ಹಾಗೆ ನೋಡಿದರೆ, ನಾಟಕಗಳಲ್ಲಿ ಅಭಿನಯಿಸುವ ಹೆಣ್ಣುಮಕ್ಕಳು ಸಮಾಜದ ಉಳಿದ ಹೆಣ್ಣುಮಕ್ಕಳಿಗಿಂತ ದಿಟ್ಟರಾಗಿರುತ್ತಾರೆ. ಹಾಗೆ ಮುಕ್ತವಾಗಿಲ್ಲದಿದ್ದರೆ ರಂಗಭೂಮಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ನಾಟಕಾಭ್ಯಾಸದಲ್ಲಿ ಮೊದಲು ಹೇಳಿಕೊಡುವ ಪಾಠವೇ ಮುಜುಗರವನ್ನು ಬಿಟ್ಟು ಧೈರ್ಯವಾಗಿ ಅನಿಸಿದ್ದನ್ನು ಮಾಡುವುದು. ಹಾಗಾಗಿಯೇ ನಾಟಕದಲ್ಲಿ ಅಭಿನಯಿಸುವ ನಟಿಯರ ವ್ಯಕ್ತಿತ್ವ ಗುಂಪಿನಲ್ಲಿ ಎದ್ದುಕಾಣುವಂತಿರುತ್ತದೆ. ಹೊಸದಾಗಿ ನಾಟಕಕ್ಕೆ ಬಂದಾಗ ಗುಬ್ಬಿಯಂತಿರುವ ನಟಿಯರು ದಿನ ಕಳೆದಂತೆ ರಂಗದ ಆಕಾಶದಲ್ಲಿ ಗರಿಬಿಚ್ಚಿ ಹಾರುತ್ತಾರೆ, ಬೀಳುತ್ತಾರೆ, ಸಾವರಿಸಿಕೊಂಡು ಮತ್ತೆ ಏಳುತ್ತಾರೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ
ನಾಟಕದಲ್ಲಿ ಅಭಿನಯಿಸುವ ಮಹಿಳಾ ಕಲಾವಿದರು ಧೈರ್ಯದಿಂದ ಇರುತ್ತಾರೋ ಅಥವಾ ಧೈರ್ಯವಾಗಿರುವವರು ನಾಟಕ ಅಥವಾ ರಂಗಭೂಮಿಗೆ ಬರುತ್ತಾರೋ ಎಂದು ಹೇಳುವುದು ‘ಕೋಳಿ ಮೊದಲೋ ಮೊಟ್ಟೆ ಮೊದಲೋ’ ಎಂದು ಕೇಳಿದಂತೆ. ಕಲಾವಿದರಾಗುವುದು ಎಂದರೆ ಯಾವುದೋ ಡಿಗ್ರಿ ಪಡೆದು ಒಂದಿಷ್ಟು ವರ್ಷ ಓದಿ ಸರ್ಟಿಫಿಕೇಟ್ ಪಡೆಯುವುದು ಮಾತ್ರ ಅಲ್ಲ. ಹಾಗೆ ಕಲೆಯಲ್ಲಿ ಸರ್ಟಿಫಿಕೇಟ್ ಪಡೆದರೂ ನಿರಂತರವಾಗಿ ಅಭ್ಯಾಸ ಮಾಡಬೇಕಾಗುತ್ತದೆ. ಕಲಿಕೆ ನಿಲ್ಲುವುದಿಲ್ಲ. ಅದರಲ್ಲೂ ರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಬೇರೆ ಎಲ್ಲಾ ವೃತ್ತಿಗಳಿಗಿಂತಾ ವೈಯಕ್ತಿಕ ಜೀವನದಲ್ಲಿ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಗಮನವಿಟ್ಟು ನೋಡಿದರೆ, ಹೆಚ್ಚಿನ ಪ್ರತಿಭಾವಂತ ನಟಿಯರು, ರಂಗಕರ್ಮಿಗಳು ಒಂದಿಷ್ಟು ನಾಟಕಗಳನ್ನು ಮಾಡಿ, ಮದುವೆ ಮಕ್ಕಳು ಆದಮೇಲೆ ರಂಗದಿಂದ ದೂರ ಸರಿಯುತ್ತಾರೆ. ಅದಕ್ಕೆ ಕಾರಣಗಳೂ ಇವೆ. ಹೆಚ್ಚಿನ ಕಡೆ ನಾಟಕದ ತಾಲೀಮು ಸಂಜೆಯ ವೇಳೆಯಲ್ಲಿ ನಡೆಯುವುದರಿಂದ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ನಾಟಕದಲ್ಲಿ ಪಾಲ್ಗೊಳ್ಳುವುದು ಕಷ್ಟ. ಪ್ರದರ್ಶನದ ದಿನ ಹತ್ತಿರ ಬಂದರೆ ಶನಿವಾರ ಭಾನುವಾರಗಳು ಹೆಚ್ವಿನ ಸಮಯವನ್ನು ತಾಲೀಮಿಗೆ ನೀಡಬೇಕಾಗುತ್ತದೆ. ನಾಟಕದ ತಾಲೀಮು ಸುಮಾರು ಒಂದೂವರೆ ತಿಂಗಳು ನಡೆಯುತ್ತದೆ ಮತ್ತು ಮರುಪ್ರದರ್ಶನಗಳಾದಾಗ ಬೇರೆ ಬೇರೆ ಊರುಗಳಿಗೆ ತಂಡದ ಜತೆಗೆ ಪ್ರಯಾಣ ಮಾಡಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಅನೇಕ ಪ್ರತಿಭಾವಂತ ಹೆಣ್ಣುಮಕ್ಕಳು ಪ್ರೇಕ್ಷಕರಾಗಿ ಉಳಿದುಬಿಡುತ್ತಾರೆ. ಅದಕ್ಕಾಗಿಯೇ ಹವ್ಯಾಸಿಗಳಲ್ಲೂ, ವೃತ್ತಿಪರ ತಂಡಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತೀರಾ ಕಡಿಮೆ. ಅಥವಾ ನಾಟಕದ ಅವಶ್ಯಕತೆ ಇದ್ದಷ್ಟು ಮಾತ್ರ. ಹವ್ಯಾಸೀ ತಂಡಗಳಲ್ಲೂ ಈ ಮಹಿಳಾ ಕಲಾವಿದರ ಸಮಸ್ಯೆ ಬಹಳ ಇರುತ್ತದೆ. ಹಾಗಾಗಿಯೇ ಹಳೆಯ ವೃತ್ತಿ ಕಂಪೆನಿಗಳಲ್ಲಿ ತಂಡದ ಮಾಲೀಕರು ಎರಡು ಮೂರು ಮದುವೆಗಳನ್ನು ಮಾಡಿಕೊಳ್ಳುತ್ತಿದ್ದರು. ಹಾಗಾಗಿಯಾದರೂ ನಟಿಯರು ಉಳಿಯಲಿ ಎಂದು!
ಹಾಗೆ ನೋಡಿದರೆ, ನಾಟಕಗಳಲ್ಲಿ ಅಭಿನಯಿಸುವ ಹೆಣ್ಣುಮಕ್ಕಳು ಸಮಾಜದ ಉಳಿದ ಹೆಣ್ಣುಮಕ್ಕಳಿಗಿಂತ ದಿಟ್ಟರಾಗಿರುತ್ತಾರೆ. ಹಾಗೆ ಮುಕ್ತವಾಗಿಲ್ಲದಿದ್ದರೆ ರಂಗಭೂಮಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ನಾಟಕಾಭ್ಯಾಸದಲ್ಲಿ ಮೊದಲು ಹೇಳಿಕೊಡುವ ಪಾಠವೇ ಮುಜುಗರವನ್ನು ಬಿಟ್ಟು ಧೈರ್ಯವಾಗಿ ಅನಿಸಿದ್ದನ್ನು ಮಾಡುವುದು. ಹಾಗಾಗಿಯೇ ನಾಟಕದಲ್ಲಿ ಅಭಿನಯಿಸುವ ನಟಿಯರ ವ್ಯಕ್ತಿತ್ವ ಗುಂಪಿನಲ್ಲಿ ಎದ್ದುಕಾಣುವಂತಿರುತ್ತದೆ. ಹೊಸದಾಗಿ ನಾಟಕಕ್ಕೆ ಬಂದಾಗ ಗುಬ್ಬಿಯಂತಿರುವ ನಟಿಯರು ದಿನ ಕಳೆದಂತೆ ರಂಗದ ಆಕಾಶದಲ್ಲಿ ಗರಿಬಿಚ್ಚಿ ಹಾರುತ್ತಾರೆ, ಬೀಳುತ್ತಾರೆ, ಸಾವರಿಸಿಕೊಂಡು ಮತ್ತೆ ಏಳುತ್ತಾರೆ.
ನಾಟಕದಲ್ಲಿ ನಟಿಸಲು ಬರುವ ಹುಡುಗಿಯರು ಸಮಾಜದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರೇ ಇರುವ ವಾತಾವರಣ ನಾಟಕ ತಾಲೀಮಿನಲ್ಲಿರುತ್ತದೆ. ತಾಲೀಮಿನಿಂದ ಮನೆಗೆ ಅಥವಾ ಹಾಸ್ಟೆಲ್ಗೆ ಲೇಟಾಗಿ ಬರುವುದು ಅದರಲ್ಲಿ ಮೊದಲನೆಯದು. ಅಭ್ಯಾಸ ಮುಗಿದ ಮೇಲೆ ತಂಡದ ಯಾರಾದರೂ ಹುಡುಗಿಯರನ್ನು ಮನೆ ತಲುಪಿಸಬೇಕಾಗುತ್ತದೆ. ಇಂತಹ ಹಲವು ಸಂದರ್ಭಗಳು ಬಹಳ ಮುಜುಗರವನ್ನುಂಟುಮಾಡುತ್ತದೆ. ಇತ್ತೀಚೆಗೆ ತಮ್ಮ ತಮ್ಮ ವಾಹನಗಳಲ್ಲೇ ತಾಲೀಮಿಗೆ ಹುಡುಗಿಯರು ಬರುತ್ತಾರಾದರೂ ತಡರಾತ್ರಿಯಾದಾಗ ಮತ್ತೊಬ್ಬರ ಸಹಾಯ ಬೇಕಾಗುತ್ತದೆ. ಸಮಾಜದಲ್ಲಿ ನೃತ್ಯ ಮತ್ತು ಸಂಗೀತವನ್ನು ಅಭ್ಯಾಸ ಮಾಡುವ ಹುಡುಗಿಯರನ್ನು ಗೌರವದಿಂದ ನೋಡಿದರೆ ನಾಟಕದಲ್ಲಿ ಅಭಿನಯಿಸುವವರನ್ನು ಒಂದು ದರ್ಜೆ ಕೆಳಗೆಯೇ ನೋಡುತ್ತಾರೆ. ನಾನು ಹೊಸದಾಗಿ ಕೆಲಸಕ್ಕೆ ಸೇರಿದಾಗ ನನ್ನ ಆಗಿನ ಸಹೋದ್ಯೋಗಿಯೊಬ್ಬರು ‘ನೀವು ನಾಟಕದವರಲ್ವಾ? ಮುತ್ತು ಕೊಡುವುದೂ, ಅಪ್ಪಿಕೊಳ್ಳುವುದು ಎಲ್ಲಾ ನಿಮಗೆ ಕಾಮನ್ ಆಗಿರುತ್ತದೆ ಅಲ್ಲವಾ?’ ಎಂದು ಕೇಳಿದ್ದರು. ಇತ್ತೀಚೆಗೆ ನಾಟಕ ಪ್ರದರ್ಶನವೊಂದನ್ನು ಮುಗಿಸಿ ಮಾರನೇ ದಿನ ಶಾಲೆಗೆ ಹೋದಾಗ ‘ಅಯ್ಯೋ ರಾತ್ರಿ ಎಲ್ಲಾ ನಾಟಕ ಮಾಡಿರ್ತೀರಾ ಅಲ್ವಾ ಅದಕ್ಕೆ ಮುಖ ಬಾಡಿಹೋಗಿದೆ’ ಎಂದು ಒಬ್ಬರು ಹೇಳಿದ್ದರು. ಹಳ್ಳಿಗಳಲ್ಲಿ ಇಡೀ ರಾತ್ರಿ ಆಡುವ ಪೌರಾಣಿಕ ನಾಟಕಗಳಲ್ಲಿ ಪಾತ್ರ ಮಾಡಲು ಬೇರೆ ಊರುಗಳಿಂದ ಮಹಿಳಾ ಕಲಾವಿದರನ್ನು ಕರೆಸುತ್ತಾರೆ. ಇತ್ತೀಚಿನವರೆಗೂ ಅವರನ್ನು ‘ಸೂಳೆಯರು’ ಎಂದೇ ‘ಪಾತ್ರದವರು’, ‘ಚಿಮಣಾ’ ಎಂದೂ ಕರೆಯುತ್ತಿದ್ದರಂತೆ. ಈಗ ‘ಲೇಡೀಸ್’ ಎಂದು ಕರೆಯುತ್ತಾರೆ. ಬ್ರಿಟಿಷರ ಕಾಲದಲ್ಲಿ ಉತ್ತರ ಭಾರದಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ಆ ಸರ್ಕಾರ ನಿಷೇಧ ಮಾಡಿದ್ದರು. ಆಗ ‘ಕೋಠಾ’ ಗಳಲ್ಲಿ ಖಾಸಗಿಯಾಗಿ ಕಥಕ್ ನೃತ್ಯ ಪ್ರದರ್ಶನಗಳು ನಡೆಯುತ್ತಿತ್ತು. ಆ ನೃತ್ಯ ಕಲಾವಿದರನ್ನು ತವಾಯಿಫ಼್ ಗಳೆಂದು ಕರೆಯುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ ಅವರು ರಾಜರ ಉಪಪತ್ನಿಯರಾಗಿರುತ್ತಿದ್ದರು. ಅವರು ಕಾವ್ಯ, ಸಂಗೀತ, ನೃತ್ಯ, ಶಾಸ್ತ್ರವನ್ನು ಬಹಳ ಚೆನ್ನಾಗಿ ಅಧ್ಯಯನ ಮಾಡಿದವರಾಗಿರುತ್ತಿದ್ದರು ಸ್ವತಃ ಕವಿಗಳಾಗಿದ್ದವರು. ಅತಿ ಹೆಚ್ಚು ತೆರಿಗೆಯನ್ನು ಆಗಿನ ಕಾಲದಲ್ಲಿ ತವಾಯಿಫ಼್ ಗಳು ನೀಡುತ್ತಿದ್ದರು. ತವಾಯಿಫ಼್ ಗಳ ಶ್ರೇಣಿಕರಣದ ಕೊನೆಯ ಮೆಟ್ಟಿಲು ವೇಶ್ಯಾವಾಟಿಕೆಯಾಗಿತ್ತು. ದಕ್ಷಿಣದಲ್ಲಿಯೂ ಭರತನಾಟ್ಯಕ್ಕೆ ‘ಸದಿರ್ ನಾಚ್’ ಅಥವಾ ‘ದೇವದಾಸಿ ಕೂತ್ತು’ ಎಂದು ಕರೆಯುತ್ತಿದ್ದರು. ಬ್ರಿಟೀಷರು ದೇವದಾಸಿ ಪದ್ಧತಿಯನ್ನು ನಿಷೇಧ ಮಾಡಿದಾಗ ಈ ನೃತ್ಯ ಕಲಾವಿದರೂ ಕೂಡಾ ಸಂಕಷ್ಟವನ್ನು ಅನುಭವಿಸಿದರು. ಬಾಲಸರಸ್ವತಿಯಂತಹ ಕಲಾವಿದರು ಸತತ ೩೦ ತಿಂಗಳು ಯಾವ ಪ್ರದರ್ಶನಗಳ ಅವಕಾಶವೂ ಇಲ್ಲದೇ ಮನೆಯಲ್ಲಿಯೇ ಇರಬೇಕಾಯಿತು. ಬಹುಶಃ ಈ ಎಲ್ಲಾ ಕಾರಣಕ್ಕೂ ನಟಿಯರು ಎಂದರೆ ಇಂತಹ ಭಾವನೆಗಳು ಜನಮಾನಸದಿಂದ ಇನ್ನೂ ಹೋಗಿಲ್ಲ. ನಾವು ಮಾಡುತ್ತಿರುವ ಕೆಲಸಕ್ಕೂ ಜನ ಅಂದುಕೊಳ್ಳುವುದಕ್ಕೂ ಎಷ್ಟು ವ್ಯತ್ಯಾಸವಿರುತ್ತದೆ! ಸಂಬಳ ಬರುವ ಕೆಲಸ ಇಟ್ಟುಕೊಂಡೂ ಹೀಗೆ ನಾಟಕ ಪ್ರದರ್ಶನಕ್ಕೆ ಹೋದಾಗ ‘ಇದರಿಂದ ಏನು ಸಿಗುತ್ತದೆ’ ಎಂದು ಹಲವರು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಏನು ಉತ್ತರಿಸುವುದು?

ಹಾಗೆ ರಂಗಭೂಮಿ ಇತಿಹಾಸವನ್ನು ನೋಡಿದರೆ, ಮಹಿಳಾ ಪಾತ್ರಗಳನ್ನು ಮೊದಲೆಲ್ಲಾ ಪುರುಷರೇ ಮಾಡುತ್ತಿದ್ದರು. ಲಂಡನ್ನ ಷೇಕ್ಸ್ಪಿಯರ್ ನಾಟಕಗಳಿಂದ ಹಿಡಿದು ಮಾರಾಠಿ ಮತ್ತು ಕನ್ನಡ ವೃತ್ತಿ ಕಂಪನಿಗಳಲ್ಲೂ ಪುರುಷರೇ ಮಹಿಳಾ ಪತ್ರಗಳಿಗೆ ಪ್ರಸಿದ್ಧರಾದವರಿದ್ದಾರೆ. ಕಾಲಕ್ರಮೇಣ ಮಹಿಳೆಯರೇ ಪಾತ್ರಗಳನ್ನು ಮಾಡುವುದು ಪ್ರಾರಂಭವಾಯಿತು.
ಇನ್ನು ರಂಗಭೂಮಿಯನ್ನೇ ಶಾಸ್ತ್ರೀಯವಾಗಿ ಓದಿ, ವೃತ್ತಿಯಾಗಿಸಿಕೊಂಡ ಮಹಿಳೆಯರು ಇಂತಹ ವ್ಯವಸ್ಥೆಯಲ್ಲೆ ಕೆಲಸವನ್ನೂ ಮಾಡಿ ಹಣವನ್ನೂ ಸಂಪಾದಿಸಿ ಜೀವನ ನಿರ್ವಹಣೆ ಮಾಡಬೇಕಾಗುತ್ತದೆ.
ಅದಲ್ಲದೇ ನಾಟಕದಲ್ಲಿ ಅಭಿನಯಿಸುವವರು ಎಂದರೆ ಬಹಳ ಸಲುಗೆಯಿಂದ ವರ್ತಿಸುವ ಕೆಲವು ಗಂಡಸರಿಂದಲೂ ಎಚ್ಚರವಾಗಿರಬೇಕಾಗುತ್ತದೆ. ವೃತ್ತಿ ಕಂಪನಿಯ ಕಲಾವಿದೆಯರ ಸವಾಲುಗಳು ಒಂದು ಕಡೆಯಾದರೆ ಆಧುನಿಕ ರಂಗಭೂಮಿಯ ಪದವಿ ಪಡೆದಿರುವ ಹುಡುಗಿಯರದು ಒಂದು ಸವಾಲು.
ರಂಗದ ಮೇಲೆ ಬೆಳಕಿನ ಅಬ್ಬರದಲ್ಲಿರುವ ಬದುಕೇ ಬೇರೆ ತೆರೆಮರೆಯ ಬದುಕೇ ಬೇರೆ. ಇಷ್ಟೆಲ್ಲಾ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ರಂಗಕಾಯಕ ಮಾಡುತ್ತಿರುವ ದಿಟ್ಟ ಮಹಿಳೆಯರು ಕನ್ನಡ ರಂಗಭೂಮಿಯಲ್ಲಿದ್ದಾರೆ. ಕರ್ನಾಟಕದುದ್ದಕ್ಕೂ ಕಾರ್ಯಾಗಾರಗಳು, ನಾಟಕ ಪ್ರದರ್ಶನಗಳು, ಉತ್ಸವಗಳು ಎಂದು ತಂಡವನ್ನೇ ಕಟ್ಟಿಕೊಂಡು ರಂಗದ ಬೆಳಕಲ್ಲೇ ಬದುಕನ್ನು ಕಟ್ಟಿಕೊಂಡವರು ಅನೇಕರಿದ್ದಾರೆ. ಉತ್ತರ ಕರ್ನಾಟಕದ ವೃತ್ತಿ ಕಂಪೆನಿಯಲ್ಲಿ ಹಾಡಿ, ನಟಿಸಿ ರಂಗಭೂಮಿಯನ್ನೇ ಆಳಿದ ನಟಿಯರಿದ್ದಾರೆ. ಕರ್ನಾಟಕದ ಹವ್ಯಾಸಿ ರಂಗಭೂಮಿಯಲ್ಲಿ ನೌಕರಿ, ಸಂಸಾರ, ಮಕ್ಕಳನ್ನೂ ಕಟ್ಟಿಕೊಂಡು ಹವ್ಯಾಸಿ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಹಲವಾರು ಕಲಾವಿದೆಯರಿದ್ದಾರೆ. ಭಾರ್ಗವಿ ನಾರಾಯಣ್ ಅವರ ‘ನಾನು ಭಾರ್ಗವಿ’, ಬಿ.ಜಯಶ್ರೀ ಯವರ ‘ ಕಣ್ಣಾ ಮುಚ್ಚೇ ಕಾಡೇಗೂಡೇ’, ವಿಜಯಮ್ಮ ಅವರ ‘ಕುದಿ ಎಸರು’ ಆತ್ಮಕತೆಗಳಲ್ಲಿ ಅಂದಿನ ಕಾಲದ ಕಲಾವಿದೆಯರ ಚಿತ್ರಣ ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಾರಂಭದ ಕಾಲದಲ್ಲಿ ಇವರೆಲ್ಲರ ಕೆಲಸದ ಪರಿಣಾಮ ಇಂದಿನ ಕಲಾವಿದೆಯರಿಗೆ ಬುನಾದಿ ಹಾಕಿಕೊಟ್ಟಿದೆ ಎಂದು ಹೇಳಬಹುದು.
ಪಾತ್ರವೊಂದನ್ನು ಅಭಿನಯಿಸಲು ಪ್ರಾರಂಭ ಮಾಡಿದ ಮೇಲೆ ನಟ/ನಟಿ ಏನೇ ಕೆಲಸ ಮಾಡುತ್ತಿದ್ದರೂ ಮನಸಿನ ಹಿನ್ನೆಲೆಯಲ್ಲಿ ಆ ಪಾತ್ರ ಓಡುತ್ತಿರುತ್ತದೆ. ಸ್ವಲ್ಪ ಬಿಡುವು ಸಿಕ್ಕರೂ ಆ ಪಾತ್ರ ಮುನ್ನೆಲೆಗೆ ಬರುತ್ತದೆ. ಯಾವುದೋ ಒಂದು ಹೊಳಹು ಸಿಕ್ಕಿದ ತಕ್ಷಣ ಅದನ್ನು ಪ್ರಯೋಗ ಮಾಡಿ ನೋಡಬೇಕು ಎನಿಸುತ್ತದೆ. ಆ ಕ್ಷಣ ಬಿಟ್ಟುಬಿಟ್ಟರೆ ಮತ್ತೆ ಆ ಸ್ಫೂರ್ತಿ ಬರುವುದು ಕಷ್ಟ. ಅನಿಸಿದ ತಕ್ಷಣ ಅದನ್ನು ಮಾಡುವ ವಾತಾವರಣ ಕಲಾವಿದರಿಗೆ ಮುಖ್ಯ. ನಾವು ಏನೇ ಸಮಾನತೆ ಎಂದರೂ ಸಂಸಾರದ ಜವಾಬ್ದಾರಿ ಹೆಚ್ಚಿಗೆ ಬೀಳುವುದು ಹೆಣ್ಣಿಗೆ. ಶೌಕತ್ ಕೈಫ಼ಿ ಯವರ ಆತ್ಮಕತೆಯಲ್ಲಿ ಒಂದು ಪ್ರಸಂಗ ಬರುತ್ತದೆ. ನಾಟಕವೊಂದರಲ್ಲಿ ಅವರು ಹುಚ್ಚಿಯ ಪಾತ್ರವನ್ನು ಅಭಿನಯಿಸುತ್ತಿರುತ್ತಾರೆ. ತಾಲೀಮು ಮುಗಿಸಿ ಮನೆಗೆ ಬಂದಾಗಲೂ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಏನೇನೋ ಅಭಿನಯ ಪ್ರಯೋಗ ಮಾಡುವಾಗ ಅವರ ಮಗಳು ಪುಟ್ಟ ಶಬಾನಾ ಆಜ್ಮಿ ಹೆದರಿಬಿಟ್ಟಿದ್ದರಂತೆ. ಆಗ ಕೈಫ಼ಿ ಯವರು ಶಬಾನಾರಿಗೆ ಅವರ ತಾಯಿ ಪಾತ್ರವೊಂದರ ಅಭ್ಯಾಸಲ್ಲಿದ್ದಾಳೆಂದು ತಿಳಿಸಿ ಹೇಳುತ್ತಾರೆ. ಮಾಯಾ ಏಂಜಲೋರಿಗೆ ಬೇರೆ ಬೇರೆ ದೇಶಗಳಲ್ಲಿ ಹೋಗಿ ಹಾಡುವ ಅವಕಾಶ ದೊರೆಯುತ್ತದೆ. ಪುಟ್ಟ ಮಗನನ್ನು ತನ್ನ ತಾಯಿಯ ಬಳಿಬಿಟ್ಟು ಸರಣಿ ಕಾರ್ಯಕ್ರಮಗಳ ಪ್ರವಾಸಕ್ಕೆ ಹೋಗಿರುತ್ತಾರೆ. ಒಂದೆರಡು ಕಾರ್ಯಕ್ರಮಗಳಾದ ಮೇಲೆ ಮಗನನ್ನು ಬಿಟ್ಟು ಹೀಗೆ ಹಾಡಲು ಬಂದಿರುವುದಕ್ಕೆ ತಪ್ಪಿತಸ್ಥ ಭಾವನೆ ಕಾಡುತ್ತದೆ. ವಾಪಸ್ ಬರುವುದಾಗಿ ಹೇಳಿದಾಗ ಅವರ ತಾಯಿ ಧೈರ್ಯ ತುಂಬುತ್ತಾರೆ. ಮೈಸೂರು ರಂಗಾಯಣದ ಇಂದಿನ ಹಿರಿಯ ನಟಿಯರು ಸೈಡ್ ವಿಂಗಿನಲ್ಲಿ ಜೋಲಿ ಕಟ್ಟಿ ಪಾತ್ರ ಮಾಡುತ್ತಲೇ ಮಕ್ಕಳನ್ನು ಬೆಳೆಸಿದ್ದಾರೆ. ಹೀಗೆ ಯಾವುದೇ ಕಲಾರಂಗದಲ್ಲಿರುವ ಮಹಿಳೆಗೆ ತನ್ನ ಸುತ್ತ ಇರುವ ವ್ಯವಸ್ಥೆಯ ಅತಿ ಹೆಚ್ಚಿನ ಬೆಂಬಲ ಬೇಕಾಗುತ್ತದೆ. ಅಂತಹ ಬೆಂಬಲ ಸಿಕ್ಕಿದಾಗ ಜವಾಬ್ದಾರಿಗಳ ಜತೆಗೆ ಕಲಾಭ್ಯಾಸ ಮುಂದುವರೆಸಬಹುದು. ಆದರೆ ವಿಪರ್ಯಾಸ ಎಂದರೆ ನಾಟಕ, ನೃತ್ಯ, ಸಿನೆಮಾ ಎಂದರೆ ಏನೋ ಮನರಂಜನೆಯ ಸ್ಥಳವಾಗಿ, ಮಜಾ ಮಾಡುವ ಸ್ಥಳ ಎಂದು ಜನ ಅಂದುಕೊಂಡಿದ್ದಾರೆ. ವಾಸ್ತವ ಏನೆಂದರೆ ಅದು ಪ್ರೇಕ್ಷಕರಿಗೆ ಮನರಂಜನೆಯೇ ಹೊರತು ಅಭ್ಯಾಸಿಗಳಿಗಲ್ಲ. ನನ್ನ ಹತ್ತಿರದವರೇ ಒಬ್ಬರು ಮತ್ತೊಬ್ಬರಿಗೆ ನನ್ನನ್ನು ಪರಿಚಯ ಮಾಡುವಾಗ ‘ಇವರು ಇಂಗ್ಲೀಷ್ ಟೀಚರ್’ ಎಂದು ಪರಿಚಯ ಮಾಡಿಸಿದ್ದರು. ನಾಟಕದ ಶಿಕ್ಷಕಿ ಎಂದು ಹೇಳಲು ಮುಜುಗರವಾಗಿರಬೇಕು! ಇಂತಹ ನೂರಾರು ಸವಾಲುಗಳನ್ನು ಕಲಾವಿದೆಯರು ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಲೇ ಇರಬೇಕಾಗುತ್ತದೆ.

ಇಂತಹ ಹಿನ್ನೆಲೆಯಿರುವ ಹಲವಾರು ರಂಗಕಲಾವಿದೆಯರು ಕರ್ನಾಟಕದುದ್ದಗಲಕ್ಕೂ ಇಂದು ರಂಗಭೂಮಿಯನ್ನೇ ವೃತ್ತಿಯಾಗಿ ತೆಗೆದುಕೊಂಡೋ ಅಥವಾ ಹವ್ಯಾಸವಾಗಿ ತೆಗೆದುಕೊಂಡೋ ಸಕ್ರಿಯರಾಗಿದ್ದಾರೆ. ತಮ್ಮದೇ ನಾಟಕ ತಂಡಗಳನ್ನೂ ಮುನ್ನಡೆಸುತ್ತಿರುವ ಮಹಿಳಾ ರಂಗಕರ್ಮಿಗಳಿದ್ದಾರೆ. ಸಿನೆಮಾ, ಸೀರಿಯಲ್ಗಳಲ್ಲಿ ಅಭಿನಯಿಸಿ ಬದುಕು ಕಟ್ಟಿಕೊಂಡವರು, ರಂಗಭೂಮಿಯಲ್ಲೆ ಬದುಕು ಕಟ್ಟಿಕೊಂಡು ಯಶಸ್ವಿಯಾದ ಹಲವು ಕಲಾವಿದೆಯರಿದ್ದಾರೆ. ಎಲ್ಲರಿಗೂ ಈ ಧೈರ್ಯ ಮತ್ತು ಸ್ಥೈರ್ಯ ನೀಡಿರುವುದು ಕಲೆ ಮತ್ತು ರಂಗಭೂಮಿ.

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣ ದ ಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದ ‘ಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ ಮಿಲಾಂಗಿ” ಹಲವಾರು ಪ್ರದರ್ಶನಗಳನ್ನು ಕಂಡಿದೆ.
