Advertisement
ಯುಗ ಯುಗಾದಿ ಕಳೆದರೂ ಮರೆಯಲಾಗದ ಸಂಭ್ರಮ: ಸುಮಾ ಸತೀಶ್ ಸರಣಿ

ಯುಗ ಯುಗಾದಿ ಕಳೆದರೂ ಮರೆಯಲಾಗದ ಸಂಭ್ರಮ: ಸುಮಾ ಸತೀಶ್ ಸರಣಿ

ಮನೆ ಹೆಂಗಸರಿಗೆ ಮಧ್ಯರಾತ್ರಿಯಿಂದಲೇ ಸುರುವಾಗ್ತಿತ್ತು. ಬೆಳಗಿನ ಜಾವ ಎರಡು ಗಂಟೆಯಿಂದಲೇ ಹೂರಣ ರುಬ್ಬುವ, ಒಬ್ಬಟ್ಟು ತಟ್ಟುವ, ಬೇಯಿಸುವ ಸದ್ದು. ಹೋಳಿಗೆ ವಾಸನೆಗೆ ಊರೆಲ್ಲಾ ಘಮಗುಡುತ್ತಿತ್ತು. ಒಬ್ಬಟ್ಟು ಸಾರು ಮರಳಿಸುತ್ತಿದ್ದರೆ ಮೂಗಿನ ಹೊಳ್ಳೆಗಳು ಅರಳಿ, ನಿಮಿರುತ್ತಿದ್ದವು. ದೊಡ್ಡ ದೊಡ್ಡ ಬೇಸನ್ನುಗಳಲ್ಲಿ ಒಬ್ಬಟ್ಟಿನ ರಾಶಿ. ಆಗೆಲ್ಲಾ ಒಬ್ಬೊಬ್ಬರೂ ಹತ್ತು – ಹನ್ನೆರಡು ಒಬ್ಬಟ್ಟು, ಸಣ್ಣಮಿಳ್ಳೆ ತುಪ್ಪ – ಬಟ್ಟಲು ಹಾಲು ಹಾಕಿಕೊಂಡು ಬಾರಿಸುತ್ತಿದ್ದರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಯುಗಾದಿಯ ಸಂಭ್ರಮಗಳ ಕುರಿತ ಬರಹ ನಿಮ್ಮ ಓದಿಗೆ

“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” ಬೇಂದ್ರೆಯವರ ಈ ಸಾಲುಗಳನ್ನು ಗುನುಗಿಕೊಳ್ಳದೆ ಪ್ರತಿವರುಷದ ಉಗಾದಿ ಸಂಭ್ರಮ ಪೂರ್ಣವಾಗದು. ಅಂತೆಯೇ ಉಗಾದಿ ಬಂದಾಗೊಮ್ಮೆ “ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು” ಎಂಬಂತೆ ಬಾಲ್ಯದ ಸಮೃದ್ಧ ನೆನಪುಗಳನ್ನು ಮೊಗೆದು ತೆಗೆದು ಚಪ್ಪರಿಸಿ, ಜೀವಚೈತನ್ಯದ ಸೆಲೆಯನ್ನು ಆವಾಹಿಸಿಕೊಳ್ಳದೇ ಉಗಾದಿ ಮುಗಿಯದು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಚಿಕ್ಕಮಾಲೂರು ಒಂದು ಪುಟ್ಟ ಗ್ರಾಮ. ಆ ಪುಟ್ಟ ಹಳ್ಳಿಯ ಕೂಸು ನಾನು. ಬಾಲ್ಯದಲ್ಲಿ ಹಬ್ಬಗಳನ್ನು ಸಂಭ್ರಮಿಸಲು ಬೇಲಿಯಿರಲಿಲ್ಲ. ಮುಕ್ತವಾಗಿ, ಎಲ್ಲೆಯಿಲ್ಲದ ಪರಿಸರದ ತುಂಬೆಲ್ಲ ಅಡ್ಡಾಡಿ, ಸಂತಸದ ಮೇರು ತಲುಪುತ್ತಿದ್ದುದು ಈಗ ಮರೆತ ಕವಿತೆ. ಆಗಾಗ ನಡೆಯುವ ಮರು ಓದು ಕವಿತೆಯನ್ನು ಜೀವಂತವಾಗಿ ಇಟ್ಟಿರುವಂತೆ ಈ ನೆನಪುಗಳು. ಒಣಗಿದ ತರಗೆಲೆಗಳನ್ನು ಬದಿಗೆ ಸರಿಸಿದೊಡನೆ ಅಡಗಿ ಕುಳಿತ ಹಸಿರೆಲೆಗಳು ಧುತ್ತನೆ ಕಣ್ಮುಂದೆ ನಲಿಯುತ್ತವೆ.

ಉಗಾದಿ ವಿಶೇಷಗ್ಳು

ಉಗಾದಿ ಮೂರ್ನಾಲ್ಕು ಕಾರಣಗಳಿಂದ ನಮಗೆ ಬಲು ವಿಶೇಷವಾಗಿತ್ತು. ಮೊದಲನೆಯದು ಬಯಲುಸೀಮೆಯ ವಾತಾವರಣದ ಊರು ನಮ್ಮದು. ಬಿಸಿಲ್ಗಾಲ ಅಂದ್ರೆ ಸೂರಪ್ಪನ ಉಬ್ಬರ ಸ್ಯಾನೆ.‌ ಸಿಕ್ಕಾಪಟ್ಟೆ ಧಗೆ. ಶಿಶಿರದಲ್ಲಿ ಒಣಗಿದ ಮರಗಿಡಗಳು ನೆರಳು ಕೊಡಲೊಲ್ಲೆನೆಂದಾಗ ಬಾಡಿ ಬಸವಳಿದಿರುತ್ತಿದ್ದ ಮಕಗಳಿಗೆ(ಮುಖ) ವಸಂತ ಹೆಜ್ಜೆಯಿಡುವ ಚೈತ್ರಕಾಲ ತಂಪೆರೆಯುತ್ತಿತ್ತು. ಜಾಲಿಮುಳ್ಳುಕಂಟಿ ಬಿಟ್ಟಿ ಬ್ಯಾರೆ ಹಸ್ರೇ( ಹಸಿರೇ) ಕಾಣ್ದಿದ್ದ ಜಾಗದಾಗೆ ಇದ್ಕಿದ್ದಂಗೆ, ಚಿಗುರು – ಹೂ – ಕಾಯಿ – ಹಣ್ಣುಗಳ ಆಭರಣಗಳನ್ನು ಧರಿಸಿ, ಅಲಂಕರಿಸಿಕೊಂಡ ಮರಗಿಡಗಳು ನಾಜೂಕಾಗಿ ತೊನೆಯುತ್ತಾ ತಂಗಾಳಿ ಸೂಸುತ್ತಿದ್ದರೆ ನಮ್ಮ ಖುಷೀಗೆ ಎಗ್ಗುಸಿಗ್ಗು ಇರ್ತಿರಲಿಲ್ಲ. ನಮ್ಮ ಆಟೋಟಗಳು ಹೊತ್ತುಬೀಳ್ಳೂ (ಬೆಳಗಿನಿಂದ ಬೈಗಿನವರೆಗೆ) ನಡೀತಿದ್ವು. ಸುತ್ತಾಮುತ್ತಾ ಇರೋ ಪರಿಸರ ಒಂದೇ ಸತಿ ಹಸಿರಿನ ಒಡಲಿನಲ್ಲಿ ವರ್ಣಗಳ‌ ಕಾರುಬಾರು ನಡೆಸುತ್ತಾ ಶೃಂಗಾರಮಯವಾಗುತ್ತಾ ಇದ್ದಿದ್ದು ನಮ್ಗೂ ಜೋಶ್ ನೀಡುತ್ತಿತ್ತು. ಅದ್ರಿಂದ ಬಿಸಿಲಿನ ಝಳ ತುಸು ಕಡಿಮೆಯಾಗತೈತೆ ಅಂಬೋದೂ(ನೆಳ್ಳು ಇರ್ತಿತ್ತಲ್ಲ, ಬಿಸ್ಲು ಮುಚ್ಚೋಕೆ) ಉಗಾದಿಗೆ ಬಕಪಕ್ಷಿಗಳಂತೆ ನಾವು ಕಾಯುತ್ತಿದ್ದುದಕ್ಕೆ ಒಂದು ಪುಟಾಣಿ ಕಾರಣ ಅಷ್ಟೇ.

ಎರಡನೆಯದು, ಉಗಾದಿ ವರ್ಷದ ಆದಿಯಾದ್ದರಿಂದ ಸಿಕ್ಕಾಪಟ್ಟೆ ಚಟುವಟಿಕೆಗಳು ಊರ್ನಾಗೆ ನಡೆಯುತ್ತಿದ್ದುದು ಮಕ್ಕಳಿಗೆ ‌ಮನರಂಜನೆ.

ಮೂರನೆಯದು, ದೊಡ್ಡ ಪರೀಕ್ಷೆ ಕಡಾಗಿ(ಮುಗಿದು), ಮೆಟ್ಟಿದ್ದ ಭೂತ ಇಳಿದು(ನಮ್ಕಿಂತ್ಲೂವೇ ಮೇಷ್ಟ್ರಿಗೇ ಮೆಟ್ಕಂತಿದ್ದಿದ್ದು) ಪುಸ್ತಕಗಳು ಅದಾವ ಮಾಯದಲ್ಲಿಯೋ ಮೂಲೆ ಸೇರಿ, ಬೇಸಿಗೆ ರಜೆಯ ಮಜೆ ಆರಂಭವಾಗುತ್ತಿದ್ದ ಪರ್ವಕಾಲ ಮಕ್ಕಳಿಗೆ ಉಗಾದಿಯ ಹೋಳಿಗೆಗಿಂತ ಬಲು ಸಿಹಿ. ಎಗ್ಗಿಲ್ಲದ ತಿರುಗಾಟಕ್ಕೆ ರಹದಾರಿ ಸಿಗುತ್ತಿತ್ತು.

ಹೊಸಬಟ್ಟೆ ಸಡಗರ

ನಾಲ್ಕನೆಯದು, ಅಂದಿನ ಕಾಲಯಾನದಲ್ಲಿ ಅತಿ ಮುಖ್ಯವಾದದ್ದು ಹೊಸ ಬಟ್ಟೆಯ ಸಂಭ್ರಮ. ಈಗಿನಂತೆ ಕಂಡದ್ದೆಲ್ಲ ಕೊಳ್ಳುವ ಕೊಳ್ಳುಬಾಕ ಸಂಸ್ಕೃತಿ ಇರಲಿಲ್ಲ. ಕೊಳ್ಳಲು ಕಾಸೂ ಇರಲಿಲ್ಲ ಅಂಬೋದು ಮುಖ್ಯ. ವರುಷಕ್ಕೆ ಎರಡು ಕಿತಾನೇ ಹೊಸ ಬಟ್ಟೆ. ಉಗಾದಿಗೊಮ್ಮೆ, ಗೌರಿಗೊಮ್ಮೆ. ಇನ್ನಾ ಒನ್ನೊಂದ್ಸತಿ ಅಪ್ರೂಪಕ್ಕೆ ದೀಪಾವಳಿಗೆ ಸಿಕ್ಕರೆ ಅದು ಬೋನಸ್. ಪರೀಕ್ಷೆ ಹತ್ತಿರವಾಗುತ್ತಿದ್ದರೂ ನಾವು ಓದಲು ದಿನಗಣನೆ ಮಾಡುತ್ತಿದ್ದೆವೋ ಇಲ್ಲವೋ, ಹೊಸಬಟ್ಟೆಗಾಗಿ ಉಗಾದಿಯ ದಿನಗಣನೆ ತಪ್ಪುತ್ತಿರಲಿಲ್ಲ. ಹೊಸ ಬಟ್ಟೆಯೆಂಬ ಬೆಲ್ಲದ ಮೂಟೆಯ ಮುಂದೆ, ಪರೀಕ್ಷೆ – ಓದು ಬೇವಿನಂತೆ ರುಚಿಸುತ್ತಿರಲಿಲ್ಲ. ಈ ಹೊಸ ಬಟ್ಟೆಯ ಕತೆಗೆ ಉಗಾದಿ ನೆನಪುಗಳ ಮೆರವಣಿಗೆಯಲ್ಲಿ ಅಗ್ರಸ್ಥಾನ. ಒಂಥರಾ ಮದುವಣಿಗನ ಹಾಗೆ.

ಹಬ್ಬಕ್ಕೆ ಒಂದು ತಿಂಗಳ ಮೊದಲೇ ಅಪ್ಪ ಮನೆ ಮಂದಿಗೆಲ್ಲ ಹೊಸಬಟ್ಟೆ ತರುತ್ತಿದ್ದರು. ದರ್ಜಿ ಮೂರ್ತಿಗೆ ಹೇಳಿ ಕಳಿಸುತ್ತಿದ್ದರು. ಅವನು ಬಂದು ಅಳತೆ ತೊಗೊಂಡು ಹೋಗುವಾಗ, ನಾವೆಲ್ಲ ಒಕ್ಕೊರಲಿನಿಂದ ಕೇಳುತ್ತಿದ್ದುದು ಯಾವಾಗ ಕೊಡ್ತೀಯ?? ಎಂದು. ಅವನೇನೋ ಬಾಯಿಮಾತಿಗೆ ನಾಲ್ಕು ದಿನ ಅಂತ ಹೇಳುತ್ತಿದ್ದ. ನಾವು ಬಿಟ್ಟೇವೇ, ಐದನೆಯ ದಿನ ಬೆಳ ಬೆಳಗ್ಗೆಯೇ, ಇಸ್ಕೂಲಿಗೆ ಹೋಗೋ ಮುಂಚೆ, ಅವನೂ ಅಂಗಡಿ ಬಾಗಿಲು ತೆಗೆಯೋ ಮುಂಚೆಯೇ ಅಲ್ಲಿ ನಾವು ಹಾಜರ್.‌ ಅವನೋ ನಮ್ಮ ಮನೆಯಿಂದ ಬಟ್ಟೆಯನ್ನು ಸುತ್ತಿ, ಗಂಟು ಕಟ್ಟಿಕೊಂಡು ಹೋಗಿದ್ದುದನ್ನು, ಬಟ್ಟೆಯ ರಾಶಿಯಲ್ಲಿ ಬಿಸಾಕಿರತಿದ್ದ. ಅದು ತಳಕ್ಕೆ ಸೇರಿ ಕಣ್ಗೂ ಕಾಣ್ದಂಗೆ ಮರೆಯಾಗಿರುತ್ತಿತ್ತು. ದಿನಾ ಬೆಳಗ್ಗೆ ಇಸ್ಕೂಲಿಗೆ ಮುಂಚೆ ಅವನ ಅಂಗಡಿಗೆ ಎಡತಾಕುವುದು. ಸಿಕ್ತಾ? ಕೇಳೋದು. ಒಂದು ವಾರ ಇಂಗೇ ಕಳೆದ ಮೇಲೆ, ಅವುಂಗೆ ನಮ್ಮ‌ ಬಸವಳಿದ ಮಾರಿ ಕಂಡು ಪಾಪ ಅನ್ಸಿ, ಆ ಕಸರೆ ರಾಶಿ ಮಧ್ಯದಿಂದ, ಆ ಗಂಟನ್ನು ಹುಡುಕಿ ತೆಗೆಯುತ್ತಿದ್ದ. ಇನ್ನೊಂದು ವಾರ ಚಪ್ಪಲಿ ಸವೆಸಿದ ಮೇಲೆ, ಕತ್ತರಿಸಿ ಇಡುತ್ತಿದ್ದ. ಮತ್ತೊಂದು ವಾರ ಅಲೆದಾಡಿದ್ ಮೇಲೆ ಲಂಗ ಜಾಕೀಟು ಹೊಲಿದು, ಗುಂಡಿ ಹಾಕಿ ಕೊಡುತ್ತಿದ್ದ. ಒಂದೇ ಉಸಿರಿನಲ್ಲಿ ಮನೆಗೆ ಓಡಿ ಬಂದು ಹಾಕ್ಕೊಂಡು ನೋಡಿದರೆ, ಗಾಬರಿಯಾಗುತ್ತಿತ್ತು. ಎಷ್ಟು ದೊಗಲೆ ದೊಗಲೆಯೆಂದರೆ ಇನ್ನೊಬ್ಬರು ತೂರುವಷ್ಟು. ನನಗೋ ಯಾವಾಗಲೂ ಅನುಮಾನ, ನನಗೊಬ್ಬಳಿಗೆ ಹೊಲಿದೌನೋ ಅಥವಾ ನನಗೂ ನಮ್ಮಕ್ಕಂಗೂ ಸೇರಿಸಿ ಹೊಲಿದೌನೋ ಅಂತ. ನಾವಿಬ್ಬರೂ ಥೇಟ್ ಮನೆ ಉಡುಗೋ(ಗುಡಿಸೋ) ಪೊರಕೆ ಕಡ್ಡಿಗಳಂಗೇ ಇದ್ದೆವು. ಇದರಲ್ಲಿ ದರ್ಜಿ ಮೂರ್ತಿಯ ತಪ್ಪೇನೂ ಇಲ್ಲ ಬುಡಿ. ಅವನು ಅಳತೆ ತಗೋಣೋಕೆ ಸುರು ಮಾಡ್ತಿದ್ದಂಗೇನೇ ಅಮ್ಮ, ಮತ್ತೀಗ ಆ ಟೇಮಿಗೆ ಯಾರಾನಾ ಅತ್ತೆದೀರು ಬಂದಿದ್ರೆ ಅವ್ರು ಸುಮ್ಮನಿದ್ದಾರೇ? ನೋಡಪ್ಪಾ, ಬೆಳೆಯೋ‌ ಮಕ್ಕಳು, ನಾಕು ಇಂಚು ದಪ್ಪ ಆದರೂ ಸರಿ, ನಾಕು ಇಂಚು ಉದ್ದ ಆದರೂ ಸರಿ, ಒಟ್ನಾಗೆ ಇನ್ನೂ ನಾಕು ವರುಷ ಬಾಳಿಕೆ ಬರಬೇಕು ಅಷ್ಟೇ. ಇಂಗೇ ಅವು‌ನ್ ತಲೆ ತಿಂದು, ಅವನು ಪರಪರ ತಲೆ ಕೆರ್ಕಂಡು ದುಪ್ಪಟ್ಟು ಅಳತೆ ತೊಗೊಳ್ಳೊ ತರ ಮಾಡಿಬಿಡುತ್ತಿದ್ದರು. ಇದೇನು ದೂರಾಲೋಚನೆಯೋ, ದುರಾಲೋಚನೆಯೋ ಅಥವಾ ದೂರ್ ದೂರ್ ದೂರಾಲೋಚನೆಯೋ ಅಂತ ನಾವೂ ತಲೆಕೆರ್ಕಂಡು, ಸುಮ್ಕಾಗ್ತಿದ್ವಿ. ಕೊಡಿಸೋದು ವರ್ಷಕ್ಕೆ ಎಲ್ಡು – ಮೂರು ಜೊತೆ. ಅದರಾಗೆ ನಾಕು ವರ್ಷದ ಬಾಳಿಕೆ ಚಿಂತೆ. ಆಸು ವರ್ಷ ಬಂದಾನಾ ಬಂದಾವಾ? ನಾನೋ ಪಾಸಾಲಮ್ಮ(ಅಡರಾ ಬಡರಾ ತಿರ್ಗಾಡ್ಕಂಡು, ಬೀಳೋದು ಏಳೋದು ಸ್ಯಾನೆ) ಅಂತ್ಲೇ ನಮ್ಮನ್ಯಾಗೆ ಬಲು ಹೆಸ್ರುವಾಸಿ. ಮುಂದ್ಲೊರ್ಸದ ಹೊತ್ಗೆ ತಿರ್ಗಾ ಮುರ್ಗಾ ಅದ್ನೇ ಹಾಕ್ಕಂಡು ಉಜ್ಜಾಡಿ ಹಳೇದಾಗಿರ್ತಿದ್ವು. ಹಬ್ಬ ಬಂದ್ರೂ ಅದೇ, ಮದ್ವೆ ಮುಂಜೀ ಅಂದ್ರೂ ಅದೇ, ಊರ್ಗೋದ್ರೂ ಅದೇಯಾ. ಇನ್ನೇನಾದೀತು?

ವಿಷ್ಯಾ ಎಲ್ಲೋ ಓತು. ಕೊನೆಗೆ ನಮ್ಮ‌ ಬುಡುಬುಡಿಕೆ ವೇಷ ನೋಡಲಾರದೆ, ನಮ್ಮಮ್ಮ ಸ್ವಲ್ಪ ಟಕ್ಕು ಹಿಡಿಯಪ್ಪ ಮೂರ್ತಿ ಅಂತ ಹೇಳುತ್ತಿದ್ದರು. ಅಗ್ಲಾನೂ ಜಾಸ್ತಿ, ಉದ್ದಾನೂ ಜಾಸ್ತಿ ಇರ್ತಿತ್ತಲ್ಲ. ಅವನೂ ಹಿಡಿದೂ, ಹಿಡಿದೂ, ಕೊನೆಗೆ ನನ್ನ ಅಳತೆಗಿಂತ ಒಂದೂವರೆ ಎರಡು ಇಂಚು ದೊಡ್ಡದು ಮಾಡಿಕೊಡೋಷ್ಟರಲ್ಲಿ ಹಬ್ಬದ ಮುನ್ನಾ ದಿನ ಜಾರ್ಕಂಡು ಬಂದೇ ಬಿಡುತ್ತಿತ್ತು. ಅವತ್ತಂತೂ ಬೆಳಗ್ಗೆಯಿಂದ್ಲೇ ಅವನ ಮುಂದೇನೇ ಕೂತು ವದರಾಡಿ, ರೋಪ್ ಹಾಕಿ, ಹೆದರಿಸಿ, ಹೆಚ್ಚೂ ಕಮ್ಮಿ ಬಟ್ಟೆ ಕಿತ್ತುಕೊಂಡೇ ಮನೆಗೆ ಬರೋಷ್ಟರಲ್ಲಿ ಸಂಜೇನೇ.‌ ಉಸ್ಸಪ್ಪಾಂತ ಉಸ್ರು ಬುಟ್ಟು ಸುಧಾರ್ಸಿಕೊಂತಿದ್ದೆ. ಹೆಚ್ಚೂಕಮ್ಮಿ ಒಂದು ತಿಂಗಳ ಈ ಹೋರಾಟದಲ್ಲಿ ನಾನು ಇನ್ನೂ ಒಂದಿಂಚು ಕಮ್ಮಿ ಆಗಿರುತ್ತಿದ್ದೆ!!

ಇಲ್ಲಿವರ್ಗೆ ಒಂದು ಘಟ್ಟ ಆದ್ರೆ ಮುಂದೆ ಇನ್ನೊಂದು ಪರ್ವ ಶುರು. ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಾಟ. ಕನಸ್ನಾಗೂ ಹೊಸ ಬಟ್ಟೆ ಮಿಂಚು. ಅದ್ರಾಗೂ ಬರೇ ಲಂಗ ಜಾಕೀಟು ಹೊಲ್ಸಿ ಇಕ್ದಿದ್ದ ನಮ್ಮಮ್ಮ, ಒಂದ್ಸಲ ಪ್ಯಾಟೇಲಿದ್ದ ನಮ್ಮತ್ತೇ ಮಗಳ್ನ ನೋಡಿ ಫ್ರಾಕು(ಮಂಡೀಗಿಂತ್ಲೂ ಸ್ಯಾನೇ ಕೆಳೀಕ್ಕೆ ಇದ್ದಿದ್ದು ಅನ್ನೋದು ಬ್ಯಾರೆ ವಿಷ್ಯಾ ಆದ್ರೂ ಅದೂ ದೊಡ್ದೇಯಾ. ಆಗಂತೂ ಗೆಣೆಕಾರ್ತೀರ ಕಣ್ಣೆಲ್ಲಾ ಕೆಂಪೋ ಕೆಂಪು)ಹೊಲಿಸಿದ್ರು. ಆ ಕಿತ ಅಂತೂ ಪುಸ್ತಕದಾಗಿದ್ದ ಎಲಿಜಬೆತ್ ರಾಣೀನೇ ನಾನಾಗಿದ್ದೆ. ನಡಿಯೋವಾಗ ಬಿಂಕ ಸ್ವಲ್ಪ ಜಾಸ್ತೀನೇ ಆಗಿ, ವಾಲಾಡ್ತಿದ್ದೆ ಅನ್ನಿ. ನಿದ್ದೇನಾಗೂ ಅದೇಯಾ. ಬೆಳಗಾನ ಎದ್ದು ಹೊಸ ಬಟ್ಟೆ ಧರಿಸಿ, ನಲಿಯುವ ಕನಸು. ಬೇರೆ ದಿನಗಳಲ್ಲಿ ಬೆಳಗ್ಗೆ ಅಮ್ಮ ಮೂತಿ ತಿವಿದು ಎಬ್ಬರಿಸಿದ್ರೂ ಏಳದಿದ್ದವಳು, ಅವತ್ತು ಅಮ್ಮ‌ ಎದ್ದೇಳೋದನ್ನೇ ಕಾದುಕೊಂಡು, ಹಿಂದ್ಲೇ ಎದ್ದು, ತಲೆಗೆ ಚೆನ್ನಾಗಿ ಹರಳೆಣ್ಣೆ ಮೆತ್ತಿಸಿಕೊಂಡು ಸಿದ್ಧಳಾಗುವುದಕ್ಕೆ ಒಂಚೂರೂ ಸದ್ದು ಗದ್ದಲಾನೇ ಇರುತ್ತಿರಲಿಲ್ಲ. ಅಮ್ಮ ಸೀಗೆಕಾಯಿ ಹಾಕಿ ಗಸಗಸ ಉಜ್ಜಿದರೂ ಕಮಕ್ ಕಿಮಕ್ ಅಂದರೆ ಕೇಳಿ. ಬಚ್ಚಲಿನಿಂದ ಸೀದಾ ಹಳೆರೂಮಿನಲ್ಲಿದ್ದ ಟ್ರಂಕಿನ ಕಡೀಕ್ಕೆ ಓಟ. ಲಂಗ ತೆಗೆದು, ಪ್ರೀತಿಯಿಂದ ಸವರಿ, ಓಡ್ಕಂತಾಲೇ ಬಂದು ದೇವರಿಗೆ ತೋರಿಸಿ, ದೇವರ ಮುಂದಿನ ಕುಂಕುಮದ ಭರಣಿಯಿಂದ ವಸಿ ಕುಂಕುಮ ತೆಗೆದು, ನಾಜೂಕಾಗಿ ಬಟ್ಟೆಯ ಅಂಚಿಗೆ ಕಾಣದಂಗೆ ತಗುಲಿಸಿ, ಮುಂದಿನ ಕಿತ ಹೊಸ ಬಟ್ಟೆ ಬೇಗ ಸಿಗಲಿ ಎಂದು ಕಣ್ಮುಚ್ಚಿ ಬೇಡಿ, ಅಡ್ಡ ಬಿದ್ದಂಗೆ ಮಾಡಿ, ಅಷ್ಟೇ ವೇಗದಲ್ಲಿ ರೂಮು ಸೇರಿ ಹೊಸ ಬಟ್ಟೆ ಹಾಕ್ಕಂಡು, ಹೆಂಗೈತೆ ಅಂತ ಅಮ್ಮನ ಬೆನ್ನು ಬೀಳ್ತಿದ್ದೆ. ನಮ್ಮ ಉದ್ದ ಅಗಲ, ಎಡಬಲಗಳನ್ನು ದರ್ಶಿಸಲು ನಿಲುವುಗನ್ನಡಿ ಇರಲಿಲ್ಲವಲ್ಲ.‌ ಅಮ್ಮ ಕೆಲಸದ ಮಧ್ಯೇನೂ ನೋಡಿ, ಮುದ್ದಮ್ಮ! ಊರು ಅಡ್ಡಾಡೋಕೆ ಹೋಗ್ತೀಯಾ, ದೃಷ್ಟಿ ಆದೀತು ಅಂತ ಮುಂದಾಲೋಚನೆಯಿಂದ, ಉಪ್ಪು ನಿವಾಳಿಸಿದರೆ ಮುಗಿಯಿತು. ಸ್ವರ್ಗದ ಸೀಮೆಯಿಂದ ಇಳಿದ ಅಪ್ಸರೆಯೇ ನಾನೆಂಬ ಗತ್ತು ಗೈರತ್ತು. ಹೆತ್ತವರಿಗೆ ಹೆಗ್ಗಣವೂ ಮುದ್ದೆಂಬುದು ಅರಿವಾಗದಿದ್ದ ವಯಸ್ಸು. ಲಂಗ ಸ್ವಲ್ಪ ದೊಗಲೆ ಇದ್ದರೂ, ಉದ್ದವಿದ್ದರೂ, ಕೈಯಿಂದ ಹಿಡಿದೆತ್ತಿಕೊಂಡು ಅಕ್ಕಪಕ್ಕದ ಮನೆಗಳಿಗೆ ಬಿಜಯಂಗೈಯ್ಯೋದು ಶುರುವಾಗುತ್ತಿತ್ತು.

ಉಗಾದಿ ಆಟಗ್ಳು

ಆ ಬೀದಿ, ಈ ಬೀದಿ ಎಲ್ಲ ಮುಗಿಸಿ, ಎಲ್ಲರೂ ಹೊಸ ಬಟ್ಟೆ ನೋಡಿಯಾದ ಮೇಲೆ, ಅವರಿವರು ಕೊಟ್ಟದ್ದನ್ನು ಹೊಟ್ಟೆಗೆ ಸೇರಿಸಿ, ಎಲ್ಲವೂ ಒಳಗೆ ಸೇರಿ ಚಿತ್ರಾನ್ನ ಆದ ಮೇಲೆ, ಗೆಣೆಕಾರ್ತೀರನ್ನು ಹುಡುಕಿಕೊಂಡು ಸವಾರಿ ಹೊರಡುತ್ತಿತ್ತು. ಅಲ್ಲಿಯವರೆಗೆ ನಮ್ಮ ಲಂಗ ಬಹಳ ಚೆಂದವಾಗಿ ಕಾಣುತ್ತಿತ್ತು.‌ ತಿರುಗಿಸಿ ಮುರುಗಿಸಿ ಮೆರೀತಿದ್ದ ಮನಸು ಸಿನೇಹಿತೇರ ಲಂಗ ನೋಡಿದ ತಕ್ಷಣ ಬಾಡೋಗ್ತಿತ್ತು. ಅಯ್ಯೋ ಅವಳ ಲಂಗದಾಗೆ ನೋಡು, ಮಾವಿನಕಾಯಿ ಐತೆ. ಇವಳ ಲಂಗದಾಗೆ ಬಳ್ಳಿ, ಇನ್ನೊಬ್ಬಳದ್ರಾಗೆ ಹೂವು. ನನ್ನದು ಸಣ್ಣ ಹೂವು, ಅವಳದು ದೊಡ್ಡದು. ಇಂಗೇ ಒಂದಿಷ್ಟು‌ ಮಾತುಕತೆ ನಡೆದು ಆ ಅಧ್ಯಾಯಕ್ಕೆ ಮುಕ್ತಾಯ ಹಾಡುತ್ತಿದ್ದೆವು. ಆ ವಿಷಯ ಮರೆತೂ ಬಿಟ್ಟು, ಊರಿನ ಹೊಸ ಅಶ್ವತ್ಥಕಟ್ಟೆಯಲ್ಲಿ ಸೇರುತ್ತಿದ್ದೆವು. ಊರು ದೊಡ್ಡದಾದ ಮ್ಯಾಗೆ ಇನ್ನೊಂದು ಹರಟೆ ಕಟ್ಟೆ ಜರೂರತ್ತು ಕಂಡುಕೊಂಡು ಊರಿನ ಇನ್ನೊಂದು ತುದೀನಾಗೆ ಹೊಸ ಕಟ್ಟೆ ಮಾಡಿದ್ದರು. ಎಂಗೂ ಅಲ್ಲಿ‌ ಅಷ್ಟೊತ್ತಿಗಾಗ್ಲೇ ಬೇವಿನ ಮರ, ಅರಳೀಮರಗಳು ದೊಡ್ಡದಾಗಿ ಬೇರೂರಿದ್ದವು. ಯಾರೋ ಅಲ್ಲಿಯೂ ನಾಗರಕಲ್ಲು‌ ಪ್ರತಿಷ್ಠಾಪಿಸಿ ದೈವೀಕ ಕಳೆ ಕೊಟ್ಟುಬಿಟ್ಟಿದ್ದರು. ಹಿಂದಿನ ದಿನವೇ ಅಲ್ಲಿ ರಾಮಪ್ಪಂಗೆ ಹೇಳಿ ಬೇವಿನಮರಕ್ಕೆ ಹಗ್ಗ ಕಟ್ಟಿಸಿ, ಉಯ್ಯಾಲೆ ರೆಡಿ ಇಕ್ಕಿರ್ತಿದ್ವಿ. ಮೆತ್ತುಗಿರಾ ಹಳೆ ಬೆರ್ಸೀಟಿನ(ಬೆಡ್ ಶೀಟ್) ತುಂಡೊಂದು ಕೈಯಲ್ಲಿ ಇರುತ್ತಿತ್ತು. ನಾವು ಸಣ್ಣವರು ಉಯ್ಯಾಲೆ ತೂಗಿಕೊಳ್ಳುತ್ತಿದ್ದೆವು. ಸರತಿಯಂತೆ ಗೆಳತಿಯರು ಒಬ್ಬರನ್ನೊಬ್ಬರು ತೂಗುತ್ತಿದ್ದೆವು. ಉಯ್ಯಾಲ ಜಂಪಾಲ ಲೂಗುರಾವಮ್ಮ ಅಂತ ಹಾಡ್ಕಂತಾ ಊಗುತಿದ್ವಿ. ಗಂಡು ಹುಡುಗರು ಹೊಸ ಬಟ್ಟೆ ತೊಟ್ಟು, ಗೋಲಿ, ಬುಗುರಿ, ಚಿಣ್ಣಿದಾಂಡು, ಲಗೋರಿ, ಚೆಂಡಾಟಗಳಲ್ಲಿ ಮುಳುಗುತ್ತಿದ್ದರು. ಅವ್ರ ತಾವಿರಾ ಚೆಂಡಾರಾ ಎಂತಾದ್ದು? ಒಳಗೆ ಹಳೆಬಟ್ಟೆ ಚೂರು ಇಟ್ಟು ದಾರದಲ್ಲಿ ಬಿಗಿಯಾಗಿ ಸುತ್ತಿಸುತ್ತಿ ಮಾಡಿರುತ್ತಿದ್ದರು. ಅದು ಕಲ್ಲಿಗಿಂತಲೂ ಗಟ್ಟಿ ಇರುತ್ತಿತ್ತು. ಏಟು ತಗುಲಿದರೆ ಜೀವ ಬಾಯಿಗೆ ಬರುತ್ತಿತ್ತು.‌ ನಾವು ಆ ತಂಟೆಗೇ ಹೋಗಲು ಹೆದರಿ, ಕುಂಟಾಬಿಲ್ಲೆ ಆಡಿಕೊಂಡು ಕತೆ ಕಳೆಯುತ್ತಿದ್ದೆವು. ಅವ್ರು ಆಡೋವಾಗ ಅಪ್ಪಿತಪ್ಪಿ‌ ನಮ್ಮ ಕುಂಡೀಗೆ, ಬೆನ್ನಿಗೆ ತಗ್ಲಿದ್ರೆ, ಬಾಯಿ ಬಡ್ಕಂತಿದ್ವಿ.

ನಮ್ಮೂರಿನ ಗಂಡಸರು ಚಕ್ಕಾ ಬಾರ, ಹುಲಿ ಕುರಿ ಆಟ, ಪಗಡೆ ಆಡುತ್ತಿದ್ದರು. ಎಲ್ಲರಿಗೂ ಆ ಜಗಲಿಕಟ್ಟೆಯೇ ನೆಳ್ಳಾಗಿತ್ತು. ಇಸ್ಪೀಟೂ ಆಡುತ್ತಿದ್ದರು. ಸಾಮಾನ್ಯವಾಗಿ ಉಗಾದಿ ದಿನ ಅಂಗೇಯಾ ಮರುಸು(ಮಾರ‌ನೇ) ದಿನ ದುಡ್ಡು ಇಟ್ಟು ಇಸ್ಪೀಟು ಅಥವಾ ಪಗಡೆ ಅಥವಾ ಚಕ್ಕಾಬಾರ ಆಡುತ್ತಿದ್ದರು. ಅದಕ್ಕೆ‌ ಮನೆಯ ಹೆಂಗಸರಿಂದ ಪರವಾನಗಿಯೂ ಇತ್ತು. ಕೆಲವರು ಹಳೆ ಜಗಲಿ ಕಟ್ಟೆ ತಾವ ಸೇರಿದ್ರೆ, ಕೆಲವರು ರಾಮನ ದೇವಸ್ಥಾನದ ಹತ್ರ, ವಸಿಜನ ದೊಡ್ಡ ದೊಡ್ಡ ಮರಗಳ ಕೆಳಗೆ ಕುಂತು ಆಟ ಆಡುತ್ತಿದ್ದರು. ಇಸ್ಪೀಟು ಆಡ್ಲೇಬೇಕಾದ ಆಟ ಆಗಿ, ಊರ ದೊಡ್ಡೋರು ಕಾಸಿಟ್ಟು ಆಡ್ತಿದ್ರೆ, ಊರಿನ ಜನ ಸುತ್ಲೂ ಕುಂತು ಭೋಪರಾಕ್ ಹೇಳೋದು ಮಜ ಕೊಡ್ತಿತ್ತು.

ಟೂ ಬಿಟ್ಟೋಗಿ ಒಂದಾಗ್ತಿದ್ದಿದ್ದು

ಈ ಉಗಾದಿ ಬಟ್ಟೆ ವಿಷ್ಯಾ ಬಂದಾಗ ನಾನು ಮರಿಯೋಕೇ ಆಗ್ದಿರೋ ಇನ್ನೊಂದು ವಿಷ್ಯಾನೂ ನೆನಪಿನ ಗಂಟಿನಿಂದ ಮ್ಯಾಕೆದ್ದು ಬಂದು ಕುಂತ್ಕಂತೈತೆ. ಮದ್ಲು ಅದ್ನ ಬಿಚ್ದೇ ಹೋದ್ರೆ, ಸರಸರನೆ ಮುಂದ್ಕೆ ಸಾಗಲ್ಲ.‌ ನನ್ನ ಗೆಣೆಕಾತಿ ಗೀತಾ ಅಂತಿದ್ಲು. ಅವ್ಳು ಸ್ವಲ್ಪ ಜೋರು. ಕ್ಲಾಸ್ನಾಗೆ ತರಲೇಂತ್ಲೇ ಫೇಮಸ್ಸು. ಹುಡುಗೀರ ಗುಂಪಿಗೆ ನಾಯಕಿ ತರುಕ್ಕಿದ್ಲು. ಆದ್ರೆ ಓದೋದ್ರಾಗೆ ಹಿಂದೇನೇ. ನಾನು ಎಲ್ಲಾ ಮೇಷ್ಟ್ರಿಗೂ ಮೆಚ್ಚಿನ ಶಿಷ್ಯೇ. ನನ್ ಕಂಡ್ರೆ ಹೊಟ್ಟೆಉರಿ. ಎಂಗಾನಾ ‌ಮಾಡಿ ಜಗ್ಳ ಕಾಯೋಳು. ನನ್ ಮೇಲೆ ಚಾಡಿ ಹೇಳ್ಕೊಡೋಳು. ಅವ್ರೂ ಟೂ ಬಿಡೋರು. ನಾನು‌ ನೋಡಾಗಂಟ ನೋಡ್ಕಂಡು ಸುಮ್ನೇ ಇರ್ತಿದ್ದೆ. ಆಮ್ಯಾಕೆ ಮೇಷ್ಟ್ರಿಗೆ ಹೇಳಿ ಬಿಸಿ ಮುಟ್ಟುಸ್ತಿದ್ದೆ. ಎಲ್ರೂ ಹೆದುರ್ಕಂಡು ಮಾತಾಡ್ಸಿಕಂಡು ಬರೋರು. ಎಲ್ರುನ್ನೂ ಮಾತಾಡಿದ್ರೂ ಆ ಗೀತುನ್ನ ಮಾತ್ರ ಮಾತಾಡ್ತಿರಲಿಲ್ಲ. ಅವ್ಳೂ ಮಕ ತಿರುಗಿಸ್ಕಂಡೇ ಇರ್ತಿದ್ಲು. ಪರೀಕ್ಷೆ ಹತ್ರ ಬರ್ತಿದ್ದಂಗೇ ಅವುಳ್ಗೆ ಪುಕಪುಕ. ಎಂಗಾನಾ ಮಾಡಿ ಮಾತಾಡ್ಸಾಕೆ ಮೇಲೆ ಬೀಳೋಳು. ನಾನು ಜಗ್ಗುತಿರಲಿಲ್ಲ. ಈ ಉಗಾದಿ ಹೊಸ ಬಟ್ಟೆಗೆ ದರ್ಜಿ‌ ಮೂರ್ತಿ ತಾವ ಅಲೀಬೇಕಿತ್ತಲ್ಲ, ಅವ್ಳ ಮನೆ ಮುಂದ್ಲಿಂದಾನೇ ದಾರಿ. ಅವಾಗ ನನ್ನ ಹಿಡಿದಾಕೋಳು. ನನ್ನ ಹಿಂದ್ಲೇ ಅವ್ಳೂ ದಿನಾ ವಡ್ಡಾಡೋದು(ಅಡ್ಡಾಡೋದು.)ಅಮ್ಮಿ ಮಾತಾಡ್ಸಮ್ಮಿ. ಇನ್ನೊಂದು ಕಿತ ಇಂಗೆಲ್ಲಾ ಗೋಳು ಹೊಯ್ಕಳಾಕಿಲ್ಲಾ ಅಂತ ಬೇಡ್ಕೊಳ್ಳೋದು. ನಾನೂ ಕರಗಿ ಹರಿದೋಗ್ತಿದ್ದೆ. ಎಚ್ಚರಿಕೆ ಕೊಟ್ಟು ಮಾತಾಡ್ಸತಿದ್ದೆ. ಒಂದು ವಾರ ಅಲೆದಾಡಿದ ಮೇಲೆ ಉಗಾದಿ ಹಿಂದ್ಲ ದಿನ ಇಬ್ರೂ ಟೂ ಬಿಟ್ಟಿದ್ದ ಬೆಟ್ಟು ಒಟ್ಟುಗೂಡ್ಸಿ ತಿರ್ಗಾ ಸ್ನೇಹಿತ್ರಾಗ್ತಿದ್ವಿ. ಮಾವಿನಕಾಯಿ ತಂದು ಇಸ್ಕೂಲ್ನಲ್ಲಿ ಕುಯ್ದು ಕೊಡೋಳು. ಆಮೇಲೆ ಪರೀಕ್ಷೆನಲ್ಲಿ ನನ್ನ ಹಿಂದೆ ಕುಂತು ಕಾಪಿ ಮಾಡಿ ಪಾಸಾಗ್ತಿದ್ಲು. ನಮ್ಮ ಜಗಳದಲ್ಲಿ ನಮನಮಗೆ ಸಾತ್ ಕೊಡ್ತಿದ್ದ ಬೇರೆ ಗೆಳತೀರು ಮಂಗಗಳಾಗ್ತಿದ್ರು.

ಉಗಾದಿ ಬೇಟ(ಯಾಟ)

ಉಗಾದಿನಲ್ಲಿ ನಮ್ಮೂರ್ನಾಗೇ ಮುಖ್ಯವಾಗಿರಾ ಇನ್ನೊಂದು ಮುಖ್ಯ ಆಚರಣೆಯ ಕುರಿತು ಹೇಳಲೇ ಬೇಕು. ಬಲು ವಿಶಿಷ್ಟವಾದದ್ದು.‌ ಆ ಪದ್ಧತಿ ಹೇಗೆ ಬಂತು ಗೊತ್ತಿಲ್ಲ.‌ ಒಟ್ಟಾರೆ ಉಗಾದಿ ಮಾರನೆಯ ದಿನ ಬೇಟೆಗೆ ಹೋಗುವುದು (ಯಾಟಾಡೋಕೆ) ರೂಢಿಯಲ್ಲಿತ್ತು. ಇಲ್ಲಿ ತಂಡವಾಗಿ ಹೊರಡುತ್ತಿದ್ದರು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಯುವಕರು ಹದಿನೈದು ಇಪ್ಪತ್ತು ಮಂದಿ ಒಂದು ಗುಂಪು ಮಾಡ್ಕಂಡು ದೊಣ್ಣೆ ಹಿಡಿದು ದೊಡ್ಡಮಾಲೂರು ದಿನ್ನೆನಾಗಿರೋ ಎಕರೆಗಟ್ಟಲೆ ಇದ್ದ ವಿಶಾಲವಾದ ಬಯಲಿನಾಗೆ ಹೋಗ್ತಿದ್ರು. ಕಾಡಿನಂಗೆ ಬೆಳೆದಿದ್ದ ಪೊದರು. ಮರಗಿಡಗಳು ತುಂಬಿದ್ವು. ಅಲ್ಲಿ ಮೊಲ ಹುಡುಕಿಕೊಂಡು ಹೋಗುತ್ತಿದ್ದರು. ಅಲ್ಲಿದ್ದದ್ದು ಬರಿ ಮೊಲಗಳಷ್ಟೇ. ಅವೇ ಅವ್ರ ಬೇಟೆಯ ಬಲಿಗ್ಳು.
ಅದೂ ವೇಗವಾಗಿ ಓಡುವ ಮೊಲಗಳು ಬಲು ಚಾಣಾಕ್ಷತನದಿಂದ ದೊಣ್ಣೆಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದವು. ಬೆಳಗಿನಿಂದ ಬೈಗಿನವರೆಗೆ ಬೇಟೆ ಆಡಿದ್ರೂ ಗೆದ್ದ ಗುಂಪು ಅಂದರೆ ಗೆದ್ದ ಊರಿನವರು ಹೆಚ್ಚೆಂದರೆ ನಾಲ್ಕು ಅಥವಾ ಐದು ಮೊಲ ಬೇಟೆಯಾಡಿದ್ರೆ ಜಾಸ್ತಿ. ಕೆಲವು ಊರಿನವರಿಗೆ ಏನೂ ಸಿಗುತ್ತಿರಲಿಲ್ಲ. ಹೆಚ್ಚು ಮೊಲ ತಂದವರು ಮೊಲಧೀರರು. ಆ ವರುಷದ ಬೇಟೆಯ ವೀರರು. ಗೆದ್ದ ಅವರನ್ನು ಎಲ್ಲಾರೂ ಕೂಡಿ ಸನ್ಮಾನಿಸ್ತಿದ್ರು.‌ ಎಲ್ಲರ ಮುಂದೆ ಮೀಸೆ ತಿರುವುವ ಅವಕಾಶ ಸಿಗುತ್ತಿತ್ತು. ಆ ಇಡೀ ವರ್ಷದ ಮೊಲಧೀರರು ಅವ್ರೇಯಾ. ಅಂಗಾಗಿ ಬಲು ಪೈಪೋಟಿ ಇತ್ತು. ಗಂಡಸ್ತನದ ಪ್ರಶ್ನೆ. ಅದ್ರಾಗೂ ಯುವಕ್ರು ಮೆರೆಯೋಕೆ ಒಂದು ಘನಂದಾರಿ ವಿಷ್ಯ ಇದು. ಬುಟ್ಟಾರೇ??

ಈಗ ಒಂದಿಷ್ಟು ಬೇಟೆಯ ವಿವರ. ಮುಂದೆ ತಮಟೆ ಹೊಡೀತಾ ಹುರುಪು ತುಂಬಾಕೇಂತ್ಲೇ ಒಂದು ಗುಂಪು. ಜೊತೆಗೆ ಹರೆ, ಕೊಂಬು, ಕಹಳೆ ಊದುವ ಗಮ್ಮತ್ತು. ಅದಕ್ಕೇ ತಕ್ಕಂಗೆ ಹೆಜ್ಜೆ ಹಾಕುತ್ತಾ ಕುಣಿಯಾ ಇನ್ನೊಂದು ಗುಂಪು. ಅದರ ಹಿಂದೆ ದೊಣ್ಣೆ ಹಿಡಿದ ತಮ್ತಮ್ಮ ಊರಿನ ವೀರರಿಗೆ ಭೋಪರಾಕು ಹೇಳ್ತಿದ್ದ ಮಂದಿ. ಮಕ್ಕಳೆಲ್ಲಾ ಕಣ್ಣು ಬಾಯಿ ಬಿಡುತ್ತಾ ಅವರ ಆಟಾಟೋಪ ನೋಡಿ ಖುಷಿ ಪಡೋದು. ಆ ದೊಣ್ಣೆಗಳು ನಾಕು ಐದು ಅಡಿ ಉದ್ದ ಇರುತ್ತಿದ್ದವು. ಹಿಂದೆ ದಪ್ಪ ಇದ್ದು ಮುಂದೆ ತೆಳ್ಳಗೆ ಗಂಟಿನ ತರಹ ಇರುತ್ತಿತ್ತು. ಒಂದು ರೀತಿ ಹಿಡಿಯಂತೆ ಇರುತ್ತಿದ್ದ ಇವನ್ನು ‘ರೊದ್ದು ಕಟ್ಟಿಗೆ’ ಅಂತಿದ್ರು. ಬೇಟೆಗೆ ಮಾತ್ರ ಇವುನ್ನ ಬಳಸ್ತಿದ್ರು. ಉಳಿದಂತೆ ಅಟ್ಟದಲ್ಲಿ ಬಿದ್ದಿರುವ ಕಟ್ಟಿಗೆಗಳು. ಉಗಾದಿ ಟೇಮಿನಾಗೆ ಕೆಳೀಕ್ ಇಳ್ದು, ಚೂಪಾಗ್ತಿದ್ವು. ‌ಗಿಡದಲ್ಲಿಯೇ ಇಂತ ಗಂಟಿನಂತಹ ತುದಿ ಇರಾ ಕಟ್ಟಿಗೆ ಹುಡುಕುಡುಕಿ ತರುತ್ತಿದ್ದರು. ಮೊಲಗಳು ವೇಗವಾಗಿ ಓಡುವಾಗ ಅಟ್ಟಾಡಿಸಿಕೊಂಡು ಅದ್ರ ಹಿಂದೆ ನಾಕು ಊರಿನವರು ಒಂದೇ ಸಲ ಬೀಳುತ್ತಿದ್ದರು. ಒಂದೊಂದು ಸತಿ ಏನಾಗ್ತಿತ್ತು, ಒಬ್ಬ ಎಸೆದ ದೊಣ್ಣೆ ಮೊಲಕ್ಕೆ ಬರಿ ತಾಕಿದರೆ, ಇನ್ನೊಬ್ಬನದು ಪೆಟ್ಟು ಮಾಡುತ್ತಿತ್ತು.‌ ಮತ್ತೊಬ್ಬನ ಪೆಟ್ಟಿಗೆ‌ ಮೊಲ ಸಾಯುತ್ತಿತ್ತು. ಹೀಗಾದಾಗ ಆಯಾ ಊರಿನ ತಂಡಗಳ‌ ಮದ್ಯೆ ಜಟಾಪಟಿ. ನಾನು ಮೊದಲು ಹೊಡೆದದ್ದರಿಂದ ನಂದು ಎಂದು ವಾದವಾದರೆ, ಸತ್ತಿದ್ದು ನನ್ನ ಪೆಟ್ಟಿನಿಂದಾದ್ದರಿಂದ ನಂದು ಎಂಬುದು ಮತ್ತೊಂದು ವಾದ. ಇಲ್ಲಿ ಕಿರಾತಾರ್ಜುನೀಯ ಪ್ರಸಂಗ ನೆನಪಾಗುತ್ತದೆ. ಹಂದಿಯ ಬೇಟೆ ನಂದು ನಂದು ಅಂತ ಆ ಶಿವಪ್ಪನೇ ಅರ್ಜುನನ ಜೊತೆ ವಾದ ಮಾಡಿದ ಮೇಲೆ ಪಾಮರರು ವಾದ ಮಾಡಿದ್ರೆ ತಪ್ಪೇನು? ಅದೂ ಎಲ್ರೂ ಒಳ್ಳೆ ಹುರುಪಿನಲ್ಲಿ ಇರುತ್ತಿದ್ದರು. ಆರಂಭದ ವರ್ಷಗಳಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಾಗ ಯಾರೋ ಹಿರೀಕರು ಮಧ್ಯಸ್ಥಿಕೆ ವಹಿಸಿ ಸರಿ ಮಾಡುತ್ತಿದ್ದರು. ಆಮೇಲಾಮೇಲೆ ಪೋಲೀಸ್ ವ್ಯವಸ್ಥೆ ಬಂದ ಮೇಲೆ ಪೋಲೀಸರು ಮಧ್ಯೆ ಪ್ರವೇಶಿಸಿ, ತೀರ್ಮಾನ ಕೊಡುತ್ತಿದ್ದರಂತೆ. ಕೊನೆಕೊನೆಗೆ ಈ ಗಲಾಟೆ ಅವರಿಗೂ ಬಗ್ಗದೆ ಹೋದಾಗ, ಪೊಲೀಸ್ರು ಉಗಾದಿ ಬೇಟೆಯ‌ನ್ನೇ ನಿಲ್ಲಿಸಿಬಿಟ್ಟರು. ಈ ತಾರಾತಿಗಡಿ ಬೇಡವೇ ಬೇಡವೆಂದು ಎಲ್ಲ ಊರಿನ ಮುಖ್ಯಸ್ಥರೂ ಪಂಚಾಯ್ತಿ ಕಲೆತು ಒಮ್ಮತದ ತೀರ್ಮಾನ ತಗೊಂಡ್ರು. ಅಲ್ಲಿಗೆ ಬೇಟೆಯ ಅಧ್ಯಾಯ ಮುಗಿಯಿತು. ಆದ್ರೆ ನಾವು ಚಿಕ್ಕೋರಿದ್ದಾಗ ಬೇಟೆಯಿಂದ ಬಂದ ನಮ್ಮೂರಿನ ತಂಡ ಅವರ ಶೌರ್ಯದ ವಿವರಗಳನ್ನು ಕೊಚ್ಚಿಕೊಳ್ತಿದ್ದರೆ ಇಡೀ ಊರಿನವರು ಅವರ ಕತೆಗೆ ಕಿವಿಯಾಗುತ್ತಿದ್ದ ಪ್ರಸಂಗಗಳು ರಂಜನೀಯವಾಗಿರುತ್ತಿದ್ದವು. ತಲೆಗೊಂದು ಮಾತು, ತಮಾಷಿ ಕತೆಗ್ಳು. ಎಲ್ಲರೂ ಬಿಡುಬೀಸಾಗಿ ಕುಂತು ನಡುರಾತ್ರಿಯವರೆಗೂ ಹರಟೆ ಹೊಡೆಯುತ್ತಿದ್ದರು. ನಾವು ಎಂಗೆ ಮೊಲ ಹೊಡಿದ್ವಿ ಅಂತ ಅವ್ರು ಬುರುಡೆ ಬಿಡ್ತಿದ್ರೆ, ನಾವು ಕಿವಿ ನಿಮಿರಿಸಿಕಂಡು ಕುಂತಿರ್ತಿದ್ವಿ.

ಹರಳೆಣ್ಣೆ ಮಜ್ಜನ

ಇನ್ನು ಹಬ್ಬದ ವಿವರಗಳೂ ಬಲು ಮಜಾ. ಮನೆ ತುಂಬಾ ಜನ ಇರುತ್ತಿದ್ದರು. ನೆಂಟರು ಇಷ್ಟರು ಎಲ್ಲಾ ಸೇರುತ್ತಿದ್ದರು. ಗಂಡಸರಿಗೆಲ್ಲಾ ರಾಮಪ್ಪ ಬಟ್ಟಲು ಬಟ್ಟಲು ಹರಳೆಣ್ಣೆ ಹಾಕಿ ಅಂಗೈ ಅಂಗಾಲು, ಬೆನ್ನಿಗೆಲ್ಲಾ ಮಾಲೀಶು ಮಾಡುತ್ತಿದ್ದ.‌ ಹಂಡೆ ಒಲೆಗೆ ರಾತ್ರಿಯೇ ಕಟ್ಟಿಗೆ ಒಟ್ಟಿ ಸಿದ್ಧ ಮಾಡಿರುತ್ತಿದ್ದ. ಒಲೆಗೆ ಊದು ಕೊಳವೆ ಉರುಬಲು ನಾವೂ ಸೇರುತ್ತಿದ್ದೆವು. ಹೊಗೆ ಇಡೀ ಬಚ್ಚಲಿಗೆ ಮುಸುಗುತ್ತಿತ್ತು. ನಿಗಿ ನಿಗಿ ಕೆಂಡಕ್ಕೆ ನೀರು ಸುಡುಸುಡು ಬಿಸಿ ಇರುತ್ತಿತ್ತು. ಹೆಣ್ಣುಮಕ್ಕಳು ತಮ್ತಮ್ಮ ತಾಯಂದಿರೋ ಯಾರೋ ಒಬ್ಬರಿಂದ ಎಣ್ಣೆ ಹಚ್ಚಿಸಿಕೊಂಡು, ತಲೆ ಉಜ್ಜಿಸಿಕೊಳ್ತಿದ್ದರು. ನಮ್ಮದೆಲ್ಲಾ ಆಗೋ ಹೊತ್ಗೆ ಇತ್ಲಾ ಕಡೆ ಎಣ್ಣೆ ಬಳಿದುಕೊಂಡು ಪಡಸಾಲೆನಲ್ಲಿ ಕುಂತ ಗಂಡಸರು ತೋರಣ ಕಟ್ಟುತ್ತಿದ್ದರು. ಹಂಚಿಕಡ್ಡಿ ಪೊರಕೆಯ ಕಡ್ಡಿಯಲ್ಲಿ ದಿವಿನಾಗಿ ತೋರಣ ಹೆಣೆದು ಬಾಗಿಲಿಗೆ ಸಿಗಿಸಿ, ಬೇವಿನ ಸೊಪ್ಪು ಎರಡೂ ಮೂಲೆಯಲ್ಲಿ ತುರುಕಿದರೆ ಆಯ್ತು. ಬೇವಿನ‌ ಎಳೆ ಚಿಗುರು, ಹೂವನ್ನು ಬಿಡಿಸಲು ಮಕ್ಕಳೆಲ್ಲಾ ಸೇರುತ್ತಿದ್ದೆವು. ಅದಕ್ಕೂ ಮುಂಚೆಯೇ ಬೆಳಬೆಳಗ್ಗೆಯೇ ಊರಿನ ತೋಟಿ ಮತ್ತು ತಳಾರಿ ಬಂದು ಹತ್ತಿಪ್ಪತ್ತು ಮನೆಗಳಿಗೆ ಸಾಂಕೇತಿಕವಾಗಿ ಮಾವಿನ ಸೊಪ್ಪು, ಬೇವಿನ ಸೊಪ್ಪು ಕೊಡುತ್ತಿದ್ದರು. ಅಲ್ಲಿಗೆ ಉಗಾದಿ ಸಂಭ್ರಮ ಆರಂಭ ಅಂತ ಅರ್ಥ.

ಆದ್ರೆ ಮನೆ ಹೆಂಗಸರಿಗೆ ಮಧ್ಯರಾತ್ರಿಯಿಂದಲೇ ಸುರುವಾಗ್ತಿತ್ತು. ಬೆಳಗಿನ ಜಾವ ಎರಡು ಗಂಟೆಯಿಂದಲೇ ಹೂರಣ ರುಬ್ಬುವ, ಒಬ್ಬಟ್ಟು ತಟ್ಟುವ, ಬೇಯಿಸುವ ಸದ್ದು. ಹೋಳಿಗೆ ವಾಸನೆಗೆ ಊರೆಲ್ಲಾ ಘಮಗುಡುತ್ತಿತ್ತು. ಒಬ್ಬಟ್ಟು ಸಾರು ಮರಳಿಸುತ್ತಿದ್ದರೆ ಮೂಗಿನ ಹೊಳ್ಳೆಗಳು ಅರಳಿ, ನಿಮಿರುತ್ತಿದ್ದವು. ದೊಡ್ಡ ದೊಡ್ಡ ಬೇಸನ್ನುಗಳಲ್ಲಿ ಒಬ್ಬಟ್ಟಿನ ರಾಶಿ. ಆಗೆಲ್ಲಾ ಒಬ್ಬೊಬ್ಬರೂ ಹತ್ತು – ಹನ್ನೆರಡು ಒಬ್ಬಟ್ಟು, ಸಣ್ಣಮಿಳ್ಳೆ ತುಪ್ಪ – ಬಟ್ಟಲು ಹಾಲು ಹಾಕಿಕೊಂಡು ಬಾರಿಸುತ್ತಿದ್ದರು.

ಹಂಚಿ ಉಂಡ್ರೆ ಉಗಾದಿ

ಅಡುಗೆ ಆದ ಮೇಲೆ ಆಯಗಾರರು ಅಂದರೆ ರೈತರಿಗೆ ಸಂಬಂಧಿಸಿದ ಕೆಲಸ ಮಾಡುವವರು, ಅಲ್ಲದೆ ಊರಿನ ಪಟೇಲರು, ಶ್ಯಾನುಭೋಗರು ಹೇಳಿದ ಕೆಲಸ ಮಾಡುವವರು ಜೊತೆಗೆ ಅಗಸರ ಪುಟ್ಟನಿಂಗಪ್ಪ, ಸೂಲಗಿತ್ತಿ ಬಾಲಮ್ಮ, ನೀರಗಂಟಿ( ಕೆರೆ ನೀರನ್ನು ಹೊಲಗಳಿಗೆ ಬಿಡುತ್ತಿದ್ದವರು), ತಮಟೆ ಬಾರಿಸುವವರು, ದಾಸಪ್ಪ, ತೋಟಿ ಮತ್ತು ತಳಾರಿ ಮಂಕರಿ ಹಿಡಿದು ಬರುತ್ತಿದ್ದರು. ಅದರಲ್ಲಿ ನಾಕೈದು ಮಡಕೆಗಳು ಇರುತ್ತಿದ್ದವು. ಒಬ್ಬಟ್ಟು, ಅನ್ನ, ಪಲ್ಯ, ಕೋಸಂಬರಿ, ಸಾರು, ಚಿತ್ರಾನ್ನ ಎಲ್ಲದಕ್ಕೂ ಬೇರೆ ಬೇರೆ ಮಡಕೆ‌ಕುಡಿಕೆಗಳು. ಆದರೆ ಎಲ್ಲರ ಮನೇ ಚಿತ್ರಾನ್ನ ಒಂದೇ ಮಡಕೆಯಲ್ಲಿ, ಹೋಳಿಗೆ ಒಂದರಲ್ಲಿಯೇ. ಸಾರು ಒಂದರಲ್ಲಿಯೇ. ಎಲ್ಲ ಬೆರೆತು ವೈವಿಧ್ಯತೆಯಲ್ಲಿ ಏಕತೆಯ ಭಾವ. ಎಲ್ಲರ ಜೊತೆ ಸಂಭ್ರಮ ಹಂಚಿಕೊಂಡು ಖುಷಿ ಪಡುತ್ತಿದ್ದ ದಿನಗಳು ಅವು.

ಇನ್ನೊಂದು ಮುಖ್ಯ ಸಂಗತಿಯೆಂದರೆ ಉಗಾದಿ ಉಳ್ಳವರ ಹಬ್ಬ ಮಾತ್ರವಾಗಿರಲಿಲ್ಲ. ಅಂದಿನ ದಿನಗಳಲ್ಲಿ ಎಲ್ಲರೂ ಪರಸ್ಪರ ಕೈಜೋಡಿಸುತ್ತಿದ್ದರು. ನಮ್ಮ ಹೊಲದಲ್ಲಿ ಬೇಳೆ ಬೆಳೆಯುತ್ತಿದ್ದೆವು. ಕಬ್ಬು ಬೆಳೆಯುತ್ತಿದ್ದುದರಿಂದ, ಪ್ರತಿವರ್ಷ ಆಲೆಮನೆಯೂ ಇರುತ್ತಿತ್ತು. ಸಾಕಷ್ಟು ಬೆಲ್ಲವೂ ಬರುತ್ತಿತ್ತು. ಉಗಾದಿಗೆ ಸುಮಾರು‌ ಇಪ್ಪತ್ತು ಮೂವತ್ತು ಅಗತ್ಯವಿರುವ ಕುಟುಂಬಗಳಿಗೆ ಅಪ್ಪ ಬೆಲ್ಲ ಹಾಗೂ ಬೇಳೆ ಕೊಡುತ್ತಿದ್ದರು. ಬೆಣ್ಣೆ ತುಪ್ಪಕ್ಕೂ ಬಹಳ ಜನ ನಮ್ಮಮನೆಗೆ ಹುಡುಕಿ ಬರುತ್ತಿದ್ದರು. ಊರಿನ ಒಂದೆರಡು ಬ್ರಾಂಬ್ರ ಮನೆಗೆ, ಬಡ ಹರಿಜನರ ಮನೆಗಳಿಗೆ, ನಮ್ಮ‌ ಕೆಲಸಗಾರರ ಮನೆಗಳಿಗೆ‌ ಬೇಳೆ ಬೆಲ್ಲ ಸರಬರಾಜು ನಡೀತಿತ್ತು.

ಉಗಾದಿ ಎಡೆ

ಊರಿನ ಜನ ಉಗಾದಿಯಂದು ಎಣ್ಣೆ ಸ್ನಾನ ಮಾಡಿ, ಅಡುಗೆ ಆದ ಮೇಲೆ ಎಡೆ ಇಟ್ಟು ಬರುತ್ತಿದ್ದರು. ಕೆಲವರು ತಮ್ಮ ಮನೆಯ ಗತಿಸಿದ ಹಿರಿಯರ ಸಮಾಧಿ ಬಳಿ ಪೂಜೆ ಮಾಡುತ್ತಿದ್ದರು. ಸಾಮಾನ್ಯವಾಗಿ ಅವರವರ ಜಮೀನಿನಲ್ಲಿಯೇ ಹಿರೀಕ್ರ ಸಮಾಧಿ ಇರುತ್ತಿತ್ತು. ಕೆಲವರು ದೇವಸ್ಥಾನಕ್ಕೆ, ಕೆಲವರು ನಾಗರ ಕಟ್ಟೆಗೆ, ಮತ್ತೆ ಕೆಲವರು ತಾವು ನಡೆದುಕೊಳ್ಳುವ ಗ್ರಾಮದೇವತೆಗಳಾದ ಸತ್ಯಮ್ಮ ಹಾಗೂ ಗಂಗಮ್ಮರಿಗೆ ಎಡೆ ಕೊಡುತ್ತಿದ್ದರು. ಕೆಲವರು ಬೇವಿನ‌ಮರ ಅಥವಾ ರಾಗಿ ಮರದಡಿ (ಅಶ್ವತ್ಥವೃಕ್ಷ) ಪೂಜೆ ಮಾಡುತ್ತಿದ್ದರು. ಮನೆದ್ಯಾವ್ರ ಪೂಜೆ ಮಾಡಿ ಎಡೆ ಮಡಗುತ್ತಿದ್ರು.

ಅದಾದ ನಂತರ ಹೋಳಿಗೆ ಊಟ ಉಂಡು, ಆಟಕ್ಕೆ ಶುರು ಹಚ್ಚಿಕೊಳ್ಳುತ್ತಿದ್ದರು. ಮನೆಯ ಹೆಂಗಸರೂ ಚಕ್ಕಾಬಾರ, ಅಟ್ಟಗುಣಿ ಮನೆ ಆಡುತ್ತಿದ್ದರು. ಒಟ್ಟಿನಲ್ಲಿ ಮಕ್ಕಳು ಮುದುಕರಾದಿಯಾಗಿ ಎಲ್ಲರೂ ಮನರಂಜನೆಯಲ್ಲಿ ಮುಳುಗುತ್ತಿದ್ದರು. ಗಲಾಟೆ ಗದ್ದಲ ಮಾಮೂಲಿಯಾಗಿತ್ತು. ಆಟದಲ್ಲಿ ಮೋಸ, ಚಾಲಾಕಿತನ ಇದ್ದಿದ್ದೆ. ಸಣ್ಣ ಪುಟ್ಟ ಜಗಳಗಳೂ ಇದ್ದಿದ್ದೆ. ಚಕ್ಕಾಬಾರಕ್ಕೆ ಕವಡೆ ಬಳಸಿದರೆ ಪೇರಿಸುವ (ಅಂಗೈಯಲ್ಲಿ ಜೋಡಿಸಿಕೊಂಡು ಆಡಿದರೆ ನಾಕು ಐದು ಆರು ಪಕ್ಕಾ ಬೀಳುತ್ತಿತ್ತು‌.)ಆಟದಿಂದ ಪರಸ್ಪರ ದೋಷಾರೋಪ ಮಾಮೂಲಾಗಿತ್ತು. ಉಜ್ಜಿದ ಹುಣಿಸೆ ಬೀಜದಲ್ಲಿ ಆಡಿದರೆ ಈ ಮೋಸ ಇರುತ್ತಿರಲಿಲ್ಲ. ಎಲ್ಲ ಆಟದಲ್ಲಿಯೂ ಹೀಗೆ ಕೋಳಿ ಜಗಳ ಆಡುತ್ತಲೇ ಇಡೀ ದಿನ ಕಳೆದು ಹೋಗುತ್ತಿತ್ತು. “ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ” ಹಾಡು ನಿಜಕ್ಕೂ ನನ್ನ ಬಾಲ್ಯದ ಉಗಾದಿಯ ನೆನಪುಗಳ ಸಿಹಿ ಹೋಳಿಗೆಯ ಪದರಗಳನ್ನು ಎಳೆ ಎಳೆಯಾಗಿ ತೆಗೆಯುತ್ತದೆ.

ಅರವಂಟಿಗೆ

ಕೊನೆಯದಾಗಿ ಉಗಾದಿಯಂದು ಅರವಂಟಿಗೆ (ಅರವಟ್ಟಿಗೆ) ಆರಂಭಿಸುತ್ತಿದ್ದ ಸಂಗತಿ ಮರೆಯುವಂತೆಯೇ ಇಲ್ಲ. ಅಜ್ಜನ ಕಾಲದಿಂದಲೂ ಅನೂಚಾನವಾಗಿ ನಡೆಸಿಕೊಂಡು ಬಂದದ್ದು. ಅಪ್ಪನೂ ಮುಂದುವರೆಸಿದ್ದರು. ಹಳೆ ಅರಳಿಕಟ್ಟೆಯ ಮೇಲೆ ರಾಗಿಮರದ ನೆರಳಿನಲ್ಲಿ ಸಣ್ಣ ಚಪ್ಪರ ಹಾಕಿ ಅದರೊಳಗೆ ಪುಟಾಣಿ ಗುಡಿಸಲು ಹಾಕುತ್ತಿದ್ದರು. ಇಡೀ ದಿನ ಅಲ್ಲೇ ಕುಂತು ನೀರು ಕೊಡುವವರಿಗೂ ನೆರಳು ಬೇಕಲ್ಲ. ಇಡೀ ದಿನ ಅಲ್ಲಿಯೇ ಇದ್ದು ನೋಡಿಕೊಳ್ಳಲು ತಣ್ಣಗಿರುವಂತೆ ಮಾಡಿಕೊಳ್ಳುತ್ತಿದ್ದರು. ದೊಡ್ಡ ದೊಡ್ಡ ಅರವಿಗಳನ್ನು (ಗುಡಾಣದ ತರಹ ಇರುತ್ತಿದ್ದವು) ಇಡುತ್ತಿದ್ದರು. ಮೂರು ತಿಂಗಳ ಕಾಲ ಬೇಸಿಗೆಯ ಧಗೆ ತಣಿಸಲು ಹಾದಿಹೋಕರಿಗೆ, ಬಸ್ಸಿನಲ್ಲಿ ಬಂದವರಿಗೆ ಏಕೆಂದರೆ ಮಗ್ಗುಲಿನಲ್ಲಿಯೇ ಬಸ್ ಟಾಂಡು ಇತ್ತು. ಬಾಯಾರಿ ಬಂದ ಹಳ್ಳಿಯ ಜನರಿಗೆ ದಾಹ ತಣಿಸುವ ಅರವಂಟಿಗೆ. ಗುಡಿಸಲ ತಂಪಿನಲ್ಲಿ ತಣ್ಣಗಿರುವ ನೀರಿಗಾಗಿ ಎಲ್ಲರೂ ಬರುತ್ತಿದ್ದರು. ಅರವಿಯ ಕೆಳಗೆ ಮರಳು ಹಾಕಿ ಅದರ ಮೇಲೆ ರಾಗಿ ಚೆಲ್ಲುತ್ತಿದ್ದರು. ಅದು ಮೊಳೆತು‌, ಹಸಿರು ಪೈರು ಚಿಗುರಿ, ನೀರು ತೋಡುವಾಗ ರಾಗಿ ಪೈರಿನ ಮೇಲೆ ಚೆಲ್ಲುತ್ತಿದ್ದ ನೀರು ಮಡಕೆಯನ್ನು ತಣ್ಣಗೆ ಇಡುತ್ತಿತ್ತು. ಜೊತೆಗೆ ತಣ್ಣನೆಯ ಬಟ್ಟೆಯನ್ನು ಅರವಿಯ ಸುತ್ತ ಸುತ್ತಿ ಅದಕ್ಕೆ ಆಗಾಗ ನೀರು ಹಾಕುತ್ತಿದ್ದರು. ಅಲ್ಲಿಗೇ ಹತ್ತಿರದ ಬಾವಿಯಿಂದ ನೀರು ಸೇದಿ ತಂದು ಬೆಳಗಿನಿಂದ ರಾತ್ರಿಯ ತನಕ ಶಂಕರಮ್ಮ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು. ಅಜ್ಜನ ಕಾಲದಲ್ಲಿ ಇವರಿಗೆ ತಿಂಗಳಿಗೆ ಐದು ಹತ್ತು ರೂಪಾಯಿ ಕೊಡುತ್ತಿದ್ದರಂತೆ. ಅಪ್ಪನ ಕಾಲಕ್ಕೆ ಅರವತ್ತು ಎಪ್ಪತ್ತು ರೂಪಾಯಿ ಕೊಡುತ್ತಿದ್ದರು. ಶಂಕ್ರಪ್ಪ(ಅಪ್ಪ) ಇಡುಸ್ತಿದ್ದ ಅರವಂಟಿಗೇನ ಶಂಕ್ರಮ್ಮ ಚೆಂದಾಕಿ ನೋಡ್ಕಂತಾಳೆ ಅಂತ ಜನ ಮಾತಾಡ್ತಿದ್ರು.

ಉಗಾದಿ ನಂಬಿಕೆ

ಉಗಾದೀಲಿ ಒಂದೆರಡು ನಂಬಿಕೆಗ್ಳು ಇದ್ವು. ಉಗಾದಿ ನಮ್ಗೆ ಹೊಸ ವರ್ಷದ ಶುರು ಅಲ್ವೇ. ಅವತ್ತು ನಾವು ಹೇಗೆ ಇರ್ತೀವೀ ಅಂಗೇನೇ ಇಡೀ ವರ್ಷ ಇರ್ತೀವಿ ಅನ್ನೋದು ಗಟ್ಟಿ ನಂಬಿಕೆ. ಅದ್ಕೇ ಅವತ್ತು‌ ಅಮ್ಮ‌ ಏನು ತಪ್ಪು ಮಾಡಿದ್ರೂ ಬೈತಾನೇ ಇರಲಿಲ್ಲ.‌ ನಗ್ತಾ ನಗ್ತಾಲೇ ಇರ್ತಿದ್ಲು. ನಾವೂ ಅಷ್ಟೇ ಏನಾದ್ರೂ ಅಳ್ತಾ ಇರಲಿಲ್ಲ. ಇಡೀ ವರ್ಷ ಅಳ್ತಾಲೇ ಇರ್ಬೇಕಲ್ಲ ಅನ್ನೋ ಭಯ. ಸುಮ್ ಸುಮ್ಕೇ ನಗಾಡೋದು. ಜಗಳ‌ ಅಂತ್ಕೂ ಇಲ್ವೇ ಇಲ್ಲ. ಎಲ್ಲಾ ಗೆಳತೀರೂ ಸಮಾಧಾನ್ವಾಗೇ ಇರ್ತಿದ್ವಿ. ಮಾತ್ನಲ್ಲಿ ಬಲು ಪಿರೂತಿ ಉಕ್ಕುತಿತ್ತು.

ಇದ್ರ ಸಂದೀನಾಗೆ ಹಳೇ ಜಗ್ಳಾ ತ್ಯಾಪೇ ಹಾಕ್ಕಂತಿತ್ತು. ಬೇವು ಬೆಲ್ಲ ಕೊಟ್ಟು ಮಾತಾಡ್ತಿದ್ವಿ.‌ ಎಲ್ರೂ ಒಂದಾಗಿ ಆಡ್ತಿದ್ವಿ. ಇದು ಬರೀ ಚಿಕ್ಕೋರ ಸಂಗ್ತಿ ಅಲ್ಲ. ದೊಡ್ಡೋರೂ ದೊಡ್ಡ ದೊಡ್ಡ ಜಗಳ ಮರ್ತೂ, ಶತೃಗಳ್ನೂ ಮಿತ್ರರಾಗಿ ಮಾಡ್ಕೊಳ್ಳೋಕೆ ಇದ್ದ ಏಕೈಕ ಮಾರ್ಗ. ಯಾರೋ ಮಧ್ಯಸ್ಥಿಕೆ ಮಾಡೋರು ಉಗಾದಿ ನೆಪದಾಗೆ ಒಂದುಮಾಡೋರು. ಸಾಮಾನ್ಯುಕ್ಕೆ ಅವತ್ತು ಮಾತ್ರ ಎಲ್ರೂ ಜಗ್ಳ, ಕೋಪ ದೂರ ಇಡ್ತಿದ್ರು. ನಕ್ಕು ನಲಿದು ಉಗಾದಿ ಮುಗೀತಿತ್ತು.

ಪಂಚಾಂಗ ಶ್ರವಣ

ಹೊಸ ಪಂಚಾಂಗ ಮದ್ಲೇ ತಂದಿಟ್ಟಿರ್ತಿದ್ರು. ಬೆಳಗ್ಗೇನೇ ಪೂಜೆ ಮಾಡ್ತಿದ್ರು. ಸಂಜೇ ಓದೋದು. ಸಾಮಾನ್ಯುಕ್ಕೆ ತಾತುನ್ ಕಾಲ್ದಾಗೆ ಕಂಸಾನಹಳ್ಳಿಯಿಂದ ಐನೋರು ಬರೋರು. ಆಮೇಲೆ ನಮ್ಮಪ್ಪನ ಕಾಲ್ದಲ್ಲಿ ನಾಗೇಶಪ್ಪನ ಮನೆಗೆ ಹೋಗೋರು. ಅಲ್ಲಿ ಪಂಚಾಂಗ ಓದೋರು. ಆ ವರ್ಷ ಮಳೆ ಬೆಳೇ ಎಂಗೇ? ಯಾರ ರಾಶಿಫಲ ಎಂಗೈತೆ? ಅದೃಷ್ಟ ಯಾರ ಪಾಲಿಗೆ? ಮದ್ವೇ ಆಗ್ತೈತಾ? ಹೊಲಮನೆ ಆಗ್ತೈತಾ? ಇಂಗೇ ಉಗಾದಿ ಮುಗ್ದಾದ ವಾರ್ದಗಂಟ ಇದೇ ಮಾತುಕತೆ. ಕೊನೆಕೊನೇಗೆ ನಮ್ಮಪ್ಪಾನೇ ಪಂಚಾಂಗ ಹಿಡ್ದು ಕುಂತು ಓದುತ್ತಿದ್ರು. ಮನೆ ಕೆಲುಸ್ದೋರೂ, ಹೊಲುದ್ ಕೆಲಸದೋರೂ, ಒಂದಿಷ್ಟು ಊರ ಜನ ಕುಂತು ಕೇಳೋರು.

ವರ್ಷ ತೊಡಕು

ಉಗಾದಿ ಮಾರನೇ ದಿನ ವರ್ಷ ತೊಡಕು ಸಂಭ್ರಮ. ಮಾಂಸ ತಿನ್ನೋರು ಅವ್ರವ್ರ ಶಕ್ತಿ ಇದ್ದಂಗೆ ಕುರಿ ಕೋಳಿ ಮೇಕೆ ದನ ಹೊಡೆಯೋರು. ತಂಗಳು ಒಬ್ಬಟ್ಟಿನ ಜೊತೆ ಮಜಾ ಮಾಡೋರು.

ನಮ್ಮನೇನಲ್ಲಿ ಆಂಬಡೆ(ಕಡಲೆಬೇಳೆ ವಡೆ) ಮಾಡೋರು. ಕೆಲುವ್ರು ಬೋಂಡಾ, ಬಜ್ಜಿ ಮಾಡ್ತಿದ್ರು. ನಾವೂ ತಂಗಳು ಒಬ್ಬಟ್ಟು, ಒಬ್ಬಟ್ಟಿನ ಸಾರಿನ ಜೊತೆ ವಡೆ ಕರುಂ ಕುರುಂ ಅನ್ನುಸ್ಕಂಡು ಮೇಯುತ್ತಿದ್ವಿ. ಹೇಳ್ತಾ ಹೋದ್ರೆ ಊರ್ತಾನೇ(ಊರುತ್ತಲೇ) ಹೋಗೋ ವಿಚಾರಗ್ಳು.

“ಸವಿಸವಿ ನೆನಪು ಸಾವಿರ ನೆನಪು, ಸಾವಿರ ಕಾಲದ ಸವೆಯದ ನೆನಪು, ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು” ಮೊಗೆದಷ್ಟೂ ಮುಗಿಯದ ಒರತೆಯಿದು. ಉಗಾದಿಯ ಸಂಭ್ರಮದೊಡನೆ ತೆರೆದುಕೊಳ್ಳುವ ನನ್ನ ಬಾಲ್ಯವಿದು.

About The Author

ಸುಮಾ ಸತೀಶ್

ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ