ಆ ವರ್ಷ ತಡವಾಗಿ ಬಂದ ಮಳೆ, ತದನಂತರದ ಬಂದ ನೆರೆ ಈ ಮಲವಾಯಿ ಎಂಬ ನತದೃಷ್ಟ ಊರನ್ನು ಅಕ್ಷರಶಃ ಬೆಂಕಿಯಲ್ಲಿ ಬೇಯಿಸುತ್ತದೆ. ಒಂದು ಹಿಡಿ ಕಾಳಿಗಾಗಿ ಕೊಲೆಗಳಾಗುತ್ತಿವೆ. ಕಣ್ಣೀರ ಬಾವಿಗಳೂ ಬತ್ತಿ ಹೋಗಿವೆ. ಬಾವಿಯ ಅಳಿದುಳಿದ ನೀರು ಎಳೆಯಲು ದೇಹದಲ್ಲಿ ಕಸುವಿಲ್ಲ. ಆದರೆ ವಿಲಿಯಮ್ ಸುಮ್ಮನಿರಬೇಕಲ್ಲ. ತಾನು ಶಾಲೆಯಲ್ಲಿ ಕಲಿತ ಅಲ್ಪ ಸ್ವಲ್ಪ ಜ್ಞಾನದಲ್ಲೇ ಒಂದು ವಿಂಡ್ ಮಿಲ್ ತಯಾರಿಸಿ ಅದರಿಂದ ಉತ್ಪನ್ನವಾದ ವಿದ್ಯುತ್ ಬಳಸಿ ಚಿಕ್ಕ ಪಂಪ್ ಸೆಟ್ ನಿಂದ ನೀರು ಸೇದಬೇಕೆಂಬ ಯೋಚನೆಯೊಂದನ್ನು ಮಾಡುತ್ತಾನೆ. ತನ್ನ ತಂದೆ-ತಾಯಿಯ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದಾಗ ಇವನಿಗೆಲ್ಲೋ ತಲೆ ಕೆಟ್ಟಿದೆಯೇನೋ ಎಂಬಂತೆ ಈತನನ್ನು ಹುಚ್ಚನಂತೆ ಕಾಣುತ್ತಾರೆ.
ಡಾ.ಲಕ್ಷ್ಮಣ ವಿ.ಎ ಅಂಕಣ

 

ಮಕ್ಕಳ ವಿಜ್ಞಾನ ಪಾಠದ ಕೊನೆಯಲ್ಲಿ ಪ್ರಯೋಗಕ್ಕೆಂದೇ ಕೆಲವೊಂದು “ನೀವು ಮಾಡಿ ನೋಡಿ ” ಎಂಬ ಪಠ್ಯ ಚಟುವಟಿಕೆ ಕೊಟ್ಟಿರುತ್ತಾರಲ್ಲವೇ? ಉದಾ: ಮಣ್ಣಿನಲ್ಲಿ ಬೀಜ ಹುಟ್ಟುವ ಬಗೆ. ಹೀಗೆ ಹುಟ್ಟಿದ ಸಸಿಗೆ ತನ್ನ ಆಹಾರ ತಾನೇ ತಯಾರಿಸಿಕೊಳ್ಳುವ “ದ್ಯುತಿ ಸಂಶ್ಲೇಷಣೆ” ಕ್ರಿಯೆಗೆ ಅತ್ಯವಶ್ಯ ಬೇಕಾಗುವ ಸೂರ್ಯನ ಬೆಳಕು, ಬೆಳಕಿನಲ್ಲಿ ಬೆಳೆದ ಸಸಿ ಬೆಳೆಯುತ್ತ ಹೋಗುವುದು, ಬೆಳಕಿಲ್ಲದ ಸಸಿಗಳು ನಶಿಸಿ ಹೋಗುವ ಇಂತಹ ಸರಳ ಪ್ರಯೋಗಗಳನ್ನು ನಾವು ಚಿಕ್ಕವರಿದ್ದಾಗ ಪ್ರಯೋಗ ಮಾಡಿದ್ದೆವು.

ಐದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮಗನಿಗೂ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳಿಗಾಗೇ ಶಾಲೆಯವರು ಒಂದು ಚಿಕ್ಕ ಟೂಲ್ ಬಾಕ್ಸ ಸಹ ನೀಡುತ್ತಾರೆ. ಅದರಲ್ಲಿ ಆಯಾ ಪಾಠಕ್ಕೆ ಸಂಬಂಧಿಸಿದ ಪ್ರಯೋಗದ ಪರಿಕರಗಳನ್ನಿಟ್ಟು ಮಕ್ಕಳಿಂದಲೇ ಮನೆಯಲ್ಲಿ ಪ್ರಯೋಗ ಮಾಡಿಸಿ ಮಕ್ಕಳಲ್ಲಿ ಕ್ರಿಯಾತ್ಮಕತೆ, ಕೌಶಲ್ಯ, ಕುತೂಹಲ ಹುಟ್ಟಿಸುವಂತೆ ತಯಾರು ಮಾಡಿ ಆಧುನಿಕ ಶಿಕ್ಷಣ ಪಡೆಯುವ ಈ ನಮ್ಮ ಒಂದು ತಲೆಮಾರು ನಿಜಕ್ಕೂ ಅದೃಷ್ಟವಂತ ಎಂದೇ ಹೇಳಬೇಕು. ಏಕೆಂದರೆ ನಾವು ಓದುವ ಸಮಯದಲ್ಲಿ ಇಂತಹ ಯಾವುದೇ ಆಧುನಿಕ ಸವಲತ್ತುಗಳಿಲ್ಲದೇ ಕೇವಲ ಪುಸ್ತಕಗಳಲ್ಲಿನ ಚಿತ್ರ ನೋಡಿ ಊಹಿಸಿಕೊಳ್ಳಬೇಕಿತ್ತು.

ನನ್ನ ಮಗನಿಗೆ ಸಿಕ್ಕ ಸವಲತ್ತು ಪ್ರಪಂಚದ ಎಲ್ಲಾ ಮಕ್ಕಳಿಗೂ ಸಿಕ್ಕಿದೆ ಎಂದು ಹೇಳಲು ಧೈರ್ಯ ಸಾಲುತ್ತಿಲ್ಲ. ಶಾಲೆಯ ಮುಖವೇ ಕಾಣದ ಎಷ್ಟೋ ಕೂಸುಗಳು ನಮ್ಮ ಮನೆಯ ಪಕ್ಕದ ಶೆಡ್ಡಿನಲ್ಲಿ ಇವರಿಗಿಂತ ಚಿಕ್ಕಮಕ್ಕಳನ್ನು ನೋಡಿಕೊಳ್ಳಲು ಬಿಟ್ಟು ಹೋಗುವ ಇವರ ತಾಯಿ ತಂದೆಯವರು ಸಮೀಪದ “ನಮ್ಮ ಮೆಟ್ರೋ” ರೈಲಿನ ಸ್ಟೇಷನ್ ನಿರ್ಮಾಣಕ್ಕೆ ಕಂಬಗಳನ್ನು ಕಟ್ಟಲು ಸಿಮೆಂಟು ಕಲೆಸಲು ಹೊರಡುತ್ತಾರೆ. ಇವರಿಗಿಂತ ತುಸು ದೊಡ್ಡ ಮಕ್ಕಳು ದರ್ಶಿನಿ ಹೋಟೆಲುಗಳಲ್ಲಿ ಪಾತ್ರೆ ತೊಳೆಯಲು ಸಿಗ್ನಲ್ ಗಳಲ್ಲಿ ಬಲೂನು ಮಾರಲು ಮತ್ತೂ ಕೆಲವರು ಭಿಕ್ಷೆ ಬೇಡಲೂ ಹೋಗುತ್ತಾರೆ. ಬಾಲ ಕಾರ್ಮಿಕರನ್ನು ಪೇಪರುಗಳ ಮೇಲೆ ನಿಷೇಧಿಸಿದ ಭಾರತದ ಸಮಾಜ ಅದೇ ಮಕ್ಕಳ ಕೈಗಳಲ್ಲಿ ದಿನಪತ್ರಿಕೆ ಹಂಚುವ ಕೆಲಸವನ್ನು ಪರೋಕ್ಷವಾಗಿ ಪೋಷಿಸುತ್ತದೆ. ಇಂತಹ ತಾರತಮ್ಯ ಕೇವಲ ಭಾರತದಲ್ಲಷ್ಟೇ ಅಲ್ಲ ಪ್ರಪಂಚದ ಯಾವ ಮೂಲೆಯಲ್ಲಿಯಾದರೂ ನಡೆಯಬಹುದಾದ ಸಾಮಾನ್ಯ ಸಂಗತಿ. ಅದರಲ್ಲೂ ವಿಶೇಷವಾಗಿ ಆಫ್ರಿಕಾದಂತಹ ಹಿಂದುಳಿದ ರಾಷ್ಟ್ರಗಳಲ್ಲಂತೂ ತೀರ ಸಾಮಾನ್ಯ.

ವಿಲಿಯಂ ಕ್ವಾಂಬಾಕಾಂಬ ಎಂಬ ಬಾಲಕ ಇದೇ ಕಗ್ಗತ್ತಲ ನಾಡಿನ ಆಫ್ರಿಕಾದ ಮಲವಾಯಿ ಎಂಬ ಭೂಗೋಳದ ಮೇಲಿನ ಯಾವ ಚುಕ್ಕಿಯ ಗುರುತಿಗೂ ಸಿಗದಷ್ಟು ಚಿಕ್ಕದಾದ ಊರಿನಲ್ಲಿ ಜನಿಸಿದವನು. ಈ ಊರಿನಲ್ಲಿ ಜನರಿಗೆ ಹಸಿವು ನೀಗಲು ಕೃಷಿ ಜಮೀನು ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಈ ಪ್ರದೇಶ ಸತತ ನೆರೆ ಇಲ್ಲವೇ ಬರದ ಹೊಡೆತ ತಿನ್ನುವ ಥೇಟ್ ನಮ್ಮ ಉತ್ತರಕರ್ನಾಟಕದ ಹಳ್ಳಿಗಳಂತೆ. ಬಿತ್ತಿದ ಬೆಳೆ ಇನ್ನೇನು ಫಸಲು ತೆಗೆಯಬೇಕೆನ್ನುವ ಹೊತ್ತಿನಲ್ಲಿ ಹೊಡೆಯುವ ಜೋರು ಮಳೆ… ಬಂಗಾರದ ಬೆಳೆಗಳು ಕಣ್ಣ ಮುಂದೆಯೇ ನೆರೆಗೆ ಕೊಚ್ಚಿ ಹೋಗುವ ದುರಂತ ಇಲ್ಲಿ ನಿತ್ಯ ಸತ್ಯ…. ಇಲ್ಲೊಂದು ಸದಾ ಅತಂತ್ರ ಸರ್ಕಾರವಿದೆ, ಈ ಸರಕಾರ ಜನರ ಜೀವ ಉಳಿಸಲು (ಅಕ್ಷರಶಃ ಜೀವ ಉಳಿಸಲು ) ಧಾನ್ಯ ನೀಡುತ್ತದೆ. ಈ ಧಾನ್ಯ ಪಡೆಯಲೂ ಇಲ್ಲಿ ಯುದ್ಧ ಸದೃಶ್ಯದಲ್ಲಿ ತಮ್ಮದೇ ದಾಯಾದಿಗಳೊಂದಿಗೆ ಜಗಳಕ್ಕಿಳಿಯಬೇಕು. ಹೀಗೆ ರೇಷನ್ ತರಲು ಹೋದವರಲ್ಲಿ ಹಲವರು ಮನೆಗೆ ಬರದೆ ಬೀದಿ ಶವವಾಗಿದ್ದಾರೆ. ಮನೆಯಲ್ಲಿ ಒಂದು ಕೊಪ್ಪರಿಗೆ ಹಿಟ್ಟು ಇದ್ದರೆ ಅದನ್ನು ಬಂಗಾರವೆನ್ನುವಂತೆ ಜತನ ಮಾಡಬೇಕು, ಯಾರಿಗೆ ಗೊತ್ತು ಯಾವ ಹಸಿದ ಹೊಟ್ಟೆ ಎಷ್ಟೊತ್ತಿಗೆ ಬಂದು ಕೇವಲ ಒಂದು ಹಿಡಿ ಹಿಟ್ಟಿಗಾಗಿ ಕೊಲೆ ಮಾಡಲೂಬಹುದು. ಆದರೂ ಈ ಜನರ ಜೀವನ ಪ್ರೀತಿ ದೊಡ್ಡದು. ಬದುಕಿ ಉಳಿಯಲು ಕುಟುಂಬದ ಸದಸ್ಯರು ಸರದಿಯಲ್ಲಿ ಉಪವಾಸವಿದ್ದು ಅರ್ಧ ಹೊಟ್ಟೆಯಲ್ಲೇ ಪ್ರತಿನಿತ್ಯ ಸಾಯುತ್ತಾರೆ. ಅಥವ ಬದುಕಿದಂತೆ ನಟಿಸುತ್ತಾರೆ. ಇದೆಲ್ಲದರ ಜೊತೆಗೆ ಹಸು ಕೋಳಿ ಜೊತೆಗೆ ನಾಯಿ ಕೂಡ ಸಾಕಿ ಮಾನವೀಯತೆ ಮೆರೆಯುತ್ತಾರೆ. ವಿಲಿಯಂ ಕೂಡ ಒಂದು ನಾಯಿ ಸಾಕಿದ್ದಾನೆ. ಸಿಗುವ ಒಂದು ಹೊತ್ತಿನ ಊಟದಲ್ಲಿ ನಾಯಿಗೂ ಒಂದು ತುತ್ತು ತೆಗೆದಿಡುತ್ತಾನೆ.

ಆ ವರ್ಷ ಕೂಡ ಇಂತಹದುದೇ ಬರ. ವಿಲಿಯಂ ಶಾಲೆ ಸೇರುತ್ತಾನೆ. ಆದರೆ ಶಾಲೆಯ ಫೀಜು ಕಟ್ಟಲಾಗದೇ ಅರ್ಧಕ್ಕೇ ಶಾಲೆಯಿಂದ ಅವನನ್ನು ಡಿಸ್ ಮಿಸ್ ಮಾಡುತ್ತಾರೆ. ಇವನಿಗೆ ಓದುವ ಅಪಾರ ಹಸಿವು ಅಷ್ಟೇ ಅಲ್ಲ ತನ್ನ ತಂದೆ ತಾಯಿ ಅಥವ ಹಸಿವಿನಿಂದ ಸಾಯುವ ತನ್ನ ಸಮಾಜವನ್ನು ಹೇಗೋ ಪಾರುಮಾಡಬೇಕೆಂಬ ಕನಸುಗಳಲ್ಲಿ ಅವನ ಕಣ್ಣುಗಳು ಹೊಳೆಯುತ್ತವೆ. ಒಂದಿಲ್ಲೊಂದು ದಿನ ಇವರ ಕತ್ತಲೆಯ ಬದುಕಿಗೆ ಆಸರೆ ಕಲ್ಪಿಸಿಕೊಡುತ್ತೇನೆಂಬ ಭರವಸೆಯ ನಗು ಆ ಹಸಿದ ಮುಖದಲ್ಲೂ.

ವಿಲಿಯಂ ಬಹಳ ಚೂಟಿ ಹುಡುಗ. ಶಾಲೆ ಬಿಟ್ಟರೇನಾಯ್ತು? ಸದಾ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವನು. ಸೆಲ್ಲಾರಿನ ರೇಡಿಯೋಗಳಿಗೆ ತಾನೇ ತಯಾರಿಸಿದ ಚಿಕ್ಕ ಫ್ಯಾನಿಗೆ ಡೈನೆಮೋ ಜೋಡಿಸಿ ಅದರಲ್ಲಿ ವಿದ್ಯುತ್ ಉತ್ಪಾದಿಸಿ ರೇಡಿಯೋ ಉಲಿಯುವಂತೆ ಮಾಡಿದವನು. ಇವನ ಊರ ಪಕ್ಕದಲ್ಲೇ ಬಳಸಿ ಬಿಸಾಡಿದ ಅನೇಕ electronic disposal ಗಳ ಒಂದು ಘನ ತ್ಯಾಜ್ಯ ಘಟಕ ಇವನ ಪಾಲಿನ ಚಿನ್ನದ ಗಣಿ. ಇದು ಈ ಘಟಕ ಇಲ್ಲಿಯ ತಂಬಾಕು ಸಂಸ್ಕರಣಾ ಘಟಕದ ತ್ಯಾಜ್ಯವದು. ಇವನ ಕ್ರಿಯಾತ್ಮಕ ಚಟುವಟಿಕೆಗಳಿಗೆ ಬೇಕಾದ ಪರಿಕರ ಸಿಗುವ ಸೂಕ್ತ ಜಾಗವದು. ಇವನ ಸಂಗಡಿಗರ ಜೊತೆ ಇವನು ಬಹಳ ಹೊತ್ತು ಈ ಹಾಳು ತಿಪ್ಪೆಯಲ್ಲಿಯೇ ಏನಾದರೊಂದು ಅದ್ಭುತವಾದ ಪದಾರ್ಥ ಸಿಗಬಹುದೆಂಬ ಕುತೂಹಲ ಕಾತರದಿಂದ ಶಾಲೆಗೆ ಹೋಗುವಾಗ ಬರುವಾಗ ಅಲ್ಲಿ ಭೇಟಿ ನೀಡಿಯೇ ಬರುವುದುಂಟು.

ನನ್ನ ಮಗನಿಗೆ ಸಿಕ್ಕ ಸವಲತ್ತು ಪ್ರಪಂಚದ ಎಲ್ಲಾ ಮಕ್ಕಳಿಗೂ ಸಿಕ್ಕಿದೆ ಎಂದು ಹೇಳಲು ಧೈರ್ಯ ಸಾಲುತ್ತಿಲ್ಲ. ಶಾಲೆಯ ಮುಖವೇ ಕಾಣದ ಎಷ್ಟೋ ಕೂಸುಗಳು ನಮ್ಮ ಮನೆಯ ಪಕ್ಕದ ಶೆಡ್ಡಿನಲ್ಲಿ ಇವರಿಗಿಂತ ಚಿಕ್ಕಮಕ್ಕಳನ್ನು ನೋಡಿಕೊಳ್ಳಲು ಬಿಟ್ಟು ಹೋಗುವ ಇವರ ತಾಯಿ ತಂದೆಯವರು ಸಮೀಪದ “ನಮ್ಮ ಮೆಟ್ರೋ” ರೈಲಿನ ಸ್ಟೇಷನ್ ನಿರ್ಮಾಣಕ್ಕೆ ಕಂಬಗಳನ್ನು ಕಟ್ಟಲು ಸಿಮೆಂಟು ಕಲೆಸಲು ಹೊರಡುತ್ತಾರೆ.

ದೇಶದ ಆಂತರಿಕ ಬಂಡಾಯ, ರಾಜಕೀಯ ಸ್ಥಿತ್ಯಂತರಗಳ ನಡುವೆಯೂ ಇಲ್ಲೊಂದು ಹೋರಾಟದ ಬದುಕಿದೆ. ಕಿವಿಗೆ ರೇಡಿಯೋ ಇಟ್ಟು ದೇಶದ ಸುದ್ದಿ ಆಲಿಸುತ್ತಾರೆ. ಮಳೆ ಗಾಳಿ ಬರಗಾಲದ ಮುನ್ಸೂಚನೆ ಪಡೆದು ಆಗಾಗ ಬರುವ ಅದರಲ್ಲಿನ ಹಾಡುಗಳಿಗೆ ತಲೆದೂಗಿಸುತ್ತಾರೆ.

ಆ ವರ್ಷ ತಡವಾಗಿ ಬಂದ ಮಳೆ, ತದನಂತರದ ಬಂದ ನೆರೆ ಈ ಮಲವಾಯಿ ಎಂಬ ನತದೃಷ್ಟ ಊರನ್ನು ಅಕ್ಷರಶಃ ಬೆಂಕಿಯಲ್ಲಿ ಬೇಯಿಸುತ್ತಿದೆ. ಒಂದು ಹಿಡಿ ಕಾಳಿಗಾಗಿ ಕೊಲೆಗಳಾಗುತ್ತಿವೆ. ಕಣ್ಣೀರ ಬಾವಿಗಳೂ ಬತ್ತಿ ಹೋಗಿವೆ. ಬಾವಿಯ ಅಳಿದುಳಿದ ನೀರು ಎಳೆಯಲು ದೇಹದಲ್ಲಿ ಕಸುವಿಲ್ಲ. ಆದರೆ ವಿಲಿಯಮ್ ಸುಮ್ಮನಿರಬೇಕಲ್ಲ. ತಾನು ಶಾಲೆಯಲ್ಲಿ ಕಲಿತ ಅಲ್ಪ ಸ್ವಲ್ಪ ಜ್ಞಾನದಲ್ಲೇ ಒಂದು ವಿಂಡ್ ಮಿಲ್ ತಯಾರಿಸಿ ಅದರಿಂದ ಉತ್ಪನ್ನವಾದ ವಿದ್ಯುತ್ ಬಳಸಿ ಚಿಕ್ಕ ಪಂಪ್ ಸೆಟ್ ನಿಂದ ನೀರು ಸೇದಬೇಕೆಂಬ ಯೋಚನೆಯೊಂದನ್ನು ಮಾಡುತ್ತಾನೆ. ತನ್ನ ತಂದೆ-ತಾಯಿಯ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದಾಗ ಇವನಿಗೆಲ್ಲೋ ತಲೆ ಕೆಟ್ಟಿದೆಯೇನೋ ಎಂಬಂತೆ ಈತನನ್ನು ಹುಚ್ಚನಂತೆ ಕಾಣುತ್ತಾರೆ. ಆದರೆ ಈ ಅವಮಾನಗಳನ್ನೆಲ್ಲಾ ಮೆಟ್ಟಿ ನಿಲ್ಲುವ ಅದಮ್ಯ ಉತ್ಸಾಹ ವಿಲಿಯಂನದು.

(ಪ್ರತಾಪ್)

ಇಲ್ಲಿ ವಿಂಡ್ ಮಿಲ್ ನಿಲ್ಲಿಸಲು ಬೇಕಾಗುವ ಕಂಬಗಳಿಗಾಗಿ ನೀಲಗಿರಿ ಮರಗಳು ಸಾಕಷ್ಟಿವೆ. ಆ ತಂಬಾಕು ಸಂಸ್ಕರಣ ಘಟಕದವರು ತಂದು ಎಸೆದ ತ್ಯಾಜ್ಯದಲ್ಲೇ ಫ್ಯಾನಿನ ಮೂರು ರೆಕ್ಕೆ ನಿರ್ಮಿಸುತ್ತಾನೆ. ಹಳೆಯ ಬ್ಯಾಟರಿ ವೈರುಗಳಿವೆ. ಇನ್ನು ಬೇಕಾಗಿರುವುದು ಒಂದು ಡೈನಮೋ ಮಾತ್ರ. ಲೂಟಿ ಎದ್ದ ಊರಿನಲ್ಲಿ ಇರುವುದೊಂದೇ ವಿಲಿಯಮ್ ನ ಅಪ್ಪನ ಹಳೆಯ ಲಡಕಾಸಿ ಸೈಕಲ್ಲು. ಅದಕ್ಕೊಂದು ಡೈನಮೋ, ಅವನ ಅಪ್ಪನ ಮನವೊಲಿಸಿ ಆ ಡೈನಮೋ ಪಡೆದುಕೊಳ್ಳುವುದನ್ನು ನೀವು ಈ ಚಲನಚಿತ್ರ “The boy who harnessed wind ಎಂಬ ನೋಡಿ ಅನುಭವಿಸಬೇಕು.

ಕೊನೆಗೆ ಆ ಮರಳುಗಾಡಿನಲ್ಲಿ ವಿಂಡ್ ಮಿಲ್ ನಿಂದ ವಿದ್ಯುತ್ ತಯಾರಿಸಿ ಬಾವಿಯಿಂದ ನೀರು ಬರುತ್ತಿದ್ದಂತೆಯೇ ವಿಲಿಯಮ್ ಎಂಬ ಬಾಲಕ ಇವರ ಪಾಲಿನ ದೇವನಾಗಿ, ಪವಾಡಪುರುಷನಾಗಿ ಆ ಊರಿನ ಜನರ ಮುಂದೆ ನಿಲ್ಲುತ್ತಾನೆ.

ಆಫ್ರಿಕನ್ ಬುಡಕಟ್ಟು ಭಾಷೆಯಲ್ಲೇ ನಿರ್ಮಿತವಾದ ಈ ಚಿತ್ರ ನೈಜ ಘಟನೆಯನ್ನಾಧರಿಸಿದ ಚಿತ್ರ. ಮುಂದೆ ಈ ವಿಲಿಯಂ ಎಂಬ ಹುಡುಗನಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅರಸಿ ಬರುತ್ತವೆ. ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರತಿಷ್ಠಿತ ವಿ.ವಿ ಗಳು ಸ್ಕಾಲರ್ ಶಿಪ್ ಘೋಷಿಸುತ್ತವೆ.

ಜಲವೆಂಬುದು ಎಷ್ಟು ಅವಶ್ಯಕತೆ? ಅದೆಷ್ಟು ಅನಿವಾರ್ಯ ಎಂಬುದು ಜಗತ್ತಿಗೆ ಈಗೀಗ ಗೊತ್ತಾಗುತ್ತಿದೆ. ಆದರೆ ವಿಲಿಯಂನ ಪಾಲಿಗೆ ನೀರು ಕೇವಲ ನೀರಾಗದೆ ಒಟ್ಟಾರೆ ಸಮುದಾಯದ ಜೀವನ್ಮರಣದ ಪ್ರಶ್ನೆಯಾಗಿತ್ತು. ಹೀಗಾಗಿ ಇತಿಹಾಸದಲ್ಲಿ ಅವನು ವ್ಯತಿರಿಕ್ತ ಪರಿಸರದಲ್ಲಿ ಮಾಡಿದ್ದು ಒಂದು ಪವಾಡವೇ ಸರಿ. ಇವನೊಬ್ಬ ಪವಾಡ ಪುರುಷನೇ ಸೈ.

ಇತ್ತೀಚಿಗೆ ಬಾಗಲಕೋಟೆ ಜಿಲ್ಲೆ ಯಲ್ಲಟ್ಟಿ ಎಂಬ ಚಿಕ್ಕ ಗ್ರಾಮದಲ್ಲಿ ಕವಿಗೋಷ್ಠಿಯ ನೆಪದಲ್ಲಿ ನಾನೂ ಭಾಗಿಯಾಗಿದ್ದೆ. ಇಲ್ಲೊಬ್ಬ ಮಂಡ್ಯದ ಹುಡುಗ ಪ್ರತಾಪನ ಮಾತು ಕೇಳುವ ಅವಕಾಶ ಸಿಕ್ಕಿತ್ತು. ಅವನು ಅಲ್ಲಿ ಹೇಳಿದ ಪ್ರತಿ ಮಾತಿಗೂ ಕೇಳುಗರಿಂದ ಬಂದ ಕರತಾಡನವು ಇನ್ನೂ ನನ್ನ ಕಿವಿಯಲ್ಲಿದೆ. ಈ ಹುಡಗನಲ್ಲೂ ವಿಲಿಯಂ ಎಂಬ ಪವಾಡಪುರುಷನ ಗುಣವಿಶೇಷಣಗಳಿವೆ.

(ಮೊಹಮದ್ ಸುಹೈಲ್)

ಮಂಡ್ಯದ ಯಾವುದೋ ಚಿಕ್ಕ ಹಳ್ಳಿಯಿಂದ ಬಂದ ಇಪ್ಪತ್ತರ ಪ್ರಾಯದ ಹುಡುಗನೊಬ್ಬ ತನ್ನ ವಿಶಿಷ್ಟ ವಿನ್ಯಾಸದ ಡ್ರೋನ್ ನಿಂದ ವಿಶ್ವದ ಗಮನ ಸೆಳೆದದ್ದು ಸಾಮಾನ್ಯ ಸಂಗತಿ ಏನಲ್ಲ. ಮೊದಲ ಬಾರಿ ಜಪಾನಿಗೆ ಹೋಗಲು ದುಡ್ಡು ಇಲ್ಲದಿದ್ದಾಗ ಅವನ ತಾಯಿ ತನ್ನ ಮಾಂಗಲ್ಯ ಸರವನ್ನೇ ಮಾರಿ ಬಂದ ದುಡ್ಡಿನಲ್ಲಿ ಜಪಾನ್ ತಲುಪಿ, ಸರಿಯಾಗಿ 360 kg ಭಾರದ ಡ್ರೋನ್ ನನ್ನು ತಾನೇ ಹೊತ್ತು ಜಪಾನಿನ ಒಂದು ಮೆಟ್ರೋ ಸ್ಟೇಷನ್ ನಿಂದ ಇನ್ನೊಂದು ರೈಲಿಗೆ ಸ್ವತಃ ಹೊತ್ತು ಸಾಗಿಸುವಾಗ ಈ ಹುಡುಗ ಅಕ್ಷರಶಃ ಕಣ್ಣೀರಾಗಿದ್ದಾನೆ. ಎಲ್ಲಿ ದುಡ್ಡು ಖರ್ಚಾಗುತ್ತದೆಯೇನೊ ಎಂಬ ಆತಂಕದಲ್ಲಿ ತವರೂರು ನೆಟ್ ಕಲ್ ಎಂಬ ಊರಿನಿಂದ ತಾಯಿ ಮಾಡಿ ಕೊಟ್ಟ ಚಕ್ಕುಲಿ ಕೋಡುಬಳೆ ತಿಂದು ತನ್ನ ಹರಕು ಮುರುಕು ಇಂಗ್ಲೀಷ್ ಭಾಷೆಯಲ್ಲೇ ತನ್ನ ಪ್ರಾಜೆಕ್ಟನ್ನು ಸ್ಪರ್ಧೆಯ ನಿರ್ಣಾಯಕರಿಗೆ ದಾಟಿಸಿ ಭಾರತಾಂಬೆಯ ಕೊರಳಿಗೆ ಚಿನ್ನದ ಪದಕ ಹಾಕಿಸಿ ಕನ್ನಡ ನೆಲಕೆ ಹೆಸರು ತಂದಿದ್ದಾನೆ.

ಯುದ್ಧ ಸಮಯದಲ್ಲಿ, ರೋಗಿಗಳಿಗೆ ರಕ್ತ ಅಂಗಾಂಗಳ ದಾನ ಮಾಡುವುದರಲ್ಲಿ, ಕೃಷಿ ಜಮೀನಿಗೆ ಔಷಧ ಸಿಂಪರಣೆ ಮಾಡುವುದಕ್ಕೆ ಸಹಾಯವಾಗುವಂತೆ ಈ ಡ್ರೋನ್ ನ ಪ್ರೋಗ್ರಾಂಮಿಂಗ್ ಮಾಡಿರುವುದು ಇದರ ವಿಶೇಷ. ಓದಿದ್ದು ಸಿ ಬಿ ಝಡ್ ಎಂಬ ಜೀವರಸಾಯನ ಶಾಸ್ತ್ರ. ಆದರೆ ಇಲ್ಲಿ ಇದಕ್ಕೆ ವ್ಯತಿರಿಕ್ತ ವಿಜ್ಞಾನದ ಈ ಡ್ರೋನ್ ತಂತ್ರಾಂಶ. ಏನಾದರೂ ಸಾಧಿಸಬೇಕೆಂಬ ಛಲವಿದ್ದಲ್ಲಿ ಮಾತ್ರ ಮನುಕುಲಕ್ಕೆ ಇಂತಹ ಉಪಕಾರವಾಗುವ ಆವಿಷ್ಕಾರಗಳಾಗುತ್ತವೆಂಬುದು ನಮಗೆ ಮನದಟ್ಟಾಗುತ್ತದೆ. ಪ್ರತಾಪನಂತವರ ಸಂತತಿ ಸಾವಿರವಾಗಲಿ. ಅವರ ಭವಿಷ್ಯ ಉಜ್ವಲವಾಗಲಿ.

ಮಂಡ್ಯದ ಇನ್ನೊಬ್ಬ ಯುವ ಪ್ರತಿಭೆ ಮೊಹಮದ್ ಸುಹೈಲ್ ನ ಹೆಸರನ್ನು ನೀವು ಕೇಳಿರಬಹುದು. ಉದಯೋನ್ಮುಖ ಬರಹಗಾರ ಸಾಹಿತಿ ಕ್ರಿಯಾಶೀಲ ವ್ಯಕ್ತಿ ಅನಾರ್ಕಲಿ ಸಲೀಂರವರ ಪುತ್ರ. ಚಿಕ್ಕ ವಯಸಿನಲ್ಲೇ ಭರವಸೆ ಮೂಡಿಸಿದ ಯುವ ವಿಜ್ಞಾನಿ. ಇವರ ಸಾಧನೆಗಳೆಂದರೆ ಕೇವಲ ಎರಡು ರೂಪಾಯಿ ಖರ್ಚಾಗುವ ಪೇಪರಿನಿಂದ ಚಿಕ್ಕಮಕ್ಕಳಲ್ಲಿ ಕಂಡು ಬರುವ ಅಪೌಷ್ಟಿಕತೆಯನ್ನು ಕಂಡು ಹಿಡಿದಿದ್ದು. ಈ ಹಿಂದೆ ಇದರ ಪರೀಕ್ಷೆ ಮಾಡಲು ಮನುಷ್ಯನ ರಕ್ತವನ್ನೇ ಅವಲಂಬಿಸಿ ಅನವಶ್ಯಕ ನೋವು ಹಾಗು ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಎದುರಿಸಬೇಕಿತ್ತು. ಈಗ ಕೇವಲ ಈ ಎರಡು ರೂಪಾಯಿ ಪೇಪರ್ ಸಹಾಯದಿಂದ ವೈದ್ಯ ವಿಜ್ಞಾನಕ್ಕೆ ಬಹು ಮುಖ್ಯ ಕೊಡುಗೆ ನೀಡಿದ್ದಾರೆ, ಅಷ್ಟೇ ಅಲ್ಲದೆ ಕೇವಲ ನಾವು ನೆಲದ ಮೇಲೆ ನಡೆಯುವುದರಿಂದ ವಿದ್ಯುತ್ ಉತ್ಪಾದಿಸಿ ಅದರಿಂದ ಬೀದಿ ದೀಪಗಳನ್ನು ಬೆಳಗಬಹುದೆಂಬುದನ್ನು ಸಾಬೀತು ಪಡಿಸಿದ್ದಾರೆ. ಇವರಿಗೆ ರಾಷ್ಟ್ರೀಯ ಬಾಲ ಪುರಸ್ಕಾರಾದಿಯಾಗಿ ಅನೇಕ ಪ್ರಶಸ್ತಿ ಗಳು ಹುಡುಕಿಕೊಂಡು ಬಂದಿವೆ. ಈ ಇಬ್ಬರು ಯುವ ವಿಜ್ಞಾನಿಗಳು ನಮ್ಮ ಕನ್ನಡಿಗರೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಈರ್ವರೂ ಬಹಳ ಬಡತನದಿಂದ ಮೇಲೆ ಬಂದವರು. ಸಾಂಪ್ರದಾಯಿಕ ಓದಿನೊಟ್ಟಿಗೆ ಕೇವಲ ತಮ್ಮ ವಿಶಿಷ್ಟ ಹವ್ಯಾಸಗಳಿಂದ ಮನುಕುಲಕ್ಕೆ ಬಹುಪಯೋಗಿಯಾಗುವ ಸಾಧನಗಳ ಆವಿಷ್ಕಾರಗಳಲ್ಲಿ ತೊಡಗಿದ ಬೆಲೆ ಕಟ್ಟಲಾಗದ ಅನರ್ಘ್ಯ ರತ್ನಗಳು. ಡಾಕ್ಟರಾಗಬೇಕು ಇಂಜಿನಿಯರ್ ಆಗಬೇಕೆಂಬ ಸ್ಟಿರಿಯೊಟೈಪಿಕ್ ಚಿಂತನೆಗಳನ್ನೇ ಬುಡಮೇಲು ಮಾಡಿ ಸಾಧನೆಯ ಹಾದಿಯಲ್ಲಿ ಇವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಕನ್ನಡಿಗರ ಪರವಾಗಿ ಪ್ರಾರ್ಥಿಸುವೆ.