ರಮೇಶಬಾಬು ಕವನಗಳಲ್ಲಿ ಬರುವ ಪಾದದ ಬಳಕೆಯನ್ನು ಗಮನಿಸಬೇಕು. ಪಯಣಕ್ಕೆ ಪಾದಗಳು ಬೇಕು ಎನ್ನುವ ಹಾಗೆ ಅವು connect ಆಗುತ್ತವೆ. ನಾನು ಗಮನಿಸಿದಂತೆ ರಮೇಶಬಾಬು ಒಂದು ವಿಲೋಮ ಕ್ರಮ ಬಳಸಿ ಸಂಗತಿಗಳನ್ನು ನೋಡುತ್ತಾರೆ; ಅದಲು ಬದಲು ಜಾಗಗಳಲ್ಲಿ ದೃಷ್ಟಿಕೋನಗಳು ಬದಲಾಗುತ್ತವೆ ಅಲ್ಲವೆ? ಅದರಂತೆ ಪಾದಗಳು ತಲೆಯ ಇನ್ನೊಂದು ತುದಿಗಳು. ಶಿರವು ಉತ್ತರವಾದರೆ ಪಾದ ದಕ್ಷಿಣದಂತೆ. ಶಿರದಿಂದ ಇಳಿಯುವುದು, ಪಾದದಿಂದ ಹತ್ತಬೇಕಾಗುತ್ತದೆ. ಈ ಅರಿವಿನೊಂದಿಗೆ ರಮೇಶಬಾಬು ಆಟವಾಡುತ್ತಾರೆ.  ಪಾದಗಳೆಂದರೆ ದಾರಿ ಅಳೆಯುವ ಮಾಪಕಗಳಲ್ಲ ಅಥವಾ ದೇಹ ಹೊತ್ತ ಭಾರಧಾರಕಗಳಲ್ಲ. ಪಾದದರಿವನ್ನು ಕವಿ ಇಲ್ಲಿ ವಿವರಿಸುವ ರೀತಿಯನ್ನು ಗಮನಿಸಬೇಕು.
ಚೀಮನಹಳ್ಳಿ ರಮೇಶಬಾಬು ಬರೆದ ‘ರಾಗಿಕಾಳು’ ಹೊಸ ಕವನ ಸಂಕಲನಕ್ಕೆ ಆರ್.ತಾರಿಣಿ ಶುಭದಾಯಿನಿ ಬರೆದ ಮಾತುಗಳು

 

ಚೀಮನಹಳ್ಳಿ ರಮೇಶಬಾಬು ಅವರ ಆಸಕ್ತಿ ಕಾವ್ಯ ಮತ್ತು ಕಥನ ಕ್ಷೇತ್ರಗಳು. ಕವಿಯಾಗಿ ಬಹಳ ಕಾಲದಿಂದ ನನಗೆ ಪರಿಚಿತರಾದ ಅವರ ‘ಟೈರ್ಸಾಮಿ’, ‘ಜೀವ ರೇಶಿಮೆ’, ‘ನಾಗ್ದಾಳೆ’ ಮುಂತಾದ ಕೃತಿಗಳು ಅವರನ್ನು ಕವಿಯಾಗಿ, ಕತೆಗಾರನಾಗಿ ಗಂಭೀರವಾಗಿ ಪರಿಗಣಿಸುವಂತೆ ಮಾಡಿವೆ. ಪ್ರಸ್ತುತ ಸಂಕಲನ ಅವರ ಹೊಸ ಸಂಕಲನ. ಸಹಜವಾಗಿ ಈ ಸಂಕಲನದ ಬಗೆಗೆ ಅಪಾರವಾದ ಭರವಸೆ ಮತ್ತು ನಿರೀಕ್ಷೆಗಳಿರುತ್ತವೆ. ಕವಿತೆಯನ್ನು ಬದುಕಿನ ವ್ಯಾಮೋಹದಂತೆ ಪ್ರೀತಿಸುವುದು ಆನಿಸುವುದು ಎಷ್ಟು ಮುಖ್ಯವೊ ಅದರಂತೆಯೇ ಅದನ್ನು ನಿಜದ ಶೋಧಕ್ಕಾಗಿ ಆರಿಸಿಕೊಳ್ಳುವುದು ಸಹ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ರಮೇಶಬಾಬು ಅವರಲ್ಲಿ ಅಂತಹ ಸತ್ವ ಇದೆ ಎನ್ನುವುದು ಸಮಕಾಲೀನ ಸಂದರ್ಭದಲ್ಲಿ ಇನ್ನೂ ಮುಖ್ಯ ಎನಿಸುತ್ತದೆ. ಏಕೆಂದರೆ ಕಾವ್ಯವು ಇಂದು ಋಜುಮಾರ್ಗಕ್ಕೊಯ್ಯುವ ಏಕಮಾತ್ರ ಸಾಧನವಾಗಿ ಉಳಿದಿಲ್ಲ. ಶ್ರದ್ಧೆಯ ತಪಸ್ಸಿನ ಏಕಾಗ್ರತೆಗೆ ಭಂಗತರುವ ಅನೇಕ ಸಂಗತಿಗಳು ಕಾವ್ಯದ ಬರವಣಿಗೆಗೆ ಹಾಗು ಓದುವಿಕೆಗೆ ಸವಾಲುಗಳನ್ನು ಒಡ್ಡುತ್ತಿದೆಯಾಗಿ ಇಂತಹ ಸಮಯದಲ್ಲಿ ಕವಿತೆ ಬರೆದು ತಮ್ಮತನವನ್ನು ಒರೆಗೆ ಹಚ್ಚುವುದು ಒಂದುರೀತಿಯ ಸವಾಲಿನ ಕೆಲಸವೇ ಹೌದು.

(ಚೀಮನಹಳ್ಳಿ ರಮೇಶಬಾಬು)

ಸಮಕಾಲೀನವಾಗಿ ಕವಿತೆ ಬರೆಯುತ್ತಿರುವವರು ಹಲವುತನಗಳ ಮೈಮರೆಸುವಾಟದಲ್ಲಿ ಸಿಲುಕಿ ಕೆಲವು ಸಿದ್ಧಮಾದರಿಯ ತಾತ್ವಿಕತೆಗಳ ಭಿತ್ತಿಗಳಲ್ಲಿ ಬಣ್ಣ ಕಲಸುತ್ತಿದ್ದಾರೆ. ಪ್ರತಿಯುಗದಲ್ಲೂ ಕವಿ ಯುಗದ ಸಂವೇದನೆಯ ಜೊತೆ ಅನುಸಂಧಾನ ಮಾಡುತ್ತಲೇ ತನ್ನ ಸತ್ವದ ಶೋಧನೆಯನ್ನು ಮಾಡಿಕೊಳ್ಳುತ್ತಿರುತ್ತಾನೆ. ಅದಕ್ಕೆ ತಕ್ಕನಾದ ಭಾಷೆಯನ್ನೂ ಲಯವನ್ನೂ ರೂಢಿಸಿಕೊಳ್ಳುವ ಯತ್ನ ಮಾಡುತ್ತಿರುತ್ತಾನೆ. ಇವತ್ತು ಕವಿತೆ ಬರೆಯುವವರಿಗೆ ಕಾವ್ಯದ ಹದ ಸಾಧಿಸಿಕೊಳ್ಳುವುದು ಸವಾಲಿನ ಕೆಲಸ ಎಂದರೆ ಪ್ರಾಯಶ: ಕ್ಲೀಷೆಯ ಮಾತಾಗಲಾರದು. ಇವತ್ತು ಗೂಗಲಿಸಿದರೆ ಎಲ್ಲ ಮಾಹಿತಿಗಳೂ ಬೆರಳ ತುದಿಯಲ್ಲಿ ದೊರೆಯುತ್ತಿದ್ದು ಅನುಭವಗಳೂ ಸಹ virtual ಆಗಿ ದೊರೆಯುತ್ತಿವೆ. ಇದರಿಂದ ನಿಜವಾದ ಸಂವೇದನೆ ಯಾವುದು? ಕವಿ ಶೋಧಿಸಿಕೊಡಬಹುದಾದ ತಾತ್ವಿಕತೆ ಯಾವುದು? ಎನ್ನುವುದೇ ಹೊಳೆಯುವುದಿಲ್ಲ. ಅನುಭವಕ್ಕೆ ಅನುಭವವೇ ಮಾಯೆಯಾಗಿ ತೋರುವ ಈ ಮಾಯೆಗೆ ಏನನ್ನುವುದು? ಜ್ಞಾನ ಎನ್ನುವುದು ರೂಢಿಯಾಗಿರುವ ಈ ತಲೆಮಾರಿನ ಜನಾಂಗಕ್ಕೆ ತಾತ್ವಿಕತೆಗಳ ಮಹಾಪೂರವೇ ದೊರೆಯುವ ಕಾರಣ ಅನೇಕ ಬಾರಿ ಅವರಿಗೆ ಹೊಸದೊಂದನ್ನು ರೂಢಿಸಿಕೊಳ್ಳಬೇಕಾದ ಅಗತ್ಯವೇ ಕಾಣುವುದಿಲ್ಲ. ಈ ಸಂದಿಗ್ಧತೆಗಳನ್ನು ಮುಂದಿಟ್ಟುಕೊಂಡು ನೋಡುವಾಗ ಸಮಕಾಲೀನ ಕಾವ್ಯ ಎದುರಿಸುವ ಆತಂಕಗಳು ಹೊಳೆಯುತ್ತವೆ. ರೂಢಿಗತವಾಗಿ ದತ್ತವಾದ ಕಾವ್ಯಕೌಶಲಗಳ ಅರಿವು, ಕಾವ್ಯವೆಂದರೇನೆನ್ನುವ ತಿಳಿವಳಿಕೆ ಇವು ಮತ್ತೆ ಮತ್ತೆ ಹೊಸಗಾಲಕ್ಕೆ ಒಡ್ಡಿಕೊ, ತಿದ್ದಿಕೊ ಎಂದು ನಮಗೆ ಹೇಳುವಂತಿವೆ. ಈ ಹಿನ್ನೆಲೆಯಲ್ಲಿಯೇ ರಮೇಶಬಾಬು ಅವರ ಕವಿತೆಗಳನ್ನು ಓದಲು ಎತ್ತಿಕೊಂಡಾಗ ನನ್ನ ನಿರೀಕ್ಷೆಗಳು, ಸಿನಿಕತನವನ್ನು ಮೀರಿ ಏನನ್ನಾದರೂ ನಿಜವಾಗಿ ಹೇಳಬಲ್ಲದ್ದೇನಾದರೂ ಇದೆಯೇ ಎನ್ನುವ ಅನುಮಾನಗಳು ಅವರ ಕಾವ್ಯಕ್ಕೆ ಟಿಪ್ಪಣಿ ಬರೆಯುವಾಗ ಕಾಡಿದವು.

ರಮೇಶಬಾಬು ಕವಿತೆಗಳ ಮೂಲಗುಣ ತಲಸ್ಪರ್ಶಿಯಾಗಿ ಇರುವ ಮೂಲದ ಸತ್ವವನ್ನು ಕೆದಕುವುದು. ಆತ್ಮವಾದಿಯಾಗಿಯೊ ಅನಾತ್ಮವಾದಿಯಾಗಿಯೊ ಈ ಶೋಧವನ್ನು ಔಪಚಾರಿಕವಾಗಿ ಮಾಡಿಮುಗಿಸುವುದು ಅವರ ರೀತಿಯಲ್ಲ. ದೇಹವೆಂಬ ತಂಬೂರಿಯನ್ನು ಹಿಡಿದು ಅದರ ಶೃತಿ ಮೀಟುತ್ತಲೇ ಅದರ ಮೂಲಕ ಇರಬಹುದಾದ ಅಮೂರ್ತತೆಯ pulpಅನ್ನು ತಡಕುವುದು ಅವರಿಗೆ ಒಲಿದ ರೀತಿ. ಸಾಪೇಕ್ಷವಾಗಿ ಒದಗುವ ಸತ್ಯಗಳನ್ನು ಏಕಮುಖದಲ್ಲಿ ನೋಡದೆ ಅನೇಕ ಆಯಾಮಗಳಲ್ಲಿ ನೋಡುವುದು ಸಾಧ್ಯ ಎನ್ನುವುದು ಅವರಿಗೆ ವಿಜ್ಞಾನ ಕಲಿಸಿರುವ ಪಾಠ. ದೇಶಕಾಲಗಳಲ್ಲಿ ಸಂಚಾರಿಯಾದ ಬೆಳಕು ಪ್ರಪಂಚದ ಇರವಿನ ಬಗ್ಗೆ ಅರಿವು ಮೂಡಿಸುವಂತೆ ಅದರ ಯಾನದ ಅಗಾಧತೆಯ ಮೂಲಕ ಅನೇಕ ಜಗತ್ತುಗಳ ಇರವುಗಳ ಬಗೆಗೆ ಸಹ ಅರಿವು ಮೂಡಿಸುವ ಭೌತಜ್ಞಾನವು ಆತ್ಯಂತಿಕವಾಗಿ ಅಮೂರ್ತವನ್ನು ಅಳೆಯಬಲ್ಲ ಕೊಳಗಗಳು ಇಲ್ಲದಿದ್ದರೂ ಸಂಕೇತಗಳ ಮೂಲಕ ಅವನ್ನು ಗುರುತಿಸಿಕೊಳ್ಳಬಹುದೆಂಬ ನಿಲುವಿಗೆ ತಲುಪಿತಲ್ಲವೆ? ಹಾಗೆಯೇ ತತ್ವಜ್ಞಾನಿಯೊಬ್ಬನಿಗೆ ಆತ್ಮಿಕವಾಗಿ ಹೊಳೆಯಬಲ್ಲ ಜ್ಯೋತಿಯಾದರೂ ಹೀಗೆ ಅಮೂರ್ತದ ಲೋಕದ ಪಯಣಕ್ಕೆ ತೋರಿದ ಬೆಳಕಿಂಡಿಯಾಗಿ ನಿಲ್ಲಬಹುದಾದ ಸಾಧ್ಯತೆ ಇದೆ. ಇದನ್ನು ಆಳವಾಗಿ ಮುಟ್ಟಬಲ್ಲ ರಮೇಶಬಾಬು ಅವರ ಕಾವ್ಯವು ಸಮಕಾಲೀನ ಸಂವೇದನೆಯನ್ನು ಪ್ರಕಟಗೊಳಿಸುವುದು ಹೀಗೆ.

ನನ್ನ ಪ್ರಮೇಯವನ್ನು ನಿರೂಪಿಸುವುದಾದರೆ ರಮೇಶಬಾಬು ಅವರ ಕವಿತೆಗಳ ಕೇಂದ್ರ ಹುಡುಕಾಟ; ಅದು ಯೋಗಿಯೊಬ್ಬ ತನ್ನ ಗುರು, ಗುರಿ ತಲುಪುವುದಕ್ಕೆ ಮಾಡುವ ಹುಡುಕಾಟದ ತೆರನಾಗಿಯೂ ಇದೆ. ಹಾಗೆಯೇ ಒಳಗಿನ ಚಡಪಡಿಕೆ, ಸಂದಿಗ್ಧಗಳ ಹೊತ್ತುಕೊಂಡೇ ಬದುಕಿನ ಸ್ವರೂಪವನ್ನು ಹುಡುಕಿಕೊಳ್ಳುವ ತೆರನಾಗಿಯೂ ಇದೆ. ಯೋಗಿಯ ನಿಷ್ಠುರವಾದ ಕಾಠಿಣ್ಯದ ಅನುಭವಶೋಧ ಕವಿಗೆ ಒಪ್ಪುವಂತದ್ದಲ್ಲ. ಕವಿ ತನ್ನೆಲ್ಲ ತಪ್ಪುಗಳ ಜೊತೆಗೇ ತನ್ನ ಗಮ್ಯವನ್ನು ಹುಡುಕುವಂತವನು. ಮರಮರಳಿ ಭವಕ್ಕೆ ಹೊರಳುವ ವಾಂಛೆ ಲೋಕದ ಬಗೆಗೆ ರಮ್ಯವಾದ ನಿಲುವನ್ನೇ ಹುಟ್ಟುಹಾಕುವುದಾದರೆ ಅದೇ ತನಗೆ ಇರಲಿ ಎಂಬ ಭಾವದವನು. ರಮೇಶಬಾಬು ಅವರಿಗೆ ಈ ಜಗ್ಗಾಟಗಳು ಆಂತರಿಕವಾಗಿ ಜೀವಂತವಾಗಿವೆ. ಆದುದರಿಂದಲೇ ಅವರು ಆಗಾಗ ರಾಗಿಯ ಮೊಳಕೆಯನ್ನ, ಅಪ್ಪನ ರೂಹು ಕೇಡುಗಳನ್ನು ಧ್ಯಾನಿಸುವುದು. ಅವರ ಪ್ರಸ್ತುತ ಸಂಕಲನದ ಕವಿತೆ ಆರಂಭವಾಗುವುದೇ ಅಪ್ಪನ ಕವಿತೆಯ ಮೂಲಕ. ರಾಗಿಯ ದೇಸಿತನದ ಸೊಬಗನ್ನು ನೆನೆಯುವ ಅವರ ಕವಿತೆಗಳು ‘ಭೂಮಿಯಂತ ರಾಗಿ, ರಾಗಿಯಂತಾ ಭೂಮಿ’ ಎರಡನ್ನೂ ಅತ್ತಿಂದಿತ್ತ ಮಾಡಿ ಅವನ್ನು ಒಂದೇ ಎಂದು ಪರಿಭಾವಿಸುತ್ತವೆ. ಇದು ಅವರ ಕವಿತೆಗಳ ತಿಳಿವಳಿಕೆ. ಆದರೆ ಒಂದು ಅಪಾಯ ಇಲ್ಲಿಕಂಡಿತು; ಏನೆಂದರೆ ಸಮಕಾಲೀನ ಸಂದರ್ಭದಲ್ಲಿ ರಾಗಿ ಪ್ರಮೇಯ ಅತಿ ರಾಜಕೀಕರಣಗೊಂಡಿರುವುದರಿಂದ ರಮೇಶಬಾಬು ಅವರ ರಾಗಿ ಗ್ರಹಿಕೆಯು ದೇಸಿಯ ಹೆಸರಲ್ಲಿ ಸರಳೀಕೃತಗೊಂಡು ಬಿಡುವ ಅಪಾಯ ಅದು. ಈ ರಮ್ಯತೆಯನ್ನು ರಮೇಶರು ನೀಗಿಕೊಳ್ಳಬಹುದಾಗಿತ್ತು ಎಂದೆನಿಸಿತು.

ಜ್ಞಾನ ಎನ್ನುವುದು ರೂಢಿಯಾಗಿರುವ ಈ ತಲೆಮಾರಿನ ಜನಾಂಗಕ್ಕೆ ತಾತ್ವಿಕತೆಗಳ ಮಹಾಪೂರವೇ ದೊರೆಯುವ ಕಾರಣ ಅನೇಕ ಬಾರಿ ಅವರಿಗೆ ಹೊಸದೊಂದನ್ನು ರೂಢಿಸಿಕೊಳ್ಳಬೇಕಾದ ಅಗತ್ಯವೇ ಕಾಣುವುದಿಲ್ಲ.

ರಮೇಶಬಾಬು ಅವರ ಕವಿತೆಗಳನ್ನು ಓದಿಗಾನಿಸಿಕೊಂಡಾಗ ಮತ್ತೆ ಮತ್ತೆ ಅವರ ಕಾವ್ಯ ಬಳಸುವ ಪಯಣ, ಪಾದ ಹಾಗು ಬೊಗಸೆ ಎಂಬ ಪದಗಳು ಮುಖ್ಯವಾಗಿ ತೋರಿದವು. ನನಗನ್ನಿಸುವಂತೆ ಅವರ ಕವಿತೆಗಳಿಗೆ ಕೀಲಿಕೈಗಳಂತೆ ಇರುವಂತವು ಈ ಮೂರು ಪದಗಳು. ಅವುಗಳನ್ನು ಈ ಕವಿ ವಿಸ್ತರಿಸುತ್ತಾ ಹೋಗುತ್ತಾರೆ.

ಪಯಣ ಎನ್ನುವುದು ಆದಿಮ ಪ್ರತಿಮೆ. ಜೀವದ ಯಾನವನ್ನು ಸಂಕೇತಿಸುವಂತದ್ದು. ಆದರೆ ರಮೇಶಬಾಬು ಅವರಲ್ಲಿ ಪಯಣ ಎನ್ನುವುದು ಭೂವ್ಯೋಮಗಳನ್ನು ವ್ಯಾಪಿಸಿ, ಮನುಷ್ಯನೊಳಗೆ ಸಹ ಸಂಚಾರ ಮಾಡುವ ಚಲನೆಯಾಗುತ್ತದೆ. ಪಯಣದ ಸ್ವರೂಪವು ಮೇಲ್ನೋಟಕ್ಕೆ ತೋರುವಂತೆ ಹೋಗುತ್ತಾ ಹೋಗುತ್ತಾ ಎಲ್ಲವನ್ನೂ ನೋಡುತ್ತಾ ತಿಳಿಯುತ್ತಾ ಹೋಗುವ ಬಗೆಯನ್ನು ಮೀರಿ ಇನ್ನೇನೊ ಆಗಿ ಇಲ್ಲಿ ಕಾಣತೊಡಗುತ್ತದೆ.

ಪಯಣವೆಂದರೆ
ಕಣಿವೆಯ ಇಳಿದು ಬೆಟ್ಟಹತ್ತಿ
ಸಪ್ತಸಾಗರದಾಟಿ ಗಿರಗಿರ ತಿರುಗಿ ಕೊಳವೆಯಾಗಿ
ಬ್ರಹ್ಮಾಂಡದ ಕಪ್ಪುರಂಧ್ರಕ್ಕೆ ಕಣ್ಣು ಬೆಸೆದು
ಅಲ್ಲಿಯೂ ಜೀವತುಂಬುವ.. ಜೀವದಾಟ

ಮುಂದುವರೆದು,

ಹುಟ್ಟಿ ಸತ್ತು/ಒಣಗಿ ಚಿಗುರಿ/ಅಳಿದು ಉಳಿದು
ಬೆಂದು ಬೆರೆತು ಪಯಣವೆಂದರೆ ಹೀಗೇನೆ

-ಎಂದು ಮುಗಿಯುತ್ತದೆ. ಪಯಣವೆನ್ನುವುದು ಬೆಳಕಿನ ಪಯಣವಾದಾಗ ಅದರ ವೇಗ ಮತ್ತು ದರ್ಶನದ ವ್ಯಾಪ್ತಿ ವಿಸ್ತಾರವಾಗುತ್ತದೆ. ಅದು ಆಕಾಶಗಾಮಿಯಾಗಿ ಆಕಾಶಕಾಯಗಳ ವೇಗವನ್ನು ಗ್ರಹಿಸಿ ಮುನ್ನಡೆವಾಗ ಅದಕ್ಕೆ ನಾಲ್ಕು ಆಯಾಮಗಳು ಒದಗಿ ಪಯಣದ ಅರ್ಥವ್ಯಾಪ್ತಿ ಹಿಗ್ಗುತ್ತಾ ಹೋಗುತ್ತದೆ.

ಇನ್ನು ರಮೇಶಬಾಬು ಅವರಲ್ಲಿ ಬರುವ ಪಾದದ ಬಳಕೆಯನ್ನು ಗಮನಿಸಬೇಕು. ಪಯಣಕ್ಕೆ ಪಾದಗಳು ಬೇಕು ಎನ್ನುವ ಹಾಗೆ ಅವು connect ಆಗುತ್ತವೆ. ನಾನು ಗಮನಿಸಿದಂತೆ ರಮೇಶಬಾಬು ಒಂದು ವಿಲೋಮ ಕ್ರಮ ಬಳಸಿ ಸಂಗತಿಗಳನ್ನು ನೋಡುತ್ತಾರೆ; ಅದಲು ಬದಲು ಜಾಗಗಳಲ್ಲಿ ದೃಷ್ಟಿಕೋನಗಳು ಬದಲಾಗುತ್ತವೆ ಅಲ್ಲವೆ? ಅದರಂತೆ ಪಾದಗಳು ತಲೆಯ ಇನ್ನೊಂದು ತುದಿಗಳು. ಶಿರವು ಉತ್ತರವಾದರೆ ಪಾದ ದಕ್ಷಿಣದಂತೆ. ಶಿರದಿಂದ ಇಳಿಯುವುದು, ಪಾದದಿಂದ ಹತ್ತಬೇಕಾಗುತ್ತದೆ. ಈ ಅರಿವಿನೊಂದಿಗೆ ರಮೇಶಬಾಬು ಆಟವಾಡುತ್ತಾರೆ. ಅವರಲ್ಲಿ ಪಾದಗಳು ಮತ್ತೆ ಮತ್ತೆ ಬರುತ್ತವೆ. ಪಾದಗಳೆಂದರೆ ದಾರಿ ಅಳೆಯುವ ಮಾಪಕಗಳಲ್ಲ ಅಥವಾ ದೇಹ ಹೊತ್ತ ಭಾರಧಾರಕಗಳಲ್ಲ. ಪಾದದರಿವನ್ನು ಕವಿ ಇಲ್ಲಿ ವಿವರಿಸುವ ರೀತಿಯನ್ನು ಗಮನಿಸಬೇಕು.

ನೆಲದ ಕಾವು ಪಾದಗಳಿಂದ ಹರಿದು
ಹಣೆಯ ಮುಟ್ಟುತ್ತದೆ
ನೆಲವೆಂಬುದು ನೆಲೆ, ಮಣ್ಣು, ಬಯಲು
ಜೀವಸೆಲೆ ಉಕ್ಕಿಸುವ ಎದೆ (ಪಾದಮುದ್ರೆ)

ನಾಲಿಗೆಯೆ ಮಾತಿನ ಪಾದವಾಗಿ
ಪದದ ಪಾದ ಕಿವಿಯಾಗಿ ಕಿವಿಯ ಪಾದ ಬೇರುಬಿಟ್ಟ ಮೆದುಳಾಗಿ
ಅಬ್ಬಾ.. .. ಎಷ್ಟೊಂದು ರೂಪಗಳು
(ಪಾದಗಳ ಲೋಕ)

ಪಾದಗಳು ಒಂದು ಜಾಲದ ಸ್ವರೂಪ ಪಡೆದುಕೊಳ್ಳುತ್ತವೆ. ಹೀಗೆ ಅವು ಒಂದಕ್ಕೊಂದು ಬೆಸೆದುಕೊಳ್ಳುವ ತಂತುಗಳನ್ನು ಹೊಂದಿವೆ ಎಂದು ಭಾವಿಸುವುದು ಬೇರುಗಳ ಜಾಲಪಾದಗಳನ್ನು ನೆನಪಿಸುತ್ತದೆ. ಬೇರು ಎನ್ನುವುದು ಪುನಾ ಬುವಿಗಂಟಿದ ಜೀವತಂತುವಿನ ಸೂಚಕವಾಗುತ್ತದೆ. ಹೀಗೆ ತಾತ್ವಿಕವಾಗಿ ಬೆಸೆದುಕೊಳ್ಳಬೇಕಾದ ಅನೇಕ ಸಂಗತಿಗಳನ್ನು ರಮೇಶಬಾಬು ಹಿಡಿಯಲೆತ್ನಿಸುತ್ತಾರೆ. ಒಂದಕ್ಕೊಂದು ಹೆಣೆದುಕೊಳ್ಳುವ ಜೀವತಂತುಗಳು ಒಂದು ಇರವಿನ ದ್ಯೋತಕವಾಗಿರುವಂತೆ ಅವನ್ನು ನಿಸ್ತಂತುಗೊಳಿಸುವ ಒಂದು ಹುನ್ನಾರ ನಡೆಯುತ್ತಿದೆ. ಅದೇ ಗೋಳೀಕರಣದ ನಂತರ ಆಗಿರುವ, ಆಗುತ್ತಿರುವ ಬದಲಾವಣೆ. ಇದು ಬೇರುಗಳನ್ನು ನಾಶಪಡಿಸಿ ಆ ಜಾಗದಲ್ಲಿ ಪ್ಲಾಸ್ಟಿಕ್ ಬೇರುಗಳನ್ನು ಪೋಷಿಸಿ ಸೃಷ್ಟಿಯ ತದ್ರೂಪವನ್ನು ಸೃಷ್ಟಿಸಿದ ಸಂತಸವನ್ನು ಹೈಲೈಟ್ ಮಾಡುತ್ತದೆ. ಸಹಜವೆಂದಿದ್ದುದು ಕೃತಕವಾಗಿ ಪ್ರಕೃತಿಯಿದ್ದುದು ಮಾನವ ನಿರ್ಮಿತವಾಗುವ ವಿನಾಶಕಾರಿ ಅಂಶವು ಅಡಿಗರು ಹೇಳುವಂತೆ ಇರುವ ಹಕ್ಕಿಯನ್ನು ಕೊಂದು, ಅದರೊಳಗೆ ಸಾಮಾನು ತುಂಬಿ ಜೀವಂತಿಕೆಯನ್ನುಂಟು ಮಾಡುವ ಭ್ರಮೆಯನ್ನು ಹೊಂದಿರುವಂತದ್ದು. ರಮೇಶಬಾಬು ಇದನ್ನು ತಮ್ಮ ‘ಪ್ಲಾಸ್ಟಿಕ್ ಬೇರುಗಳು’ ಕವಿತೆಯಲ್ಲಿ ಗಮನಿಸಿದ್ದಾರೆ(‘ಏನ ನೋಡಿದೆ ಏನ ಕೇಳಿದೆ ಏನ ಮಾಡಿದೆ. ಬೊಗಸೆ ಹಿಡಿಯುವುದನ್ನೆ ಮರೆತ ಕೈಗಳು/ ಈ ಕಾಕ್‍ಟೇಲ್ ಅನುಭೂತಿಯ ಹಿಡಿಯುವುದಾದರೂ ಹೇಗೆ?’). ಸತ್ವವನ್ನು ಹಾಳುಗೆಡವಿರುವುದರಿಂದ ಮಣ್ಣಿನೊಳಗೆ ಇರುವ ಬೀಜದ ಗರ್ಭ ಇಳಿದಿದೆ ಎಂದು ‘ಮಣ್ಣು-ಬೀಜ’ ಎಂಬ ಕವಿತೆಯಲ್ಲಿ ಹೇಳುತ್ತಾರೆ. ಮತ್ತೂ ಮುಂದುವರೆಸಿ ‘ನಾನು ಈ ಹೊತ್ತಲ್ಲಿ ಮಾತು ಕಳೆದುಕೊಂಡಿದ್ದೇನೆ’ ಎನ್ನುತ್ತಾರೆ.

ಹಾಗೆ ನೋಡಿದರೆ ಆಧುನಿಕೋತ್ತರ ಸಂವೇದನೆಯು ನಮ್ಮೊಳಗಿರುವ ಸಮಗ್ರತೆಯ ಬೆಸೆವ ನಿಸ್ತಂತು ಜಾಲಗಳನ್ನು ನಾಶಪಡಿಸಿ ಭೌತಿಕವಾಗಿ ಮಾತ್ರ ನಿಸ್ತಂತು ಜಾಲಗಳನ್ನು ಸ್ಥಾಪಿಸುವುದಕ್ಕೆ ಪ್ರಚೋದನೆಯನ್ನು ನೀಡುತ್ತಿದೆ. ಆಧುನಿಕೋತ್ತರ ಪ್ರಕ್ರಿಯೆಯನ್ನು ಹೊಸ ಬರಹಗಾರರು ಗಮನಿಸುವುದು ಅದು ಲೌಕಿಕ ಪ್ರಕ್ರಿಯೆ. ಅದನ್ನು ತತ್ವದ ನೆಲೆಯಿಂದ ನೋಡಿದರೆ ಅದು ಮಾಯೆ. ಆ ಮಾಯೆಯನ್ನು ದಾಟುವುದಕ್ಕೆ ದೇಸಿಯಲ್ಲಿ ಇರುವ ಅನುಭಾವ, ಅಧ್ಯಾತ್ಮಗಳ ಕಷಾಯಗಳನ್ನು ಪರಿಹಾರಾರ್ಥವಾಗಿ ಬಳಸಿಕೊಂಡರೆ ಸರಿಯಾದೀತು ಎನ್ನುವ ಗ್ರಹಿಕೆ ನಮ್ಮಲ್ಲಿ ಮನೆಮಾಡಿದೆ. ಆದುದರಿಂದಲೇ ಮತ್ತೆ ಮತ್ತೆ ಬುದ್ಧ ಮತ್ತು ಅಲ್ಲಮರು ಈ ಶತಮಾನದ ಕಾವ್ಯದಲ್ಲಿ ಹೆಸರಾಗಿ, ಪರ್ಯಾಯವಾಗಿ ಬಳಕೆಯಾಗಿರುವುದು. ಬುದ್ಧನ ಶೂನ್ಯ ಹಾಗು ಅಲ್ಲಮನ ಬಯಲುಗಳ ಆತ್ಯಂತಿಕ ಪರಿಭಾಷೆಗಳಲ್ಲಿ ಬದುಕಿನ ವೇಗವನ್ನು ನಿರ್ವೇಗಗೊಳಿಸುವ ಪ್ರಯತ್ನವನ್ನು ಮಾಡಲಾಯಿತು. ರಮೇಶಬಾಬು ಅವರ ಕಾವ್ಯದ ಗ್ರಹಿಕೆಯು ಇದನ್ನು ಕೊಂಚ ದಾಟಿ ಅನುಭಾವವನ್ನು ಆಧುನಿಕೋತ್ತರ ಸಂದರ್ಭದಲ್ಲಿಯೇ ಗ್ರಹಿಸಬೇಕಾದ ಅನಿವಾರ್ಯತೆಯನ್ನು ಗುರುತಿಸಿಕೊಳ್ಳುತ್ತಾರೆ. ಆದುದರಿಂದಲೇ ವಾಚ್ಯವಾಗಿ ‘ಮಾಯಾಪರದೆಯ ಗದ್ದಲಕ್ಕೆ ಇಯರ್ ಬಡ್ಡುಗಳ ಪಿತೂರಿಗೆ /ಹೊರಗಿನದೆಲ್ಲವೂ ನಿಷ್ಕ್ರಿಯಗೊಂಡ ಮೊಬೈಲಿನಂತಾಗಿ/ಫ್ಲಷ್ ಮಾಡಿದ ಕಮೊಡಿನೊಳಗೆ ಕೊಚ್ಚಿಹೋಗುತ್ತೇನೆ’ ಎಂಬ ಸಾಲುಗಳನ್ನು ಅವರು ಬರೆಯುತ್ತಾರೆ. ಇನ್ನೊಂದುಕಡೆ ‘ನಿತ್ಯ ಏಳುವ ಹೊತ್ತಿಗೆ ಕೋಳಿ ಕೂಗುವುದಿಲ್ಲ/ಎಚ್ಚರಾಗುವುದೆ ಅಂಬುಲೆನ್ಸಿನ ಸದ್ದಿಗೆ/ಎದ್ದವನೂ ಸುಮ್ಮನೆ ಕೂರಲಾಗುವುದಿಲ್ಲ/ ಹೊರಟುಬಿಡಬೇಕು ಮುಂಜಾನೆಯ ವಾಕಿಂಗಿಗೆ’(ಜೀವನ) ಎಂದು ನೇರವಾಗಿಯೇ ಆಧುನಿಕೋತ್ತರದ ಗ್ರಹಿಕೆಯಿದೆ.

(ಆರ್.ತಾರಿಣಿ ಶುಭದಾಯಿನಿ)

ಅಂತಿಮವಾಗಿ ಆಧುನಿಕೋತ್ತರವು ವಿನಾಶಕಾರಿ ಎನ್ನುವುದನ್ನು ಹೇಳುವ ‘ಗೂಗಲಮ್ಮ ಮತ್ತು ಭಕ್ತ’ ಕವಿತೆ ಗೂಗಲಮ್ಮ ಸಲಹುವಂತೆ ಕೈನೀಡಿ ಕರೆದುಕೊಂಡ ಮೇಲೆ ಸಾಯುವುದಕ್ಕೆ ಬೇಕಾದ ಸಹಾಯವನ್ನೂ ಮಾಡುತ್ತದೆ! ಆಧುನಿಕೋತ್ತರ ಕಾಲದಲ್ಲಿ ಗೂಗಲೇ ದೇವರು; ಮಾಹಿತಿ ಬಯಸುವವರಿಗೆ ಕೇಳಿದ್ದನ್ನು ಕೊಡುವ ಕಾಮಧೇನು! ಅಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾದರೂ ಉತ್ತರವಿದೆ. ಪರಿಪರಿಯಾದ ವಿಕೃತಿಗೂ ಕಿಟಕಿಗಳು ತೆರೆದುಕೊಳ್ಳುತ್ತವೆ. ಇವನ್ನು ಕಾಣುವುದು ಕಾಣಿಸುವುದು ಸೂಕ್ಷ್ಮ ಮನಸ್ಸಿಗೆ ಸಾಧ್ಯ. ಆಧುನಿಕೋತ್ತರದ ವಾಸ್ತವವನ್ನು ಸೂಕ್ಷ್ಮಮನಸ್ಸೊಂದು ಹೀಗಳೆಯುವ ರೀತಿಯೇ?

ಪರಿಪರಿಯಾಗಿ ಆವರಿಸಿಕೊಂಡಿರುವ ಆಧುನಿಕೋತ್ತರವನ್ನು ಮಣಿಸುವುದು ಯಾವುದು? ಎಂಬ ಪ್ರಶ್ನೆಯನ್ನು ರಮೇಶಬಾಬು ಸೇರಿದಂತೆ ಅವರ ಸಮಕಾಲೀನರು ಹಾಕಿಕೊಂಡಿದ್ದಾರೆ. ಪರ್ಯಾಯವೆನಿಸುವ ದೇಸಿ ಅನುಭಾವಗಳತ್ತ ಆಸೆಯಿಂದ ನೋಡಿದ್ದಾರೆ ಕೂಡ. ಆದರೆ ರಮೇಶಬಾಬು ಇಲ್ಲಿ ಕೊಂಚ ಭಿನ್ನ ಹಾದಿ ತುಳಿದಿದ್ದಾರೆ. ಕ್ವಾಂಟಮ್ ಭೌತನಿಯಮಗಳ ಕೆಲವು ಅಂಶಗಳನ್ನು ಅವರು ತಮ್ಮ ಕಾವ್ಯದಲ್ಲಿ ಬಳಸಿಕೊಂಡಿದ್ದಾರೆ. ಎಕ್ಕೆ ಹೂವಿನ ಸ್ಫೋಟ, ವ್ಯೋಮಾಂತರದ ಕಪ್ಪುರಂಧ್ರ, ಮಹಾಸ್ಫೋಟಗಳ ಪರಿಭಾಷೆಯನ್ನು ಬಳಸಿ ಅನುಭವವನ್ನು ಮೀಟಲೆತ್ನಿಸಿದ್ದಾರೆ. ಜೊತೆಗೆ ಇಲ್ಲಿ ಹೇಳಲೇಬೇಕಾದ ಸಂಗತಿ ಎಂದರೆ ದೇಹ ಎನ್ನುವುದು ಅವರಿಗೆ ನಿರಾಕರಣೆಯ ಸಂಗತಿ ಅಲ್ಲ. ದೇಹದ ಅನುಭವದ ಮೂಲಕವೇ ಅವರಿಗೆ ಅನೇಕ ಸತ್ಯಗಳು ಹೊಳೆದಿವೆ. ಆಗುವಿಕೆ ಎನ್ನುವುದು ಅಸ್ಮಿತೆಯನ್ನು ನಿರಂತರವಾಗಿ ರೂಪಿಸುತ್ತಿರುತ್ತದೆ. ಆ ಬಗೆಯ ಆಗುವಿಕೆಯನ್ನು ಎದುರು ನೋಡುವುದು ರಮೇಶಬಾಬು ಅವರ ಕಾವ್ಯದ ನಿರೀಕ್ಷೆ.

ರಮೇಶರು ಕಾವ್ಯ ಬರೆಯುವುದಕ್ಕೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕಾವ್ಯವನ್ನು ಅದರ ಹೊರರಚನೆ ಮತ್ತು ಸಂರಚನೆಗಳ ಮೂಲಕ ಹಿಡಿಯಬೇಕೆನ್ನುವ ಪೂರ್ವಸೂರಿಗಳ ರೀತಿಯನ್ನು ಅವರು ಒಪ್ಪಿಯೇ ಮುಂದೆ ನಡೆಯುತ್ತಾರೆ. ನಾಗ್ದಾಳೆ ತರದ ರಚನೆಗಳು ಇದಕ್ಕೆ ಉದಾಹರಣೆ. ಪ್ರಸ್ತುತ ಅವರ ಈ ಹೊಸ ಸಂಕಲನದ ಕವಿತೆಗಳು ಮತ್ತೆ ಸಹಜ ಲಯಕ್ಕೆ ವಾಪಾಸಾಗುವ ರೀತಿ ಇವೆ. ಮಾತಿನ ಓಘ, ಸಹಜತೆಯ ಜೊತೆಗೆ ಕನ್ನಡದ ಇನ್ನಷ್ಟು ಬೇಸಿಕ್ ಎನ್ನುವ ಲಯಗಳನ್ನು ಅವರು ಅನುಸಂಧಾನ ಮಾಡಲಿ ಎನ್ನುವುದು ನನ್ನ ಅಪೇಕ್ಷೆ.

ರಮೇಶಬಾಬು ಅವರ ಕವಿತೆಗಳಿಗೆ ಸಾಧಾರಣೀಕರಣ ಒದಗುವುದು ಹೊಸಗಾಲದ ಕಂಟೆಂಟ್‌ ಅನ್ನು ನಿರ್ವಹಿಸುವ ರೀತಿಗೆ. ಅವರ ಕವಿತೆಗಳ ಅನನ್ಯತೆಯು ಅವು ಎತ್ತುವ ತಾತ್ವಿಕ ಪ್ರಶ್ನೆಗಳಲ್ಲಿದೆ. ಆದರೆ ಈ ಭಾರಗಳನ್ನೂ ಅವರು ಕಳಚಿಕೊಂಡು, ಪ್ರಜ್ಞಾಪೂರ್ವಕತೆಯನ್ನು ತೊಡೆದುಕೊಂಡು ಇನ್ನಷ್ಟು ಸಹಜವಾಗಿ ಅಭಿವ್ಯಕ್ತಿ ಮಾಡಬೇಕು. ಆಧುನಿಕತೆಯ ಮಾಯೆಯೊಳಗೆ ಜ್ಞಾನವೂ ಸೇರಿಕೊಂಡಿದೆ ಎನ್ನುವುದನ್ನು ಮರೆಯದಿರೋಣ. ಅದನ್ನು ಕವಿ ಹಿಂದಕ್ಕೆ ಹಾಕಿ ಒಳಗಿವಿಗಳಿಗೆ ಕೇಳುವ ಒಳಭಾಷೆಯನ್ನು ರೂಪಿಸುವ ಕಾವ್ಯಕಟ್ಟಬೇಕು ಎನ್ನುವುದು ಅಪೇಕ್ಷೆ. ರಮೇಶಬಾಬು ಇಂತಹ ದಾರಿಗಳ ಕಡೆಗೆ ಪಯಣಿಸಲಿ ಎಂದು ಹಾರೈಸಿ ಅವರ ಹೊಸ ಸಂಕಲನಕ್ಕೆ ಶುಭಕೋರುತ್ತೇನೆ.

(ಕೃತಿ: ರಾಗಿಕಾಳು (ಕವನ ಸಂಕಲನ), ಲೇಖಕರು: ಚೀಮನಹಳ್ಳಿ ರಮೇಶಬಾಬು, ಪ್ರಕಾಶಕರು: ಅನಿಮ ಪುಸ್ತಕ ಪ್ರಕಾಶನ, ಬೆಲೆ: 100/-)