ಅಂದಿನಿಂದ ಮೇಡಂ ಜೊತೆ ನಾನು ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ಪಾಠ ಮಾಡುವಾಗ ವಾದಗಳು ನನ್ನಿಂದ ಇರುತ್ತಿತ್ತು. ಒಮ್ಮೆ ಪೋಷಕರಿಗೆ ಹೆಣ್ಣು ಅಥವಾ ಗಂಡು ಎಂಬ ಲಿಂಗ ನಿರ್ಧಾರವಾಗಲು ಯಾರು ಕಾರಣ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಆಗ ಕಾಲೇಜಿನ ನಮ್ಮ ಸೆಕ್ಷನ್‌ನಲ್ಲಿದ್ದ 60 ರಲ್ಲಿ 59 ಪ್ರಶಿಕ್ಷಣಾರ್ಥಿಗಳು ಹೆಣ್ಣೇ ಕಾರಣ ಎಂದರು. ನಾನೊಬ್ಬ ಮಾತ್ರ ಒಬ್ಬ ವ್ಯಕ್ತಿಯ ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ ಎಂಬುದನ್ನು ಸಕಾರಣ ಸಹಿತ ತಿಳಿಸಿದೆ. ಆಗ ಮೇಡಂ “ನಾನು ಹೇಳಿದ್ದೇ ಸರಿ ಎಂದರು!” ಈ ರೀತಿ ವಾದಗಳು, ಚರ್ಚೆಗಳು ಮುಂದುವರೆಯುತ್ತಿದ್ದವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ
‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ’ ಎಂಬ ಹಾಡು ಆಗ ಬಹಳ ಜನರಿಂದ ಕೇಳಲ್ಪಡುತ್ತಿದ್ದ ಕಾಲ. ನನಗೂ ಮೀಸೆ ಚಿಗುರುವ ಹೊತ್ತು. ಜೊತೆಗೆ ಗಡ್ಡ ಬೇರೆ. ಆದರೆ ನಮ್ಮ ಕಾಲೇಜಿನಲ್ಲಿ ಈ ವಿಷಯದಲ್ಲಿ ಸ್ಟೈಲ್ ಮಾಡುವಂತೆ ಇರಲಿಲ್ಲ. ಆಗ ನಾನೊಮ್ಮೆ ಮೀಸೆ ಬೋಳಿಸಿಕೊಂಡು ಕಾಲೇಜಿಗೆ ಹೋಗಿದ್ದೆ. ಆಗ ನನ್ನ ಗೆಳೆಯರೆಲ್ಲರೂ ನಗುವ ರೀತಿಯಲ್ಲಿ ನನ್ನನ್ನು ನೋಡುತ್ತಿದ್ದರು. ನಮ್ಮ ಉಪನ್ಯಾಸಕರೊಬ್ಬರ ಬಳಿ ಹೋಗಿ ನಾನು “ಬೆಳಗಿನ ವಿಚಾರಲಹರಿ ಓದಲು ನನಗೆ ಕೊಡಿ” ಎಂದು ಕೇಳಿಕೊಂಡೆ. ಅವರು ಅದಕ್ಕೆ ಒಪ್ಪಿದರು. ಆಗ ನಮ್ಮ ಕಾಲೇಜಿನಲ್ಲಿಯೇ ಪ್ರತಿದಿನವೂ ದಿನಪತ್ರಿಕೆಯ ಮುಖ್ಯಾಂಶಗಳನ್ನು ಹಾಗೂ ಒಂದು ಪುಟದಲ್ಲಿ ವಿಚಾರಲಹರಿಯನ್ನು ಬರೆದುಕೊಂಡು ಹೋಗಬೇಕಾಗಿತ್ತು. ಅವರು ಯಾರ ಹೆಸರನ್ನು ಕರೆಯುತ್ತಾರೋ ಅವರು ಹೋಗಿ ಓದಬೇಕಾಗಿತ್ತು. ಆಗ ನಮಗೆ ಯಾರನ್ನು ಓದಲು ಕರೆಯುತ್ತಾರೋ ಎಂಬ ಮಾಹಿತಿ ನಮಗಿಲ್ಲವಾದ್ದರಿಂದ ನಾವೆಲ್ಲರೂ ಅದಕ್ಕೆಂದೇ ಮೀಸಲಾಗಿದ್ದ ನೋಟ್ ಬುಕ್ಕಿನಲ್ಲಿ ಬರೆಯಬೇಕಾಗಿತ್ತು. ಇದಕ್ಕೆ ಆಂತರಿಕ ಅಂಕಗಳು ಇದ್ದವು. ದಿನಪತ್ರಿಕೆ ಓದಿಸಲು ಕಾಲೇಜಿನವರು ಮಾಡಿದ ಉಪಾಯವಿದು ಎಂದು ಅರಿಯದ ನಾವು ಯಾರೋ ಬರೆದದ್ದನ್ನು ಕಾಪಿ ಮಾಡಿ ಬರೆಯುತ್ತಿದ್ದೆವು.
ನನ್ನ ಬೇಡಿಕೆಯಂತೆ ಅಂದು ಉಪನ್ಯಾಸಕರು ವಿಚಾರಲಹರಿಯನ್ನು ಓದಲು ನನ್ನನ್ನೇ ಕರೆದರು. ನಾನು ‘ಮೀಸೆಯ ಮಹಿಮೆ’ ಎಂಬುದರ ಬಗ್ಗೆ ಬರೆದಿದ್ದೆ. ‘ಮೀಸೆಯೇ ಮುಖ್ಯವಲ್ಲ. ಜಿರಳೆಗೂ ಮೀಸೆಯಿದೆ’ ಎಂಬ ವಾಕ್ಯ ಕೋಟ್ ಮಾಡಿ ಮೀಸೆ ಬಿಡದೇ ಜೀವನದಲ್ಲಿ ಸಾಧಿಸಿದ ಮಹಾನ್ ವ್ಯಕ್ತಿಗಳ ಹೆಸರುಗಳನ್ನೆಲ್ಲಾ ಕೋಟ್ ಮಾಡಿ ಉತ್ತಮವಾಗಿ ಬರೆದಿದ್ದೆ. ಆಗ ನಮ್ಮ ಅಧೀಕ್ಷಕರು (ಅ. ಪು .ನಾ ಸರ್) “ಸೀರಿಯಸ್ ವಿಷಯದ ಬಗ್ಗೆ ಬರೆಯಬೇಕು” ಎಂಬ ವಾರ್ನಿಂಗ್ ನೀಡಿದರು. ಆಗ ನಾನು ‘ಆಯ್ತು’ ಎಂದೆ. ಅಪುನಾ ಸರ್ ಮಾತನಾಡುವಾಗ ಕೊನೆಗೊಮ್ಮೆ “ನಾನೇನ್ ಮಾಡಕಾಗುತ್ತೆ ಎಲ್ಲಾ ನಿಮ್ ಹಣೆಬರಹ” ಎಂಬ ವಾಕ್ಯವನ್ನು ಹೆಚ್ಚು ಬಳಕೆ ಮಾಡ್ತಿದ್ರು. ಆಗ ನನಗೆ ಈ ಹಣೆಬರಹದ ಬಗ್ಗೆ ತಿಳಿಯೋ ಕುತೂಹಲ ಉಂಟಾಯಿತು. ನಾನು ಬಹಳ ಜನರನ್ನು ಆಗ ಕೇಳಿದೆ. ಈ ಹಣೆಬರಹ ಎಂಬುದು ನಿಜವಾ ಅಥವಾ ಸುಳ್ಳಾ ಎಂದು. ಕೆಲವರು ನಿಜ ‘ಹಣೆಯಲ್ಲಿ ಬರೆದದ್ದನ್ನು ಹಣೆಗಣ್ಣನೂ ಅಳಿಸಲಾರ’ , ‘ಹಣೆಬರೆಹಕ್ಕೆ ಹೊಣೆ ಯಾರು?’ ಹಣೆಯಲ್ಲಿ ಬರೆದಿದ್ದನ್ನು ಯಾರೂ ತಪ್ಪಿಸೋಕೆ ಆಗೋಲ್ಲ ಎಂದು ಹಲವು ಉದಾಹರಣೆಗಳ ಸಮೇತ ತಿಳಿಸಿದರು. ಇನ್ನೂ ಕೆಲವರು “ಹಣೆಬರಹ ಅನ್ನೋದೇ ಸುಳ್ಳು”, “ಪುರುಷ ಪ್ರಯತ್ನ ತುಂಬಾ ಮುಖ್ಯ”, “ಕೈಲಾಗದವರು ಮಾತ್ರ ಹಣೆಬರಹದ ಮೇಲೆ ಹಾಕ್ತಾರೆ” ಎಂದರು. ಮನೋವಿಜ್ಞಾನ ಪುಸ್ತಕದಲ್ಲಿ “ಹಣೆಬರೆಹ ಎಂಬುದು ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಒಂದು ರಕ್ಷಣಾತ್ಮಕ ತಂತ್ರ”(Defence mechanism) ಎಂದು ಹೇಳಿದರು. ನನಗೆ ಆಗ ದ್ವಂದ್ವ ಶುರುವಾಯ್ತು. ನನಗೆ ಯಾವುದೇ ಒಂದು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆಗ ನಾನು ಇದರ ಕುರಿತೇ ಒಂದು ವಿಚಾರಲಹರಿ ಬರೆದು ‘ಹಣೆಬರೆಹ’ ಎಂಬ ಹೆಸರಿಟ್ಟೆ. ಅದನ್ನು ನಮ್ಮ ಎಲ್ಲಾ ಪ್ರಶಿಕ್ಷಣಾರ್ಥಿಗಳ ಮುಂದೆ ಓದಿದೆ. ಕೊನೆಗೆ ಹಣೆಬರೆಹದ ಇರುವಿಕೆಯ ಬಗ್ಗೆ ಪ್ರಶ್ನೆಯಿಟ್ಟೆ. ಆದರೆ ಇದಕ್ಕೆ ಉತ್ತರ ಸಿಗಲಿಲ್ಲ. ಇಂದೂ ಉತ್ತರ ಸಿಕ್ಕಿಲ್ಲ ಬಿಡಿ!!
ನೋಟ್ಸ್ ಆಫ್ ಲೆಸನ್ ಬರೆಯೋದು, ಅಸೈನ್‌ಮೆಂಟ್ ಬರೆಯೋದು ಒಂದೇ ಎರಡೇ… ಅಬ್ಬಬ್ಬಾ ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತೆ. ಅದರಲ್ಲೂ ಮಲ್ಲಾಡಿಹಳ್ಳಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಕಾಲೇಜಿನಷ್ಟು ಗೃಹಪಾಠವನ್ನು ಯಾರೂ ಕೊಡುವುದಿಲ್ಲ ಎಂಬ ಅಂಶವು ಇತರ ಕಾಲೇಜಿನವರಿಂದ ತಿಳಿಯಲ್ಪಟ್ಟು ತುಸು ಬೇಸರ ಮಾಡಿಕೊಳ್ಳುತ್ತಿದ್ದೆವು. ಅದರಲ್ಲೂ ನೋಟ್ಸ್ ಆಫ್ ಲೆಸನ್ ಸಹಿ ಆದರೆ ಸಾಕು ಜೀವನದಲ್ಲಿ ಏನೋ ಗೆದ್ದೆವು ಎಂಬ ಭಾವ ನಮ್ಮಲ್ಲಿ ಬರುತ್ತಿತ್ತು. ಅಷ್ಟರ ಮಟ್ಟಿಗೆ ರೀರೈಟ್ ಕೊಡುತ್ತಿದ್ದರು. ಬರೆದೂ ಬರೆದೂ ಸಾಕಾಗುತ್ತಿತ್ತು. ಹಳ್ಳಿಯಾದ್ದರಿಂದ ರಾತ್ರಿ ವೇಳೆ ವಿದ್ಯುತ್ತಿನ ಸಮಸ್ಯೆಯಿಂದಾಗಿ ಲಾಟೀನಿನ ಬೆಳಕಿನಲ್ಲಿ ಬರೆದ ಅನೇಕ ದಿನಗಳಿವೆ. ಅದರಲ್ಲೂ ನಮ್ಮ ಸಮಾಜ ವಿಜ್ಞಾನ ಉಪನ್ಯಾಸಕರ ಪಾಠ ಯೋಜನೆ ಸಹಿ ಆಯ್ತು ಎಂದರೆ ಖುಷಿಯಲ್ಲಿ ತೇಲಾಡುವಂತೆ ಆಗುತ್ತಿತ್ತು. ಒಮ್ಮೆ ನಾನು ಅವರ ಕೊಠಡಿಗೆ ಹೋಗಿ ಪಾಠ ಯೋಜನೆಯನ್ನು ತೆಗೆದುಕೊಂಡು ಬರಲು ಹೋದೆ. ಅವರು ಆಗ ಕೆಂಪು ಇಂಕಿನ 50 ಪೈಸೆಯ ಒಂದು ಕಡ್ಡಿ (ಪೆನ್ನಿನೊಳಗೆ ಹಾಕುವ ಬರೆಯುವ ಕಡ್ಡಿ) ಕೊಟ್ಟು ಇದನ್ನು ಬರೆಯುವಂತೆ ಮಾಡು ಎಂದರು. ನಾನು ಆಗ ಅವರು ಕೆಲಸ ಹೇಳಿದ ಖುಷಿಯಲ್ಲಿ ಜೋಶ್ ಆಗಿ ಕೊಡಿ ಸರ್ ನಾನು ಬರೆಯುವಂತೆ ಮಾಡುತ್ತೇನೆ ಎಂದು ತೆಗೆದುಕೊಂಡೆ. ಆದರೆ ಅದು ಎಷ್ಟೇ ಉಜ್ಜಿದರೂ ಬರೆಯಲಿಲ್ಲ. ಒಂದು ವೇಸ್ಟ್ ಹಾಳೆಯ ಮೇಲೆ ಗೀಚಿದೆ, ಗೀಚಿದೆ ಎಷ್ಟೇ ಪ್ರಯತ್ನ ಪಟ್ಟರೂ ಅದು ಬರೆಯಲಿಲ್ಲ. ನಾನು ಆಗ ಮೇಣದ ಬತ್ತಿಯನ್ನು ತೆಗೆದುಕೊಂಡು ಅದರ ಮದ್ದನ್ನು(ತುದಿ) ಮೇಣದ ಬತ್ತಿಯ ಬೆಂಕಿಯ ಜ್ವಾಲೆಗೆ ಹಿಡಿದೆ. ಆದರೂ ಅದು ಹತ್ತಲಿಲ್ಲ. ಏನು ಮಾಡಬೇಕಪ್ಪ ಈಗ ಎಂಬ ಚಿಂತೆಯಲ್ಲಿದ್ದಾಗ ಇನ್ನೊಬ್ಬ ಲೆಕ್ಚರ್ ಬಂದು ನನ್ನ ಸ್ಥಿತಿ ಕೇಳಿದರು. ಆಗ ಅವರು “50 ಪೈಸೆಯ ಕಡ್ಡಿ ತಾನೇ? ನಿನ್ನದು ಯಾವುದಾದರೂ ಇದ್ದರೆ ಅದನ್ನೇ ತಂದು ಇಡು” ಎಂಬ ಸಲಹೆ ಕೊಟ್ಟರು. ನಾನು ಅದೇ ರೀತಿ ಮಾಡಿದೆ!

ನನಗೆ ಓದುವಾಗ ಯಾವುದೇ ವಿಷಯಗಳಲ್ಲಿನ ಅಂಕಗಳನ್ನು ಗಳಿಸಲು ಕಷ್ಟ ಆಗುತ್ತಿರಲಿಲ್ಲ. ಆದರೆ ಸಾ.ಉ.ಉ.ಕಾ (SUPW) ವಿಷಯದಲ್ಲಿ ಅಂಕ ಗಳಿಸಲು ಕಷ್ಟವಾಗುತ್ತಿತ್ತು. ಈ ವಿಷಯದ ಶಿಕ್ಷಕರು ನೋಟ್ಸಿನಲ್ಲಿ ಬರೆಸಿದಂತೆಯೇ ಪರೀಕ್ಷೆಯಲ್ಲಿ ಉತ್ತರ ಬರೆಯಬೇಕು ಎಂಬ ನಿಯಮವು ನನಗೆ ಕಬ್ಬಿಣದ ಕಡಲೆಯಂತಾಗಿತ್ತು. ನನಗೊಬ್ಬನಿಗೆ ಮಾತ್ರವಲ್ಲ. ಬಹುತೇಕರಿಗೆ ಇದೇ ಸಮಸ್ಯೆ ಆಗಿತ್ತು. ಅದರಲ್ಲೂ ಅವರು ಮನೆಯಲ್ಲಿ ಮಾಡಲು ಪ್ರೊಜೆಕ್ಟ್ ವರ್ಕ್ ಗಳಾದ ಸ್ನಾನದ ಚೂರ್ಣ ತಯಾರಿಕೆ, ಲಕೋಟೆ ತಯಾರಿಕೆ, ಡ್ರಾಯಿಂಗ್ ಶೀಟಿನಲ್ಲಿ ರಾಷ್ಟ್ರ ಧ್ವಜದ ತಯಾರಿಕೆ ಕೊಡುತ್ತಿದ್ದರು. ನನಗೆ ಹಾಗೂ ನನ್ನ ಗೆಳೆಯ ನದಾಫ್, ಗಿರೀಶನಿಗೆ ಸ್ನಾನದ ಚೂರ್ಣ ತಯಾರಿಕೆಯನ್ನು ನೀಡಿದಾಗಲಂತೂ ನಾವು ಪಟ್ಟ ಪಾಡು ದೇವರೇ ಬಲ್ಲ. ಬೇವಿನ ಸೊಪ್ಪು ತಂದು ಒಣಗಿಸಿ ಪುಡಿ ಮಾಡಿ, ಕಡಲೆಹಿಟ್ಟು, ಸೀಗೇಕಾಯಿ ಪುಡಿ ಹೀಗೆ ವಿವಿಧ ವಸ್ತುಗಳನ್ನು ಸೇರಿಸಿ ಮಾಡುವಷ್ಟರಲ್ಲಿ ಸಾಕು ಸಾಕಾಗಿ ಹೋಗಿತ್ತು. ಅಂತೂ ಇಂತೂ ಅವರು ಅದನ್ನು ಒಪ್ಪಿ ತೆಗೆದುಕೊಂಡಿದ್ದು ನನ್ನ ಮಹದಾನಂದಕ್ಕೆ ಕಾರಣವಾಗಿತ್ತು. ಆದರೂ ಇವರು ನನ್ನ ಅಸೈನ್‌ಮೆಂಟ್ ತೆಗೆದುಕೊಳ್ಳದೇ ಇದ್ದ ಘಟನೆಯು ನನ್ನ ಜೀವನದಲ್ಲಿ ಮರೆಯಲಾಗದಂತಹದ್ದು. ಅದು ಹೀಗಿದೆ:
ಒಮ್ಮೆ ಇವರು ಒಂದು ವಿಷಯದ ಬಗ್ಗೆ ಬರೆಯಲು ಅಸೈನ್ ಮೆಂಟ್ ಕೊಟ್ಟು ಇಂಥದ್ದೇ ದಿನ, ಸಮಯಕ್ಕೆ ತಂದು ಕೊಡಲು ತಿಳಿಸಿದರು. ನಾನು ಅದೇ ರೀತಿ ಬರೆದು ಅವರ ಕೊಠಡಿಗೆ ಹೋಗುವಷ್ಟರಲ್ಲಿ ಒಂದು ನಿಮಿಷ ಹೆಚ್ಚಾಗಿದೆ. ಆಗ ಅವರು ನನ್ನಿಂದ ತೆಗೆದುಕೊಳ್ಳಲಿಲ್ಲ. ನಾನು ಅವರ ಬಳಿಯೇ ರಿಕ್ವೆಸ್ಟ್ ಮಾಡಿ ಕೊಟ್ಟಿದ್ದರೆ ತೆಗೆದುಕೊಳ್ಳುತ್ತಿದ್ದರೇನೋ?! ಆದರೆ ನಾನು ಹಾಗೆ ಮಾಡದೇ ಸೀದಾ ಕ್ಲೋಸ್ ಇದ್ದಾರೆ ಎಂದು ಗಣಿತ ಮೇಡಂ ಬಳಿ ಹೋಗಿ “ಮೇಡಂ, ನನ್ನ ಯೋಜಿತ ಕಾರ್ಯವನ್ನು ಆ ಶಿಕ್ಷಕರು ತೆಗೆದುಕೊಳ್ಳುತ್ತಿಲ್ಲ. ನೀವಾದ್ರೂ ಬಂದು ಹೇಳಿ ಮೇಡಂ” ಎಂದು ಕೇಳಿಕೊಂಡೆ. ಆಗ ಅವರು ‘ಓಕೆ’ ಎಂದು ನನ್ನನ್ನೂ ಕರೆದುಕೊಂಡು ಹೋಗಿ ಅವರಿಗೆ “ಸರ್, ಯಾವುದೇ ಕಾರಣಕ್ಕೂ ಬಸವನಗೌಡನ ಯೋಜಿತ ಕಾರ್ಯವನ್ನು ತೆಗೆದುಕೊಳ್ಳಬೇಡಿ” ಎಂದು ಹೇಳಬೇಕಾ!! ಆಗ ನನ್ನ ಸ್ಥಿತಿ ಅಪ್ಪಿ ತಪ್ಪಿ ನೀರಲ್ಲಿ ಬಿದ್ದಾಗ ಸಿಕ್ಕ ಹಗ್ಗದಂತೆ ಕಂಡದ್ದನ್ನು ಹಗ್ಗ ಎಂದು ಭಾವಿಸಿಕೊಂಡು ಹಾವನ್ನೇ ಹಿಡಿದುಕೊಂಡಂತಾಗಿತ್ತು!! ಅವರು ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮ ಏನಾಗುತ್ತಿತ್ತು ಎಂದರೆ ಆ ವಿಷಯದಲ್ಲಿ ಫೇಲ್ ಆಗಬೇಕಿತ್ತು!! ಇದರ ಪರಿಣಾಮ ಅರಿತು ಪ್ರತಿದಿನವೂ ಅವರ ಮನೆಗೆ ಹೋಗಿ ಬೇಡಿಕೊಂಡು ಅವರು ನನ್ನ ಯೋಜಿತ ಕಾರ್ಯವನ್ನು ತೆಗೆದುಕೊಳ್ಳುವಂತೆ ಮಾಡಲು ಯಶಸ್ವಿಯಾದೆ. ಅಂದಿನಿಂದ ಅವರಿಗೆ ಎದುರಾಡಲು ಹೋಗುತ್ತಿರಲಿಲ್ಲ.
ಆದರೆ ಅಂದಿನಿಂದ ಮೇಡಂ ಜೊತೆ ನಾನು ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ಪಾಠ ಮಾಡುವಾಗ ವಾದಗಳು ನನ್ನಿಂದ ಇರುತ್ತಿತ್ತು. ಒಮ್ಮೆ ಪೋಷಕರಿಗೆ ಹೆಣ್ಣು ಅಥವಾ ಗಂಡು ಎಂಬ ಲಿಂಗ ನಿರ್ಧಾರವಾಗಲು ಯಾರು ಕಾರಣ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಆಗ ಕಾಲೇಜಿನ ನಮ್ಮ ಸೆಕ್ಷನ್‌ನಲ್ಲಿದ್ದ 60 ರಲ್ಲಿ 59 ಪ್ರಶಿಕ್ಷಣಾರ್ಥಿಗಳು ಹೆಣ್ಣೇ ಕಾರಣ ಎಂದರು. ನಾನೊಬ್ಬ ಮಾತ್ರ ಒಬ್ಬ ವ್ಯಕ್ತಿಯ ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ ಎಂಬುದನ್ನು ಸಕಾರಣ ಸಹಿತ ತಿಳಿಸಿದೆ. ಆಗ ಮೇಡಂ “ನಾನು ಹೇಳಿದ್ದೇ ಸರಿ ಎಂದರು!” ಈ ರೀತಿ ವಾದಗಳು, ಚರ್ಚೆಗಳು ಮುಂದುವರೆಯುತ್ತಿದ್ದವು.
ಮೇಡಂ ಜೊತೆ ಆಗಾಗ್ಗೆ ಮಾಡುತ್ತಿದ್ದ ವಿಷಯಾಧಾರಿತ ವಾದಗಳ ಪರಿಣಾಮ ಮೊದಲನೇ ವರ್ಷದ ಮನೋವಿಜ್ಞಾನ ವಿಷಯದ ಅಂಕದ ಮೇಲೆ ಆಯ್ತು!! ಆದ್ದರಿಂದ ಯಾರೇ ಆಗಲೀ ಮೊದಲು ವಿಷಯ ಶಿಕ್ಷಕರನ್ನು ಇಷ್ಟಪಟ್ಟರೆ ಮಾತ್ರ ಆ ವಿಷಯವೂ ಇಷ್ಟವಾಗುತ್ತದೆ ಎಂಬ ಅಂಶವನ್ನು ಮನಗಾಣಬೇಕು. ಕಡೇ ಪಕ್ಷ ಅವರನ್ನು ವಿರೋಧಿಸಬಾರದು ಎಂಬುದನ್ನಾದರೂ ಪಾಲಿಸಬೇಕು.
ಮೊದಲನೇ ವರ್ಷದಲ್ಲಿ ನಾವು ಪ್ರವಾಸವನ್ನು ಇಟ್ಟಾಗ ನನ್ನನ್ನು ಪ್ರವಾಸ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದರು. ಶೈಕ್ಷಣಿಕ ಪ್ರವಾಸ ಎಂದು ಬರೀ ಶೈಕ್ಷಣಿಕ ಉಪಯೋಗಕ್ಕೆಂದು ಮಾಡಿದ ಪ್ರವಾಸ ಅದಾಗಿತ್ತು. ಇದರಿಂದ ಪ್ರವಾಸ ಎಂದರೆ ‘ಎಂಜಾಯ್ ಮೆಂಟ್ʼ ಎಂಬ ಕಲ್ಪನೆಯಲ್ಲಿ ಬಂದಿದ್ದ ಕೆಲವರಿಗೆ ಭ್ರಮನಿರಸನವಾಗಿತ್ತು. ಇದನ್ನು ಅವರು ಪ್ರವಾಸದ ಬಗ್ಗೆ ಬರೆದ ಪ್ರಬಂಧದಲ್ಲಿ ಪ್ರವಾಸವು ತೀರ್ಥಕ್ಷೇತ್ರದಂತಿತ್ತು ಎಂಬ ಅನಿಸಿಕೆಯನ್ನು ತೋರ್ಪಡಿಸಿಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದರು!! ಪ್ರವಾಸ ಮುಗಿಸಿ ಬಂದಾಗ ಸ್ವಲ್ಪ ಹಣ ಮಿಕ್ಕಿದೆ ಅದನ್ನು ವಾಪಾಸ್ ಪಡೆಯಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಅವರ ಅನಿಸಿಕೆಯಂತೆ ನಾನು ಪ್ರವಾಸಕ್ಕೆಂದು ನಿಯೋಜನೆಯಾಗಿದ್ದ ಶಿಕ್ಷಕರ ಬಳಿ ಹೋಗಿ ನನ್ನ ಕ್ಲಾಸ್‌ಮೇಟ್‌ಗಳ ಅನಿಸಿಕೆಯನ್ನು ಅವರ ಮುಂದಿಟ್ಟೆ. ಅವರು “ಆಯ್ತು ಮತ್ತೊಮ್ಮೆ ನಾನು ವಿದ್ಯಾರ್ಥಿಗಳ ಅನಿಸಿಕೆಯನ್ನು ತಿಳಿದುಕೊಳ್ಳುತ್ತೇನೆ” ಎಂದು ಕ್ಲಾಸ್ ಗೆ ಬಂದು ಕೇಳಿದರು. ಆಗ ಅವರೆಲ್ಲರೂ “ಉಳಿದ ಹಣ ಬೇಡ” ಎಂದು ಉಲ್ಟಾ ಹೊಡೆದರು!! ಶಿಕ್ಷಕರ ಬಳಿ ಸುಳ್ಳುಗಾರನಾಗಿದ್ದು ನಾನು. ಹಣ ಕೊಟ್ಟಿದ್ರೆ ನನ್ನೊಬ್ಬನಿಗೆ ಮಾತ್ರ ಸಿಗುತ್ತಿರಲಿಲ್ಲ. ಎಲ್ಲರಿಗೂ ಸಿಗುತ್ತಿತ್ತು. ಆದರೆ ಯಾರೊಬ್ಬರಿಗೂ ನೇರವಾಗಿ ಮಾತನಾಡುವ ಧೈರ್ಯವಿರಲಿಲ್ಲ. ಅವರಿಗೆ ಆಂತರಿಕ ಅಂಕಗಳ ಬಗ್ಗೆ ಇದ್ದ ಭಯ ಈ ರೀತಿ ಹೇಳಿಸುವಂತೆ ಮಾಡಿತ್ತು!!

ನಾವು ಮಕ್ಕಳಿಗೆ ಪ್ರಶ್ನಿಸುವುದನ್ನು ಕಲಿಸಬೇಕು. “ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿರಿ” ಎಂಬ ಡಾ.ಎಚ್.ನರಸಿಂಹಯ್ಯನವರ ಮಾತನ್ನು ಪಾಲಿಸಲು ತಿಳಿಸಬೇಕು. ಶಿಕ್ಷಕರ ಸ್ಥಾನದಲ್ಲಿರುವವರೂ ಸಹ ಯಾವುದೇ ಪೂರ್ವಾಗ್ರಹಪೀಡಿತರಾಗಿ ವರ್ತಿಸುವುದನ್ನು ಬಿಡಬೇಕು. ನೇರವಾಗಿ ಮಾತನಾಡುವವರ ಅಭಿಪ್ರಾಯವನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
