`ಪ್ರವಾಸಿಗಳಿಂದ ತುಳುಕುತ್ತಿರುವ ಈ ಗಿರಿಪಟ್ಟಣದಲ್ಲಿ ಹಳೆಯ ನಾಗರಿಕನ ಹಾಗೆ ಬದುಕುವುದು ಬಹಳ ತಾಪತ್ರಯದ ಕೆಲಸ ಮಾರಾಯಾ’ ಎಂದು ಇಲ್ಲಿನ ಹಿರಿಯರೊಬ್ಬರು ಗೊಣಗುತ್ತಿದ್ದರು. ‘ಪ್ರವಾಸಿಗರು ನಮ್ಮನ್ನು ಕುತೂಹಲದಿಂದ ನೋಡುವುದಕ್ಕಿಂತ ಹೆಚ್ಚಾಗಿ ನಾವು ಅವರನ್ನು ಕಿರಿಕಿರಿಯಿಂದ ದುರುಗುಟ್ಟಿಕೊಂಡು ನೋಡುತ್ತಿರುತ್ತೇವೆ. ವಾರಾಂತ್ಯದಲ್ಲಿ ಮಿಡತೆಗಳ ಮಹಾಸಮೂಹದಂತೆ ಬರುವ ಇವರು ಇಲ್ಲಿಂದ ತೊಲಗುವ ಮೊದಲೇ ಇಲ್ಲಿನ ತಂಡಾಸಿನ ಗುಂಡಿಗಳು ತುಂಬಿಕೊಂಡು ನಾತ ಹೊಡೆಯುತ್ತಿರುತ್ತದೆ. ಈ ತಂಡಾಸಿನ ನೀರೂ, ಆಸ್ಪತ್ರೆಗಳ ಹೊಲಸೂ ನಗರದ ನಡುವೆ ಹಾವಿನಂತೆ ಹರಿಯುತ್ತಿರುವ ತೊರೆಯೊಂದನ್ನು ಸೇರುತ್ತದೆ. ಈ ತೊರೆ ಈ ಎಲ್ಲ ಕೊಳಕುಗಳನ್ನು ತುಂಬಿಕೊಂಡು ಅಪೂರ್ವ ಸುಂದರಿಯಂತೆ ಬಳುಕುತ್ತಾ ಮಲೆಗಳನ್ನು ಇಳಿಯುತ್ತಾ ಇಲ್ಲೇ ಹತ್ತಿರವಿರುವ ಗುಡ್ಡವೊಂದರಿಂದ ಜಲಪಾತವಾಗಿ ದುಮುಕುತ್ತಾಳೆ. ತಾವೇ ಬೆಳಗ್ಗೆ ವಿಸರ್ಜಿಸಿದ ಜೀವಜಲ ಇಲ್ಲಿ ಹೀಗೆ ಬೆಳ್ಳಿಯ ಅಬ್ಭಿಯಾಗಿ ಇಳಿಯುತ್ತಿದೆ ಎಂಬ ಅರಿವಿಲ್ಲದೆ ಈ ಪಾಪದ ಪ್ರವಾಸಿಗರು ಕೇಕೆ ಹಾಕುತ್ತಿರುತ್ತಾರೆ’ ಎಂದು ಆ ಹಿರಿಯರು ನಗುತ್ತಿದ್ದರು.
ಇವರು ಈ ನಗರದಲ್ಲೇ ಹುಟ್ಟಿಬೆಳೆದು ಇಲ್ಲೇ ಶಾಲೆಕಲಿತು ದೊಡ್ಡವರಾಗಿ ದೇಶದ ದೊಡ್ಡ ಮೂಷಿಕ ವಿಜ್ಞಾನಿಯಾಗಿ ದುಡಿದು ಈಗ ಉಳಿದ ಆಯಸ್ಸನ್ನು ಈ ತರಹದ ಕಾಮಿಡಿಗಳನ್ನು ನೋಡುತ್ತಾ ಕಳೆಯುತ್ತಿದ್ದಾರೆ. ಅವರಿಗೂ ನನಗೂ ಇರುವ ಸಮಾನ ಅಂಶಗಳೆಂದರೆ ಒಮ್ಮೆಗೇ ಗಹಗಹಿಸಿ ಬರುವ ನಗು ಮತ್ತು ಆಕಾಶದ ಕುರಿತಾದ ಸಮಾನ ಆಸಕ್ತಿ. ‘ಗುರುಗಳೇ ಸ್ವಲ್ಪ ಹೊರಗೆ ಬಂದು ಆಕಾಶ ನೋಡಿ. ಆ ಪಶ್ಚಿಮದ ಮೂಲೆಯಲ್ಲಿ ಆ ಬೆಟ್ಟದ ಮೇಲೆ ನಿಂತುಕೊಂಡಿರುವ ಮೋಡ ನೋಡಲಿಕ್ಕೆ ಒಂದು ರೀತಿಯಲ್ಲಿ ಜಟಾಯುವಿನ ಹಾಗೆ ಕಾಣಿಸುತ್ತಿಲ್ಲವೇ’ ಎಂದು ಅವರು ಫೋನಿನಲ್ಲಿ ಅನ್ನುತ್ತಾರೆ. ಆಗ ನಾನು ಫೋನು ಹಿಡಿದುಕೊಂಡೇ ಹೊರಗೆ ಬಂದು ‘ಹೌದು ಹೌದು ಅದರ ಪಕ್ಕದಲ್ಲೇ ಸೂರ್ಯನನ್ನು ಮರೆ ಮಾಡಿಕೊಂಡು ನಿಂತಿರುವ ಆ ಮೋಡಗಳ ಸಮೂಹ ಸೀತೆಯನ್ನು ಹಾರಿಸಿಕೊಂಡು ಹೊತ್ತೊಯ್ಯುತ್ತಿರುವ ದಶಕಂಠನಂತೆ ಕಾಣಿಸುತ್ತಿದೆ. ನಿಮಗೂ ಹಾಗೆ ಕಾಣಿಸುತ್ತಿದೆಯಾ’ ಎಂದು ಕೇಳುತ್ತೇನೆ.
‘ಹೌದು. ನಿಮಗೆ ರಾಮಾಯಣದ ಹುಚ್ಚು ಇರಬೇಕು. ನನಗೆ ಇಲ್ಲಿ ಸೀತೆಯೂ ಕಾಣಿಸುತ್ತಿಲ್ಲ ರಾವಣನೂ ಕಾಣಿಸುತ್ತಿಲ್ಲ. ಜೋರು ಮಳೆ ಬರುತ್ತಿದೆ.ಅಯ್ಯೋ ದೇವರೇ ಇನ್ನು ನನಗೆ ಪೆಗ್ಗೇ ಗತಿ’ ಎಂದು ದಿನದ ಕುಡಿತಕ್ಕೆ ಅಣಿಯಾಗುತ್ತಾರೆ. ಆಮೇಲೆ ನಾವಿಬ್ಬರು ಬಹಳ ಹೊತ್ತು ದಿನದ ಇನ್ನೂ ಹಲವು ಕಾಮಿಡಿಗಳ ಕುರಿತು ಮಾತನಾಡುತ್ತೇವೆ. ಆ ಮಾತಿನಲ್ಲಿ ಹಳೆಯದು ಕಳೆದು ಹೋಗುತ್ತಿರುವ ಕುರಿತ ಹಳಹಳಿಕೆ, ನುಗ್ಗಿ ಬರುತ್ತಿರುವ ಹೊಸಹೊಸ ವಿಷಯಗಳ ಕುರಿತ ವಿಸ್ಮಯ, ಹವಾಮಾನ, ವಾಸ್ತುಶಿಲ್ಪ ಎಲ್ಲವೂ ಬರುತ್ತದೆ.ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೀಗೇ ಎಂದು ಹೇಳಲಾಗದ ಮನುಷ್ಯ ಸಹಜ ತಿಕ್ಕಲುತನಗಳು ಮತ್ತು ಒಮ್ಮಿಂದೊಮ್ಮಗೆ ಎಲ್ಲವನ್ನೂ ಮೀರಿ ನಡೆಯುವ ಘಟನೆಗಳು. ಈ ಹಿರಿಯರು ಇಲ್ಲಿ ಶಾಲೆ ಓದುತ್ತಿರುವಾಗ ತಮ್ಮ ಅಲೆಮಾರಿತನ ಮತ್ತು ತುಂಟಾಟಗಳಿಗೆ ಬಹಳ ಹೆಸರಾದವರು. ಇಲ್ಲಿಯ ರಾಜನ ಕೋಟೆಯೊಳಗೆ ಇರುವ ಗಣಪತಿ ದೇಗುಲದ ಗೋಡೆಗೆ ಈಡುಗಾಯಾಗಿ ಅಪ್ಪಳಿಸಿ ಬೀಳುವ ತೆಂಗಿನಚೂರುಗಳನ್ನು ಆಗ ಯಾವ ಯಾವ ಭಂಗಿಯಲ್ಲಿ ಹಾರಿಕೊಂಡು ಹೆಕ್ಕುತ್ತಿದ್ದರು ಎಂಬುದನ್ನು ಇವರು ಈಗಲೂ ಅಭಿನಯಿಸಿ ತೋರಿಸಬಲ್ಲರು. ಹಾಗೆಯೇ ಈ ಊರಿನ ನಡುವಲ್ಲಿ ಹಾವಿನಂತೆ ಹರಿಯುತ್ತಿದ್ದ ತೊರೆಯ ಯಾವ ತಿರುವಲ್ಲಿ ಯಾವ ಕಾಡು ಹಣ್ಣಿನ ಮರವಿತ್ತು ಮತ್ತು ಎಲ್ಲೆಲ್ಲಿ ಯಾವಯಾವ ಕಾಡುಹೂಗಳು ಯಾವ ಕಾಲದಲ್ಲಿ ಅರಳುತ್ತಿದ್ದವು ಮತ್ತು ತಾವು ಎಲ್ಲೆಲ್ಲಿ ಆ ತೊರೆಯಲ್ಲಿ ಬಗ್ಗಿಕೊಂಡು ಬೊಗಸೆಯಿಂದ ನೀರು ಕುಡಿಯುತ್ತಿದ್ದೆ ಎಂಬುದನ್ನು ಈಗಲೂ ಅವರು ಕಣ್ಣಿಗೆ ಕಟ್ಟುವಂತೆ ಹೇಳಬಲ್ಲರು. ಹಾಗೆಯೇ ಈಗಿನ ಕಾಲದ ಘಟನೆಗಳನ್ನೂ!
ಇವರು ನಿವೃತ್ತರಾಗಿ ಈಗ ಇರುವುದು ಈ ನಗರದ ಪಕ್ಕದ ತಮ್ಮ ಕಾಫಿ ತೋಟದಲ್ಲಿ. ಈ ಕಾಫಿ ತೋಟದಲ್ಲಿ ಇವರು ಮಾಡಿರುವ ಅವಿಷ್ಕಾರಗಳನ್ನು ನೋಡಲೆಂದೇ ಬಹಳಷ್ಟು ಜನ ಅಲ್ಲಿಗೆ ಹೋಗುತ್ತಿರುತ್ತಾರೆ. ಉದಾಹರಣೆಗೆ ಬೆಟ್ಟದ ಮೇಲಿನ ಕಾಫಿಗಿಡಗಳ ಸಾಲಿನಿಂದ ಕೊಯ್ದ ಕಾಫಿ ಹಣ್ಣುಗಳ ಮೂಟೆಗಳನ್ನು ಬೆಟ್ಟದ ಕೆಳಗಿರುವ ಸಂಸ್ಕರಣಾ ಘಟಕಕ್ಕೆ ಆಳುಗಳು ಹೊತ್ತುಕೊಂಡು ಬರುವುದಿಲ್ಲ. ಅದರ ಬದಲಿಗೆ ಇವರೇ ವಿನ್ಯಾಸ ಮಾಡಿರುವ ರಾಟೆಗಳ ಮೂಲಕ ಹಗ್ಗದಿಂದ ಮೂಟೆಗಳು ಇಳಿದು ಬರುತ್ತವೆ. ಇಂತಹದೇ ತುಂಬ ವಿಷಯಗಳು ಇವರಲ್ಲಿವೆ. ಆದರೆ ಇವುಗಳನ್ನೇನೂ ಇವರು ವಿಶೇಷವೆಂಬಂತೆ ಹೇಳುವುದಿಲ್ಲ. ಇವರು ಹೇಳುವ ವಿಷಯಗಳು ಬೇರೆಯೇ ಇರುತ್ತವೆ. ಇವರು ದೇಶದ ದೊಡ್ಡ ಮೂಷಿಕ ವಿಜ್ಜಾನಿಗಳಲ್ಲಿ ಒಬ್ಬರು. ಅಂದರೆ ಇಲಿಗಳ ಹತೋಟಿಯ ಕುರಿತಾಗಿ ಅಧಿಕಾರಯುತವಾಗಿ ಮಾತಾಡಬಲ್ಲವರು. ಹಿಂದೆ ಸೂರತ್ ನಗರದಲ್ಲಿ ಪ್ಲೇಗ್ ಮಾರಿ ನರ್ತಿಸಲು ತೊಡಗಿದಾಗ ಇಲಿಗಳ ಹತೋಟಿಗೆ ಇವರನ್ನೇ ಕರೆಸಲಾಗಿತ್ತು. ನಾವೆಲ್ಲರೂ ಇವರನ್ನು ಭಾರತದ ಮೂಷಿಕ ಮನುಷ್ಯ ಎಂದು ಗೌರವದಿಂದ ಕರೆಯುತ್ತಿರುತ್ತೇವೆ. ಇವರ ಸಂಸಾರ ಮಕ್ಕಳು ಮೊಮ್ಮಕ್ಕಳು ಪ್ರಪಂಚದ ಬೇರೆಬೇರೆ ಕಡೆ ಹಂಚಿಹೋಗಿದ್ದಾರೆ. ಇವರು ಒಬ್ಬರೇ ತೋಟದಲ್ಲಿ ಕಾಫಿ ಕಾರ್ಮಿಕರ ಮಕ್ಕಳೊಂದಿಗೆ ಬದುಕುತ್ತಿದ್ದಾರೆ. ಅವರಲ್ಲಿ ತುಂಟರೂ ಜಾಣರೂ ಆದ ಮಕ್ಕಳನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ಶಾಲೆಗೆ ಕಳಿಸಿ ಓದಿಸುತ್ತಿದ್ದಾರೆ.
‘ಮೊನ್ನೆ ಏನಾಯಿತು ಗೊತ್ತಾ’ ಎಂದು ಅವರು ಹೇಳುತ್ತಿದ್ದರು. ‘ಸೌತೆಕಾಯಿಯ ಹೋಳುಗಳನ್ನು ಕಣ್ಣಿಗಿಟ್ಟುಕೊಂಡು ಮಲಗಿದರೆ ಕಣ್ಣಿನ ದೃಷ್ಟಿ ಚುರುಕಾಗುವುದು ಎಂದು ಯಾರೋ ಹೇಳಿದರಾ. ಅದಕ್ಕೆ ನಾನು ಸೌತೆಹೋಳುಗಳನ್ನು ಕಣ್ಣಿನ ಮೇಲೆ ಮಲಗಿಸಿಕೊಂಡು ನಿದ್ದೆ ಹೋಗಿದ್ದೆ. ಎದ್ದು ನೋಡಿದರೆ ಕಣ್ಣಿನ ಮೇಲಿದ್ದ ಸೌತೆಯ ಹೋಳುಗಳು ಕಾಣಿಸಲಿಲ್ಲ. ಎಲ್ಲಿ ಎಂದು ಹುಡುಕಿದರೆ ಅದನ್ನು ಈ ಹಾಳು ಮಕ್ಕಳು ನನ್ನ ನಿದ್ದೆಗಣ್ಣಿಂದ ಎತ್ತಿಕೊಂಡು ಕದ್ದು ತಿಂದಿದ್ದರು. ಅದಕ್ಕಾಗಿ ನಾನು ಈಗ ಸೌತೆಹೋಳುಗಳನ್ನು ಒಂದರಮೇಲೊಂದು ಕಣ್ಣಿನ ಮೇಲೆ ಪೇರಿಸಿಟ್ಟು ನಿದ್ದೆ ಹೋಗುತ್ತೇನೆ. ಅಡಿಯಲ್ಲಿರುವ ಎರಡು ಹೋಳುಗಳನ್ನು ಬಿಟ್ಟು ಉಳಿದೆಲ್ಲವನ್ನೂ ಮಕ್ಕಳು ತಿಂದು ಮುಗಿಸುತ್ತಾರೆ. ಎಷ್ಟು ಒಳ್ಳೆಯ ಐಡಿಯಾ ಅಲ್ಲವಾ’ ಎಂದು ಅವರು ನಗುತ್ತಿದ್ದರು. ‘ಈ ಸಲದ ಭಯಂಕರ ಮಳೆ ಮತ್ತು ಭಾರತೀಯ ಕಾಫಿ ಮಂಡಳಿಯ ನವೀನ ಸಬ್ಸಿಡಿ ಯೋಜನೆಯಿಂದಾಗಿ ಇಲ್ಲಿನ ಮೂಳೆ ಮತ್ತು ಕೀಲು ತಜ್ಞ್ನರ ಕ್ಲಿನಿಕ್ಕುಗಳಲ್ಲಿ ಜನಸಂದಣಿ ಹೆಚ್ಚಾದ ವಿಷಯ ನಿಮಗೆ ಗೊತ್ತಾ’ ಎಂದು ಕೇಳಿದರು. ‘ಇಲ್ಲವಲ್ಲಾ’ ಎಂದೆ.
‘ಈ ಸಲದ ಮಾರಿಮಳೆ ಭಯಂಕರ ಬೋರು. ಮನೆಯಲ್ಲಿ ಒಬ್ಬರೇ ಕುಳಿತು ಕುಳಿತು ಸಾಯುವಷ್ಟು ಬೇಸರ.ಯಾರಾದರು ಗೇಟಿನ ಬೆಲ್ಲು ಬಾರಿಸಿದರೆ ಎಲ್ಲರೂ ಎದ್ದು ಗೇಟು ತೆರೆಯಲು ಓಡುವವರೇ. ಮಾತನಾಡಲು ಯಾರೋ ಬಂದರು ಅಂತ. ಹಾಗೆ ಓಡಿದವರು ಬಹಳಷ್ಟು ಜನ ಸಿಮೆಂಟಿನ ಕಾಫಿಕಣದ ಪಾಚಿಗೆ ಜಾರಿ ಬಿದ್ದು ಸೊಂಟ ಮುರಿದುಕೊಂಡು ಆಸ್ಪತ್ರೆ ಮುಂದೆ ಕ್ಯೂ ನಿಂತರು. ಇದಕ್ಕೆ ಕಾಫಿ ಮಂಡಳಿ ಹೇಗೆ ಕಾರಣ ಗೊತ್ತಾ?’ ಕೇಳಿದರು. ‘ಇಲ್ಲ” ಅಂದೆ.
‘ಕಾಫಿ ಮಂಡಳಿ ಬೆಳೆಗಾರರಿಗೆ ಪ್ರತಿವರ್ಷ ಏನಕ್ಕಾದರೂ ಸಬ್ಸಿಡಿ ಕೊಡಬೇಕಲ್ಲಾ. ಈ ಸಲ ಹೊಸದಾಗಿ ಯಾವುದಕ್ಕೆ ಸಬ್ಸಿಡಿ ಕೊಡುವುದು ಎಂದು ಯೋಚಿಸಿ ಯೋಚಿಸಿ ಕೊನೆಗೆ ಸಿಮೆಂಟಿನ ಕಾಫಿ ಕಣ ಕಟ್ಟಲು ಸಬ್ಸಿಡಿ ಕೊಟ್ಟಿತು. ಎಲ್ಲರೂ ಕಟ್ಟಿದರು. ಅದರಲ್ಲಿ ಕಾಫಿ ಒಣಗಿಸಿದಕ್ಕಿಂತ ಪಾಚಿ ಕಟ್ಟಿದ್ದೇ ಹೆಚ್ಚು. ಹಾಗಾಗಿ ಕಾಫಿ ಬೆಳೆದವರು ಒಂದು ಕಡೆ ಕಾಫಿ ಇಲ್ಲದೆ ಪಾಪರಾದರು. ಇನ್ನೊಂದು ಕಡೆ ಸಬ್ಸಿಡಿ ಕಾಫಿಕಣದ ಪಾಚಿಯಲ್ಲಿ ಜಾರಿ ಬಿದ್ದು ಡಾಕ್ಟರ ಕಡೆ ಹೋಗಿ ಪಾಪರಾದರು. ಎಷ್ಟು ತಮಾಷೆ ಅಲ್ಲವಾ ಈ ಭೂಲೋಕ ’ ಅವರು ಗುಡುಗಿದಂತೆ ಗುಡುಗುಡು ನಗುತ್ತಿದ್ದರು.
‘ಬಿಡಿ ಸಾರ್ ಇಲ್ಲಿನ ತಮಾಷೆಗಳೂ ಬಹಳ ಬೋರು ಹೊಡೆಸಲು ಶುರು ಮಾಡಿವೆ. ಬನ್ನಿ ಇಬ್ಬರೂ ಕೆಲ ತಿಂಗಳುಗಳ ಕಾಲ ಮಂಗಳ ಗ್ರಹಕ್ಕೆ ಹೋಗಿ ಇದ್ದು ಬರೋಣ. ಅಲ್ಲಿ ಇದಕ್ಕಿಂತ ಗಹನವಾದ ತಮಾಷೆಗಳು ಜರುಗುತ್ತಿರಬಹುದು ಎಂದು ನಾನು ಅವರನ್ನು ಆಹ್ವಾನಿಸಿದ್ದೇನೆ. ಇದೊಂದು ಪೆಗ್ಗು ಮುಗಿಸಿ ಹೊರಡುವಾ ಎಂದು ಅವರೂ ಒಪ್ಪಿದ್ದಾರೆ.
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.