Advertisement
ಮೊಗ್ಗಿನ ಜಡೆಯ ಹುಡುಗಿಯರು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮೊಗ್ಗಿನ ಜಡೆಯ ಹುಡುಗಿಯರು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಎದುರಿಗೆ ಸಿಕ್ಕಿದವರಿಗೆಲ್ಲ ಮಣಿ ತನ್ನ ಕೆಲಸದ ಬಗ್ಗೆ ಹೇಳಿಕೊಂಡ. ಕಮ್ಯೂನಿಟಿ ಹಾಲ್ ಒಳಕ್ಕೆ ಹೋಗಿ ಅಲ್ಲಿ ಇರುವವರಿಗೆಲ್ಲ ಹೇಳಿದ. ಮಣಿಗೆ ಏನು ಮಾಡಬೇಕೊ ಯಾರಿಗೆಲ್ಲ ಹೇಳಬೇಕೊ ಒಂದೂ ಅರ್ಥವಾಗಲಿಲ್ಲ. ಅವನ ಖುಷಿಗೆ ಪಾರವೇ ಇರಲಿಲ್ಲ. ಸೆಲ್ವಿಗೆ ಹೇಳುವುದು ಹೇಗೆ? ಆಲೋಚಿಸತೊಡಗಿದ. ರಾತ್ರಿ ಅವರ ಕಾಲೋನಿಗೆ ಹೋಗುವುದು ಸರಿಯಲ್ಲ. ನಾಳೆ ಹೇಳಿದರೆ ಆಯಿತು ಎಂದುಕೊಂಡ. ಕೊನೆಗೆ ಎಲ್ಲಾ ಸುತ್ತಿಕೊಂಡು ಬಂದು ಕತ್ತಲಲ್ಲಿ ಕಲ್ಲು ಬಂಡೆಯ ಮೇಲೆ ಸೀನ ಮತ್ತು ಮಣಿ ಕುಳಿತುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

ಪಕ್ಕದ ಮನೆಯ ಹುಡುಗನನ್ನು ಕರೆದ ಕನಕ, “ಮಣಿ ಎಲ್ಲಿಗೋದನೊ ಕಾಣಿಸುತ್ತಿಲ್ಲ. ಅವನಿಗೆ ಗಣಿಯಲ್ಲಿ ಕೆಲಸ ಬಂದಿದೆಯಂತೆ ಅಂತ ಹೇಳಿ ಕರೆದುಕೊಂಡು ಬಾಪ್ಪ” ಎಂದು ಹೇಳಿ ಕಳಿಸಿದಳು. ಆ ಹುಡುಗ ಖುಷಿಯಿಂದ ಗೋಡೆ ಪಕ್ಕದಲ್ಲಿದ್ದ ಸೆಲ್ವಮ್ ಸೈಕಲ್ ತೆಗೆದುಕೊಂಡು ಸರ‍್ರನೆ ಹೊರಟು ರಸ್ತೆಯಲ್ಲಿ ಮಾಯವಾದ. ಸೈಕಲ್ ಸರಸರನೆ ತುಳಿಯುತ್ತ ಹುಡುಗ ಮೊದಲಿಗೆ ಕಮ್ಯೂನಿಟಿ ಹಾಲ್ ಕಡೆಗೆ ಹೋಗಿ ನೋಡಿದ. ಅಲ್ಲಿ ಮಣಿ ಇರಲಿಲ್ಲ. ಮೈದಾನದಲ್ಲಿ ಫುಟ್ಬಾಲ್ ಆಟ ನೋಡುತ್ತಿದ್ದವರ ಮಧ್ಯೆ ನುಸುಳಿಕೊಂಡು ನೋಡಿದ ಅಲ್ಲಿಯೂ ಇಲ್ಲ. ರೀಡಿಂಗ್ ರೂಮ್‌ನಲ್ಲಿ ಹೋಗಿ ನೋಡಿದ ಇಲ್ಲ. ಅವನು ಎಲ್ಲಗೋದನೊ ಹೋಗಲಿ ಎಂದು ಹುಡುಗ ಸೈಕಲ್‌ನಲ್ಲಿ ಅಲ್ಲೇ ಸುತ್ತಾಡತೊಡಗಿದ. ಅವನ ಗೆಳೆಯರು ಕೆಲವರು ಸೈಕಲ್ ತೆಗೆದುಕೊಂಡು ಸುತ್ತಿದರು. ಕೊನೆಗೆ ಕತ್ತಲಾಗಿ ವಾಪಸ್ ಬಂದು ಆಂಟಿ ಮಣಿ ಎಲ್ಲೂ ಇಲ್ಲ ಎನ್ನುತ್ತ ಸೈಕಲ್‌ಅನ್ನು ಗೋಡೆಗೆ ಒರಗಿಸಿದ. ಕನಕ, ಈ ಹುಡುಗ ಇನ್ನೆಲ್ಲಿಗೆ ಹೋದ? ಎಂದು ಪೇಚಾಡಿದಳು. ಅಷ್ಟರಲ್ಲಿ ಮಣಿ ಮತ್ತು ಸೀನ ಇಬ್ಬರೂ ಪ್ರತ್ಯಕ್ಷವಾದರು. ಮಣಿ, “ಅಮ್ಮ ಇದು ತೆಗೊ” ಎಂದು ಕಪ್ಪು ಪ್ಲ್ಯಾಸ್ಟಿಕ್ ಬ್ಯಾಗ್‌ಅನ್ನು ಕನಕಳ ಕೈಗೆ ಕೊಟ್ಟ. ಕನಕ, “ಇದನ್ನೇ ನಾನು ನಿನಗೆ ಹೇಳಿಕಳಿಸೋಣ ಅಂತಿದ್ದೆ” ಎನ್ನುತ್ತಾ ತೆಗೆದುಕೊಂಡು ಮನೆಯೊಳಕ್ಕೆ ಹೋದಳು.

ಸುಮತಿ, “ಮಣಿ, ನಿನಗೆ ಕೆಲಸ ಬಂದಿದೆ” ಎಂದಳು. “ಗೊತ್ತಾಯಿತು. ದಾರಿಯಲ್ಲಿ ರಾಜಾ ಹೇಳಿದ. ಎಲ್ಲಿ ಕೊಡು ನೋಡೋಣ” ಎಂದ. ಮನೆಯ ಒಳಗೆ ಎಲ್ಲರೂ ಕುಳಿತುಕೊಂಡಿದ್ದರು. ಸುಮತಿ ಪತ್ರ ತೆಗೆದುಕೊಂಡು ಬಾಗಿಲಲ್ಲಿದ್ದ ಮಣಿ ಕೈಗೆ ಕೊಡಲು ಬಂದಳು. ಕನಕ, “ಸುಮತಿ ಅದನ್ನು ಇಲ್ಲೇ ತಂದಿಡು. ಮಣಿ ಮೊದಲು ಕೈಕಾಲು ಮುಖ ತೊಳೆದುಕೊಂಡು ಬಂದು ಅದನ್ನು ತೆಗೆದುಕೊ” ಎಂದಳು. ಮಣಿ ಕೈ ಕಾಲು ತೊಳೆದುಕೊಂಡು ಬಂದು ಪತ್ರವನ್ನು ಕೈಗೆ ತೆಗೆದುಕೊಂಡು ಓದತೊಡಗಿದ. ಕತ್ತಲಾದರಿಂದ ಅದು ಸರಿಯಾಗಿ ಕಾಣಿಸಲಿಲ್ಲ. ಬಲ್ಬ್ ಬೆಳಕಿನ ಕೆಳಗಿಟ್ಟು ಓದಿದ. ಅವನು ಪಿಯುಸಿವರೆಗೂ ಓದಿದ್ದರಿಂದ ಇಂಗ್ಲಿಷ್ ಓದಲು ಚೆನ್ನಾಗಿಯೆ ಬರುತ್ತಿತ್ತು. ಕೊನೆಗೆ ಇಂಗ್ಲಿಷ್‌ನಲ್ಲಿ “ಥ್ಯಾಂಕ್ ಗಾಡ್” ಎಂದ. ಕನಕ ಮತ್ತೆ “ನಿಮ್ಮಪ್ಪನಿಗೆ ನಮಸ್ಕಾರ ಮಾಡಿ ಅದನ್ನು ಅವರ ಮುಂದಿಡು” ಎಂದಳು. ಮಣಿ ಹಾಗೇ ಮಾಡಿದ. ಕನಕ, “ನಿಮ್ಮ ಅತ್ತೆಗೆ ಹೇಳು” ಎಂದಳು. ಮಣಿ, “ಅತ್ತೆ ನನಗೆ ಕೆಲಸ ಬಂದಿದೆ” ಎಂದ. ಅತ್ತೆ “ಆ ಉದ್ದಂಡಮ್ಮಾಳ್ ತಾಯಿ ನಿನ್ನನ್ನು ಚೆನ್ನಾಗಿ ಇಟ್ಟಿರಲಪ್ಪ” ಎಂದಳು. ಕನಕ, “ಬೆಳಿಗ್ಗೆ ಎಲ್ಲರೂ ಹೋಗಿ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಬರೋಣ.” ಎಂದಳು. ಸೀನಿ ಮಣಿಗೆ ಕೈಕೊಟ್ಟು ಶುಭಾಶಯಗಳನ್ನು ಕೋರಿದ.

***

ಮಣಿ ಮತ್ತು ಸೀನ ಖುಷಿಯಲ್ಲಿ ರಸ್ತೆಯ ಉದ್ದಕ್ಕೂ ಮಾತನಾಡುತ್ತಾ ಹೊರಟರು. ಎದುರಿಗೆ ಸಿಕ್ಕಿದವರಿಗೆಲ್ಲ ಮಣಿ ತನ್ನ ಕೆಲಸದ ಬಗ್ಗೆ ಹೇಳಿಕೊಂಡ. ಕಮ್ಯೂನಿಟಿ ಹಾಲ್ ಒಳಕ್ಕೆ ಹೋಗಿ ಅಲ್ಲಿ ಇರುವವರಿಗೆಲ್ಲ ಹೇಳಿದ. ಮಣಿಗೆ ಏನು ಮಾಡಬೇಕೊ ಯಾರಿಗೆಲ್ಲ ಹೇಳಬೇಕೊ ಒಂದೂ ಅರ್ಥವಾಗಲಿಲ್ಲ. ಅವನ ಖುಷಿಗೆ ಪಾರವೇ ಇರಲಿಲ್ಲ. ಸೆಲ್ವಿಗೆ ಹೇಳುವುದು ಹೇಗೆ? ಆಲೋಚಿಸತೊಡಗಿದ. ರಾತ್ರಿ ಅವರ ಕಾಲೋನಿಗೆ ಹೋಗುವುದು ಸರಿಯಲ್ಲ. ನಾಳೆ ಹೇಳಿದರೆ ಆಯಿತು ಎಂದುಕೊಂಡ. ಕೊನೆಗೆ ಎಲ್ಲಾ ಸುತ್ತಿಕೊಂಡು ಬಂದು ಕತ್ತಲಲ್ಲಿ ಕಲ್ಲು ಬಂಡೆಯ ಮೇಲೆ ಸೀನ ಮತ್ತು ಮಣಿ ಕುಳಿತುಕೊಂಡರು. ಅವರಿಗಾಗಿ ಕಾಯುತ್ತಿದ್ದ ಮನೆಯವರು ಇಬ್ಬರಿಗೂ ಚಿಕನ್ ಊಟ ಬಡಿಸಿದರು. ಊಟ ಮಾಡುತ್ತಿದ್ದ ಮಣಿ ಬೆಳಿಗ್ಗೆ ಯಾವಾಗ ಆಗುತ್ತದೊ ಎಂದು ತವಕಿಸುತ್ತಿದ್ದಾನೆ. ಸೀನಿ ಜೊತೆಯಲ್ಲಿ ಇಲ್ಲದೆ ಇದ್ದಿದ್ದರೆ ಹೇಗಾದರೂ ಸೆಲ್ವಿ ಕಾಲೋನಿಗೆ ಹೋಗಿ ಅವಳಿಗೆ ವಿಷಯ ಮುಟ್ಟಿಸಿ ಬರಬಹುದಿತ್ತು ಎಂದುಕೊಂಡ. ಅಷ್ಟರಲ್ಲಿ ಗೋವಿಂದ ಓಡಿಬಂದು ಪಕ್ಕದಲ್ಲಿ ಕುಳಿತುಕೊಂಡು “ಮಾಪಿಳ್ಳೆ ಕೆಲಸ ಸಿಕ್ಕಿದೆ ಅಂತ ಕೇಳಿದೆ. ತುಂಬಾ ಸಂತೋಷ ಆಯಿತಪ್ಪ ನನಗೆ” ಎಂದು ಕೈಕುಲುಕಿದ. ಮಣಿ ಎಡಗೈ ಕೊಟ್ಟು “ಥ್ಯಾಂಕ್ಸ್ ಮಾವ ಊಟ ಮಾಡಿ” ಎಂದ. ಗೋವಿಂದ, “ಇಲ್ಲ ಮಾಪಿಳ್ಳೆ. ನಿನಗೆ ಮೊದಲೇ ನನ್ನ ಊಟ ಆಯಿತು. ಕನಕಕ್ಕ ಚಿಕನ್ ಸಾರು ಕಳಿಸಿದ್ದರು” ಎಂದ. ಮಣಿ ಎಡಗೈಯನ್ನು ಜೇಬಿಗೆ ಬಿಟ್ಟು ಒಂದು ಸಿಗರೇಟ್ ತೆಗೆದುಕೊಟ್ಟ. ಗೋವಿಂದ ಸಿಗರೇಟ್ ಕೈಗೆ ತೆಗೆದುಕೊಂಡು “ನೀವು ಮೊದಲು ಊಟ ಮಾಡಿ. ಆಮೇಲೆ ಕುಡಿಯೋಣ” ಎಂದ. ಮಣಿ, “ನಮ್ಮದಾಯಿತು” ಎಂದಿದ್ದೆ ಗೋವಿಂದ, “ಸುಮತಿ ಸ್ವಲ್ಪ ಬೆಂಕಿ ಕೊಡಮ್ಮ” ಎಂದ. ಸುಮತಿ ಒಲೆಯಿಂದ ಒಂದು ಕಡ್ಡಿಯನ್ನು ತಂದು ಕೊಟ್ಟಳು. ಮಣಿ, “ನಿನಗೂ ಬೇಗನೆ ಕೆಲಸ ಸಿಗಬೇಕು ಮಾಮ” ಎಂದ.

ಗೋವಿಂದ, “ಮಾಪಿಳ್ಳೆ ಬೆಳಿಗ್ಗೆ ನಮ್ಮ ಅಂಡ್ರಗ್ರೌಂಡ್ ಏಜೆಂಟ್ ಪೆರುಮಾಳ್ ಸರ್ ನನ್ನನ್ನು ಹೊಸ ಸಿಎಮ್‌ಡಿ ಹತ್ತಿರಕ್ಕೆ ಕರ್ಕೊಂಡು ಹೋಗಿದ್ದರು. ಹೋಗಿದ್ದೆ ಅವರ ಕಾಲಿಗೆ ಬಿದ್ದುಬಿಟ್ಟೆ. ಪೆರುಮಾಳ್ ಸರ್, ಅದೇ ಸರ್ ನಾನು ಹೇಳಿದ್ದನಲ್ಲ” ಎಂದರು. ಸಿಎಂಡಿ “ಇನ್ನೊಂದು ಸಲ ಹಾಗೆಲ್ಲ ಮಾಡಬಾರದು. ಆರ್ಡರ್ ಬರುತ್ತೆ ಹೋಗು” ಅಂದರು, ಎಂದ. “ಪೆರುಮಾಳ್ ಸರ್. ಖಂಡಿತ ನಿನಗೆ ಮತ್ತೆ ಕೆಲಸ ಸಿಕ್ಕುತ್ತೆ ಹೋಗು ಅಂತ ಹೇಳಿದ್ದಾರೆ. ಹೊಸ ಸಿಎಂಡಿ ಕಾರ್ಮಿಕರಿಗೆ ತುಂಬಾ ಹೆಲ್ಪ್ ಮಾಡ್ತಾರಂತೆ” ಅಂದ. ಮಣಿ, “ನಿನಗೆ ಕೆಲಸ ಸಿಕ್ಕುತ್ತೆ ಬಿಡು ಮಾವ” ಎಂದ. ಊಟ ಆದ ಮೇಲೆ ಮಣಿ, “ಅಮ್ಮ ನಾನು, ಸೀನಿ ಕಮ್ಯೂನಿಟಿ ಹಾಲ್‌ಗೋಗಿ ಬೆಳಿಗ್ಗೆ ಬರ್ತೀವಿ” ಎಂದ. ಗೋವಿಂದ “ಮಾಪಿಳ್ಳೆ, ನೀನು ಕೆಲಸಕ್ಕೆ ಸೇರಿದ ಮೇಲೆ ಅಲ್ಲಿಗೆ ಹೋಗಬೇಡ ಮನೆಯಲ್ಲೇ ಮಲಗಬೇಕು” ಎಂದ. ಕನಕ “ಹೌದು! ಮಣಿ” ಎಂದಳು. “ಆಯಿತು ಬಿಡಮ್ಮ. ಅತ್ತೆ ಹೋಗುವವರೆಗೂ ಅಷ್ಟೇ. ಆಮೇಲೆ ಮನೆಯಲ್ಲೇ ಮಲಗ್ತೀನಿ” ಎಂದು ಬಟ್ಟೆಗಳನ್ನು ತೆಗೆದುಕೊಂಡು ಹೊರಟುಹೋದ. ಕನಕ ಹಿಂದಿನಿಂದ “ಮಣಿ ನಾವು ಬೆಳಿಗ್ಗೆ ಆರು ಗಂಟೆಗೆಲ್ಲ ತಯಾರಾಗಿರ್ತೀವಿ. ನೀನು ಬಂದು ಸ್ನಾನ ಮಾಡಿದ ಮೇಲೆ ದೇವಸ್ಥಾನಕ್ಕೆ ಹೋಗಬೇಕು” ಎಂದಳು.

ಮರುದಿನ ಬೆಳಿಗ್ಗೆ ಎಲ್ಲರೂ ಸ್ನಾನ ಮಾಡಿಕೊಂಡು ತಯಾರಾಗಿದ್ದರು. ಹೂವು, ಬಾಳೆಹಣ್ಣು, ತೆಂಗಿನಕಾಯಿ, ಅಗರಬತ್ತಿ ಎಲ್ಲವನ್ನೂ ಹಿಂದಿನ ದಿನವೇ ತೆಗೆದು ಇಟ್ಟುಕೊಂಡಿದ್ದರು. ಮಣಿ ಕಮ್ಯೂನಿಟಿ ಹಾಲ್‌ನಿಂದ ಬರುವುದರೊಳಗೆ ಎಲ್ಲರೂ ತಯಾರಾಗಿದ್ದರು. ಸೀನಿ ಮೊದಲೇ ಎದ್ದು ಬಂದು ತಿಂಡಿ ತಿಂದು ಊರಿಗೆ ಹೊರಟುಹೋಗಿದ್ದನು. ಮಣಿ ಬಂದಿದ್ದೆ ಕನಕ, “ಮಣಿ ಬೇಗನೇ ನಾಲ್ಕು ಚೆಂಬು ನೀರು ತಲೆ ಮೇಲೆ ಹಾಕ್ಕೊಂಡು ಸ್ನಾನ ಮಾಡಿ ಬಾ” ಎಂದಳು. ಮಣಿ ಸ್ನಾನ ಮಾಡುವಾಗ ಎಲ್ಲರೂ ಮನೆ ಹೊರಗಡೆ ನಿಂತುಕೊಂಡರು. ರಾತ್ರಿ ಮಲಗುವಾಗ ಒದ್ದೆ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಲ್ಲಿಗೆ ಹೂಜಡೆಗಳನ್ನು ಮತ್ತೇ ಇಬ್ಬರು ಹುಡುಗಿಯರಿಗೂ ಹಾಗೇ ಕಟ್ಟಿ ಸಿಂಗರಿಸಿದ್ದರು. ಮಣಿ ಸ್ನಾನ ಮಾಡಿ ಪ್ಯಾಂಟು ಮತ್ತು ಶರ್ಟ್ ಹಾಕಿಕೊಂಡು ಹೊರಗೆ ಬಂದಿದ್ದೆ ಕನಕ, “ಮಣಿ ಅಲ್ಲಿ ಬಿಳಿ ಪಂಚೆ ಇಟ್ಟಿದ್ದೀನಲ್ಲ” ಎಂದಿದ್ದೆ, ಮಣಿ ಮತ್ತೆ ಮನೆ ಒಳಕ್ಕೆ ಹೋಗಿ ಪ್ಯಾಂಟ್ ಬಿಚ್ಚಿ ಲುಂಗಿ ಕಟ್ಟಿಕೊಂಡು ಹೊರಕ್ಕೆ ಬಂದ. ಎಲ್ಲರೂ ಉದ್ದಂಡಮ್ಮಾಳ್ ದೇವಸ್ಥಾನದ ಕಡೆಗೆ ನಡೆದುಕೊಂಡು ಹೊರಟರು. ಐದೂ ಜನರು ನಡೆದುಕೊಂಡು ಹೋಗುತ್ತಿರುವಾಗ ಬೆಳಗಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಮಹಿಳೆಯರು ಅವರನ್ನು ನೋಡುತ್ತಾ ಮಾತನಾಡಿಸಿದರು. ಒಬ್ಬರು, “ಆ ಹುಡುಗಿ ಯಾರು?” ಎಂದರೆ ಇನೊಬ್ಬರು, “ಮಣಿ ಅತ್ತೆ ಅಲಮೇಲು ಮಗಳು” ಎಂದರು.

ಎಲ್ಲರೂ ಭಯ ಭಕ್ತಿಯಿಂದ ದೇವಸ್ಥಾನದ ಮುಂದಿರುವ ಮೆಟ್ಟಿಲುಗಳನ್ನು ಬಗ್ಗಿ ಕೈಗಳಿಂದ ಮುಟ್ಟಿ ನಮಸ್ಕಾರ ಮಾಡುತ್ತ ದೇವಸ್ಥಾನದ ಅಂಗಳಕ್ಕೆ ಹೋಗಿ ದೇವಸ್ಥಾನವನ್ನು ಎಡಗಡೆಯಿಂದ ಬಲಗಡೆಗೆ ಮೂರು ಸುತ್ತು ಹಾಕಿಕೊಂಡು ಬಂದು ದೇವಸ್ಥಾನದ ಒಳಕ್ಕೆ ಹೋಗಿ ದೇವತೆಯ ಎದುರಿಗೆ ಎಲ್ಲರೂ ಒಂದು ಕಡೆ ಸಾಲಾಗಿ ನಿಂತುಕೊಂಡರು. ಪೂಜಾರಿ, “ಕನಕಮ್ಮ ವಿಷಯ ಕೇಳಿ ತುಂಬಾ ದುಃಖ ಆಯಿತು. ಎಲ್ಲಾ ಆಂಡವನ ಇಚ್ಛೆ. ನಮ್ಮ ಕೈಯಲ್ಲಿ ಏನಿದೆ? (ಸುಶೀಲಳ ಕಡೆಗೆ ನೋಡಿ) ಈ ಹುಡುಗಿ ಯಾರು?” ಎಂದರು. ಕನಕ, “ನಮ್ಮ ಅಣ್ಣನ ಮಗಳು” ಎನ್ನುತ್ತಿದ್ದಂತೆ ಅಲಮೇಲು “ಯಾಕೆ ಸ್ವಾಮಿ ನನ್ನನ್ನ ನೋಡಿಲ್ಲವೆ?” ಎಂದಳು. ಪುಜಾರಿ, “ನೀವು ಗೊತ್ತಮ್ಮ. ನಿಮ್ಮ ಮಗಳನ್ನು ಯಾವಾಗಲೋ ಚಿಕ್ಕವಳಾಗಿದ್ದಾಗ ನೋಡಿದ್ದು. ಇತ್ತೀಚೆಗೆ ನೋಡಿಲ್ಲವಲ್ಲ. ಹುಡುಗಿ ಸುಂದರವಾಗಿ ಮದುಮಗಳ ತರಹ ಕಾಣಿಸ್ತಾ ಇದ್ದಾಳೆ” ಎಂದರು. ಅಲಮೇಲು, ಮಣಿ ಕಡೆಗೆ ನೋಡಿದಳು. ಮಣಿ ತಲೆ ಬಗ್ಗಿಸಿಕೊಂಡ. ಪೂಜೆ ಆದ ಮೇಲೆ ಕನಕ ಇಬ್ಬರು ಹುಡುಗಿಯರನ್ನು ಪೂಜಾರಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡುವಂತೆ ಹೇಳಿ ಹುಡುಗಿಯರು ಪೂಜಾರಿಯ ಕಾಲಿಗೆ ವಂದಿಸುವಾಗ ಅಲಮೇಲು ಅವರ ಮೊಗ್ಗಿನ ಜಡೆಗಳು ನೆಲಕ್ಕೆ ಬೀಳದಂತೆ ಕೈಯಲ್ಲಿ ಹಿಡಿದುಕೊಂಡಳು. ತಟ್ಟೆ ಮತ್ತು ಹುಂಡಿಯಲ್ಲಿ ಹಣ ಹಾಕಿ ಸ್ವಲ್ಪ ಹೊತ್ತು ಗುಡಿಯ ಅಂಗಳದಲ್ಲಿ ಕುಳಿತುಕೊಂಡು ಮನೆ ಕಡೆಗೆ ಎದ್ದು ಬಂದರು.

(ಹಿಂದಿನ ಕಂತು: ಬದುಕಿನ ತಿರುವುಗಳು….)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ