ಅಂತೂ ಶೆಟ್ಟಿ ಬೇಕರಿಗೆ ಹೋಗಿ ಕಾಲು ಕೆ.ಜಿ. ಲಡ್ಡುವನ್ನು 17.50 ಪೈಸೆ ಕೊಟ್ಟು ತೆಗೆದುಕೊಂಡು ಹೋಗಿ ಸೀತವ್ವಗೆ ಕೊಟ್ಟೆ. ಸ್ವೀಟ್ ತೆಗೆದುಕೊಂಡ ನಂತರ “ಎಷ್ಟುನೆ ಹಣ ಬಂದಿದು ನಿಂಗೆ….” ಅಂದರೆ “25” ಎಂದೆ “ಅಷ್ಟೆಯಾ…..?” ಎಂದು ಜೋರಾಗಿ ನಕ್ಕರು. ಪಾಪ ಅವರಿಗೆ ಇವೆಲ್ಲಾ ಹೇಗ್ ತಿಳಿಯಬೇಕು…? ನಗುತ್ತಲೇ “ಇನ್ನೂ ಚಂದ ಮಾಡಿ ಬರಿ… ಆಯ್ತಾ…. ಒಳ್ಳೆ ಹೆಸರು ತೆಗಿಬೇಕು ಆಯ್ತಾ…” ಎಂದರು, ತಲೆಯಾಡಿಸಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು
ಪುಟಿದೆದ್ದಿತು ಚೆಲುವು
ಎಂಬ ಜಿ ಎಸ್ ಎಸ್ ಅವರ ಸಾಲುಗಳು ಎಷ್ಟು ಮೃದು ಎಷ್ಟು ಹಿತವಾದ ಸಾಲುಗಳು ಅಲ್ವೆ! ಹೌದು ಮುಂಗಾರಿನ ಅಭಿಷೇಕಕೆ ಮನಸ್ಸು ಹಗುರಾಗುತ್ತದೆ. ಪ್ರಕೃತಿ ಸೌಂದರ್ಯೋಪಾಸನೆಯಲ್ಲಿ ತೊಡಗಿದವರಿಗೆ ಪ್ರಕೃತಿಯ ಎಲ್ಲಾ ವಿದ್ಯಮಾನಗಳು ಹೃದ್ಯವೇ….! ‘ಮಳೆ ಅಂದರೆ ಹಾಗೆ ‘ಇಳೆ’ ಹಾಗೂ ‘ಭೂಮಿ’ಯನ್ನು ಬೆಸೆಯುವ ಭಾವ ಸಂಕರ. ಮಳೆನಾಡಿನ ಹೊಸ ಮಳೆಯ ನಡುವೆ ಬದುಕಿನ ಹೊಸ ಮಗ್ಗುಲಿಗೆ ಹೊರಳುವ ವಿದ್ಯಾರ್ಥಿಗಳ ಬಗ್ಗೆ ಹೇಳಲೇಬೇಕು. ಶೈಕ್ಷಣಿಕ ಕ್ಯಾಲೆಂಡರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಕೊರೋನಾನಂತರ ಬದಲಾವಣೆ ಆಗಿರುವುದಷ್ಟೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಹತ್ತನೆ ತರಗತಿ ಫಲಿತಾಂಶ ಜೂನ್ ಮೊದಲವಾರವೆ ಬರುತ್ತಾ ಇದ್ದದ್ದು. ಪಿ.ಯು.ಸಿ ಫಲಿತಾಂಶ ನಿಶ್ಚಿತವಾಗಿ ಮೇ ಕಡೆಯವಾರ ಬರುತ್ತಿತ್ತು. ಹೈಸ್ಕೂಲಿನಿಂದ ಪಿ.ಯು.ಸಿ.ಗೆ, ಪಿ.ಯು.ಸಿ.ಯಿಂದ ಪದವಿಗೆ ಇಲ್ಲ ವೃತ್ತಿಪರ ಕೋರ್ಸ್‌ಗಳಿಗೆ ಸೇರಬೇಕೆಂದರೆ ಆದಾಯ ಪ್ರಮಾಣಪತ್ರಗಳು, ಜಾತಿಪ್ರಮಾಣ ಪತ್ರಗಳು ಬೇಕಾಗಿದ್ದವು. ಅವುಗಳನ್ನು ಪಡೆಯಲು ಜಡಿಮಳೆಯಲ್ಲಿ ಆಗ ಇದ್ದ ತಾಲ್ಲೂಕು ಕಛೇರಿಗೆ ವಿದ್ಯಾರ್ಥಿಗಳ ಜೊತೆಗೆ ಪೋಷಕರೂ ಅಲೆಯಬೇಕಾಗಿತ್ತು. ನಾವು ಚಂಡಿಯಾದರೂ ಅಡ್ಡಿಯಿಲ್ಲ ನಮ್ಮ ಮಾರ್ಕ್ಸ್ ಕಾರ್ಡ್‌ಗಳು ಚಂಡಿಯಾಗಬಾರದೆಂದು ಎಷ್ಟು ಪ್ರಯತ್ನಿಸುತ್ತಿದ್ದರೂ, ಅವು ಚಂಡಿಯಾಗುವುದನ್ನು ತಡೆಯಲಾಗುತ್ತಿರಲಿಲ್ಲ.
ತಾಲ್ಲೂಕು ಕಛೇರಿಯ ಎದಿರು ಗೂಡು ಅಂಗಡಿಯ ಅಜ್ಜ ಎಲ್ಲಾ ಅರ್ಜಿ ನಮೂನೆಗಳನ್ನು ನಮಗಾಗಿ ತೆಗೆದು ಇರಿಸಿದಂತೆ ಕೊಡುತ್ತಿದ್ದರು. ತಾಲ್ಲೂಕು ಕಛೇರಿ ಕೆಳಗಿನ ರಸ್ತೆಯಲ್ಲಿ ಟೌನ್ ಹಾಲ್ ಅದರ ಎದುರು ‘ಕಾವೇರಿ’ ಮಾತೆಯ ಪ್ರತಿಮೆ ಆ ರಸ್ತೆಯ ಎದುರು ‘ಬಾಲಾಜಿ ಜೆರಾಕ್ಸ್’ ಜೆರಾಕ್ಸ್‌ನ ಪ್ರತೀ ಸೈಡಿಗೂ ಒಂದು ರೂಪಾಯಿ ಮೂರು ಪ್ರಮಾಣ ಪತ್ರವನ್ನು ಜೆರಾಕ್ಸ್ ಮಾಡಲು ಕೊಟ್ಟೆ ಆದರೆ ಇದ್ದದ್ದು ಐದು ರೂಪಾಯಿ ಮಾತ್ರ. ಇನ್ನೊಂದು ರೂಪಾಯಿ ಕೇಳಿದಾಗ “ಒಂದೇ ಸೈಡ್ ಜೆರಾಕ್ಸ್ ಮಾಡುವಂತೆ ಹೇಳಿದ್ದೆ” ಅದ್ ಹೇಗ್ ಆಗುತ್ತೆ ಸರ್ಟಿಫಿಕೇಟ್ ಎರಡೂ ಬದಿ ಬೇಕಲ್ವ ಎಂಥ ಹೀಗೆ ಹೇಳ್ತೀರಿ…. ಎರಡೂ ಸೈಡ್ ಜೆರಾಕ್ಸ್ ಮಾಡ್ಬೇಕು ಅನ್ನೋದು ಅಂಡರ್ಸ್ಟುಡ್ ಅಲ್ವ! ಸರಿ ನಾಳೆ ಬರಬೇಕಿದ್ರೆ ಒಂದ್ ರೂಪಾಯಿ ತಂದು ಕೊಟ್ರೆ ಆಯ್ತು” ಎಂದರು. ಡಾಕ್ಯುಮೆಂಟ್ಸ್ ಬಂದ ನಂತರ ಅಲ್ಲೇನ್ ಕೆಲಸ ಇರುತ್ತೆ. ಒಂದು ರೂಪಾಯಿ ಕೊಡಲು… ನಾಲ್ಕೈದು ಕಿಲೋಮೀಟರ್ ಮಳೆಯಲ್ಲಿ ಯಾರು ನಡೆದು ಹೋಗುತ್ತಾರೆ ಎಂದು ಆ ಒಂದು ರೂಪಾಯೀ ಈವರೆಗೆ ಕೊಟ್ಟಿಲ್ಲ…….. ‘ಬಾಲಾಜಿ ಜೆರಾಕ್ಸ್’ ಅವರೆ ಕ್ಷಮಿಸಿ….
ಇನ್ನು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನ ಕಡೆಗೆ ನನ್ನ ಹಾದಿ ಸಾಗಿತ್ತು. ನಾವು ಹೋಗುವ ಕಾಲಕ್ಕೆ ಎಲ್ಲಾ ದೊಡ್ಡ ದೊಡ್ಡವರೆ ಇದ್ದರು. ಅವರನ್ನ ನೋಡಿದರೆ ಭಯ ಆಗುತ್ತಿತ್ತು. ಅವರು ಆ ಪರಿ ದಾಡಿ ಮೀಸೆ ಬಿಟ್ಟು ಸೀನಿಯರ್ಸ್ ರೀತಿ ಕಾಣುತ್ತಿದ್ದ ಕಾರಣದಿಂದಲೇ ಸೀನಿಯರ್ ಕಾಲೇಜ್ ಎನ್ನುತ್ತಿದ್ದರೇನೋ! ಭಯವಾಗುತ್ತಿತ್ತು….. ನಾವೆಲ್ಲ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕಲಿತವರು. ಸೋಶಿಯಲ್ ಮತ್ತು ಪಿ.ಟಿ ಸರ್‌ಗಳು ಬಿಟ್ಟರೆ ಇನ್ನೆಲ್ಲರೂ ಮಹಿಳಾ ಟೀಚರ್‌ಗಳು. ಪ್ರಾರಂಭದಲ್ಲಂತೂ ಬಹಳ ಗಜಿಬಿಜಿ ಅನ್ನಿಸುತ್ತಿತ್ತು.
ತರಗತಿ ನಡುವೆ ಉತ್ತರ ಹೇಳಬೇಕಾದಾಗ ಹುಡುಗರೂ ದನಿ ಗೂಡಿಸುತ್ತಿದ್ದರೆ ಕರ್ಕಶ ಅನ್ನಿಸುತ್ತಿತ್ತು. ಅದರಲ್ಲಿ ಪ್ರಕಾಶ್ ಮತ್ತು ರವಿ ಸೇನೆಗೆ ಸೇರಿದರು. ಮಂಜುನಾಥ ಪೋಲಿಸ್ ಅಧಿಕಾರಿಯಾಗಿದ್ದಾನೆ. ಧರ್ಮರಾಜು ಎಷ್ಟೋ ವರ್ಷದವರೆಗೆ ಇಂಗ್ಲಿಷ್ ಹಾಗೆ ಉಳಿದಿದೆ ಎನ್ನುತ್ತಲೆ ಅಬ್ಬಿಫಾಲ್ಸ್ ಬಳಿ ಬಿಸ್ಕೆಟ್ ಚಿಪ್ಸ್ ಮಾರುತ್ತಿದ್ದ. ಪುಷ್ಪರಾಜು ತಿಲಕ್ ಇವರೆಲ್ಲಾ ಏನಾದರೋ ಗೊತ್ತಿಲ್ಲ. ರೇಷ್ಮ ಬಾಸ್ಕೆಟ್ ಪ್ಲೇಯರ್, ಇಂದಿರಾ ಫ್ಯಾಷನ್ ರಾಣಿ, ರಾಜೇಶ್ವರಿ ಬೊಂಬಾಯಿ ಬಾಯಿಯವಳು, ಗೀತಾ ಸ್ಟ್ಯಾಟರ್ಜಿ ಮಾಡಿಕೊಂಡೇ ಮೆಟಿರಿಯಲ್ಸ್ ಕಲೆಕ್ಟ್ ಮಾಡಿ ಪರೀಕ್ಷೆ ಬರೆಯುತ್ತಿದ್ದಳು. ಜೊತೆಗೆ ನನ್ನ ವಿರುದ್ಧ ಪೈಪೋಟಿ ನಡೆಸುತ್ತಿದ್ದಳು. ಐದು ಜನರು ಸೇರಿ ಪ್ರತಿ ವಿಷಯದಲ್ಲೂ ನನ್ನನ್ನು ಮೀರಿಸಬೇಕೆಂಬ ಹಠ ಮಾಡಿದ್ದರಂತೆ. ನನಗೆ ಅದು ಕಡೆಗೆ ತಿಳಿಯಿತು; ಆದರೆ ಏನು ಮಾಡುವುದು ಪದವಿ ತರಗತಿಯಲ್ಲಿ ಒಂದೊಂದು ವಿಷಯದಲ್ಲಿ ಫೇಲ್ ಆಗಿಬಿಡುತ್ತಿದ್ದರು. ಅದರಲ್ಲೂ ನಮ್ಮ ಸೆಕೆಂಡ್ ಇಯರ್ ಪದವಿ ಫಲಿತಾಂಶ ಜುಲೈ ತಿಂಗಳಲ್ಲಿ ಬಂದಿತ್ತು. ಮೂವರನ್ನು ಬಿಟ್ಟರೆ ಮಿಕ್ಕ ಎಲ್ಲರೂ ಇಂಗ್ಲಿಷ್‌ನಲ್ಲಿ ಫೇಲ್ ಆಗಿದ್ದರು. ಜಡಿ ಮಳೆ ತರಗತಿಯ ಟ್ಯೂಬ್ ಲೈಟ್ ಹತ್ತಿರಲಿಲ್ಲ. ಹೊರಗೆ ಮಂಜು ದಟ್ಟವಾಗಿ ಮುಸುಕಿತ್ತು. ಈಗಿನ ಹಾಗೆ ಹವಾಮಾನ ಇಲಾಖೆಯ ರೆಡ್ ಆರೆಂಜ್ ಅಲರ್ಟ್ ಸೌಲಭ್ಯ ಇರುತ್ತಿರಲಿಲ್ಲ. ಹಾಗಾಗಿ ಕಾಲೇಜಿಗೆ ಕಡ್ಡಾಯ ಹೋಗಬೇಕಿತ್ತು. ಆ ದಿವಸವಂತೂ ತರಗತಿಯ ತುಂಬಾ ಸೊರ ಸೊರ ಬುಸು ಬುಸು ಧ್ವನಿ. ಯಾರ ಮುಖವನ್ನೂ ನೋಡಲಾಗುತ್ತಿರಲಿಲ್ಲ, ನಾವು ಪಾಸಾದವರು ಅಂದರೆ ಮೈನಾ, ಮಮತ ಮುಖ ಮುಖ ನೋಡಿಕೊಂಡೆವು. ಅದರಲ್ಲೂ ಕೆಲವರು ನನ್ನನ್ನು ಸುಟ್ಟುರಿಯುವಂತೆ ನೋಡುತ್ತಿದ್ದರು. ಆಗ ಅಂದಾಜಾಯಿತು ಇವರೆ ಆ ಐದು ಜನರು ಎಂದು. ನಾವು ಅನುತ್ತೀರ್ಣ, ಯಾರಿಗೂ ಮುಖ ತೋರಿಸಬಾರದು ಎಂದ್ದಿದ್ದವರಿಗೆ ಕೊಡೆಗಳು ವರದಾನವಾಗಿದ್ದವು. ಮನೆಯಲ್ಲಿ ಬೈಗುಳ ಗ್ಯಾರಂಟಿ. ಹಾಗಾಗಿ ಆದಷ್ಟು ನಿಧಾನ ದಾರಿ ಸಾಗಬೇಕೆನ್ನುತ್ತಾ ಮಳೆಯ ನಡುವೆ ರಸ್ತೆಗೆ ಬಂದು ಸತ್ತ ಹಾವು ಕಪ್ಪೆಗಳನ್ನು ರಸ್ತೆಯ ಆ ಬದಿಯಿಂದ ಈ ಬದಿಗೆ ತಳ್ಳುತ್ತಾ ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಮನೆಗೆ ಹೋಗುತ್ತಿದ್ದವರ ಪಂಗಡ ಒಂದಾದರೆ ಆದಷ್ಟು ಬೇಗ ಮನೆಯವರಿಗೆ ಹೇಳಬೇಕು ಎನ್ನುವ ತವಕ ನಮ್ಮ ಪಂಗಡಕ್ಕೆ. ಆದರೆ ಆ ಪಾಸು ಈಗ ಫೇಲಾಗಿರಲಿಕ್ಕೂ ಸಾಧ್ಯ ಆ ಫೇಲುಗಳು ಈಗ ಪಾಸ್ ಪಾಸ್ ಆಗಿ ಎಷ್ಟೋ ಸಾಧನೆಯ ಎತ್ತರವನ್ನೂ ತಲುಪಿದ್ದರಬಹುದು. (ಅಂದ ಹಾಗೆ ಮಳೆ ಹೆಚ್ಚಾದಾಗ ಆಮೆಗಳು ತೋಡಿನಿಂದ ಆಚೆ ರಸ್ತೆಗೆ ಬರುತ್ತಿದ್ದವು… ಕತ್ತು ಹೊರಗೆ ಹಾಕಿ ನಿಧಾನವಾಗಿ ಸರಿದಾಡುತ್ತಿದ್ದವು… ನಮ್ಮನ್ನು ಕಂಡರೆ ಕತ್ತನ್ನು ಸರಕ್ಕನೆ ಚಿಪ್ಪಿನ ಒಳಕ್ಕೆ ಸೆಳೆದುಕೊಳ್ಲುತ್ತಿದ್ದವು. ಹತ್ತಿರ ಮನೆಯಿರುವವರು ಅವುಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಅದರ ಚಿಪ್ಪನ್ನು ನಿಂಬೆ ಹುಳಿಯಲ್ಲಿ ಅರೆದು ಲೇಪಿಸಿದರೆ ಹುಳುಕಡ್ಡಿ ಗುಣವಾಗುತ್ತದೆ ಎನ್ನುವುದನ್ನು ಕೇಳಿದ್ದೆ ಅದರ ಅತ್ಯಂತ ಗಟ್ಟಿಯಾದ ಚಿಪ್ಪು ಅಥವಾ ಹೊರಕವಚ ಇಂದಿಗೂ ಎಷ್ಟೋ ಮನೆಗಳಲ್ಲಿ ವಾಸ್ ಇಡುವ ಅಲಂಕಾರಿಕ ಸಾಮಾಗ್ರಿಗಳಲ್ಲಿ ಒಂದಾಗಿದೆ)
ನನಗೆ ನನ್ನ ರಿಸಲ್ಟ್ ಅನ್ನು ಎಲ್ಲಾ ಉಪನ್ಯಾಸಕರಿಗೂ ಹೇಳಬೇಕು ಅನ್ನಿಸುತ್ತಿತ್ತು. ಅದರೆ ಕ್ಲಾಸಿನಲ್ಲಿ ಫೇಲಾದವರೆ ಇದ್ದ ಕಾರಣ ಅವರಿಗೆ ಬೇಜಾರು ಆಗುತ್ತದೆ ಅನ್ನುವ ಕಾರಣಕ್ಕೆ ಅವರು ಕೇಳಿದಾಗ ಮಾತ್ರ ಹೇಳುತ್ತಿದ್ದೆ. ಇವತ್ತಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ಧರ್ಮ ಸರ್ ಪತ್ನಿ ಡಾ. ಶಾನಿಯವರು “ಮಾರ್ಕ್ಸ್ ಕಾರ್ಡ್ಸ್ ಇಡ್ಲಿಕ್ಕೆ ಸೂಟ್ಕೇಸ್ ರೆಡಿಮಾಡಿಕೊಂಡ್ರ…? ಹೇಗೆ?” ಎಂದರು. ಇನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಸೋಮಣ್ಣ ಸರ್ ಗಂಭೀರವಾಗಿ ನನ್ನನ್ನು “ಏನ್ರೀ ಪಾಸಾಗಿದ್ದೀರ…..? ಓದ್ಕೋಬೇಕ್ ! ಗಂಭೀರವಾಗಿ ಓದ್ಕೋಬೇಕು ಗೊತ್ತಾಯ್ತೇನ್ರೀ….” ಎಂದರು. ಗಣಪತಿಗೌಡ ಸರ್ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜೊಂದರ ಪ್ರಿನ್ಸಿಪಾಲ್ “ಪಾಸ್ ಗೊತ್ತು.. ಏನಿದೆ ಪರ್ಸೆಂಟೇಜ್ ?” ಎಂದ ಮಾತು ಇವತ್ತಿಗೂ ಕೇಳಿದ ಹಾಗೆ ಇದೆ. ಇನ್ನು ಜಯಂತಿ ಮೇಡಮ್, ಲಕ್ಷ್ಮೀದೇವಿ ಮೇಡಮ್ ಕಂಗ್ರಾಟ್ಸ್ ಎಂದರು.
ಇಂದಿನ ಎಫ್. ಎಮ್. ಸಿ. ಪ್ರಿನ್ಸಿಪಾಲ್ ರಾಘವ ಸರ್ “ಪಾಸಾದ್ರೆ ಸಾಲ್ದು got it? ಅರ್ಥ ಆಯ್ತಾ?” ಎಂದಿದ್ದರು. ನಾನೋ ಅದೇ ಸಮಯಕ್ಕೆ ಆಕಾಶವಾಣಿಯ ಯುವವಾಣಿ ವಿಭಾಗದಲ್ಲಿ ಕಾರ್ಯಕ್ರಮ ನೀಡಲು ‘ಕ್ವಿಟ್ ಇಂಡಿಯಾ ಚಳುವಳಿ’ ಬಗ್ಗೆ ಭಾಷಣ ಬರೆದಿಟ್ಟುಕೊಂಡಿದ್ದೆ. ಅಲ್ಲಿ ದೂರಾಲೋಚನೆ >ದುರಾಲೋಚನೆ ಪದದ ವಿವಕ್ಷೆಯನ್ನು ರಾಘವ ಸರ್ ನಡೆಸಿದ್ದು ಇವರು ಹಿಸ್ಟ್ರಿ ಸರ್ರ ಇಲ್ಲ ಕನ್ನಡ ಸರ್ರ ಎನ್ನುವ ಹಾಗಿತ್ತು. ಹಳೆಯವನ್ನು ನೆನಪಿಸಿಕೊಂಡರೆ ಈ ದಿನ ಹೆಮ್ಮೆ ಅನ್ನಿಸುತ್ತದೆ ನಿಜಾ…….. ಅದೆ ಅಂಥ ಉಪನ್ಯಾಸಕ ವರ್ಗ ಎಲ್ಲರಿಗೂ ಸಿಗಲೇಬೇಕು. ಇಷ್ಟು ಒಳ್ಳೆಯ ಮಾರ್ಗದರ್ಶಕರಿದ್ದರೂ ನಾನು ಏನೂ ಸಾಧಿಸಲಿಲ್ಲ ಎನ್ನುವ ವಿಷಾದ, ಕೊರಗು ಹತಾಶೆಯಂತೂ ಇದ್ದೇ ಇದೆ. ವಿದ್ಯೆ ಕಲಿಸಿದ ನನ್ನೆಲ್ಲಾ ಗುರುಗಳಿಗೂ ಈ ಮೂಲಕ ಸಾಷ್ಟಾಂಗ ಪ್ರಣಾಮಗಳು….. ನಿಮ್ಮ ಅಮೂಲ್ಯ ಮಾರ್ಗದರ್ಶನ ಎಲ್ಲರಿಗೂ ಲಭಿಸುವಂತಾಗಲಿ.
ಇವತ್ತಿನ ಹಾಗೆ ಗುರುಶಿಷ್ಯರ ಸಂಬಂಧ ಆಗ ಸಲುಗೆಯಿಂದ ಇರಲಿಲ್ಲ. ಅವರು ದೂರದಲ್ಲಿ ಬರುತ್ತಿದ್ದರೆ ಅವರು ನೋಡದೆ ಇದ್ರೆ ಸಾಕು ಅನ್ನಿಸುತ್ತಿತ್ತು. ಎಷ್ಟು ಅದ್ಭುತವಾದ ತರಗತಿಗಳು ಅವು. ಯಾವ AI ನೆರವಿಲ್ಲದೆ ತಮ್ಮದೆ ಇಂಟೆಲಿಜೆನ್ಸಿಯಿಂದ ಪಾಠ ಹೇಳುತ್ತಿದ್ದರು. ನಾವೂ ರನ್ನಿಂಗ್ ನೋಟ್ಸ್ ಮಾಡಿ ಬುಕ್ ರೆಫರ್ ಮಾಡಿ ಪರೀಕ್ಷೆ ಬರೆಯುತ್ತಾ ಇದ್ದೆವು. ಈಗಿನ ಹಾಗೆ ಫಿಡಿಎಫ್ ಬ್ರೌಸಿಂಗ್ ಜನರೇಶನ್ನಿನವರು ಅಲ್ಲ ನಾವು! ಅದಕ್ಕೆ ಆಗ ಕಲಿತವು ಸ್ವಲ್ಪವಾದರೂ ತಲೆಯಲ್ಲಿ ಉಳಿದಿವೆ.
ಅಷ್ಟು ಉಪನ್ಯಾಸಕರಲ್ಲಿ ಮಳೆಯನ್ನು ಶಪಿಸದೆ ಇದ್ದವರೆ ಇರಲಿಲ್ಲ ಬಿಡಿ. ಆಗತಾನೆ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿತ್ತು. ಹೊಸದಾಗಿ ಬಂದ ಶೇಕಡಾ ತೊಂಬತ್ತು ಉಪನ್ಯಾಸಕ ವರ್ಗ ಮೈಸೂರು ಪ್ರಾಂತ್ಯ, ಉತ್ತರಕರ್ನಾಟಕ ಭಾಗಕ್ಕೆ ಸೇರಿದವರಾಗಿದ್ದರು. ಮಡಿಕೇರಿ ಮಳೆ ಒಬ್ಬರಿಗಿಂತ ಒಬ್ಬರಿಗೆ ವಿಶೇಷ ವಿಚಿತ್ರ ಅನ್ನಿಸುತ್ತಿತ್ತು. ಹಾಗೆ ದಿನವೂ ವಿಭಿನ್ನ ವ್ಯಾಖ್ಯಾನಕ್ಕೂ ಒಳಗಾಗುತ್ತಿತ್ತು. ಆ ಸಮಯದಲ್ಲೇ ನನ್ನದೊಂದು ಕವನ ‘ತುಷಾರ’ದಲ್ಲಿ ಪ್ರಕಟವಾಗಿದೆ ಎನ್ನುವ ಕಾರಣಕ್ಕೆ ಮನಿ ಆರ್ಡರ್ ಬಂದಿತ್ತು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಪಕ್ಕದ ಮನೆ ಅಜ್ಜಿ ಸೀತಮ್ಮನಿಗೆ ಪೋಸ್ಟ್ ಮ್ಯಾನ್ ಹೇಳಿಹೋಗಿದ್ದರಂತೆ. ಅವರು ಕಾಲೇಜಿನಿಂದ ನಾನು ಬರುತ್ತಲೇ “ಬೇಗ ಹೊರಡುನ! ನಿಂಗೆ ಫೋಸ್ಟ್ ಆಫೀಸ್ಲಿ ಹಣ ಬಂತುಂಟು ಗಡ.. ಬಾಕನ ನಂಗೆ ಸ್ವೀಟ್ ತಕಬಾ…..” ಎಂದು ಹೇಳಿ ಕಳಿಸಿದ್ದರು ನಾನೂ ಮಳೆಯಲ್ಲಿ ದಡಬಡ ಓಡಿ, ಪೋಸ್ಟ್ ಆಫಿಸ್ ಅಪ್ ಹತ್ತುವಷ್ಟರಲ್ಲಿ ಏದುಸಿರು ಬಂದು ಉಸಿರಾಡಲಾಗದ ಸ್ಥಿತಿ ನಾನು ಅಷ್ಟು ಧಾವತಿಯಿಂದ ಇದ್ದರೆ ಪೋಸ್ಟ್ ಆಫೀಸ್ ಮಾತ್ರ ಕೆಂಫು ಬಿಳಿ ಬಣ್ಣದ ಒಳಾಂಗಣ ವಿನ್ಯಾಸದೊಂದಿಗೆ ಕೂಲ್ ಆಗಿತ್ತು. ಅಲ್ಲಿ ವಿಚಿತ್ರ ಪೋಸ್ ಕೊಡುವುದು ಬೇಡವೆಂದೇ ಪೋಸ್ಟ್ ಆಫೀಸಿಗೆ ಹೋಗ್ಲಿಕ್ಕು ಮೊದಲು ಸಾವರಿಸಿಕೊಂಡು ಹೋಗಿದ್ದೆ.. “ನನಗೆ ಎಂ.ಒ. ಬಂದಿದೆ” ಎಂದು ಸ್ಟ್ಯಾಂಪ್ ಮಾರುವವರಲ್ಲಿ ಹೇಳಿದೆ. ಅವರು ಪಕ್ಕದವರಿಗೆ ತೋರಿಸಿದರು. ಅವರು ಇನ್ನು ಯಾರನ್ನೋ ಕೇಳಲು ಹೇಳಿದರು ಅಂತೂ ನನಗೆ ಎಮ್. ಒ. ನಿಜವಾಗಿಯೂ ಬಂದಿರುವುದು ಎಂದು ತಿಳಿಯಿತು. ಎಷ್ಟು ಹಣ ಎಂದು ಕೇಳುವ ಮೊದಲೆ ಎಮ್. ಒ. ಫಾರ್ಮಿನಲ್ಲಿ ಇಪ್ಪತ್ತೈದು ರೂಗಳು ಮಾತ್ರ ಎಂದಿದ್ದನ್ನು ನೋಡಿದೆ. ಖುಷಿ ಆಯಿತು ಆದರೆ ಅಜ್ಜಿಗೆ ಸ್ವೀಟ್ ತೆಗೆದುಕೊಂಡು ಹೋಗಬೇಕಾಗಿತ್ತಲ್ಲ. ಶೆಟ್ಟಿ ಬೇಕರಿಗೆ ಹೋಗಬೇಕೋ? ಕೋಸ್ಮಸ್ ಬೇಕರಿಗೆ ಹೋಗಬೇಕೋ? ಚಿತ್ರ ಬೇಕರಿಗೆ ಹೋಗಬೇಕೋ ತಿಳಿಯಲಿಲ್ಲ. ಅಂತೂ ಶೆಟ್ಟಿ ಬೇಕರಿಗೆ ಹೋಗಿ ಕಾಲು ಕೆ.ಜಿ. ಲಡ್ಡುವನ್ನು 17.50 ಪೈಸೆ ಕೊಟ್ಟು ತೆಗೆದುಕೊಂಡು ಹೋಗಿ ಸೀತವ್ವಗೆ ಕೊಟ್ಟೆ ಸ್ವೀಟ್ ತೆಗೆದುಕೊಂಡ ನಂತರ “ಎಷ್ಟುನೆ ಹಣ ಬಂದಿದು ನಿಂಗೆ….” ಅಂದರೆ “25” ಎಂದೆ “ಅಷ್ಟೆಯಾ…..?” ಎಂದು ಜೋರಾಗಿ ನಕ್ಕರು. ಪಾಪ ಅವರಿಗೆ ಇವೆಲ್ಲಾ ಹೇಗ್ ತಿಳಿಯಬೇಕು…? ನಗುತ್ತಲೇ “ಇನ್ನೂ ಚಂದ ಮಾಡಿ ಬರಿ… ಆಯ್ತಾ…. ಒಳ್ಳೆ ಹೆಸರು ತೆಗಿಬೇಕು ಆಯ್ತಾ…” ಎಂದರು ತಲೆಯಾಡಿಸಿದೆ.
ಮಳೆಯ ನಡುವೆ ‘ಜೂಲಿಯಸ್ ಸೀಸರ್’, ‘ಒಥೆಲೋ’ ಓದಿಕೊಂಡೆ, ಜಾರ್ಜ್ ಆರ್ವೆಲ್ ನ ‘ಆನಿಮಲ್ ಫಾರ್ಮ್’ ಪು.ತಿ,ನರ ‘ಮಲೇದೇಗುಲ’ , ಚಿತ್ತಾಲರ ‘ಛೇದ’, ಅಡಿಗರ ‘ಅನಾಥೆ’, ಮಾಸ್ತಿಯವರ ಸುಬ್ಬಣ್ಣ, ಕೈಲಾಸಂ ಅವರ “ಮಕ್ಳ್ ಇಸ್ಕೂಲ್ ಮನೇಲಲ್ವೆ”. ಕಾರ್ನಾಡರ ‘ತುಘಲಕ್’, ಶ್ರೀರಂಗರ ‘ಶೋಕಚಕ್ರ’, ಕುವೆಂಪುರವರ ‘ಶೂದ್ರ ತಪಸ್ವಿ’, ಶಿವರಾಮ ಕಾರಂತರ ‘ಚೋಮನದುಡಿ’ ಇವುಗಳನ್ನು ತಕ್ಕಮಟ್ಟಿಗೆ ವಿಮರ್ಶೆ ಮಾಡುವ ಮಟ್ಟಕ್ಕೆ ಓದಿಕೊಂಡಿದ್ದು ಪರವಾಗಿಲ್ಲ ಹೆಚ್ಚುಗಾರಿಕೆ ಅನ್ನಿಸಿತ್ತು ಆದರೆ ಅದು ಏನೇನೂ ಅಲ್ಲ ಎಂದು ಅರ್ಥವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಅದೇ ಸವಿ ನೆನಪಿನ ಮುಂಗಾರುಮಳೆಯ ಈ ಸವಿ ಸಂಜೆಯಲಿ ಇಂದು ನನ್ನ ಕೈಯಲ್ಲಿರುವ ಕೃತಿ ಲಕ್ಷ್ಮೀಶ ತೊಳ್ಪಾಡಿಯವರ ‘ಭಾರತಯಾತ್ರೆ’
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.