ನಾಲ್ಕು ಮಕ್ಕಳ ತಾಯಿಯಾದ ಝಣಕಿ ಬಾಯಿಗೆ ಐದನೆಯ ಮಗು ಹೊಟ್ಟೆಯಲ್ಲಿ ಇತ್ತಂತೆ. ಆದರೂ ಆಕೆಗೆ ತಾನು ಬಸುರಿ ಹೆಂಗಸು, ಸ್ವಲ್ಪ ದಿನ ಆರಾಮ ಮಾಡಬೇಕಂತ ಇರಲ್ಲಿಲ್ಲಂತೆ. ದಿನ ತುಂಬಿದ ಬಸುರಿ ಎಂದಿನಂತೆ ವಿಜಾಪುರಿಗೆ ಬಾರೆಕಾಯಿ ಮಾರಲಿಕ್ಕೆ ಹೋಗಿದ್ದಳಂತೆ. ಬಜಾರದಲ್ಲಿಯೇ ಹೆರಿಗೆಯಾಯಿತಂತೆ. ಮಗುವನ್ನು ಬಾರೆಕಾಯಿ ಮುಚ್ಚುವ ಬಟ್ಟೆಯಲ್ಲಿ ಸುತ್ತಿಕೊಂಡು, ಬಾರೆಕಾಯಿಯ ಬುಟ್ಟಿಯಲ್ಲೇ ಇಟ್ಟುಕೊಂಡು ಬಂದಳಂತೆ.  ಬಜಾರದಲ್ಲಿ ಹುಟ್ಟಿದಕ್ಕೆ ಆ ಮಗುವಿನ ಹೆಸರು ಬಜಾರಿ ಅಂತ ಇಟ್ಟರಂತೆ. ರಮೇಶ್ ನಾಯಕ್ ಬರೆದ ಲಂಬಾಣಿ ಬದುಕಿನ ಸರಣಿ

ಝಣಕಿ ಬಾಯಿ ಬಜಾರದಲ್ಲಿ ಹೆತ್ತದ್ದು

ತಾರೂ ಬುಡ್ಡನ ಹೆಂಡತಿ ಝುಣಕಿ ಬಾಯಿ ವರ್ಷಪೂರ್ತಿ ಒಂದೋ ಬಾರೆಕಾಯಿ ಮಾರುತ್ತಿದ್ದಳು ಇಲ್ಲಾ ಬೇವಿನ ಕಾಯಿ ಬೀಜ ಅರಿಸಿ ಮನೆ ಮುಂದೆ ಅಂಗಳದಲ್ಲಿ ಹಾಕಿ ಒಣಗಿಸಿ ಮಾರುತ್ತಿದ್ದಳು. ಅಕ್ಕಪಕ್ಕದ ಹೊಲದಲ್ಲಿ ಇರುವ ಬಾರೆಕಾಯಿ ಮರವನ್ನ ಸ್ವಲ್ಪ ಹಣ ಕೊಟ್ಟು ವಹಿಸಿಕೊಳ್ಳತ್ತಿದ್ದಳು. ಹೊಲದ ಮಾಲಿಕರೂ ಇರುವ ಒಂದೆರಡು ಮರ ಮಕ್ಕಳ ಕೈಯಿಂದ ಕಾಯಿಸುವದಕ್ಕಿಂತ ಝುಣಕಿಗೆ ವಹಿಸಿಕೊಡುವುದೇ ಛಲೋ ಅಂತ ಕೊಟ್ಟು ಬಿಡುತ್ತಿದ್ದರು. ಬಡತನ ಬಹಳವಿದ್ದರೂ, ಝಣಕಿ ಬಾಯಿ ಕೂಲಿ ಕೆಲಸಕ್ಕೆ ಎಂದೂ ಹೋದವಳಲ್ಲ. ಮುಂಜಾನೆ ಎದ್ದು ಮನೆ ಕೆಲಸ ಮಾಡಿ, ಮಧ್ಯಾಹ್ನದ ಊಟಕ್ಕೆ ಎರಡೋ ಮೂರೋ ರೊಟ್ಟಿಯನ್ನು ಹಳೆ ಬಟ್ಟೆಯಲ್ಲಿ ಕಟ್ಟಿಕೊಂಡು ತಲೆಯ ಮೇಲೊಂದು ದೊಡ್ಡ ಬುಟ್ಟಿ ಇಟ್ಟುಕೊಂಡು, ಬುಟ್ಟಿಯೊಳಗೆ ಎರಡು ಖಾಲಿ ಗೋಣಿ ಚೀಲಗಳನ್ನು ಹಾಕಿಕೊಂಡು ಹೊಲಕ್ಕೆ ಹೋಗಿ ಬಾರೆಕಾಯಿ ಮರವನ್ನು ಅಲ್ಲಾಡಿಸುತ್ತಿದ್ದಳು. ಬಾರೆಕಾಯಿಗಳನ್ನು ಗೋಣಿಚೀಲದೊಳಕ್ಕೆ ತುಂಬಿ ತರುತ್ತಿದ್ದಳು. ಮಾರನೆಯ ಮುಂಜಾನೆ ತಾಂಡಾದ ಓಣಿಗಳಲ್ಲಿ ಬಾರೆಕಾಯಿ.. ಬಾರೆಕಾಯಿ … ಅಂತ ದೊಡ್ಡ ದನಿಯಲ್ಲಿ ಕೂಗುತ್ತಿದ್ದಳು. ಇದೇ ರೀತಿ ಪಕ್ಕದ ತಾಂಡಾ, ಅಥರ್ಗಾ ಸಂತೆ, ವಿಜಾಪುರದ ಸಂತೆಗಳಲ್ಲಿ ಮಾರಿ ಬರುತ್ತಿದ್ದಳು.

ನಾನು ಐವತ್ತು ಪೈಸೆಗೆ ಹಿಡಿ ತುಂಬ ಬಾರೆಕಾಯಿ ತುಂಬಿಸಿಕೊಂಡು ಪ್ಯಾಂಟಿನ ಮತ್ತು ಅಂಗಿಯ ಜೇಬಿನಲ್ಲಿ ಇಟ್ಟುಕೊಂಡು ದಿನವಿಡೀ ಬಾರೆಕಾಯಿ ತಿನ್ನುತ್ತಾ ಗೆಳೆಯರ ಜೊತೆ ಗೋಲಿಯಾಡುತ್ತಿದ್ದೆ. ಬರೀ ಬಾರೆಕಾಯಿಯಿಂದಲೇ ಹೊಟ್ಟೆ ತುಂಬುತ್ತಿತ್ತು. ಅಮ್ಮ ಕೈ ಹಿಡಿದು ಎಳದುಕೊಂಡು ಬರುತ್ತಿದ್ದಳು. ಜೇಬು ತುಂಬಾ ಬಾರೆಕಾಯಿ ನೋಡಿ, ಇಷ್ಟೆಲ್ಲಾ ಬಾರೆಕಾಯಿ ತಿಂದರೆ ಹೊಟ್ಟೆಯಲ್ಲಿ ಹುಳ ಬಿಳತೈತಿ, ಜ್ವರ ಬರತೈತಿ , ಹಾಳಾದವಳು ಬೆಳ ಬೆಳಗೆ ಯಾಕೆ ಮಾರುತ್ತಾಳೋ ಏನೊ? ಅಂತ ಸಣ್ಣ ಧ್ವನಿಯಲ್ಲೆ ಗೊಣಗುತ್ತಿದ್ದಳು..

ಒಮ್ಮೆ ನಾನು ವಿಜಾಪುರಕ್ಕೆ ಹೋಗಿದ್ದೆ. ಝುಣಕಿ ಬಾಯಿಯೂ ಮಿಂಚನಾಳ ಸ್ಟೇಷನಿಂದ ರೈಲಲ್ಲಿ ವಿಜಾಪುರದ ಸಂತೆಗೆ ಬಾರೆಕಾಯಿ ಮಾರಲಿಕ್ಕೆ ಬಂದಿದ್ದಳು. ಇವಳು ಟಿಕೇಟು ಇಲ್ಲದೆ ಪ್ರಯಾಣ ಮಾಡುತ್ತಿದ್ದಳು. ಅಂದು ಇವಳನ್ನು ಟಿಕೇಟ್ ಕಲೆಕ್ಟರ ಹಿಡಿದು ಹಾಕಿದ್ದ. ದಂಡ ಕೊಡು ಅಂತ ಪೀಡಿಸುತ್ತಿದ್ದ. ಇವಳು ಗಟ್ಟಿ ಅಳ್ತಾ ಇದ್ದಳು. ಆತ ಅವಳನ್ನು ರೈಲ್ವೆ ಪೋಲಿಸರ ಕೊಠಡಿಯ ಮುಂದೆ ಕೂರಿಸಿಹೋದ. ಪೋಲಿಸರೆಲ್ಲಾ ಬುಟ್ಟಿಯಲ್ಲಿ ಇದ್ದ ಅರ್ಧದಷ್ಟು ಬಾರೆಕಾಯಿ ಖಾಲಿ ಮಾಡಿ ನಂತರ ಬಿಟ್ಟರಂತೆ.

ಸಂಜೆ ಬರುವಾಗ ನಾವು ಜೊತೆಯಲ್ಲೆ ಬಂದೆವು. ಟಿಕೇಟ್ ಕಲೆಕ್ಟರಿಗೆ, ಪೋಲಿಸರಿಗೆ ಬಾಯಿಗೆ ಬಂದಿದ್ದೆಲ್ಲಾ ಲಂಬಾಣಿ ಭಾಷೆಯಲ್ಲೇ ಬೈತಾ ಬರುತ್ತಿದ್ದಳು.
‘ಹಾಟ್ಯ.. ಹಿಜಿಡ ನನ ಮಗ ಮುದುಕಿ ಅಂತ ಬಿಡ್ಲಿಲ್ಲಾ’ ಅಂತೆಲ್ಲ. ಮನೆಗೆ ಬಂದ ಮೇಲೆ ಈ ವಿಷಯವನ್ನು ಅಮ್ಮನಿಗೆ ಹೇಳಿದೆ. ಆಗ ಅಮ್ಮ ಇವಳೆಷ್ಟು ಗಟ್ಟಿ ಹೆಂಗಸು ಅಂತ ಇವಳ ಬಗ್ಗೆ ಒಂದು ಹಳೆಯ ಕಥೆ ಹೇಳಿದರು.

ನಾಲ್ಕು ಮಕ್ಕಳ ತಾಯಿಯಾದ ಝಣಕಿ ಬಾಯಿಗೆ ಐದನೆಯ ಮಗು ಹೊಟ್ಟೆಯಲ್ಲಿ ಇತ್ತಂತೆ. ಆದರೂ ಆಕೆಗೆ ತಾನು ಬಸುರಿ ಹೆಂಗಸು, ಸ್ವಲ್ಪ ದಿನ ಆರಾಮ ಮಾಡಬೇಕಂತ ಇರಲ್ಲಿಲ್ಲಂತೆ. ದಿನ ತುಂಬಿದ ಬಸುರಿ ಎಂದಿನಂತೆ ವಿಜಾಪುರಿಗೆ ಬಾರೆಕಾಯಿ ಮಾರಲಿಕ್ಕೆ ಹೋಗಿದ್ದಳಂತೆ. ಬಜಾರದಲ್ಲಿಯೇ ಹೆರಿಗೆಯಾಯಿತಂತೆ. ಮಗುವನ್ನು ಬಾರೆಕಾಯಿ ಮುಚ್ಚುವ ಬಟ್ಟೆಯಲ್ಲಿ ಸುತ್ತಿಕೊಂಡು, ಬಾರೆಕಾಯಿಯ ಬುಟ್ಟಿಯಲ್ಲೇ ಇಟ್ಟುಕೊಂಡು ಬಂದಳಂತೆ. ತಾಂಡೆಯ ಹೆಂಗಸರೆಲ್ಲಾ ಗುಂಪು ಗುಂಪಾಗಿ ಬಂದು ನೋಡಿ ಹೋಗುತ್ತಿದ್ದರಂತೆ. ಮಂದಿ ಎಲ್ಲಾ ಬರುವುದನ್ನು ನೋಡಿ ಆಕೆಯ ಗಂಡ ತಾರು ಬುಡ್ಡನಿಗೆ ಸಿಟ್ಟು ಬಂದು ಬೈದು ಕಳುಹಿಸುತ್ತಿದ್ದನಂತೆ. ಹುಟ್ಟಿದ ಮಗು ಹೆಣ್ಣಾಗಿತ್ತಂತೆ. ಬಜಾರದಲ್ಲಿ ಹುಟ್ಟಿದಕ್ಕೆ ಆ ಮಗುವಿನ ಹೆಸರು ಬಜಾರಿ ಅಂತ ಇಟ್ಟರಂತೆ.

ಈ ಬಜಾರಿಯೂ, ನಾವೂ ಒಟ್ಟಿಗೆ ಆಡುತ್ತಿದ್ದೆವು. ಈ ಬಜಾರಿಗೆ ಕಿವಿ ಕೇಳಿಸುತ್ತಿರಲಿಲ್ಲ. ಈಗ ಮದುವೆಯಾಗಿ ಗಂಡುಮಗುವಿಗಾಗಿ ಕಾದು ಹತ್ತು ಹೆಣ್ಣು ಹೆತ್ತು ಹನ್ನೊಂದನೆಯದು ಗಂಡುಹುಟ್ಟಿದೆ ಅಂತ ನಾನು ಈ ಬಾರಿ ತಾಂಡಾಕ್ಕೆ ಹೋದಾಗ ತಾರುಬುಡ್ಡ ಹೇಳುತ್ತಿದ್ದ. ತಾಂಡಾದಲ್ಲಿ ಮಕ್ಕಳಾಗದವರ, ಕಿವಿ ಕೇಳದವರ ಸಮಸ್ಯೆಗಳಿಗೆಲ್ಲ ಏನು ಮಾಡುವುದೆಂದು ಜನ ಪೂಜಾರಿಗೆ ಕೇಳುತ್ತಿದ್ದರು. ಪೂಜಾರಿ ಪರಿಹಾರಕ್ಕಾಗಿ ದೇವರಿಗೆ ಅಮವಾಸ್ಯೆಗೊಂದು ತೆಂಗಿನ ಕಾಯಿ ಒಡೆಯಲಿಕ್ಕೆ ಹೇಳುತ್ತಿದ್ದ. ಈ ಪೂಜಾರಿಗೆ ಬೆಳಗೆ ಏಳಕ್ಕೆ, ಮತ್ತೆ ಸಂಜೆ ಏಳಕ್ಕೊಮ್ಮೆ ತಾಂಡೆಯ ಗುಡಿಯಲ್ಲಿ ಸ್ವಲ್ಪ ನೀರು ಚಿಮುಕಿಸಿ, ಹೊಸ್ತಿಲಿಗೆ ಕುಂಕುಮ ಬಳಿದು, ನಗಾರಿ ಬಾರಿಸುವ ಕೆಲಸ. ನಮ್ಮ ಗುಡಿ, ಪೂಜೆ, ಭೂತ ಬಿಡಿಸುವುದು, ಜ್ಯೊತಿಷ್ಯ ನುಡಿಯೋದು, ಜಾತ್ರೆ…. ಎಲ್ಲ ಬಹಳ ರಸಭರಿತ.

ಲಂಬಾಣಿ ತಾಂಡಾದಲ್ಲಿ ಲಿಂಗಾಯಿತರ ಕಾಸವ್ವ

ಲಂಬಾಣಿ ತಾಂಡಾದಲ್ಲಿ  ಒತ್ತೊತ್ತಾಗಿ  ಸುಮಾರು ನೂರಿನ್ನೂರು ಮನೆಗಳು. ನಡುವೆ ಬೇಲಿಯಿಲ್ಲ. ಗೇಟಿಲ್ಲ. ಎಲ್ಲರೂ ಎಲ್ಲರ ಜೊತೆ ಮಾತಾಡ್ತಾ  ಜಗಳವಾಡುತ್ತಾ ಬದುಕುತ್ತಿರುತ್ತೇವೆ. ಬೆಳ್ಳಂಬೆಳಗ್ಗೆ ಎಲ್ಲಾ ಮನೆಗಳಿಂದ  ಹೆಂಗಸರು ರೊಟ್ಟಿ ತಟ್ಟುವ ಸದ್ದು ಕೇಳಿಸುವುದು. ಮುಂದಿನ, ಹಿಂದಿನ, ಎಡದ, ಬಲದ ನಾಲ್ಕೂ ದಿಕ್ಕುಗಳ ಮನೆಗಳಿಂದ ರೊಟ್ಟಿ ಬಡಿಯುವ ಸದ್ದು ಗೋಡೆಗಳನ್ನು ದಾಟಿ, ನೆಲದಲ್ಲಿ ಹಾದು ನನ್ನ ಕಿವಿಗೆ ಬಿದ್ದು ಎಬ್ಬಿಸುತ್ತಿತ್ತು.

ಸುಮಾರು ಅದೇ ಸಮಯಕ್ಕೆ ತಾಂಡೆಯ ಪೂಜಾರಪ್ಪನೂ ನಗಾರಿ ಬಾರಿಸುತ್ತಿದ್ದ. ಮನೆಯ ಮುಂದಿನ ಕಟ್ಟೆಯಲ್ಲಿ  ಹರಟೆ ಹೊಡೆಯುತ್ತ  ಚಳಿ ಕಾಯಿಸುತ್ತಾ ಕೂತ ಗಂಡಸರು ಆ ನಗಾರಿ ಸದ್ದಿಗೆ ಮುಖದಲ್ಲಿ ಭಕ್ತಿ ತಂದುಕೊಂಡು ಕೂತಲ್ಲೇ ಬಗ್ಗಿ ನಮಸ್ಕರಿಸುತ್ತಿದ್ದರು. ಪೂಜಾರಪ್ಪ ತಾಂಡೆಗೆ ಬಹಳ ಬೇಕಾದ ಮನುಷ್ಯ. ಕುಳ್ಳಗೆ, ಸಣ್ಣ ಜುಟ್ಟು ಬಿಟ್ಟು, ತಲೆ ಮೈಗೆಲ್ಲ ಎಣ್ಣೆ ತಿಕ್ಕಿ ಮನೆ ಮುಂದಿನ ಚಪ್ಪಡಿ ಮೇಲೆ ನಿಂತು ಸ್ನಾನ ಮಾಡಿ ಗುಡಿಗೆ ಹೋಗ್ತಿದ್ದ. ದುರ್ಗಾಗುಡಿ ಅಂತ ಕರೆದರೂ ದೇವಿಯ ವಿಗ್ರಹವೇನೂ ಅಲ್ಲಿರಲಿಲ್ಲ. ಒಳಗೊಂದು ಹಗ್ಗ ನೇಯ್ದು ಮಾಡಿದ ಕವಡೆ ಪೋಣಿಸಿದ ಹಿಡಿಯಿರುವ ಚಾಟಿ. ಜೊತೆಗೊಂದು ಕೋಲು. ಗುಡಿಯ ಮುಂದೆ ಹುಗಿದಿಟ್ಟ ತ್ರಿಕೋನಾಕಾರದ ಬಿಳಿಯ ಬಾವುಟ ಕಟ್ಟಿದ ತುಂಬಾ ಉದ್ದದ ಬಿದಿರಿನ ಗಳ. ಈ ಪೂಜಾರಪ್ಪ ಗುಡಿಯ ಮುಂದೆ ನೀರು ಚಿಮುಕಿಸಿ, ಹೊಸ್ತಿಲಿಗೂ ಹಣೆಗೂ ಕುಂಕುಮ ಬಳಿದು ನಗಾರಿ ಹೊಡೆದರೆ ಪೂಜೆ ಮುಗಿಯಿತು.

ಸಂಜೆಯ ನಗಾರಿ ಕೇಳಿದ ಮಂದಿಗೆ ಸದ್ದಿನೊಂದಿಗೆ ತಮ್ಮ ಕಷ್ಟಗಳೂ ನೆನಪಾಗಿ ಪೂಜಾರಿಯ ಕಡೆ ನಡೆಯುತ್ತಿದ್ದರು. ಪೂಜಾರಪ್ಪ ಸಣ್ಣ ಪುಟ್ಟದಕ್ಕೆಲ್ಲ ತೆಂಗಿನಕಾಯಿ ಒಡೆಯಲು ಹೇಳ್ತಿದ್ದ.  ಕಷ್ಟಗಳು ದೊಡ್ದದಾಗಿದ್ದರೆ ಹಿರಿಯರೂ ಭಜನೆಯವರೂ ಸೇರಿ ಅದನ್ನು ಬಿಡಿಸುತ್ತಿದ್ದರು. ಭಜನೆಯವರು ನಗಾರಿಯನ್ನೂ ತಾಮ್ರದ ಗಂಗಾಳವನ್ನೂ ಬಡಿದು ತುಳಜಾಪುರದ ಜಗದಂಬೆಯ ಹಾಡು ಹೇಳಿ ಪೂಜಾರಿಯನ್ನು ಉದ್ರೇಕಿಸುತ್ತಿದ್ದರು. ಆತನಿಗೆ ಮೈಯೆಲ್ಲಾ ಕಂಪಿಸಲು ಶುರುವಾಗುತ್ತಿತ್ತು. ಆತ ತಾನೂ ಒ೦ದು ಗಂಗಾಳ ತಗೊಂಡು ಬಾರಿಸುತ್ತಾ ಹಾಡಲು ತೊಡಗುತ್ತಿದ್ದ. ಹಿರಿಯರು ಪೂಜಾರಿಯನ್ನು ಯಾಡೀ.. (ಅಮ್ಮಾ) ಅಂತ ಕರೆದು ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಪೂಜಾರಪ್ಪ ಹಾಡುತ್ತ ಜಗದಂಬೆ ಆತನ ಮೈಮೇಲೆ ಬಂದು, ಆತ ಕೈಯೆತ್ತಿ ಸನ್ನೆ ಮಾಡಿ, ಭಜನೆ ನಿಲ್ಲಿಸಿ ಕಷ್ಟಗಳಿಗೆ  ಪರಿಹಾರ ಹೇಳುತ್ತಿದ್ದ. ಅವನು ಕುತ್ತಿಗೆಯನ್ನು  ಒಂದೇ ಸಮನೆ ಅಲುಗಾಡಿಸುತ್ತ ಮಾತಾಡುತ್ತಿದ್ದ. ಅಷ್ಟರಲ್ಲಿ ತಾಂಡೆಯ ಗಂಡಸರೂ ಮಕ್ಕಳೂ ಅಲ್ಲಿ ತುಂಬಿಕೊಂಡಿರುತ್ತಿದ್ದರು.

ಮೈಯಿಂದ ಜಗದಂಬೆ ಹೊರಟು ಹೋಗುವಾಗ ಪೂಜಾರಪ್ಪ ನಡುಗುವುದನ್ನು ನಿಧಾನವಾಗಿ ನಿಲ್ಲಿಸುತ್ತಿದ್ದ. ಜಿತ್ ಜಿತ್ ಎಂದು ಹೇಳುತ್ತಾ ಕುಂತಲ್ಲೆ ಹಿಂದಕ್ಕೆ ಬೀಳುತ್ತಿದ್ದ. ಅವನನ್ನು ಹಿಡಿಯಲು ತಾಂಡಾದಲ್ಲೇ ಗಟ್ಟಿಮುಟ್ಟಾಗಿದ್ದ ನಾರಾಯಣ ಚವ್ಹಾಣ್ ಕೂತಿರುತ್ತಿದ್ದ. ಒಮ್ಮೆ ನಾರಾಯಣ ಚವ್ಹಾಣ್ ಇಲ್ಲದ ದಿನ ಪೂಜಾರಪ್ಪನನ್ನು ಹಿಡಿಯಲು ನನಗಿಂತ ದೊಡ್ಡವನಾಗಿದ್ದ ಬಾಬಿಯಾ ಕೂತ. ಬಾಬಿಯಾ ಮಹಾ ಖಿಲಾಡಿ. ಪೂಜಾರಪ್ಪ ಅವನನ್ನು ಕಂಡಾಗೆಲ್ಲಾ ಬೈಯುತ್ತಿದ್ದ. ಆ ಸಿಟ್ಟಿಗೆ ಪೂಜಾರಿ ಬೀಳುವ ಸಮಯಕ್ಕೆ ಸರಿಯಾಗಿ ಸರಿದು ಬಿಟ್ಟ. ಪೂಜಾರಪ್ಪ ಗೊಡೆಯ ಮೇಲೆ ಬಿದ್ದ. ದೊಡ್ಡವರೆಲ್ಲಾ ಬಾಬಿಯಾನನ್ನು ಅಲ್ಲಿಂದ ಓಡಿಸಿಬಿಟ್ಟರು.

ನಾನು ಹುಟ್ಟಿ ಬೆಳೆದ ರಾಮತೀರ್ಥ ತಾಂಡಾದಲ್ಲಿ ಒಬ್ಬಳು ಲಿಂಗಾಯಿತರ ಹೆ೦ಗಸೂ ಇದ್ದಳು. ಕಾಸವ್ವ ಅಂತ. ಅದು ಹೇಗೆ ಅವಳು ಇಲ್ಲಿಗೆ ಬಂದಳೋ ನನಗೆ ಈಗಲೂ ಅರ್ಥವಾಗಿಲ್ಲ. ಕಾಸವ್ವ ಅಥರ್ಗಾದವಳಂತೆ. ಅವಳ ಗಂಡ ಸತ್ತ ಮೇಲೆ ಗಂಡನ ಮನೆಯವರು, ತವರು ಮನೆಯವರು ಹೊರಗೆ ಹಾಕಿದರಂತೆ. ಕೂಲಿ ಮಾಡ್ಲಿಕ್ಕೆ ತಾಂಡಾದ ಹತ್ತಿರವೇ ಇದ್ದ ಲೋಣಿಯವರ ಹೊಲಕ್ಕೆ ಬರ್ತಿದ್ದಳು. ಹೀಗೆ ಬಂದು ಹೊಲದಲ್ಲಿ ಲಿಂಬೆ ಹೆಕ್ಕುತ್ತಿದ್ದಳಂತೆ. ಮತ್ತೆ ಮನೆಗೆ ಹೋಗಲು ದೂರ ಅನಿಸಲು ತೊಡಗಿ, ತಾಂಡಾದ ಖಾಲಿ ಇದ್ದ ಗುಡಿಸಲಲ್ಲಿ ಇರಲು ತೊಡಗಿ ತಾಂಡಾದವಳೇ ಆದಳಂತೆ. ನಮ್ಮ ಗೋರಮಾಟಿ (ಲಂಬಾಣಿ) ಭಾಷೆಯನ್ನು ಕಲಿತು ಮಾತಾಡ್ತಿದ್ದಳು.

ಕಾಸವ್ವ ವಯಸ್ಸಾಗಿ ಲಿಂಬೆ ಹೆಕ್ಕಲಿಕ್ಕೆ ಆಗದಾಗ ಮನೆಯಲ್ಲೆ ಗೂಡಂಗಡಿ ಹಾಕಿಕೊಂಡು ಇದ್ದಳು. ಪೆಪ್ಪರಮಿಂಟು, ಬೆಂಕಿ ಪೆಟ್ಟಿಗೆ, ಎಲೆ ಅಡಿಕೆ, ಬೆಲ್ಲ ಇಟ್ಟುಕೊಂಡಿದ್ದಳು. ಕಡಲೆ  ಹಿಟ್ಟಿನಿಂದ ಖಾರಸೇವಾ ಮಾಡಿ ಮಾರುತ್ತಿದ್ದಳು. ಗಂಡಸರಿಗೆ ಸಂಜೆ ದಾರುವಿನ ಜೊತೆ ಖಾರಸೇವಾ ಬೇಕೇ ಬೇಕಿತ್ತು. ಈ ಕಾಸವ್ವನನ್ನೂ ತಾಂಡೆಯ ಹೆಂಗಸರಂತೆ ಕಾಸಿಬಾಯಿ ಅಂತಲೇ ಕರೆಯುತ್ತಿದ್ದರು. ಇವಳು ವಿಭೂತಿ ಬಳಿದುಕೊಂಡು ದೊಡ್ಡದೊಂದು ಲಿಂಗವನ್ನು ನೇತಾಡಿಸಿಕೊಂಡು ಅಂಗಡಿಯ ಮುಂದೆ ಕೂರುತ್ತಿದ್ದಳು. ನಾವು ಅವಳ ಮನೆಯ ಮುಂದೆ ಮೊಟ್ಟೆಸಿಪ್ಪೆ, ಮೀನು ಮುಳ್ಳು ಹಾಕಿ ಕಾಡಿಸುತ್ತಿದ್ದೆವು.‘ನಾಳೆಯಿಂದ ನಿನ್ನ ಅಂಗಡಿಯಲ್ಲಿ ಖಾರ ಮಾಳಿ (ಒಣ ಮೀನು ) ತಂದಿಡು’ ಅಂತ ಹೇಳಿ ಓಡುತ್ತಿದ್ದೆವು. ಅವಳು ಯಾವಗಲೂ ಬೈತಾ ಗೊಣಗ್ತಾ ಏನೂ ತಿನ್ನದೆ ಇರುತ್ತಿದ್ದಳು. ತಾಂಡೆಯವರು ಅವಳಿಗೆ ಭೂತ ಮೆಟ್ಟಿದೆಯೆಂದು ಪೂಜಾರಪ್ಪನಲ್ಲಿ ಕರೆತಂದಿದ್ದರು. ಪೂಜಾರಪ್ಪನಿಗೆ ಜಗದಂಬೆಯನ್ನು ಬರಿಸಿ ಆಮೇಲೆ ಪೂಜಾರಪ್ಪ ಅವಳ ಭೂತ ಬಿಡಿಸಿದ್ದ. ಭೂತ ಹೋದರೂ ಕಾಸವ್ವ ತೀರಿಕೊಂಡಳು. ಅವಳ ಕಡೆಯವರು ಒಬ್ಬರೂ ಬರಲಿಲ್ಲ. ತಾಂಡೆಯವರೇ ನಮ್ಮ ಕ್ರಮದಂತೆ ಅವಳನ್ನು ಸುಟ್ಟಿದ್ದೆವು.

ಬದಲಿಬಾಯಿಯ ಎರಡು ಗೊಂಬೆಗಳು

ನನ್ನಜ್ಜ ಗಂಗಾರಾಮ್ ಚವ್ಹಾಣ್‌ಗೆ ಇಬ್ಬರು ಸೊಸೆಯಂದಿರು. ನನ್ನಮ್ಮ ಸೋನಾಬಾಯಿ ಮತ್ತು ಸೀತ ಕಾಕಿ. ಆತ ಅವರಿಬ್ಬರನ್ನು ಕರೆದು ಕೂರಿಸಿ, ಬೆಳಗಿನ ರೂಟ್ಟಿ ಹಿರಿಸೊಸಿ ತಟ್ಟಬೇಕು. ಅದು ಬೆಳಗ್ಗೆ ಮತ್ತು ಮಧ್ಯಾಹ್ನಕ್ಕೆ ಮನೆಯ ಎಲ್ಲರಿಗೆ ಸಾಕಾಗುವಷ್ಟು ಇರಬೇಕು. ಜೊತೆಗೆ  ತರಕಾರಿಯ ಗಟ್ಟಿ ಪಲ್ಯ ಮತ್ತೆ ಬೇಳೆ ಸಾರೂ ಮಾಡಿಡಬೇಕು. ಸಣ್ಣಾಕೆ ರಾತ್ರಿಗೆ ಬೇಕಾದ ರೊಟ್ಟಿ ತಟ್ಟಬೇಕು ಅಂತ  ತಾಕೀತು ಮಾಡಿದ್ದ. ನನ್ನಮ್ಮ ಸೋನಾಬಾಯಿ ಹಿರಿಯ ಸೊಸೆ. ಹಿರಿಯಾಕೆ ಸಹಜವಾಗಿ ಜಾಸ್ತಿ ಕೆಲಸ ಮಾಡಬೇಕು ಅಂತ ಒತ್ತಿ ಹೇಳಿದ್ದ. ಜೊತೆಗೆ ತಮ್ಮ ತಮ್ಮ ರೊಟ್ಟಿ ಕಾಯಿಸಲು ಬೇಕಾಗುವಷ್ಟು ಕಟ್ಟಿಗೆಯನ್ನೂ ತಾವೇ ಒಟ್ಟು ಮಾಡಬೇಕು ಅಂತ ಆರ್ಡರೂ ಮಾಡಿದ್ದ.

ನನ್ನಪ್ಪ ಆಗಲೂ ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ. ಆತ ದುಡ್ಡು ಕೊಟ್ಟು ಕಟ್ಟಿಗೆ ತಂದರೆ ಹಿರಿಮಗನ ಗಳಿಕೆ ಅಂತ ಎಲ್ಲರು ರೊಟ್ಟಿ ಕಾಯಿಸಲು, ಸ್ನಾನಕ್ಕೆ ನೀರು ಕಾಯಿಸಲು ಬಳಸಿ ಕಟ್ಟಿಗೆ ಖಾಲಿಯಾಗುತ್ತಿತ್ತು. ಹೆಂಡತಿ ಸೀತ ಕಾಕಿಗೆ ಬೇಕಾದ ಕಟ್ಟಿಗೆಯನ್ನು ನನ್ನ ಚಿಕ್ಕಪ್ಪ ಹೊಲದಿಂದ ಬರ್ತಾ ತಂದು ಒಡ್ಡುತ್ತಿದ್ದ. ಸೀತ ಕಾಕಿ ತನ್ನ ಕಟ್ಟಿಗೆಯನ್ನು ಕಾವಲು ಕಾಯ್ದು ನನ್ನಮ್ಮನಿಗೆ ಮುಟ್ಟಲೂ ಬಿಡ್ತಿರಲಿಲ್ಲ ಎಂದು ಅಮ್ಮ ಅಳ್ತಿದ್ದಳು. ಕಟ್ಟಿಗೆ ತರಲು ನನ್ನನ್ನು ದಬ್ಬಿಕೊಂಡೇ ಹೋಗ್ತಿದ್ದಳು. ಅಮ್ಮನೂ ನಾನು ನಮ್ಮ ಹೊಲಕ್ಕೆ ಅಮ್ಮನ ಪಾಲಿನ ಕಟ್ಟಿಗೆ ತರಲಿಕ್ಕೆ ಹೋಗ್ತಿದ್ದೆವು. ನಾನು ಜಾಲಿ ಮರದ ಮುಳ್ಳು ಕಡ್ಡಿ, ಒಣಗಿದ ಸೆಗಣಿಯನ್ನು ಹೆಕ್ಕಿ ಬುಟ್ಟಿಯಲ್ಲಿ ತುಂಬ್ತಿದ್ದೆ. ನನ್ನಮ್ಮನಿಗೆ ಸೀತ ಕಾಕಿಗಿಂತ ಹೆಚ್ಚು ಕಟ್ಟಿಗೆ ಸೇರಿಸಿಕೊಡಬೇಕೆಂದು ನನಗೆ ಆಸೆಯಾಗುತ್ತಿತ್ತು.

ಒಂದು ದಿನ ಹೀಗೆ ಕಟ್ಟಿಗೆ ಆಯ್ದು ನಮ್ಮ ಹೊಲದ ಮೆಟಗಿಯಲ್ಲಿ ಕೂತಾಗ ಗುಡ್ಡದ ಮೇಲಿಂದ ಬದಲಿಬಾಯಿ ಗೋಳಾಡುವ ಸದ್ದು ಕೇಳುತ್ತಿತ್ತು. ನನ್ನಮ್ಮ ಬದಲಿಬಾಯಿಯ ಕತೆಯನ್ನು ಹೇಳಿದಾಗ ನಾನು ಭಯದಿಂದ ನಡುಗಿದ್ದೆ. ಬದಲಿಬಾಯಿಗೆ ಒಮ್ಮೊಮ್ಮೆ ಏನೋ ಆಗುತ್ತದಂತೆ. ಅವಳ ಮುಂದೆ ಮೇಲಿನಿಂದ ಎರಡು ಗೊಂಬೆಗಳು ಹಗ್ಗದಲ್ಲಿ ಇಳಿದು ಬಂದು, ನರ್ತಿಸುತ್ತಾ ಹಿಂದೆ ಮುಂದೆಲ್ಲ ಸುತ್ತುತ್ತದಂತೆ. ಆಮೇಲೆ ಒಬ್ಬರಿಗೊಬ್ಬರು ಹೊಡೆದಾಡುತ್ತವಂತೆ. ಅಷ್ಟರಲ್ಲಿ ಹಗ್ಗ ಬದಲಿಬಾಯಿಯ ಮುಖ, ಮೈಕೈಯನ್ನೆಲ್ಲ ಸುತ್ತಿ ಉಸಿರು ಬಿಗಿದು, ಉಬ್ಬಸವಾಗಿ ಚೀರಿ ಚೀರಿ ಅಳುತ್ತಾಳಂತೆ.

ಆಕೆಯ ಗಂಡ ಮಕ್ಕಳು ಕುಡುಗೋಲಿಂದ ಹಗ್ಗವನ್ನೆಲ್ಲ ಕತ್ತರಿಸಿ ಹಾಕಿ ಆಕೆಯನ್ನು ಉಳಿಸುತ್ತಾರಂತೆ. ಅಷ್ಟರಲ್ಲಿ ಅವಳ ಮೈಯೆಲ್ಲಾ ರಕ್ತಸಿಕ್ತವಾಗಿ ಆ ಎರಡು ಗೊಂಬೆಗಳು ಕೆಳಗೆ ಬೀಳುತ್ತವಂತೆ. ಇವತ್ತು ಹಾಗೆಯೇ ಆಗಿರಬೇಕು ಅಂತ ಅಮ್ಮ ನನ್ನನ್ನು ಎಬ್ಬಿಸಿ ಮನೆಗೆ ಕರೆತಂದಿದ್ದಳು. ಈ ಬದಲಿಬಾಯಿ ಹೋಳಿ ಹಬ್ಬ ಮತ್ತು ದೀಪಾವಳಿಗೆ ತಾಂಡಾದ ಆಕೆಯ ಮನೆಗೆ ಬರುತ್ತಿದ್ದಳು. ಎರಡು ದಿನ ಮೊದಲೆ ಬಂದು ಹಬ್ಬದ ತಯಾರಿ ಮಾಡುತ್ತಿದ್ದಳು. ನಮ್ಮ ಮನೆಯ ಹಿಂದಿನ ಕಿಟಕಿಯಲ್ಲಿ ಇಣಿಕಿದರೆ ಬದಲಿಬಾಯಿಯ ಮನೆ ಕಾಣುತ್ತಿತ್ತು. ಅವಳಿಗೆ ಅಮವಾಸೆ ಹತ್ರ ಬಂದಾಗ ಹೀಗೆಲ್ಲಾ ಆಗ್ತಿತ್ತಂತೆ. ಇಷ್ಟು ಮಾತ್ರ ಅಲ್ಲ, ಅವಳು ಹಬ್ಬದ ಮುಂಚಿನ ದಿನ ಗಾಳಿಯಲ್ಲಿ ಕೈಯಾಡ್ಸಿ ತೇಲ ಆಜೋ,.. ದಾಲ ಆಜೋ … ಗೋಳ ಆಜೋ ..(ಎಣ್ಣೆ ಬಾ… ಬೇಳೆ ಬಾ.. ಬೆಲ್ಲ ಬಾ..) ಅಂತ ಕೂಗುತ್ತಿದ್ದಳು. ಆಗ ಅವಳು ಕೇಳಿದೆಲ್ಲಾ ಒಂದೊಂದೆ ಅವಳ ಕೈಗೆ ಬರುತ್ತಿತ್ತಂತೆ. ಅದನ್ನೆಲ್ಲಾ ಅವಳು ಪಕ್ಕದಲ್ಲಿ ಕಾಯುತ್ತಿದ್ದ ಗಂಡ ಮತ್ತು ಮಕ್ಕಳ ಕೈಗೆ ಕೊಡುತ್ತಿದ್ದಳಂತೆ. ಅವರು ಇದರಲ್ಲೇ ಹೋಳಿಗೆ ಮಾಡಿ ಹಬ್ಬ ಮಾಡ್ತಾರಂತೆ. ಸ೦ತೆಯಿಂದ ಏನೂ ತರುವುದಿಲ್ಲಂತೆ.

ನಾನು ಒಮ್ಮೆಯಾದರೂ ಬದಲಿಬಾಯಿಯನ್ನು ಗೊಂಬೆಗಳು ಸುತ್ತು ಹಾಕುವುದನ್ನೂ ಮತ್ತು ಗಾಳಿಯಿಂದ ಹಬ್ಬದ ಸಾಮಾನು ತೆಗೆವುದನ್ನು ನೋಡಲೇಬೇಕೆಂದು ಆಗಾಗ ಕಿಟಕಿಯಿಂದ ಇಣುಕುತ್ತಿದ್ದೆ. ಆದರೆ ಒಂದು ಸಾರಿಯೂ ನೋಡಲು ಆಗಲಿಲ್ಲ. ಒಂದು ಸಲ ಮಾತ್ರ ಬದಲಿಬಾಯಿಗೆ  ಭೂತ ಬಹಳ ಕಾಡಿಸಿದಾಗ ಮನೆಯವರು ಪೂಜಾರಪ್ಪನಲ್ಲಿ ತಂದಿದ್ದರು. ಪೂಜಾರಪ್ಪನಿಗೂ ಜಗದಂಬೆ ಬಂದಿತ್ತು. ಇಬ್ಬರೂ ನಡುಗುತ್ತಿದ್ದರು. ಭಜನೆ ನಗಾರಿ ಎಲ್ಲವೂ ನಡೆದಿತ್ತು. ಬದಲಿಯ ತೋಳನ್ನು ಇಬ್ಬರು ಗಂಡಸರು ಗಟ್ಟಿಯಾಗಿ ಹಿಡಿದಿದ್ದರು. ಆದರೂ ಅವಳು ತೋಳುಗಳ  ಬೆಳ್ಳನೆಯ ಪ್ಲಾಸ್ಟಿಕ್ಕಿನ ಚೂಡಿಗಳನ್ನು ಗಲ ಗಲ ಆಡಿಸುತ್ತಾ ಎರಡೂ ಕೈಗಳನ್ನು ಸೇರಿಸಿ ಮುಷ್ಟಿಮಾಡಿ ಒಂದಿಷ್ಟು ನಾಣ್ಯಗಳನ್ನು ಪೂಜಾರಪ್ಪನ ಮುಖಕ್ಕೆ ಎಸೆದಿದ್ದಳು. ಅವಳು ಎರಡು ಸಾರಿ ಎಸೆದಾಗ ಪೂಜಾರಿಯ ನಡುಕ ನಿಂತೇ ಬಿಟ್ಟಿತ್ತು. ಒಂದೊಂದೆ ನಾಣ್ಯಗಳನ್ನು ಎತ್ತಿ ಮುಟ್ಟಿ ಮುಟ್ಟಿ ಕಣ್ಣಿಗೊತ್ತಿಕೊಂಡಿದ್ದ. ಪೂಜಾರಪ್ಪನ ಮೈಮೇಲಿದ್ದ ದೇವಿ ಹಾಗೇ ಹೊರಟು ಹೋಗಿದ್ದಳು. ಆತನೇ ಬದಲಿಬಾಯಿಗೆ ಕೈ ಮುಗಿದು ಇವಳ ಮೈಯಲ್ಲಿರುವುದು ಭೂತವಲ್ಲ ಇವಳೇ ಯಾಡಿ (ತಾಯಿ) ಅಂತ ಅಡ್ಡ ಬಿದ್ದಿದ್ದ.

ನಮ್ಮಜ್ಜ ಗಂಗಾರಾಮ್ ನನ್ನಮ್ಮ ಸೋನಾಬಾಯಿಗೆ ಬಡವರ ಮನೆ ಹೆಣ್ಣು ಅಂತ ಜಾಸ್ತಿ ಕಷ್ಟ ಕೊಡುತ್ತಿದ್ದ. ಅಮ್ಮ ಅಳುತ್ತಿದ್ದಳು. ಹಬ್ಬಕ್ಕೆ ಮತ್ತು ದೇವರ ಕುರಿ ಮಾಡುವಾಗಲೆಲ್ಲ ನನ್ನ ಮಾಮಾ ಖೀರು ಮಾಸ್ತರ ತಂಗಿ ಮತ್ತು ಮಕ್ಕಳಾದ ನಮ್ಮನ್ನು ತವರಿಗೆ ಕರೆಯಲು ಬರುತ್ತಿದ್ದ. ನಮ್ಮ ಅಜ್ಜ ಬಹಳ ಸತಾಯಿಸುತ್ತಿದ್ದ. ಯಾಕ ಬಂದೀರೀ.. ತಂಗೀನ ಮಾತ್ರ ಕರೀತೀರೇನು? ನಾವು ಬರೋದು ಬ್ಯಾಡೇನು, ನಿಮ್ಮನೆಯಲ್ಲೇನೈತಿ ಹಬ್ಬ ಮಾಡ್ಲಿಕ್ಕೆ. ಇಲ್ಲೆ ಇದ್ದು ಬಿಡ್ರಲ ಅಂತ ಏನೇನೋ ಕೂಗಾಡುತ್ತಿದ್ದ.  ನಿಂತಲ್ಲಿ ನಿಲ್ಲಲಾಗದೆ  ಮಾಮನ ಊರಾದ ಕುಮಟಿಗಿಗೆ ಹೋಗ್ಲಿಕ್ಕೆ ಅಜ್ಜನ ಅನುಮತಿಗೆ ಕಾಯ್ತಿದ್ದೆವು. ನನ್ನ ಮಾಮಾ ಖೀರು ಮಾಸ್ತರನ ಕತೆ ಇನ್ನೂ ಚೆನ್ನಾಗಿದೆ. ಅದು ಮುಂದಿನ ಸಾರಿ.

ಹೆಂಗಸರ ಅಳುವೂ, ಹೋತದ ಬಲಿಯೂ

(ಚಿತ್ರಗಳು: ಅಬ್ದುಲ್ ರಶೀದ್)

ಕುಮಟಿಗೆಯಲ್ಲಿ ಮಾಸ್ತರಾಗಿದ್ದ ನನ್ನ ಮಾಮ ಖೀರು ರಾಥೋಡ ಒಂದು ರವಿವಾರ ವಿಜಾಪುರ ಸಂತೆಯಲ್ಲಿ ಸಾಮಾನು ಖರೀದಿಸಿ, ಹಿರಿಮಗನ ಕೈಯಲ್ಲಿ ಒಪ್ಪಿಸಿ, ಅವನನ್ನು ಕೆಂಪು ಬಸ್ಸಲ್ಲಿ ಕೂರಿಸಿ ಕುಮಟಿಗೆಗೆ ಕಳುಹಿಸಿ ತಂಗಿ ಮತ್ತು ಅವಳ ಮಕ್ಕಳಾದ ನಮ್ಮನ್ನು ಕರೆದುಕೊಂಡು ಹೋಗಲು ಸಂಜೆಯ ಹೊತ್ತಿಗೆ ರಾಮತೀರ್ಥ ತಾಂಡೆಗೆ ಬಂದ. ವರ್ಷಕ್ಕೊಮ್ಮೆ ಪದ್ಧತಿಯಂತೆ ಮನೆ ಮನೆ ಜಾತ್ರೆಗೆ ಹೋತದ ಬಲಿ ಕೊಡುವಾಗ ಲಗ್ನ ಮಾಡಿಕೊಟ್ಟ ಅಕ್ಕ ತಂಗಿಯರನ್ನು ಕರೆದು ಊಟ ಹಾಕುವುದು ಪದ್ಧತಿಯಾಗಿತ್ತು. ಪ್ರತಿ ಬಾರಿ ಖೀರು ಮಾಮ ಹೀಗೆ ಬರುವಾಗ ನನ್ನ ಅಮ್ಮ ಮಾಮನಿಗೆ ಕೈ ಕಾಲು ತೊಳಿಯಲಿಕ್ಕೆ ಒಂದು ತಂಬಿಗೆ ನೀರು ಕೊಡುತ್ತಿದ್ದಳು. ಮಾಮ ಬಂದು ಮನೆಯಲ್ಲಿ ಕೂತ ಮೇಲೆ ಅಮ್ಮ ಸೀರೆಯ ಸೆರಗು ಎಳೆದು ಮುಖ ಮುಚ್ಚಿ ಮಾಮನ ಕುತ್ತಿಗೆ ಹಿಡಿದು ದೊಡ್ಡ ಸ್ವರದಲ್ಲಿ ಅಳುತ್ತಿದ್ದಳು. ನನ್ನ ಪ್ರೀತಿಯ ಅಣ್ಣಾ, ಮನೆಬಿಟ್ಟು ಬಂದು ಇಷ್ಟು ವರುಷಗಳಾದರು ನನಗೆ ನಿಮ್ಮ ನೆನಪು ಬಹಳ ಬರುತ್ತದೆ. ನಿಮ್ಮದೇ ಕನಸು ಬೀಳುತ್ತದೆ ಎಂದು ರೋಧಿಸುತ್ತಿದ್ದಳು.

ಹೀಗೆ ಗಂಟೆಗಟ್ಟಳೆ ಅಳುವುದು ತಾಂಡೆಯಲ್ಲಿ ಒಂದು ಪದ್ದತಿಯೇ ಆಗಿತ್ತು. ನಮ್ಮ ಲಂಬಾಣಿಯರಲ್ಲಿ ಹುಡುಗಿಯರಿಗೆ ಮದುವೆಗೆ ಮೊದಲು ಅಳುವುದನ್ನು ಕಲಿಸುತ್ತಾರೆ. ಹೆಂಗಸರು ಬಂದ ತನ್ನ ಅಣ್ಣ ಅಥವಾ ತಂದೆ ತಾಯಿಯ ಕುತ್ತಿಗೆಯನ್ನು ಕೈಯಿಂದ ಬಳಸಿ ತನ್ನ ಮುಖವನ್ನು ಸೀರೆಯ ಸೆರಗಲ್ಲಿ ಮುಚ್ಚಿ ತನ್ನ ದು:ಖವನ್ನೆಲ್ಲಾ ಹಾಡಾಗಿಸಿ ರಾಗ ಎಳೆದು ಅಳಬೇಕು. ಗಂಡಸರು ಕೇಳಿ ಕಣ್ಣೀರು ಸುರಿಸಬೇಕು.

ಇಬ್ಬರೂ ಹೆಂಗಸರಾದರೆ ಒಬ್ಬಳ ನಂತರ ಇನ್ನೊಬ್ಬಳು ಸರದಿಯಲ್ಲಿ ಹಾಡ್ತಾ ಅಳ್ತಾ ಇರಬೇಕು. ಅಳು ಮುಗಿಯುತ್ತಾ ಬಂದಂತೆ ಸ್ವರ ನಿಧಾನವಾಗಿ, ಒಮ್ಮೆಲೆ ನಿಲ್ಲಿಸಿ, ಮೂಗು ಸೀಟಿ, ಅಳುವೇ ಇಲ್ಲದ ಸಹಜ ಸ್ವರದಲ್ಲಿ ಕಷ್ಟ ಸುಖ ವಿಚಾರಿಸಬೇಕು. ಆಗ ಬಂದಾತ ಅಥವಾ ಆಕೆಯನ್ನು ಇನ್ನೊಬ್ಬಳು ಸೆಳೆದುಕೊಂಡು ಅಳುತ್ತಾಳೆ. ಹೀಗೆ ನನ್ನ ಅಮ್ಮ ಸೋನುಬಾಯಿ ಅತ್ತು ಮುಗಿದಾಗ ತಾನೂ ಸುಖವಾಗಿಯೇನೂ ಇಲ್ಲ ಅಂತ ತೋರಿಸಲು ಸೀತಕಾಕಿಯೂ ಒಂದು ತಂಬಿಗೆ ನೀರು ತಂದಿಟ್ಟು ಹಾಗೆಯೇ ಅಳುತ್ತಿದ್ದಳು.

ತಾಂಡೆಯ ಎಲ್ಲ ಮನೆಯಲ್ಲೂ ಹತ್ತಿರದ ನೆಂಟರು ಬಂದಾಗ ಈ ರೀತಿ ಹೆಂಗಸರು ಅಳುವುದು ಸಾಮಾನ್ಯವಾಗಿತ್ತು. ನಾವು ಮಕ್ಕಳು ಮಾತ್ರ ಮಾಮ ತಂದ ಕೈ ಚೀಲವನ್ನೇ ನೋಡ್ತಾ ಹೆಂಗಸರ ಅಳು ನಿಲ್ಲುವುದನ್ನೇ ಕಾಯ್ತಿದ್ದೆವು. ಮಾಮ ಬರುವಾಗ ಒಂದು ಪ್ಯಾಕೇಟ ಬ್ರೆಡ್ ಮತ್ತು ಒಂದು ಡಜನ್ ಕ್ಯಾವಂಡಿಸ್ ಬಾಳೆ ಹಣ್ಣು ತರುತ್ತಿದ್ದ. ನನ್ನ ಅಜ್ಜಿ ಸೋಮ್ಲಿಬಾಯಿ ಮಾಮ ತಂದ ತಿಂಡಿಯನ್ನು ಮೊದಲು ತೆಗೆದಿಟ್ಟು, ನಾವು ಐದು ಮತ್ತು ಚಿಕ್ಕಪ್ಪನ ನಾಲ್ಕು ಮಕ್ಕಳಿಗೆ ಒಂದೊಂದು ಬಾಳೆ ಹಣ್ಣು ಹಂಚಿ ತಾನೆರಡು ತಿಂದು ಅಜ್ಜನಿಗೆ ಒಂದಿಟ್ಟು ಮುಗಿಯಿತು ಅಂತ ಹೇಳುತ್ತಿದ್ದಳು. ಅಮ್ಮನಿಗೆ ಏನೂ ಸಿಗುತ್ತಿರಲ್ಲಿಲ್ಲ. ಮಾಮ ನನ್ನ ಅಜ್ಜನ ಅನುಮತಿ ಪಡೆದು ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ. ನಾವು ಸ೦ಭ್ರಮದಿಂದ ಹೋಗುತ್ತಿದ್ದೆವು.

ಅಮ್ಮ ಬೆಳಗ್ಗೆ ಬೇಗ ಎದ್ದು ಅವಸರದಲ್ಲಿ ಎಲ್ಲಾ ಕೆಲಸ ಮುಗಿಸಿ ಹೊರಡಲು ತಯಾರಾಗುತ್ತಿದ್ದಳು. ಪ್ಲಾಸ್ಟಿಕ್ ವಾಯರಿನಿಂದ ಹೆಣೆದ ಬುಟ್ಟಿಯಂತೆ ಇರುವ ಬ್ಯಾಗಲ್ಲಿ ನಮ್ಮೆಲ್ಲರ ಬಟ್ಟೆ ತುಂಬಿ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಹೊಸ ಸೀರೆಯನ್ನು ಉಟ್ಟುಕೊಳ್ಳುತ್ತಿದ್ದಳು. ಅಮ್ಮ ಮೆತ್ತಗಿನ ದೊಡ್ಡ ದೊಡ್ಡ ಚಪಾತಿ ಮಾಡುತ್ತಿದ್ದಳು. ನೆನೆಸಿಟ್ಟ ಕಡಲೆ ಬೇಳೆಯ ಪಲ್ಲೆ ಮಾಡಿ ಬುತ್ತಿ ಕಟ್ಟಿಕೊಳ್ಳುತ್ತಿದ್ದಳು. ಸುಮಾರು ಐದು ಮೈಲಿ ದೂರದಷ್ಟು ನಡೆದುಕೊಂಡು ಮಿಂಚಿನಾಳ ಸ್ಟೇಷನ್‍ಗೆ ಹೋಗುತ್ತಿದ್ದೆವು. ಅಲ್ಲಿಂದ ವಿಜಾಪೂರಕ್ಕೆ ಟ್ರೈನಿನಲ್ಲಿ ಸುಮಾರು ಮಧ್ಯಾಹ್ನ ಒಂದು ಗಂಟೆಗೆ ತಲುಪುತ್ತಿದ್ದೆವು. ಮಾಮ ಒಂದಿಷ್ಟು ಮೆಣಸಿನಕಾಯಿಯ ಬಜ್ಜಿ ತರುತ್ತಿದ್ದ. ಬಸ್ ನಿಲ್ದಾಣದಲ್ಲಿ ಕೂತು ಊಟ ಮಾಡಿ, ಸಿಂದಗಿ ಕಡೆಗೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು. ಬಸ್ಸು ಬರುವಾಗ ಖೀರು ಮಾಮಾ ಓಡಿ ಬಸ್ಸಿನ ಕಿಟಕಿಯಿಂದ ತನ್ನ ಟೊಪ್ಪಿ ಇಟ್ಟು ಜಾಗ ಮಾಡಿಕೊಳ್ಳುತ್ತಿದ್ದ. ಕಂಡೆಕ್ಟರ್ ಟಿಕೇಟ್ ಮಾಡಿ ಬಸ್ ಹೊರಡಿಸಲಿಕ್ಕೆ ಮುಕ್ಕಾಲು ಗಂಟೆ ಕಾಯಿಸುತ್ತಿದ್ದ. ಸಂಜೆ ಮೂರು ಗಂಟೆಗೆ ಕುಮಟಿಗಿ ತಾಂಡೆಗೆ ತಲುಪುತ್ತಿದ್ದೆವು.

ಮಾಮನ ಮಕ್ಕಳು ನಮ್ಮ ದಾರಿಯನ್ನೇ ಕಾಯುತ್ತಿದ್ದರು. ಅಮ್ಮ ಮನೆಗೆ ತಲುಪಿದ ಕೂಡಲೆ ನಾನಾ, ನಾನಿ ಮತ್ತು ಮಾಮಿಯರ ಕುತ್ತಿಗೆಯನ್ನು ಹಿಡಿದು ಒಂದೊಂದು ಗಂಟೆ ಅಳುತ್ತಿದ್ದಳು. ಅವಳು ಅಳು ಮುಗಿಸುವವರೆಗೆ ನಮ್ಮನ್ನು ಕೇಳುವವರಿಲ್ಲ. ಮಾಮನದು ದೊಡ್ಡ ಸಂಸಾರ. ಇರಲು ಎರಡು ಗುಡಿಸಲುಗಳು ಮಾತ್ರ. ನನ್ನ ನಾನಾ(ಅಮ್ಮನ ತಂದೆ) ಕೇಸು ರಾಠೋಡ ತನ್ನ ಸಾಹಸದ ಕಥೆಗಳನ್ನು ಹೇಳ್ತಿದ್ದ. ಆತ ಒಂದು ಕುದುರೆ ಸಾಕಿದ್ದನಂತೆ. ಎಲ್ಲಿ ಹೋದರೂ ಅದರ ಮೇಲೆಯೇ ಸವಾರಿ ಮಾಡುತ್ತಿದ್ದನಂತೆ. ಮನೆಯಲ್ಲಿ ನಾಲ್ಕು ಎಮ್ಮೆಗಳಿದ್ದವು. ನನ್ನ ನಾನಿ(ಅಜ್ಜಿ) ಒಂದರ್ಧ ಮೈಲಿ ದೂರದ ಹೊಲಕ್ಕೆ ಈ ಎಮ್ಮೆಗಳನ್ನು ಮೇಯಿಸಲು ಹೋಗ್ತಿದ್ದಳು. ನಾವು ಬರುವ ದಿನ ಎಮ್ಮೆಗಳನ್ನು ಬೇಗನೆ ಕರೆತರುತ್ತಿದ್ದಳು.

ಆ ದಿನ ಬಲಿಯಾಗಲಿರುವ ಹೋತವನ್ನು ಮನೆಯ ಪಕ್ಕವೇ ಕಟ್ಟಿಹಾಕ್ತಿದ್ದರು. ನಾವು ಬೆಳಗ್ಗೆ ಹೋತವನ್ನು ಬಿಚ್ಚಿ ಹೊಲಕ್ಕೆ ಒಯ್ದು ಹೊಟ್ಟೆ ತುಂಬ ಮೇಯ್ಸಿ ತರ್ತಿದ್ದೆವು. ನಾನ ಚೂರಿ ಮಸೆಯುತ್ತಿದ್ದ. ಹೆಂಗಸರು ಅಂಗಳ ಸಾರಿಸಿ ಜೋಳದ ಹಿಟ್ಟಿನಿಂದ ವೃತ್ತ ಸುತ್ತಿ , ಜಗದಂಬೆಯ ಫೋಟೊ, ಅರಿಶಿಣ ಮತ್ತು ಬೇವಿನೆಲೆ ಹಾಕಿದ ನೀರಿನ ತಂಬಿಗೆ ಇಡುತ್ತಿದ್ದರು. ತಾಂಡೆಯ ನಾಯಕನನ್ನು ಕರೆದು, ಬಂದ ನೆಂಟರೆಲ್ಲ ಅಂಗಳದ ಸುತ್ತ ನಿಲ್ಲುತ್ತಿದ್ದರು. ಮಾಮ ಹೋತವನ್ನು ಹಿಟ್ಟಿನ ವೃತ್ತದಲ್ಲಿ ನಿಲ್ಲಿಸಿದಾಗ ನಾಯಕ ತಂಬಿಗೆಯ ಅರಿಶಿಣ ನೀರನ್ನು ಅದರ ಮೇಲೆ ಸುರಿದು ಹಣೆಗೆ ಕುಂಕುಮ ಹಚ್ಚುತ್ತಿದ್ದ. ಆಗ ಹೋತ ಮೈ ಜಾಡಿಸಿದರೆ ಮುಂದಿನ ಕಾರ್ಯ. ಇಲ್ಲದಿದ್ದರೆ ದೇವಿ ಮುನಿದಿದ್ದಾಳೆ ಎಂದು ಅರ್ಥ. ಆಗ ಹೋತಕ್ಕೆ ಕೈ ಮುಗಿದು ಮುನಿಸು ಬೇಡವೆಂದು ಬೇಡಿಕೊಂಡು ಮತ್ತೆ ನೀರು ಸುರಿಯುತ್ತಿದ್ದರು.

ಹೋತವನ್ನು ಬಲಿಕೋಡಲು ಪಕ್ಕದೂರಿನಿಂದ ಮುಲ್ಲಾ ಸಾಬಿಯನ್ನು ಕರೆದುಕೊಂಡು ಬರುತ್ತಿದ್ದರು. ಸುತ್ತ ನಿಂತವರೆಲ್ಲ ಜಗದಂಬೆಯ ಭಜನೆ ಹೇಳ್ತಾ, ಒಂದಿಬ್ಬರು ಹೋತದಕಾಲುಗಳನ್ನು ಹಿಡಿದು, ಸಾಬಿ ತನ್ನ ಮಂತ್ರಹೇಳುತ್ತಾ, ಚೂರಿಯಿಂದ ಹೋತದ ಕುತ್ತಿಗೆಯನ್ನು ನಯವಾಗಿ ಕುಯ್ದು, ರಕ್ತ ಹರಿಯುವಾಗ ಮಾಮ ಅಗಲ ಬಾಯಿಯ ಪಾತ್ರೆ ಹಿಡಿಯುತ್ತಿದ್ದ. ಈ ರಕ್ತಕ್ಕೆ ಜೋಳದ ಹಿಟ್ಟು, ಖಾರ, ಮಸಾಲೆ, ಉಪ್ಪು ಕಲಸಿ ಕುದಿಸಿ ಹಬ್ಬದ ಪ್ರಸಾದ ಸುಳೋಯಿಯನ್ನು ಒಂದೊಂದು ರೊಟ್ಟಿಯಲ್ಲಿಟ್ಟು ಎಲ್ಲರಿಗೆ ಹಂಚುತ್ತಾರೆ. ಇದರ ರುಚಿ ತಿಂದವರಿಗೇ ಗೊತ್ತಾಗುವುದು. ನಿಮಗೆ ಯಾರಿಗೂ ಬೇಸರವಿಲ್ಲದಿದ್ದರೆ ಅದರ ರುಚಿಯನ್ನು ಮುಂದಿನ ವಾರ ವಿವರಿಸುತ್ತೇನೆ.

(ಮುಂದುವರಿಯುವುದು)