ಶಿಕ್ಷಕರ ಬಗ್ಗೆ ಮಕ್ಕಳಿಗೆ ಅದೆಷ್ಟು ಪ್ರೀತಿ ಓಲೈಸುವಿಕೆ ಇರುತ್ತದೆ ಎಂದರೇ ನಿಜಕ್ಕೂ ಇಂತಹ ವೃತ್ತಿಗೆ ಬಂದವರೆ ಧನ್ಯರು. ಕೆಡುಕನ್ನೇ ಕಾಣದ ಮುಗ್ಧ ಮನಸ್ಸುಗಳ ಜೊತೆ ನಾವು ಮಕ್ಕಳಾಗಿ ನಲಿಯುವುದಿದೆಯಲ್ಲ ಅಂತಹ ಖುಷಿಯನ್ನ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ. ಶಾಲಾ ಗೇಟಿನಿಂದ ಟೀಚರ್ ಬ್ಯಾಗ್ ಶಾಲೆಗೆ ತೆಗೆದುಕೊಂಡು ಹೋಗಿ ತರಗತಿಯೊಳಗೆ ಇಡುವುದರಲ್ಲಿ, ಟೀಚರ್‌ಗೆ ಹಾಜರಾತಿ ತಂದು ಕೊಡುವುದರಲ್ಲಿ ಮಕ್ಕಳ ನಡುವೆ ಪೈಪೋಟಿ ನಡೆಯುತ್ತಿರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಬೆಳ್ ಬೆಳಗ್ಗೆ ಮಕ್ಕಳ ನಡುವೆ ಬಿರುಸಾದ ಬಿಸಿ ಬಿಸಿ ಚರ್ಚೆ ಆರಂಭವಾಗಿತ್ತು. “ಈ ಓಲೆ ತುಂಬಾ ಚೆನ್ನಾಗಿದೆ. ನಾನು ಚಂದ ಇದ್ದೀನ್ ಅಲ್ವಾ… ಇವು ನನಗೆ ತುಂಬಾ ಚೆನ್ನಾಗಿ ಒಪ್ಪುತ್ತವೆ ಅಂತ ಟೀಚರ್ ಇವುಗಳನ್ನು ನನಗೆ ಕೊಟ್ಟಿದ್ದಾರೆ.”

“ಅದೇನ್ ಮಹಾ ನೋಡಿಲ್ಲಿ, ಈ ಸೀರೆ ಬಣ್ಣ ಹೊಳೆಯುತ್ತಿದೆ. ನಮ್ಮ ಮಿಸ್ ಥರನೇ ಇದೆ. ಮಿಸ್‌ಗೆ ನಾನು ಅಂದ್ರೆ ತುಂಬಾ ಇಷ್ಟ ಅದಕ್ಕೆ ನನಗೆ ಈ ಸೀರೆ ಕೊಟ್ಟಿದ್ದಾರೆ”.

“ಅಯ್ಯೋ ಮಂಕು ದಿಣ್ಣೆಗಳಾ ಕೇಳಿರಿ, ನೀವಿಬ್ಬರು ಏನು ಮಹಾ ಜಂಬ ಕೊಚ್ಚಿ ಕೊಳ್ಳುತ್ತಿದ್ದೀರಾ, ಮಿಸ್‌ಗೆ ನಿಮ್ಮೆಲ್ಲರಿಗಿಂತ ನಾನೇ ತುಂಬಾ ಇಷ್ಟ. ಅದಕ್ಕೆ ನೋಡು ನನಗೆ ಈ ಚೌಲಿ, ಕುಚ್ಚು, ಜಡೆಬಿಲ್ಲೆ, ಡಾಬುಗಳನ್ನು ಕೊಟ್ಟಿದ್ದಾರೆ” ಎಂದು ಅವುಗಳನ್ನೆಲ್ಲ ಸರಸರನೇ ಬ್ಯಾಗಿನಿಂದ ತೆಗೆದು ಎಲ್ಲರ ಮುಂದೆ ಪ್ರದರ್ಶಿಸಿ ಸಂಭ್ರಮಿಸುತ್ತಿದ್ದಳು. ಅಷ್ಟರಲ್ಲಿ ಅಲ್ಲಿಗೆ ಬಂದ ಗಂಡೈಕಳು “ಮಿಸ್‌ಗೆ ನಿಮಗಿಂತ ಗಂಡು ಮಕ್ಕಳೆಂದರೇ ತುಂಬಾ ಇಷ್ಟ. ಅದಕ್ಕೆ ಅವರು ಡ್ಯಾನ್ಸ್‌ಗೆ ನಿಮಗಿಂತ ಜಾಸ್ತಿ ಹುಡುಗರನ್ನೇ ಸೇರಿಸಿಕೊಂಡಿದ್ದಾರೆ” ಎಂದು ಹುಡುಗಿಯರ ಕಡೆ ನೋಡಿ ಗಹಗಹಿಸಿ ನಗುತ್ತಿದ್ದರು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾನು ಅವರ ಜಗಳಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿ ಎಲ್ಲಾ ಬನ್ನಿ ಮಕ್ಕಳೇ ಇಲ್ಲಿ ಅಂದೆ. ಎಲ್ಲರೂ ತಾ ಮುಂದು ನಾ ಮುಂದು ಎಂದು ಓಡಿ ಬಂದು ನನ್ನ ಸುತ್ತಲೂ ಆವರಿಸಿದರು. ಮಕ್ಕಳಿಗೆ ಶಿಕ್ಷಕರನ್ನು ಕಂಡರೆ ಅದೇನು ಪ್ರೀತಿಯೆಂದರೆ ಶಿಕ್ಷಕರನ್ನು ಅಡ್ಡಾಡಲು ಬಿಡುವುದಿಲ್ಲ. ನೆರಳಿನಂತೆ ಸದಾ ಟೀಚರನ್ನೇ ಹಿಂಬಾಲಿಸುತ್ತಾರೆ. ಬನ್ನಿ ಮಕ್ಕಳೇ ಇವತ್ತು ಸಮುದಾಯದತ್ತ ಶಾಲಾ ಕಾರ್ಯಕ್ರಮ. ಇದು ನಮ್ಮ ಶಾಲಾ ಹಬ್ಬ. ನಾವು ನೀವು ಎಲ್ಲರೂ ಸೇರಿ ಆಚರಿಸುವ ಹಬ್ಬ. ಈ ಖುಷಿಯಲ್ಲಿ ನಿಮ್ಮದೇನು ಜಟಾಪಟಿ ಅಂದೆ. ತಕ್ಷಣ ಹುಡುಗಿಯರು ಹುಡುಗರೆಂಬ ಭೇದವಿಲ್ಲದೆ ಎಲ್ಲರೂ ಒಕ್ಕೊರಿಲಿನಲ್ಲಿ ನಿಮಗೆ ಯಾರು ಹೆಚ್ಚು ಇಷ್ಟ? ಹೇಳಿ ಅಂದರು. ನನಗೆ ಉತ್ತರಿಸಲು ಅವಕಾಶ ನೀಡದೆ ನಾನೇ, ನಾನೇ, ಎಂಬ ಮಕ್ಕಳ ಶಬ್ದ ತರಂಗಗಳಾಗಿ ಪ್ರತಿಧ್ವನಿಸಿದವು. ಮೌನ ಮುರಿದು ನಾನು ಮಕ್ಕಳೇ ನನಗೆ ನಿಮ್ಮೆಲ್ಲರನ್ನು ಕಂಡರೂ ತುಂಬಾ ಇಷ್ಟ. ತಾಯಿ ತನ್ನ ಮಕ್ಕಳಲ್ಲಿ ಯಾರು ಇಷ್ಟ ಎಂದರೆ ಉತ್ತರ ಹೇಳಕ್ಕಾಗುತ್ತದೆಯೇ? ಟೀಚರ್‌ಗೂ ಅಷ್ಟೇ ತನ್ನೆಲ್ಲ ವಿದ್ಯಾರ್ಥಿಗಳು ಒಂದೆ ಎಂಬ ಭಾವ. ನಿಮ್ಮೆಲ್ಲರ ಮೇಲು ನನಗೆ ಸಮಾನ ಪ್ರೀತಿ ಎಂದಾಗ ಮಕ್ಕಳು ಮಿಸ್ ಇಂದು ಸುಳ್ಳು ಹೇಳುತ್ತಿದ್ದಾರೆ. ಇಂದು ಮಿಸ್ ಮೂಡ್ ಸರಿ ಇಲ್ಲ ಅನಿಸುತ್ತೆ. ನಾನು ಎಷ್ಟು ಕಲರ್ ಇದೀನಿ, ಅವನು ಚೆನ್ನಾಗಿ ಓದಲ್ಲ, ಅವಳಿಗೆ ಸರಿಯಾಗಿ ನಡೆಯಲು ಆಗಲ್ಲ, ಅವನು ಹಳೆ ಬಟ್ಟೆ ಹಾಕಿಕೊಂಡು ಬರುವನು, ಅವನ ಅಪ್ಪ ಕುಡುಕ, ಇವರೆಲ್ಲ ಮಿಸ್‌ಗೆ ಹೇಗೆ ಇಷ್ಟವಾಗುತ್ತಾರೆ ಎಂಬ ಮಾತುಗಳು ಬೇಡವೆಂದರೂ ನನ್ನ ಕಿವಿಗೆ ಅಪ್ಪಳಿಸುತ್ತಿದ್ದವು. ನಾನಾಗ ಯೋಚಿಸಿದೆ. ಇದು ಯಾಕೋ ಸರಿ ಕಾಣುತ್ತಿಲ್ಲ. ಇದಕ್ಕೊಂದು ಅಂತ್ಯ ಹಾಡಿ ಪರಸ್ಪರ ಗೌರವ ಮೂಡಿಸಬೇಕು ಇಲ್ಲದಿದ್ದರೆ ಸ್ವ ಪ್ರತಿಷ್ಠೆಯ ಗರ್ವದಲ್ಲಿ ಮುಳುಗಿ ಹಾಳಾಗುತ್ತಾರೆಂದು ನಿರ್ಧರಿಸಿದೆ.

ಮಕ್ಕಳೇ ಎಲ್ಲಾ ಸಾಲಾಗಿ ನಿಲ್ಲಿರಿ. ನಿಮ್ಮ ಎರಡು ಕೈಗಳನ್ನು ಮುಂದೆ ಚಾಚಿ, ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಿ ಎನ್ನುತ್ತಿರುವಾಗಲೇ ಅತ್ಯುತ್ಸಾಹದಿಂದ ತಮ್ಮ ಕೈಗಳೆರಡನ್ನು ಮುಂದೆ ಚಾಚಿದರು. ನೋಡಿ ಮಕ್ಕಳೇ ನಿಮಗೆ ಈ ಎರಡು ಕೈಗಳಲ್ಲಿ ಯಾವುದು ಇಷ್ಟ? ಬಲಗೈನಾ? ಎಡಗೈನಾ? ಅಂದಾಗ, ಎರಡೂ ಇಷ್ಟ ಮಿಸ್ ಅಂದರು. ಅದೇಗೆ ಎಲ್ಲವೂ ಇಷ್ಟ ಆಗುತ್ತೆ? ನಿಮಗೆ ಬಲಗೈ ಅಥವಾ ಎಡಗೈ ಒಂದು ಮಾತ್ರ ಇಷ್ಟ ಆಗಬೇಕು ಅಂದಾಗ ಇಲ್ಲ ಮಿಸ್ ಎರಡು ಕೈಗಳು ಇಷ್ಟ ಎಂದು ತುಂಬಾ ಆತ್ಮವಿಶ್ವಾಸದಿಂದ ಹೇಳಿದರು. ಹಾಗಿದ್ದರೆ ಎಡಗೈಯ ಮಡಿಚಿಕೊಳ್ಳಿ, ಬಲಗೈ ಮುಂದೆ ಚಾಚಿ, ಈಗ ಹೇಳಿ ನಿಮಗೆ ಯಾವ ಬೆರಳು ಇಷ್ಟ ಹೇಳಿ. ಎಲ್ಲವೂ ಇಷ್ಟ ಮಿಸ್ ಒಂದೊಂದು ಕೆಲಸಕ್ಕೂ ಒಂದೊಂದು ಬೆರಳು ಬೇಕು ಎಂದು ತಮ್ಮ ವಾದಗಳನ್ನ ಮಂಡಿಸಿದರು. ಮಕ್ಕಳ ಈ ಮಾತುಗಳನ್ನು ತನ್ನ ಬುದ್ಧಿವಾದಕ್ಕೆ ಅಸ್ತ್ರ ಮಾಡಿಕೊಂಡೆನು. ನಿಮಗೆ ಕೈಗಳು ಯಾಕೆ ಇಷ್ಟ, ಬಲಗೈಯಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದೀವಲ್ಲ. ಎಡಗೈ ಯಾಕೆ ಬೇಕು? ಅದರ ಉಪಯೋಗ ಬಲಗೈಗಿಂತ ಕಡಿಮೆ ಇದೆ. ಅದರಿಂದ ಅದನ್ನು ಬಿಟ್ಟಾಕಿ ಎಂದು ಸ್ವಲ್ಪ ಏರು ದನಿಯಲ್ಲಿ ಉದ್ಘರಿಸಿದೆ.

ಬಲಗೈ ಜೊತೆಗೆ ಎಡಗೈ ಇದ್ದರೆ ನಾವು ಚೆನ್ನಾಗಿ ಕಾಣುತ್ತೇವೆ. ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಸಹಾಯವಾಗುತ್ತದೆ. ಹಾಗಾಗಿ ಬೆರಳುಗಳು ಬೇಕೆ ಬೇಕೆಂದು ಮಕ್ಕಳು ಹೇಳಿದರು. ನೋಡಿ ಮಕ್ಕಳೇ ಎಲ್ಲ ಬೆರಳು ಒಂದೇ ಸಮನಾಗಿ ಸಹಾಯಕ್ಕೆ ಬರುವುದಿಲ್ಲ. ಆದರೂ ನಿಮಗೆ ಎಲ್ಲಾ ಬೆರಳುಗಳು ಬೇಕು‌. ಪ್ರತಿ ಬೆರಳಿಗೂ ತನ್ನದೇ ಆದ ಮಹತ್ವವಿದೆ ಎನ್ನುತ್ತೀರಿ, ಪ್ರತಿ ಮಗುವೂ ಹಾಗೇ ಅಲ್ಲವೇ? ಯಾವುದು ಹೆಚ್ಚು, ಯಾವುದು ಕಡಿಮೆ ಇಲ್ಲ. ಅವುಗಳ ಶಕ್ತ್ಯಾನುಸಾರ ಅವು ಸಹಾಯಕ್ಕೆ ಬರುತ್ತವೆ ಎಂದಾಗ ಒಬ್ಬರ ಮುಖವನ್ನು ಮತ್ತೊಬ್ಬರು ನೋಡುತ್ತಾ ನಿಂತರು. ಒಂದೆರಡು ನಿಮಿಷ ನಾನು ಹುಸಿನಗು ತೋರಿ ಮೌನವಾದೆ. ಮಿಸ್ ನೀವು ಯಾಕೆ ನಕ್ಕಿದ್ದು? ಈಗ ಯಾಕೆ ಸುಮ್ಮನೆ ನಿಂತಿದ್ದು? ಅಂದರು. ನೋಡಿ ಮಕ್ಕಳೇ, ನೀವು ಎರಡು ಕೈಗಳು ಒಂದೇ ಸಮನಾಗಿಲ್ಲ ಬೆರಳುಗಳು ಕೂಡ. ಒಂದು ದಪ್ಪ, ಒಂದು ಸಣ್ಣ, ಒಂದು ಉದ್ದ, ಒಂದು ಸಾಮಾನ್ಯ, ಒಂದು ಗಿಡ್ಡ, ಹೀಗೆ ಒಂದೊಂದು ಬೆರಳು ಒಂದೊಂದು ರೀತಿ ಇದೆ. ಆದರೂ ನಿಮಗೆ ಎಲ್ಲವೂ ಸಮನಾಗಿ ಇಷ್ಟ ಅನ್ನುವುದಾದರೆ, ತನ್ನ ವಿದ್ಯಾರ್ಥಿಗಳು ಹೇಗಿದ್ದರೂ ಟೀಚರ್‌ಗೆ ಅವರು ಪ್ರೀತಿ ಪಾತ್ರವೇ ಅಲ್ವಾ? ನಿಮಗೊಂದು ನ್ಯಾಯ, ನನಗೊಂದು ನ್ಯಾಯವೇ? ನಮ್ಮ ಮಕ್ಕಳಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳು ಇಬ್ಬರೂ ನಮ್ಮ ಕಣ್ಣುಗಳಂತೆ, ಎರಡು ಕಣ್ಣುಗಳಲ್ಲಿ ಯಾವುದಕ್ಕೆ ಚುಚ್ಚಿದರೂ ನೋವಾಗುತ್ತೆ. ಹೆಣ್ಣು ಗಂಡೆಂಬ ಭೇದವೇಕೆ ತೋರುವಿರಿ. ಇಂದು ಹೆಣ್ಣು ಕೂಡ ತುಂಬಾ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುತ್ತಿದ್ದಾಳೆ ಎಂದೆನು. ಹೌದು ಮಿಸ್ ನಮ್ಮಿಂದ ತಪ್ಪಾಯ್ತು ಕ್ಷಮಿಸಿ. ನಿಮಗೆ ನಾವೆಲ್ಲರೂ ಒಂದೆ, ಯಾರು ಹೆಚ್ಚು ಅಲ್ಲ, ಕಡಿಮೆಯು ಅಲ್ಲ ಅನ್ನುತ್ತಾ ಖುಷಿಯಿಂದ ನನ್ನನ್ನು ಆಲಂಗಿಸಿದರು. ಪ್ರತಿನಿತ್ಯ ಮಕ್ಕಳ ಮುಗ್ಧ ಮನಸ್ಸಿನಲ್ಲಿ ಇಂತಹ ಸಣ್ಣ ಪುಟ್ಟ ವಿಚಾರಗಳು ನುಸುಳಿ ನಂಜು ಕಾರವ ಮುನ್ನ ಅವರ ಮೆದುಳನ್ನು ಸ್ವಚ್ಛಗೊಳಿಸಿಬಿಡಬೇಕು.

ಮಿಸ್ ಇವತ್ತು ದಿನ ದಿನಕ್ಕಿಂತ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ. ಅಷ್ಟು ಗೊತ್ತಾಗಲ್ವೇನೋ ಇವತ್ತು ಸಮುದಾಯದತ್ತ ಶಾಲಾ ಕಾರ್ಯಕ್ರಮ. ನಾವೆಲ್ಲಾ ಚೆನ್ನಾಗಿ ರೆಡಿಯಾಗಿದ್ದೀವಿ… ಹಾಗೇ ಮಿಸ್ ಕೂಡ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದಾರೆ ಎಂದು ಪ್ರಶ್ನೆ ಮತ್ತು ಉತ್ತರಗಳೆರಡನ್ನು ಮಕ್ಕಳೆ ಕೊಟ್ಟಾಗಿತ್ತು. ಹೌದು ಇಂದಿನ ಮಕ್ಕಳು ಟೀಚರ್‌ಗಳನ್ನು ತುಂಬಾ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಮಿಸ್ ತೊಡುವ ಸೀರೆ, ಚೂಡಿದಾರ, ಹಾಕುವ ಸರ ಬಳೆ, ಅವರ ಹೇರ್ ಸ್ಟೈಲ್, ವ್ಯಾನಿಟಿ ಬ್ಯಾಗ್, ಗೆಜ್ಜೆ, ವಾಟರ್ ಬಾಟಲ್, ಛತ್ರಿ, ಕಿವಿಯೋಲೆ ಇಂದ ಹಿಡಿದು ಮೊಬೈಲ್ ಫೋನ್‌ವರೆಗೂ ಯಾವುದು ಚಂದ, ಯಾವುದು ಚಂದವಿಲ್ಲ ಎಂದು ತೀರ್ಪು ನೀಡುವ ಜಡ್ಜ್‌ಗಳಾಗಿ ಬಿಡುತ್ತಾರೆ.

ಸ್ವಲ್ಪ ಅವಕಾಶ ಸಿಕ್ಕರೂ ಟೀಚರನ್ನು ಹೊಗಳದೇ ಬಿಡುವುದಿಲ್ಲ. ಹೊಗಳಿಕೆ ಅಷ್ಟೇ ದೊರೆಯುವುದಿಲ್ಲ. ಕೆಲವೊಮ್ಮೆ ತೆಗಳಿಕೆಯು ಇರುತ್ತೆ. ಅವೆಲ್ಲ ಆಯಾ ಟೀಚರ್‌ಗಳ ಗುಣ, ಸ್ವಭಾವಗಳಿಂದ ಪ್ರೇರಿತವಾಗುತ್ತದೆ.

ಶಿಕ್ಷಕರ ಬಗ್ಗೆ ಮಕ್ಕಳಿಗೆ ಅದೆಷ್ಟು ಪ್ರೀತಿ ಓಲೈಸುವಿಕೆ ಇರುತ್ತದೆ ಎಂದರೇ ನಿಜಕ್ಕೂ ಇಂತಹ ವೃತ್ತಿಗೆ ಬಂದವರೆ ಧನ್ಯರು. ಕೆಡುಕನ್ನೇ ಕಾಣದ ಮುಗ್ಧ ಮನಸ್ಸುಗಳ ಜೊತೆ ನಾವು ಮಕ್ಕಳಾಗಿ ನಲಿಯುವುದಿದೆಯಲ್ಲ ಅಂತಹ ಖುಷಿಯನ್ನ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ. ಶಾಲಾ ಗೇಟಿನಿಂದ ಟೀಚರ್ ಬ್ಯಾಗ್ ಶಾಲೆಗೆ ತೆಗೆದುಕೊಂಡು ಹೋಗಿ ತರಗತಿಯೊಳಗೆ ಇಡುವುದರಲ್ಲಿ, ಟೀಚರ್‌ಗೆ ಹಾಜರಾತಿ ತಂದು ಕೊಡುವುದರಲ್ಲಿ ಮಕ್ಕಳ ನಡುವೆ ಪೈಪೋಟಿ ನಡೆಯುತ್ತಿರುತ್ತದೆ.

ಮಿಸ್ ಇವತ್ತು ನಾನು ನಿಮ್ಮ ಬ್ಯಾಗ್ ಹಿಡ್ಕೋತೀನಿ, ಅಂತ ಮಕ್ಕಳೆ ಕಿತ್ತಾಡುವುದನ್ನು ನೋಡಿದರೆ ಟೀಚರ್ ಬ್ಯಾಗ್‌ನ ಕೈಗಳು ಅದೆಷ್ಟು ಕಣ್ಣೀರು ಸುರಿಸುತ್ತವೋ ಗೊತ್ತಿಲ್ಲ. ಈ ಬ್ಯಾಗ್ ಏನು ತೂಕ ಇಲ್ಲ ಬಿಡಿ ಮಕ್ಕಳಾ ನಾನೆ ತಗೋತೀನಿ ಎಂದರೇ ಸುಮ್ನಿರಿ ಮಿಸ್ ನೀವು ಮೊದಲೇ ಸಣ್ಣ ಇದ್ದೀರಾ, ಈ ಬ್ಯಾಗ್ ಹೊತ್ತು ಇನ್ನೂ ಸಣ್ಣ ಆಗುತೀರಿ ಅಂತ ನನಗೆ ಆರೋಗ್ಯದ ಪಾಠ ಮಾಡಿ ಅಂತೂ ಇಂತೂ ಬ್ಯಾಗನ್ನು ಶಾಲೆಗೆ ತಲುಪಿಸುವುದರಲ್ಲಿ ಸಾಧನೆ ಮೆರೆಯುತ್ತಾರೆ. ಕೆಲವೊಮ್ಮೆ ಇವರ ಬ್ಯಾಗ್ ರಂಪಾಟ ನೋಡಿದ ಪೋಷಕರು ಏ, ಮಿಸ್ ಅವರು ಮನೆಯಿಂದ ಬ್ಯಾಗ್ ತರುತ್ತಾರೆ, ಇಲ್ಲಿಂದ ಒಳಗೆ ತೆಗೆದುಕೊಂಡು ಹೋಗಲು ಆಗಲ್ಲವಾ, ಬಿಡ್ರೋ ಅಂದ್ರೇ “ಏ, ಸುಮ್ನಿರಿ ಆಂಟಿ. ನಿಮಗೇನು ಗೊತ್ತಾಗಲ್ಲ. ನಮ್ಮ ಮಿಸ್ ದಿನ ಪಾಠ ಮಾಡುವಾಗ ಬೋರ್ಡಿನ ಮೇಲೆ ಬರೆದು ಬರೆದು ಕೈ ಎಷ್ಟು ನೋಯುತ್ತದೆ ಗೊತ್ತಾ? ಅವರು ಕಾಯಿಲೆ ಬಿದ್ದರೆ ನೀವು ಬಂದು ನಮಗೆ ಪಾಠ ಮಾಡುತ್ತೀರಾ? ನೀವು ಬನ್ನಿ ಮಿಸ್” ಅಂತ ಕೈ ಹಿಡಿದು ಒಳಗೆ ಕರೆದುಕೊಂಡು ಹೋಗುತ್ತಾರೆ. ಟೀಚರ್ ಪರವಾಗಿ ವಕಾಲತ್ತು ವಹಿಸಿ ಅವರ ಪ್ರೀತಿಯ ಕೇಸ್‌ನಲ್ಲಿ ನಮ್ಮನ್ನು ಗೆಲ್ಲಿಸಿಬಿಡುತ್ತಾರೆ. ಇಂತಹ ಯೋಗಕ್ಕಿಂತ ಬೇರೇನಿದೆ.