ಬಿದಿರಿನ ನಾನಾ ರೀತಿಯ ಮನೆ ಬಳಕೆ ವಸ್ತುಗಳು ಅಂದರೆ ಕುಕ್ಕೆ, ಗೂಡೆ, ಅನ್ನ ಬಸಿಯುವ ಚಿಬ್ಬಲು ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಪಂಜರಗಳು ಆಧುನಿಕತೆ ಬಂದಂತೆ ಕಡಿಮೆಯಾಗುತ್ತಿವೆ. ಅದಕ್ಕೆ ಪರ್ಯಾಯವಾಗಿ ಮೇದಾರರು ಬಿದಿರಿನಲ್ಲಿಯೇ ಗೃಹಾಂಲಕಾರಿಕ ವಸ್ತುಗಳು ಅಂದರೆ ಹೂದಾನಿಗಳು, ಗೋಡೆಗೆ ಆನಿಸುವಂಥ ಫಲಕಗಳು ಇತ್ಯಾದಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಕುಲಕಸುಬೊಂದು ರೂಪಾಂತರವಾಗಿರುವುದಕ್ಕೆ ಇದು ಒಳ್ಳೆಯ ಉದಾಹರಣೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹತ್ತನೆಯ ಬರಹ ನಿಮ್ಮ ಓದಿಗೆ
ಜನವರಿ 2025ರ ನಂತರ ಹುಟ್ಟುವ ಮಕ್ಕಳೆಲ್ಲಾ ‘ಬೀಟಾ’ ಯುಗಕ್ಕೆ ಸೇರಿದವರು. ‘ಆಲ್ಫಾ’ ಯುಗದವದವರು ಹಿಂದಕ್ಕೆ ಸರಿದಂತೆ ಲೆಕ್ಕ! ಇನ್ನೂ ಮುಂದಕ್ಕೆ ಬರುವವರೆಲ್ಲಾ ‘ಗಾಮ’ ಯುಗಕ್ಕೆ ಸೇರುವಂಥವರು ಎನ್ನುತ್ತಿದ್ದಂತೆ ಉಪೇಂದ್ರರವರ ಗಾಮಗಾಮಗಾಮ ಗಾ….. ಎನ್ನುವ ಹಾಡಿನ ತುಣುಕೊಂದು ಹಾಗೆ ಸುಳಿದು ಮಾಯವಾಯಿತು. ‘ಗಾಮ’ ಇದನ್ನೆ ಮತ್ತೆ ತಿರುಗಿಸಿ ಓದಿದರೆ “ಮಗಾ ಮಗಾ….” ಆಗುತ್ತದೆ. ಇದು ನೆನಪಿಗೆ ಬರುತ್ತಿದ್ದಂತೆ ಬೇಡನೊಬ್ಬನ ಕತೆಯೂ ನೆನಪಿಗೆ ಬರುತ್ತದೆ.
ಬೇಡನೊಬ್ಬ ನನಗೆ ಭಗವಂತ ಪ್ರತ್ಯಕ್ಷವಾಗಿ ಅನುಗ್ರಹಿಸಲು ಯಾವ ಮಂತ್ರವನ್ನು ಜಪಿಸಬೇಕು ಎಂದು ಪಂಡಿತನೊಬ್ಬನಲ್ಲಿ ಕೇಳಲಾಗಿ ಆ ಪಂಡಿತ ಉಡಾಫೆಯಿಂದ ಅವನಿಗೆ “ಮರ ಮರ’’ವನ್ನು ಜಪಿಸು ಎಂದು ಹೇಳಿದನಂತೆ. ಅದರಂತೆಯೇ ಬೇಡ “ಮರಾ ಮರಾ” ಎಂದುಜಪಿಸಿದ್ದೆ ‘‘ರಾಮ….. ರಾಮ…..” ಎಂದ ಹಾಗಾಯಿತು. ಅವನ ಭಕ್ತಿಗೆ ಮೆಚ್ಚಿ ಶ್ರೀರಾಮಚಂದ್ರನೆ ಪ್ರತ್ಯಕ್ಷನಾಗಿ ಮನಸ್ಸಾರೆ ಹರಸಿದನಂತೆ. ಇದೊಂದು ಪುಟ್ಟಕಥೆ. ಇಲ್ಲಿ ರಾಮನೊಲಿದ ‘ಮರ’ ಶಬ್ದವನ್ನು ತೆಗೆದುಕೊಂಡರೆ ‘ಮರ’ ಶಬ್ದಕ್ಕೆ ‘ವೃಕ್ಷ’, ‘ತರು’, ‘ದ್ರುಮ’, ‘ಪಾದಪ’, ‘ವಿಟಪಿ’, ‘ಹಾಲಿವಾಣ’ ಮೊದಲಾದ ಅರ್ಥಗಳು ಬರುತ್ತವೆ.
ನಮ್ಮ ವಡ್ಡಾರಾಧನೆಯ ಕಥೆಗಳಲ್ಲಿ ಪಂಚತಂತ್ರದ ಕಥೆಗಳಲ್ಲಿಯೂ ಕಥೆಗಳು ಉಪಕಥೆಗಳು ಹೆಚ್ಚು ಆರಂಭವಾಗುವುದು ಈ ವೃಕ್ಷಗಳ ಕೆಳಗೆಯೇ. ಉದಾಹರಣೆಗೆ ‘ದುಷ್ಟಬುದ್ಧಿ -ಧರ್ಮಬುದ್ಧಿಯ ಕಥೆ’, ‘ಗಂಭೀರೆಯೆಂಬ ವೃದ್ಧಸ್ತ್ರೀಯ ಕಥೆ’ ಇತ್ಯಾದಿಗಳು. ಇನ್ನು ಬಹಳ ಹಿಂದೆ ಮಾರ್ಗದರ್ಶಿಗಳಾಗಿಯೂ ಅಡ್ಡನಿಂತ ದಾರಿಸೂಚಕಗಳನ್ನು ‘ಮರಗಳೆಂದೇ’ ಅಂದರೆ ‘ಕೈಮರಗಳೆಂಬ’ ಹೆಸರಿನಿಂದ ಗುರುತಿಸುತ್ತಿದ್ದರು. ಕೃಷಿ ಮಾಡುವಾಗ ಕೃಷಿಕರು ‘ಮರ’ ಎಂಬ ಉಪಕರಣವನ್ನು ಬಳಸುತ್ತಾರೆ. ಹಾಗೆಯೇ ಮರಮುಟ್ಟು, ಮರಗೆಲಸ ಪದಗಳು ಮರವನ್ನು ಆಧರಿಸಿ ಮಾಡುವ ಕೆಲಸಗಳಿಗೆ ಹೇಳುತ್ತಾರೆ. ಹಳೆಯ ಮನೆಗಳಲ್ಲಿ ಮರಗಳಿಂದ ಮಾಡಿದ ಅಡುಗೆ ಮನೆಗೆ ಬೇಕಾದ ಈಳಿಗೆ, ಶ್ಯಾವಿಗೆಮಣೆ, ಸೌಟು, ಲಟ್ಟಣಿಗೆ, ಮಜ್ಜಿಗೆ ಕಡೆಯುವ ಮಂತು, ಚಪಾತಿ, ರೊಟ್ಟಿ ಮಣೆಗಳು, ಒನಕೆ, ಇತ್ಯಾದಿಗಳು ಇರುತ್ತಿದ್ದವು. ಅಷ್ಟೇಏಕೆ ಮಕ್ಕಳ ತೊಟ್ಟಿಲು, ಉಯ್ಯಾಲೆ ಮಣೆಗಳು, ಆಟಕ್ಕೆ ಚನ್ನೆಮಣೆ, ಮನೆಗೆ ಬೇಕಾದ ಬೇಕಾದಷ್ಟು ಗೃಹೋಪಯೋಗಿ ವಸ್ತುಗಳೆಲ್ಲಾ ಮರದವೆ ಆಗಿದ್ದವು. ಅದನ್ನೂ ಬಿಟ್ಟು ಎಣ್ಣೆ ತೆಗೆಯುವ ಗಾಣಗಳು ಮರದವಾಗಿದ್ದವು. ಈಗ ಮರದ ಗಾಣಗಳು ಎಂದರೆ ‘ಕಲಬೆರಕೆ ರಹಿತ ಎಣ್ಣೆಯನ್ನು ಕೊಡುತ್ತೇವೆ’ ಎನ್ನುವ ಘೋಷವಾಕ್ಯಕ್ಕೆ ಪರ್ಯಾಯವಾಗಿ ಬಂದಿವೆ.
ಮರದ ಕುರಿತ ಹಾಗೆ ವಚನವೊಂದರಲ್ಲಿ ಅಕ್ಕಮಹಾದೇವಿ ‘ಮರವಿದ್ದು ಫಲವೇನು? ನೆಳಲಿಲ್ಲದ್ದನ್ನಕ್ಕ’! ಎಂದು ಭಕ್ತನ ಪರಿಪೂರ್ಣತೆಯನ್ನು ಹೇಳುವಾಗ ಹಸಿರೆಲೆಗಳಿಂದ ಸಮೃದ್ಧವಾಗಿ ಹಣ್ಣುಹಂಪಲುಗಳನ್ನು ನೀಡುತ್ತಾ ನೆರಳನ್ನು ಕೊಡುವುದು ಮರದ ಮೂಲಭೂತ ಗುಣ ಎನ್ನುತ್ತಾ ಮನುಷ್ಯನಿಗೂ ವೃಕ್ಷಗಳು ಅವಶ್ಯಕ ಎನ್ನುತ್ತಾರೆ. ಹೌದು! ಮನುಷ್ಯನ ಬದುಕಿಗೆ ವೃಕ್ಷಗಳು ಅರ್ಥಾತ್ ಮರಗಳಿಲ್ಲದೆ ಬದುಕುಂಟೆ… ಪ್ರಾಣವಾಯು ಅರ್ತಾಥ್ ಆಮ್ಲಜನಕದ ಮೂಲ ಮರಗಳೆ ಅಲ್ಲವೆ. ಅವುಗಳನ್ನು ಬಿಟ್ಟರೆ ಉಂಟೆ? ಆದರೆ ನಮ್ಮ ಜಗತ್ತು ಪ್ರಾಣದಾಯಕವಾಗಿರುವ ನೀರಿನ ಮೂಲಗಳನ್ನು, ಮರಗಳನ್ನು ಇಂದಿಗೆ ಸ್ವೇಚ್ಛೆಯಿಂದ ಬಳಸಿ ಬಿಸಾಡುತ್ತಿದ್ದಾರೆ. ‘ಅಭಿವೃದ್ಧಿ’ ಎಂದ ಕೂಡಲೆ ಬೇರೆ ಆಲೋಚನೆಗಳೆ ಇಲ್ಲದೆ ಮರಗಳನ್ನು ಕಡಿಯುವುದು. ಅದು ಮಾತ್ರ ಅಭಿವೃದ್ಧಿ ಎನ್ನುವ ಸಂಕುಚಿತತೆಗೆ ಬಂದು ನಿಂತಿದ್ದಾರೆ. ಮರಗಳು ಬಹುಪಯೋಗಿ ಎನ್ನುವ ಬಹುಶೃತವಾಕ್ಯವನ್ನು ಎಷ್ಟು ಹೇಳಿದರೂ ಅದು ತಲುಪಬೇಕಾದವರನ್ನು ತಲುಪುತ್ತಿಲ್ಲ ಎಂಬ ಮಾತುಗಳು ‘ಬಾಯಂಗಳದಲಿ ಹುಟ್ಟಿದ ಮಾತು ಮುಗಿಲಿನ ಕಿವಿಯನ್ನು ಮುಟ್ಟಲೆ ಇಲ್ಲ’’ ಎನ್ನುವ ಬೇಂದ್ರೆಯವರ ಕವನದ ಸಾಲುಗಳನ್ನು ನೆನಪಿಸುತ್ತವೆ. ‘ವೃಕ್ಷಮಾತೆ ‘ಎಂದು ಹೆಸರಾಗಿದ್ದ ದಿವಂಗತ ತುಳಸಿಗೌಡ, ಸಾಲುಮರದ ತಿಮ್ಮಕ್ಕ ಇವರೆಲ್ಲಾ ಮರಗಳನ್ನೆ ಮಕ್ಕಳಾಗಿಸಿಕೊಂಡವರು. ಮೂಲತಃ ಅನಕ್ಷರಸ್ಥರಾದ ಇವರುಗಳ ಅನನ್ಯ ಕಾರ್ಯಕ್ಕೆ ನಾಗರೀಕರು ಋಣಿಗಳಾಗಿರಬೇಕು. ಅಭಿವೃದ್ಧಿ ಹೆಸರಿನಲ್ಲಿ ಮರಗಳೆಲ್ಲ ನೆಲ ಕಂಡು ದೊಡ್ಡ ದೊಡ್ಡ ನಗರಗಳಲ್ಲಿ ಮರಗಳಲ್ಲ ಮರಗಳ ಮಾದರಿಗಳು ವಿದ್ಯುತ್ ಬಲ್ಬುಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ. ಬಹುಶಃ ಇದನ್ನು ಊಹಿಸಿಯೇ ಮನುಷ್ಯನ ದುರ್ಬುದ್ಧಿಯನ್ನು ಜಾಲಿಯ ಮರಕ್ಕೆ ಹೋಲಿಸಿ ಪುರಂದರದಾಸರು ‘ಜಾಲಿಯ ಮರದಂತೆ’ ಎಂಬ ಕೀರ್ತನೆಯನ್ನು ಬರೆದಿದ್ದಿರಬೇಕು.
ಮರಧ್ಯಾನ…. ಮರಧ್ಯಾನ ಮಾಡುತ್ತಲೇ ಇನ್ನೊಂದು ಪದ ‘ಮೊರʼ ಎನ್ನುವುದೊಂದು ನೆನಪಿಗೆ ಬರುತ್ತದೆ ಮೊರವೆಂದರೆ ಬಿದಿರಿನಿಂದ ಹೆಣೆದದ್ದು. ಮನೆ ಬಳಕೆಯ ಅತ್ಯವಶ್ಯಕ ವಸ್ತು. ಇದು ಪ್ರತಿಯೊಬ್ಬರ ಮನೆಯಲ್ಲಿಯೂ ಇರುತ್ತಿತ್ತು. ಮದುವೆ ಪೂಜೆ ಶುಭಕಾರ್ಯಗಳಲ್ಲಿ ‘ಮೊರಬಾಗಿನ’ವೆಂದು ಮುತ್ತೈದೆಯರಿಗೆ ಫಲತಾಂಬೂಲ ಇತ್ಯಾದಿಗಳನ್ನು ಜೋಡಿ ಮೊರಗಳಲ್ಲಿ ಕೊಡುತ್ತಾರೆ. ಇನ್ನು ಧಾನ್ಯವನ್ನು ಒಕ್ಕಲು ಮಾಡುವ ಸಂದರ್ಭಗಳಲ್ಲಿ ಇವು ಬೇಕೇ ಬೇಕಾಗುತ್ತವೆ. ಮನೆಗಳಲ್ಲೂ ಧಾನ್ಯವನ್ನು ಶುಚಿ ಮಾಡಲು ಇವುಗಳ ಬಳಕೆ ಮಾಡಲಾಗುತ್ತದೆ. ಆದರೆ ಈ ಬಿದಿರಿನ ಮೊರವನ್ನು ಉಪಯೋಗಿಸುವವರು ವಿರಳಾತಿ ವಿರಳ. ಮೊರಗಳ ವಿಷಯಕ್ಕೂ ಪ್ಲಾಸ್ಟಿಕ್ ಲಗ್ಗೆಯಿಟ್ಟಿದೆ. ಪ್ಲಾಸ್ಟಿಕ್ ಮೊರಗಳು ಅಶ್ಯಕತೆಯನ್ನಷ್ಟೇ ಹೇಳುತ್ತವೆ ವಿನಃ ಸಾಂಪ್ರದಾಯಿಕತೆಯನ್ನಲ್ಲ. ಈಗ್ಗೆ ಸರಿಸುಮಾರು ಹದಿನೈದು ವರ್ಷಗಳ ಹಿಂದೆಯೂ “ಮೊರ ಸಾರ್ಸಕೆ ಮೊರ….” ಎಂದು ಮೆಂತ್ಯ ಮತ್ತು ಪೇಪರನ್ನು ರುಬ್ಬಿಕೊಂಡು ಬರುತ್ತಿದ್ದ ಹೆಂಗಳೆಯರನ್ನು ನೋಡಿದ್ದು ನೆನಪಿದೆ. ಆದರೆ ಅಂಥ ಯಾವ ಹೆಣ್ಣುಮಕ್ಕಳು ಈಗ ಬರುತ್ತಿಲ್ಲ… ಅಂದರೆ ಮೊರದ ಬಳಕೆ ಕಡಿಮೆಯಾಗಿದೆ ಎಂದಲ್ಲವೆ?
ಬಿದಿರಿನ ನಾನಾ ರೀತಿಯ ಮನೆ ಬಳಕೆ ವಸ್ತುಗಳು ಅಂದರೆ ಕುಕ್ಕೆ, ಗೂಡೆ, ಅನ್ನ ಬಸಿಯುವ ಚಿಬ್ಬಲು ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಪಂಜರಗಳು ಆಧುನಿಕತೆ ಬಂದಂತೆ ಕಡಿಮೆಯಾಗುತ್ತಿವೆ. ಅದಕ್ಕೆ ಪರ್ಯಾಯವಾಗಿ ಮೇದಾರರು ಬಿದಿರಿನಲ್ಲಿಯೇ ಗೃಹಾಂಲಕಾರಿಕ ವಸ್ತುಗಳು ಅಂದರೆ ಹೂದಾನಿಗಳು, ಗೋಡೆಗೆ ಆನಿಸುವಂಥ ಫಲಕಗಳು ಇತ್ಯಾದಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಕುಲಕಸುಬೊಂದು ರೂಪಾಂತರವಾಗಿರುವುದಕ್ಕೆ ಇದು ಒಳ್ಳೆಯ ಉದಾಹರಣೆ. ಸಾಂಪ್ರದಾಯಿಕವಾಗಿ ಮದುವೆಗಳಲ್ಲಿ ಬಳಸುವ ಬಿದಿರಿನ ಪೆಟ್ಟಿಗೆ, ವಧುವನ್ನು ಕೂರಿಸುವ ಬಿದಿರಿನ ಕುಕ್ಕೆ, ಬೀಸಣಿಗೆ ಇತ್ಯಾದಿ ಇತ್ಯಾದಿಗಳು ಇವೆ. ಆದರೆ ಇವೆಲ್ಲಾ ಒಂದೇ ಬಾರಿ ಉಪಯೋಗಿಸುವ ವಸ್ತುಗಳಾಗಿವೆ ಎಂದರೆ ತಪ್ಪಿಲ್ಲ! ಇವುಗಳಿಗೂ ತರಹೇವಾರಿ ಅಲಂಕಾರ ಮಾಡಿ ಹಣಸಂಪಾದಿಸುವವರೂ ಇದ್ದಾರೆ. ಬಹುಶಃ ಈಗ ಎಲ್ಲರಿಗೂ ‘ಬಿದಿರು ನೀನಾರಿಗಲ್ಲಾದವಳು…’ ಎಂಬ ಹಾಡು ನೆನಪಿಗೆ ಬರಬಹುದು! ಆದರೆ ಈ ಹಾಡಿನ ಜೊತೆಗೆ “ಮೊರಸಾರ್ಸಕೆ ಮೊರ…” ಎಂದು ಉಲ್ಲೇಖಿಸಿದ ನನಗೆ ಇದೇ ಸಂದರ್ಭದಲ್ಲಿ ನನಗೆ ನೆನಪಿಗೆ ಬರುತ್ತಿರುವ ಇನ್ನೊಂದು ಕೂಗು “ಕಲ್ಮುಳ್ಳು…. ಕಲ್ಮುಳ್ಳು” ಎನ್ನುವ ಕೂಗು. ಕಲ್ಮುಳ್ಳು ಎಂದ ಕೂಡಲೆ ನೆನಪಾಗುವುದು “ಪಳ್ಳಿಕಟ್ಟು ಶಬರಿಮಲೈಕಿ ಕಲ್ಲು ಮುಳ್ಳು ಕಾಲುಕು” ಎಂಬ ಅಯ್ಯಪ್ಪನ ಹಾಡು ಅಂದರೆ ಶಬರಿ ಗಿರೀಶನ ದರ್ಶನ ಮಾಡುವುದು ಅಷ್ಟು ಸುಲಭ ಅಲ್ಲ. ಕಲ್ಲುಗಳು, ಮುಳ್ಳುಗಳು ತುಂಬಿದ ದಾರಿಯಲ್ಲಿ ನಡೆದುಹೋಗಬೇಕಾಗುತ್ತದೆ ಎಂದು. ಜೀನವದ ಹಾದಿ ಅಷ್ಟು ಸುಲಭ ಅಲ್ಲ! ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ! ಹಾಗೆ… ಹೀಗೆ! ಎಂದೆಲ್ಲಾ ಉಪದೇಶ ಕೊಡುತ್ತಿರುತ್ತಾರೆ. ಅರ್ಥಾತ್ಕಷ್ಟ-ಸುಖಗಳಿಂದ ಕೂಡಿರುತ್ತದೆ ಎಂದು. ಕಷ್ಟ-ಸುಖ ಪರಸ್ಪರ ವಿರುದ್ಧಾರ್ಥವಿರುವ ಜೋಡುನುಡಿಗೆ ಉದಾಹರಣೆ ಆದಂತೆ ಕಲ್ಲು ಮುಳ್ಳುಗಳೂ ಪರಸ್ಪರ ಪೂರಕ ಅರ್ಥವಿರುವ ಜೋಡುನುಡಿ.
‘ಕಲ್ಮುಳ್ಳು’ ಕಲ್ಲಿಗೆ ಮುಳ್ಳು ಹಾಕಿಸುವುದು ಎಂಬುದಾಗಿ ನಾವಿಲ್ಲಿ ಪದಶಃ ಅರ್ಥಕ್ಕೆ ಬರೋಣ! ಹಿಂದೆಲ್ಲಾ ಪ್ರತಿಯೊಂದು ಮನೆಯಲ್ಲಿಯೂ ಒರಳು ಕಲ್ಲುಗಳು ಅಂದರೆ ರುಬ್ಬುವ ಕಲ್ಲುಗಳು ಇರುತ್ತಿದ್ದವು. ಈಗ ರುಬ್ಬುವ ಯಂತ್ರಗಳು, ಮಿಕ್ಸಿಗಳೆಲ್ಲಾ ಇವೆ. ರುಬ್ಬುವ ಕಲ್ಲುಗಳು ಅವಶ್ಯವಾಗಿ ಬಳಸುತ್ತಿದ್ದ ಕಾಲದಲ್ಲಿ ಅವುಗಳನ್ನು ಉಪಯೋಗಿಸಿ ಉಪಯೋಗಿಸಿ ರುಬ್ಬುವ ಕಲ್ಲುಗಳು ಸವೆದು ಹೋಗಿರುತ್ತಿದ್ದವು. ಅವುಗಳನ್ನು ಮತ್ತೆ ಚೂಪಾಗಿ ಮಾಡುವುದೇ ಈ ‘ಕಲ್ಮುಳ್ಳು’ ಹಾಕಿಸುವ ಇಲ್ಲವೆ ಹುಯ್ಯಿಸುವ ಪ್ರಕ್ರಿಯೆ. ‘ಕಲ್ಮುಳ್ಳು’ ಹಾಕುವಾತ ಚಾಣ ಮತ್ತು ಸುತ್ತಿಗೆ ಬಳಸಿ ಕಲ್ಲನ್ನು ಚೂಪಾಗಿಸುತ್ತಿದ್ದನು. ತನ್ನ ಕೆಲಸ ಪೂರ್ಣವಾದ ಬಳಿಕ ಕೆಲಸಕ್ಕೆ ಪ್ರತಿಯಾಗಿ ರಾಗಿಯನ್ನೋ ಇತರೆ ಕಾಳುಕಡ್ಡಿಯನ್ನು ಪಡೆದು ಹಿಂತಿರುಗುತ್ತಿದ್ದ. ಕಲ್ಮುಳ್ಳು ಹಾಕಿ ಅವನು ಹೊರಟ ನಂತರ ಮನೆ ಹೆಣ್ಮಕ್ಕಳು ನೆನೆಸಿದ ಮೆಂತ್ಯವನ್ನು ರುಬ್ಬಿ ಕಲ್ಲಿನಲ್ಲಿರುತ್ತಿದ್ದ ಚಿಕ್ಕ ಚಿಕ್ಕ ಕಲ್ಲ ಕಣಗಳನ್ನು ತೆಗೆದು ಸ್ವಚ್ಚಗೊಳಿಸಿ ಉಪಯೋಗಿಸುತ್ತಿದ್ದರು. ಈಗ ಎಲ್ಲವು ಯಂತ್ರಗಳಿಂದಲೇ ಕಲ್ಲುಗಳನ್ನು ಆಯಾ ಅಳತೆಗೆ ಸಿದ್ಧಗೊಳಿಸುವುದರಿಂದ ಕಲ್ಲುಗಳು ಸ್ವಚ್ಛವಾಗಿಯೇ ಬರುತ್ತವೆ.
ಒರಳುಕಲ್ಲು ಚಿತ್ರಾನ್ನ, ಉಪ್ಪಿಟ್ಟು (ಜೀರಿಗೆ ಉಪ್ಪು ಹಸಿಮಣಸು ಹಾಕಿಕುಟ್ಟಿ ಮಾಡುತ್ತಿದ್ದ ರಾಗಿ ಮುದ್ದೆಯ ಮಿಶ್ರಣ)ಒರಳುಕಲ್ಲು ಸಾಂಬಾರ್ ಇವೆಲ್ಲ ಒರಳು ಕಲ್ಲುಗಳಿಂದಲೆ ಮಾಡುತ್ತಿದ್ದ ಧಿಡೀರ್ ಅಡುಗೆಗಳು. ಈಗ ಒರಳು ಕಲ್ಲುಗಳು ಬಳಸುವವರಿಲ್ಲದೆ ‘ಒರಲು’ ಕಲ್ಲುಗಳಾಗಿವೆ ಎಂದರೆ ತಪ್ಪಿಲ್ಲ… ಗುರುಲಿಂಗ ದೇಶಿಕರು ತಮ್ಮೊಂದು ವಚನದಲ್ಲಿ “ಭಗವಂತನಲ್ಲಿ ನಿಮ್ಮ ಶರಣಗಣಂಗಳ ಮನೆಯ ಬೀಸುವಕಲ್ಲು, ಅರೆವಕಲ್ಲು ಬಚ್ಚಲುಗಲ್ಲು ಮೆಟ್ಟುಗಲ್ಲು ಮಾಡಿರಯ್ಯಾ” ಎಂದು ಭಿನ್ನವಿಸಿಕೊಳ್ಳುತ್ತಾರೆ. ನಮ್ಮ ಹಿಂದಿನವರಲ್ಲಿ ಯಾವೆಲ್ಲಾ ಜಾತಿಯ ಕಲ್ಲುಗಳು ಇದ್ದುವು ಎನ್ನುವುದಕ್ಕೆ ಗುರುಲಿಂಗ ದೇಶಿಕರ ವಚನವೊಂದನ್ನು ಇಲ್ಲಿ ಉಲ್ಲೇಖಿಸಬಹುದು.
ಇನ್ನೂ ವಿಶೇಷ ಎಂದರೆ ‘ಒರೆಗಲ್ಲು’ ಎನ್ನುವ ಪದ. ‘ಒರೆಗಲ್ಲು’ ಎಂದರೆ ಕಲ್ಲಿನ ಒಂದು ಫಲಕ. ಚಿನ್ನ ಅಪ್ಪಟವೋ ಇಲ್ಲವೇ ಕಲಬೆರಕೆಯೋ ಎಂದು ತಿಳಿಯಲು ಇದನ್ನು ಬಳಸುತ್ತಿದ್ದರು. ಇದನ್ನೂ ಒಳಗೊಂಡಂತೆ ‘ಒರೆಗಲ್ಲು’ ಎಂದರೆ ಒಂದು ಪ್ರಮಾಣ, ಇಲ್ಲವೆ ಒಂದು ಮಾನದಂಡ, ನಿರ್ಣಾಯಕ ಅಂಶ, ನಿಕಷ ಎಂಬ ಸಮಾನಾರ್ಥಗಳಲ್ಲಿ ಹೇಳಬಹುದು. ಇದನ್ನು ಬಿಟ್ಟು ಅಂದಿನ ಜೀವನ ಶೈಲಿಯಲ್ಲಿ ಬಳಸುತ್ತಿದ್ದ ಅವೇ ಬೀಸುವ ಕಲ್ಲು, ಕಟ್ಟುವ ಕಲ್ಲು, ಅರೆಯುವ ಕಲ್ಲು, ರೋಣಗಲ್ಲು(ಧಾನ್ಯ ಒಕ್ಕಲು ಮಾಡುವಾಗ ಬಳಸುತ್ತಿದ್ದ ಕಲ್ಲು)ಇತ್ಯಾದಿಗಳನ್ನು ನಿರ್ವಹಣೆ ಮಾಡುತ್ತಿದ್ದವರು ಈಗ ದೊಡ್ಡ ಪ್ರಮಾಣದಲ್ಲಿ ಕಲ್ಲಿನ ಮಂಟಪಗಳು, ತುಳಸಿಕಟ್ಟೆಗಳು, ಅಲಂಕಾರಿಕ ಕಲ್ಲಿನ ಕಂಬಗಳು ಇತ್ಯಾದಿಗಳನ್ನು ಮಾಡಿಕೊಂಡು ತಮ್ಮ ದುಡಿಮೆಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. ಕಾಲ ಸರಿದಂತೆ ವೃತ್ತಿಗಳೂ ರೂಪಾಂತರವಾಗುವುದಕ್ಕೆ ಇದೂ ಉದಾಹರಣೆಯೇ.
ಕಾಲನಿಂತ ನೀರಲ್ಲ ಸರಿ! ಹಾಗೆ ನಮ್ಮ ಬದುಕೂ ಕೂಡ! ಆದರೆ ಕೆಡಕುಗಳನ್ನು ಕಳೆದುಕೊಂಡು ಒಳಿತುಗಳನ್ನು ಒಳಗು ಮಾಡಿಕೊಂಡರೆ ಹೆಚ್ಚುಗಾರಿಕೆ ಇರುತ್ತದೆ ವಿನಃ ಒಳಿತುಗಳನ್ನು ಕಳೆದುಕೊಂಡು ಗೊತ್ತಿದ್ದೂ ಕೆಡುಕುಗಳನ್ನು ಒಳಗೊಳ್ಳುವುದು ಸರಿ ಅಲ್ಲ. ಹಿಂದಿನವರು ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೆ ಭತ್ತ ಕುಟ್ಟುವುದಕ್ಕೆ, ರಾಗಿ ಬೀಸುವುದಕ್ಕೆ, ಮಸಾಲೆ ರುಬ್ಬುವುದಕ್ಕೆ ಅಷ್ಟೇ ಏಕೆ ಹಲ್ಲಿಲ್ಲದವರು ತಾಂಬೂಲ ಜಗಿಯಲು ಅಡಿಕೆ ಪುಡಿಮಾಡಿಕೊಳ್ಳಲೂ ಕಲ್ಲನ್ನು ಬಳಸುತ್ತಿದ್ದರು(ಕುಟ್ಟಾಣಿಯೂ ಇತ್ತು….ಈಗಲೂ ಇದೆ) ಅದರು ಪಯೋಗ, ಅದು ಒದಗಿಸುತ್ತಿದ್ದ ವ್ಯಾಯಾಮ, ಏಕಾಗ್ರತೆ ಅಷ್ಟಿತ್ತು. ಈಗ ಆಧುನಿಕ ಮಾನವ ಕಲ್ಲುಗಳನ್ನು ಮೂಲೆಗಿರಿಸಿ ಯಂತ್ರಗಳನ್ನು ತಂದಿಟ್ಟುಕೊಂಡಿದ್ದಾನೆ. ಬಹುಶಃ ಇದಕ್ಕೆ ಕಲ್ಲು ಕಲ್ಲೆಂದು ಬೀಳುಗಳೆವಿರಿ ಅಂದರು ಪಯೋಗವರಿಯದ ಗಾವಿಲರೆ ಎಂಬ ಅಣಕವನ್ನು ಆರೋಪಿಸಬಹುದೇನೋ?

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.