ನಿಘಂಟಿನ ಎದೆ ಬಗೆದು ಕೇಳಿದೆ
ನಿನ್ನ ಹೆಸರಿನ ಅರ್ಥ ವೇನು

ಹೇಳಿತು..
ಅವನೆಂದರೆ…
ದ್ರವ್ಯಗಳ ನಾಲ್ಕು ಸ್ಥಿತಿಗಳಲ್ಲಿ ಒಂದು .
ಉಳಿದ ಮೂರು ಘನ, ದ್ರವ ಮತ್ತು ಪ್ಲಾಸ್ಮಾ.
ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅವನೆನ್ನುವರು.

ಈಗ ತಿಳಿಯಿತು
ನಿನ್ನ ಮೂಲ ಗುಣವೇ ಸ್ವತಂತ್ರ ಹುಡುಕುವುದು
ನಿನಗಷ್ಟೇ ಗೊತ್ತು ಎಲ್ಲಾ ಬಂಧ(ನ)ಗಳನ್ನು ತೊರೆದು ತಣ್ಣಗುಳಿಯುವ ಕೌಶಲ
ಕಟ್ಟಿಗೆ ಸಿಕ್ಕದ ಗಾಳಿ!
ಯಾವ ಮುಷ್ಟಿಗೂ ಗಿಟ್ಟುವುದಿಲ್ಲ
ಆದರೆ
ಮೌನ ತಪನೆಗಳಿಗೆ ಮಾತ್ರ
ಬೆನ್ನು ಬಿದ್ದು ತಾಕುತ್ತೀ
ಬೇಡಬೇಡ ವೆಂದರೂ
ಹಮ್ಮು ತೊರೆದು
ಜೋಳಿಗೆ ತುಂಬಾ ಮುತ್ತು ಹೊತ್ತು
ದಿಕ್ಕು ದಿಕ್ಕಿಗೂ ಒಲಿದೂ!

ತಪ್ಪೆಲ್ಲಾ ನನ್ನದೇ ಬಿಡು ಹಾಗಾದರೆ..
ಜೀವಿಸಲು ಎಷ್ಟು ಹೊತ್ತು
ಉಸಿರಿಡಿದು ನಿಲ್ಲಲು ಸಾಧ್ಯ?

ಕಣ್ಣು ಮುಚ್ಚಿ ಒಳಗಿಳಿಸಿಕೊಳ್ಳಬೇಕು
ಮತ್ತು
ಅಷ್ಟೇ ನಿರ್ಲಿಪ್ತದೊಂದಿಗೆ
ಹೊರಗೆಡುವಬೇಕು
ನಿನ್ನ

ಬದುಕಲು

ಇನ್ನು ನಿನ್ನಂಥವನನ್ನು ಪ್ರೀತಿಸುವುದಾದರೆ
ನಾನು ಯೋಗಿಯಾಗಬೇಕು
ಬದುಕು ಸಾವುಗಳ ಮಾಸಲು ಗಡಿಯಂಚಿನಲಿ
ಇದ್ದು

ಧ್ಯಾನಿಸಬೇಕು

ಒಂದೊಂದು ಉಚ್ವಾಶ ನಿಶ್ವಾಸಗಳ
ಲಯದ ತಕ್ಕಡಿಯಲಿ ತೂಗಿ
ನಾಳೆಗಳ ಕನಸುಗಳ ಕಳೆಗಳು
ಬೆಳೆಯದಂತೆ ಕಾದು
ಆತ್ಮದಾಳದಲ್ಲಿ ತೊಡರುವ ಕುಣಿಕೆಗಳ
ಅವಿಸಿ
ಇಂದಿನ ಇರುವನ್ನಷ್ಟೇ ಒಪ್ಪಿ
ಖಾತರಿಗಳ ಖಯಾಲಿಗಳನ್ನು
ಮತ್ತೆ ಗಾಳಿಗೇ ತೂರಿ..
ಧ್ಯಾನಿಬೇಕು
ನಿನ್ನ
ನೀನೇ ಬೇಕು ಎಂದರೆ..

ಈ ಧ್ಯಾನಸ್ಥ ಸ್ಥಿತಿಯಲ್ಲಿ
ನಾನು ನಿನ್ನನು ತಾಕಿದರೆ
ನನ್ನನ್ನು ದೂರದಿರು ಅಷ್ಟೆ!

ಮೌಲ್ಯ ಸ್ವಾಮಿ ಮೂಲತಃ ಮೈಸೂರಿನವರು.
ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು.
ಅವರ ಕವಿತೆಗಳಿಗೆ 2015ನೇ ಸಾಲಿನ ಟೊಟೊ ಪುರಸ್ಕಾರ ಲಭಿಸಿದೆ.
ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಮೌಲ್ಯ ಹಲವು ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.
‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಅವರ ಚೊಚ್ಚಲ ಕವನ ಸಂಕಲನ.