ಯಾವಾಗ?

ಲಕ್ಷ ಲಕ್ಷ ಗಳಿಗೆಗಳ ಹಿಂದೆ ನಕ್ಷತ್ರಗಳು ಬರೆದ
ಬೆಳಕಿನ ಪತ್ರಗಳ ಅರ್ಥ ಹುಡುಕುತಿದ್ದ,
ಕಪ್ಪು ರಸದಲಿ ಬಿಳಿಯ ಕುಂಚವ ತೋಯಿಸಿ
ಆ ಪತ್ರಗಳಿಗೆ ವ್ಯಾಖ್ಯಾನ ಬರೆಯುವ ತವಕದಲಿ

ಕಬ್ಬಿನಂತೆ ಬೆಳೆದ ಕೋಲುಗಳ ಹಿಂಡಿ-ಹಿಂಡಿ ತೆಗೆದ
ಕಡುಗಪ್ಪು ರಸ ಅದು; ಅಂಟಿದರೆ ಮತ್ತೆ ಅಳಿಸದಷ್ಟು ಗಟ್ಟಿ.
ನೂರಾರು ವರ್ಷಗಳು ಹಿಂಡಿಸಿಕೊಂಡ ಸಿಪ್ಪೆ ರಾಶಿ
ಕೊಳೆತುಹೋದರೂ ಹೊಸ ಫಸಲಿನ ರಸ ಇಂಗಿಲ್ಲ

ಎತ್ತೆತ್ತರದ ಕೋಣೆಯೊಳಗೆ, ಸತ್ತ ಪ್ರಾಣಿಯೊಂದರ
ಸುಲಿದ ಸಿಪ್ಪೆಯ ಮೆತ್ತೆಯ ಮೇಲೆ ಕುಳಿತ ಅವ
ಕಪ್ಪು ಆಗಸದೆ ಹೊಳೆಯುತ್ತಿದ್ದ ನಕ್ಷತ್ರಗಳ ನೋಡಿ ಬರೆದ:
‘ಕಪ್ಪಿರುವದೇ ಬಿಳಿಯ ಬಿಳುಪನ್ನ ಹೊಳೆಸಲು’

ಕೆಳಗೆ, ವಿಷದ ಜಂತುಗಳ ತವರೆಂದು ಸುಟ್ಟ ಬನದ ಬಯಲಲಿ
ನಿಂತಿದ್ದವು ಉದ್ದುದ್ದ ಕೊಳವೆಗಳು ಹೊಗೆಯುಗುಳುತ
ಕಾಡಿ, ಬೇಡಿ, ಕರೆದರೆಂದು ಹರಿದು ಬಂದ ಗಂಗವ್ವನ
ಮಡಿಲೆಲ್ಲ ವಿಷದ ಕೆಚ್ಚಲುಗಳು ಸುರಿದ ಹೊಲಸಿನ ಮೈಲಿಗೆ.

ಒಂಟಿ ಸಿಕ್ಕರೆ ಪಕ್ಕದ ಮನೆಯ ಕೂಸನ್ನೂ ಬಿಡದೆ
ಮೈಯೆಲ್ಲಾ ಮೊಬೈಲ್ ಆಡಿಸಿ, ಹರಕೊಂಡು
‘ಹಬ್ಬ’ ಮಾಡುವ ದುರುಳ ಡೈನೋಸಾರುಗಳು ಎಲ್ಲೆಲ್ಲೂ
ಬರುವನೆಂದು ಭಗೀರಥ ಕೊರೆವ ಕಾರಿರುಳ ಕೊಳ್ಳಿ ಹಿಡಿದು?

ಕರೆಂಟಿನಲಿ ಕಾರು ಓಡುವ ಸುದ್ದಿ ಕೇಳಿ ಬೆಚ್ಚಿದ್ದಾರಂತೆ
ಮೈತುಂಬಾ ಇದ್ದಿಲು ಬಳಿದುಕೊಂಡ ಮಂದಿ
ಮತ್ತೆ ಒಲೆ ಹಚ್ಯಾರಂತೆ, ಕುದಿವ ಬಾಣಲೆಯಲಿ
ಹೊಸ-ಮತ್ತಿನ ಬೋಂಡಾ ಕರಿದು ಬಾಯಿಗೆ ತುಂಬಲು!

ಯಮುನೆಯ ತೀರದ ಬಿಳಿಯ ಮಿನಾರಿನ ಹೂಗಳ
ಬೆವರಿನ ವಾಸನೆ ಇನ್ನೂ ಬಡಿವುದಂತೆ
ವೈರಸ್ಸುಗಳು ಸಾಯಿಸದ ಮೂಗಿನ ನಳಿಗೆಗಳಿಗೆ.
ಹೊಸ ಪರಿಮಳದ ಹೂವ ತರುವ ಚಿಟ್ಟೆ ಎಲ್ಲಿ ಅಡಗಿದೆಯೋ?

ಕೆಳಗಿನದ ಮ್ಯಾಲೆ ಮಾಡುವದಂತೆ ಪ್ರಕೃತಿಯ ಚಕ್ರ.
ಮನುಷ್ಯ ಜಾತಿಯದು ಅಡ್ಡಡ್ಡ ತಿರುಗುತ್ತಲೇ ಇರುವ ಎರಡು ಚಕ್ರ:
ಕಬ್ಬಿಣ ಕಟ್ಟಿದ ಕಾಲು ತಿರುಗಿಸೋ ಗಾಣದ ಚಕ್ರ;
ಆ ಕಾಲಿನ ಮೇಲಿನ ಎದೆ ಸೆಟೆದರೆ, ಕತ್ತು ಕೊಯ್ಯುವ ಗರಗಸದ ಚಕ್ರ.

 

ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ ಮತ್ತು ವಾಸ ಲಂಡನ್ನಿನಲ್ಲಿ.
ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.

 

(ಕಲಾಕೃತಿ: ಪ್ಯಾಬ್ಲೋ ಪಿಕಾಸೋ)