1.
ಆತ್ಮಗಳ ಚುಂಬಿಸುವುದು
ಮನಸ್ಸು ಚುಂಬಿಸಿದಷ್ಟು ಸುಲಭವಲ್ಲ..

ಆತ್ಮಗಳು ಸದಾ ಯಾತ್ರೆಯಲ್ಲಿರುತ್ತವೆಯಂತೆ
ಮನಸ್ಸುಗಳು ಬದಲಾಗುತ್ತವೆ ಅಷ್ಟೇ….

ಒಂದು ಅವಧಿಯ ನಂತರ ಚುಂಬಿಸಿದ ಮುತ್ತುಗಳೆಲ್ಲಾ ಆತ್ಮದಲ್ಲಿ ಕಲೆಗಳಾಗುತ್ತವೆಯಂತೆ

ನಾನು ಚುಂಬಿಸಿದ್ದಾದರೂ ಎಲ್ಲಿ
ನಿನ್ನೆಯಿಂದ ಹುಡುಕುತ್ತಿರುವೆ
ಚುಂಬಿಸಿದ ಯಾವ ಕಲೆಯೂ
ಅಲ್ಲಿಲ್ಲ…

ಹಳೆಯ ಕಲೆಗಳು ಗಾಯವಾಗುವ
ಕಾಲವಿದು…
ಮನಸ್ಸು ಬದಲಾಗಿರಬೇಕು
May her soul rest in peace

2.
ದೀಪ ಮುಟ್ಟಿ ಪತಂಗದ ಹಾಗೆ ಸುಟ್ಟು ಹೋಗಬೇಡ ಗೆಳತಿ
ಇಲ್ಲಿ ಆಗಲೇ ಕೊಳ್ಳಿ ಇಟ್ಟು ಬೆಂಕಿ ಕಾಯುಸುತ್ತಿದ್ದಾರೆ..

ಬೆಂಕಿ ಮೇಲೆಯೇ ಪ್ರೀತಿ ಹೆಚ್ಚೆಂದು ಸುಳ್ಳು ಹೇಳಬೇಡ ಗೆಳತಿ
ಈಗಾಗಲೇ ಸಾಕಷ್ಟು ಅಗ್ನಿ ಪರೀಕ್ಷೆಗಳಾಗಿವೆ

ಅಗ್ನಿ ಅಗ್ಗಷ್ಟಿಕೆಯ ಕುಂಡವಾಗದಿರಲಿ ಗೆಳತಿ
ಇಲ್ಲಿ ನೆನಪುಗಳ ಕೆಂಡ ಕಾಯಿಸಿ ಮೋಜು ನೋಡುವವರಿದ್ದಾರೆ

ಸುಟ್ಟರೆ ಮಾತ್ರ ಪ್ರೀತಿ ಸಾಬಿತೆಂದುಕೊಳ್ಳಬೇಡ ಗೆಳತಿ
ಸೀತೆಯರು ಕಾಲ ಕಾಲಕ್ಕೆ ಜನಿಸುತ್ತಿದ್ದಾರೆ

ನಮ್ಮಿಬ್ಬರ ಒಲವಿಗೆ ಬೆಂಕಿ ಯಾವ ಲೆಕ್ಕ ಗೆಳತಿ
ಈಗಾಗಲೇ ನಾವೇನೆಂದು ಜಗತ್ತು ನೋಡಿಬಿಟ್ಟಿದೆ…

ಮೆಹಬೂಬ ಮುಲ್ತಾನಿ ಬೆಳಗಾವಿಯವರು
ಚಿಕ್ಕದಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರು
ಕತೆ, ಕವಿತೆ ಬರೆಯುವುದು ಮತ್ತು ಅನುವಾದ ಇವರ ಆಸಕ್ತಿಗಳು