”ಐದನೇ ಕ್ಲಾಸಿನ ಮೂರನೇ ಟರ್ಮ್ ಅಷ್ಟೊತ್ತಿಗೆ ಪ್ರೈಮರಿ ಸ್ಕೂಲಿನ ಉಪನಾಯಕನಾಗಬೇಕು ಅಂತ ಅಂದುಕೊಂಡದ್ದು. ಕತ್ತಿವರಸೆ ಪಂದ್ಯಗಳಲ್ಲಿ ಸತತವಾಗಿ ಐವರನ್ನು ಸೋಲಿಸಿದ್ದೆ. ಆ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕ ಬಟ್ಟೆಗಳಿಗೆ ಬಣ್ಣ ಹಾಕುತ್ತಿದ್ದವನ ಮಗ. ಪಂದ್ಯದಲ್ಲಿ ಹೋರಾಡುತ್ತಾ ನಾವಿಬ್ಬರೂ ಹತ್ತಿರ ಬಂದಾಗ ಅವನಿಂದ ಕಡುನೀಲಿ ಬಣ್ಣದ ವಾಸನೆ ಬಂದದ್ದು ನೆನಪಿದೆ. ಯಾವ ಕಾರಣಕ್ಕೋ ಏನೋ ನನ್ನೊಳಗಿನ ಯೋಧನಿಗೆ ಸಂಬಂಧಿಸಿದ್ದನ್ನು ನೆನಪಿಸಿಕೊಳ್ಳಲು ಹೋದಾಗಲೆಲ್ಲ ವಿಶ್ವಾಸಘಾತುಕತನದ ನೆನಪಾಗುತ್ತದೆ”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಐದನೆಯ ಅಧ್ಯಾಯ.
ನಾನು ಈ ಆತ್ಮಕತೆಯಂತಹದ್ದನ್ನು ಬರೆಯಲು ನಿರ್ಧರಿಸಿದ ನಂತರ ವೆಕ್ಸಾ ಕೆಯ್ನೊಸ್ಕೆಯ ಜೊತೆ ಕೂತು ಹಿಂದಿನ ದಿನಗಳ ಕುರಿತು ಮಾತಾಡಿದೆ. ಕುರೊದ ಪ್ರೈಮರಿ ಶಾಲೆಯ ಹತ್ತೊರಿಜಕ ಅನ್ನೋ ಬೆಟ್ಟದ ಹಾದಿಯಲ್ಲಿ ನಾನೊಮ್ಮೆ “ನೀನು ಮ್ಯುರಸಿಕ ಶಿಕಿಬು. ನಾನು ಸೆಯಿ ಶೊನಗೊನ್” ಅಂತ ಅವನಿಗೆ ಹೇಳಿದ್ದೆ ಅಂತ ಹೇಳಿದ. ಅವನಿಗೆ ಹಾಗೆ ಹೇಳಿದ್ದರ ನೆನಪು ನನಗಿಲ್ಲ.
ಮೊದಲಿಗೆ, ನಾವು ಪ್ರೈಮರಿ ಶಾಲೆಯ ಮಕ್ಕಳು ಹೆಯಿನ್ ಮಧ್ಯಯುಗದ (794-1185) ಲೇಖಕರಾದ ಮ್ಯುರಸಕಿಯ ‘ಟೇಲ್ ಆಫ್ ಗೆಂಜಿ಼’ ಅಥವ ‘ಸೆಯಿ ಶೊನಗೊನ್’ನ ಪಿಲ್ಲೋ ಬುಕ್ ಓದಿರಲು ಸಾಧ್ಯವಿಲ್ಲ. ಈಗ ಯೋಚಿಸಿದಾಗ ಅನ್ನಿಸುತ್ತೆ – ಪ್ರತಿದಿನ ಕ್ಯಾಲಿಗ್ರಫಿ ತರಗತಿಗಳ ನಂತರ ತಚಿಕಾವ ಅವರ ಮನೆಗೆ ಹೋಗುತ್ತಿದ್ದೆವಲ್ಲ ಆಗ ಅವರು ನಮಗೆ ಜಪಾನಿನ ಸಾಹಿತ್ಯದ ಮಹತ್ವದ ಕೃತಿಗಳ ಬಗ್ಗೆ ಬಹಳಷ್ಟು ಸಂಗತಿಗಳನ್ನು ಹೇಳುತ್ತಿದ್ದರು.
ನಮ್ಮ ಈ ಹಳೆಯ ಮೇಷ್ಟ್ರೊಂದಿಗೆ ನಾನು ಮತ್ತು ವೆಕ್ಸ ಕಳೆದ ಗಳಿಗೆಗಳು ಅವಿಸ್ಮರಣೀಯ. ಬಹುಶಃ ನಾನು ಮತ್ತು ವೆಕ್ಸ ಮನೆಗೆ ವಾಪಸ್ಸಾಗುವಾಗ ಡೆನ್ಜು ಇನ್ ಬೆಟ್ಟದ ಇಳಿಜಾರಿನಗುಂಟ ಎಡೊಗಾವ ನದಿ ದಂಡೆಯ ಹಾದಿಯಗುಂಟ ನಡೆದು ಬರುವಾಗ ಈ ಮಾತುಕತೆ ನಡೆದಿರಬಹುದು. ಆದರೂ ಮ್ಯುರಸಕಿ ಮತ್ತು ಸೆಯಿ ಶೊನಗೊನ್ ಗೆ ನಮ್ಮನ್ನು ಹೋಲಿಸಿಕೊಂಡಿದ್ದು ಸ್ವಲ್ಪ ಅತಿಯಾಯಿತೇನೋ. ಆಗ ವೆಕ್ಸನ (Uekusa) ಬರವಣಿಗೆಗಳೆಲ್ಲ ಸುದೀರ್ಘ ವಿವರಣೆಗಳಾಗಿತ್ತು, ನನ್ನದು ಚಿಕ್ಕ ಚೊಕ್ಕ ನಿರೂಪಣೆಗಳಾಗಿತ್ತು. ಬಹುಶಃ ಇದು ಆ ಹೋಲಿಕೆಯ ಹಿನ್ನೆಲೆಯಲ್ಲಿತ್ತು ಅನ್ನಿಸುತ್ತದೆ.
ಆ ಕಾಲಘಟ್ಟದ ಗೆಳೆಯರಲ್ಲಿ ವೆಕ್ಸಾನೊಟ್ಟಿಗೆ ನಾನು ಹೆಚ್ಚು ಸಮಯ ಕಳೆದದ್ದು. ಹಾಗಾಗಿ ಆ ಕಾಲದ ನೆನಪುಗಳೆಲ್ಲ ಅವನೊಟ್ಟಿಗೆ ತಳಕು ಹಾಕಿಕೊಂಡಿದೆ. ಆದರೆ ನಮ್ಮಿಬ್ಬರ ಮನೆಯ ಪರಿಸರ ಸಂಪೂರ್ಣ ಭಿನ್ನ. ಅವರದು ಪಟ್ಟಣದವರ ರೀತಿಯಿದ್ದರೆ ನಮ್ಮಲ್ಲಿ ಸಮುರಾಯ್ ವಾತಾವರಣವಿತ್ತು. ಹಾಗಾಗಿ ನಾವಿಬ್ಬರೂ ಕೂತು ಹಳೆಯದನ್ನೆಲ್ಲ ನೆನಪಿಸಿಕೊಂಡಾಗ ನಮ್ಮಿಬ್ಬರ ನೆನಪುಗಳು ಭಿನ್ನ. ಅವನು ನೆನಪಿಸಿಕೊಳ್ಳುವ ವ್ಯಕ್ತಿತ್ವ ನನ್ನ ನೆನಪಿಗಿಂತ ಸಂಪೂರ್ಣ ಭಿನ್ನ. ಉದಾಹರಣೆಗೆ ವೆಕ್ಸ ತನ್ನಮ್ಮನ ಉದ್ದತೋಳಿನ ನಿಲುವಂಗಿಯಲ್ಲಿ ಅಡಗಿರುತ್ತಿದ್ದ ಆಕೆಯ ಬಿಳಿತೋಳನ್ನು ಮೊದಲ ಸಾರಿ ನೋಡಿದಾಗ ಅವನಿಗೆ ಏನನ್ನಿಸಿತು ಅನ್ನೋದನ್ನ ನೆನಪಿಸಿಕೊಳ್ಳಬಲ್ಲ. ನಮ್ಮ ಕ್ಲಾಸಿನ ಹುಡುಗಿಯರ ಗುಂಪಿನ ಲೀಡರ್ ಆಗಿದ್ದ ಸುಂದರ ಹುಡುಗಿಯ ಮನೆ ಎಡೊಗಾವ ನದಿ ಹತ್ತಿರದ ಒಟಕೈನಲ್ಲಿತ್ತು ಅನ್ನೋದು ಅವನಿಗೆ ನೆನಪಿದೆ. ಅವಳ ಹೆಸರು ಕೂಡ ಅವನಿಗೆ ನೆನಪಿದೆ. “ನಿಂಗೆ ಅವಳ ಬಗ್ಗೆ ಆಸಕ್ತಿ ಇತ್ತು ಅನ್ನಿಸುತ್ತೆ ಕುರೊಚಾನ್” ಅಂತಾನೆ. ಆದರೆ ನಂಗೆ ಈ ತರಹದ ವಿಷಯಗಳು ನೆನಪಿಲ್ಲ.
ನಂಗೆ ನೆನಪಿರೋದು- ಕೆಂಡೊ ಚೆನ್ನಾಗಿ ಕಲೀಬೇಕು, ಐದನೇ ಕ್ಲಾಸಿನ ಮೂರನೇ ಟರ್ಮ್ ಅಷ್ಟೊತ್ತಿಗೆ ಪ್ರೈಮರಿ ಸ್ಕೂಲಿನ ಉಪನಾಯಕನಾಗಬೇಕು ಅಂತ ಅಂದುಕೊಂಡದ್ದು. ಕತ್ತಿವರಸೆ ಪಂದ್ಯಗಳಲ್ಲಿ ಸತತವಾಗಿ ಐವರನ್ನು ಸೋಲಿಸಿದ್ದೆ. ಆ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕ ಬಟ್ಟೆಗಳಿಗೆ ಬಣ್ಣ ಹಾಕುತ್ತಿದ್ದವನ ಮಗ. ಪಂದ್ಯದಲ್ಲಿ ಹೋರಾಡುತ್ತಾ ನಾವಿಬ್ಬರೂ ಹತ್ತಿರ ಬಂದಾಗ ಅವನಿಂದ ಕಡುನೀಲಿ ಬಣ್ಣದ ವಾಸನೆ ಬಂದದ್ದು ನೆನಪಿದೆ. ಯಾವ ಕಾರಣಕ್ಕೋ ಏನೋ ನನ್ನೊಳಗಿನ ಯೋಧನಿಗೆ ಸಂಬಂಧಿಸಿದ್ದನ್ನು ನೆನಪಿಸಿಕೊಳ್ಳಲು ಹೋದಾಗಲೆಲ್ಲ ವಿಶ್ವಾಸಘಾತುಕತನದ ನೆನಪಾಗುತ್ತದೆ.. ಹೀಗೆ ನೆನಪಿರುವ ಮತ್ತೊಂದು ಘಟನೆಯಿದೆ. ಮತ್ತೊಂದು ಪ್ರೈಮರಿ ಶಾಲೆಯ ವಿದ್ಯಾರ್ಥಿಗಳು ನನ್ನ ಮೇಲೆ ದಾಳಿ ಮಾಡಿದ್ದರು. ಒಚಿಯಾಯಿ ಕತ್ತಿವರೆಸೆ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದೆ. ಎದುಗಾವಬಾಶಿ ಅಣೆಕಟ್ಟಿನ ಹತ್ತಿರವಿದ್ದ ಮೀನಂಗಡಿಯ ಹತ್ತಿರ ಬಂದಿದ್ದೆ. ನನ್ನೆದುರಿಗೆ ಏಳೆಂಟು ಹುಡುಗರು ನನಗಿಂತ ದೊಡ್ಡವರು ಬಂದು ನಿಂತರು. ಅವರ ಮುಖಗಳು ನೆನಪಿಲ್ಲ. ಅವರ ಹತ್ತಿರ ಬಿದಿರಿನ ಕತ್ತಿಗಳು, ಬಿದಿರಿನ ಗಳಗಳು, ಕೋಲುಗಳಿದ್ದವು.
ಹುಡುಗರು ತಂತಮ್ಮ ಏರಿಯಾದ ಗಡಿಗಳನ್ನ ಗುರುತುಮಾಡಿಕೊಂಡಿರುತ್ತಾರೆ. ಇದು ಕುರೊದ ಪ್ರೈಮರಿ ಶಾಲೆಯ ಗಡಿಯಾಗಿರಲಿಲ್ಲ. ಹಾಗಾಗಿ ಈ ಮಕ್ಕಳು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು, ನಾ ನಿಂತೆ. ಆದರೆ ನಾನು ಕಠಾರಿವೀರನಲ್ಲವೇ ಹೆದರಿಕೆಯಾದರೂ ತೋರಿಸಿಕೊಳ್ಳುವಂತಿರಲಿಲ್ಲ. ಸುಮ್ಮನೆ ಮೀನಿನ ಅಂಗಡಿಯನ್ನು ದಾಟಿದೆ. ಅವರತ್ತ ಬೆನ್ನುಹಾಕಿ ನಡೆದಾಗ ಏನೂ ಆಗದೆ ಇದ್ದದ್ದನ್ನು ನೋಡಿ ನಿರಾಳವಾಗಿ ಉಸಿರಾಡಿದೆ.
ನಮ್ಮ ಕ್ಲಾಸಿನ ಹುಡುಗಿಯರ ಗುಂಪಿನ ಲೀಡರ್ ಆಗಿದ್ದ ಸುಂದರ ಹುಡುಗಿಯ ಮನೆ ಎಡೊಗಾವ ನದಿ ಹತ್ತಿರದ ಒಟಕೈನಲ್ಲಿತ್ತು ಅನ್ನೋದು ಅವನಿಗೆ ನೆನಪಿದೆ. ಅವಳ ಹೆಸರು ಕೂಡ ಅವನಿಗೆ ನೆನಪಿದೆ. “ನಿಂಗೆ ಅವಳ ಬಗ್ಗೆ ಆಸಕ್ತಿ ಇತ್ತು ಅನ್ನಿಸುತ್ತೆ ಕುರೊಚಾನ್” ಅಂತಾನೆ. ಆದರೆ ನಂಗೆ ಈ ತರಹದ ವಿಷಯಗಳು ನೆನಪಿಲ್ಲ.
ಇದ್ದಕ್ಕಿದ್ದ ಹಾಗೆ ನನ್ನ ತಲೆಯ ಹತ್ತಿರ ಭಯಾನಕವಾದದ್ದೇನೋ ಬರುವಂತಾಯಿತು. ತಲೆ ಮುಟ್ಟಿಕೊಂಡದ್ದೆ ಏಟು ಬಿತ್ತು. ನನ್ನತ್ತ ಕಲ್ಲುಗಳು ತೂರಿಬರುತ್ತಿತ್ತು. ಆ ಹುಡುಗರ ಗುಂಪು ಮೌನವಾಗಿ ನಿಂತು ನನ್ನತ್ತ ಕಲ್ಲು ಬೀಸುತ್ತಿದ್ದರು. ಅವರ ಮೌನ ನನ್ನನ್ನು ಹೆದರಿಸಿತು.
ತಕ್ಷಣ ಅಲ್ಲಿಂದ ಕಾಲುಕೀಳಬೇಕೆನಿಸಿತು. ಆದರೆ ಮರುಕ್ಷಣ ನನ್ನ ಬಿದಿರಿನ ಕತ್ತಿ ಅವಮಾನದಿಂದ ಕಣ್ಣೀರು ಸುರಿಸಬಹುದು ಅನ್ನಿಸಿತು. ಹಾಗನ್ನಿಸಿದ್ದೇ ನನ್ನ ಕತ್ತಿಯನ್ನು ಹೊರಗೆಳೆದು ಅವರತ್ತ ಗುರಿಯಿಟ್ಟೆ. ನನ್ನ ಬಟ್ಟೆ ಕತ್ತಿಗೆ ತೊಡರಿ ನಾನಂದುಕೊಂಡಷ್ಟು ವೇಗವಾಗಿ ಕತ್ತಿಯನ್ನು ಅವರತ್ತ ಬೀಸಲಾಗಲಿಲ್ಲ. ಹುಡುಗರೆಲ್ಲ ಕೂಗುತ್ತಾ ತಮ್ಮ ಆಯುಧಗಳೊಂದಿಗೆ ನನ್ನ ಮೇಲೆ ಮುಗಿಬಿದ್ದರು. ನನ್ನೆಲ್ಲ ಶಕ್ತಿ ಒಗ್ಗೂಡಿಸಿ ಅವರೊಡನೆ ಕಾದಾಟಕ್ಕಿಳಿದೆ. ಕತ್ತಿಗೆ ಸಿಕ್ಕಿಹಾಕಿಕೊಂಡಿದ್ದ ಬಟ್ಟೆ ಕಿತ್ತುಕೊಂಡು ಹಾರಿ ಕತ್ತಿ ಹಗುರಾಗಿ ಆಡಲಾರಂಭಿಸಿತು. ಅವರು ಮೌನವಾಗಿದ್ದಾಗ ಭಯವಾಗಿತ್ತಲ್ಲ ಅದು ಅವರ ಕೂಗಾಟದಿಂದಾಗಿ ಮಾಯವಾಯಿತು.
ಕತ್ತಿಯನ್ನು ಬಲವಾಗಿ ಹಿಡಿದು ಕೂಗಿದೆ “ಒಮೆನ್!” “ಕೊತೆ” “ಡೊ” (ಕತ್ತಿವರೆಸೆಯಲ್ಲಿ ಹೇಳುವ ಪದಗಳು)** ಇವುಗಳನ್ನು ಹೇಳುತ್ತಾ ಕಲಿತಿದ್ದ ಕೆಂಡೊ ಪಾಠಗಳ ಪ್ರಯೋಗಕ್ಕೆ ಇಳಿದೆ. ಅದೇನು ಕಾರಣವೋ ಏನೋ ಅವರು ನನ್ನ ಸುತ್ತ ನಿಲ್ಲಲಿಲ್ಲ ಬದಲಿಗೆ ಏಳೆಂಟು ಜನ ಒಟ್ಟಾಗಿ ಆಯುಧಗಳೊಂದಿಗೆ ನನ್ನ ಮೇಲೆ ಮುಗಿಬಿದ್ದರು. ಹಿಂದೆ ಸರಿಯುವಂತಿರಲಿಲ್ಲ. ಎಲ್ಲ ಕೈಗಳೂ ಒಟ್ಟಾಗಿ ನನ್ನತ್ತ ಬರುತ್ತಿತ್ತು. ನಾನು ಅತ್ತಿತ್ತ ಸರಿಯುತ್ತ ತಪ್ಪಿಸಿಕೊಳ್ಳುತ್ತಿದ್ದೆ.
ಹಾಗೇ ಸರಿಯುತ್ತಾ ಸರಿಯುತ್ತಾ ಅವರು ಮೀನಿನ ಅಂಗಡಿಯೊಳಗೆ ನುಗ್ಗಿದರು. ಆ ಅಂಗಡಿಗೆ ಆಧಾರವಾಗಿ ಆಚೀಚೆ ನಿಲ್ಲಿಸಿದ್ದ ಬಿದಿರಿನ ಗಳಗಳನ್ನು ಸರಿಮಾಡುತ್ತಿದ್ದ ಮಾಲೀಕ ಹೊರಗೋಡಿ ಬಂದ.. ಕಾದಾಟ ಜೋರಾಗುತ್ತಲೇ ಹೋಯಿತು. ಆಗೊಮ್ಮೆ ಕಾಲು ಜಾಡಿಸಿದಾಗ ಕೆಳಗೆ ಬಿದ್ದ ನನ್ನ ಮರದ ಶೂಗಳನ್ನು ಎತ್ತಿಕೊಂಡು ಅಲ್ಲಿಂದ ಓಡಿಹೋದೆ.
ನಂಗಿನ್ನೂ ನೆನಪಿದೆ – ಎದುರಿಗಿದ್ದ ನೇರವಾದ ಸಣ್ಣ ಗಲ್ಲಿಯೊಂದರಲ್ಲಿ ಓಡಿದ್ದೆ. ಆ ಗಲ್ಲಿಯ ಮಧ್ಯದಲ್ಲಿ ಚರಂಡಿಯಿತ್ತು. ಚರಂಡಿಯ ಆ ಬದಿಯಿಂದ ಈ ಬದಿಗೆ ಈ ಬದಿಯಿಂದ ಆ ಬದಿಗೆ ಹಾರುತ್ತಾ ಗಲೀಜು ನೀರಲ್ಲಿ ಕಾಲಿಡುವುದನ್ನು ತಪ್ಪಿಸಿಕೊಳ್ಳುತ್ತಾ ಓಡಿದೆ. ಆ ಗಲ್ಲಿಯ ಮತ್ತೊಂದು ಕೊನೆಗೆ ಬರೋವರೆಗೂ ಓಟ ನಿಲ್ಲಿಸಲಿಲ್ಲ. ಅಲ್ಲಿಗೆ ಬಂದಮೇಲೆ ಶೂಗಳನ್ನು ಹಾಕಿಕೊಂಡೆ. ನನ್ನ ಕೆಂಡೊ ಯೂನಿಫಾರಂ ಏನಾಯಿತೋ ಗೊತ್ತಾಗಲಿಲ್ಲ. ಬಹುಶಃ ನನ್ನ ವಿರೋಧಿಗಳ ಕೈಗೆ ಸಿಕ್ಕು ಛಿದ್ರವಾಗಿರಬೇಕು.
ನಮ್ಮಮ್ಮನಿಗೆ ಮಾತ್ರ ನಡೆದ ಘಟನೆಯ ಬಗ್ಗೆ ಹೇಳಿದೆ. ಯಾರಿಗೂ ಇದರ ಬಗ್ಗೆ ಹೇಳಲು ಇಷ್ಟವಿರಲಿಲ್ಲ. ಆದರೆ ನನ್ನ ಕೆಂಡೊ ಯೂನಿಫಾರಂ ಕಳೆದುಹೋಗಿತ್ತಲ್ಲ ಹಾಗಾಗಿ ಅವಳಿಗೆ ಹೇಳಿದೆ. ಅಮ್ಮ ನನ್ನ ಕತೆ ಕೇಳಿ ಏನೂ ಹೇಳಲಿಲ್ಲ. ಒಳಗೆ ಹೋಗಿ ನಮ್ಮಣ್ಣನ ಯೂನಿಫಾರಂ ತಂದುಕೊಟ್ಟಳು. ಅವನದನ್ನು ಈಗ ಬಳಸ್ತಿರಲಿಲ್ಲ. ನನಗೆ ತಲೆ ಸ್ನಾನ ಮಾಡಿಸಿ ಗಾಯಕ್ಕೆ ಮೃದುವಾಗಿ ಮುಲಾಮು ಹಚ್ಚಿದಳು. ಅದು ಬಿಟ್ಟು ಬೇರೆಲ್ಲೂ ಗಾಯವಾಗಿರಲಿಲ್ಲ. ಆ ಗಾಯದ ಕಲೆ ಮಾತ್ರ ಇವತ್ತಿಗೂ ಹಾಗೆ ಇದೆ. (ನನ್ನ ಮೊದಲ ಸಿನೆಮಾ ಸುಗತ ಸಾಂಶಿರೊ (1943)ರಲ್ಲಿ ಈ ಘಟನೆಯ ನೆನಪು ಕೂಡ ಇಲ್ಲದೆ ನಾಯಕನ ಜುಡೋ ಜೀವನದ ಕಡೆಗಿನ ಬದ್ಧತೆಯನ್ನ ತೋರಿಸುವುದಕ್ಕೆ ಈ ಉಡುಪನ್ನು ದೃಶ್ಯ ಸಾಧನವಾಗಿ ಬಳಸಿದ್ದೆ. ಆ ಕೆಂಡೊ ಯೂನಿಫಾರಂ, ಮರದ ಶೂಗಳ ಬಗ್ಗೆ ಬರೀತಿರುವಾಗ ಇದ್ದಕ್ಕಿದ್ದ ಹಾಗೆ ನಾನು ಹಾಗೆ ಮಾಡಿದ್ದು ಯಾಕೆ ಅಂತ ಅರ್ಥವಾಗ್ತಿದೆ. ನೆನಪಿನ ಶಕ್ತಿಯೇ ಅಂತಹದ್ದು. ಅದು ಕಲ್ಪನೆಗೆ ಮೂಲಕಾರಣವಾಗುತ್ತದೆ.)
ಈ ಘಟನೆಯ ನಂತರ ಒಚಿಯಾಯಿ ಕತ್ತಿವರಸೆ ಶಾಲೆಯ ದಾರಿಯನ್ನು ಸ್ವಲ್ಪ ಬದಲಿಸಿಕೊಂಡೆ. ಆ ಮೀನಿನ ಅಂಗಡಿಯತ್ತ ಮತ್ತೆ ಹೋಗಲಿಲ್ಲ. ಆ ಹುಡುಗರಿಗೆ ಹೆದರಿ ಆ ಕಡೆ ಹೋಗಲಿಲ್ಲ ಅಂತಲ್ಲ. ಆದರೆ ಆ ಬಿದಿರಿನ ಗಳಗಳ ಮೀನಿನಂಗಡಿಯೊಳಗೆ ಓಡುವುದು ಇಷ್ಟವಿರಲಿಲ್ಲ.
ಚರಂಡಿಯ ಆ ಬದಿಯಿಂದ ಈ ಬದಿಗೆ ಈ ಬದಿಯಿಂದ ಆ ಬದಿಗೆ ಹಾರುತ್ತಾ ಗಲೀಜು ನೀರಲ್ಲಿ ಕಾಲಿಡುವುದನ್ನು ತಪ್ಪಿಸಿಕೊಳ್ಳುತ್ತಾ ಓಡಿದೆ. ಆ ಗಲ್ಲಿಯ ಮತ್ತೊಂದು ಕೊನೆಗೆ ಬರೋವರೆಗೂ ಓಟ ನಿಲ್ಲಿಸಲಿಲ್ಲ. ಅಲ್ಲಿಗೆ ಬಂದಮೇಲೆ ಶೂಗಳನ್ನು ಹಾಕಿಕೊಂಡೆ. ನನ್ನ ಕೆಂಡೊ ಯೂನಿಫಾರಂ ಏನಾಯಿತೋ ಗೊತ್ತಾಗಲಿಲ್ಲ. ಬಹುಶಃ ನನ್ನ ವಿರೋಧಿಗಳ ಕೈಗೆ ಸಿಕ್ಕು ಛಿದ್ರವಾಗಿರಬೇಕು.
ಯಾವಾಗಲೋ ಒಮ್ಮೆ ಈ ಘಟನೆಯ ಬಗ್ಗೆ ವೆಕ್ಸ ಹತ್ತಿರ ಹೇಳಿದ್ದೆ. ಆದರೆ ಅವನಿಗೆ ನೆನಪಿಲ್ಲ. ‘ನೀನೊಬ್ಬ ಲಂಪಟ. ಬರೀ ಹೆಂಗಸರ ಬಗ್ಗೆ ಅಷ್ಟೇ ಕಣೋ ನಿಂಗೆ ನೆನಪಿರೋದು ಅಂತ ಬೈದರೆ ‘ಏ ಹಾಗೇನಿಲ್ಲ’ ಅಂತ ಭಾವುಕವಾಗಿ ಹೇಳ್ತಾನೆ. ನಿಜವಾಗಿ ಹೇಳಬೇಕು ಅಂದರೆ ಒಂದೇ ಗುದ್ದಿಗೆ ಬೀಳಿಸಿಬಿಡಬಹುದಾದ ಈ ಮುದ್ದಾದ ಹುಡುಗನಿಗೆ ಅವನ ಮಿತಿಗಳೇ ಗೊತ್ತಿಲ್ಲ. ನಾವು ಆರನೇ ಕ್ಲಾಸಿನಲ್ಲಿದ್ದಾಗ ಕುಸುಯಾಮ ಬೆಟ್ಟದಲ್ಲಿದ್ದ ಮತ್ತೊಂದು ಪ್ರೈಮರಿ ಸ್ಕೂಲಿನ ಮಕ್ಕಳ ಜೊತೆ ಜಗಳವಾಗಿತ್ತು. ನಮ್ಮ ಶತ್ರುಗಳ ಕ್ಯಾಂಪ್ ಇದ್ದದ್ದು ಬೆಟ್ಟದ ಮೇಲೆ. ಅಲ್ಲಿಂದ ಅವರು ನಮ್ಮತ್ತ ಕಲ್ಲುಗಳನ್ನ, ಮಣ್ಣಿನ ಹೆಂಟೆಗಳನ್ನ ಎಸೆಯುತ್ತ ದಾಳಿ ಮಾಡಿದರು. ನಮ್ಮ ಸ್ನೇಹಿತರ ಗುಂಪು ಈ ದಾಳಿಯಿಂದ ತಪ್ಪಿಸಿಕೊಳ್ಳುತ್ತಾ ಬೆಟ್ಟ ಹತ್ತುತ್ತಿದ್ದರು. ನಾನು ಶತ್ರುಗಳ ಮೇಲೆ ಹಿಂದಿನಿಂದ ದಾಳಿ ಮಾಡಲು ಕೆಲವರನ್ನು ಬೆಟ್ಟದ ಹಿಂಭಾಗಕ್ಕೆ ಕಳಿಸೋಣ ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ವೆಕ್ಸ ಅದೇನೋ ಕಿರುಚುತ್ತಾ ಬೆಟ್ಟ ಹತ್ತಲು ಮುನ್ನುಗ್ಗಿಬಿಟ್ಟಿದ್ದ. ಮೂರ್ಖನಂತೆ ಅಜಾಗರೂಕತೆಯಿಂದ ನುಗ್ಗಿದ್ದ.
ನಿಮ್ಮ ಗುಂಪಿನ ಅತ್ಯಂತ ದುರ್ಬಲ ವ್ಯಕ್ತಿ ಏಕಾಂಗಿಯಾಗಿ ಶತ್ರುಗಳ ಕಡೆ ನುಗ್ಗಿದರೆ ನೀವೇನು ಮಾಡಬಹುದು? ಅದಕ್ಕಿಂತ ಹೆಚ್ಚಾಗಿ ಅದು ಕೆಂಪು ಮಣ್ಣಿನ ಕಡಿದಾದ ಜಾರುವ ಹಾದಿಯ ಬೆಟ್ಟ. ಒಂದು ಹೆಜ್ಜೆ ಮುಂದಿಟ್ಟರೆ ಎರಡು ಹೆಜ್ಜೆ ಹಿಂದಕ್ಕೆ ಜಾರುತ್ತಿದ್ದಂತಹ ಮಣ್ಣು. ಇದಾವುದನ್ನೂ ಗಮನಿಸದೆ ವೆಕ್ಸ ಶತ್ರುಗಳ ಕಲ್ಲು, ಮಣ್ಣಿನ ಹೆಂಟೆಗಳ ದಾಳಿಯ ನಡುವೆ ನುಗ್ಗಿಬಿಟ್ಟಿದ್ದ. ಅವರುಗಳು ಎಸೆದ ದೊಡ್ಡಕಲ್ಲೊಂದು ಅವನ ತಲೆಗೆ ತಾಗಿ ಹಿಂದಕ್ಕೆ ಜಾರಿಬಿದ್ದ.
ಅವನು ಬಿದ್ದ ತಕ್ಷಣ ಅವನ ಕಡೆ ಓಡಿದೆ. ಬಾಯಿಬಿಟ್ಟುಕೊಂಡು ಎತ್ತಕಡೆಗೋ ನೋಡುತ್ತ ಇಷ್ಟಗಲ ಕಣ್ಣುಬಿಟ್ಟುಕೊಂಡು ಬಿದ್ದಿದ್ದ ಅವನನ್ನು ನೋಡುತ್ತಲೇ ‘ಹೀರೋ ಕಣೋ ನೀನು’ ಅಂತ ಹೇಳಬೇಕು ಅಂದುಕೊಂಡರೂ ನಿಜವಾಗಿ ಅನ್ನಿಸಿದ್ದು ‘ಶುದ್ಧ ಮುಟ್ಠಾಳ’ ಅಂತ. ಬೆಟ್ಟದ ಕಡೆ ತಿರುಗಿನೋಡಿದಾಗ ನಮ್ಮ ಶತ್ರುಗಳೆಲ್ಲ ಆತಂಕದಿಂದ, ಭಯದಿಂದ ಸಾಲಾಗಿ ನಿಂತು ಕೆಳಗೆ ನೋಡುತ್ತಿದ್ದರು. ಕೆಳಗೆ ಬಿದ್ದಿದ್ದ ವೆಕ್ಸನ ಎಡ ಭಾಗದಲ್ಲಿ ನಿಂತು ಯೋಚಿಸುತ್ತಿದ್ದೆ ‘ಇಂತಹ ಪ್ರಪಂಚದಲ್ಲಿ ನಾನಿವನಿಗೆ ಎಲ್ಲಿ ಮನೆ ಹುಡುಕಿಕೊಡಲಿ?’
ವೆಕ್ಸ ಮತ್ತು ಕುಸುಯಾಮ ಬೆಟ್ಟಕ್ಕೆ ಸಂಬಂಧಿಸಿದ ಮತ್ತೊಂದು ಕತೆ ಹೇಳಬೇಕು. ಒಂದು ಸಂಜೆ ವೆಕ್ಸ ಕುಸುಯಾಮ ಬೆಟ್ಟದ ಮೇಲೆ ಒಬ್ಬನೇ ನಿಂತಿದ್ದ. ಆಗ ಅವನಿಗೆ ಹದಿನಾರು ವರ್ಷ. ಒಟ್ಟಿಗೆ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರ ಬರೆದಿದ್ದ. ಅವಳಿಗಾಗಿ ಅಲ್ಲಿ ಕಾದು ನಿಂತಿದ್ದ. ಬೆಟ್ಟ ಹತ್ತಿ ನರಕದ ರಾಜ ಎಮ್ಮದೊನ ದೇವಸ್ಥಾನದ ಕಡೆ ನೋಡುತ್ತ ನಿಂತಿದ್ದ. ಅಲ್ಲಿನ ಕಡಿದಾದ ಹಾದಿಯಲ್ಲಿ ಅವಳ ಬರುವಿಕೆಯ ಕುರುಹು ಏನಾದರೂ ಕಾಣಬಹುದಾ ಅಂತ ನೋಡುತ್ತಾ ಕಾದಿದ್ದ.
ಭೇಟಿಗೆ ನಿಗದಿ ಮಾಡಿಕೊಂಡಿದ್ದ ಸಮಯ ಕಳೆದರೂ ಆ ಹುಡುಗಿ ಬರಲಿಲ್ಲ. ಸರಿ ಇನ್ನೊಂದು ಹತ್ತು ನಿಮಿಷ ಕಾಯೋಣ ಅಂತ ಇವನು ಅಲ್ಲಿಯೇ ನಿಂತಿದ್ದ. ಹೀಗೆ ಹತ್ತು ನಿಮಿಷ ಹತ್ತು ನಿಮಿಷ ಅಂದುಕೊಳ್ಳುತ್ತಾ ಇರುವಾಗ ಕತ್ತಲಲ್ಲಿ ಯಾರೋ ಕಂಡಂತಾಯಿತು “ಆಹ್ ಅವಳು ಬಂದಿರಬೇಕು” ಅಂದುಕೊಂಡ. ಅವನ ಎದೆಬಡಿತ ಜೋರಾಯಿತು. ಅವನು ಆ ವ್ಯಕ್ತಿಯ ಕಡೆಗೆ ಹೋದ. ಆ ವ್ಯಕ್ತಿಗೆ ಗಡ್ಡವಿರೋದು ಗಮನಕ್ಕೆ ಬಂತು. ಅದನ್ನ ನೋಡಿ ವೆಕ್ಸಾನ ಪ್ರಕಾರ “ನಾನೇನು ಹೆದರಲಿಲ್ಲ. ಓಡಿಹೋಗಲಿಲ್ಲ. ಆ ವ್ಯಕ್ತಿಯ ಹತ್ತಿರ ಹೋದೆ”. ಆತ “ನೀನೇನಾ ಇದನ್ನ ಬರೆದದ್ದು?” ಅಂತ ವೆಕ್ಸಾನ ಪ್ರೇಮಪತ್ರವನ್ನ ಅವನ ಮುಂದೆ ಹಿಡಿದು ಕೇಳಿದ. ವೆಕ್ಸಾನ ಉತ್ತರಕ್ಕೂ ಕಾಯದೆ “ನಾನು ಅವಳಪ್ಪ” ಅಂದು ವೆಕ್ಸಾನ ಕೈಗೆ ಅವನ ವಿಸಿಟಿಂಗ್ ಕಾರ್ಡ್ ಕೊಟ್ಟ. ಅದರಲ್ಲಿ ವೆಕ್ಸಾನ ಕಣ್ಣಿಗೆ ಮೊದಲು ಬಿದ್ದದ್ದು “ಪೋಲಿಸ್ ಪ್ರಧಾನಕಛೇರಿ, ಕಟ್ಟಡ ಮತ್ತು ದುರಸ್ತಿ ವಿಭಾಗ”. ಆದರೂ ವೆಕ್ಸಾ ಒಂಚೂರು ಹೆದರದೆ ಆತನ ಮಗಳ ಬಗೆಗಿನ ಅವನ ಭಾವನೆಗಳನ್ನೆಲ್ಲ ಹೇಳಿದನಂತೆ. ಡಾಂಟೆಗೆ ಬಿಯಾಟ್ರೆಸ್ ಬಗ್ಗೆ ಇದ್ದಂತಹ ಪ್ರೇಮವೇ ತನಗೆ ಆತನ ಮಗಳ ಜೊತೆಗಿರುವುದು. ತನ್ನದು ಪರಿಶುದ್ಧ ಪ್ರೇಮ ಅಂತೆಲ್ಲ ಹೇಳಿದನಂತೆ. “ಆಮೇಲೇನಾಯ್ತು?” ಅಂತ ಕೇಳಿದೆ. “ಅವಳಪ್ಪನಿಗೆ ನನ್ನ ಭಾವನೆಗಳು ಅರ್ಥವಾಯಿತು” ಅಂದ. “ಆಮೇಲೆ ಆ ಹುಡುಗಿಯ ಕತೆ ಏನಾಯ್ತು?” ಅಂತ ಕೇಳಿದೆ. “ಮತ್ತೆ ನಾನೆಂದೂ ಅವಳನ್ನ ನೋಡಲಿಲ್ಲ. ಬಿಡು ನಾವಾಗ ಮಕ್ಕಳಲ್ವಾ.” ಅಂದ. ಆದದ್ದೇನು ನಂಗರ್ಥವಾಯಿತು ಆದರೂ ಅರ್ಥವಾಗಲಿಲ್ಲ.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..
ಈ ಪುಸ್ತಕದ ಪ್ರತಿ ಎಲ್ಲಿ ಸಿಗುತ್ತದೆ ದಯವಿಟ್ಟು ತಿಳಿಸಿ, ಪುಸ್ತಕ ಸಿಗುವ ತಾಣದ ಆನ್ಲೈನ್ ಲಿಂಕ್ ಇದ್ದರೆ ದಯವಿಟ್ಟು ಹಂಚಿ