ಈ ವಯ್ಯ ನನ್ ಕಾಲುಂಗ್ರ ಬುಟ್ಟು ಮ್ಯಾಲಕ್ಕೆ ಯಾವತ್ತೂ ದಿಟ್ಸಿ ನೋಡಿಲ್ಲ. ತಂದೆ ಮಗಳಂಗೆ ನಮ್ ಸಂಬಂಧ. ಎಸ್ಟೊರ್ಸ ಆದ್ರು ಮಕ್ಳಾಗ್ದಿದ್ದಾಗ ಪೂಜೆ ಮಾಡ್ಸಿ ಯಂತ್ರಾನೂ ತಾವ್ ಕಟ್ದೆ ನನ್ ಯಜಮಾನನ್ ಕೈಲಿ ಕಟ್ಸುದ್ರು. ನನ್ನ ಯಾವತ್ತೂ ತಾಯಿ, ಅವ್ವ ಅಂತ, ಕೆಂಪಮ್ಮ ಅಂತ ಕರೆದವ್ರೆ ಒರ್ತು ಸದರ ಅಂತ ಇಲ್ವೇಇಲ್ಲ. ನಮ್ ಅಟ್ಟಿಗ್ ಬಂದ್ರು ಚೌಡೇಸ್ವರಿ ಅಂಕಣ ದಾಟಿ ಒಳಗ್ ಬಂದಿಲ್ಲ. ಯಜಮಾನಂಗ್ ಇಂಗಾದಾಗ ತಾವೇ ಗಾಡಿಕಟ್ಟಿಸ್ಕಂಡ್ ಬಂದು ಈ ಮನೆಗ್ ಕರ್ಕಬಂದು ಒಡ ಉಟ್ಟಿದೋರಂಗ್ ಸೇವೆ ಮಾಡವ್ರೆ. ನನ್ ಮಗಿನ್ನ ತಮ್ ಮಗನ್ ಸಮನಾಗಿ ನಡ್ಮಲ್ಲಿ ಕೂರುಸಿ ತುತ್ತಿಕ್ಕವ್ರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ರಘು ವೆಂಕಟಾಚಲಯ್ಯ ಅವರ “ಬಿದಿರಿನ ಗಳ” ಕಾದಂಬರಿಯ ಒಂದು ಅಧ್ಯಾಯ
ಒಂದೆರಡು ನಿಮಿಷ ಧೃತಿಗೆಟ್ಟ ನರಸಪ್ಪನವರು ಚೇತರಿಸಿಕೊಂಡರು. ಬೀರಣ್ಣನನ್ನು ಮನೆಗೆ ಓಡಿಸಿ ಒಂದು ಹೊಸ ಕೆಂಪು ವಸ್ತ್ರ ತರಿಸಿ ಅದನ್ನು ಹರಿದು ಪಟ್ಟಿಯಂತೆ ಮಾಡಿ ಹೆಣದ ಹಣೆಗೆ ಬಿಗಿದರು. ಮತ್ತೊಂದನ್ನುತಲೆಯಿಂದ ಗದ್ದದವರೆಗೆ ಬಿಗಿದು ಕಟ್ಟಿದರು. ಸೂಕ್ಷ್ಮವಾಗಿ ಗಮನಿಸದ ಹೊರತು ತಲೆಗೆ ಗಾಯವಾಗಿರುವುದು ತಿಳಿಯುತ್ತಿರಲಿಲ್ಲ. ಬೀರಣ್ಣನ ಸಹಾಯದಿಂದ ಹೆಣವನ್ನು ಮನೆಯ ಜಗತಿಗೆ ವರ್ಗಾಯಿಸಿದರು. ಬೀರಣ್ಣ ಹೆಣದ ಕೈ ಕಾಲು ಮಡಿಸಿ ಕುತ್ತಿಗೆಗೊಂದು ಕವೆಗೋಲು ಇಟ್ಟು ಅದನ್ನು ಕೂರಿಸಿದ. ಬಳಿಕ ನಾಲ್ಕು ಕೊಡ ನೀರುತಂದು ಕುರ್ಚಿಕಂಬವನ್ನು ತೊಳೆದರು. ಅಲ್ಲೆಲ್ಲೂ ರಕ್ತದ ಕಲೆ ಉಳಿಯದಂತೆ ಮಾಡಿದರು. ಅನಂತರ ಮತ್ತೊಮ್ಮೆ ಗಣಾಚಾರಿಯ ಶವದ ಮುಖ ಒರೆಸಿ, ಅವನದೇ ಒಂದು ಅಂಗಿ, ದಟ್ಟಿ ಪಂಚೆ ಉಡಿಸಿದರು. ಇವೆಲ್ಲವನ್ನು ಮೂಕಳಂತೆ ಗಮನಿಸುತ್ತ ಕೂತಿದ್ದಳು ಕೆಂಪಮ್ಮ.
ಈಗ ಅವಳ ಬಳಿಸಾರಿದ ನರಸಪ್ಪನವರು, “ಯಾಕೋ ತಾಯಿ ಮನಸ್ಸು ಮಾಡಲಿಲ್ಲ ಕಣವ್ವ. ಅವನ್ನ ಅವಳ ಉಡಿಗೆ ಹಾಕ್ಕೊಂಬುಟ್ಲು…” ಅಂದವರು ಆವರೆಗೆ ತಡೆದಿದ್ದ ದುಃಖ ಸಂಕಟವನ್ನೆಲ್ಲ ಹೊರಹಾಕುವಂತೆ ಜೋರಾಗಿ ಅಳತೊಡಗಿದರು. “ನೀವೇನು ಮಾಡ್ತೀರ ಬುಡಿ ಸಾಮಿ. ಅವನ ಕರ್ಮ ಅವನ್ನ ತಿಂತು… ನನ್ನ ಮುಂಡೆ ಮಾಡಿ ಒಂಟೋದ” ಅಂದವಳೇ ಬಾಯಿ ಬಡಿದುಕೊಂಡು ಅಳಲಾರಂಭಿಸಿದಳು. ಈ ಅಳು, ಚೀರಾಟ ಕೇಳಿ ಊರಜನರೆಲ್ಲ ನಿಧಾನವಾಗಿ ಜಮಾಯಿಸಿದರು. ಬೆಳಗಿನ ಜಾವದ ಹೊತ್ತಿಗೆ ಮನೆಯ ಮುಂದೆ ಅವನ ಕುಲದವರು, ಜಾತಿಯವರೆಲ್ಲ ಸೇರಿಬಿಟ್ಟಿದ್ದರು. ಜನ ಸೇರಿದ ಮೇಲೆ ಮಾತಿಗೆ ಕಡಿಮೆಯೆ?
“ಹಾರುವಯ್ಯನ ಸಾವಾಸ ಮಾಡಿಕೆಟ್ಟ.”
“ಚೌಡೇಶ್ವರಿನ ಸರ್ಯಾಗಿ ಪೂಜಸ್ಲಿಲ್ವಂತೆ ಅದ್ಕೆ ಇಂಗಾಯ್ತಂತೆ.”
“ಆ ವಯ್ಯ ಕೆಂಪೀನ ಮಡೀಕ್ಕಂಬುಟ್ಟಿದ್ನಂತೆ…”
“ಯಾವ್ದೋ ಶಕ್ತಿ ಒಲಿಸ್ಕಳಾಕ್ ಓಗ್ ಇಂಗಾಯ್ತಂತೆ.”
ಕಾದ ಸೀಸದಂತಹ ಮಾತುಗಳು. ಎಲ್ಲವನ್ನು ಆಲಿಸುತ್ತ ಮನಸ್ಸು ಕಲ್ಲಾಗಿಸಿ, ಹೃದಯ ನೀರಾಗಿಸಿ ಕಂಬಕ್ಕೊರಗಿ ಕೂತಿದ್ದರು ನರಸಪ್ಪನವರು. ಕೆಂಪಮ್ಮ ಲಾವಾ ರಸದಂತೆ ಕುದಿಯುತ್ತಿದ್ದಳು. ತೀರದ ದುಃಖವೊಂದೆಡೆ, ವಿಷಬಾಣದಂತಹ ಮಾತುಗಳು ಇನ್ನೊಂದೆಡೆ. ಜಾತಿ ಜನರೆಲ್ಲ ಸೇರಿ ಅವರ ಸಂಪ್ರದಾಯದಂತೆ ಚಟ್ಟ ಕಟ್ಟಿದರು. ದೂರದೂರಿನಿಂದ ಯಾರೂ ಬರಬೇಕಿರಲಿಲ್ಲ. ಕುಲಸ್ಥರೆಲ್ಲ ಆಗಲೆ ಸೇರಿದ್ದರು. ಬೆಳಗ್ಗೆ ಹತ್ತುಗಂಟೆಯ ವೇಳೆಗೆ ಹೆಣವನ್ನು ಎತ್ತಲು ಮುಂದಾದರು. ಅಲ್ಲಿಯವರೆಗೆ ಸುಮ್ಮನಿದ್ದ ನರಸಪ್ಪನವರು ದಿಗ್ಗನೆ ಎದ್ದು ಕೇಳಿದರು,
“ಏನ್ ಮಾಡ್ತೀರಿ, ಗಣಾಚಾರೀನ?”
“ಸತ್ತೋರ್ನ ಇನ್ನೇನ್ ಮಾಡ್ತಾರೆ. ಮಣ್ ಮಾಡ್ತಾರೆ ಕಣಯ್ಯ” ಗುಂಪಿನಿಂದ ತೂರಿ ಬಂತು ದನಿ.
“ಇಲ್ಲ. ಗಣಾಚಾರಿ ಶವಾನ ಸುಡಬೇಕು. ಮಣ್ಣು ಮಾಡೋದ್ ಬೇಡ.”
“ಏನೋ ಒಳ್ಳೆ ಹಾರುವ, ಸ್ನೇಇತಅಂತ ಸುಮ್ನಿದ್ರೆ ನಮ್ ರಿವಾಜ್ನೇ ಆಳ್ ಮಾಡ್ತಾವ್ನೆ. ನಮ್ ಜಾತಿ ಪ್ರಕಾರ ನಾವ್ ಹೂಣೋದೇಯ. ಎತ್ರಲಾ ಹೆಣಾನ…”
ತಂತ್ರದ ಸ್ವಲ್ಪ ಹಿನ್ನೆಲೆ ಉಳ್ಳವರಿಗೂ ಗೊತ್ತು ಇಂತಹ ಹೆಣಗಳಿಗೆ ಆ ಲೋಕದಲ್ಲಿ ಎಂತಹ ಬೆಲೆ, ಈ ಲೋಕದಲ್ಲಿ ಎಷ್ಟು ಉಪಯೋಗ ಅಂತ. ಇಂತಹ ಶಕ್ತಿಸಾಧಕರ ರುಂಡ, ಕಪಾಲ ಎಲ್ಲವನ್ನು ಮಣ್ಣುಮಾಡಿದ ಮೂರು ದಿನದೊಳಗೆ ಕತ್ತರಿಸಿ ಒಯ್ಯುತ್ತಾರೆ. ಬಳಿಕ ದೇಹವನ್ನು ಕ್ಷುದ್ರಶಕ್ತಿಗಳು ಭುಂಜಿಸಿಬಿಡುತ್ತವೆ. ರುಂಡ ಪೀಠಕ್ಕೆ ಉಪಯೋಗ, ಕಪಾಲ ನಾನಾತರಹದ ಉಪಯೋಗ. ಮದ್ಯ, ಮತ್ಸ್ಯಗಳ ನೈವೇದ್ಯಕ್ಕೆ ಅದೇ ಪಾತ್ರ. ಈ ಮುಂಡೆಮಕ್ಳಿಗೆ ಇವೆಲ್ಲ ಹೇಳಿ ಅರ್ಥಮಾಡ್ಸೋಕಾಗಲ್ಲ… ಕ್ಷಣೇಕ್ಷಣೇ ನರಸಪ್ಪನವರ ಕೋಪ ನೆತ್ತಿಗೇರುತ್ತಿತ್ತು. ಕಣ್ಣು ಕೆಂಪಾಯಿತು, ಮೈ ಅದುರತೊಡಗಿತು. ಎತ್ತರದ ದನಿಯಲ್ಲಿ ಗುಡುಗಿದರು.
“ಯಾವಾನಾದರೂ ಚಟ್ಟ ಮುಟ್ಟಿದರೆ ಅವನ ಕೈ ಸೇದೋಗತ್ತೆ.”
“ಈ ವಯ್ಯನ್ದು ಜಾಸ್ತಿಯಾಯ್ತು ಕಣ್ರಲಾ. ದಡಿ ಮುರ್ಕೊಂಡು ನಾಲ್ಕಿಕ್ಕಿದ್ರೆ ಸರೊಯ್ತಾನೆ…”
ನರಸಪ್ಪನವರು ಕೈಯ ಒಂದು ಹಿಡಿಯಲ್ಲಿ ಕುಂಕುಮವನ್ನು ಮತ್ತೊಂದು ಮುಷ್ಟಿಯಲ್ಲಿ ನಿಂಬೆ ಹಣ್ಣನ್ನು ಹಿಡಿದು ದಡದಡನೆ ಹೋಗಿ ಚಟ್ಟದ ಪಕ್ಕದಲ್ಲಿ ನಿಂತರು. ಅಷ್ಟರಲ್ಲಿ ತಡಿಕೆಯ ಕಡೆಯಿಂದ “ಏಯ್ ಯಾವೋನ್ಲಾ ಅವ್ನು ದಡಿ ಪಡಿ ಅಂತ ಮಾತಾಡೋನು. ಊರ ಪಂಚರು, ಹಿರೀಕರು ಅನ್ನೋ ಗ್ಯಾನ ಮಾನಾ ಇಲ್ವೇನ್ರಲಾ…?” ಪಟೇಲ್ ರುದ್ರೇಗೌಡರ ಧ್ವನಿ ಕೇಳಿಬಂತು.
“ಏನ್ ಐನೋರಾ. ಈ ನನ್ಮಕ್ಳು ಬುದ್ಧಿ ಗೊತ್ತಿದ್ದು ಇಂಥ ಎಡವಟ್ಕೋರರ್ನ ಮನೆ ಮುಂದೆ ಸೇರ್ಸಕೊತೀರಾ. ನಂಗೊಂದ್ಮಾತ್ ಯೋಳ್ಕಳ್ಸೋದಲ್ವರಾ? ಬನ್ನಿ ಅದೇನ್ ಗಲಾಟೆ ಕುಂತ್ ಮಾತಾಡನ.” ನರಸಪ್ಪನವರನ್ನು ಕರೆದುಕೊಂಡು ಬಂದು ಜಗತಿಯ ಮೇಲೆ ಕುಳಿತರು ರುದ್ರೇಗೌಡರು.
“ಮಕ ನೋಡ್ ಮಾತಾಡೊ ಪಟೇಲ, ತಿಕ ನೋಡ್ ಮಣೆ ಆಕೋ ಸಾನುಬೋಗ ಪಂಚಾಯ್ತಿಗೆ ಕುಂತವ್ರೆ ನೋಡ್ರಲಾ…” ಗುಂಪಿನ ಗುಸುಗುಸುವಿನ ನಡುವೆಯಿಂದ ಮಾತು, ಕಿಸಕಿಸ ನಗು. ರುದ್ರೇಗೌಡರು ಧ್ವನಿ ಬಂದತ್ತ ದುರುಗುಟ್ಟಿ ನೋಡಿದರು.
“ನಾಲಗೆ ಕೊಟ್ಟವ್ನೆ ಸಿವ ಅಂತ ಉದ್ದ ಬುಟ್ರೆ ಕತ್ರಿಸೋದು ಎಂಗೆ ಅಂತ ರುದ್ರೇಗೌಡನ್ಗೆ ಗೊತ್ತು. ಸಂತೆ ಸೂಳೆ ಅಂಗೆ ಗುಂಪಿನ್ ಮಧ್ಯದಿಂದ ಮುಲುಕೋದು ಬುಟ್ಟು ಅಪ್ಪನ್ಗುಟ್ದೋನಂಗೆ ಮಕ ತೋರ್ಸಿ ಮಾತಾಡ್ಬೇಕು. ನಿಮ್ ಇರಾದೆ ಏನು ಅಂತ ಕೇಳಾಕೆ ನಾವಿಲ್ಲಿ ಕುಂತಿರೋದು… ಏಯ್ ಲಕ್ಸಮಾಚಾರಿ, ನಿಮ್ ಜಾತಿಕುಲದ್ ಹಿರಿಯ ನೀನು. ಬಾ ಇಲ್ಲಿ, ಕುಂತ್ಕ ನಮ್ ಕೂಡ ಪಂಚಾಯತ್ಕೆಗೆ.”
“ಈಗ್ ಏಳ್ರಪ್ಪ ನಿಮ್ ಅವಾಲು.”
ಎಲ್ಲವನ್ನು ಆಲಿಸುತ್ತ ಮನಸ್ಸು ಕಲ್ಲಾಗಿಸಿ, ಹೃದಯ ನೀರಾಗಿಸಿ ಕಂಬಕ್ಕೊರಗಿ ಕೂತಿದ್ದರು ನರಸಪ್ಪನವರು. ಕೆಂಪಮ್ಮ ಲಾವಾ ರಸದಂತೆ ಕುದಿಯುತ್ತಿದ್ದಳು. ತೀರದ ದುಃಖವೊಂದೆಡೆ, ವಿಷಬಾಣದಂತಹ ಮಾತುಗಳು ಇನ್ನೊಂದೆಡೆ. ಜಾತಿ ಜನರೆಲ್ಲ ಸೇರಿ ಅವರ ಸಂಪ್ರದಾಯದಂತೆ ಚಟ್ಟ ಕಟ್ಟಿದರು. ದೂರದೂರಿನಿಂದ ಯಾರೂ ಬರಬೇಕಿರಲಿಲ್ಲ. ಕುಲಸ್ಥರೆಲ್ಲ ಆಗಲೆ ಸೇರಿದ್ದರು. ಬೆಳಗ್ಗೆ ಹತ್ತುಗಂಟೆಯ ವೇಳೆಗೆ ಹೆಣವನ್ನು ಎತ್ತಲು ಮುಂದಾದರು.
“ನಮ್ ಜನಗೋಳಲ್ಲಿ ಎಣ ಊಣೋದು ಪದ್ತಿ. ಆದರೆ ಈ ಹಾರುವಯ್ಯ ಹೂಣೋದು ಬ್ಯಾಡಾ ಸುಡಬೇಕು ಅಂತವ್ನೆ.”
“ಲೇ, ನೀನು ಗೋವಿಂದ್ನ ಪಾಳ್ಯದ ಹುಚ್ಚಪ್ಪನ ಮಗ ಕರಿಯ ಅಲ್ವೇನ್ಲಾ? ಯಾರ್ ಕುಟ್ಟೆ ಮಾತಾಡ್ತಿದೀಯ ಅಂತ ಗ್ಯಾನ ಐತೇನ್ಲಾ? ಹಾರುವಯ್ಯ ಅಂತ ಜಾತಿ ಇಡಿದು ಕರೀತಿಯಲ್ಲ, ಜೊತೆಗೆ ಅವ್ನು, ಇವ್ನು ಅಂತ ಬ್ಯಾರೆ… ಐನೋರೇನು ನಿಮ್ ಅಟ್ಟಿಗೆ ಭಿಕ್ಸಕ್ ಬಂದವ್ರೇನ್ಲಾ? ನೀವೇಯ ಸುಭ ಅಸುಭ ಅಂತ, ಲಗ್ನ ಕಟ್ಕೊಡಿ, ಆರೂಡಕ್ಕೆ ಯಾವ್ ದಿನ ಚಂದ, ಮಗೀಗ್ ಯಾವ್ ಎಸರ್ ಕಟ್ಬೇಕ್ ಅಂತತ ಕೇಳ್ಕಬರಾದು. ಊರು ಅಂದ್ಮೇಲೆ ಎಲ್ಲಜಾತಿನೂ ಒಂದೇ. ಹೊಲೇರ್ ಗಿರಿಯ, ನಮ್ ತೋಟಿ ತಮಟೆ ತಗೊಂಡ್ ಸಾರಿ, ಮಡಿವಾಳಿ ಗಂಗಮ್ಮ ನಡೆಮುಡಿ ಆಸಿ, ಕುರುಬರ ಕರಿಯ ಉಲಿ ವೇಸ ಆಕಿ, ನಾವೆಲ್ಲ ಸೇರಿಗುಡಿಗೆ ಸುಣ್ಣಒಡೆದು, ಅಯ್ನೋರ್ ಬಂದು ಪೂಜಿದ್ರಲ್ವೇನ್ಲಾ ಊರ್ ಅಬ್ಬಅಂತ ಆಗೋದು?” ರುದ್ರೇಗೌಡರು ಗದರಿದರು.
“ಅವನು ಉಡುಗ ತಿಳಿಯಾಕಿಲ್ಲ ಬುಡಿ ಪಟೇಲ್ರೆ. ಈ ಅಯ್ನೋರು ಗಣಾಚಾರೀನ ಅವನ್ ಮನೆಯಿಂದ ಇಲ್ಲಿ ಕರ್ಕರ್ಂಬಂದು ಮಡಿಕಂಡಿದ್ದು ಅಲ್ದೆ ಈಗ ಅವನ ಎಣಾನ ಅವರ ಪದ್ಧತಿ ಅಂಗೆ ದಫನು ಮಾಡ್ಬೇಕು ಅಂತಾವ್ರೆ.”
“ನಾನು ಊರಿನ, ಜನರ ಹಿತದೃಷ್ಟಿಯಿಂದ ಹಾಗೆ ಹೇಳ್ತಿದೀನ್ಯೆ ಹೊರತು ನನ್ನ ಸ್ವಾರ್ಥವೇನೂ ಇಲ್ಲ ಪಟೇಲರೆ” ನರಸಪ್ಪನವರು ನುಡಿದರು.
“ನೋಡಿದ್ರಾ ಪಟೇಲ್ರೆ ಈ ವಯ್ನೋರ್ ಅಟಾನಾ? ಅವನ ಎಂಡ್ರನ್ನೂ ತಂದ್ ಮಡಿಕ್ಕಂಡವ್ರೆ…”
ಜಗತಿಯ ಮೂಲೆಯಲ್ಲಿ ಕೂತಿದ್ದ ಕೆಂಪಮ್ಮ ಸರ್ಪದಂತೆ ಫೂತ್ಕರಿಸುತ್ತ ಜಗ್ಗನೆದ್ದು ನಿಂತಳು, “ಯಾವ್ ಮಿಂಡ್ರಗುಟ್ಟಿದ್ ನನ್ಮಗಾನ್ಲಾ ಅಂಗಂದೋನು? ಅಯ್ಯೋ ನಿನ್ ಬಾಯಿಗ್ ನನ್ ಆಟ್ ಉಯ್ಯ. ಈ ಅಯ್ನೋರ್ನ ಅಂದೋರ್ ಬಾಯ್ ಸೇದೋಯ್ತದೆ. ಚೌಡೇಸ್ವರಿ ಗುಡಿಜಮೀನು ಸರ್ಕಾರ ವಸ ಮಾಡ್ಕೋತದೆ ಅಂದಾಗತಿಕ ಬಾಯಿ ಮುಚ್ಕೊಂಡು ಇದ್ರಿ. ಗಣಾಚಾರಿ ಬೀದಿಗ್ ಬೀಳ್ತಾನೆ ಆಟ ನೋಡನ ಅಂತಿದ್ರಿ. ಆಗ ಓಡಾಡಿ ಊರ ಪಂಚರತಾವ ಪತ್ರ ಬರ್ಸಿ, ತಾವೇ ಸ್ವತ ಬೇಡಾಡಿ ನಿಮ್ ಜಾತಿ ದೇವಸ್ಥಾನ, ಜಮೀನು ಉಳಸ್ ಕೊಟ್ಟಿದ್ದು ಇದೇ ಅಯ್ನೋರು. ದೇವಿ ಚೌಡೇಸ್ವರಿ ಆಣೆ ಏಳ್ತೀನಿ. ಈ ವಯ್ಯ ನನ್ ಕಾಲುಂಗ್ರ ಬುಟ್ಟು ಮ್ಯಾಲಕ್ಕೆ ಯಾವತ್ತೂ ದಿಟ್ಸಿ ನೋಡಿಲ್ಲ. ತಂದೆ ಮಗಳಂಗೆ ನಮ್ ಸಂಬಂಧ. ಎಸ್ಟೊರ್ಸ ಆದ್ರು ಮಕ್ಳಾಗ್ದಿದ್ದಾಗ ಪೂಜೆ ಮಾಡ್ಸಿ ಯಂತ್ರಾನೂ ತಾವ್ ಕಟ್ದೆ ನನ್ ಯಜಮಾನನ್ ಕೈಲಿ ಕಟ್ಸುದ್ರು. ನನ್ನ ಯಾವತ್ತೂ ತಾಯಿ, ಅವ್ವ ಅಂತ, ಕೆಂಪಮ್ಮ ಅಂತ ಕರೆದವ್ರೆ ಒರ್ತು ಸದರ ಅಂತ ಇಲ್ವೇಇಲ್ಲ. ನಮ್ ಅಟ್ಟಿಗ್ ಬಂದ್ರು ಚೌಡೇಸ್ವರಿ ಅಂಕಣ ದಾಟಿ ಒಳಗ್ ಬಂದಿಲ್ಲ. ಯಜಮಾನಂಗ್ ಇಂಗಾದಾಗ ತಾವೇ ಗಾಡಿಕಟ್ಟಿಸ್ಕಂಡ್ ಬಂದು ಈ ಮನೆಗ್ ಕರ್ಕಬಂದು ಒಡ ಉಟ್ಟಿದೋರಂಗ್ ಸೇವೆ ಮಾಡವ್ರೆ. ನನ್ ಮಗಿನ್ನ ತಮ್ ಮಗನ್ ಸಮನಾಗಿ ನಡ್ಮಲ್ಲಿ ಕೂರುಸಿ ತುತ್ತಿಕ್ಕವ್ರೆ. ಯಾವ್ ಜಾತಿ ಬಾಂಧವರು ತೋರುಸ್ದೆ ಇರೊ ಇಸ್ವಾಸ ತೋರ್ಸವರೆ, ಇಂತೋರ್ ಕುಟ್ಟ ನನ್ ಎಸರ್ ಕಟ್ತೀರಲ್ಲ… ನಿಮ್…” ಕೆಂಪಮ್ಮ ಉಮ್ಮಳಿಸಿದ ಸಂಕಟದಿಂದ ಕುಸಿದಳು.
“ನೀ ಕೂತ್ಕೊ ಕೆಂಪಮ್ಮ. ಈ ಅಯ್ನೋರ್ ಎಂತವ್ರು ಅಂತ ಈಗ ಮೀಸೆ ಮೂಡಿರೋ ಬೋಳಿಮಕ್ಳು ಏಳ್ಬೇಕಾಗಿಲ್ಲ. ಏಯ್ ಕರಿಯ, ನೀನು ಮುಂದೆ ಮಾತಾಡಂಗಿಲ್ಲ. ನಿಂಗೆ ಎಲ್ಡು ರೂಪಾಯಿ ದಂಡ ಆಕಿದೀನಿ, ಅಸುದ್ಧ ಮಾತಾಡಿದ್ಕೆ. ಮುಂದ್ಲ್ ಅಮ್ಮನ ಅಬ್ಬದೊತ್ತಿಗೆ ಎಲೆ ಅಡಕೆ ಮೇಲೆ ಎಲ್ಡ್ರುಪಾಯಿ ಮಡಗಿ ಪಂಚಾಯ್ತರಿಗೆ ಒಪ್ಪುಸ್ಬೇಕು. ಅಂಗೆ ಬಾಯೋದಂಗೆ ಮಾತಾಡಂಗಿಲ್ಲ. ಇರೋ ಇಸ್ಯ ಮಾತಾಡ್ಬೇಕು. ಎಣ ಸುದ್ಧ ಮಾಡೋಇಸ್ಯ.”
“ಆಯ್ತು ಬುಡಿ. ಅದೇ ಮಾತಾಡಾನ. ಅಯ್ನೋರು ಗಣಾಚಾರೀನ ತಮ್ಮನೆಗೆ ಕರಕ ಬಂದು ಇಟ್ಕಂಡ್ರು. ಈಗ ಅವನ ಎಣಾನ ನಮ್ ಜಾತಿ ಅಂಗೆ ಊಣೋದು ಬುಟ್ಟು ಸುಡಬೇಕು ಅಂತ ಕುಂತವ್ರೆ.”
ರುದ್ರೇಗೌಡರು ನರಸಪ್ಪನವರಕಡೆ ನೋಡಿದರು. ಅವರೇನು ಜಗ್ಗುವಂತೆ ಕಾಣಲಿಲ್ಲ. ಪಟೇಲರು ಕ್ಯಾಕರಿಸಿ ಗಂಟಲು ಸರಿ ಮಾಡಿಕೊಂಡು, “ಗೋವಿಂದಾಚಾರಿ ಏಳೊ ಮಾತು ಸರಿಯಾಗದೆ. ಗಣಾಚಾರಿ ಉಸಾರಿಲ್ದೆ ಮನಗ್ದಾಗ ಅವನ್ನ ಅವರು ಕರ್ಕಬಂದದ್ದು ತೆಪ್ಪು. ಆದ್ರೆ ನೀವೆಲ್ಲ ಓಗಿ ಓಗಿ ನೋಡ್ಕಂಡು ಓದ್ರಿ ಒರತು ಯಾವ್ ನನ್ಮಗಾನೂ ಅವನ್ನ ಎಂಗ್ ನೋಡ್ಕಳದು ಅಂತ ಎದರಿ ನಿಮ್ಮನೆಗೆ ಕರ್ಕ ಓಗಲಿಲ್ಲ. ಅವನು ಮನಗ್ಬುಟ್ನಲ್ಲ. ಅವನ ತ್ವಾಟ, ತುಡಿಕೆಗೆ ನೀವು ಯಾರೂ ಯವಸ್ಥೆ ಮಾಡ್ನಿಲ್ಲ. ಆದ್ರೆ ಅಯ್ನೋರು ಕರ್ಕಬಂದು ತಮಗೊತ್ತಿರೊ ಔಸ್ದಿ, ಪೂಜೆ ಮಾಡ್ಸಿಅವನ್ ಹೇಲು ಉಚ್ಚೆ ವಾಸ್ನೆ ಕುಡುದು, ಅವನ ಹೆಣಾನಾ ತಮ್ಮನೆ ಅಂಗಳದಲ್ಲಿ ಮಡಿಕ್ಕಂಡ್ ಮೇಲೆ, ಅವನ್ ಜೀವ್ ಓದ್ಮೇಲೆ, ನೀವು ಜಾತಿಸೂರರು ಬಂದಿದೀರಿ. ಎಣಒಪ್ಪ ಮಾಡೋದ್ ಎಂಗೆ ಅಂತ ಯೋಳಕ್ಕೆ. ಗಣಾಚಾರಿನೂ ಅಯ್ನೋರು ಬಾರಿ ನ್ಯಾಸ್ತ ಮಾಡಿದ್ರು ಅನ್ನಾದು ಊರೂರ್ಗೆ ಗೊತ್ತಿರೊ ಇಸ್ಯ. ಅಮಾಸೆ ಉಣ್ಣಿಮೆಲಂತೂ ಇವ್ರಿಬ್ರು ಕೈಗೇ ಸಿಗ್ತಿರ್ಲಿಲ್ಲ. ಕುಟುಂಬಸ್ತ್ರಂಗೆ ಅವರೂ ದುಃಖ ಪಟ್ಟವ್ರೆ, ಅವರೂ ಅಕ್ಕುದಾರರೇ. ಜಾತೀಲಿ ಉಟ್ಬುಟ್ಟು ಮೂಸು ನೋಡ್ದೇಇರೋರಿಗಿಂತ ನಿಯತ್ತಿನಿಂದ ನಡ್ಕೊಂಡ್ ಅಯ್ನೋರ್ಗೆ ಅಕ್ಕು ಜಾಸ್ತಿ. ಆದ್ರೆ ಇದು ಖಾಸಾ ಕುಟುಂಬದ ಇಸ್ಯ. ಇದ್ರಲ್ಲಿ ಕೆಂಪಮ್ಮನ ಮಾತೇಕಡೇ ಮಾತು. ಗಣಾಚಾರಿ ಅವಳ ಸೊತ್ತು. ನಿನ್ ಕೊನೇ ಮಾತೇನು ಕೆಂಪಮ್ಮ?”
“ಅಯ್ನೋರ್ ಏಳ್ದಂಗೆ ಆಗ್ಲಿ. ಯಾವ್ದುಕ್ಕೂ ಅಟ ಇಡಿದೇ ಇರೋರು ಇದಕ್ಕೆ ಅಟ ಇಡಿದವರೆ ಅಂದ್ರೆ ಇದರ ಹಿಂದೆ ಏನೋ ಮರ್ಮಐತೆ. ಅವರು ಯಾವತ್ತೂ ನಮ್ ಕುಟುಂಬಕ್ಕೆ ಕೆಟ್ಟುದ್ ಬಯಸ್ದವರಲ್ಲ. ನಮ್ಮನೆಎಣ ಅವರೇಳ್ದಂಗೆ ಒಪ್ಪ ಆಗ್ಬೇಕು.” ಕೆಂಪಮ್ಮ ಕೈ ಮುಗಿದು ಹೇಳಿದಳು.
“ಕೇಳಿಸ್ತೇನ್ರಪ್ಪ. ಇಸ್ಯ ಮುಗೀತು. ಗಣಾಚಾರಿ ಎಣಾನ ಅಯ್ನೋರ್ ಏಳ್ದಂಗ್ ಒಪ್ಪ ಮಾಡ್ಬೇಕು. ಯಾವಾನೂ ತಗಾದೆ ತೆಗ್ಯಂಗಿಲ್ಲ. ನಿಮಗಿಷ್ಟವಿಲ್ಲ ಅಂದ್ರೆ ಅದಕ್ಕೂ ಸೈ. ಅಮಿಕ್ಕಂಡು ನಿಮ್ ನಿಮ್ ಅಟ್ಟೀಗೆ ಒಂಟೋಗಿ. ನಮ್ ಅಟ್ಟಿ ಆಳು ಕಳುಸ್ತೀನಿ. ಅವರೇ ಎಲ್ಲ ಮಾಡ್ತಾರೆ.”
ಗುಂಪಿನ ಗುಜುಗುಜು ಕಡಿಮೆಯಾದ ಮೇಲೆ ನರಸಪ್ಪನವರು ಹೇಳಿದರು, “ನೋಡಿ, ಹೆಣಕ್ಕೆ ನೀವು ನಿಮ್ಮ ಸಂಪ್ರದಾಯದ ಪ್ರಕಾರ ಏನೇನು ಶಾಸ್ತ್ರವಿದೆಯೊ ಅವನ್ನೆಲ್ಲ ಮಾಡಿ. ಮುಗಿದ ಮೇಲೆ ಅದನ್ನು ಚಿತೆಯ ಮೇಲಿಟ್ಟುಕೊಡಿ ಸಾಕು… ಚಿತೆ ತಯಾರಾಗಬೇಕು. ಸೌದೆ ಬೇಕಾರೆ ನಮ್ಮನೆ ಹಿತ್ತಲಲ್ಲಿದೆ. ಆದ್ರೆ ನಿಮ್ಮನೆಗಳಿಂದ್ಲೂ ಒಂದೊಂದು ತುಂಡು ಕೊಡಿ. ಮುನಿಸ್ವಾಮಿ ಗಾಡಿ ತರ್ತಾನೆ. ಅವನಿಗೆ ಹೇಗೆ ಚಿತೆ ಮಾಡಬೇಕು ಅಂತ ನಾ ಹೇಳ್ತೀನಿ. ಅಯ್ಯನಕಟ್ಟೆ ಹಿಂದೆ ಚಿತೆ ತಯಾರಾಗತ್ತೆ. ಇನ್ನರ್ಧ ಘಂಟೆ ಬಿಟ್ಟು ಹೆಣ ಎತ್ತೋಣ.”
ಮನೆ ಒಳಹೊಕ್ಕ ನರಸಪ್ಪನವರು ಮತ್ತೆ ಹೊರಬಂದದ್ದು ಹಿತ್ತಲಬಾಗಿಲಿಂದ. ಅವರಕೈಯಲ್ಲಿ ಒಂದು ದೊಡ್ಡ ಗಂಟಿತ್ತು. ಮುಂದಣ ಅಂಗಳಕ್ಕೆ ಬಂದುನಿಂತು ಕರೆದರು, “ಕೆಂಪಮ್ಮ… ಕರಿ ಸುಬ್ಬನ್ನ…” ಒಳಗೆ ಕೃಷ್ಣಪ್ಪನ ಜೊತೆ ಆಡುತ್ತಿದ್ದ, ಕೊಂಚ ಗಾಬರಿಗೊಂಡಿದ್ದ ಬಾಲಕ ಸುಬ್ಬಾಚಾರಿಯನ್ನು ತಂದು ಅವರ ಎದುರಿಗೆ ನಿಲ್ಲಿಸಿದಳು ಕೆಂಪಮ್ಮ. “ನೋಡು, ಇವ್ನು ನನ್ಜೊತೆ ಬರ್ತಾನೆ. ಹೆದರ್ಕೊಬೇಡ. ಕ್ಷೇಮವಾಗಿ ಕಕೊರ್ಂಬರೊ ಜವಾಬ್ದಾರಿ ನಂದು. ನಾವ್ ಬರೋವರ್ಗು ನೀನು, ಗೌರಿ ಸ್ನಾನ ಮಾಡೋದು ಬ್ಯಾಡ. ನಾವು ಬರುವ ಮುಂಚೆ ಮುನಿಸ್ವಾಮಿ ಬಂದು ಏನ್ ಮಾಡ್ಬೇಕು ಅಂತ ಹೇಳ್ತಾನೆ. ಈಗ ಸುಬ್ಬನ ಬಟ್ಟೆ ಕಳಚು” ಎಂದರು. ಬುಂಡಗೆ ನಿಂತ ನಾಲ್ಕು ವರ್ಷದ ಸುಬ್ಬನ ಕೈ ಹಿಡಿದು ಅಂಗಳದ ಮೂಲೆಯಲ್ಲಿದ್ದ ಬಾವಿಯ ಬಳಿ ಕರೆದೊಯ್ದರು. ಅಲ್ಲಿ ಬೀರಣ್ಣ ನಾಲ್ಕಾರು ಕೊಡ ನೀರು ಸೇದಿಟ್ಟಿದ್ದ. ಒಂದು ಕೊಡ ನೀರನ್ನು ಸುಬ್ಬನ ತಲೆಯ ಮೇಲೆ ಸುರಿದರು. ತಾವೂ ಬಟ್ಟೆಯೆಲ್ಲ ಕಳಚಿ ಕೌಪೀನದಲ್ಲಿ ನಿಂತು ಒಂದು ಬಿಂದಿಗೆ ನೀರನ್ನು ತಲೆಯ ಮೇಲೆ ಸುರುವಿಕೊಂಡರು. ಬಳಿಕ ತಮ್ಮ ಗಂಟು ಬಿಚ್ಚಿ ಹೊಸ ವಸ್ತ್ರವನ್ನು ತೆಗೆದರು. ಅರ್ಧಕ್ಕೆ ಹರಿದು ಒಂದು ತುಂಡನ್ನು ಸುಬ್ಬನಿಗೆ ಉಡಿಸಿದರು. ಮತ್ತರ್ಧವನ್ನು ಹೊದಿಸಿದರು. ಹಾಗೇ ತಾವೂ ಹೊಸ ವಸ್ತ್ರ ಧರಿಸಿ ಮತ್ತೆ ಇಬ್ಬರ ಮೇಲೂ ನೀರು ಸುರುವಿಕೊಂಡರು. ಬಳಿಕ ಅವನ ಕೈ ಹಿಡಿದು ಹೆಣದ ತಲೆಯ ಬಳಿ ನಿಲ್ಲಿಸಿದರು. ಮನೆಯ ಮುಂದೆ ಹಾಕಿದ್ದ ಬೆಂಕಿಯಿಂದ ಆರೆಂಟು ಕೆಂಡವನ್ನು ಮಡಕೆಯೊಂದರಲ್ಲಿ ಹಾಕಿ ಜೊತೆಗೊಂದಿಷ್ಟು ಬೆರಣಿಯನ್ನು ಹಾಕಲಾಯಿತು. ಅದನ್ನು ಒಮ್ಮೆ ಸುಬ್ಬನ ಕೈಲಿ ಎತ್ತಿಸಿ ಬಳಿಕ ತಾವು ಎತ್ತಿಕೊಂಡರು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ