ಒದ್ದೆಯಾಗಿದ್ದವು ನೆನಪುಗಳು

ಅವ್ವನ ಮೊಣಕಾಲುಗಳು ಮೇಲೆ ಹಸುಗೂಸು
ಹಾಲ್ಗೆನೆಯ ದೇಹ
ಬೆಣ್ಣೆಯಂತಹ ಬೆನ್ನಿನ ಮೇಲೆ
ಬಿಸಿನೀರು
ಕೆಂಪಾಯ್ತು ರತ್ನೀರು

ತಾಮ್ರದಂಡೆಯ ನೀರು
ಮೀನಖಂಡದ ಮೇಲೆ
ಹರಿವ ನೆತ್ತರು
ತಾರಸಿ ಗೋಡೆಯ ಬುಡದಲ್ಲಿ
ಬಿರಿದ ಮೊಗ್ಗಿನೆಡೆಗೆಯೇ ಅವ್ವನ ದಿಟ್ಟಿ

ಮಾಗಿದ ಮೈಗೆ ಹರಿಶಿಣದ ಚಿತ್ತಾರ
ಮನೆಯ ಮುಂದೆ ನೆಂಟರ ಕಲರವ
ಹಸಿರಾಯ್ತು ಗುಳ್ಳು
ಅವ್ವ ಸೆರಗು ಒದರಿ ತೆಗೆದಳು ದೃಷ್ಟಿ

ಅವ್ವನ ಒಡೆದ ಅಂಗೈಯಲ್ಲಿ ನನ್ನ ಕೂಸು
ಗರ್ಭವನ್ನು ಬಿಗಿದು ಹಿಡಿದಿದ್ದ ದಾರದಲ್ಲಿ
ಬೆಸೆದುಕೊಂಡಿದ್ದವು ಐಲು ಕನಸು

ಹಾಳೆಗೆ ಅಂಟಿರುವ ತಾರೀಕಿನ ಚೌಕಟ್ಟಿನೊಳಗೆ
ಸಮಯ ಕರಗುವ ಸರದಿ
ಸುಕ್ಕುಗಟ್ಟಿರುವ ದೇಹದ ಮೇಲೆ ಸುಡುವ ನೀರು ಕಡುಗಪ್ಪು ಇದ್ದಿಲು
ಸಿಕ್ಕುಗಟ್ಟಿರುವ ನೆರೆತ ತುರುಬಿನೊಳಗೆ
ಒದ್ದೆಯಾಗಿದ್ದವು ನೆನಪುಗಳು

ಯಶಸ್ವಿನಿ. ಎಂ.ಎನ್ . ಮೈಸೂರಿನವರು
ಹಿಂದೂಸ್ತಾನ್ ಕಾಲೇಜಿನಲ್ಲಿ ಆಂಗ್ಲಭಾಷಾ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಇವರ ಹಲವು ಕವಿತೆಗಳು ಹಾಗು ಲೇಖನಗಳು ಬೇರೆಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಚಿತ್ರಕಲೆ, ಪುಸ್ತಕಗಳನ್ನು ಓದುವುದು ಮತ್ತು ನಾಣ್ಯ ಸಂಗ್ರಹಣೆ ಇವರ ಹವ್ಯಾಸಗಳು