ಜಾತಿ ಧರ್ಮಗಳ ಬೇಲಿ ಕಳಚಿ, ಅಪ್ಪಟ ಮನುಷ್ಯತ್ವ ತೋರುವ ಮುಗ್ಧ ಮನಗಳ ನಂಬಿಕೆಯಿದು. ಇದು ಮುಸಲ್ಮಾನರ ಹಬ್ಬ. ಆದರೆ ಇಲ್ಲಿ ಅದನ್ನು ಆಚರಿಸುವವರು ಹಿಂದೂಗಳು. ಇದು ಊರ ಮಂದಿಗೆ ಮನರಂಜನೆಯೂ ಹೌದು ಭಕ್ತಿ ಸಮರ್ಪಣೆಯೂ ಹೌದು. ಎರಡೂ ಮಿಳಿತಗೊಂಡ ವಿಶಿಷ್ಟ ಪದ್ಧತಿಯಿದು. ಊರ ಜನರೆಲ್ಲಾ ಒಂದು ವಾರ ಒಂದೆಡೆ ಸೇರಿ ನಲಿಯಲು ಅವಕಾಶ ಕಲ್ಪಿಸುತ್ತದೆ ಬಾಬಯ್ಯನ ಹಬ್ಬ. ಪರಿಷೆಯ ಪರಿಸರವೊಂದು ಪಸರಿಸುತ್ತದೆ. ಈ ವರ್ಷ ಮುಗಿದೊಡನೆ ಮತ್ತೆ ಮುಂದಿನ ವರ್ಷದ ಕುಣಿತಕ್ಕಾಗಿ ಲೆಕ್ಕಾಚಾರ ಶುರುವಿಟ್ಟುಕೊಳ್ಳುವ ಮನಗಳ ಸಂಭ್ರಮ ನಿರಂತರ.
ಮೊಹರಂ ಹಬ್ಬದ ಆಚರಣೆಯ ಕುರಿತು ಸುಮಾ ಸತೀಶ್ ಬರಹ ನಿಮ್ಮ ಓದಿಗೆ

ಮೊಹರಮ್ ಮುಸಲ್ಮಾನರ ವಿಶೇಷ ಆಚರಣೆಯಾದರೂ ಸಹ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ನನ್ನೂರು ಚಿಕ್ಕಮಾಲೂರು ಗ್ರಾಮ ಹಾಗೂ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಬಲು ವಿಶೇಷವಾಗಿ, ಮುತುವರ್ಜಿಯಿಂದ ಬಾಬಯ್ಯನ ಅಬ್ಬ ಅಂತ ಕುಣಿದು ಕುಪ್ಪಳಿಸುವ ಸಂಭ್ರಮಾಚರಣೆ.

ಸಾಬರೇ ಇಲ್ಲದ ಈ ಕೇರಿಗಳಲ್ಲಿ ನಾಯಕರು, ಗೊಲ್ಲರು, ಕುರುಬರು, ಉಪ್ಪಾರರಾದಿಯಾಗಿ ಎಲ್ಲ ಸಮುದಾಯದವರೂ ಬಾಬಯ್ಯನಿಗೆ ನಡೆದುಕೊಳ್ಳುವುದು ಅನೂಚಾನವಾಗಿ ವಂಶಪಾರಂಪರ್ಯವಾಗಿ ನಡೆದು ಬಂದಿದೆ.

ಬಾಬಯ್ಯನ ಚಾವಡಿ

ಬಾಬಯ್ಯನ ಹಬ್ಬದೊಂದಿಗೇ ತಳಕು ಹಾಕಿಕೊಂಡ ಚಿಕ್ಕಂದಿನ ನೆನಪುಗಳು ಸಾಲುಸಾಲಾಗಿ ನುಗ್ಗುತ್ತವೆ. ಮೊಹರಮ್ ಕೊನೇ ದಿನಕ್ಕೆ ಒಂದು ವಾರ ಮೊದಲು ಹಬ್ಬ ಶುರು. ನಮ್ಮ‌ ಮನೆ ‌ಮುಂದೆ‌ ಊರಿನ ದೊಡ್ಡ ಬಯಲು ಇತ್ತು. ಸುಮಾರು ‌ನಾನೂರು ಐನೂರು ಜನ ಸೇರಬಹುದಾದದ್ದು. ಅಲ್ಲಿ ಎಡ‌ಮೂಲೆಯಲ್ಲಿ ಮಣ್ಣಿನ ಚಾವಡಿಯೊಂದಿತ್ತು.‌ ಅದು ಬಾಬಯ್ಯನ ಚಾವಡಿ ಅಂತಾನೇ ಹೆಸರಾಗಿತ್ತು. ಚಾವಡಿಯ ಜಂತೆಗೆ ಬಿದಿರಿನ ಚಾಪೆ ಹಾಸಿ ಮಣ್ಣು ಹೊಚ್ಚಿದ್ದರು. ಆ ಜಂತೆಯಲ್ಲಿ ಒಂದು ದೊಡ್ಡ ಪೆಟ್ಟಿಗೆ ಕಟ್ಟಿರುತ್ತಿದ್ದರು. ಅದರಲ್ಲಿ ಬಾಬಯ್ಯನ ರೂಪುಗಳಿರುತ್ತಿದ್ದವು. ಹಿತ್ತಾಳೆಯ ಗುಂಡನೆಯ ರೇಖುಗಳ‌ ಮೇಲೆ ಮೂರು ನಾಮದಂತ ರಚನೆಯಿರುತ್ತಿತ್ತು. ಒಂದು ಅಡಿ ಸುತ್ತಳತೆಯವು. ಅವುಗಳನ್ನು ಜಂತೆಯಿಂದ ಇಳಿಸಿ, ಉದ್ದನೆಯ ಕೋಲುಗಳಿಗೆ ಬಣ್ಣದ ಬಟ್ಟೆ ಸುತ್ತಿ, ತುದಿಯಲ್ಲಿ ಈ ರೇಖುಗಳನ್ನು ಸಿಗಿಸುತ್ತಿದ್ದರು. ಅಲ್ಲಿಗೆ‌ ಅವು ಹೊತ್ತು ಕುಣಿಯಲು ಸಿದ್ಧಗೊಂಡಂತೆ. ಆಗ ಇಂತಹ ಆರೋ ಏಳೋ ರೇಖುಗಳು ಇದ್ದದ್ದು ಈಗ ಮೂವತ್ತು ನಲವತ್ತಕ್ಕೇರಿವೆ. ಜನರು ಹಬ್ಬದ ಸಮಯದಲ್ಲಿ ಬಾಬಯ್ಯನಿಗೆ ಭಕುತಿಯಿಂದ ಹರಕೆ ಹೊತ್ತು, ಕೆಲಸ ಆದ ಮೇಲೆ ತಾವೂ ಒಂದೊಂದು ಬಾಬಯ್ಯನ ರೂಪು ಮಾಡಿಸಿಕೊಡುವ ಪರಿಪಾಠ ಆರಂಭಿಸಿದ್ದು ಇದಕ್ಕೆ‌ ಮೂಲ. ಒಮ್ಮೆ ಜೋರು ಮಳೆ ಬಂದು ಚಾವಡಿ ಕುಸಿದು ಬಿತ್ತು. ಆದರೂ ಹಬ್ಬ ನಿಲ್ಲಲಿಲ್ಲ. ಅದೇ ಜಾಗದಲ್ಲಿ ಶಾಮಿಯಾನ ಹಾಕಿಸಿ ಹಬ್ಬ ಮಾಡುತ್ತಿದ್ದರು. ಈಗ ಊರ ಮಂದಿ ಸೇರಿ ಬಾಬಯ್ಯನಿಗಾಗಿ ಒಂದು ಚಿಕ್ಕ ಕೊಠಡಿ ಕಟ್ಟಿಸಿದ್ದಾರೆ. ಒಟ್ಟಿನಲ್ಲಿ ಹಬ್ಬದಾಚರಣೆಗೆ ಕುಂದಾಗದಂತೆ ನಡೆಸಿಕೊಂಡು ಬರುತ್ತಿದ್ದಾರೆ.

ಹೆಣ್ಣಾಗಿ ಬದಲಾಗುವ ಪಡ್ಡೆ ಹೈದರ ಖಯಾಲಿ

ಒಂದು ವಾರ ಕಾಲ ಬಾಬಯ್ಯನ‌ ಕೋಲುಗಳನ್ನು ಹೊತ್ತ ಪಡ್ಡೆ ಹೈದರ ಕುಣಿತ ಬಲು ಜೋರು. ದೊಡ್ಡ ವೃತ್ತ ಮಾಡಿಕೊಂಡು ಆ ಬಯಲಿನಲ್ಲಿ ಹದಿವಯದ ಹುಡುಗರೆಲ್ಲ ವೃತ್ತಾಕಾರವಾಗಿ ಕುಣಿಯುತ್ತಿದ್ದರು. ಅವರಿಗೆ ಹುಡುಗೀರ ವೇಷ ಧರಿಸುವುದು ವಾಡಿಕೆಯಾಗಿ ಹೋಗಿತ್ತು. ತಮ್ಮ ಮನದಲ್ಲಿ ಕುದಿಯುತ್ತಿದ್ದ ಬಹುದಿನಗಳ ಆಶೆಗೆ ರೂಪು ಕೊಡಲು, ಚೌರಿ ಬಿಗಿದು, ಎರಡು ಜಡೆ, ನಾಕು ಜಡೆ, ಬದನೆಕಾಯಿ ಜಡೆಗಳನ್ನು ಹಾಕಿಕೊಂಡು, ಸೀರೆ ಕುಬುಸ, ಲಂಗ ಓಣಿ ತೊಟ್ಟು, ಬಳೆಗಳು ಸರಗಳನ್ನು ಏರಿಸಿಕೊಂಡು ಕುಣಿಯುತ್ತಿದ್ದರು. ಆಗೆಲ್ಲ ಜಾತ್ರೇಲಿ ಸಿಗೋ ಬಣ್ಣದ ಚೌಕಟ್ಟಿನ ಪ್ಲಾಸ್ಟಿಕ್ ಕನ್ನಡಕಗಳು ಇವರ ಮೂಗಿನ‌ ಮೇಲೆ ನಲಿಯುತ್ತಿದ್ದವು. ಹುಡುಗೀರ ವಸ್ತ್ರ ವೈಭೋಗಗಳೂ ಬದಲಾದ ಈ ಕಾಲಕ್ಕೆ ತಕ್ಕಂತೆ ಪಡ್ಡೆಗಳೂ ನೈಟಿ, ಫ಼್ರಾಕು, ಚೂಡಿದಾರಗಳನ್ನು ಕಡ ತಗೊಂಡು ಬಂದು ಹಾಕ್ಕೊಂಡು, ನಲಿದು ಮನದೊಳಗಿನ ಆಸೆ ಪೂರೈಸಿಕೊಳ್ಳುತ್ತಾರೆ. ಈಗೀಗ ಕಪ್ಪು ಕನ್ನಡಕಗಳೂ ಜಾಗ ಪಡೆದಿವೆ. ಕೆಲವರಂತೂ ಹುಡುಗರು ಅಂತಲೇ ಗುರುತಿಸಲಿಕ್ಕಾಗದಂತೆ ಪಕ್ಕಾ ಹುಡುಗಿಯರಾಗಿ ತಯಾರಾಗುತ್ತಿದ್ದರು. ಅವರ ನಡೆ ನುಡಿಗಳೂ ಅದಕ್ಕೆ ಸಾತ್ ಕೊಡುವಂತೆ ಇದ್ದು, ಮಕ್ಕಳು ಮುದುಕರಿಗೆ ಬಿಟ್ಟಿ ಮನರಂಜನೆ ಸಿಗುತ್ತಿತ್ತು.

ಬಹುಕೃತ ವೇಷ

ಇವರ ಜೊತೆ ಯಾಸ ಕಟ್ಟೋರು, ಪಾತ್ರ ಹಾಕೋರೂ ಬಲು ಮಂದಿ. ಅವರವರ ಸೃಜನಶೀಲತೆಗೆ ರೂಪು ಕೊಡಲು ಅವರಿವರ ಬಳಿ ಕಾಡಿ ಬೇಡಿ ಸಾಮಗ್ರಿಗಳನ್ನು ಎರವಲು ಪಡೆದು, ಡಾಕುಟ್ರು, ನರ್ಸಮ್ಮ, ದನೀನ ಡಾಕುಟ್ರು, ಕಡ್ಡಿಪುಡಿ ಮಾರೋರು, ಪೀಪಿ ಮಾರೋರು, ಬೊಂಬೆ ಎತ್ಕೊಂಡು ಮಗೀಗೆ ಹಾಲು ಕೊಡಿ ಅಂತ ಭಿಕ್ಷೆ ಕೇಳೋ ಯಾಸ, ಚಟ್ಟ ಹೊತ್ತು ಕುಣಿವ ನಾಕು ಮಂದಿ, ಬುಟ್ಟಿಯಲ್ಲಿ‌ ಮುತ್ಯಾಲಮ್ಮನನ್ನು ಕೂರಿಸಿಕೊಂಡು ಮೈಮೇಲೆ ಚಾಟಿ ಬೀಸಿಕೊಳ್ಳುವವರು.. ಒಂದೇ ಎರಡೆ ಸಾಲು ಸಾಲು ವೇಷ ಧರಿಸಿ ಕುಣಿಯೋ ಮಂದಿ. ಕುಣಿಯುವಾಗ ಬಾಬಯ್ಯನ‌ ಮಂತ್ರ ಅಂತ ಹೇಳುತ್ತಾರೆ. “ಏರೇಪಳೆಮ್ಮೋ ಡಿಮ್” ಅಂತ ವಿಚಿತ್ರವಾಗಿ ಹೇಳುತ್ತಾ ವೃತ್ತಾಕಾರವಾಗಿ ತಮಟೆ, ಕೊಂಬು, ಕಹಳೆಗಳ ಮೇಳಕ್ಕೆ ತಕ್ಕಂತೆ ಕುಣಿತ.

ಹುಲಿ ವೇಷ

ಕೊನೆಯ ಮೂರು ದಿನಗಳ ಕುಣಿತ ಬಲು ಜೋರು. ಆರಂಭದ ದಿನಗಳಲ್ಲಿ ಒಂದೆರಡು ಗಂಟೆ ಕುಣಿಯುವ ಈ ದಂಡು, ಕೊನೆಯ ಮೂರು ದಿನಗಳಲ್ಲಿ ಬೇರೆ ಊರುಗಳಿಗೂ ಹೋಗುತ್ತಿತ್ತು. ಒಂದು ದಿನ ಚಿಕ್ಕಮಾಲೂರಿನಿಂದ ಹೊರಟು, ತಿಗಳರಹಳ್ಳಿ, ಕಾಳೇನಳ್ಳಿ, ವೀರಾಪುರದಲ್ಲಿ ಕುಣಿದರೆ ಮತ್ತೊಂದು ದಿನ ಕೆಂಪಾಪುರ, ಅಕ್ಕಳಾಪುರ, ಅಳ್ಳೀಮರದಳ್ಳಿಗಳಲ್ಲಿ ಕುಣಿಯುತ್ತಿತ್ತು. ಅವರುಗಳೂ ಇಲ್ಲಿ ಬಂದು ಕುಣಿಯುತ್ತಿದ್ದರು.

ಅಷ್ಟೂ ದಿನ ಬಾಬಯ್ಯನ ಪೂಜೆ ಮಾಡಲು ಕಾಳೇನಳ್ಳಿಯಿಂದ ಪೂಜೇ ಮಾಡುವ ವಂಶದ ವಾರಸುದಾರರನ್ನು ಕರೆಸುತ್ತಿದ್ದರು. ಮೊದಲೆಲ್ಲಾ ಅವರಿಗೆ ಊರ ಜನ ಆಯ ಅಂತ ಕೊಡುತ್ತಿದ್ದರು. ಬೆಳೆದ ಬತ್ತದ ಹೊರೆ, ರಾಗಿ ತೆನೆ, ಬೆಲ್ಲ, ಕಾಳು – ಕಡಿ ಕೊಡುವ ಪದ್ಧತಿಯಿತ್ತು. ಈಗ ಐದಾರು ಸಾವಿರ ಕೊಟ್ಟು ಕರೆಸುತ್ತಾರೆ.

ಕೊನೆ ದಿನ ಕುಣಿತಕ್ಕೆ ಮೆರುಗು ಕೊಡುವುದು ಹುಲಿ ಯಾಸ ಹಾಗೂ ಕರಡಿ ಕುಣಿತಗಳು. ಹುಲಿಗಳನ್ನು ಹಗ್ಗದಲ್ಲಿ ಕಟ್ಟಿ ಹಿಡಿದು ಬರುವವನೊಬ್ಬ, ಎರಡು ಗಂಡು ಹುಲಿಗಳು, ಒಂದು ಮರಿ ಹುಲಿ ಅಂತಾ ಹಳದಿ ಬಣ್ಣದ ಪಟ್ಟೆ ಬಳಿದುಕೊಂಡು, ಥೇಟ್ ಹುಲಿಯಂತೆಯೇ ಹೆದರಿಕೆ ಹುಟ್ಟಿಸುವಂತೆ ಮೈಮೇಲೆ ಬೀಳುವ ಕುಣಿತವಿದು. ಕರಡಿ ವೇಷ ಹಾಕಿ ಕುಣಿಯುವವರೂ ಇವರೊಂದಿಗೆ ಸೇರುತ್ತಾರೆ. ಆಗೆಲ್ಲಾ ಕರಡಿ ಕುಣಿಸುವವರೇ ಬರುತ್ತಿದ್ದರು. ಈಗ ನಮ್ಮೂರಿನ ಪಡ್ಡೆಗಳೆ ಕರಡಿಗಳು.

ಅಂತಿಮ ಶಾಸ್ತ್ರ ವಿಧಿಗಳು

ಕೊನೆಯ ದಿನ ಹೊತ್ತು ಮುಳುಗಿದ ಮೇಲೆ ಚಾವಡಿಯ ಮುಂದೆ ತೋಡಿದ ಹೊಂಡದಲ್ಲಿ ಕೆಂಡ ಮಾಡುತ್ತಿದ್ದರು. ರಾತ್ರಿಯಿಡೀ ಕೊಂಡ ಹಾಯುವವರ ಭರಾಟೆ. ಪೂಜೆ ಮಾಡುವವರು ಕೈಯಿಂದಲೇ ಕೆಂಡ ಹಿಡಿದು, ಮೈಮೇಲೆ ಎರಚಿಕೊಳ್ಳುತ್ತಿದ್ದುದು ಮೈ ಜುಮ್ಮೆನ್ನಿಸುತ್ತಿತ್ತು. ಹರಕೆ ಹೊತ್ತ ಊರ ಮಂದಿ ಸಾಲಾಗಿ ಕೊಂಡ ಹಾದು ಪುನೀತರಾಗುತ್ತಿದ್ದರು. ಹೊತ್ತು ಹುಟ್ಟೊ ಮುಂಚೆ, ಅಲ್ಲಾನ ಕೂಗು ಕೇಳೋ ಮುಂಚೆಯೇ ಈ ಆಚರಣೆ ‌ಮುಕ್ತಾಯಗೊಳ್ಳುತ್ತಿತ್ತು. ನಂತರ ಆ ಹೊಂಡ ಮುಚ್ಚಿ, ಗೋರಿಯಂತೆ ರೂಪು ಕೊಟ್ಟು ಅದನ್ನು ಅಲಂಕರಿಸುತ್ತಿದ್ದರು. ನಂತರ ಊರ ತೊರೆಯ ಬಳಿ ಎಲ್ಲರೂ ಸೇರುತ್ತಿದ್ದರು. ಕೋಲಿನಿಂದ ಬಾಬಯ್ಯನ ಸಂಕೇತಗಳಾದ ರೇಖುಗಳನ್ನು ಇಳಿಸಿ ಮಣ್ಣಿನಲ್ಲಿ‌ ಹೂಳುವ ಶಾಸ್ತ್ರ ಮಾಡುತ್ತಿದ್ದರು. ಅಲ್ ವಿದಾಯ ಅಂತ ಅಳುತ್ತಾ, ಬಾಯಿ ಬಡಿದುಕೊಳ್ಳುತ್ತಾ ಊರ ಕಡೆ ಮರಳುತ್ತಿದ್ದರು. ಅಲ್ಲಿಗೆ ಹಬ್ಬ ಮುಗಿಯಿತು. ಆ ರೇಖುಗಳನ್ನು ಮರಳಿ ಪೆಟ್ಟಿಗೆಯಲ್ಲಿ ಮುಚ್ಚಿಡುತ್ತಿದ್ದರು. ಮೂರು ದಿನದ ನಂತರ ತೊರೆಯ ಬಳಿ ಮತ್ತೊಮ್ಮೆ ಹೋಗಿ ಏನೇನೋ ಶಾಸ್ತ್ರ ಮುಗಿಸುತ್ತಿದ್ದರು.‌ ಅಂದು ಬಾಬಯ್ಯನ ಪೂಜಾರಕರು ಅಲ್ಲಿ ನೆರೆದ ಮಂದಿಗೆಲ್ಲ ಕೂಳು‌ ಹಾಕಬೇಕು. ಅವರು ಸಿಹಿ ಚಪಾತಿಯಂತಹದನ್ನು ಮನೆಯಲ್ಲಿ ಮಾಡಿಸಿಕೊಂಡು ಬಂದು ಎಲ್ಲರಿಗೂ ಚರ್ಪಿನಂತೆ ಹಂಚುತ್ತಿದ್ದರು. ಅಲ್ಪ ಸ್ವಲ್ಪ ಬದಲಾವಣೆಗಳಾಗಿದ್ದರೂ ಇಂದಿಗೂ ಬಾಬಯ್ಯನ ಹಬ್ಬ ಅಂದ್ರೆ ನನ್ನೂರಿನ ಜನಕ್ಕೆ ಬಲು ಖುಷಿ. ತಿಂಗಳೊಪ್ಪತ್ತಿನಿಂದಲೇ ತಯಾರಿಯೂ ಜೋರು.

ಬಹುತ್ವ ಭಾರತ

ಬಹುತ್ವ ಭಾರತದ ಪರಿಕಲ್ಪನೆಗೆ ಇಂಬು ಕೊಡುವ, ಸರ್ವಜನಾಂಗದ ಶಾಂತಿಯ ತೋಟದ ಸಾಮರಸ್ಯ ಸಾರುವ ಇಂತಹ ಸಂಭ್ರಮಾಚರಣೆಗಳು ಗೋಡೆಗಳನ್ನು ಕೆಡವಿ, ಮುರಿದ ಮನಸ್ಸುಗಳನ್ನು ಪ್ರೀತಿಯ ಬೆಸುಗೆಯಿಂದ ಕೂಡಿಸುತ್ತವೆ.

ಜಾತಿ ಧರ್ಮಗಳ ಬೇಲಿ ಕಳಚಿ, ಅಪ್ಪಟ ಮನುಷ್ಯತ್ವ ತೋರುವ ಮುಗ್ಧ ಮನಗಳ ನಂಬಿಕೆಯಿದು. ಇದು ಮುಸಲ್ಮಾನರ ಹಬ್ಬ. ಆದರೆ ಇಲ್ಲಿ ಅದನ್ನು ಆಚರಿಸುವವರು ಹಿಂದೂಗಳು. ಇದು ಊರ ಮಂದಿಗೆ ಮನರಂಜನೆಯೂ ಹೌದು ಭಕ್ತಿ ಸಮರ್ಪಣೆಯೂ ಹೌದು. ಎರಡೂ ಮಿಳಿತಗೊಂಡ ವಿಶಿಷ್ಟ ಪದ್ಧತಿಯಿದು. ಊರ ಜನರೆಲ್ಲಾ ಒಂದು ವಾರ ಒಂದೆಡೆ ಸೇರಿ ನಲಿಯಲು ಅವಕಾಶ ಕಲ್ಪಿಸುತ್ತದೆ ಬಾಬಯ್ಯನ ಹಬ್ಬ. ಪರಿಷೆಯ ಪರಿಸರವೊಂದು ಪಸರಿಸುತ್ತದೆ. ಈ ವರ್ಷ ಮುಗಿದೊಡನೆ ಮತ್ತೆ ಮುಂದಿನ ವರ್ಷದ ಕುಣಿತಕ್ಕಾಗಿ ಲೆಕ್ಕಾಚಾರ ಶುರುವಿಟ್ಟುಕೊಳ್ಳುವ ಮನಗಳ ಸಂಭ್ರಮ ನಿರಂತರ.