ಪಾಶ್ಚಾತ್ಯವೇ ಇರಲಿ ಪೌರಾತ್ಯವೇ ಇರಲಿ ಈ ನಾಟಕ ಹೇಗೆ ಮತ್ತು ಯಾವಾಗ ವಿಕಸಗೊಂಡಿತು ಎನ್ನುವದನ್ನು ನಿಖರವಾಗಿ ತಿಳಿಸಲು ಸಾಧ್ಯವಾಗುವದಿಲ್ಲ. ಪ್ರಾಚೀನ ಗ್ರೀಸಿನ ಮೊದಲ ನಾಟಕಗಳು ಮೇಳಗೀತಗಳಿಂದ ಮೊದಲ ಅಭಿನಯ ಮತ್ತು ನಟನೆಗಳು ಹುಟ್ಟಿರಬಹುದೆನ್ನುವದನ್ನು ತತ್ವಜ್ಞಾನಿ ಅರಿಸ್ಟಾಟಲ್ ಹೇಳುತ್ತಾನೆ. ನಟನೆ ಎನ್ನುವುದು ಜೀವಿಗಳ ಕಲಿಕೆಯ ಮೊದಲ ಹಂತವೆನ್ನಬಹುದು. ಬೆಕ್ಕು, ಹುಲಿ, ನಾಯಿ ಮೊದಲಾದ ಪ್ರಾಣಿಗಳಲ್ಲಿ ತಾಯಿ ತನ್ನ ಮರಿಗೆ ಅಣಕು ಆಟಗಳ ಮೂಲಕವೇ ತನ್ನ ಕಾಲಮೇಲೆ ತಾನು ನಿಲ್ಲುವ ವಿದ್ಯೆಯನ್ನು ಹೇಳುವದನ್ನು ಗಮನಿಸಬಹುದು.
ವಿಶ್ವರಂಗಭೂಮಿಯ ದಿನಾಚರಣೆಯ ಹೊತ್ತಿನಲ್ಲಿ ಭರತನ ನಾಟ್ಯಶಾಸ್ತ್ರದ ಪ್ರಸ್ತುತತೆಯ ಕುರಿತು ನಾರಾಯಣ ಯಾಜಿ ಬರಹ
ಪ್ರತಿವರ್ಷವೂ ಮಾರ್ಚ್ 27 ಬಂತೆಂದರೆ ಜಾಗತಿಕ ನಾಟಕಪ್ರಿಯರಿಗೆ ಸಂಭ್ರಮ. ಈ ದಿನವನ್ನು ಅಂತಾರಾಷ್ಟ್ರೀಯ “ವಿಶ್ವರಂಗಭೂಮಿ ದಿನ” ವನ್ನಾಗಿ ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆ (ITI) ಘೋಷಿಸಿಸಿದೆ. 1962ರಲ್ಲಿ ಜೀನ್ ಕೋಕ್ಟು (Jean Cocteau) ಎನ್ನುವ ಫ್ರೆಂಚ್ ನಾಟಕಕಾರನಿಂದ ಪ್ರಾರಂಭವಾದ ಈ ದಿನದ ಮೂಲ ಉದ್ದೇಶ “Theatre and a Culture of Peace.” ಶಾಂತಿಯ ಸಂಸ್ಕೃತಿಗಾಗಿ ರಂಗಭೂಮಿಯನ್ನು ತೊಡಗಿಸಿಕೊಳ್ಳುವುದಾಗಿದೆ. ರಂಗಭೂಮಿ ಮನುಕುಲದ ಶಾಂತಿಯನ್ನು ಸಾರಬೇಕೆನ್ನುವ ಸಂದೇಶವನ್ನು ಅದು ಒಳಗೊಂಡಿರುತ್ತದೆ. ರಂಗಭೂಮಿ ಕೇವಲ ಮನರಂಜನೆಗೆ ಇರುವುದಲ್ಲ; ಪ್ರಪಂಚದಲ್ಲಿ ಶಾಂತಿ ನೆಲೆಸುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದು ಎನ್ನುವ ಹಿನ್ನೆಲೆಯಲ್ಲಿ ಯುನೆಸ್ಕೋ ಇದನ್ನು ಪ್ರಾರಂಭದಿಂದಲೇ ಮಾನ್ಯತೆಯನ್ನು ನೀಡಿದೆ.

(ಥಿಯೋಡೊರೋಸ್ ಟರ್ಜೋಪೋಲೋಸ್)
ಈ ದಿನಕ್ಕೆಂದು ಯಾವುದೇ ಒಂದು ಘೋಷಣಾ ವಾಕ್ಯಗಳು ಇಲ್ಲವಾದರೂ ಆ ವರ್ಷಗಳ ಜಾಗತಿಕ ಸ್ಥಿತಿಗನುಗುಣವಾಗಿ ಜಾಗತಿಕ ರಂಗಭೂಮಿಯ ಭವ್ಯ ಇತಿಹಾಸದ ಕುರಿತು ಸಂದೇಶ ಕಳುಹಿಸಲು ಓರ್ವ ಪ್ರಸಿದ್ಧ ನಟ ಅಥವಾ ನಟಿಯರನ್ನು ಆಯ್ಕೆಮಾಡುವ ಪರಂಪರೆ ಇತ್ತೀಚಿನ ದಿನಗಳಲ್ಲಿ ಪ್ರಾರಂಭಗೊಂಡಿದೆ. ಈ ವರ್ಷ ಪ್ರಸಿದ್ಧ ಗ್ರೀಕ್ ನಾಟಕ ನಿರ್ದೇಶಕ “ಥಿಯೋಡೊರೋಸ್ ಟರ್ಜೋಪೋಲೋಸ್” ಅವರ ಸಂದೇಶದೊಂದಿಗೆ ರಂಗಭೂಮಿಯ ದಿನವನ್ನು ಆಚರಿಸಲಾಗುತ್ತಿದೆ. ಅವರು ಜಾಗತಿಕ ತಾಪಮಾನ ನಿರ್ವಹಣೆ, ಪರಿಸರ ಸಂರಕ್ಷಣೆ, ಕಾಡಿನ ಬೆಂಕಿ, ಅಂಟಾರ್ಟೀಕಾದಲ್ಲಿ ಕರಗುತ್ತಿರುವ ಮಂಜುಗಡ್ಡೆಯ ಕುರಿತಾಗಿ ರಂಗಭೂಮಿ ಧ್ವನಿ ಎತ್ತಬೇಕಾದ ಅಗತ್ಯತೆಯ ಕುರಿತು ಕರೆನೀಡಿದ್ದಾರೆ. “ಥಿಯೋಡೊರೋಸ್ ಟರ್ಜೋಪೋಲೋಸ್” ಅವರು ಪ್ರಾಚೀನ ಸುಮಾರು ಕ್ರಿ.ಪೂ. ನಾಲ್ಕು ಐದನೆಯ ಶತಮಾನದ ಗ್ರೀಸ್‌ನ ಮೂವರು ದುರಂತ ನಾಟಕಕಾರರಾದ ಅಯಸ್ಕಿಲಸ್(Aeschylus), ಸೋಫೋಕ್ಲಿಸ್(Sophocles) ಮತ್ತು ಯುರಿಪೈಡಿಸ್(Euripides) ಅವರ ಕೃತಿಗಳನ್ನು ತಮ್ಮ ಅಟ್ಟಿಸ್ ಥಿಯೇಟರ್ ಮೂಲಕ ಪುನಃ ಪ್ರದರ್ಶನಕ್ಕೆ ತಂದಿದ್ದಾರೆ. ಅದರಲ್ಲಿಯೂ ಅವರು “ಅಯಸ್ಕಿಲಸ್” ರಚಿಸಿದ “ಪ್ರೊಮಿಥಿಯಸ್ ಬೌಂಡ್” ನಾಟಕದಲ್ಲಿ ಅವರು ಸಂಭಾಷಣೆಗಿಂತಲೂ ಶಾರೀರಿಕ ಸೌಷ್ಟವ, ಶಾಸ್ತ್ರೀಯ ನಡೆ, ಪಾರಂಪರಿಕ ನಡವಳಿಕೆಗಳ ಮೂಲಕ ಪಾತ್ರಗಳ ಒಳನೋಟ, ಉಮ್ಮಳಿಕೆ ಮತ್ತು ತತ್ವಚಿಂತನೆಯನ್ನು ಕಟ್ಟಿಕೊಟ್ಟ ವಿಧಾನ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.
ಥಿಯೋಡೋರಸ್ ಅವರ ರಂಗ ಪ್ರಯೋಗಗಳನ್ನು ಗಮನಿಸುವಾಗ ಪ್ರಾಚೀನ ಗ್ರೀಕ್ ನಾಟಕಗಳ ಮೂಲ ನಿರ್ವಚನವನ್ನು ಮತ್ತೊಮ್ಮೆ ಪುನನಿರ್ಮಾಣಗೊಳಿಸುವ ಅವರ ಪ್ರಯೋಗ ಇಷ್ಟವಾಗುತ್ತದೆ. ಜಾಗತಿಕ ರಂಗಭೂಮಿಯ ಉಗಮದಲ್ಲಿ ಈ ಎರಡೂ ಪ್ರಾಚೀನ ಪದ್ಧತಿಗಳ ಹಿಂದೆ ಧಾರ್ಮಿಕ ಮತ್ತು ಜನಪದದ ಪ್ರಭಾವವಿದೆ. ಇಲ್ಲಿನ ದಾನವರನ್ನೆ ಅಥೆನ್ಸಿನಲ್ಲಿ Dionysus ಕುಲದವರು ಎಂದು ಕರೆಯುತ್ತಿದ್ದರು ಎನ್ನುವ ವಾದವೂ ಇದೆ. ಪ್ರಾಚೀನ ಗ್ರೀಕ್‌ನ ಪೆಲೋಪೋನಿಸ್ ಮತ್ತು ಅಟ್ಟಿಕಾ(ಅಥೆನ್ಸ್) ಪ್ರದೇಶಗಳಲ್ಲಿ ವಿಕಸನಗೊಂಡಿದ್ದ ನಾಟಕಗಳನ್ನು ಪ್ರದರ್ಶಿಸುವ ಥಿಯೋಡರ್ ಅವರ ಅಟ್ಟಿಸ್ ಥಿಯೇಟರ್ ಜನಪ್ರಿಯಗೊಂಡಿದೆ. ಸೆಮೆಟಿಕ್ ಮತದ ಪ್ರಭಾವಕ್ಕೊಳಪಟ್ಟಾಗ ಗ್ರೀಕ್ ನಾಟಕಗಳು ದೇವರ ಕುರಿತು ಭಯವನ್ನು (God Fearing) ಪ್ರಕಟಿಸಿದವು.
ಪಾಶ್ಚಾತ್ಯವೇ ಇರಲಿ ಪೌರಾತ್ಯವೇ ಇರಲಿ ಈ ನಾಟಕ ಹೇಗೆ ಮತ್ತು ಯಾವಾಗ ವಿಕಸಗೊಂಡಿತು ಎನ್ನುವದನ್ನು ನಿಖರವಾಗಿ ತಿಳಿಸಲು ಸಾಧ್ಯವಾಗುವದಿಲ್ಲ. ಪ್ರಾಚೀನ ಗ್ರೀಸಿನ ಮೊದಲ ನಾಟಕಗಳು ಮೇಳಗೀತಗಳಿಂದ (Dithyramb) ಮೊದಲ ಅಭಿನಯ ಮತ್ತು ನಟನೆಗಳು ಹುಟ್ಟಿರಬಹುದೆನ್ನುವದನ್ನು ತತ್ವಜ್ಞಾನಿ ಅರಿಸ್ಟಾಟಲ್ ಹೇಳುತ್ತಾನೆ. ನಟನೆ ಎನ್ನುವುದು ಜೀವಿಗಳ ಕಲಿಕೆಯ ಮೊದಲ ಹಂತವೆನ್ನಬಹುದು. ಬೆಕ್ಕು, ಹುಲಿ, ನಾಯಿ ಮೊದಲಾದ ಪ್ರಾಣಿಗಳಲ್ಲಿ ತಾಯಿ ತನ್ನ ಮರಿಗೆ ಅಣಕು ಆಟಗಳ ಮೂಲಕವೇ ತನ್ನ ಕಾಲಮೇಲೆ ತಾನು ನಿಲ್ಲುವ ವಿದ್ಯೆಯನ್ನು ಹೇಳುವದನ್ನು ಗಮನಿಸಬಹುದು. ಒಂದು ವ್ಯವಸ್ಥಿತವಾದ ರಂಗಮಂದಿರ ಮತ್ತು ಅಲ್ಲಿ ಆಡುವ ವಸ್ತು ವಿಧಾನಗಳ ವಿತರಣೆಯನ್ನೇ ನಾಟ್ಯವೆನ್ನುವದು ಸೂಕ್ತವಾಗಿದೆ.
ಜಾಗತಿಕ ರಂಗಭೂಮಿಯನ್ನು ಇಂದು ಗ್ರೀಕ್ ನಾಟಕಗಳ ಪ್ರಾರಂಭಕಾಲ ಸುಮಾರು ನಾಲ್ಕರಿಂದ ಐದನೆಯ ಶತಮಾನದ ಅಥೆನ್ಸಿನಲ್ಲಿ ಆಡುತ್ತಿದ್ದ ನಾಟಕಗಳೊಂದಿಗೆ ಉದಾಹರಿಸುತ್ತೇವೆ. ಅದಾಗಲೇ ಭಾರತದಲ್ಲಿ ಸಂಸ್ಕೃತ ನಾಟಕ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು ಎನ್ನುವುದನ್ನು ಮರೆಯುತ್ತೇವೆ. ಪ್ರಾಚೀನ ಭಾರತದ ನಾಟಕದ ಮೇಲೆ ಅಧ್ಯಯನ ಮಾಡಿದ “ಎ ಬೆರ್ರಿಯೆಡ್ ಕೀಥ್” ಭಾರತದ ನಾಟಕದ ಬೇರು ಋಗ್ವೇದದಲ್ಲಿದೆ ಎನ್ನುತ್ತಾನೆ. “I have no doubt that the value and depth of the Indian theory of poetics have failed to receive recognition, simply because in the original sources what is important and what is valueless are presented in almost inextricable confusion” ಎಂದು ವಿಷಾದ ವ್ಯಕ್ತಪಡಿಸಿದ್ದಾನೆ. ರಾಮಾಯಣವನ್ನು ವಾಲ್ಮೀಕಿ ಬರೆಯುವ ಮೊದಲು ಅದು ಜನಪದರು ಹಾಡಲ್ಪಡುತ್ತಿದ್ದರು ಎನ್ನುವುದು ರಾಮಾಯಣದಲ್ಲಿ ಬರುತ್ತದೆ. ವೇದದಲ್ಲಿ ಸಂಭಾಷಣೆಯ ಸ್ವರೂಪದಲ್ಲಿ ಯಮ ಯಮಿಯರ ಸಂವಾದ, ವಿಶ್ವಾಮಿತ್ರ ಋಷಿ ಶತಧ್ರು ನದಿಗಳೊಡನೆ ಆಡುವ ಮಾತುಗಳು, ಅದಕ್ಕೆ ಪ್ರತಿಯಾಗಿ ನದಿ ಇಬ್ಭಾಗವಾಗಿ ಋಷಿಗೆ ಹಾದಿ ಮಾಡಿಕೊಟ್ಟಿದ್ದು, ಇವೆಲ್ಲವೂ ನಾಟಕದ ಮೂಲ ಬೇರುಗಳೇ ಆಗಿವೆ. ಯಜುರ್ವೇದದಲ್ಲಿ ಯಜ್ಞದ ಕೊನೆಗೆ ಯಜಮಾನ ತನ್ನ ಸ್ಥಾನಕ್ಕೆ ಪೂರ್ವಾಭಿಮುಖವಾಗಿ ನಿಂತು ಮಂತ್ರಕ್ಕೆ ಒಂದರಂತೆ ಮೂರು ಹೆಜ್ಜೆ ಜಿಗಿಯುವನು. ನಂತರ ಕುಳಿತುಕೊಂಡು ವ್ರತವಿಸರ್ಜನೆ ಮಾಡಿ ಮತ್ತೆ ಎದ್ದು ಪೂರ್ವಕ್ಕೆ ಜಿಗಿದು ಗೋಮತಿ ಮಂತ್ರವನ್ನು ಪಠಿಸುವ ಕ್ರಿಯೆಯೊಂದಿದೆ. ವಾಮನಾವತಾರವನ್ನು ಹೋಲುವ ಇದಕ್ಕೆ ‘ವಿಷ್ಣುಕ್ರಮ’ ಎನ್ನುತ್ತಾರೆ.
ಖ್ಯಾತ ನಾಟಕಕಾರ ಶ್ರೀರಂಗರ ಪ್ರಕಾರ “ರಂಗಭೂಮಿಗೆ ಪ್ರಾಚೀನತೆಯಿದ್ದರೂ ಅದು ಪ್ರಾರಂಭದಲ್ಲಿ ಕಲಾಸೃಷ್ಠಿಯಾಗಿರಲಿಲ್ಲ, ಸಂಸ್ಕೃತಿಯ ಪ್ರೇರಣೆ ಹಾಗೂ ಜ್ಞಾನದ ಉದ್ದೇಶ ದೊರೆತ ನಂತರ ಅದು ‘ಕಲಾಸೃಷ್ಠಿ’ ಎನ್ನುವ ರೂಪವನ್ನು ಪಡೆಯಿತು ಎನ್ನುತ್ತಾರೆ. ‘ರಂಗಸ್ಥಲ’ ಎಂದಾಗ ‘ರಂಗ’ ಎಂದಾಗ ರಂಜನೆ ಹಾಗೂ “ಸ್ಥಲ” ಎಂದಾಗ ಈ ರಂಜನೆಯ ನಿರ್ದಿಷ್ಟ ಸ್ಥಲ ಅಥವಾ ಪರಿಸರ ಎನ್ನುವ ವಿವರಣೆ ನೀಡುತ್ತಾರೆ(ಕನ್ನಡ ರಂಗಭೂಮಿಯ ಪುರೋಭಿವೃದ್ಧಿಯಲ್ಲಿ ಎನ್ನುವ ಲೇಖನದಲ್ಲಿ). ಜನರನ್ನು ರಂಜಿಸುವ ಉದ್ದೇಶದಿಂದಲೇ ನಾಟಕದಲ್ಲಿ ಗ್ರಾಮ್ಯತೆ ಮತ್ತು ಅಸಭ್ಯತೆಗಳು ಬೆಳೆದವು. ಇವನ್ನು ನೇರ್ಪುಗೊಳಿಸುವ ಉದ್ದೇಶದಿಂದಲೇ ಭರತನು ನಾಟ್ಯ ಶಾಸ್ತ್ರವನ್ನು ಬರೆದ ಮತ್ತು ಕೆಲವು ಅಸಂಗತಿಗಳನ್ನು ಹೋಗಲಾಡಿಸುವ ಕಾರಣಕ್ಕೆ ಇವುಗಳಿಗೆ ವೇದದ ಸ್ಥಾನವನ್ನು ಕೊಟ್ಟ ಎನ್ನಬಹುದು.
ಭಾರತೀಯ ರಂಗಭೂಮಿಗೂ ಗ್ರೀಕ್ ರಂಗಭೂಮಿಗೂ ನಿಕಟ ಸಂಬಂಧವಿರುವ ಕೃತಿ “ಷಾರೈರಟಿನ್ ಮೈಮ್” ಎನ್ನುವ ಕೃತಿಯ ಕುರಿತು ಇಲ್ಲಿ ಉಲ್ಲೇಖಿಸಲೇಬೇಕು. ಸುಮಾರು ಎರಡನೆ ಶತಮಾನದ್ದೆಂದು ನಂಬಲಾದ ಈ ನಾಟಕದಲ್ಲಿ ಕರ್ನಾಟಕದ ಕರಾವಳಿಯ ಕನ್ನಡ ಶಬ್ಧಗಳಾದ ಕೊಟ್ ತಕ್ಕೋ, ಇಯೋ ಮುಂತಾದವುಗಳಿವೆ. ಅದೇ ಸುಮಾರಿಗೆ ಭಾರತದ ರಂಗಭೂಮಿ ರಂಗಭೂಮಿ ಸಶಕ್ತವಾಗಿ ಬೆಳೆದುನಿಂತಿತ್ತು.
ಇಂದಿನ ಆಧುನಿಕ ಸ್ವರೂಪದಲ್ಲಿ ಆಡಿದ ಪ್ರಪಂಚದ ಮೊದಲ ನಾಟಕದ ಉಲ್ಲೇಖ ಭರತನ ನಾಟ್ಯಶಾಸ್ತ್ರವನ್ನು ಆಧರಿಸಿದ “ಸಮುದ್ರ ಮಥನ” ಎನ್ನಬಹುದು. ಇದನ್ನು ನೋಡಲು ದೇವತೆಗಳು ದಾನವರು ಮಾನವರು ಎಲ್ಲರೂ ಸೇರಿದ್ದರು. ಈ ನಾಟಕದಲ್ಲಿ ದೇವತೆಗಳ ವಿರುದ್ಧ ತಮ್ಮ ಪರಾಜಯವನ್ನು ನೋಡಿದ ರಾಕ್ಷಸರು ಕ್ರುದ್ಧರಾಗಿ ತಮ್ಮ ನಾಯಕ ವಿರೂಪಾಕ್ಷನ ನೇತೃತ್ವದಲ್ಲಿ ನಟರುಗಳ ಮೇಲೆ ತಮ್ಮ ಮಾಯೆಯನ್ನು ಪ್ರದರ್ಶಿಸಿ ಅವರಿಗೆ ತಮ್ಮ ಮಾತುಗಳು ಮರೆಯುವಂತೆ ಮಾಡಿದರಂತೆ. ಆಗ ಇಂದ್ರನು ತನ್ನ ಧ್ವಜದಂಡದಿಂದ ಅಸುರರನ್ನು ಹಣ್ಣಾಗುವಂತೆ ಬಡಿದು ಅವರನ್ನು ಜರ್ಜರ ಮಾಡಿದನಂತೆ. ಆಗ ಬ್ರಹ್ಮ ದಾನವರಿಗೆ ನಾಟಕದ ಉದ್ದೇಶ ನಿಮ್ಮ ಸೋಲನ್ನು ತೋರುವುದಲ್ಲ, ಜನರಿಗೆ ಹಿತವನ್ನು ಹೇಳುವದು, ಲೋಕದ ಜನತೆಗೆ ರಂಜನೆಯನ್ನು ಒದಗಿಸುವದು, ಎಲ್ಲ ಶಾಸ್ತ್ರಗಳ ಪರಿಚಯ ಮಾಡಿಸುವದು ನಾಟಕದ ಉದ್ದೇಶ ಎಂದು ಸಮಾಧಾನ ಮಾಡಿದನಂತೆ. ಮುಂದೆ ಇಂತಹ ನಾಟಕಗಳನ್ನು ಆಡುವಾಗ ದೈತ್ಯರಿಂದ ವಿಘ್ನ ಬರಬಾರದೆಂದು ಮಯನಿಗೆ ಹೇಳಿ ನಾಟ್ಯಗೃಹದ ನಿರ್ಮಾಣ ಮಾಡಿದನಂತೆ. ಈ ನಾಟ್ಯಗೃಹವನ್ನು ದೇವತೆಗಳೆಲ್ಲ ತಮ್ಮ ತಮ್ಮ ಆಯುಧಗಳೊಂದಿಗೆ ಒಂದೊಂದು ದಿಕ್ಕಿನಲ್ಲಿ ನಿಂತು ರಕ್ಷಿಸುವಂತೆ ನಿಯುಕ್ತಿಗೊಳಿಸಿದನಂತೆ. ಹೀಗೆ ಇಂದ್ರನು ದಾನವರನ್ನು ಶಿಕ್ಷಿಸಿದ ನೆನಪಿಗಾಗಿ ಪೂರ್ವರಂಗವೆನ್ನುವ ಸಂಪ್ರದಾಯ ರೂಢಿಗೆ ಬಂತು.
ನಾಟಕ ನಿರ್ವಿಘ್ನವಾಗಿ ನೆರವೇರಲು ನಾಟಕ ಪ್ರಯೋಗದ ಮೊದಲು ದೇವತೆಗಳನ್ನು ನಂದಿಸುವದಕ್ಕೆ ಅಂದರೆ ಸಂಪ್ರೀತಗೊಳಿಸುವದಕ್ಕೆ ನಡೆಸುವ ಪೂಜೆಯನ್ನು ನಾಂದೀ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಹೀಗೆ ಪ್ರಪಂಚದ ಮೊದಲ ನಾಟಕದ ಪ್ರದರ್ಶನವನ್ನು ಅಮೃತ ಮಥನವೆನ್ನುವ ಸಮವಕಾರದ ಪದ್ಧತಿಯ ನಾಟಕವೆನ್ನಬಹುದು. ಈ ನಾಟಕವನ್ನು ಬ್ರಹ್ಮನ ಅಪೇಕ್ಷೆಯಂತೆ ನಟರಾಜನಾದ ಶಿವ ನೋಡಿ ಸಂತುಷ್ಟನಾದನಂತೆ. ಆಗ ಭರತನು ಶಿವನಿಗಾಗಿ ಮತ್ತೊಂದು ನಾಟಕ ಪ್ರಕಾರ “ಡಿಮ” ಎನ್ನುವ ಪ್ರಕಾರದ “ತ್ರಿಪುರ ದಹನ” ವೆನ್ನುವ ಎರಡನೆಯ ನಾಟಕವನ್ನು ಆಡಿತೋರಿಸಿದ. ಈ ಪ್ರದರ್ಶನಗಳನ್ನು ನೋಡಿ ಮೆಚ್ಚಿದ ಶಿವ ಮೂರನೆಯದಾದ ತಾಂಡವವನ್ನು ಕಲಿಸಿಕೊಟ್ಟನಂತೆ. ಇಲ್ಲಿ ನಾಟಕದ ದಶರೂಪಕಗಳ ಪೈಕಿ ಸಮವಕಾರ, ಡಿಮ ಮತ್ತು ತಾಂಡವ ಎನ್ನುವ ಪ್ರಯೋಗವನ್ನು ನೋಡಿದರೆ ಅದಾಗಲೇ ನಾಟಕವೆನ್ನುವುದರ ಪ್ರದರ್ಶನ ಪರಿಪೂರ್ಣ ಸ್ಥಿತಿಯಲ್ಲಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ ಮೊದಲೆರಡು ನಾಟಕಗಳು ದೇವತೆಗಳ ವಿಜಯದ ಅನುಕರಣೆ ಮತ್ತು ರಂಜನೆಯನ್ನು ಮಾತ್ರ ಬೋಧಿಸಿದರೆ ನಂತರದ ‘ತಾಂಡವಲಕ್ಷಣದಲ್ಲಿ’ ಶಿವ ಅಂಗಹಾರಗಳ ಪ್ರಯೋಗವನ್ನು ತಿಳಿಸಿದನಂತೆ. ಈ ಅಂಗಹಾರಗಳ ಪ್ರಯೋಗವೇ ರಸಸೃಷ್ಟಿ ಎನ್ನುವದಾಯಿತು.
ಗ್ರೀಕ್ ನಾಟಕಕ್ಕೂ ಭಾರತೀಯ ನಾಟಕಗಳಿಗೂ ಇರುವ ಮೂಲ ವ್ಯತ್ಯಾಸವೇ ಇವುಗಳನ್ನು ಪ್ರಸ್ತುತ ಪಡಿಸುವ ವಿಧಾನಗಳಲ್ಲಿದೆ. ಗ್ರೀಕ್ ನಾಟಕದಲ್ಲಿ ವಿಧಿಯಾಟ, ದುರಂತ, ಪ್ರಶ್ನಾತೀತ ದೇವರು ಹಾಗೂ ಹಾಸ್ಯ ಇವುಗಳನ್ನು ಒಳಗೊಂಡಿದೆ. ಭಾರತದ ನಾಟ್ಯಗಳು ನಿಖರವಾದ ರಂಗಸಿದ್ಧಾಂತಕ್ಕೆ ಒಳಪಟ್ಟಿವೆ. ಇಲ್ಲಿನ ನಾಟಕಗಳು ಪಶ್ಚಿಮದ ನಾಟಕಗಳ ಹರ್ಕ್ಯುಲಸ್ ಅನುಭವಿಸುವ ರೀತಿಯ ವೇದನೆಗಳನ್ನೋ, ಕೆಸ್ಸಾಂಡಾನ ಹುಚ್ಚನ್ನೋ ಅಭಿವ್ಯಕ್ತಿಸುವದಿಲ್ಲ. ಇಲ್ಲಿನ ನಾಯಕನು ವಿಷಪೂರಿತವಾಗಿರುವ ಉಡುಗೆಗಳನ್ನು ತೊಡುವದಾಗಲೀ, ಉರಿಯುವ ಬೆಂಕಿಗೆ ಆಹುತಿಯಾಗುವದಾಗಲೀ ಮಾಡುವುದಿಲ್ಲ. ಇಲ್ಲಿನ ಖಳನಾಯಕ ಗ್ರೀಸ್ ನಾಟಕಗಳ ರೀತಿಯವ ಅಲ್ಲ. ರಾವಣ, ದುರ್ಯೋಧನ ಮೊದಲಾದವರು ಖಳನಾಯಕರಾದರೂ ಅವರಲ್ಲಿ ಉದಾತ್ತತೆ ಇದೆ. ಭಾರತೀಯ ನಾಟಕಗಳ ವಸ್ತು ದುಷ್ಟಶಕ್ತಿಗಳ ಸಾಮರ್ಥ್ಯವನ್ನು ಹೀಗಳೆಯುತ್ತವೆ. ಅಡ್ಡಿಗಳು ಎಷ್ಟೇ ಘೋರ ರೂಪದವುಗಳಾದರೂ ತಪಃಶಕ್ತಿಯಿಂದ ಅವುಗಳನ್ನು ಮೆಟ್ಟಿನಿಲ್ಲಬಹುದೆನ್ನುವದು ಇಲ್ಲಿನ ನಾಟಕಗಳ ಜೀವಾಳ.
“ಅಭಿನಯವೆಂದರೆ ಅಮೂರ್ತ ವಸ್ತುಗಳಾದ ಪುರಾಣ, ಮಹಾಕಾವ್ಯಗಳನ್ನು ಮೂರ್ತೀಕರಿಸಿ ಅದನ್ನು ನಟ ಮತ್ತು ಪ್ರೇಕ್ಷಕರ ಸಹಿತವಾಗಿ ಮತ್ತೊಮ್ಮೆ ಅಮೂರ್ತ ಪ್ರಪಂಚಕ್ಕೆ ಒಯ್ಯುವುದಾಗಿದೆ”. ಸರಳವಾದ ರಂಗಸಜ್ಜಿಕೆಯಲ್ಲಿ ಸ್ವರ್ಗದ ಸುಧಾಮ ಸಭೆಯೂ ಯುದ್ಧಭೂಮಿಯೂ ಏಕಕಾಲಕ್ಕೆ ಆಗಬಲ್ಲದು. ಬ್ರಹ್ಮ ಹೇಗೆ ಈ ಲೋಕವನ್ನು ಜೇಡ ಬಲೆಯನ್ನು ನೇಯ್ದು ತಾನು ಆ ಬಲೆಯಲ್ಲಿ ಹೊಕ್ಕುವುದೋ ಅದೇ ರೀತಿ ನಟ ತನ್ನ ಅಭಿನಯದ ಮೂಲಕ ರಾಮಾಯಣವನ್ನೋ ಶಾಕುಂತಲೆಯ ವಿರಹವನ್ನೋ ಅಮೂರ್ತ ಪ್ರಪಂಚದಿಂದ ಸೃಷ್ಟಿಸಿ ತಾನು ಅದರಲ್ಲಿ ಮಗ್ನನಾಗುವುದಲ್ಲದೇ, ಪ್ರೇಕ್ಷಕರನ್ನೂ ಆ ಲೋಕಕ್ಕೆ ಕೊಂಡೊಯ್ಯುತ್ತಾನೆ. ಅದನ್ನೇ ವಿಭಾವ ಅನುಭಾವ ಇವೆರೆಡೂ ಪ್ರೇಕ್ಷರಲ್ಲಿ ಸಂವಹನವನ್ನು ವ್ಯಭಿಚಾರಿ ಭಾವದಲ್ಲಿ ನಡೆಸಿ ಏಕಕಾಲಕ್ಕೆ ನಟ, ಪ್ರೇಕ್ಷಕ ಇಬ್ಬರೂ ಈ ಮೂರ್ತ ಪ್ರಪಂಚದಿಂದ ಅಮೂರ್ತಲೋಕಕ್ಕೆ ಸಾಗಿಬಿಡುತ್ತಾರೆ. ಇದನ್ನೇ ಭರತ ಮುನಿ “ವಿಭಾವಾನುಭಾವ ವ್ಯಭಿಚಾರಿ ಸಂಯೋಗಾತ್ ರಸನಿಷ್ಪತ್ತಿಃ” ಎಂದಿದ್ದಾನೆ. ರಸೋತ್ಪತ್ತಿಯಲ್ಲಿ ವಿಭಾವ ಅನುಭಾವ ಮತ್ತು ವ್ಯಭಿಚಾರಿ ಭಾವಗಳು ಕ್ರಮವಾಗಿ ಕಾರಣ, ಕಾರ್ಯ ಮತ್ತು ಸಹಕಾರಿಗಳಾಗುತ್ತವೆ. ಇವುಗಳಲ್ಲಿ ವಿಭಾವದಲ್ಲಿ ಆಲಂಬನ, ಉದ್ದೀಪನ ಎನ್ನುವ ಎರಡು ವಿಧಗಳಿವೆ. ಅನುಭಾವವು ಆಂಗಿಕ, ವಾಚಿಕ, ಸಾತ್ವಿಕ ಮತ್ತು ಆಹಾರ್ಯಕವೆನ್ನುವ ನಾಲ್ಕು ವಿಧಗಳಲ್ಲಿ ಅಭಿವ್ಯಕ್ತಿಸಲ್ಪಡುತ್ತದೆ. ಇನ್ನು ವ್ಯಭಿಚಾರಿ ಭಾವವೊಂದರಲ್ಲಿಯೇ ಮೂವತ್ತು ಮೂರು ವಿಧಗಳನ್ನು ಭರತ ಹೇಳುತ್ತಾನೆ. ಲೋಕದಲ್ಲಿ ನಾವು ಕಾಣುವ ವಸ್ತುಗಳೆಲ್ಲವೂ ಕಾವ್ಯದಲ್ಲಿ ವಿಭಾವವಾಗುತ್ತವೆ. ಅದನ್ನು ಕ್ರಿಯಾ ರೂಪದಲ್ಲಿ ತರುವುದು ಅನುಭಾವ. ರಂಗದಲ್ಲಿ ಇವುಗಳನ್ನೆಲ್ಲ ನೋಡುವ ಪ್ರೇಕ್ಷಕ ಮತ್ತು ನಟರು ಇವರ ನಡುವೆ ಬೇರೆ ಬೇರೆ ಭಾವವಗಳು ಮೂಡಿ ಮರೆಯಾಗುತ್ತವೆ. ಅದೇ ವ್ಯಭಿಚಾರಿ ಅಥವಾ ಸಂಚಾರಿ ಭಾವವು. ನಾಯಕ ಅಥವಾ ನಾಯಿಕೆಯರ ದುಃಖವನ್ನು ನೋಡಿ ಕರುಣರಸದಲ್ಲಿ ಮುಳುಗಿ ಕಣ್ಣೀರು ಸುರಿಸುವ ಪ್ರೇಕ್ಷಕ ನಾಟಕ ಮುಗಿದ ನಂತರ “ಆಹಾ, ಎಷ್ಟು ಚನ್ನಾಗಿ ಅಭಿನಯಿಸಿದ್ದಾರಲ್ಲ”! ಎಂದು ಸಂತೋಷ ಪಡುತ್ತಾನೆ. ಆದುದರಿಂದ ಇಲ್ಲಿ ಕರುಣ ರಸವೂ ಆನಂದವನ್ನೇ ಕೊಡುತ್ತದೆ. ಬ್ರಹ್ಮ ಒಲಿದರೆ ಶಾಶ್ವತವಾದ ಆನಂದ ಸಿಗುತ್ತದೆ. ಕಲಾವಿದ ರಂಗದಲ್ಲಿ ಅಭಿನಯಿಸಿದ ಅಭಿನಯವೂ ಸಹ ಅಮೂರ್ತಪ್ರಪಂಚದಲ್ಲಿ ಇರುವ ತನಕ ಅದೇ ಆನಂದವನ್ನು ಕೊಡುತ್ತಾನೆ. ಅದಕ್ಕೇ ನಾಟಕದ ರಸವನ್ನು “ಬ್ರಹ್ಮಾನಂದ ಸಹೋದರಾ” ಎಂದು ವರ್ಣಿಸಿದ್ದಾರೆ.
ರಂಗಭೂಮಿಯಲ್ಲಿ ಈ ಅಮೂರ್ತ ಮತ್ತು ಮೂರ್ತ ಎನ್ನುವುದು ಬಲು ಮುಖ್ಯವಾದ ಕ್ರಿಯೆ. ಶಾಕುಂತಲೆ ಮತ್ತು ದುಷ್ಯಂತರ ಪ್ರಣಯವನ್ನು ನೋಡಿದ ಪ್ರೇಕ್ಷಕ ತನ್ನನ್ನು ತಾನು ಮರೆಯುತ್ತಾನೆ. ಆತನೇ ದುಷ್ಯಂತನಾಗಿ ತಾದಾತ್ಮತೆ ಹೊಂದುತ್ತಾನೆ. ಇಲ್ಲಿ ರಂಗದಲ್ಲಿ ಆಡುವ ಭಾಗಗಳು ಮರೆತು ಶೃಂಗಾರ ರಸದಲ್ಲಿ ಲಯವಾಗುತ್ತೇವೆ. ನಾನು ಎನ್ನುವ ಅಹಂಕಾರಗಳೆಲ್ಲವೂ ಮರೆಯಾಗಿ ಬಿಡುತ್ತವೆ. ನಾಟಕ ಮುಗಿದ ತಕ್ಷಣ ನಮ್ಮ ನಮ್ಮ ಆವರಣಕ್ಕೆ ಬರುತ್ತೇವೆ. ಇದನ್ನು ಆವರಣ ಭಂಗವೆನ್ನುತ್ತಾರೆ. ಈ ಅಹಂಕಾರ ಭಂಗವಾಗುವ ಕ್ರಿಯೆಯನ್ನು ರಸಸಿದ್ಧಿ ಎಂದು ಭರತ ಕರೆದಿದ್ದಾನೆ. ಅದೂ ಅಲ್ಲದೇ ನಾಟಕದ ಮೂಲ ಉದ್ದೇಶ ಇಂದಿನ ಆಧುನಿಕ ಕಾಲದಲ್ಲಿ ಹೇಳುವಂತೆ, ರಂಜನೆ ಮತ್ತು ಬೋಧನೆ ಎಂದು ಭರತ ತನ್ನ ನಾಟ್ಯ ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಸುಮಾರು ಕ್ರಿ. ಪೂ. ಎರಡನೆಯ ಶತಮಾನದಲ್ಲಿಯೇ ಇಂತಹ ವೈಜ್ಞಾನಿಕ ವಿವರಣೇಯನ್ನು ನೀಡಿದ ಭರತ ಮುನಿಯು ವಿಶ್ವ ರಂಗಭೂಮಿಯ ಆದ್ಯಪಿತಾಮಹ ಎನ್ನಬಹುದು.

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.
ಗ್ರೀಕ್ ರಂಗಭೂಮಿಗೂ ಭಾರತೀಯ ರಂಗಭೂಮಿಗೂ ಇರುವ ಸಾಮ್ಯತೆ ಮತ್ತು ವೆತ್ಯಾಸವನ್ನು ಸರಳವಾಗಿ ನಾರಾಯಣ ಯಾಜಿಯವರು ತಿಳಿಸಿಕೊಟ್ಟಿದ್ದಾರೆ. ಅಭಿನಯವೆಂದರೆ ಮೂರ್ತದಿಂದ ಅಮೂರ್ತ ಎನ್ನುವ ವಿಷಯ ಹೊಸದು. ಚಾರಿಟಿನ್ ಮೈಮ್ ಮತ್ತು ಕನ್ನಡ ನಾಟಕಗಳ ಹೋಲಿಕೆ ತಿಳಿದು ಆಶ್ಚರ್ಯವಾಯಿತು. ನಾಟಕದ ಮೂಲ ನೆಲ ಭಾರತ ಎನ್ನುವುದನ್ನು ಮೊದಲ ಬಾರಿಗೆ ತಿಳಿದುಕೊಂಡೆ. ಧನ್ಯವಾದಗಳು ಯಾಜಿ ಸರ್
ಧನ್ಯವಾದಗಳು