ಭಾವವು ಪ್ರೇಮವಾಗುವುದು ಸಹಜ ಬೆಳವಣಿಗೆ. ಪ್ರೇಮದ ಮುಂದಿನ ಹಂತ ಜೊತೆಯಾದ ಬದುಕು. ಅದು ವಾಸ್ತವ. ಆದರೆ ವಾಸ್ತವದಲ್ಲಿ ಭಾವದ ಬೀಜ ಭಿನ್ನ ರೂಪದಲ್ಲಿ ಇರುತ್ತದೆ. ಮೊಳಕೆ ಬೀಜದಿಂದ ಹುಟ್ಟಿದ್ದೇ ಆದರೂ ಅದು ಬೀಜವಲ್ಲ. ಲೋಕದ ಸತ್ಯದ ಇಂತಹ ಹಲವು ನೆಲೆಗಳ ಅರಿವು ಕವಯಿತ್ರಿಗಿದೆ. ಆದುದರಿಂದಲೇ ಇಲ್ಲಿನ ಕವನಗಳು ಭಾವಲೋಲುಪತೆಗೆ ಇಳಿಯುವುದಿಲ್ಲ. ಭಾವ ತೀವ್ರತೆಯನ್ನು ರೂಪಕಗಳಲ್ಲಿ ಕಟ್ಟಲು ಪ್ರಯತ್ನಿಸುತ್ತವೆ. ವಾಸ್ತವ ಸತ್ಯದ ಅರಿವು ಭಾವಲೋಲುಪತೆಯಲ್ಲಿ ಇರುವುದಿಲ್ಲ.
ಮೇದಿನಿಯವರ ‘ಬೀದಿಬದಿ ಬೆಳದಿಂಗಳು’ ಕವನ ಸಂಕಲನಕ್ಕೆ ಎಸ್.ಆರ್.ವಿಜಯಶಂಕರ್ ರವರ ಮುನ್ನುಡಿ
ಮೇದಿನಿ ಅವರ ಮೊದಲ ಕವನ ಸಂಕಲನ ‘ಬೀದಿಬದಿ ಬೆಳದಿಂಗಳು’ ಕೃತಿಯನ್ನು ಓದಿದಾಗ ನನಗೆ ಇದರ ಸಹಜ ಅಭಿವ್ಯಕ್ತಿ ಮೊದಲಿಗೆ ಗಮನ ಸೆಳೆಯಿತು. ಇಂದು ಬರೆಯುತ್ತಿರುವ ಅನೇಕ ಹೊಸಬರು ತಮ್ಮ ಸಹಜ ಭಾವನೆ, ಬಯಕೆಗಳನ್ನು ಅದುಮಿಟ್ಟು ಸಾಮಾಜಿಕವಾಗಿ ಪ್ರಸ್ತುತ ಅನ್ನಿಸಿಕೊಳ್ಳಲು ಸಮಂಜಸವಾದ ಎಂಬಂತಹ ವಿಚಾರ, ವಸ್ತುಗಳ ಬಗೆಗೇ ಹೆಚ್ಚು ಕವನಗಳನ್ನು ಬರೆಯುತ್ತಿರುವುದು ಅನೇಕ ಕಡೆಗಳಲ್ಲಿ ಕಾಣಿಸುತ್ತಿವೆ. ಆದರೆ ಮೇದಿನಿ ಅವರ ಕವನಗಳಲ್ಲಿ ಸಾಮಾಜಿಕ ಅನ್ನಿಸಬಹುದಾದ ವಸ್ತು, ವಿಚಾರಗಳು ಅಲ್ಲಿ ಇಲ್ಲಿ ಮೂಲ ಭಾವಕ್ಕೆ ಹೊಂದಿಕೊಂಡಂತೆ ಬರುತ್ತವೆಯೇ ಹೊರತು ಸಹಜ ಅಂತರಂಗ ಭಾವಗಳನ್ನು ಮುಚ್ಚಿಟ್ಟು ಪ್ರಕಟವಾಗುವುದಿಲ್ಲ. ಭಾವನೆಗಳ ಸಹಜ ಭಾಷಾಭಿವ್ಯಕ್ತಿಗಳಾಗಿ ಅವು ಚಿಮ್ಮಲ್ಪಟ್ಟಿವೆ. ವಯೋ ಸಹಜವಾದ ಭಾವಲೋಕದ ಅರಿವು ಹಲವು ರೂಪಕಗಳಲ್ಲಿ ಇಲ್ಲಿ ಹರಳುಗಟ್ಟಿವೆ.
ಮೇದಿನಿ ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನ ಕಲಾ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಕನ್ನಡ ಭಾಷೆಯನ್ನು ತನ್ನ ಅಗತ್ಯವಾಗಿ ಒಗ್ಗಿಸಿಕೊಳ್ಳಬಲ್ಲ ಕೌಶಲ್ಯ ಅವರಿಗಿದೆ. ಅಧ್ಯಯನ ಹಾಗೂ ಅಭ್ಯಾಸಗಳಿಂದ ಅದು ಮುಂದೆ ಇನ್ನೂ ಚೆನ್ನಾಗಿ ಕರಗತವಾಗಬಲ್ಲದು ಎಂಬ ಸೂಚನೆಗಳು ಅವರ ಎಲ್ಲಾ ಕವನಗಳಲ್ಲೂ ಗೋಚರಿಸುತ್ತದೆ. ಕಾವ್ಯದಲ್ಲಿ ರೂಪಕಗಳು ಜೀವ ತಳೆಯುವ ವಿಸ್ಮಯ ಅವರನ್ನೇ ಹಲವು ಸಲ ಬೆರಗುಗೊಳಿಸಿರಬಹುದು. ರೂಪಕ ಸೃಷ್ಟಿ ಕವಿ ಸಿದ್ಧಿಸಿಕೊಳ್ಳಬೇಕಾದ ಸಾಧನೆ. ವಸ್ತು, ವಿಚಾರ, ತಾತ್ವಿಕ ಚಿಂತನೆಗಳ ಧ್ಯಾನಗಳಿಂದ ಅದು ಒದಗಿ ಬಂದರೂ ಬರಬಹುದು. ಭಾಷೆಯಲ್ಲಿ ಅದನ್ನು ಮೈಗೂಡಿಸಿಕೊಳ್ಳುವ ಕಲೆ ಕರಗತವಾಗಬಹುದೆಂಬ ಸೂಚನೆಗಳನ್ನು ಇಲ್ಲಿನ ಕವನಗಳು ಉಂಟು ಮಾಡುತ್ತವೆ. ಅದರ ಯಶಸ್ಸು ಕವಿಯ ಭವಿಷ್ಯದ ಸಾಧನೆಗೆ ಸಂಬಂಧ ಪಟ್ಟುದು.
ಇಲ್ಲಿನ ಕವನಗಳು ಮುಖ್ಯವಾಗಿ ‘ಅವನು’ ಮತ್ತು ‘ಅವಳ’ ಸುತ್ತಲಿನ ನಿರೂಪಣೆಗಳಲ್ಲಿ ಕಟ್ಟಲ್ಪಟ್ಟಿವೆ. ಕವನಗಳ ನಿರೂಪಕಿಯ ಮಾತುಗಳು ಎಲ್ಲಾ ಕಡೆ ಕೇಳಿ ಬರುವುದು. ‘ಅವನು’ ಕೂಡಾ ‘ಅವಳ’ ಮಾತುಗಳಲ್ಲೇ ಕಾಣುವವ. ಆದುದರಿಂದ ಇವೆಲ್ಲಾ ಅಂತರಂಗದ ಅದಮ್ಯ ಒತ್ತಡದಿಂದ ಹುಟ್ಟಿ ಬಂದವು. ‘ಅವನು’ ಯಾರೆಂಬುದು ಇನ್ನೂ ಅವಳಿಗೆ ಸ್ಪಷ್ಟವಾಗಿದೆಯೋ ಇಲ್ಲವೋ. ಹಗಲನ್ನು ಹುಡುಕುವುದು ಸೇರಿ ಹಲವು ಕಡೆ ಹಲವು ಕ್ರಿಯೆಗಳಲ್ಲಿ ಅವನು ವರ್ಣಿಸಲ್ಪಟ್ಟಿದ್ದಾನೆ. ಆತ ಹೊರಗೆ ನಿಜವಾಗಿ ಇರುವವನೋ ಅಥವಾ ‘ಅವಳ’ ಮನೋಜನೋ ಎಂಬುದು ಅಸ್ಪಷ್ಟವಾಗಿ ನಿರೂಪಕಿಯ ಅಂತರಂಗದೊಳಗೆ ಅವನು ಹಾಗೂ ಅವಳು ಪರಸ್ಪರ ಪರೀಕ್ಷಿಸಿಕೊಳ್ಳುವ ರೀತಿ ಸಮಗ್ರ ಕವನಗಳ ರೂಪುರೇಷೆ ಇವೆ.
“ಕೊರಳ ಇಳಿಜಾರದಲ್ಲೆಲದು |ಬೆನ್ನ ಬೆತ್ತಲೆಗಳಲ್ಲಿಳಿದು|ಕೊಟ್ಟ ಮರೆತ ಮಾಧುರ್ಯವೊಂದು | ಹೊಳೆದ” ರೀತಿ( ಇರುಳ ಇಳಿಜಾರು-ಕವನ) ಅದು ಸುಳಿದು ಸುತ್ತಿ ಹೋಗುತ್ತಿದೆ. ಅದು ಏನು? ಎಂಬುದನ್ನು ಅರಿಯುವ ಕ್ರಮವೇ ಇಲ್ಲಿನ ಕವನಗಳು. ಅವಳಾದರೋ ‘ನಿಂತ ನದಿ; ಹರಿಯುವುದನ್ನು ಮರೆತಾಗಿದೆ.. ಅದಕ್ಕೇ ಅವಳಲ್ಲಿ ಈಜುವವರು ಹೆಚ್ಚು ಎಂಬ ಒಂದು ಭಾವವೂ ಸುಳಿದು ಹೋಗಿದೆ. (ಚಿತ್ರಲೇಖೆ)
ಪ್ರೇಮದ ಕುಲುಮೆಯೊಳು
ಬೆಂದೆದ್ದ ಮೇಲೀಗ
ಅರ್ಧರ್ಧ ಬೂದಿ, ಅರ್ಧರ್ಧ ಗೆಲುವು
ಕೊರಳ ಹಿಸುಕುವ ರಾತ್ರಿಗಳೆಲ್ಲ(ಶಾಪ)
ಈ ಹಿಂಸೆಯ ಅನುಭವ ಮಧುರ ಭಾವದಿಂದ ಯಾಕೆ ಹುಟ್ಟುತ್ತದೆ ಎಂಬುದರ ಅರಿವು ಬದುಕಿನ ಮತ್ತೊಂದು ಮಗ್ಗುಲನ್ನು ಕಾಣಿಸುತ್ತದೆ. ಕವಿಗೆ ತನ್ನ ಸ್ಥಿತಿಯ ಅರಿವಿದೆ.
ಅರೆಬೆಂದ ಅನ್ನದಗಳು ನಾನು,
ಕುದಿಯುತ್ತೇನೆ.. ಕುದಿಯುತ್ತಲೇ ಇರುತ್ತೇನೆ…
ನೀ ಸಿಕ್ಕರೂ ಸಿಗದಿದ್ದರೂ(ಆಕಾಶ ಕೈಗೆಟುಕೀತು ಆಗಲಾದರೂ)
ಕವಯಿತ್ರಿಗೆ ಈ ಹಿನ್ನಲೆಯಲ್ಲಿ ಸಿದ್ಧಿಸುವ ಭಾಷಾನುಭವ ತನ್ನ ಸಂಕೀರ್ಣ ಭಾವಾಭಿವ್ಯಕ್ತಿಗೆ ಸಹಕಾರಿಯಾಗಿದೆ.
ಹುಡುಗಾ,
ದೂರದೂರಿನಲ್ಲಿ ಕೂತು
ನಗೆಯರಳಿಸುತ್ತೀ ನೀನು…
ನನ್ನ ಮೋಹದ ಮಣ್ಣು ಹೊತ್ತ
ದಾರಿ ತುಂಬೆಲ್ಲ ಸೇವಂತಿಗೆ.
ಬರುವೆ ನೀನೆಂದು.(ಅಭೋಧ)
ಇಲ್ಲಿನ ಕವನಗಳು ಮುಖ್ಯವಾಗಿ ‘ಅವನು’ ಮತ್ತು ‘ಅವಳ’ ಸುತ್ತಲಿನ ನಿರೂಪಣೆಗಳಲ್ಲಿ ಕಟ್ಟಲ್ಪಟ್ಟಿವೆ. ಕವನಗಳ ನಿರೂಪಕಿಯ ಮಾತುಗಳು ಎಲ್ಲಾ ಕಡೆ ಕೇಳಿ ಬರುವುದು. ‘ಅವನು’ ಕೂಡಾ ‘ಅವಳ’ ಮಾತುಗಳಲ್ಲೇ ಕಾಣುವವ. ಆದುದರಿಂದ ಇವೆಲ್ಲಾ ಅಂತರಂಗದ ಅದಮ್ಯ ಒತ್ತಡದಿಂದ ಹುಟ್ಟಿ ಬಂದವು.
ಭಾವವು ಪ್ರೇಮವಾಗುವುದು ಸಹಜ ಬೆಳವಣಿಗೆ. ಪ್ರೇಮದ ಮುಂದಿನ ಹಂತ ಜೊತೆಯಾದ ಬದುಕು. ಅದು ವಾಸ್ತವ. ಆದರೆ ವಾಸ್ತವದಲ್ಲಿ ಭಾವದ ಬೀಜ ಭಿನ್ನ ರೂಪದಲ್ಲಿ ಇರುತ್ತದೆ. ಮೊಳಕೆ ಬೀಜದಿಂದ ಹುಟ್ಟಿದ್ದೇ ಆದರೂ ಅದು ಬೀಜವಲ್ಲ. ಲೋಕದ ಸತ್ಯದ ಇಂತಹ ಹಲವು ನೆಲೆಗಳ ಅರಿವು ಕವಯಿತ್ರಿಗಿದೆ. ಆದುದರಿಂದಲೇ ಇಲ್ಲಿನ ಕವನಗಳು ಭಾವಲೋಲುಪತೆಗೆ ಇಳಿಯುವುದಿಲ್ಲ. ಭಾವ ತೀವ್ರತೆಯನ್ನು ರೂಪಕಗಳಲ್ಲಿ ಕಟ್ಟಲು ಪ್ರಯತ್ನಿಸುತ್ತವೆ. ವಾಸ್ತವ ಸತ್ಯದ ಅರಿವು ಭಾವಲೋಲುಪತೆಯಲ್ಲಿ ಇರುವುದಿಲ್ಲ.
ಪ್ರೇಮಕ್ಕೆ ಕೈಕಾಲುಗಳಿರುವುದೇ
ಕಾಮದಲ್ಲಿ, ಸ್ವಾರ್ಥದಲ್ಲಿ
ಗೊಂದಲದ ಅತಿಯಾಸೆಯಲ್ಲಿ
ಸಿಟ್ಟು ಸೆಡವುಗಳ ಸೊಕ್ಕಿನಲ್ಲಿ (ಪ್ರೇಮವೆಂದರೆ)
ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ್ನು ಒಮ್ಮೆ ‘ಅರಸಿ ಕಾಣದ ಚೆಲುವ’ ಎಂದು ವಿವರಿಸುತ್ತಾಳೆ. ಲೌಕಿಕದ ಮೂಲಕ ಅಲೌಕಿಕ ಅರಿಯುವ ಮನೋಸ್ಥಿತಿ ಅದು. ‘ಅರಸಿ’ ಎಂಬುದು ಶ್ಲೇಷೆಯಾಗುವುದರಿಂದ ಅದು ಸಾಧ್ಯವಾಗುತ್ತದೆ. ಇಲ್ಲಿ ಕವಿ “ಮೈಯೆಲ್ಲ ಅರಸಿ| ಹಾಡು ಬರೆದ ಕೈಗಳ ಪೋಲಿತನಕ್ಕೆ ಪರಿಚಯವಿರಬೇಕೆಂದಿರಲಿಲ್ಲ.” ಎನ್ನುತ್ತಾಳೆ. ಕಾವ್ಯಧ್ಯಾನ ತತ್ವಜ್ಞಾನವನ್ನು ಮುಂದೆ ಒಳಗೊಳ್ಳಲು ಸಾಧ್ಯವಾದಾಗ ಭಾವದ ಬೆರಗು ಬದುಕಿನ ಬಣ್ಣವಾಗಿ ಬೆಳೆದೀತು. ಆದರೆ ಈಗ ಕವಿಯ ಚಿತ್ರ ಸ್ಪಷ್ಟವಾಗಿದೆ.
ಕಲಿತ ಅಕ್ಷರಗಳೆಲ್ಲ
ಕರಗುವಾಗ
ಕಟೆದ ಕಾವ್ಯದಂಥವ ನೀನು….(ಮಿಲನ)
“ಮುಂದುವರೆಯುತ್ತದೆ”, “ನನ್ನ ಸಾವಿರ ಕಾರಣಗಳು”, “ಹಗಲು ನನ್ನ ಬೆನ್ನಮೇಲಿದೆ” ಮುಂತಾದ ಕವನಗಳು ಇನ್ನೂ ಕೆಲವು ಮಗ್ಗುಲುಗಳನ್ನು ಒಳಗೊಳ್ಳಲು ಪ್ರಯತ್ನಿಸುತ್ತಿವೆ. “ಅರ್ಧ ದಾರಿ ನೀನು, ಮತ್ತರ್ಧ ನಾನೂ| ನಡೆದು ಬಿಡೋಣ| ಕಣ್ಕಣ್ಣ ನಡುವೆ ಕಡಲೊಂದು|ಹುಟ್ಟದಿದ್ದರೆ | ಮತ್ತೆ ನದಿಗಳಾಗೋಣ” ಎಂಬ ಕವಿಭಾವ ಮತ್ತೆ ಹುಡುಕಾಟದ ಕಡೆಗೆ ಸೆಳೆಯುತ್ತಿದೆ.
ಸಹಜ ಭಾವಗಳನ್ನು ತಮಗೆ ತಾವೇ ಸ್ಪಷ್ಟಪಡಿಸಿಕೊಳ್ಳುವ ರೀತಿ ರೂಪಕಗಳಲ್ಲಿ ಶೋಧಿಸಿ ಹಿಡಿಯಲು ಮಾಡುವ ಪ್ರಯತ್ನ ಮೇದಿನಿಯವರ ಮೊದಲ ಸಂಕಲನದ ಯಶಸ್ಸು. ಇಂದು ಕವಿ ತನಗೆ ತಾನೇ ಪ್ರಾಮಾಣಿಕವಾಗಿ ಮಾತನಾಡಿಕೊಳ್ಳುವ ಧೈರ್ಯ, ಅಂತರಂಗ ಶೋಧನೆಯ ಕಾವ್ಯ ಮಾರ್ಗ ಇನ್ನೊಮ್ಮೆ ಹೊಸದಾಗಿ ರೂಪುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮೇದಿನಿಯವರದು ಹೊಸ ಪ್ರಯತ್ನ.
ಈಗ ವಿದ್ಯಾರ್ಥಿನಿಯಾಗಿರುವ ಮೇದಿನಿ ಮುಂದೆ ಇವನ್ನೆಲ್ಲಾ ಇನ್ನಷ್ಟು ಯಶಸ್ವಿಯಾಗಿ ಸಾಧಿಸಿಕೊಳ್ಳುವಂತೆ ಆಗಲಿ ಎಂದು ಹಾರೈಸುತ್ತೇನೆ. ಮೇದಿನಿ ಅವರಿಗೆ ಅಧ್ಯಾಪಕರಾಗಿರುವ, ಸ್ವತಃ ಬರಹಗಾರರೂ ಆಗಿರುವ ಪ್ರೋ. ಲೋಕೇಶ್ವರಪ್ಪನವರು ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಗಳನ್ನು ಪ್ರೋತ್ಸಾಹಿಸುವವರು. ಅವರ ಅಪೇಕ್ಷೆಯಂತೆ ಈ ಮುನ್ನುಡಿಯನ್ನು ಬರೆದಿದ್ದೇನೆ. ಕರ್ನಾಟಕದ ಎಲ್ಲಾ ಕಾಲೇಜುಗಳಲ್ಲೂ ಈ ರೀತಿಯ ಸಾಹಿತ್ಯಾಸಕ್ತಿ, ಓದು, ಪ್ರಕಟಣೆಗಳ ಆಸಕ್ತಿಯ ವಾತಾವರಣ ಬೆಳೆಯಲಿ ಎಂಬ ಆಸೆ ಉಂಟಾಗುತ್ತದೆ. ಈ ಕವನ ಸಂಕಲನ ಇನ್ನಷ್ಟು ವಿದ್ಯಾರ್ಥಿಗಳು ಕೃತಿಗಳನ್ನು ಪ್ರಕಟಿಸಲು ಇತರ ಕಾಲೇಜುಗಳಿಗೂ ಪ್ರೇರಣೆ ನೀಡುವಂತಾಗಲಿ ಎಂದು ಆಶಿಸುತ್ತೇನೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ