Advertisement
ರಾಗಂ ಪುಸ್ತಕದ ಕುರಿತು ಮುರ್ತುಜಾಬೇಗಂ ಕೊಡಗಲಿ ಬರೆದ ಲೇಖನ

ರಾಗಂ ಪುಸ್ತಕದ ಕುರಿತು ಮುರ್ತುಜಾಬೇಗಂ ಕೊಡಗಲಿ ಬರೆದ ಲೇಖನ

ಕೊಂಚ ಮನ ತಹಬದಿಗೆ ಬಂದಂತಾಗಿ, ಗೆಳೆಯರೊಬ್ಬರ ಮನೆಗೆ ಹೋಗಿ, ಅಲ್ಲಿದ್ದ ಪುಟ್ಟ ಕಂದಮ್ಮಗಳ ಬೊಗಸೆ ತುಂಬಿಸಿಕೊಂಡು ಮುದ್ದಾಡಿದೆ. ಮಗಳಂತೆ ಕಾಣುವ ಅಪ್ಪಅಮ್ಮನ ಜೊತೆ ಮಾತಾಡಿ, ಕೀಟ್ಸ್ ಸಹವಾಸದಿಂದ ಹೊರಬಂದೆ. ‘ಯಪ್ಪಾ, ಬದುಕಿದೆಅಂತ ನಿಟ್ಟುಸಿರು ಬಿಟ್ಟೆ. ಮಹಾಶಯ ಕೈಬಿಡಲೇ ಇಲ್ಲ. ಮರುದಿನ ಮತ್ತೆ ಅವನದೆ ಕನವರಿಕೆ, ಮುಂದೇನಾಯಿತು? ನಮ್ಮ ದೋಸ್ತನಿಗೆ ಎಂಬ ಹಳವಂಡ. ಮತ್ತೆ ತೆಕ್ಕೆಗೆಳೆದುಕೊಂಡು ಅವನೊಂದಿಗೆ ಮಾತಾದೆ. ಪುಣ್ಯಾತ್ಮ ಸಾಯುವ ಮುನ್ನೊಮ್ಮೆ ಗೆಳೆಯರಿಗೆ ಪತ್ರಿಸಿದಂತೆ ನನಗೊಂದು ಪತ್ರ ಬರೆಯಬಾರದಿತ್ತೇ ಅನಿಸಿತು. ಅಂತಿಮವಾಗಿ ಕೀಟ್ಸ್ಸತ್ತು ಹೋದಎಂದಾಗ ಉಸಿರು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು.
ರಾಗಂ (ರಾಜಶೇಖರ ಮಠಪತಿ) ಬರೆದ “ಬದುಕಬಾರದೆ ಬದುಕು” ಪುಸ್ತಕದ ಕುರಿತು ಮುರ್ತುಜಾಬೇಗಂ ಕೊಡಗಲಿ ಬರೆದ ಲೇಖನ

 

ಹೀಗೊಂದು ಸಾಲು, ಇತ್ತೀಚಿನ ನನ್ನ ಕವಿತೆಯೊಂದರಲ್ಲಿ ಬರೆದಿದ್ದೆ. ಅಷ್ಟರಲ್ಲಿಯೇ ಕಿರಿಯ ಕವಿಮಿತ್ರ ಶ್ರೇಯಾಂಶ ಕೋಲಾರರ ಸದಾಶಯದ ಹಂಬಲದಿಂದ ರಾಗಂ ಗುರುಗಳು ಬರೆದ, ಬದುಕಿದ, ಉಸಿರಾಡಿದ “ಬದುಕಬಾರದೇ ಬದುಕು. . .!?” ಎಂಬ ಜಾನ್ ಕೀಟ್ಸ್ ಪತ್ರರೂಪಿ ಕಾವ್ಯ ಬದುಕಿನ ಪುಸ್ತಕ ಕೊಂಡು ಓದುವ ಅವಕಾಶ ಲಭಿಸಿತು.

ಇದೊಂದು ವಿಭಿನ್ನ ಓದು, ವಿಶಿಷ್ಟ ಅನುಭವ. ಒಮ್ಮೆ ಗಾಳಿಯಲ್ಲಿ ತೇಲುವಂತೆ ಹಗುರ, ಮತ್ತೊಮ್ಮೆ ತಲೆಯ ಮೇಲೆ ಬಂಡೆಗಲ್ಲ ಭಾರ. ‘ಅಬ್ಬಾ!’ ಎಂದು ಉದ್ಗರಿಸುವ ಹೊತ್ತಿಗೆ ‘ಅಯ್ಯೋ’ ಎಂಬ ಚೀತ್ಕಾರ. ಬದುಕು ಹಾಡಿನಷ್ಟು ಸುಲಭ ಎಂದು ದಕ್ಕಿಸಿಕೊಳ್ಳುವಷ್ಟರಲ್ಲಿ, ಛೇ! ಬದುಕೇ ಎಂದು ಉಸಿರುಗಟ್ಟಿ ಒದ್ದಾಡುವಂಥಹ ವೇದನೆ. ಭಲಾ ಕೀಟ್ಸ್ ಎಂದು ಬೆನ್ನು ತಟ್ಟಿ ಬೀಗಬೇಕೆಂದುಕೊಳ್ಳುತ್ತಲೇ, ‘ಏನೋ ಮಾರಾಯ ನೀನು’ ಎಂದು ನಿಟ್ಟುಸಿರಾದೆ. ಅವನನ್ನು ಓದಿದರೆ ಮನಸ್ಸೆಲ್ಲಾ ಮುದಗೊಳ್ಳಬಹುದೇನೊ ಅನ್ನಿಸುವಷ್ಟರಲ್ಲಿ ಅವನೇ ಹೃದಯಕ್ಕೆ ಭಾರವಾಗಿ ನೆಲ ಕುಸಿದ ಅನುಭವ. ಒಟ್ಟಾರೆ ಈ ಓದೊಂದು ‘ಅನುಭಾವ’ ಎಂಬುದೇ ಸತ್ಯ. ಮಹಾ ಮಳೆಯಂತೆ ಜಡಿ ನಂತರ ಕೊನೆಗೆ ಉಳಿಯುವುದು ತಣ್ಣನೆಯ ಕಾವ್ಯ. ರಾಗಂರ ಕೀಟ್ಸ್‍ ನಂಥ ಕಾವ್ಯ.

(ರಾಗಂ)

ಪುಸ್ತಕ ಕೈ ಸೇರಿದ ತಕ್ಷಣ ಮನ-ಗಮನ ಸೆಳೆದದ್ದು ಪುಸ್ತಕದ ಮುಖಪುಟ. ‘Oh god! his face itself is a poem.’ ಹೌದು, ಅಲ್ಲಿನ ಚಿತ್ರಗಳ ಚಿತ್ರಣವೇ ಅಷ್ಟು ಜೀವಂತವಾಗಿದೆ. ದಿಲ್‍ ಖುಷ್ ಆಯ್ತು. ಭೌತಿಕ ಸ್ವರೂಪದಲ್ಲಿ ಪುಸ್ತಕ ಹೃದಯ ಗೆದ್ದ ಮೇಲೆ, ಅದರ ಭೌದ್ಧಿಕ ಕಡಲೊಳಗೆ ಕಾಲಿಟ್ಟೆ. ಕೀಟ್ಸ್ ನ ಬದುಕಿನ ಅನುಭವಗಳು ತಲ್ಲಣಗೊಳಿಸಿದಷ್ಟೇ ಗಾಢವಾಗಿ, ಪತ್ರಗಳೇ ಅವನ ಬದುಕ ಪುಟಗಳಾಗಿ ತೆರೆದುಗೊಂಡದ್ದು ಸೋಜಿಗವೂ ಹೌದು.

ತನ್ನ ಮಿತ್ರರಿಗೆ, ಸೋದರರಿಗೆ ಕೀಟ್ಸ್ ಬರೆದ ಪತ್ರಗಳನ್ನು ಓದಿದಾಗ, ಅವನು ಇಲ್ಲೇ ಎಲ್ಲೋ ನಮ್ಮ ನಡುವೆಯೇ ಇರುವನೆನೊ ಎಂಬಷ್ಟು ಆಪ್ಯಾಯಮಾನವಾದ ಬರಹ. ಒಮ್ಮೆ ಪಕ್ಕದಲ್ಲಿ ಯುವ ಮಿತ್ರನಂತೆ ಹೆಗಲಿಗೆ ಹೆಗಲು ಹಚ್ಚಿನಿಂತರೆ, ಮತ್ತೊಮ್ಮೆ ಬಹು ಎತ್ತರದ ಮಹಾ ಸಂತನಾಗಿ ಕೃತಿಯುದ್ದಕ್ಕೂ ಗೋಚರಿಸುತ್ತಾನೆ. ಪದವಿಯಿಂದಲೂ ಇಷ್ಟು ಅಲ್ಪಾಯು ಕೀಟ್ಸ್‍ ನನ್ನ ಓದದೆ, ಇಂಗ್ಲೀಷ್ ಕಾವ್ಯಲೋಕದ ಓದು ಪೂರ್ಣಗೊಳ್ಳದೆಂಬ ಸೋಜಿಗ ಕಾಡುತ್ತಿತ್ತು. ಈಗ ಅವನ ಬದುಕನ್ನು ಓದಿದ ಮೇಲೆ ಅದಕ್ಕೆ ಕಾರಣ ಸಿಕ್ಕಿತು. ಥೇಟ್ ಬೆಂಕಿಯಂಥ ಜೀವನದಲ್ಲಿ ತಣ್ಣಗೆ ಬದುಕಿದ ಕೀಟ್ಸ್, ಹೆಚ್ಚು ಉಸಿರಾಡಿಸಿದ್ದು ನೋವನ್ನು. ಕೆಲವೊಮ್ಮೆಯಂತೂ ಕೀಟ್ಸ್ ನನ್ನ ಕೈಹಿಡಿದು ಸ್ವಲ್ಪ ಸಮಾಧಾನಿಸಬೇಕು ಅನಿಸುತ್ತಿತ್ತು.

ಹೀಗೆ ಅನಿಸಲು ಕಾರಣವಾದದ್ದು, ಅವನ ಪತ್ರಗಳಷ್ಟೇ ಸಮಾನವಾಗಿ ‘ರಾಗಂ’ ಅವುಗಳನ್ನು ಪ್ರಸೆಂಟ್ ಮಾಡಿ, ಅವನನ್ನು ನಮಗೊಪ್ಪಿಸಿದ ರೀತಿ. ಎಂಥ ಮೌಲಿಕವಾದ ಗಟ್ಟಿ ಬರಹವದು! ಕೀಟ್ಸ್‍ ಗೂ, ಓದುವ ನಮಗೂ ಅನುಸಂಧಾನಕ್ಕೆ ಅವರು ಸಜ್ಜುಗೊಳಿಸುವ ರೀತಿ, ಅವರ ಸಾಹಿತ್ಯಾನುಭವ, ಅಧ್ಯಯನ ಹಾಗೂ ಅನುಭವಿಸಿದ ಪರಿ ಇದೆಯಲ್ಲ ಅದೊಂದು ಅದ್ಭುತ!

ಭೌತಿಕ ಸ್ವರೂಪದಲ್ಲಿ ಪುಸ್ತಕ ಹೃದಯ ಗೆದ್ದ ಮೇಲೆ, ಅದರ ಭೌದ್ಧಿಕ ಕಡಲೊಳಗೆ ಕಾಲಿಟ್ಟೆ. ಕೀಟ್ಸ್ ನ ಬದುಕಿನ ಅನುಭವಗಳು ತಲ್ಲಣಗೊಳಿಸಿದಷ್ಟೇ ಗಾಢವಾಗಿ, ಪತ್ರಗಳೇ ಅವನ ಬದುಕ ಪುಟಗಳಾಗಿ ತೆರೆದುಗೊಂಡದ್ದು ಸೋಜಿಗವೂ ಹೌದು.

ಹೀಗೆ ಬರೆದರೆ ತಪ್ಪಲ್ಲ ಅಂದುಕೊಳ್ಳುತ್ತೇನೆ. ಕೃತಿಕಾರನ ನಂತರವೂ ಉಳಿಯುವ ಕೃತಿ ‘ಬದುಕಬಾರದೆ ಬದುಕು’. ಇದು ಭಾಷಾ ಸಾಹಿತ್ಯದ ಅಮರ ಪುಟ. ಯಾವುದೇ ಭಾಷೆಯ, ಸಾಹಿತ್ಯದ ವಿದ್ಯಾರ್ಥಿಗಳಿಗೊಂದು ಸಂಪನ್ಮೂಲ ಕೃತಿ. ಕೊನೆಯವರೆಗೂ ದಟ್ಟವಾದ ಭಾವಸಾಂದ್ರತೆಯನ್ನು ಕಾಪಿಟ್ಟುಕೊಂಡಿರುವದು ಕೃತಿಯ ಯಶಸ್ಸಿನ ಬಹುಮುಖ್ಯ ಭಾಗವೆಂಬುದು ನನ್ನ ಅನಿಸಿಕೆ. ಸೋತ ಜೀವನದಿಂದಲೇ ಜಗತ್ತನ್ನು ಗೆದ್ದ ಕೀಟ್ಸ್, ರಾಗಂ ಗುರುಗಳನ್ನು ಕಾಡಿದ, ಅವರೆದುರು ಹಾಡಿದ ಪರಿಯ ಔನ್ನತ್ತವೇ ಪುಸ್ತಕವಾಗಿ ಮೈದಾಳಿದೆ. ಪುಸ್ತಕ ಓದುವಾಗ, ಓದಿದ ನಂತರವೂ ಮನಸ್ಸು ಹಾಗೂ ಬದುಕಿನ ಗಲ್ಲಿ ಗಲ್ಲಿಗಳಲ್ಲಿಯೂ ಕೀಟ್ಸ್ ಓಡಾಡಿಕೊಂಡೇ ಇದ್ದುಬಿಡುತ್ತಾನೆ.

‘ಬೆಂದವರು ಬೇಂದ್ರೆಯಾಗುತ್ತಾರೆ’ ಎಂದು ಕೇಳಿದ್ದೆ, ಬಹುಶಃ ಕೀಟಲೆ-ಕಾಟಗಳಿದಲೇ ಈತ ಕೀಟ್ಸ್ ಆಗಿದ್ದಾನೆ. ಬೆನ್ನ ಹಿಂದೆ ಸಾವು, ಎದುರುಗಡೆ ಹಣಿಯಲು ಸಜ್ಜಾದ ವಿಮರ್ಶಕರು, ಹೆಜ್ಜೆ-ಹೆಜ್ಜೆಗೂ ಕಾಡಿದ ಅನಾರೋಗ್ಯದ ಬಾಧೆ, ಪ್ರೀತಿಯ ನೋವು… ಇವೆಲ್ಲವುಗಳಿಂದ ಹಣ್ಣಾಗಿಬಿಡುತ್ತಾನೆ ಕೀಟ್ಸ್. ಅವನೇ ಹೇಳುವಂತೆ Until we are sick, we understand not. ಅವನ ಬದುಕಿನ ಅಂಗಳದ ತುಂಬ sickness ದರಬಾರು ನಡೆಸಿತ್ತು. ಅಲ್ಲಿದ್ದೇ ಅವನು ಜೀವನ್ಮುಖಿಯಾದ ರೀತಿಯೇ ಅನನ್ಯವಾಗಿದೆ.

ಪುಸ್ತಕ ಓದುತ್ತಾ ಹೋಗುವಂತೆ, ಕೀಟ್ಸ್‍ ನ ಸಾವು ಸಮೀಪ ಬರುತ್ತಿದ್ದಂತೆ, ನನಗಂತೂ ಒಂದು ಹಂತದಲ್ಲಿ ಎಷ್ಟು disgust ಅನಿಸಿತು ಎಂದರೆ, ಸುಮ್ಮನೆ ಪುಸ್ತಕ ಸರಿಸಿ, ನೋಟ್ಸ್, ಪೆನ್, ಟೇಬಲ್ ಮೇಲೆ ಕುಕ್ಕರಿಸಿ, ಮೇಲೆದ್ದೆ. ಬದುಕಲಿ ಕಂಡ ಸಾಲು ಸಾಲು ಸಾವುಗಳು ಕಣ್ಣ ಮುಂದೆ ಮೆರವಣಿಗೆ ಹೊರಟು ಬಂದಾಗ ಸುಮ್ಮನೆ ಹೊರಬಂದು ಎಲ್ಲಿಗೋ ಹೋಗಬೇಕೆಂದು ನಿರ್ಧರಿಸಿದೆ, ಸುಮ್ಮನೆ ಸ್ಕೂಟಿಯ ಕಿವಿಹಿಂಡಿ ಹೊರಟೆ, ಹೊರಟೇ ಬಿಟ್ಟೆ.

ಕೊಂಚ ಮನ ತಹಬದಿಗೆ ಬಂದಂತಾಗಿ, ಗೆಳೆಯರೊಬ್ಬರ ಮನೆಗೆ ಹೋಗಿ, ಅಲ್ಲಿದ್ದ ಪುಟ್ಟ ಕಂದಮ್ಮಗಳ ಬೊಗಸೆ ತುಂಬಿಸಿಕೊಂಡು ಮುದ್ದಾಡಿದೆ. ಮಗಳಂತೆ ಕಾಣುವ ಅಪ್ಪ-ಅಮ್ಮನ ಜೊತೆ ಮಾತಾಡಿ, ಕೀಟ್ಸ್‍ ನ ಸಹವಾಸದಿಂದ ಹೊರಬಂದೆ. ‘ಯಪ್ಪಾ, ಬದುಕಿದೆ’ ಅಂತ ನಿಟ್ಟುಸಿರು ಬಿಟ್ಟೆ.

ಮಹಾಶಯ ಕೈಬಿಡಲೇ ಇಲ್ಲ. ಮರುದಿನ ಮತ್ತೆ ಅವನದೆ ಕನವರಿಕೆ, ಮುಂದೇನಾಯಿತು? ನಮ್ಮ ದೋಸ್ತನಿಗೆ ಎಂಬ ಹಳವಂಡ. ಮತ್ತೆ ತೆಕ್ಕೆಗೆಳೆದುಕೊಂಡು ಅವನೊಂದಿಗೆ ಮಾತಾದೆ. ಪುಣ್ಯಾತ್ಮ ಸಾಯುವ ಮುನ್ನೊಮ್ಮೆ ಗೆಳೆಯರಿಗೆ ಪತ್ರಿಸಿದಂತೆ ನನಗೊಂದು ಪತ್ರ ಬರೆಯಬಾರದಿತ್ತೇ ಅನಿಸಿತು. ಅಂತಿಮವಾಗಿ ಕೀಟ್ಸ್ ‘ಸತ್ತು ಹೋದ’ ಎಂದಾಗ ಉಸಿರು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು. ಬಹುಕಾಲದ ಗೆಳೆಯ ಇಷ್ಟು ದಯನೀಯವಾಗಿ ಗತಿಸಿ ಹೋದನಲ್ಲ ಅನಿಸಿ, ತುಂಬಾ ಹೊತ್ತು ಕಣ್ಣು ಮುಚ್ಚಿ ಮೌನಕ್ಕೆ ಶರಣಾದೆ. ಹೃದಯದಲ್ಲಿ ಗಾಯಗೊಂಡ ವೇದನೆ…!

ಏನೇ ಅನ್ನಿ, ಪ್ರತಿ ಪ್ರಜ್ಞಾವಂತ ಓದುಗನ ಕಪಾಟಿನಲ್ಲಿ ಕೀಟ್ಸ್‍ ನ ಬಗೆಗಿನ ಈ ಪುಸ್ತಕ, ‘ಬದುಕಬಾರದೆ ಬದುಕು’ ಇರಲೇಬೇಕು. ಬದುಕು disgust ಅನಿಸಿದಾಗ ಕೀಟ್ಸ್ ಕೈಹಿಡಿಯುವನೆಂಬ ಭರವಸೆ ನನ್ನದು, ದುಃಖವಾದಾಗ ದುಃಖದ ಹಾಡುಗಳೇ ಸಂತೈಸುವಂತೆ.

ಕೇವಲ 25 ವರ್ಷ ಬದುಕಿ, ವಿರಳ ಕವನಗಳ ಪ್ರಕಟಿಸಿ, 167 ವರ್ಷಗಳ ನಂತರವೂ ಕನ್ನಡದಲ್ಲಿ ರಾಗಂರವರಿಂದಾಗಿ ಕೀಟ್ಸ್ ನಮ್ಮೊಂದಿಗೆ ಇದ್ದಾನೆ ಹಾಗೂ ಇರುತ್ತಾನೆ. ಈ ಪುಸ್ತಕದ ಮೂಲಕ ಅವನ ಆಯಸ್ಸು ಮತ್ತೂ ಹೆಚ್ಚಾಗಿದೆ. ಬದುಕು ಮುಗಿದ ಮೇಲೂ ಬದುಕುಳಿಯುವುದು ಕೀಟ್ಸ್, ರಾಗಂಸರ್ ಹಾಗೂ ಈ ಪುಸ್ತಕ. ಪ್ರಕಟಿಸಿದ ಯಾಜಿ ದಂಪತಿಗಳಿಗೆ ಒಂದು ದೊಡ್ಡ ಸಲಾಂ.

About The Author

ಮುರ್ತುಜಾಬೇಗಂ ಕೊಡಗಲಿ

ಮುರ್ತುಜಾಬೇಗಂ ಕೊಡಗಲಿ ಇಳಕಲ್ಲಿನವರು. ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕಿಯಾಗಿ 17ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ‘ಮೊನ್ನೆ ಬಂದ ಮಳೆಗೆ’ ಮತ್ತು ‘ಭಾವ ಬದುಕು’ ಇವರ ಪ್ರಕಟಿತ ಕೃತಿಗಳು. ದ. ರಾ ಬೇಂದ್ರೆ ಗ್ರಂಥ ಬಹುಮಾನ, ಪಿ ಲಂಕೇಶ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ಪಿ.ಸುಶೀಲಾ ಸ್ಮಾರಕ ಕಾವ್ಯ ಪ್ರಶಸ್ತಿ ಇವರಿಗೆ ಲಭಿಸಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ