ಜೈನಾ ದುಬಾಯಿಂದ ಬೈರುತ್ ಗೆ ಬಂದು ಅಲ್ಲಿಂದ ಆಕ್ರಮಣಕ್ಕೆ ಒಳಗಾದ ಬಿಂಟ್ ಬಿಲ್ ಊರನ್ನು ತಲುಪಿರುತ್ತಾಳೆ. ಟೋನಿಯೊಂದಿಗೆ ಪ್ರಯಾಣ ಸಾಗುತ್ತಿದ್ದಂತೆ ಇಬ್ಬರಿಗೂ ತಮ್ಮಷ್ಟಕ್ಕೆ ಇರುವುದು ಅಸಹಜವೆನ್ನಿಸಿ, ನಿಧಾನವಾಗಿ ಕೇವಲ ವ್ಯಕ್ತಿಗಳಂತೆ ಇದ್ದವರು ಪರಸ್ಪರ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಅವರ ಭಾವಗಳಲ್ಲಿ, ಮುಖಚಹರೆಗಳಲ್ಲಿ ವ್ಯಕ್ತವಾಗುವುದನ್ನು ಸಮೀಪ ಚಿತ್ರಿಕೆಗಳಲ್ಲಿ ನಿರೂಪಿತಗೊಂಡಿವೆ. ಕ್ರಮೇಣ ಈ ಭಾವಚಿಲುಮೆಗಳು ಉಬ್ಬರಗೊಂಡು ಉತ್ಸಾಹಕ್ಕೆ ಕಾರಣವಾಗುತ್ತದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಲೆಬನಾನ್‌ನ ʻಅಂಡರ್ ದ ಬಾಂಬ್ಸ್ʼ ಸಿನಿಮಾದ ವಿಶ್ಲೇಷಣೆ
ಅದು 2006 ಕಾಲ. ಮಿಡಲ್ ಈಸ್ಟ್ ಪ್ರದೇಶದಲ್ಲಿ ಜುಲೈ ತಿಂಗಳ ಕೊನೆಯಲ್ಲಿ ಇಸ್ರೇಲ್ ದಕ್ಷಿಣ ಲೆಬೆನಾನ್ ಮೇಲೆ ಸುಮಾರು ಮೂವತ್ಮೂರು ದಿನಗಳವರೆಗೆ ಆಕ್ರಮಣ ಮಾಡಿತು. ಇದು ಈ ಮೊದಲು ಆ ದೇಶ ಆಕ್ರಮಣ ಮಾಡಿದ ಪ್ರತಿಕಾರಕ್ಕಾಗಿ ಅತ್ಯುಗ್ರ ಪ್ರಮಾಣದಲ್ಲಿ ಕೈಗೊಂಡ ಕಾರ್ಯ. ಆದರೆ ನಮ್ಮ ದೇಶವೂ ಸೇರಿದಂತೆ ಪ್ರಪಂಚದ ಅನೇಕ ಕಡೆ ಎಡೆಬಿಡದೆ ಜರುಗುತ್ತಿರುವ ಉಗ್ರರ ಹಾವಳಿಗಳು ಸಾಮಾನ್ಯ. ಈ ಬಗೆಯ ಘಟನೆಗಳು ಕೇವಲ ನಿಮಿತ್ತ ಮಾತ್ರ. ಇದಕ್ಕೆ ರಾಷ್ಟ್ರಗಳ ನಡುವೆ ಧಾರ್ಮಿಕ ಕಾರಣವೂ ಸೇರಿದಂತೆ ಪರಸ್ಪರ ಗೌರವದ ಅಭಾವ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಶಾಂತಿಯ ಅಂಶಗಳು ಕದಡಿ ಹೋದ ಸಂದರ್ಭಗಳಲ್ಲಿ ಆಗಾಗ ಉಂಟಾಗುತ್ತವೆಂದು ಹೇಳಬಹುದು. ಅಂಥವುಗಳಲ್ಲಿ ಇದೊಂದು.
ಇಸ್ರೇಲ್ ನಡೆಸಿದ ಈ ಆಕ್ರಮಣದಲ್ಲಿ ಲೆಬನಾನಿನ ದಕ್ಷಿಣ ಭಾಗಕ್ಕೆ ಹೇಳತೀರದಷ್ಟು ಹಾನಿಯಾಯಿತು. ಅದರಲ್ಲಿಯೂ ಮುಖ್ಯವಾಗಿ ಬಿಂಟ್ ಬೀಲ್ ಎಂಬ ಊರಿಗೆ ಉಂಟಾದದ್ದು ಅಪಾರ. ಆ ಊರಿನ ರಸ್ತೆ, ಮನೆ ಹಾಗು ಇತರ ವಾಸಸ್ಥಳಗಳು ಮತ್ತು ಇನ್ನಿತರ ಪ್ರದೇಶಗಳು ದಾಳಿಗೆ ಸಿಕ್ಕು ಚಿಂದಿಚಿಂದಿಯಾಗಿದವು. ಇವುಗಳಿಗಿಂತ ಅಲ್ಲಿನ ಗಂಡಸರು-ಹೆಂಗಸರು-ಮಕ್ಕಳೆನ್ನದೆ ಎಲ್ಲ ಮುಗ್ಧ ಜನರ ಮೇಲೆ ಆದ ಪ್ರಹಾರ ಊಹೆಗೂ ಮೀರಿದಷ್ಟು. ಇಂಥ ಘಟನೆಗಳು ಸಂಭವಿಸಿದಾಗ ಯಾರು ಮೊದಲು ಪ್ರಾರಂಭಿಸಿದರು ಎನ್ನುವುದು ಗೌಣವಾಗುತ್ತದೆ. ಹೀಗಿದ್ದರೂ ಅಥವ ಹಾಗಿದ್ದರೂ ಅಲ್ಲಿ ಜರುಗುವುದು ಅಹಂಕಾರದ ಪ್ರದರ್ಶನ, ನಾಪತ್ತೆಯಾದ ಮಾನವೀಯತೆ, ನೆಲೆ ತಪ್ಪಿದ ಅಸಹನೆ. ಪರಿಣಾಮವಾಗಿ ಜಜ್ಜಿ ಹೋದ ಜೀವಗಳ ಆಕ್ರಂದನ, ಮೂರಾಬಟ್ಟೆಯಾದ ಬದುಕು, ನಾಶವಾದ ಸಂಸಾರ, ನೆಲಸಮವಾದ ವರ್ತಮಾನ, ಶೂನ್ಯವಾದ ಭವಿಷ್ಯ.
ಪ್ರತ್ಯೇಕವಾಗಿಯೂ ಅಷ್ಟೆ, ಸಮಷ್ಟಿಯಾಗಿಯೂ ಅಷ್ಟೆ. ಹೀನ ಕೃತ್ಯ ಮಾಡುವವರ ಕಣ್ಣಿಗೆ ನೆತ್ತಿಗೆ ನುಗ್ಗುವ ಆವೇಶ. ನೆಲದ ಕಡೆ ನೋಟ ಮಾಯ. ಈ ಆಟಾಟೋಪ ಹಾಗೆಯೇ ಮುಂದುವರಿಯುತ್ತಿತ್ತೋ ಏನೋ ಆದರೆ ಯುನೈಟೆಡ್ ನೇಷನ್ಸ್ ಶಾಂತಿ ನೆಲೆಸುವಂತೆ ಸಫಲ ಪ್ರಯತ್ನ ಮಾಡಿದ್ದರಿಂದ ಆಕ್ರಮಣ ಕೊನೆಗೊಂಡಿತೆಂದು ಹೇಳಲಾಗಿದೆ.
ʻಅಂಡರ್ ದ ಬಾಂಬ್ಸ್ʼ ಚಿತ್ರ ಈ ಘಟನೆಯ ಹಿನ್ನೆಲೆಯಲ್ಲಿ ನಿರ್ಮಾಣವಾದದ್ದು. ಸಾಮಾನ್ಯವಾಗಿ ಈ ರೀತಿಯ ಹೋರಾಟ, ಯುದ್ಧ, ಉಗ್ರರ ಅಟ್ಟಹಾಸ ಇತ್ಯಾದಿ ಚಿತ್ರಗಳಲ್ಲಿ ಆರ್ಭಟಗಳದ್ದೇ ಮೇಲುಗೈ. ಯುದ್ಧ ಸಾಮಗ್ರಿಗಳ ಓಡಾಟ, ಕಿವಿಗಡಚಿಕ್ಕುವ ಬಾಂಬ್ ಸ್ಫೋಟಗಳ ಸದ್ದು, ಓಡುವ ವಾಹನಗಳ ಸದ್ದು. ಮನುಷ್ಯರ ಅವಸರದ ಓಡಾಟಗಳು ಇರುವುದು ಸಾಮಾನ್ಯ. ಆದರೆ ಪ್ರಸ್ತುತ ಚಿತ್ರದಲ್ಲಿ ಅವುಗಳ ಸುಳಿವಿಲ್ಲ. ಅದರಲ್ಲೇನಿದ್ದರೂ ಪ್ರಕರಣ ಘಟಿಸಿದ ನಂತರದ ಪರಿಣಾಮಗಳಷ್ಟೆ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಇದು, ಅದು ಅಂತಿಲ್ಲದೆ ಪರಿಣಾಮಗಳು ಅಸಂಖ್ಯ; ವೇದನಾಪೂರ್ಣ. ನಿರ್ದೇಶಕ ಯುದ್ಧವನ್ನು, ಕಾದಾಟವನ್ನು ನಿರೂಪಿಸಲು ಹೊರಟಿಲ್ಲ. ಚಿತ್ರದಲ್ಲಿ ಪರಸ್ಪರ ಕಾದಾಟಗಳ ನಂತರ ಉದ್ಭವವಾದ ಸಮಸ್ಯೆಗಳನ್ನು, ಅದರಲ್ಲೂ ಕೇವಲ ಮನುಷ್ಯರನ್ನು ಕುರಿತಾದ ಕಷ್ಟಕಾರ್ಪಣ್ಯ, ದುಃಖದುಮ್ಮಾನಗಳನ್ನು ನಿರೂಪಿಸಲ್ಪಟ್ಟಿದೆ.
ನಿರ್ದೇಶಕ ಫಿಲಿಪ್ ಅರಾಕ್ಟಿಂಜಿ ಲೆಬನಾನ್ ದೇಶದವನಾಗಿದ್ದು ಈ ಮೊದಲು ʻಬೋಸʼ ಎಂಬ ಡಾಕ್ಯುಮೆಂಟರಿ ತೆಗೆದು ಆಸಕ್ತರ ಗಮನ ಸೆಳೆದವನು. ತನ್ನ ದೇಶದವರ ಪಡಿಪಾಟಲು ಕಂಡು ಆ ಪರಿಸ್ಥಿತಿಯನ್ನು ಕೇವಲ ಡಾಕ್ಯುಮೆಂಟರಿ ಆಗಿರದೆ ಛಿದ್ರಗೊಂಡ ಮನುಷ್ಯರ ಬದುಕನ್ನು, ಕೊಂಡಿ ಕಳಚಿ ಬಿದ್ದ ಸಂಬಂಧಗಳನ್ನು ಅದರಲ್ಲಿ ಮಿಳಿತಗೊಳಿಸಲು ಸಾಧ್ಯವೇ ಎಂದು ಯೋಚಿಸಿದಾಗ ಮೂಡಿದ ಪರಿಕಲ್ಪನೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾನೆ.
ಉದ್ದೇಶಿತ ಚಿತ್ರವನ್ನು ಆಕ್ರಮಣಕ್ಕೆ ಒಳಗಾದ ದಕ್ಷಿಣ ಲೆಬೆನಾನ್‌ನ ಬಿಂಟ್ ಬಿಲ್ ಅನ್ನುವ ಊರಿನಲ್ಲಿನ ತುಂಡಾದ ಮನೆಗಳು, ಜಜ್ಜಿ ಹೋದ ರಸ್ತೆಗಳು, ಗೋಳಿಡುವ ಜನರು ಇತ್ಯಾದಿ ಪರಿಸ್ಥಿತಿಯಲ್ಲಿಯೇ ಚಿತ್ರೀಕರಿಸಲು ಆಲೋಚಿಸಿದ್ದಾನೆ. ಆ ಊರು ಇರುವ ಸ್ಥಳದಿಂದ ಕೆಲವು ಕಿಲೋಮೀಟರುಗಳ ಆಚೆಯಲ್ಲಿಯೇ ಇಸ್ರೇಲ್ ಪ್ರದೇಶ ಪ್ರಾರಂಭವಾಗುತ್ತದೆ.
ಪರಸ್ಪರ ಕಾದಾಟದ ವಿಷಯಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಇರಬಹುದೆನ್ನಿಸಿದರೂ ಅದರಿಂದ ವಿಮನಸ್ಕನಾಗದೆ ಕೆಲಸದಲ್ಲಿ ತೊಡಗಿ ನಿರ್ಮಿಸಿದ ನೂರು ನಿಮಿಷಗಳ ಚಿತ್ರ ʻಅಂಡರ್ ದ ಬಾಂಬ್ಸ್ʼ ನಿರ್ಮಿಸಿದ್ದಾನೆ.
ಪ್ರಸ್ತುತ ಚಿತ್ರದಲ್ಲಿ ಅವುಗಳ ಸುಳಿವಿಲ್ಲ. ಅದರಲ್ಲೇನಿದ್ದರೂ ಪ್ರಕರಣ ಘಟಿಸಿದ ನಂತರದ ಪರಿಣಾಮಗಳಷ್ಟೆ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಇದು, ಅದು ಅಂತಿಲ್ಲದೆ ಪರಿಣಾಮಗಳು ಅಸಂಖ್ಯ; ವೇದನಾಪೂರ್ಣ. ನಿರ್ದೇಶಕ ಯುದ್ಧವನ್ನು, ಕಾದಾಟವನ್ನು ನಿರೂಪಿಸಲು ಹೊರಟಿಲ್ಲ.
ಚಿತ್ರದ ಕಥಾವಸ್ತು ಹೀಗಿದೆ: ಕದನದ ಪರಿಣಾಮವಾಗಿ ತಾಯಿಯೊಬ್ಬಳು ಕಳೆದುಹೋದ ತನ್ನ ಮಗ ಮತ್ತು ಇನ್ನೊಂದೆಡೆ ಇರುವ ತಂಗಿಯನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. ಉರಿಯುವಂಥ ಸನ್ನಿವೇಶದಲ್ಲಿ ಅವಳಿಗೆ ತನ್ನವರನ್ನು ಹುಡುಕುವ ಪ್ರಯತ್ನಕ್ಕೆ ವ್ಯಕ್ತಿಯೊಬ್ಬ ಸಹಕರಿಸುತ್ತಾನೆ. ಹೀಗೆ ಒಗ್ಗೂಡಿದ ಅವರು ಮಾಡುವ ಪ್ರಯತ್ನದಲ್ಲಿ ಸಫಲರಾಗುತ್ತಾರೆ. ಆದರೆ ಅದು ಯಾವ ಬಗೆಯಲ್ಲಿ ಎನ್ನುವುದನ್ನು ಚಿತ್ರ ಶೋಧಿಸುತ್ತದೆ..
ಚಿತ್ರ ತೆರೆದುಕೊಳ್ಳುತ್ತಿದ್ದಂತೆ ಕಣ್ಣೆದುರು ಕಾಣುವುದೆಲ್ಲ ಹಾಳಾದ ಮನೆಗಳು, ಕಟ್ಟಡಗಳು, ಛಿದ್ರವಾದ ರಸ್ತೆಗಳು. ಇವೆಲ್ಲ ಜೀವವಿಲ್ಲದವು. ಇನ್ನು ಜೀವವಿರುವವರ ಪಾಡು? ಅದಂತೂ ನಾಲಗೆ ಹೊರಳದಂತೆ, ಗಂಟಲಿನ ತೇವ ಆರುವಂತೆ ಮಾಡುವಂಥಾದ್ದು. ಈ ತೆರನಾದ ದೃಶ್ಯಗಳು ಅಂಥ ಸನ್ನಿವೇಶದಲ್ಲಿ ಅಪರೂಪವೇನಲ್ಲ. ಎಲ್ಲವೂ ಕೇವಲ ಸಹಜ ಎನ್ನಿಸುವಂಥವು. ಹೀಗೆ ಪಾಳುಬಿದ್ದ ಹಲವನ್ನು ಪ್ರಸ್ತುತಪಡಿಸಿದ ನಂತರ ನಿರ್ದೇಶಕ ಉದ್ದೇಶಿದ ಕಥನದ ಕಡೆ ತಿರುಗುತ್ತಾನೆ. ಎಲ್ಲವೂ ಅವ್ಯವಸ್ಥೆಗೊಂಡಿರುವ ಅಂಥ ಸ್ಥಳದಲ್ಲಿ ಜೈನಾ ಎಂಬ ಶಿಯಾ ಮುಸ್ಲಿಂ ಒಬ್ಬಳು ಆತಂಕದಿಂದ ಅತ್ತಿತ್ತ ಓಡಾಡುತ್ತಾ ಬಾಡಿಗೆ ಕಾರುಗಳು ನಿಂತಲ್ಲಿಗೆ ಹೋಗಿ ತನಗೆ ಅಗತ್ಯವಾದದ್ದನ್ನು ಕೇಳುತ್ತಾಳೆ. ಅದೆಂದರೆ ದೇಶದ ಇನ್ನಷ್ಟು ದಕ್ಷಿಣದ ಪ್ರದೇಶವೊಂದರಲ್ಲಿ ಇರುವ ತನ್ನ ಮಗ ಕರೀಮ ಮತ್ತು ತಂಗಿಯನ್ನು ಹುಡುಕುತ್ತಿದ್ದೇನೆ ಬನ್ನಿ ಎಂದು ಕೇಳಿಕೊಳ್ಳುತ್ತಾಳೆ. ಅಲ್ಲಿದ್ದ ಕೆಲವು ಕಾರಿನ ಡ್ರೈವರ್ ಗಳು ಅವಳಿಗೆ ಸಹಾಯ ಮಾಡಲು ಒಪ್ಪುವುದಿಲ್ಲ. ಅಲ್ಲಿಗೆ ಹೋಗುವುದು ತೀರ ಅಪಾಯಕರ ಎಂದು ಮತ್ತೆ ಮತ್ತೆ ಹೇಳುತ್ತಾರೆ. ಆದರೆ ಅವಳು ಪ್ರಯತ್ನ ನಿಲ್ಲಿಸುವುದಿಲ್ಲ. ಇನ್ನೂ ಕೆಲವರನ್ನು ಹೆಚ್ಚಿದ ಆತಂಕದಿಂದ ಕೇಳುತ್ತಾಳೆ. ಜೈನಾ ತನ್ನ ಆರು ವರ್ಷದ ಮಗ ಕರೀಮ ಸಂಕಷ್ಟದಲ್ಲಿ ಸಿಲುಕಿರುವುದನ್ನು ತೋಡಿಕೊಳ್ಳುತ್ತಾಳೆ. ಆದರೂ ಅವಳದು ಒಣ ಪ್ರಲಾಪವಾಗುತ್ತದೆ.
ಇದು ಹೀಗಿದ್ದರೂ ಅವಳು ನೋಡಿದವರ ಕಣ್ಣಿಗೆ ಸುಂದರಿ ಎನ್ನಿಸುವಂಥವಳು. ಬಹುಶಃ ಆ ಕಾರಣದಿಂದಲೇ ಟೋನಿ ಎಂಬ ಕ್ರಿಶ್ಚಿಯನ್ ಡ್ರೈವರ್ ಅವಳೊಂದಿಗೆ ಹೊರಡಲು ಒಪ್ಪುತ್ತಾನೆ ಎಂದು ಪ್ರಾರಂಭದಲ್ಲಿ ನಮಗನ್ನಿಸಿದರೆ ಆಶ್ಚರ್ಯವಲ್ಲ. ಅವರು ಹೋದ ಕಡೆಗಳಲ್ಲಿ ಚಲಿಸುವುದಕ್ಕೆ ಆಗದಷ್ಟು ರಸ್ತೆಗಡ್ಡವಾಗಿ ಕುಸಿದ ಭೂಮಿ ಇತ್ಯಾದಿಗಳು ಕಂಡುಬರುತ್ತವೆ. ಹತಾಶರಾದ ಅವಳನ್ನು ಟೋನಿ ಸಂತೈಸುತ್ತಲೇ ಮುಂದೆ ಹೋಗುತ್ತಾನೆ. ಅವರು ಅಲ್ಲೊಂದು ಕಡೆ ನಿಲ್ಲುತ್ತಾರೆ. ಅವಳು ಹತ್ತಿರದ ವಸತಿ ಸ್ಥಳಕ್ಕೆ ಹೋಗಿ ತನ್ನ ಮಗ ಬಗ್ಗೆ ವಿಚಾರಿಸುವುದಕ್ಕೆ ಮುಂಚೆಯೇ ಅವರು ತಮ್ಮದೇ ಸಂಕಟ, ತಮ್ಮ ಸಂಬಂಧಿಗಳ ಸಾವು, ಪಡುತ್ತಿರುವ ಪರಿತಾಪ, ವೇದನೆ ಮುಂತಾದ ಮನಕರಗಿಸುವ ಸಂಗತಿಗಳನ್ನು ಹೇಳುತ್ತಾರೆ. ಈ ದೃಶ್ಯಗಳನ್ನು ಚಿತ್ರಿಸುವಾಗ ನಿರ್ದೇಶಕ ಅಲ್ಲಿನ ಜನಸಮುದಾಯ, ಹಿನ್ನೆಲೆ ಇತ್ಯಾದಿಗೆ ಸಂಬಂಧಿಸಿದಂತೆ ಅಪ್ಪಟ ವಾಸ್ತವ ಸ್ವರೂಪವನ್ನು ಸೆರೆ ಹಿಡಿಯಲು, ಹೇಗಿದೆಯೋ ಹಾಗೆ ಚಿತ್ರಿಸಿ, ಪ್ರತಿಯೊಂದರಲ್ಲೂ ಪ್ರೇಕ್ಷಕರೇ ಭಾಗವಹಿಸುತ್ತಿರುವ ಭಾವನೆ ಉಂಟುಮಾಡುತ್ತಾನೆ. ಮಕ್ಕಳು, ಹೆಂಗಸರು, ಕೈಲಾಗದವರು ಎಲ್ಲರೂ ತಮಗನಿಸಿದ್ದನ್ನು, ಕುಳಿತಲ್ಲಿ, ನಿಂತಲ್ಲಿ, ವಿಸ್ತಾರವಾದ ಪ್ರದೇಶದಲ್ಲಿ, ಎಲ್ಲೆಂದರಲ್ಲಿ ಅವರಿಗೆ ತಿಳಿಸಿ ಹೇಳುತ್ತಾರೆ. ಅವರು ಹೇಳುವುದು ಪಾತ್ರವೊಂದಕ್ಕಲ್ಲ ಪ್ರೇಕ್ಷಕರಿಗೆ ಎನಿಸುವಂತೆ ಚಿತ್ರಿಸಿದ್ದಾನೆ ನಿರ್ದೇಶಕ. ಎಲ್ಲಿ ನೋಡಿದರಲ್ಲಿ ದುಃಖತಪ್ತರನ್ನು, ಹೃದಯ ಛಿದ್ರವಾದವರನ್ನು ಸೊರಗಿಸೋತವರನ್ನು, ಕಣ್ಣೀರು ಬತ್ತಿದವರನ್ನು, ಗಂಡು-ಹೆಣ್ಣೆನ್ನದೆ ಎಲ್ಲ ಬಗೆಯ ವಯಸ್ಸಿನವರ ಬವಣೆಯನ್ನು ತೆರೆದಿಡುತ್ತಾನೆ. ಹೀಗೆ ಕಾದಾಟದ ಕದನದ ಪರಿಣಾಮವನ್ನು ನಿರೂಪಿಸುತ್ತಾನೆ.
ಜೈನಾ ದುಬಾಯಿಂದ ಬೈರುತ್ ಗೆ ಬಂದು ಅಲ್ಲಿಂದ ಆಕ್ರಮಣಕ್ಕೆ ಒಳಗಾದ ಬಿಂಟ್ ಬಿಲ್ ಊರನ್ನು ತಲುಪಿರುತ್ತಾಳೆ. ಟೋನಿಯೊಂದಿಗೆ ಪ್ರಯಾಣ ಸಾಗುತ್ತಿದ್ದಂತೆ ಇಬ್ಬರಿಗೂ ತಮ್ಮಷ್ಟಕ್ಕೆ ಇರುವುದು ಅಸಹಜವೆನ್ನಿಸಿ, ನಿಧಾನವಾಗಿ ಕೇವಲ ವ್ಯಕ್ತಿಗಳಂತೆ ಇದ್ದವರು ಪರಸ್ಪರ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಅವರ ಭಾವಗಳಲ್ಲಿ, ಮುಖಚಹರೆಗಳಲ್ಲಿ ವ್ಯಕ್ತವಾಗುವುದನ್ನು ಸಮೀಪ ಚಿತ್ರಿಕೆಗಳಲ್ಲಿ ನಿರೂಪಿತಗೊಂಡಿವೆ. ಕ್ರಮೇಣ ಈ ಭಾವಚಿಲುಮೆಗಳು ಉಬ್ಬರಗೊಂಡು ಉತ್ಸಾಹಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಪರಸ್ಪರ ಸಾಮೀಪ್ಯ ಹಿತವೆನಿಸುತ್ತದೆ. ಜೀವಸೆಲೆ ತಲೆದೋರುತ್ತದೆ. ಇವುಗಳ ನಡುವೆ ಮಗನ ಬಗ್ಗೆ ವಿಚಾರಿಸುವಾಗ ಅವನು ಫ್ರೆಂಚ್ ಪತ್ರಕರ್ತರೊಂದಿಗೆ ಹೋದದ್ದು ತಿಳಿಯುತ್ತದೆ. ಅವರು ಆತಂಕದಿಂದ ಸಂಬಂಧಪಟ್ಟವರನ್ನು ವಿಚಾರಿಸುತ್ತಾರೆ. ಈ ಬಗೆಯ ದೃಶ್ಯಗಳಿರುವ ಕಡೆಯಲ್ಲೆಲ್ಲ ಸಹಜವಾಗಿಯೇ ಹರಕು-ಮುರುಕು ರಸ್ತೆಗಳು, ತುಂಡಾದ ವಾಹನಗಳು, ಮುರಿದು ಬಿದ್ದ ಮನೆಗಳು ಇರುತ್ತವೆ.
ಜೈನಾಳ ಹಾಗೂ ಟೋನಿ ನಡುವಿನ ಸಂಬಂಧ ನಿಧಾನವಾಗಿ ಕ್ರಮಿಸಿ ಪರಸ್ಪರ ವಿಶ್ವಾಸ ಹೆಚ್ಚುತ್ತ ಹೋಗುತ್ತದೆ. ಅದು ದಿಢೀರನೆ ಉಂಟಾಗದೆ ಕ್ರಮೇಣ ವೃದ್ಧಿಯಾಗುತ್ತದೆ. ಹೀಗಾಗುವುದಕ್ಕೆ ಜೈನಾಳ ಕೊಡುಗೆಗಿಂತ ಟೋನಿಯದೇ ಅಧಿಕವಾಗುವುದು ನಿರೀಕ್ಷಿತವೇ. ಆದರದು ಸಹಜತೆಯನ್ನು ಮೀರುವುದಿಲ್ಲ. ಅವರ ಪ್ರಯಾಣಕ್ಕೆ ರಸ್ತೆ ಗುಂಡಿಬಿದ್ದು ತಡೆಯಾದಾಗಲೆಲ್ಲ ತಕ್ಷಣವೇ ಅಪ್ರತಿಭಳಾಗುವ ಅವಳ ಉದ್ವೇಗವನ್ನು ತಹಬಂದಿಗೆ ತರುತ್ತಾನೆ. ಅನಂತರ ಬೇರೊಂದು ದಾರಿ ಇರುವುದನ್ನು ಕಂಡು ಮುಂದುವರಿಯುತ್ತಾರೆ.
ಮಧ್ಯಂತರದ ಅವಧಿಯಲ್ಲಿ ಜೈನಾ ತನ್ನ ಮಗ ಕರೀಮ ಎಲ್ಲಿರಬಹುದೆನ್ನುವ ಹುಡುಕಾಟದಲ್ಲಿ ಪರಿಚಯವಿರುವವರನ್ನು ಸಂಪರ್ಕಿಸುತ್ತಿರುತ್ತಾಳೆ. ಆಗ ದಿನ ಕಳೆದು ರಾತ್ರಿಯಾಗಿರುತ್ತದೆ. ಇದು ಅವಳ ಮಾಸಿಕ ಸ್ಥಿತಿಯನ್ನು ಬಿಂಬಿಸುತ್ತದೆ. ಅವರು ದಕ್ಷಿಣ ಲೆಬನಾನ್‌ನ ಗಡಿಯಲ್ಲಿ ಒಂದು ಕಡೆ ಟೋನಿಯ ಹಳೆಯ ಸ್ನೇಹಿತನೊಬ್ಬನ ಮನೆಗೆ ಹೋಗುತ್ತಾರೆ. ಅಲ್ಲಿ ಅವನಿಗೆ ಊಹಿಸಲು ಅಸಾಧ್ಯವಾದ ಸಂಗತಿ ಎದುರಾಗುತ್ತದೆ. ಅವನ ಸ್ನೇಹಿತ ಇಸ್ರೇಲ್ ಪರವಾಗಿ ಕೆಲಸ ಮಾಡುತ್ತಿರುತ್ತಾನೆ! ಇಷ್ಟಲ್ಲದೆ ಅದನ್ನು ಸಮರ್ಥಿಸಿಕೊಳ್ಳುತ್ತಾನೆ ಕೂಡ. ಅದನ್ನೊಪ್ಪನೆ ರೋಷದಿಂದ ಎದ್ದು ಟೋನಿ, ಜೈನಾ ಹೊರಡುತ್ತಾರೆ.. ಇಂಥ ವಿದ್ರೋಹದ ವ್ಯಕ್ತಿಗಳು ಎಲ್ಲ ವಿಪರೀತ ಸನ್ನಿವೇಶಗಳಲ್ಲಿ ಇರುವಂಥವೇ. ದೇಶಗಳು ಯಾವುವು, ಕಾದಾಟಕ್ಕೆ ಕಾರಣವೇನು ಇತ್ಯಾದಿಗಳೆಲ್ಲ ತೃಣವಾಗಿ ಸ್ವಾರ್ಥವೇ ತನ್ನ ಪತಾಕೆಯನ್ನು ಹಾರಿಸುವುದನ್ನು ಯಾವ ದೇಶ ಕಂಡಿಲ್ಲ; ಅಷ್ಟೇಕೆ
ಎಲ್ಲ ಕಾಲದಲ್ಲಿಯೂ ಇಂಥದನ್ನು ಕಂಡಿದ್ದರೆ ಆಶ್ಚರ್ಯವಿಲ್ಲ. ಅಂಥವರಲ್ಲಿ ದೇಶಪ್ರೇಮ, ಸ್ವಜನರ ಹಿತ ಇವೆಲ್ಲ ಹೇಳಹೆಸರಿಲ್ಲವಾಗುತ್ತವೆ ಎಂದು ಸೂಚಿಸುತ್ತಾನೆ ನಿರ್ದೇಶಕ.
ಚಿತ್ರದ ನಿರೂಪಣೆಯ ಈ ಘಟ್ಟದ ನಂತರ, ಎರಡು ದೇಶಗಳು ಪರಸ್ಪರ ಕಾದಾಟದಲ್ಲಿರುವ ನೆಲೆಯಿಂದ, ಕೇವಲ ಮನುಷ್ಯರ ವಿಷಯದ ಕಡೆ ಹೊರಳುತ್ತದೆ. ಅದು ಇಬ್ಬರು ವ್ಯಕ್ತಿಗಳ ಆಗುಹೋಗುಗಳನ್ನು ಕುರಿತದ್ದಾಗುತ್ತದೆ.. ಹೀಗಾಗಿ ಕ್ಲಿಷ್ಟ ಸನ್ನಿವೇಶದಲ್ಲಿ ಸಿಲುಕಿದ್ದರೂ ಮಾನವೀಯತೆಯ ಭಾವಗಳು ಮೇಲುಗೈ ಪಡೆಯುತ್ತವೆ.
ಟೋನಿ ತನ್ನ ಅಭಿಲಾಷೆಯನ್ನು ಹೇಳಿಕೊಳ್ಳುತ್ತಾನೆ. ಇಸ್ರೇಲಿನಲ್ಲಿರುವ ತಮ್ಮನ ಜೊತೆಗೂಡಿ ಅವನೊಂದಿಗೆ ಜರ್ಮನಿಗೆ ಹೋಗಿ ರೆಸ್ಟೊರೆಂಟ್ ತೆರೆಯುವ ಯೋಜನೆ ಅವನದು. ಇದರೊಂದಿಗೆ ಜೈನಾಳಿಗೆ ತಂಗಿ ಬಾಂಬ್ ದಾಳಿಯಲ್ಲಿ ತೀರಿಕೊಂಡಿರುವುದು ತಿಳಿಯುತ್ತದೆ. ಈಗ ಅವಳಿಗೆ ಕರೀಮನೇ ಸರ್ವಸ್ವ. ಅದಕ್ಕನುಗುಣವಾಗಿ ಅಲ್ಲೊಂದು ಕಡೆ ಅವನಿರುವ ವರ್ತಮಾನ ಸಿಗುತ್ತದೆ. ಅವರು ಸಾಗುತ್ತಿದ್ದ ಕಾರು ಕೂಡ ಮುಂದೆ ಹೋಗದಂತೆ ನಿಂತ ಮೇಲೆ ನಡೆದುಕೊಂಡೇ ಆ ಸ್ಥಳ ತಲುಪುತ್ತಾರೆ. ಅಲ್ಲಿ ಜೈನಾ ನಿರೀಕ್ಷೆ ಯಾವ ತಿರುವು ತೆಗೆದುಕೊಳ್ಳುತ್ತದೆ ಎನ್ನುವುದನ್ನು ನಿರ್ದೇಶಕ ಪರಿಣಾಮಕಾರಿಯಾಗಿ ನಿರೂಪಿಸಿದ್ದಾನೆ.
ಚಿತ್ರದ ಕಥನದಲ್ಲಿ ತೋರ್ಪಡುವ ತಿರುವುಗಳು ನಿರೀಕ್ಷಿತ ಮಟ್ಟದಲ್ಲಿಯೇ ಜರುಗುತ್ತವಾದರೂ ನಿರೂಪಣೆಯ ಶೈಲಿಯಲ್ಲಿ ಪ್ರತ್ಯೇಕತೆ ಕಾಣಿಸುವುದು ವಿಶೇಷ. ಇದಕ್ಕಿಂತ ಮುಖ್ಯವಾಗಿ ಸಂಭವಿಸಬಹುದಾದ ಹಲವು ರೀತಿಯ ಅನಿರೀಕ್ಷಿತಗಳ ನಡುವೆ ಕೈಗೊಂಡ ಚಿತ್ತೀಕರಣ ಇತ್ಯಾದಿಗಳನ್ನು ಮೆಚ್ಚದಿರಲು ಸಾಧ್ಯವಿಲ್ಲ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.