1. ಜಲ ಸಸ್ಯ

ನೀರಿನ ಪರದೆಯ ಹಿಂದಿನಿಂದ ಇಣುಕುವ ಬುದ್ಧನ ಮುಖ
ಜಲ ಸಸ್ಯಗಳ ಹಾಗೆ ನಡುಗುತ್ತದೆ
ಬುದ್ಧನ ಕಣ್ಣರೆಪ್ಪೆಗಳು ಮರಗಳ ಮೇಲೆ ಎಲೆಗಳಾಗಿ ಬೆಳೆಯುತ್ತವೆ
ನೀನು ಪರಮಾತ್ಮನೇ?
-ಅಲ್ಲ ನಾನು ಪರಮಾತ್ಮನಲ್ಲ

ದಾರಿ ಸವೆಸುತ್ತಾ ಸಾಗುವಾಗ ಹುಟ್ಟಿಕೊಳ್ಳುವ ದಾವಾಗ್ನಿ
ಮನದೊಳಗೆ ಎಲ್ಲವನ್ನೂ ತಯಾರಿಸುತ್ತದೆ
ನೀನು ಮಾತ್ರ ನಿನಗಾಗಿ ಒಂದು ಕಪ್ ಚಹಾ ತಯಾರಿಸಿಕೊಳ್ಳುತ್ತಿ..
ನೀನು ಗಂಧರ್ವನೇ?
-ಅಲ್ಲ ನಾನು ಗಂಧರ್ವನೂ ಅಲ್ಲ

ರಹಸ್ಯಗಳ ಮೇಲೆ ನನಗೆ ಪುರಾತನ ಕಾಲದಿಂದಲೂ ನಿಗ್ರಹವಿದೆ
ನೀನು ಬೆರಳು ಹಿಡಿದು ಪ್ರತಿಬಾರಿಯೂ ಒಂದು ಹೊಸ ರಹಸ್ಯದ ಕಡೆಗೆ
ನನ್ನನ್ನು ಕರೆದ್ಯೊಯುತ್ತಿ
ನಾನು ಮೊದಲೇ ಕೊನೆಯ ಪುಟ ಓದಬಯಸುತ್ತೇನೆ
ಸುರಂಗದ ಹಾಗೆ ನನ್ನೊಳಗೆ ರಹಸ್ಯಗಳು ಹಾದು ಹೋಗುತ್ತವೆ
ನೀನು ಯಕ್ಷನೇ?
-ಅಲ್ಲ ನಾನು ಯಕ್ಷನೂ ಅಲ್ಲ

ಕೋಣೆಯ ಮೂಲೆಯಲ್ಲಿ ಕುಳಿತುಕೊಳ್ಳಲು ಬಿಕ್ಷು ಒಬ್ಬ ನಿರಾಕರಿಸುತ್ತಾನೆ
ಯಾವಾಗಲೂ ನಿಂತೇ ಇರುವುದು ಪ್ರತಿ ಸಮಯ ನಿರೀಕ್ಷೆ ಮಾಡುವುದಾಗಿದೆ
ಕುಳಿತುಕೊಂಡು ಮಾಡಿದ ಬಯಕೆಯಲ್ಲೂ ಬಯಕೆ ನಿಂತೇ ಇರುತ್ತದೆ
ನೀನು ಮನುಷ್ಯನೇ?
-ಅಲ್ಲ ನಾನು ಮನುಷ್ಯನೂ ಅಲ್ಲ

ನೀನು ಯಾವಾಗಲೂ ನಿನ್ನನ್ನು ಶಾಲ್ ನಿಂದ ಮುಚ್ಚಿಕೊಂಡಿರುತ್ತಿ
ಬಿದ್ದ ಕನಸುಗಳೆಲ್ಲಾ ನಿನ್ನವೇ ಎನ್ನುವ ಹಾಗೆ ಅವುಗಳನ್ನು ಓದತೊಡಗುತ್ತಿ
ಆವಾಗ ನಾನು ಭ್ರಮೆಯೆಂಬ ನಿಲ್ದಾಣದಿಂದ ಭ್ರಮೆಗೆ ಗಾಡಿ ಹಿಡಿದು
ಹೋಗುವಾಗ ಮಧ್ಯೆ ಸಿಕ್ಕ ಅಷ್ಟೂ ನಿಲ್ದಾಣಗಳ ಹೆಸರು ಭ್ರಮೆ ಎಂದುಕೊಂಡೆ
ಈ ಎಲ್ಲವೂಗಳಲ್ಲಿ ದಾಹವಿದೆ
-ನಾನು ಸಂತೃಪ್ತನಾಗಿದ್ದೇನೆ

ಎಲ್ಲ ರಹಸ್ಯಗಳು ಮನುಷ್ಯನ ಹಾಗೆ ನಶ್ವರ
ಅವುಗಳ ಆಯುಷ್ಯ ಮಾತ್ರ ಬೇರೆ ಬೇರೆಯಾಗಿದೆ
ಅದೃಶ್ಯದಲ್ಲಿ ಯಾವ ಪರದೆಯೂ ಇರುವುದಿಲ್ಲ
ನಾವಿಬ್ಬರೂ ಪುಸ್ತಕದ ಒಂದೇ ಬಂಧದಲ್ಲಿರುವೆವು
ಆದರೆ ನಮ್ಮಿಬ್ಬರ ಮಧ್ಯೆ ಅದೆಷ್ಟೋ ಹಾಳೆಗಳ ಅಂತರವಿರುವುದು
ನೇಹದ ಬಂಧನದ ಹೊರತಾಗಿಯೂ
ನಾನು ನಿನ್ನನ್ನು ಆಲಂಗಿಸುತ್ತೇನೆ
ಸಂಗಾತ ಹೀಗೂ ಆಗುತ್ತದೆ…

 

ಮೆಹಬೂಬ ಮುಲ್ತಾನಿ ಬೆಳಗಾವಿಯವರು
ಚಿಕ್ಕದಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರು
ಕತೆ, ಕವಿತೆ ಬರೆಯುವುದು ಮತ್ತು ಅನುವಾದ ಇವರ ಆಸಕ್ತಿಗಳು