊಂಡವರ ಪಟ್ಟಿಗೆ ಅಯ್ಯಪ್ಪನೂ ಸೇರಿಕೊಂಡಿದ್ದನು.

***

ಸೆಲ್ವಿ ಮತ್ತು ಕೋಮಲ ಇಬ್ಬರೂ ಗಣಿ ಪಡಿತರ ಅಂಗಡಿಯಲ್ಲಿ ಹಾಕಿದ್ದ ಅಕ್ಕಿಯನ್ನು ಸಿಮೆಂಟ್ ನೆಲದ ಮೇಲೆ ಹಾಕಿಕೊಂಡು ತಲೆ ಬಗ್ಗಿಸಿಕೊಂಡು ಸ್ವಚ್ಛ ಮಾಡುತ್ತಿದ್ದರೆ ಕನಕ ಮೂಲೆಯಲ್ಲಿ ಬಟ್ಟೆ ಹೊದ್ದು ಕುಳಿತುಕೊಂಡು ಗತಕಾಲದ ದಿನಗಳನ್ನು ನೆನಪಿಸಿಕೊಳ್ಳುವಂತೆ ತೋರುತ್ತಿದ್ದಳು. ಸೆಲ್ವಿ ಪಿಯುಸಿವರೆಗೂ ಓದಿ ಬಸರಿಯಾಗಿ ಕಾಲೇಜ್ ಬಿಡಬೇಕಾಗಿ ಬಂದಿದ್ದರೆ, ಕೋಮಲ ಎಸ್‌ಎಸ್‌ಎಲ್‌ಸಿಯಲ್ಲೇ ಫೇಲಾಗಿ ಮನೆಯಲ್ಲಿ ಕುಳಿತುಕೊಂಡಿದ್ದಳು. ಸೆಲ್ವಿ, ಕೋಮಲಳನ್ನು ಸುಮ್ಮನೇ ಮಾತಿಗೆ “ಆ ವೆಲ್ಲೂರು ಕಡೆ ಹುಡುಗನ್ನ ಮದುವೆ ಮಾಡಿಕೊಳ್ತೀಯ ಕೋಮಲ” ಎಂದಳು. ತಕ್ಷಣವೇ ಕೋಮಲ, “ನೀವು ನನ್ನನ್ನ ಯಾರಿಗಾದರೂ ಕೊಟ್ಟು ಮದುವೆ ಮಾಡಿ ಅಮ್ಮ. ಆದರೆ ಅಂಡರ್‌ಗ್ರೌಂಡ್‌ನಲ್ಲಿ ಕೆಲಸ ಮಾಡುವವರಿಗೆ ಮಾತ್ರ ಕೊಟ್ಟು ಮದುವೆ ಮಾಡಬೇಡಿ” ಎಂದಳು. ಕೋಮಲ ಮಾತು ಕೇಳಿದ ಸೆಲ್ವಿ ಒಮ್ಮೆಲೆ ದಂಗಾಗಿಹೋದಳು. ಒಂದೆರಡು ಕ್ಷಣಗಳು ಸೆಲ್ವಿ ಬಾಯಿ ಬಿಡಲಿಲ್ಲ.

ಕೋಮಲ ಮಾತು ಕೇಳಿದ ಸೆಲ್ವಿಗೆ ಏನೇನೊ ಆಲೋಚನೆಗಳು ಸುತ್ತಿಕೊಂಡವು. ಸೆಲ್ವಿ ಗಣಿ ಕಾರ್ಮಿಕ ಮಣಿಯನ್ನು ಮದುವೆ ಮಾಡಿಕೊಂಡಿದ್ದು. ಮಣಿ ತಂದೆ ಸೆಲ್ವಮ್ ಅಪಘಾತದಲ್ಲಿ ಸತ್ತುಹೋಗಿದ್ದು. ಅವಳ ತಂದೆ ಅಯ್ಯಪ್ಪನಿಗೆ ಸಿಲಿಕೋಸಿಸ್ ಬಂದು ಸತ್ತುಹೋಗಿದ್ದು. ಮಣಿ ಮತ್ತು ಸೆಲ್ವಿಯ ಮಧ್ಯೆ ತೊಂದರೆಗಳು; ಹೀಗೆ ಸಾಲು ಸಾಲಾಗಿ ಅವಳನ್ನು ಕಾಡತೊಡಗಿದವು. ಕೋಮಲಳ ಮಾತು ಕೇಳಿದ ಕನಕ, ಸೆಲ್ವಮ್‌ನನ್ನು ನೆನೆದುಕೊಂಡು ಆಲೋಚಿಸತೊಡಗಿದಳು. ಇಪ್ಪತ್ತು ವರ್ಷಗಳ ಹಿಂದೆ ಸೆಲ್ವಿ ತಾನು ಬಸರಿಯಾದಾಗ ಅಪ್ಪ ಅಮ್ಮನಿಗೆ ಹೇಳಿ ಬಸರಿ ತೆಗೆಸಿ ಡಿಗ್ರಿ ಮುಗಿಸಿ ಒಂದು ಕೆಲಸಕ್ಕೆ ಸೇರಿಕೊಂಡು ಬೇರೆ ಯಾರನ್ನಾದರೂ ಮದುವೆ ಮಾಡಿಕೊಂಡಿದ್ದರೆ? ತನ್ನ ಬದುಕು ಈ ರೀತಿ ಇರುತ್ತಿರಲಿಲ್ಲ!

ಗಣಿ ಕಾಲೋನಿಗಳ ಎಷ್ಟೋ ಹುಡುಗರು ಡಿಗ್ರಿ/ಮಾಸ್ಟರ್ ಡಿಗ್ರಿ ಓದಿ ರಾಜ್ಯ ಸರಕಾರ, ಕೇಂದ್ರ ಸರಕಾರದ ಅನೇಕ ಇಲಾಖೆಗಳಲ್ಲಿ ಕೆಲಸಗಳಿಗೆ ಸೇರಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಅನೇಕ ಕಾರ್ಖಾನೆಗಳಲ್ಲಿ ಕೆಜಿಎಫ್ ಹುಡುಗರು ಕೆಲಸ ಮಾಡುತ್ತಿದ್ದಾರೆ. ಅಷ್ಟೇಕೆ ಇದೇ ಕೆಜಿಎಫ್‌ನ ಬೆಮೆಲ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಯಾರಾದರು ಒಬ್ಬ ಹುಡುಗ ದೊರಕುತ್ತಿರಲಿಲ್ಲವೆ? ರಾಜಿ ಮತ್ತು ಪಾರ್ವತಿ ಇಬ್ಬರೂ ಡಿಗ್ರಿ ಮುಗಿಸಿ ಕೆಲಸ ಮಾಡುವ ಕಾಲೋನಿ ಹುಡುಗರನ್ನೇ ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿ ಸ್ವಂತ ಮನೆಗಳನ್ನ ಕಟ್ಟಿಕೊಂಡು ಹಾಯಾಗಿದ್ದಾರೆ. ಎಲ್ಲಾ ನನ್ನ ಹಣೆ ಬರಹ! ಕಳೆದು 20 ವರ್ಷಗಳಿಂದಲೂ ಇದೇ ರೀತಿಯ ಯೋಚನೆಗಳು ನೂರಾರು, ಸಾವಿರಾರು ಸಲ ಅವಳನ್ನು ಕಾಡಿವೆ. ಆದರೆ ಪ್ರಯೋಜನವೇನು?

ಒಂದು ಸಣ್ಣ ತಪ್ಪಿಗೆ ಆಗ ತೆಗೆದುಕೊಂಡು ತಪ್ಪು ನಿರ್ಧಾರದಿಂದ ಕಳೆದ 2ಂ ವರ್ಷಗಳಿಂದಲೂ ಸೆಲ್ವಿ ಪಡಬಾರದ ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಒಬ್ಬ ಗಣಿ ಕಾರ್ಮಿಕನನ್ನು ಮದುವೆ ಮಾಡಿಕೊಂಡು ಅನುಭವಿಸುವ ಕಷ್ಟಗಳನ್ನು ನರಕಯಾತನೆ ಅನ್ನಬಹುದು. ಬಹುಶಃ ಇಂತಹ ಪದಗಳು ನಮ್ಮಂತವರಿಗಾಗಿಯೆ ಹುಟ್ಟಿಕೊಂಡಿವೆಯೋ ಏನೊ? ಮಣಿ, ಪ್ರತಿ ದಿನ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದಾಗಿನಿಂದ ಅವನು ಮತ್ತೆ ಕೆಲಸದಿಂದ ಹಿಂದಿರುಗಿ ಬರುವವರೆಗೂ ಹೃದಯ ಭಯದಿಂದ ತುಡಿಯುತ್ತಲೇ ಇರುತ್ತದೆ. ಗಣಿಗಳ ಒಳಗೆ ಸಂಭವಿಸುವ ಒಂದು ಸಣ್ಣ ಸ್ಫೋಟ ಕಿವಿಗಳಿಗೆ ಬಿದ್ದರೂ ಸಾಕು ಪ್ರಾಣವೇ ಹಾರಿ ಹೋಗುತ್ತದೆ. ಜೊತೆಗೆ ಕಾರ್ತಿಕ್ ಮತ್ತು ಕೋಮಲಳ ಭವಿಷ್ಯ ಮುಂದೆ ಹೇಗಿರುತ್ತದೊ ಏನೋ ಎನ್ನುವ ಭಯ ಅವಳನ್ನು ಯಾವಾಗಲೂ ಕಾಡುತ್ತಿರುತ್ತದೆ. ಸಾಲದ್ದಕ್ಕೆ ಕೋಮಲ 1ಂನೇ ತರಗತಿಯಲ್ಲೇ ಫೇಲ್ ಆಗಿ ಮನೆಯಲ್ಲಿ ಕುಳಿತುಕೊಂಡಿದ್ದಾಳೆ.

(ಹಿಂದಿನ ಕಂತು: ಬದುಕೆಂದರೆ ಜಟಕಾ ಬಂಡಿಯೇ ಇನ್ನೇನೂ ಅಲ್ಲ)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ