ದೂರದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅಪ್ಪನ ದೃಷ್ಠಿ ಶೂನ್ಯದಿಂದ ಮರಳಿರಲಿಲ್ಲ. ಮನಸ್ಸು ಗತಕಾಲದ ಕಡೆಗೆ ಹೊರಳಿತು. ಇವಳನ್ನು ತುಂಬಾ ಇಷ್ಟಪಟ್ಟು ಕಟ್ಟಿಕೊಂಡಿದ್ದೆ. ಹೊಸದರಲ್ಲೆಲ್ಲಾ ಚೆನ್ನಾಗಿಯೇ ಇತ್ತು, ಅಥವಾ ಬಿಸಿಯಲ್ಲಿ ಗೊತ್ತಾಗಲಿಲ್ಲವೆನೋ!? ಮದುವೆ ಆದ ಆರು ತಿಂಗಳಿಗೆ, ಮಲ್ಲಿಗೆ ಹೂವು ತರಲು ಮರೆತೆನೆಂದು ಮಾಡಿದ ಹಗರಣ ಮನಸ್ಸನ್ನು ತುಂಬಾ ಕದಡಿಬಿಟ್ಟಿತು. ಅಂದಿನಿಂದ ಅವಳೇ ಬೇಡ ಸಾಕು ಎನ್ನುವ ವರೆಗೆ ಫ್ರಿಡ್ಜ್‌ನಲ್ಲಿ ತರಕಾರಿ ಇಲ್ಲದಿದ್ದರೂ, ಮಲ್ಲಿಗೆ ಹೂವು ಮಿಸ್ ಆಗದಂತೆ ನೋಡಿಕೊಂಡಿದ್ದು ನನಗಿನ್ನೂ ನೆನಪಿದೆ. ಅವಳು ಮಲ್ಲಿಗೆ ಹೂವು ಸಾಕು ಅನ್ನಲು ಕಾರಣವಾಗಿದ್ದು ಮಾತ್ರ ಒಂದು ವಿಚಿತ್ರ ಘಟನೆ.
ಮೋಹನ್ ಮಂಜಪ್ಪ ಬರೆದ ಕಥೆ “ಹಣೆಬರಹ” ನಿಮ್ಮ ಈ ಭಾನುವಾರದ ಓದಿಗೆ
ಆಸ್ಪತ್ರೆಯ ಕಾಂಪೋಂಡಿನ ಒಳಗಿದ್ದ ಕಲ್ಲುಬೆಂಚಿನ ಮೇಲೆ ನಿರ್ಲಿಪ್ತನಾಗಿ ಶೂನ್ಯದತ್ತ ದೃಷ್ಠಿ ನೆಟ್ಟು ಕೂತಿದ್ದೆ. ಸುಮಾರು ರಾತ್ರಿ ಏಳೂವರೆ ಸಮಯ; ಕಾಂಪೋಂಡಿನ ಒಳಗೆ ಬೃಹದಾಕಾರವಾಗಿ ಬೆಳೆದಿದ್ದ ಮರ ದೂರದೆಲ್ಲೆಲ್ಲೊ ಇದ್ದ ಟ್ಯೂಬ್ ಲೈಟಿಂದ ಬೀಳುತ್ತಿದ್ದ ಬೆಳಕಿಗೆ ಆಸ್ಪತ್ರೆಯ ಗೋಡೆಯ ಮೇಲೆ ವಿಚಿತ್ರವಾದ ಆಕಾರಗಳನ್ನು ಸೃಷ್ಟಿಸುತ್ತಿತ್ತು. ದೂರದ ಇನ್ನೊಂದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಅಪ್ಪನಿಗೆ ಇಂದು ನಡೆದದ್ದೆಲ್ಲವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಮೊದಲಿಂದಲು ಸಮಾಜಕ್ಕೆ, ಮಾನ ಮರ್ಯಾದೆಗೆ ಅಂಜಿ ಬಾಳಿದ್ದ ಅಪ್ಪನಿಗೆ ಈ ಅನಿರೀಕ್ಷಿತ ಘಟನೆ, ಮುಂದಾಗಬಹುದಾದ ರಾಮಾಯಣಗಳನ್ನು ನೆನೆದು ಮುಖದ ಸುಕ್ಕುಗಳು ಇನ್ನಷ್ಟು ಎದ್ದು ಕಾಣುತ್ತಿತ್ತು.
ಸ್ಟೇಟ್ಮೆಂಟು ತೆಗೆದುಕೊಳ್ಳಲು ಬಂದಿದ್ದ ಪೋಲಿಸ್ ಕಾನ್ಟೇಬಲ್ ನನ್ನತ್ತಲೆ ಬರುತ್ತಿರುವುದು ಕಾಣಿಸಿ ಎದ್ದು ನಿಂತೆ. ನಾನಂತೂ passport ವೆರಿಫಿಕೇಷನ್ ಬಿಟ್ಟು ಬೇರೆ ಯಾವುದೇ ಕಾರಣಕ್ಕೂ ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತದೆ ಇದ್ದವನು. ಇವಳನ್ನು ಇಷ್ಟಪಟ್ಟು ಕಟ್ಟಿಕೊಂಡಿದ್ದಕ್ಕೆ ಏನೇನು ಅನುಭವಿಸಬೇಕೊ… ಏನಾಗುತ್ತೊ ಆಗೇ ಬಿಡ್ಲಿ, ಮನಸ್ಸನ್ನು ಗಟ್ಟಿಮಾಡಿಕೊಳ್ಳಲು ಪ್ರಯತ್ನ ಮಾಡಿದೆ. ಆತ ಬಂದು ಪಕ್ಕ ಕುಳಿತವನೆ “ನಿಮ್ಮ ಮನೆಯವರು ತುಂಬಾ ಒಳ್ಳೆಯವ್ರು ಸಾರ್, ನಾನು ಎಷ್ಟು force ಮಾಡಿದ್ರು ಬಾಯೆ ಬಿಡಲಿಲ್ಲಾ; ಕಣ್ಣು ತಂಬಾ ನೀರು ತುಂಬಿಕೊಂಡು ಸುಮ್ನೆ ಕುಳಿತಿದ್ರು” ಎಂದ. ಹೇಳೊಕ್ಕೆ ಏನಾದ್ರು ಇದ್ರೆ ತಾನೇ… ಮನಸ್ಸಿಗೆ ಬಂದ ಮಾತು ಗಂಟಲಿಂದ ಹೊರಗೆ ಬರಲಿಲ್ಲ. “ಹೆಣ್ಮಕ್ಕಳು ಹೂವಿನ ಥರ ಸಾರ್, ನಾನೂ ನನ್ನ ಹೆಂಡತಿ ಜೊತೆ ಜಗಳ ಆಡ್ತೀನಿ, ಅವಳ ಮುಖದ ಮೇಲೆ ಬಾರುಸ್ತೀನಿ; ಆಮೇಲೆ ನಾನೆ ಕುಶಾಲು ಮಾಡಿ ಸಮಾಧಾನ ಮಾಡಿಬಿಡ್ತೀನಿ”, ನಾನು ಬಲವಂತವಾಗಿ ನಗಲು ಪ‌್ರಯತ್ನಿಸುತ್ತಿರುವಂತೆ ಮುಂದುವರೆಸಿದ.
“ಹೆಣ್ಮಕ್ಕಳನ್ನು ಪೊಲಿಸ್ ಸ್ಟೇಷನ್, ಕೋರ್ಟು ಮೆಟ್ಟಿಲು ಹತ್ತೊಕೆ ಬಿಡಬಾರ್ದು ಸಾರ್, ಒಂದು ಸಲ ಹೋದ್ರು ಅಂದ್ರೆ ಆಮೇಲೆ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ”. ಈತ ನನ್ನ ಕಸಿನ್ನಿಗೆ ಪರಿಚಯದವನಾಗಿರದಿದ್ರೆ ಇಷ್ಟೆ ಮರ್ಯಾದೆಯಿಂದ ಮಾತಾಡಿಸ್ತಾ ಇದ್ನಾ? ಮನಸ್ಸು ಲೆಕ್ಕಾಚಾರ ಶುರು ಮಾಡ್ತು. “ಸ್ಟೇಷನ್ಗೆ ಬಂದು ಒಂದು ಸ್ಟೇಟ್ಮೆಂಟ್ ಕೊಟ್ಟು ಹೋಗಿ ಸಾರ್” ಎಂದವನೆ ಅಲ್ಲಿಂದ ಹೊರಟು ಬಿಟ್ಟ.
ಹೌದು, ನನ್ನ ಹೆಂಡತಿ ನೋಡೊಕ್ಕೆ ಗುಲಾಬಿ ಹೂವಿನಂತೆ ಸೌಮ್ಯವಾಗೇ ಕಾಣಿಸುತ್ತಾಳೆ. ಹೂವಿನ ಜೊತೆಗೆ ಇರೊ ಮುಳ್ಳು ಚುಚ್ಚಿಸಿಕೊಂಡೋರಿಗೆ ಅಷ್ಟೇ ನೋವು ಗೊತ್ತಾಗೋದು. ಸ್ವಭಾವತಃ ಕೆಟ್ಟವಳೇನು ಅಲ್ಲ, ಅದ್ರೆ ಮಹಾನ್ ಹಠಮಾರಿ ಹೆಣ್ಣು. ಎಲ್ಲದಕ್ಕೂ ಮಕ್ಕಳ ಹಾಗೆ ಹಠ. ಇದು ಬೇಕು ಅಂದರೆ ಬೇಕೇಬೇಕು, ಅದೂ ಆ ಕ್ಷಣದಲ್ಲೆ. ಗ್ರಾಜ್ಯುಯೇಟ್ ಆಗಿದ್ರೂ ವ್ಯವಹಾರ ಜ್ಞಾನ ಕಮ್ಮಿ. ಎಲ್ಲದೂ ತನ್ನದೇ ಮೂಗಿನ ನೇರಕ್ಕೆ ಆಗಬೇಕು ಅನ್ನೋ ಧಾರ್ಷ್ಟ್ಯ, ಅವಳ ತಾಳಕ್ಕೆ ತಕ್ಕಂತೆ ಕುಣಿಯೋಕೆ ನನ್ನನ್ನೇನು ಟೈಲರ್ ರಾಮಣ್ಣ ಅನ್ಕೊಂಡಿದ್ದಾಳಾ? ಟೈಲರ್ ರಾಮಣ್ಣನನ್ನು ನೆನೆಸಿಕೊಂಡು ಅಂತಹ ಪರಿಸ್ಥಿತಿಯಲ್ಲೂ ನಗು ಬಂತು.
ರಾಮಣ್ಣ ನಮ್ಮೂರಿನ ಜೆಂಟ್ಸ್ ಟೈಲರ್. ಊರಿನಲ್ಲಿದ್ದ ಎರಡೇ ಎರಡು ಮುಖ್ಯ ರಸ್ತೆಗಳು ಛೇದಿಸುವ ಜಾಗವನ್ನು ಯಾಕೆ `ಕಟ್ಟೆ ಬಾಗಿಲು` ಎಂದು ಕರೆಯುತ್ತಾರೆಂದು ನನಗೆ ತಿಳಿಯದು. ಕಟ್ಟೆ ಬಾಗಿಲಿನ ಮೂಲೆಯಲ್ಲೊಂದು ಆತನ ಪುಟ್ಟ ಟೈಲರ್ ಶಾಪ್ ಅಂಗಡಿ. ಊರಿಂದ ಹೊರಗಡೆ ಗುಡ್ಡದ ಮೇಲಿದ್ದ ಒಂದೇ ಒಂದು ಗವರ್ನಮೆಂಟ್ ಹೈಸ್ಕೂಲಿಗೆ ಹೋಗಲು ನಾವು ದಿನ ಆತನ ಅಂಗಡಿ ಮುಂದೇ ಹಾದು ಹೋಗಬೇಕಿತ್ತು. ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಸುಮಾರು ೫ ಅಡಿ ಎತ್ತರದ ಆಳಾಗಿದ್ದ ಆತ – ಒಂದೋ ಆತನ ಹಳೆಯ ಟೈಲರಿಂಗ್ ಮೆಶೀನು ತುಳಿಯುತ್ತಲೊ, ಹೊಲೆದು ಮುಗಿಸಿದ್ದ ಪ್ಯಾಂಟಿಗೆ ಹುಕ್ ಹಾಕುತ್ತಲೊ, ಇಲ್ಲಾ.. ಬಟ್ಟೆ ಐಯರ್ನ್ ಮಾಡಲು ತನ್ನ ಹಳೆ ಇದ್ದಿಲಿನ ಇಸ್ತ್ರಿ ಪೆಟ್ಟಿಗೆಗೆ ರಟ್ಟಿನಿಂದ ಗಾಳಿ ಹಾಕುತ್ತಲೊ ದರ್ಶನ ನೀಡುವುದು ಸಾಮಾನ್ಯ ದೃಶ್ಯವಾಗಿತ್ತು. ಯಾವಾಗಲೂ ಒಂದು ಕೇಸರಿ ಪಂಚೆ, ಚೆಕ್ಸು ಶರ್ಟು ಧರಿಸಿರುತ್ತಿದ್ದ ಆತನ ಹಣೆಯ ಮೇಲೆ ಕೆಂಪು ತಿಲಕ ಮಿಸ್ ಆಗಿದ್ದನ್ನು ಕಂಡ ನೆನಪೇ ಇಲ್ಲ. ಆ ಕಾಲಕ್ಕೆ ಆತ ಸ್ಟೇಟ್ ಲೆವೆಲ್ ಖೋಖೋ ಫ್ಲೇಯರ್ ಅಂತ ಪರಿಚಯದವರು ಹೇಳುತ್ತಿದ್ದರು. ಇಂಥಾ ರಾಮಣ್ಣನಿಗೆ ಮದುವೆ ಆಗಿ ಎರಡು ಮಕ್ಕಳಾದ ಮೇಲೆ ಜೀವನದ ಲಯ ತಪ್ಪಿತು. ಆತನ ಹೆಂಡತಿ ಸಾವಿತ್ರಮ್ಮ ಹುಟ್ಟು ಗಯ್ಯಾಳಿ ಹೆಂಗಸು – ಪುರಾಣದ ಆ ಸಾವಿತ್ರಿ ಗಂಡನ ಜೀವಕ್ಕಾಗಿ ಯಮನೊಂದಿಗೆ ಸೆಣಸಿದರೆ… ಕಲಿಯುಗದ ಈ ಸಾವಿತ್ರಿ ಗಂಡನ ಜೀವವನ್ನೇ ಮುಕ್ಕುತ್ತಾ ನಿತ್ಯವೂ ಯಮಪುರಿಯ ದರ್ಶನ ಮಾಡಿಸುತ್ತಿದ್ದಳು. ದಿನ ಕಳೆದಂತೆ ಆತನ ತಿಲಕ ಎಲ್ಲೋ ಮಾಯವಾಯಿತು – ಉಡುಗೆ ತೊಡುಗೆಯಲ್ಲಿನ ಓರಣ ಮರೆಯಾಯಿತು; ಬರುಬರುತ್ತಾ ಗಾಳಿಯಲ್ಲಿ ಕೈಸನ್ನೆ ಮಾಡುತ್ತಾ ಒಬ್ಬನೆ ರಸ್ತೆಯಲ್ಲಿ ನಗುತ್ತಾ, ಮಾತಾಡುತ್ತಾ ಓಡಾಡಲು ಶುರು ಮಾಡಿದ. ಅವನ ಗಯ್ಯಾಳಿ ಹೆಂಡತಿ ಮನೆಯಲ್ಲಿ ಮಾತಾಡಲು ಅವಕಾಶ ನೀಡದೇ ಇರೋದಕ್ಕೆ ಪಾಪ ರಾಮಣ್ಣ ರಸ್ತೆಯಲ್ಲಿ ಹೀಗೆ ಒಬ್ಬಂಟಿಯಾಗಿ ಮಾತಾಡ್ತಾ ಇರ್ತಾನೆ ಅಂಥ ಪರಿಚಯಸ್ಥರು ಸಹಾನುಭೂತಿ ತೋರಿಸಿದರು.
ಅದು ಎಷ್ಟು ಅತಿರೇಕಕ್ಕೆ ಹೋಯಿತೆಂದರೆ, ರಸ್ತೆಯಲ್ಲಿ ಹೀಗೆ ಸಾಗುವಾಗ ಯಾರಾದ್ರು ಮುಖಪರಿಚಯಸ್ಥರು ಸಿಕ್ಕಿ “ಕಾಫಿ ಅಯ್ತಾ ರಾಮಣ್ಣ?” ಅಂದ್ರೆ ಸಾಕು, “ನಾನು ಇಲ್ಲಿದ್ದೆ ಅಂಥಾ ನನ್ನ ಹೆಂಡತಿಗೆ ಮಾತ್ರ ಹೇಳ್ಬೇಡಿ ಮಾರಾಯ್ರೆ!” ಅಂಥಾ ದುಂಬಾಲು ಬೀಳ್ತಿದ್ದ. ಆತನನ್ನು ಈ ಪಾಟಿ ಹೆದರಿಸಲು ಆ ಪುಣ್ಯಾತ್ಗಿತ್ತಿ ಗಂಡನಿಗೆ ಅದ್ಯಾವ ಶಿಕ್ಷೆ ಕೊಡುತ್ತಿದ್ದಳೋ ಎನ್ನುವುದು ನನ್ನನ್ನು ಇಂದಿಗೂ ಕಾಡುವ ಯಕ್ಷಪ್ರಶ್ನೆ.
ದೂರದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅಪ್ಪನ ದೃಷ್ಠಿ ಶೂನ್ಯದಿಂದ ಮರಳಿರಲಿಲ್ಲ. ಮನಸ್ಸು ಗತಕಾಲದ ಕಡೆಗೆ ಹೊರಳಿತು. ಇವಳನ್ನು ತುಂಬಾ ಇಷ್ಟಪಟ್ಟು ಕಟ್ಟಿಕೊಂಡಿದ್ದೆ. ಹೊಸದರಲ್ಲೆಲ್ಲಾ ಚೆನ್ನಾಗಿಯೇ ಇತ್ತು, ಅಥವಾ ಬಿಸಿಯಲ್ಲಿ ಗೊತ್ತಾಗಲಿಲ್ಲವೆನೋ!? ಮದುವೆ ಆದ ಆರು ತಿಂಗಳಿಗೆ, ಮಲ್ಲಿಗೆ ಹೂವು ತರಲು ಮರೆತೆನೆಂದು ಮಾಡಿದ ಹಗರಣ ಮನಸ್ಸನ್ನು ತುಂಬಾ ಕದಡಿಬಿಟ್ಟಿತು. ಅಂದಿನಿಂದ ಅವಳೇ ಬೇಡ ಸಾಕು ಎನ್ನುವ ವರೆಗೆ ಫ್ರಿಡ್ಜ್‌ನಲ್ಲಿ ತರಕಾರಿ ಇಲ್ಲದಿದ್ದರೂ, ಮಲ್ಲಿಗೆ ಹೂವು ಮಿಸ್ ಆಗದಂತೆ ನೋಡಿಕೊಂಡಿದ್ದು ನನಗಿನ್ನೂ ನೆನಪಿದೆ. ಅವಳು ಮಲ್ಲಿಗೆ ಹೂವು ಸಾಕು ಅನ್ನಲು ಕಾರಣವಾಗಿದ್ದು ಮಾತ್ರ ಒಂದು ವಿಚಿತ್ರ ಘಟನೆ.
ಹೀಗೆ ಮಲ್ಲಿಗೆ ಹೂವು ಮುಡಿದುಕೊಂಡು, ಯಾವುದೋ ಫಂಕ್ಷನ್‌ಗೆ ಹೋಗುವವಳಂತೆ ರೆಡಿಯಾಗಿದ್ದ ಅವಳನ್ನು ಕರೆದುಕೊಂಡು ವೀಕೆಂಡ್ ಶಾಪಿಂಗಿಗೆ ಹೋಗಿದ್ದವನಿಗೆ, ಕಾರ್ ಪಾರ್ಕಿಂಗ್ ಸಿಗದೆ, ಇಲ್ಲೇ ನಿಂತಿರು ಎಂದು ಫುಟ್‌ಪಾತ್‌ನಲ್ಲಿ ಇಳಿಸಿ, ಪಾರ್ಕಿಂಗಿಗೆ ಜಾಗ ಹುಡುಕಿ ಕಾರ್ ನಿಲ್ಲಿಸಿ ವಾಪಾಸ್ ಬಂದವನ ಕೈ ಹಿಡಿದುಕೊಂಡು ತುಂಬಾ ಗಲಿಬಿಲಿಗೊಂಡಂತಿದ್ದ ಆಕೆ “ಸದ್ಯ, ಬಂದ್ರಲ್ಲಾ!” ಅಂತ ನಿಟ್ಟುಸಿರು ಬಿಟ್ಟಳು. ಫುಟ್‌ಪಾತ್‌ನಲ್ಲಿ ನಿಂತಿದ್ದ ಇವಳನ್ನು ನೋಡಿ ಯಾರೋ ಇಬ್ಬರು ದುಡ್ಡು ತೋರಿಸಿ ಅಸಭ್ಯವಾಗಿ ಕೈಸನ್ನೆ ಮಾಡಿದರಂತೆ. ನಾನು ಬಂದ ಕೂಡಲೆ ಕಳ್ಳರಂತೆ ರಸ್ತೆ ದಾಟಿ ದೂರ ಹೋಗುತ್ತಿದ್ದ ಇಬ್ಬರು ಆಸಾಮಿಗಳು ಕಾಣಿಸಿದರು. ನಗರದಲ್ಲಿ ಹಬ್ಬ, ಹರಿದಿನ ಬಿಟ್ಟು ಬೇರೆ ದಿನ ಮಲ್ಲಿಗೆ ಹೂವು ಮುಡಿಯುವವರನ್ನು ನಾನು ಕಂಡಿಲ್ಲ. ನನ್ನ ಸಹೋದ್ಯೋಗಿಗಳು ಕೂಡಾ ಎತ್ನಿಕ್‌ಡೇ ಹೊರತು ಪಡಿಸಿ ಹೂವು ಮುಡಿದು ಬಂದಿದ್ದನ್ನು ನಾ ಕಾಣೆ. ಹೂವು ಮುಡಿಯುವವರನ್ನು ಬೆಲೆವೆಣ್ಣುಗಳಂತೆ ಕಾಣುವ ಸಮಾಜದ ಈ ವಿಕೃತಿಗೆ ಏನು ಹೇಳಬೇಕೋ!?
ದೂರದ ಇನ್ನೊಂದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಅಪ್ಪನಿಗೆ ಇಂದು ನಡೆದದ್ದೆಲ್ಲವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಮೊದಲಿಂದಲು ಸಮಾಜಕ್ಕೆ, ಮಾನ ಮರ್ಯಾದೆಗೆ ಅಂಜಿ ಬಾಳಿದ್ದ ಅಪ್ಪನಿಗೆ ಈ ಅನಿರೀಕ್ಷಿತ ಘಟನೆ, ಮುಂದಾಗಬಹುದಾದ ರಾಮಾಯಣಗಳನ್ನು ನೆನೆದು ಮುಖದ ಸುಕ್ಕುಗಳು ಇನ್ನಷ್ಟು ಎದ್ದು ಕಾಣುತ್ತಿತ್ತು.
“ಅಣ್ಣ she is out of danger ಅಂತೆ, ಬೇಕಿದ್ರೆ ICU ಗೆ ಹೋಗಿ ನೋಡಬಹುದು ಅಂತಾ ಡಾಕ್ಟರ್ ಹೇಳಿದ್ರು” ಸೋದರ ಸಂಬಂಧಿ ಬಂದು ಹೇಳಿದಾಗ ಹು ಎಂದೆನಾದರೂ ಕಾಲು ಕೂತಲ್ಲಿಂದ ಕದಲಲಿಲ್ಲ. ನನ್ನ ಪಾಲಿಗೆ ಅವಳಾಗಲೆ ಹೋಗಿ ಆಗಿತ್ತು. ಮನಸ್ಸಿನ ತುಂಬಾ ಸೂತಕದ ಛಾಯೆ. ನಾಳೆ ನ್ಯೂಸ್ ಪೇಪರ್ರಿನಲ್ಲಿ “ಗೃಹಿಣಿ ಆತ್ಮಹತ್ಯೆ ಯತ್ನ” ಅಂತಾ ಬರುತ್ತಾ? ಪೇಪರ್ ಓದಿದ ಪ್ರತಿಯೊಬ್ಬರು ಗಂಡನ ಬಗ್ಗೆ, ಅವನ ಫ್ಯಾಮಿಲಿ ಬಗ್ಗೆ ಜಡ್ಜ್‌ಮೆಂಟಲ್ ಆಗಿ ಬಿಡುತ್ತಾನೆ. ಈ ಹಿಂದೆ ನಾನು ಕೂಡ ಅದನ್ನೆ ಮಾಡಿದ್ದೆ. ಯಾರ ಹಿಂದೆ ಯಾವ ಕಥೆ ಇರುತ್ತೊ ದೇವರೇ ಬಲ್ಲ. ಇನ್ನು ಮುಂದೆ ನನ್ನ ಯೋಚನಾಧಾಟಿಯನ್ನು ಬದಲಿಸಿಕೊಳ್ಳಬೇಕು ಅಂದುಕೊಂಡೆ. ಸತ್ಯಕ್ಕೆ ಕನಿಷ್ಟ ಮೂರು ವರ್ಷನ್ ಇರುತ್ತೆ. ನನಗೆ ಗೊತ್ತಿರೊ ಸತ್ಯ; ಬೇರೆಯವರಿಗೆ ಗೊತ್ತಿರೊ ಸತ್ಯ; ಕೊನೆಯದು ಸ್ಪಲ್ಪವೂ ತಿರುಚಿಲ್ಲದ ಶುದ್ಧ ಸತ್ಯ. ಪ್ರತಿಯೊಬ್ಬರು ತಮಗೆ ಇಷ್ಟವಾದ ವರ್ಷನ್ಅನ್ನು ಅಯ್ಕೆ ಮಾಡಿಕೊಂಡು ಅದಕ್ಕೆ ಬೇಕಾದ ಪುರಾವೆಯನ್ನು ಹುಡುಕಲು ತೊಡಗುತ್ತಾರೆ. ಇದು ನಾನು ಕಂಡುಕೊಂಡಿರುವ ಸತ್ಯ. ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಪುರಾವೆಯೇ ಹೇಗೆ ಸಿಕ್ಕುತ್ತೆಂಬುದು ಮಾತ್ರ ಚಿದಂಬರ ರಹಸ್ಯ! ಅದೆಲ್ಲಾ ಸರಿ, ಈ ಆಘಾತದಿಂದ ನಾನು ಹೊರಗೆ ಬರುತ್ತೀನಾ?
ಹೀಗೆ ಮದುವೆಯ ಹೊಸತರ ಒಂದು ಹಸಿಬಿಸಿ ರಾತ್ರಿಯಲ್ಲಿ, ಚಿನ್ನ, ರನ್ನ ಅಂತಾ ಮುದ್ದಿಸುತ್ತಾ ಉದ್ವೇಗದ ಭರದಲ್ಲಿ “ಬಂಗಾರಿ, ನಂಗೆ ನೀನು ಮಾತ್ರ ಬೇಕು” ಅಂದೆ. “ಹಾಗಾದ್ರೆ ನಿಮ್ಮಮ್ಮ!?” ಅವಳು ಹಾಗಂದ ಕೂಡಲೇ ತಲೆಗೆ ಏರಿದ್ದ ಪಿತ್ತ ಜರ್ರೆಂದು ಇಳಿದು ಹೋಯಿತು. ಪ್ರತಿ ಸಂಬಂಧಕ್ಕೊಂದು ಹಕ್ಕು ಮತ್ತು ಜವಾಬ್ದಾರಿ ಇರುತ್ತೆ. ಯಾವ ಹೊಸ ಸಂಬಂಧವು ಇನ್ನೊಂದು ಸಂಬಂಧವನ್ನು ಬದಲಾಯಿಸಲಾಗಲಿ, void ಮಾಡಲಾಗಲಿ ಸಾಧ್ಯವಿಲ್ಲವೆಂದು ನನಗೆ ತಿಳಿದ ಮಟ್ಟಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ. ಸುಮ್ಮನೆ ಹೂ ಎಂದಳಾದರೂ ಅದೇನು ಅವಳ ತಲೆಯ ಒಳಗೆ ಹೋದ ಹಾಗೆ ಅನ್ನಿಸಲಿಲ್ಲ. ಅವಳೇನು ಹೆಬ್ಬೆಟ್ಟಿನ ಹುಡುಗಿಯಲ್ಲ; ಪದವಿ ಪಡೆಯುವುದಕ್ಕೂ, ಪ್ರಬುದ್ಧತೆಗೂ ಯಾವುದೇ ಸಂಬಂಧ ಇಲ್ಲವೆಂದು ನನಗೆ ಆವತ್ತು ಮೊದಲ ಬಾರಿ ಅನ್ನಿಸಿತು.
ಸ್ಥಿತಿವಂತರ ಮನೆಯಿಂದ ಬಂದವಳೇನಲ್ಲ. ಬಡ ಮೇಷ್ಟ್ರ ಮಗಳು ತುಂಬಾ ಪ್ರೀತಿಸುತ್ತಾಳೆ, ಹೊಂದಿಕೊಂಡು ಹೋಗುತ್ತಾಳೆಂದುಕೊಂಡಿದ್ದು, ಅನಂತನಾಗ್ / ಲಕ್ಷಿ ಜೋಡಿಯ ಚಲನಚಿತ್ರಗಳನ್ನು ನೋಡಿ ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದ ನನ್ನದೇ ತಪ್ಪಿರಬಹುದು. ಆರಂಕಿಯ ಸಂಬಳ ಪಡೆದರೂ, ನನ್ನ ಬಳಿ ಇರುವುದ್ಯಾವುದು ನನ್ನದಲ್ಲ! ಎಂದುಕೊಳ್ಳುವ, ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ! ಎಂಬಾ ದಾಸವಾಣಿಯನ್ನು ಸಾಧ್ಯವಾದಷ್ಟು ಪಾಲಿಸಿ ಬದುಕುವ ನಾನು ಉತ್ತರ ಧ್ರುವ. ಇರುವ ಎಲ್ಲಾ ಪ್ರಾಪಂಚಿಕ ವಸ್ತು, ಸುಖಗಳೆಲ್ಲಾ ನನಗೇ ಬೇಕೆನ್ನುವ ಅವಳು ದಕ್ಷಿಣ ಧ್ರುವ. ಅದೇನೊ ನಮ್ಮ ವಿಷಯದಲ್ಲಿ ವಿರುದ್ಧ ಧ್ರುವಗಳು ಆಕರ್ಷಿಸಲೇ ಇಲ್ಲ! ಹಾಗಂತಾ ನಾನೇನು ಸನ್ಯಾಸಿಯ ಹಾಗೇನೂ ಬದುಕುವವನೇನಲ್ಲ. ವಸ್ತುಗಳ ಮೇಲೆ ಅವಳಿಗಿದ್ದ ಮೋಹ ಅತಿ ಎನಿಸಿದರೂ, ಮುಂಚೆ ಕಂಡವಳಲ್ಲವಾದ್ದರಿಂದ ಹಾಗಿರಬಹುದು ಎಂದು ಕಂಡದ್ದನ್ನೆಲ್ಲ, ಆಸೆಪಟ್ಟಿದ್ದನ್ನೆಲ್ಲಾ ತಂದು ಗುಡ್ಡೆ ಹಾಕುತ್ತಿದ್ದೆ. ಈ ವಸ್ತು ದಾಹ ಯಾವತ್ತಾದರು ತಣಿಯಬಹುದೆಂಬ ನನ್ನ ಅನಿಸಿಕೆ ಮರೀಚಿಕೆಯಾಗಿಯೆ ಉಳಿಯಿತು. ಇದನ್ನೇ wavelength ಮ್ಯಾಚಿಂಗ್ ಅನ್ನುತ್ತಾರಾ? ಮದುವೆಗೆ ಮುಂಚೆ ಜಾತಕ ಮ್ಯಾಚ್ ಮಾಡಿ ಗರಿಷ್ಠ ಗುಣಗಳನ್ನು ಹಾಕಿಕೊಟ್ಟ ಜ್ಯೋತಿಷಿಯನ್ನು ಹುಡುಕಿ ಅಟ್ಟಾಡಿಸಿಕೊಂಡು ಹೊಡೆಯಬೇಕಿನಿಸಿತು. ಅಥವಾ ಇದೆಲ್ಲಾ ಜ್ಯೋತಿಷ್ಯದ ವ್ಯಾಪ್ತಿಗೆ ಮೀರಿದ ವಿಚಾರವಾ? ಅಥವಾ ಇದನ್ನೇ ಹಣೆಬರಹ ಅಂತಾರೆನೋ!? ಅವಳ ಅಪ್ಪ, ಅಮ್ಮನಿಗೆ ತಿಳಿಸಿ ಸ್ವಲ್ಪ ಬುದ್ಧಿವಾದವನ್ನಾದ್ರು ಹೇಳಿಸೋಣವೆಂದು ಪ್ರಯತ್ನಿಸಿದೆ. ಅವರ ಮನೆಯಲ್ಲಿ ಮೇಷ್ಟ್ರದ್ದೇನು ನಡೆಯುವ ಹಾಗೆ ಕಾಣಿಸಲಿಲ್ಲ. ಎಲ್ಲಾ ಕೇಳಿಸಿಕೊಂಡ ಅವರಮ್ಮ ಮಹಾತಾಯಿ, ರಮಾಬಾಯಿಯ ಹಾಗೆ ಕೈಬಾಯಿ ತಿರುಗಿಸುತ್ತಾ, “ಅವಳು ಮುಂಚಿಂದನೂ ಸ್ವಲ್ಪ ಹಾಗೇ!” ಅಂದುಬಿಟ್ಟರು. ಈಗ ನೀನು ಅನುಭವಿಸು ಬಡ್ಡಿಮಗನೇ ಅಂದ ಹಾಗಾಯಿತು.
ಮದುವೆಗೆ ಮುಂಚಿನ ದಿನಗಳು. ಮದುವೆ, ಜೀವನಸಂಗಾತಿಯ ಬಗ್ಗೆ ನವಿರಾದ ಭಾವನೆಗಳ ಕಾಲ. ನನ್ನ ಸಹೋದ್ಯೋಗಿಗಳ ಜೊತೆಗೊಂದು ಟಾಪಿಕ್ ಬಂದಿತ್ತು. “Can there be sex without love?” ಮನಸ್ಸುಗಳು ಬೆರೆಯದೆ, ಒಬ್ಬರನ್ನೊಬ್ಬರು ಪ್ರೀತಿಸದೆ ದೇಹಗಳು ಬೆರೆಯಲು ಸಾಧ್ಯವೇ? ಮಿಲನ ಮಹೋತ್ಸವ ಸಾಧ್ಯವೇ ಇಲ್ಲವೆನ್ನುವುದು ನನ್ನ ವಾದ. ಅದಕ್ಕೆ ನನ್ನ ಸ್ನೇಹಿತ sexನ್ನು ನೀನು divine act ಮಾಡ್ತಿದಿಯಾ ಅಂದಿದ್ದ. ಮಿಲನ ಮಹೋತ್ಸವ ಸಂಗೀತದ ಆಲಾಪದ ಹಾಗೆ ನಿಧಾನವಾಗಿ ಅಲೆ ಅಲೆಯಾಗಿ ಮೇಲಕ್ಕೇರಿ ತಾರಕಸ್ಥಾಯಿಯಾಗಿ ಹಾಗೆ ನಿಧಾನವಾಗಿ ಕೆಳಗಿಳಿಯಬೇಕು – ಆಲಾಪ ಮುಗಿದ ಮೇಲೂ ಅದರ ಕಂಪನ ಹಿತವಾಗಿ ಅನುಭವ ಆಗಬೇಕು ಅಂದುಕೊಂಡಿದ್ದವನು ನಾನು. ಈಗ ಆ ವಾದಸರಣಿಯ ಇನ್ನೊಂದು ತುದಿಯಲ್ಲಿ ನನ್ನನ್ನು ನೋಡಿಕೊಳ್ಳಲು ನನಗೇ ಅಚ್ಚರಿಯಾಗುತ್ತಿದೆ. “Yes, there can be sex without love! and that’s called marriage!!”
ಹೀಗೆ ಒಂದಿನ ಯಾವುದೊ ಕ್ಷುಲ್ಲುಕ ಕಾರಣಕ್ಕೆ ಬೈದು ಬುದ್ಧಿ ಹೇಳಿ ಅಪ್ಪನೊಂದಿಗೆ ಯಾವುದೋ ಜಮೀನಿನ ಸರ್ವೆಗೆಂದು ಹೊರಗಡೆ ಬಂದಿದ್ದವನಿಗೆ, ಸೋದರ ಸಂಬಂಧಿ ಪೋನ್ ಮಾಡಿ “ಅಣ್ಣ, ಹೀಗಾಗಿ ಬಿಟ್ಟಿದೆ, ಏನು ತೊಂದರೆ ಇಲ್ಲ, ನಿಧಾನವಾಗಿ ಬನ್ನಿ” ಎಂದಾಗ ಆಕಾಶವೇ ತಲೆ ಮೇಲೆ ಬಿದ್ದ ಹಾಗಾಯಿತು. ನಿಜವಾಗಿ ಸಾಯುವವರು ಯಾರಿಗೂ ಗೊತ್ತಾಗದ ಹಾಗೆ ಕೆಲಸ ಮುಗಿಸಿಕೊಳ್ಳುತ್ತಾರೆ – ಎಲ್ಲರಿಗೂ ಗೊತ್ತಾಗೊ ಹಾಗೆ ಪ್ರಯತ್ನ ಮಾಡಿದ್ದಾಳೆ ಅಂದರೆ ಹೆದರಿಸೋದಕ್ಕೆ ಪ್ರಯತ್ನ ಮಾಡಿದಳಾ? ನಮ್ಮ ಬೀದಿಯ ಮುದುಕ ರಂಗಣ್ಣ ಸತ್ತ ದಿನದಿಂದ, ಅವರ ಮನೆಯ ಕಡೆಗಿದ್ದ ಬಾತ್ರೂಮ್ ಕಿಟಕಿಯನ್ನು ಆಕೆ ಪರ್ಮನೆಂಟಾಗಿ ಮುಚ್ಚಿದ್ದು ನೆನಪಾಯಿತು. ಹೆದರಿಸಲು ಹೋಗಿ, ಏನಾದ್ರೂ ಹೆಚ್ಚುಕಮ್ಮಿ ಆಗಿದ್ರೆ?
“ಯಾರ್ರೀ ಪೇಷಂಟ್ ವಸುಧಾ ಕಡೆಯವರು?” ಎಂಬ ಧ್ವನಿ ನನ್ನ ಯೋಚನಾ ಲಹರಿಯನ್ನು ತುಂಡರಿಸಿ ವಾಸ್ತವಕ್ಕೆ ಕರೆ ತಂದಿತು, ನರ್ಸ್‌ವೊಬ್ಬಳು ಕೈಯಲ್ಲಿ ಚೀಟಿಯೊಂದನ್ನು ಹಿಡಿದು ಕರೆಯುವುದು ನೋಡಿ, ನನ್ನ ಸೋದರ ಸಂಬಂಧಿ ಬರ್ತಾನೇನು ಎಂದು ಅತ್ತಿತ್ತ ನೋಡಿದೆ. ಅವನು ಸುತ್ತಾ ಎಲ್ಲೂ ಕಾಣದಿದ್ದ ಕಾರಣ, ಪಾಪ ಮಧ್ಯಾಹ್ನದಿಂದ ಇಲ್ಲೇ ಇದ್ದಾನೆ – ಅವನಾದ್ರು ಎಷ್ಟೊತ್ತು ಇಲ್ಲೇ ಇರೋಕ್ಕೆ ಸಾಧ್ಯ ಅಂದುಕೊಂಡು, ಎದ್ದು ಕೂಗುತ್ತಿದ್ದ ನರ್ಸ್ ಕಡೆಗೆ ಹೊರಟೆ. “ನೋಡಿ, ಈ medicinesನ ICU replacementಗೆ ತಲುಪಿಸಿ – ಹಾಗೆ ಕೌಂಟರ್ ನಂಬರ್ 3 ನಲ್ಲಿ ಮೂವತ್ತು ಸಾವಿರ ಕಟ್ಟಿ” ಅಂತಾ ಒಂದು ಚೀಟಿಯನ್ನು ನನ್ನತ್ತ ಚಾಚಿದಳು. ಆಕೆ ಕೊಟ್ಟ ಚೀಟಿಯನ್ನು ಕೈನಲ್ಲಿ ಹಿಡಿದು ಕಾರಿಡಾರಿನ ಆಚೆ ತುದಿಯಲ್ಲಿದ್ದ ಕೌಂಟರ್ ನಂಬರ್ 3ರ ಕಡೆಗೆ ಕಾಲೆಳೆದಾಕುತ್ತ ಹೊರಟೆ; ಅದೇನು ಮುಗಿಯುವ ದಾರಿಯಂತೆ ಕಾಣಿಸಲಿಲ್ಲ!
ಮೋಹನ್ ಮಂಜಪ್ಪ ಮೂಲತಃ ಚಿಕ್ಕಮಗಳೂರಿನವರು. ಬದುಕಿನ ಬಂಡಿ ಎಳೆಯುತ್ತಿರುವುದು ಬೆಂಗಳೂರಿನಲ್ಲಿ. ವೃತ್ತಿಯಿಂದ IBM ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.