ಅರಿಸ್ಟಾಟಲ್ ನ ಥಿಯರಿ, ಆತ್ಮದ ಇರುವಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದ್ದರಿಂದ, ಧಾರ್ಮಿಕ ನಂಬಿಕೆಗಳುಳ್ಳವರಿಗೂ ಇಷ್ಟವಾಯಿತು. ಅರಿಸ್ಟಾಟಲನ ಮರಣವಾದ ಶತಮಾನಗಳ ನಂತರ ಉಗಮಿಸಿದ ಕ್ರೈಸ್ತ ಧರ್ಮ ಸಹ, ಇಂತಹ ವಿಷಯಗಳಲ್ಲಿ ಅರಿಸ್ಟಾಟಲ್ ನ ವಾದಗಳನ್ನೇ ತನ್ನ ಸಿದ್ಧಾಂತವಾಗಿಸಿಕೊಂಡಿತು. ಅರಿಸ್ಟಾಟಲ್ ಕಾಲವಾದ ಸುಮಾರು ಏಳು ಶತಮಾನಗಳ ನಂತರ ಜನ್ಮವೆತ್ತಿದ ಸಂತ ಅಗಸ್ಟೀನ್, ನೆನಪುಗಳ ಕುರಿತು ತನ್ನದೇ ವಾದಗಳನ್ನು ಮಂಡಿಸಿದನಾದರೂ, ಆತ್ಮದ ನಿರಾಕರಣೆ ಮಾಡಲಿಲ್ಲ.
ಶೇಷಾದ್ರಿ ಗಂಜೂರು ಅಂಕಣ
ಸುಮಾರು ಮೂವತ್ತು ವರ್ಷಗಳ ಹಿಂದೆ, ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ನನ್ನ ಮನಸ್ಸು ಕಾಂಪ್ಯೂಟೇಷನಲ್ ನ್ಯೂರೋ ಬಯಾಲಜಿಯ ಕಡೆಗೆ ಕೊಂಚ ಮಟ್ಟಿಗೆ ತಿರುಗಿತು. ನಾನು ಆ ಹೊತ್ತಿಗಾಗಲೇ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದೆ. ಆದರೆ, “ಮನಸ್ಸು”, “ನೆನಪು”, “ಪ್ರಜ್ಞೆ” ಇತ್ಯಾದಿಗಳ ವಿಚಾರದಲ್ಲಿ ಕುತೂಹಲವೂ ಇತ್ತು. ನಮ್ಮ ಮನಸ್ಸು, ತನ್ನ ನೆನಪುಗಳ ಮೂಲಕ ಹೊಸ ವಿಷಯಗಳನ್ನು ಹೇಗೆ ಕಲಿಯುವುದೆಂದು ತಿಳಿಯುವುದರ ಕುರಿತು ಆಸಕ್ತಿ ಇತ್ತು. ಕೃತಕ ನ್ಯೂರಲ್ ನೆಟ್ ಗಳ ಕುರಿತು ಒಂದಷ್ಟು ರೀಸರ್ಚ್ ಪೇಪರುಗಳನ್ನು ಓದಿದ್ದ ನಾನು, ನನ್ನದೇ ಆದ ಕೆಲವೊಂದು ಸಣ್ಣ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದೆ.
ತನ್ನ ಅನುಭವಗಳ ನೆನಪುಗಳನ್ನು ಕಲಿಕೆಯಾಗಿಸುವಲ್ಲಿ ಮಾನವರ ಮಿದುಳನ್ನು ಮೀರಿಸುವ ವಸ್ತು (ಸದ್ಯಕ್ಕಂತೂ) ಇನ್ನೊಂದಿಲ್ಲ. ಉದಾಹರಣೆಗೆ, ಫೋಟೋಗಳಲ್ಲಿ ಮನುಷ್ಯರ ಮುಖಗಳನ್ನು ನೋಡಿದಾಗ, ನಮ್ಮ ಮನಸ್ಸು ಇದು “ಹೆಣ್ಣು”/“ಗಂಡು” ಎಂದು ಸುಲಭವಾಗಿ, ಅಪ್ರಜ್ಞಾಪೂರಕವಾಗಿ ಗುರುತಿಸುತ್ತದೆ. ಆ ಫೋಟೋದ ಬಣ್ಣ, ಬೆಳಕು, ಇತ್ಯಾದಿಗಳು ಈ ಸಾಮರ್ಥ್ಯದ ಮೇಲೆ ಅಂತಹ ಪರಿಣಾಮವನ್ನುಂಟು ಮಾಡುವುದಿಲ್ಲ. ಹಾಗೆಯೇ, ಹೆಣ್ಣಿನ ಮುಖಕ್ಕೆ ಮೀಸೆ ಇಟ್ಟಿದ್ದರೂ ಅಥವಾ ಗಂಡೊಬ್ಬ ಹೆಣ್ಣಿನ ವೇಷ ತೊಟ್ಟಿದ್ದರೂ, ನಮ್ಮ ಮಿದುಳನ್ನು ಯಾಮಾರಿಸುವುದು ಕಷ್ಟ. ಇದು ಪ್ರಯತ್ನ ಪೂರ್ವಕವಾಗಿ ಕಲಿತ ವಿದ್ಯೆಯಲ್ಲ. ಅನುಭವದ ನೆನಪುಗಳಿಂದ ನಮಗೇ ಅರಿಯದಂತೆ ಗಳಿಸಿದ ಕಲಿಕೆ.
ನಮ್ಮ ಮಿದುಳಿಗೆ ಅತಿ ಸಾಮಾನ್ಯವೆನಿಸುವ ಇಂತಹ ಕಲಿಕೆಯನ್ನು, ಕೃತಕ ನ್ಯೂರಲ್ ನೆಟ್ ಗಳಿಗೂ ಕಲಿಸುವುದು ಆ ಕಾಲದಲ್ಲಿ ನನಗೆ ಅತ್ಯಂತ ಆಸಕ್ತಿಕರ ವಿಷಯವಾಗಿತ್ತು. ಆದರೆ ಇಂದು, ಇಂತಹ ಕೃತಕ ನ್ಯೂರಲ್ ನೆಟ್ ಗಳು ಸರ್ವೇ ಸಾಮಾನ್ಯವಾಗತೊಡಗಿವೆ. ಅಮೆರಿಕದಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿದ್ದವರಿಗೂ ಕಷ್ಟ ಸಾಧ್ಯವೆನಿಸಿದ್ದಂತಹ ಪ್ರಯೋಗ-ಪ್ರಾಜೆಕ್ಟ್ ಗಳನ್ನು ಇಂದು ಭಾರತದ ಸಣ್ಣ ಊರೊಂದರಲ್ಲಿರುವ ಹೈ-ಸ್ಕೂಲು ವಿದ್ಯಾರ್ಥಿ ಸಹ ಮಾಡಲು ಸಾಧ್ಯವಿದೆ; ಹಲವಾರು ಮಂದಿ ಮಾಡುತ್ತಲೂ ಇದ್ದಾರೆ. ಕೇವಲ ಮೂವತ್ತು ವರ್ಷಗಳಲ್ಲಿ ಇಂತಹ ಮಹತ್ತರ ಬದಲಾವಣೆ ಆಗಿದೆ.
ಆದರೆ, ಸುಮಾರು ಎರಡು ಸಾವಿರ ವರ್ಷಕ್ಕೂ ಹಿಂದೆ ಅರಿಸ್ಟಾಟಲ್ ನೀಡಿದ್ದ, ನೆನಪುಗಳ ಕುರಿತಾದ “ರಕ್ತ-ಹೃದಯ”ಗಳ ಥಿಯರಿ ಮುಂದುವರೆಯಲು ಎರಡು ಸಾವಿರ ವರ್ಷವೇ ಬೇಕಾಯಿತು.
******
ಪ್ಲೇಟೋ-ಅರಿಸ್ಟಾಟಲ್ ಗಳ “ನೆನಪಿನ ಥಿಯರಿ”ಯನ್ನು ಸ್ಥೂಲವಾಗಿ ಹೀಗೆನ್ನಬಹುದು: ಭೌತಿಕ ವಸ್ತುಗಳು ನಮ್ಮ ಪಂಚೇಂದ್ರಿಯಗಳ ಮೂಲಕ ನಮ್ಮ ದೇಹದಲ್ಲಿ ಅಚ್ಚೊತ್ತುತ್ತವೆ. ಈ ಅಚ್ಚುಗಳೇ ನೆನಪುಗಳು. ಆದರೆ, ಅಚ್ಚುಗಳನ್ನು ಮತ್ತೊಮ್ಮೆ ಮನದಂಗಳಕ್ಕೆ ತರುವುದು (ಶರೀರವನ್ನು ಮೀರಿದ) ಆತ್ಮದ ಕೆಲಸ.
ಅರಿಸ್ಟಾಟಲ್ ನ ಥಿಯರಿ, ಆತ್ಮದ ಇರುವಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದ್ದರಿಂದ, ಧಾರ್ಮಿಕ ನಂಬಿಕೆಗಳುಳ್ಳವರಿಗೂ ಇಷ್ಟವಾಯಿತು. ಅರಿಸ್ಟಾಟಲನ ಮರಣವಾದ ಶತಮಾನಗಳ ನಂತರ ಉಗಮಿಸಿದ ಕ್ರೈಸ್ತ ಧರ್ಮ ಸಹ, ಇಂತಹ ವಿಷಯಗಳಲ್ಲಿ ಅರಿಸ್ಟಾಟಲ್ ನ ವಾದಗಳನ್ನೇ ತನ್ನ ಸಿದ್ಧಾಂತವಾಗಿಸಿಕೊಂಡಿತು. ಅರಿಸ್ಟಾಟಲ್ ಕಾಲವಾದ ಸುಮಾರು ಏಳು ಶತಮಾನಗಳ ನಂತರ ಜನ್ಮವೆತ್ತಿದ ಸಂತ ಅಗಸ್ಟೀನ್, ನೆನಪುಗಳ ಕುರಿತು ತನ್ನದೇ ವಾದಗಳನ್ನು ಮಂಡಿಸಿದನಾದರೂ, ಆತ್ಮದ ನಿರಾಕರಣೆ ಮಾಡಲಿಲ್ಲ.
ಸಂತ ಅಗಸ್ಟೀನ್ ನ ನಂತರ, ಸುಮಾರು ಒಂಬತ್ತು ಶತಮಾನಗಳಾದ ಮೇಲೆ ಜನಿಸಿದ ಅಲ್ಬರ್ಟಸ್ ಮ್ಯಾಗ್ನಸ್ (“ಆಲ್ಬರ್ಟ್ ದ ಗ್ರೇಟ್”), ನೆನಪುಗಳು ಮಿದುಳಿನ ಹಿಂಭಾಗದಲ್ಲಿ ನೆಲೆಸುತ್ತವೆ ಎನ್ನುತ್ತಾನಾದರೂ, ಅರಿಸ್ಟಾಟಲ್ ನ ಆತ್ಮ-ನೆನಪುಗಳ ಸಂಬಂಧವನ್ನು ನಿರಾಕರಿಸುವುದಿಲ್ಲ. ಆಲ್ಬರ್ಟಸ್ ಮ್ಯಾಗ್ನಸ್ ನ ಶಿಷ್ಯರಲ್ಲಿ ಪ್ರಮುಖನಾದ ಸಂತ ಥಾಮಸ್ ಅಕಿನಾಸ್ ಸಹ ಈ ವಿಚಾರದಲ್ಲಿ ಅರಿಸ್ಟಾಟಲ್ ನ ವಾದವನ್ನೇ ಮುಂದುವರೆಸುತ್ತಾನೆ.
ಐದನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗಿನ ಯೂರೋಪಿಯನ್ ಮಧ್ಯ ಯುಗದ ನಂತರ, ಯೂರೋಪ್ ಖಂಡದಲ್ಲಿ ಕಲೆ, ವ್ಯಾಪಾರ, ರಾಜಕಾರಣ, ತಂತ್ರಜ್ಞಾನ, ವಿಜ್ಞಾನಗಳಲ್ಲಿ ಮಹತ್ತರ ಬೆಳವಣಿಗೆಗಳಾದವು. ಆದರೆ, ನೆನಪಿನ ವಿಚಾರದಲ್ಲಿ ಮಾತ್ರ ಅರಿಸ್ಟಾಟಲ್ ನ ಥಿಯರಿಯೇ ಮುಂದುವರೆಯಿತು.
ಮಹಾನ್ ಗಣಿತಜ್ಞ ಮತ್ತು ಆಧುನಿಕ ತತ್ವಶಾಸ್ತ್ರಜ್ಞದ ಪಿತಾಮಹನೇ ಎಂದೆನಿಸಿದ ರೆನೇ ಡೆಕಾರ್ಟ್ ಸಹ ಅರಿಸ್ಟಾಟಲ್ ನ ವಾದವನ್ನು ನಿರಾಕರಿಸಲಿಲ್ಲ. ಡೆಕಾರ್ಟ್ ನ ಚಿಂತನೆಯ ಪ್ರಕಾರ, ನೆನಪುಗಳು ಮಿದುಳಿನಲ್ಲಿರಬಹುದಾದರೂ, ಅವನ ಪ್ರಕಾರ ಮನಸ್ಸು ಮತ್ತು ದೇಹಗಳು ಬೇರೆಯೇ ಆಗಿರುವುದರಿಂದ, ಆ ನೆನಪುಗಳನ್ನು ಹೊರತರಲು ಭೌತಿಕ ಶರೀರ ಮೀರಿದ ಆತ್ಮ ಇರಲೇಬೇಕಿತ್ತು. ಅವನು, ನಮ್ಮ ಮಿದುಳಿನಲ್ಲಿರುವ ಪಿನೀಯಲ್ ಗ್ಲಾಂಡ್ ಆತ್ಮ ಮತ್ತು ದೇಹಗಳನ್ನು ಒಗ್ಗೂಡಿಸುತ್ತದೆ ಎಂಬ ವಾದವನ್ನು ಮುಂದಿಟ್ಟ.
ಇಂದು, ಇಂತಹ ಕೃತಕ ನ್ಯೂರಲ್ ನೆಟ್ ಗಳು ಸರ್ವೇ ಸಾಮಾನ್ಯವಾಗತೊಡಗಿವೆ. ಅಮೆರಿಕದಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿದ್ದವರಿಗೂ ಕಷ್ಟ ಸಾಧ್ಯವೆನಿಸಿದ್ದಂತಹ ಪ್ರಯೋಗ-ಪ್ರಾಜೆಕ್ಟ್ ಗಳನ್ನು ಇಂದು ಭಾರತದ ಸಣ್ಣ ಊರೊಂದರಲ್ಲಿರುವ ಹೈ-ಸ್ಕೂಲು ವಿದ್ಯಾರ್ಥಿ ಸಹ ಮಾಡಲು ಸಾಧ್ಯವಿದೆ.
ಡೆಕಾರ್ಟ್ ನ ವಾದವೂ, ಅರಿಸ್ಟಾಟಲ್ ನ ವಾದದಂತೆ ಆತ್ಮದ ಇರುವಿಕೆಯನ್ನು ಗಟ್ಟಿಯಾಗಿಸಿದ್ದರಿಂದ, ಕ್ರಿಶ್ಚಿಯನ್ ಚರ್ಚ್ ಸಹ ಅದಕ್ಕೆ ತನ್ನ ಒಪ್ಪಿಗೆಯನ್ನು ನೀಡಿತು.
ಎಲ್ಲರೂ ಆತ್ಮದ ಇರುವಿಕೆಯನ್ನು ಒಪ್ಪುತ್ತಿದ್ದುದ್ದರಿಂದ, ಆ ಕಾಲದ ವಿಜ್ಞಾನಿಗಳಲ್ಲಿ ಚರ್ಚೆಗೊಳಗಾದ ವಿಷಯಗಳೆಂದರೆ, ನೆನಪುಗಳು ಮಿದುಳಿನ ಯಾವ ಭಾಗದಲ್ಲಿ ಇರುತ್ತವೆ ಎಂಬಂತಹ ಪ್ರಶ್ನೆಗಳಷ್ಟೇ. ಕೆಲವರು, ನೆನಪುಗಳು ಇಡೀ ಮಿದುಳಿನಲ್ಲೆಲ್ಲಾ ಹಾಸು ಹೊಕ್ಕಾಗಿ ಇರುತ್ತವೆಂದು ವಾದಿಸಿದರೆ, ಇನ್ನೂ ಕೆಲವರು, ಮಿದುಳಿನ ವಿವಿಧ ಭಾಗಗಳನ್ನು ಗುರುತಿಸಿ ಆ ಭಾಗಗಳು ಇಂತಹುದೇ ಸೀಮಿತ ಕೆಲಸ ಮಾಡುತ್ತವೆ ಎಂದು ವಾದಿಸುತ್ತಿದ್ದರು.
******
ಹದಿನೆಂಟನೆಯ ಶತಮಾನದ ಕೊನೆಯಲ್ಲಿ, ಯೂನಿವರ್ಸಿಟಿ ಆಫ್ ವಿಯೆನ್ನಾದಲ್ಲಿ ಕೆಲಸ ಮಾಡುತ್ತಿದ್ದ ಜರ್ಮನ್ ವೈದ್ಯ ಮತ್ತು ವಿಜ್ಞಾನಿ ಫ್ರಾಂಜ್ ಜೋಸೆಫ್ ಗಾಲ್, ಎರಡನೆಯ ಗುಂಪಿಗೆ ಸೇರಿದವನು. ಅವನು ಮಿದುಳಿನ ವಿವಿಧ ಭಾಗಗಳನ್ನು ಗುರುತಿಸಿ, ಇಂತಹ ಭಾಗ ಇದೇ ಕೆಲಸ ಮಾಡುತ್ತದೆಂದು ತನ್ನ ವಾದ ಮಂಡಿಸಿದ. ಆ ವಾದದ ಪ್ರಕಾರ, ನಮ್ಮ ನೆನಪುಗಳು ನಮ್ಮ ಮಿದುಳಿನ ಮುಂಭಾಗದಲ್ಲಿ ಹಣೆಯ ಹಿಂದೆ ಇರುತ್ತವೆ. ಆ ವಾದವನ್ನು ಮತ್ತಷ್ಟು ಮುಂದುವರೆಸಿದ ಅವನು, ಆ ಭಾಗಗಳ ಗಾತ್ರಕ್ಕೂ ಮಾನವರ ವಿವಿಧ ಸಾಮಾರ್ಥ್ಯ-ಗುಣಗಳಿಗೂ ತಳಿಕೆ ಹಾಕಿದ. ಉದಾಹರಣೆಗೆ, ಮಿದುಳಿನ ಮುಂಭಾಗ ದೊಡ್ಡದಿದ್ದರೆ ಅವರಿಗೆ ನೆನಪಿನ ಶಕ್ತಿ ಹೆಚ್ಚಿರುತ್ತದೆಂದೂ, ಹಿಂದಿನ ಭಾಗ ದೊಡ್ಡದಿದ್ದರೆ ಅವರು ಸ್ನೇಹಪರರೆಂದೂ, ನೆತ್ತಿಯ ಮೇಲಿನ ಕೆಲ ಭಾಗಗಳು ದೊಡ್ಡದಿದ್ದರೆ ಅವರು ಆಧ್ಯಾತ್ಮದಲ್ಲಿ ಆಸಕ್ತಿ ಉಳ್ಳವರೆಂದೂ ಅವನ ವಾದವಾಗಿತ್ತು. ಇದು ಇನ್ನೂ ಮುಂದುವರೆದು, ತಲೆಬುರುಡೆಯನ್ನು ಮುಟ್ಟಿ ನೋಡಿ ಇವರಿಗೆ ಇಂತಹುದೇ ಗುಣ-ಅವಗುಣಗಳಿವೆ ಎನ್ನುವ “ಫ್ರೆನಾಲಜಿ” (*) ಎಂಬ ಅವೈಜ್ಞಾನಿಕ ವಿಚಾರಧಾರೆಗೆ ಕಾರಣವೂ ಆಯಿತು.
ಫ್ರೆನಾಲಜಿ ಅವೈಜ್ಞಾನಿಕವಾದರೂ, ನ್ಯೂರೋಸೈನ್ಸ್ ಗೆ ಫ್ರಾಂಜ್ ಗಾಲ್ ಎರಡು ಮಹತ್ತರ ಕೊಡುಗೆಗಳನ್ನು ನೀಡಿದ. ಮೊದಲನೆಯದಾಗಿ, ನಮ್ಮ ಮಿದುಳಿನ ವಿವಿಧ ಭಾಗಗಳಿಗೆ ತಮ್ಮದೇ ಆದ ವೈಶಿಷ್ಟ್ಯ ಇವೆ ಎನ್ನುವುದು.
ಅದಕ್ಕಿಂತ ಮುಖ್ಯವಾಗಿ, ನೆನಪೂ ಸೇರಿದಂತೆ, ನಮ್ಮ ಮನಸ್ಸಿನ ವಿವಿಧ ಸಾಮರ್ಥ್ಯಗಳೆಲ್ಲಾ ನಮ್ಮ ಮಿದುಳಿನಲ್ಲೇ ಅಡಕವಾಗಿದೆ ಎಂಬುವುದು.
ಗಾಲ್ ನ ವಾದಗಳನ್ನು ಒಪ್ಪುವುದಾದರೆ, ಶರೀರವನ್ನು ಮೀರಿದ “ಆತ್ಮ”ದ ಅವಶ್ಯಕತೆಯೇ ಇಲ್ಲ; ನಮ್ಮೆಲ್ಲಾ ಮನೋವೃತ್ತಿಗಳೂ ನಮ್ಮ ಮಿದುಳಿನಲ್ಲೇ ಇವೆ. ಈ ವಾದ, ಆ ಕಾಲದ ಯೂರೋಪಿಯನ್ ಬುದ್ಧಿಜೀವಿಗಳಿಗೆ ಮತ್ತು ವಿಜ್ಞಾನಿಗಳಿಗೆ ಮೆಚ್ಚುಗೆಯಾದರೂ, ಸಾವಿರಾರು ವರ್ಷಗಳಿಂದ ನಂಬಿದ್ದ ಅರಿಸ್ಟಾಟಲ್ ನ ಆತ್ಮ ಸಿದ್ಧಾಂತಕ್ಕೆ ಅದು ಎದುರಾಗಿದ್ದರಿಂದ, ಕ್ರಿಶ್ಚಿಯನ್ ಧಾರ್ಮಿಕರ ಕೆಂಗಣ್ಣಿಗೆ ಗುರಿಯಾಯಿತು. ಆಸ್ಟ್ರಿಯಾದ ಸಾಮ್ರಾಟ ಫ್ರಾನ್ಸಿಸ್, ಗಾಲ್ ನನ್ನು ತನ್ನ ದೇಶದಿಂದ ಹೊರದಬ್ಬಿದ.
ಹತ್ತೊಂಬತ್ತನೆಯ ಶತಮಾನದ ಆದಿ ಭಾಗದ ವೇಳೆಗೆ, ಗಾಲ್ ನ ವಿಚಾರಧಾರೆಗಳು “ವೈಜ್ಞಾನಿಕ” ಎಂದೇ ಎನಿಸಿದ್ದವು. ಹೀಗಾಗಿ, ಹಲವಾರು ವಿಜ್ಞಾನಿಗಳು ಅವನ ವಾದವನ್ನು ತಮ್ಮ ಪ್ರಯೋಗಗಳಿಗೆ ಗುರಿಪಡಿಸಿದರು. ಅವರಲ್ಲಿ ಪಿಯೆರ್ ಫ್ಲೂರೆನ್ಸ್ ಎಂಬ ಫ್ರೆಂಚ್ ವಿಜ್ಞಾನಿಯೂ ಒಬ್ಬ. ಅವನು, ಹಲವಾರು ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ, ಗಾಲ್ ಗುರುತಿಸಿದ್ದ ಮಿದುಳಿನ ಭಾಗಗಳನ್ನು ತೆಗೆದು ಹಾಕಿದ. ಆದರೆ, ಶಸ್ತ್ರಚಿಕಿತ್ಸೆಯ ನಂತರ ಆ ಪ್ರಾಣಿಗಳ ನಡುವಳಿಕೆ ಅಥವಾ ಗುಣಗಳಲ್ಲಿ ಅಂತಹ ಮಹತ್ತರ ಬದಲಾವಣೆಗಳೇನೂ ಕಾಣಬರಲಿಲ್ಲ. ಗಾಲ್ ನ “ವಿವಿಧ ಭಾಗಗಳ ವೈಶಿಷ್ಟ್ಯ”ದ ವಾದ ಪ್ರಶ್ನಾರ್ಹವೆನಿಸಿತು.
ಮುಂದಿನ ಹಲವು ದಶಕಗಳ ಕಾಲ, ನ್ಯೂರೋಸೈನ್ಸ್ ನಲ್ಲಿ ಎರಡು ಬಣಗಳಾದವು. ಒಂದು ಗಾಲ್ ನನ್ನು ಬೆಂಬಲಿಸಿದರೆ, ಇನ್ನೊಂದು ಬಣ ಫ್ಲೂರೆನ್ಸ್ ನನ್ನು ಬೆಂಬಲಿಸಿತು.
ವೈಜ್ಞಾನಿಕ ರಂಗದಲ್ಲಿ ಇಂತಹ ಕಾಂಟ್ರವರ್ಸಿಗಳು ಉಂಟಾದರೆ, ವಿಜ್ಞಾನ ಮುಂದುವರೆಯುತ್ತದೆ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ, ಮಿದುಳು ತಮ್ಮ ಮುಂದಿರಿಸಿದ್ದ ಪ್ರಶ್ನೆಗಳನ್ನು ಉತ್ತರಿಸಲು ಹಲವರು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದರು. ಅವರಲ್ಲಿ ಪ್ರಮುಖರೆಂದರೆ, ಫ್ರಾನ್ಸ್ ನ ಪಿಯೆರ್-ಪಾಲ್ ಬ್ರೋಕಾ ಮತ್ತು ಜರ್ಮನಿಯ ಕಾರ್ಲ್ ವೆರ್ನಿಕೆ.
ಇವರೀರ್ವರ ಅಧ್ಯಯನಗಳು, ನ್ಯೂರೋಸೈನ್ಸಿನಲ್ಲಿ ಮಹತ್ತರ ಬೆಳವಣಿಗೆಗೆ ಕಾರಣವಾದವು. ಮಾನವನನ್ನು ಮಾನವನನ್ನಾಗಿಸುವ ಭಾಷಾ ಸಾಮರ್ಥ್ಯ ಮತ್ತು ಮಿದುಳಿನ ಸಂಬಂಧಗಳ ಮೇಲೆ ಈ ಅಧ್ಯಯನಗಳು ಬೆಳಕು ಚೆಲ್ಲಿದವು. ಯಾವುದೇ, ದೈವ ಅಥವಾ ಆತ್ಮದ ಅವಶ್ಯಕತೆ ಇರದೆ, ಮಿದುಳಿನಂತಹ ಭೌತಿಕ ವಸ್ತುವೊಂದೇ ನಮ್ಮ ನಡುವಳಿಕೆಗಳನ್ನು ರೂಪಿಸುವುದನ್ನು ಅವರು ತೋರಿಸಿಕೊಟ್ಟರು.
******
ಕಾರ್ ಎಂಜಿನ್ ಒಂದು ಹೇಗೆ ಕೆಲಸ ಮಾಡುತ್ತದೆಂದು ತಿಳಿದುಕೊಳ್ಳುವುದು ಹೇಗೆ?! ಅದರ ಬಗೆಗೆ ಓದಿ ಅಥವಾ ಆಟೋಮೊಬೈಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿ ತಿಳಿಯಬಹುದು. ಇನ್ನೊಂದು ವಿಧಾನವೆಂದರೆ, ಗ್ಯಾರೇಜ್ ಒಂದರಲ್ಲಿ, ಕಾರ್ ಮೆಕ್ಯಾನಿಕ್ ನ ಸಹಾಯಕನಾಗಿ ಕೆಟ್ಟಿರುವ ಎಂಜಿನ್ ಒಂದರ ಮೇಲೆ ಕೆಲಸ ಮಾಡುವುದು.
ವಿಜ್ಞಾನ ರಂಗದಲ್ಲಿಯೂ, ಹೊಸ ವಿಷಯಗಳನ್ನು ಕಲಿಯುವಾಗ, ಹಲವಾರು ಬಾರಿ, ಈ “ಮೆಕ್ಯಾನಿಕಲ್ ಶಾಪ್” ವಿಧಾನ ಕೆಲಸ ಮಾಡುತ್ತದೆ.
ಪಾಲ್ ಬ್ರೋಕಾ ವಿಜ್ಞಾನಿಯಷ್ಟೇ ಅಲ್ಲ, ವೈದ್ಯನೂ ಆಗಿದ್ದ. ೧೮೬೧ರಲ್ಲಿ, ಬ್ರೋಕಾನ ವೈದ್ಯಕೀಯ ಸಲಹೆ ಪಡೆಯಲು ರೋಗಿಯೊಬ್ಬ ಬಂದ. ಅವನ ಹೆಸರು ಲೆಬೋರ್ನ್. ಲೆಬೋರ್ನ್ ಗೆ ಆಗ ಐವತ್ತರ ಆಸು-ಪಾಸು. ತನ್ನ ಮೂವತ್ತನೆಯ ವಯಸ್ಸಿನಲ್ಲಿ ಅವನು ಲಕ್ವಕ್ಕೆ (stroke) ತುತ್ತಾಗಿದ್ದ. ನಂತರದಲ್ಲಿ ಪೂರ್ಣ ಚೇತರಿಸಿಕೊಂಡಿದ್ದರೂ, ಒಂದು ವಿಚಿತ್ರ ಅಸಾಮರ್ಥ್ಯ ಅವನನ್ನು ಕಾಡುತ್ತಿತ್ತು. ಅವನ ಬುದ್ಧಿಶಕ್ತಿ ಸರಿ ಇತ್ತು. ಅವನ ಗಂಟಲು, ಬಾಯಿ ಸರಿ ಇದ್ದವು. ಅವನ ಕೈ-ಕಾಲುಗಳು ಸರಿಯಾಗಿ ಕೆಲಸ ಮಾಡುತ್ತಿದ್ದವು. ಅವನು ಹಾಡುಗಳನ್ನು ಗುಣು-ಗುಣಿಸಬಲ್ಲವನಾಗಿದ್ದ, ವಿಷಲ್ ಹಾಕಬಲ್ಲವನಾಗಿದ್ದ, ಓದ ಬಲ್ಲವನಾಗಿದ್ದ, ಗಣಿತದ ಸಾಮಾರ್ಥ್ಯವೂ ಇತ್ತು, ಬೇರೆಯವರು ಹೇಳಿದ್ದನ್ನು ಕೇಳಿ ಅರ್ಥ ಮಾಡಿಕೊಳ್ಳಬಲ್ಲವನಾಗಿದ್ದ. ಆದರೆ ಅವನ ಬಾಯಿಂದ ಅರ್ಥಪೂರ್ಣವಾದ ಪದಗಳು ಮಾತ್ರ ಹೊರಬರುತ್ತಿರಲಿಲ್ಲ. ಹಾಗೆಯೇ, ಪೂರ್ಣ ಅಕ್ಷರ ಜ್ಞಾನವಿದ್ದರೂ, ಬರೆಯುವುದು ಅವನಿಗೆ ಸಾಧ್ಯವಿರಲಿಲ್ಲ. ಎಲ್ಲವನ್ನು ಅರ್ಥಮಾಡಿಕೊಂಡರೂ, ತನ್ನ ಆಲೋಚನೆಗಳನ್ನು ಭಾಷೆಯ ಮೂಲಕ ಸಂವಹಿಸುವ ಸಾಮರ್ಥ್ಯವನ್ನು ಮಾತ್ರ ಅವನು ಕಳೆದುಕೊಂಡಿದ್ದ.
ಬ್ರೋಕಾನ ಬಳಿ ಚಿಕಿತ್ಸೆಗೆ ಬಂದ ಒಂದು ವಾರದ ನಂತರ, ಲೆಬೋರ್ನ್ ಸಾವನ್ನಪ್ಪಿದ.
ಲೆಬೋರ್ನ್ ನ ಸಾವಿನ ನಂತರ, ಬ್ರೋಕಾ, ಪೋಸ್ಟ್ ಮಾರ್ಟೆಮ್ ಮಾಡಿ, ಲೆಬೋರ್ನ್ ನ ಮಿದುಳನ್ನು ಪರಿಶೀಲಿಸಿದಾಗ, ಅದರ ಎಡಬದಿಯ ಭಾಗವೊಂದರಲ್ಲಿ ಲಕ್ವಾದಿಂದ ಹಾನಿಯುಂಟಾಗಿದ್ದುದು ಕಂಡುಬಂದಿತು. ನಂತರದ ವರ್ಷಗಳಲ್ಲಿ, ಇಂತಹುದೇ ಅಸಾಮರ್ಥ್ಯಕ್ಕೆ ಗುರಿಯಾಗಿದ್ದ ಇನ್ನೂ ಎಂಟು ಮಂದಿಯ ಮಿದುಳುಗಳನ್ನು ಬ್ರೋಕಾ ಅಧ್ಯಯನ ಮಾಡಿದ. ಎಲ್ಲರ ಮಿದುಳಿನಲ್ಲೂ ಕಂಡಂತಹ ಒಂದು ಸಾಮಾನ್ಯ ಅಂಶವೆಂದರೆ, ಮಿದುಳಿನ ಎಡಬದಿಯ ಆ ಭಾಗಕ್ಕೆ ಹಾನಿಯುಂಟಾಗಿತ್ತು.
ಮಿದುಳಿನ ಆ ಭಾಗಕ್ಕೂ ಮತ್ತು ನಮ್ಮ ಭಾಷಾ ಸಾಮರ್ಥ್ಯಕ್ಕೂ ಇರುವ ನಂಟನ್ನು ಹೀಗೆ ಕಂಡುಕೊಂಡ ಪಾಲ್ ಬ್ರೋಕಾ, ೧೮೬೪ರಲ್ಲಿ ತನ್ನ ಅಧ್ಯಯನದ ಶೋಧನೆಯನ್ನು ಪ್ರಕಟಿಸಿದ: “ನಾವು ನಮ್ಮ ಎಡಬದಿಯಿಂದ ಮಾತನಾಡುತ್ತೇವೆ!”
ಬ್ರೋಕಾನ ಅಧ್ಯಯನವನ್ನು ಮತ್ತಷ್ಟು ಮುಂದುವರೆಸಿದ ಕಾರ್ಲ್ ವೆರ್ನಿಕೆ, ೧೮೭೯ರಲ್ಲಿ, ಮಿದುಳಿನ ವಿವಿಧ ಭಾಗಗಳು, ನೆಟ್‌ವರ್ಕ್ ಗಳಂತೆ ಕೆಲಸ ಮಾಡಿ, ಭಾಷಾ ಸಾಮರ್ಥ್ಯವೂ ಸೇರಿದಂತೆ ಮಾನವೀಯತೆಯ ಹಲವಾರು ಗುಣಗಳನ್ನು ರೂಪಿಸುವುದನ್ನು ತೋರಿಸಿದ.
ಬ್ರೋಕಾ ಮತ್ತು ವೆರ್ನಿಕೆ ತೋರಿಸಿಕೊಟ್ಟ ಮಿದುಳಿನ ಈ ಭಾಗಗಳನ್ನು ಇಂದು “ಬ್ರೋಕಾಸ್ ಏರಿಯಾ” ಮತ್ತು “ವೆರ್ನಿಕೇಸ್ ಏರಿಯಾ” ಎಂದು ಕರೆಯುತ್ತಾರೆ.
ಮಿದುಳಿನ ವಿಶಿಷ್ಟ ಭಾಗಗಳು ವಿಶಿಷ್ಟ ಕೆಲಸಗಳನ್ನು ಮಾಡುತ್ತವೆ ಎನ್ನುವುದು ಆಧುನಿಕ ನ್ಯೂರೋಸೈನ್ಸಿನ ಬುನಾದಿಗಳಲ್ಲೊಂದು. ಈ ಬುನಾದಿಯನ್ನು ಹಾಕಿದವರು ಬ್ರೋಕಾ ಮತ್ತು ವೆರ್ನಿಕೆ. ಬ್ರೋಕಾ ಪರಿಶೀಲಿಸಿದ ಲೆಬೋರ್ನ್ ನ ಮಿದುಳು ಪ್ಯಾರಿಸ್ ನ ಮ್ಯೂಸಿಯಂ ಒಂದರಲ್ಲಿ ಇನ್ನೂ ಇದೆ. ಈ ಕಾಲದ ವಿಜ್ಞಾನಿಗಳೂ ಅದನ್ನು ತಮ್ಮ ಅಧ್ಯಯನಕ್ಕೆ ಉಪಯೋಗಿಸಿಕೊಂಡಿದ್ದಾರೆ.
ಮಾನವನ ಮಿದುಳಿಗಿಂತ ಸಂಕೀರ್ಣ ವಸ್ತುವೊಂದು ಈ ಅನಂತದಲ್ಲಿಲ್ಲ. ಅನಂತವನ್ನೇ ತನ್ನದಾಗಿಸಿಕೊಳ್ಳುವ ಈ ಮಿದುಳಿನ ವಿಶಿಷ್ಟ ಭಾಗಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆಯಾದರೂ, “ಮಿದುಳೆಂದರೆ ಏನು? ಅದು ಕೆಲಸ ಮಾಡುವುದಾದರೂ ಹೇಗೆ?” ಈ ಪ್ರಶ್ನೆಗಳಿಗೆ ಆಧುನಿಕ ನ್ಯೂರೋಸೈನ್ಸ್ ನೀಡುವ ಉತ್ತರಗಳನ್ನು ಅವಲೋಕಿಸುತ್ತಾ ನೆನಪಿನಂಗಳದ ಕಾಲಯಾನವನ್ನು ಮುಂದುವರೆಸೋಣ.
******
(*) ಗಾಲ್ ನ ಫ್ರೆನಾಲಜಿ ಅವೈಜ್ಞಾನಿಕವಾದರೂ, ಅದೊಂದು “ಸೈಂಟಿಫಿಕ್” ವಿಚಾರವೆಂಬಂತೆ ಬಿಂಬಿತವಾಗಿ ಯೂರೋಪ್ ಮತ್ತು ಅಮೆರಿಕಗಳಲ್ಲಿ ವ್ಯಾಪಕವಾಗಿ ಹಬ್ಬಿತು. ಕಪ್ಪು ಮತ್ತು ಬಿಳಿಯ ಜನಾಂಗದವರ ತಲೆಗಳ ಗಾತ್ರ ಮತ್ತು ಆಕಾರದಲ್ಲಿರುವ ವ್ಯತ್ಯಾಸಗಳನ್ನು ಫ್ರೆನಾಲಜಿಯ “ವಿಜ್ಞಾನ”ದ ಮೂಲಕ “ಅಧ್ಯಯನ” ಮಾಡುವ ಯತ್ನಗಳೂ ನಡೆದವು. ಮತ್ತಷ್ಟು ಮಾಹಿತಿಗೆ ಈ ಲಿಂಕ್ ನೋಡಿ:
https://en.wikipedia.org/wiki/Phrenology
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.