ಒಂದು ಭಾನುವಾರ ಬೆಳಿಗ್ಗೆ ಇಡೀ ರಾಜಾಜಿನಗರ ಬೆಚ್ಚಿ ಬೀಳುವ ಹಾಗೇ ದೊಡ್ಡ ಶಬ್ದ ಕೇಳಿಸಿತು. ಎಲ್ಲರೂ ಧಾವಂತದಿಂದ ಅವರವರ ಮನೆಗಳಿಂದ ಆಚೆ ಬಂದರು. ಏನು ಏನು ಅಂದುಕೊಂಡು ಅವರವರಲ್ಲೇ ಮಾತಾಡಿ ಕೊಂಡರು. ಸ್ವಲ್ಪ ಹೊತ್ತಿಗೆ ಮೊದಲು ವಿಮಾನ ಹೋಯಿತು, ಅದೇ ಸಿಡಿದು ಹೋಗಿರಬೇಕು ಎಂದು ತರ್ಕಿಸಿದರು. ಮನೆಗೆ ಬೀಗ ಜಡಿದು ಬಿದ್ದಿರುವ ವಿಮಾನದ ಅವಶೇಷ ನೋಡಲು ಸಾಲು ಸಾಲಾಗಿ ಇಡೀ ಸಂಸಾರ ಹೊರಟಿತು. ನಾನೂ ಈ ಗುಂಪಿನಲ್ಲಿದ್ದೆ. ಸುಮಾರು ದೂರ ಎರಡು ಮೂರು ಗಂಟೆ ನಡೆದೆವು ಅಂತ ಕಾಣುತ್ತೆ. ಎಲ್ಲೂ ವಿಮಾನದ ಅವಶೇಷ ಕಾಣಿಸಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎರಡನೇ ಕಂತು ನಿಮ್ಮ ಓದಿಗೆ
ರಾಜಾಜಿ ಯಾರು ಅಂತ ಪುಟ್ಟದಾಗಿ ವಿವರಿಸಲೇ ಅಂತ ಹದಿನೈದು ದಿವಸ ಹಿಂದೆ ನಿಲ್ಲಿಸಿದ್ದೆ, ನೆನಪಿದೆ ತಾನೇ? ಈಗ ರಾಜಾಜಿ ಅವರ ಬಗ್ಗೆ ಒಂದು ಪುಟ್ಟ ನೋಟ್ ನಿಮಗಾಗಿ…
ರಾಜಾಜಿ ಅಂದರೆ ಶ್ರೀ ಸಿ. ರಾಜಗೋಪಾಲಾಚಾರಿ ಅವರು. ಸಿ ಅಂದರೆ ಚಕ್ರವರ್ತಿ. ಭಾರತದ ಸ್ವಾತಂತ್ರ್ಯ ನಂತರ ಸಂವಿಧಾನ ಅಳವಡಿಕೆ ಆಗುವವರೆಗೆ ಈ ದೇಶದ ಅಟಾರ್ನಿ ಜನರಲ್ ಆಗಿದ್ದರು. ಅದಕ್ಕೆ ಮುನ್ನ ಕೇಂದ್ರ ಗೃಹ ಮಂತ್ರಿ ಆಗಿದ್ದರು. ರಾಜಕೀಯ ಮುತ್ಸದ್ದಿ, ಸುಪ್ರಸಿದ್ಧ ತಮಿಳು ಬರಹಗಾರ ಮತ್ತು ರಾಜಕೀಯ ಧುರೀಣ. ಅವರು ಬರೆದ ರಾಮಾಯಣ, ಮಹಾಭಾರತದ ಕಥೆಗಳನ್ನು ಈಗಲೂ ಜನ ಪ್ರೀತಿಯಿಂದ ಓದುತ್ತಾರೆ ಮತ್ತು ಮಕ್ಕಳಿಗೆ ಅವನ್ನು ತಂದು ಕೊಡುತ್ತಾರೆ. ಮಹಾಭಾರತ, ರಾಮಾಯಣಗಳು ಹಲವುಭಾಷೆಗಳಿಗೆ ಭಾಷಾಂತರ ಆಗಿವೆ. ತಮಾಷೆ ಅಂದರೆ ನಾನು ಈಗಲೂ ಅವುಗಳ ಕನ್ನಡ ಅವತರಣಿಕೆ ಸಿಕ್ಕರೆ ಖುಷಿಯಿಂದ ಪುಟತಿರುವುತ್ತೇನೆ. ಅಷ್ಟು ಸರಾಗವಾಗಿ ಸುಗಮವಾಗಿ ಅದು ಓದಿಸಿಕೊಂಡು ಹೋಗುತ್ತೆ. ಕನ್ನಡದಲ್ಲಿ ಇದನ್ನು ಇಷ್ಟೇ ಸುಲಭವಾಗಿ ಯಾಕೆ ಯಾರೂ ಬರೆದಿಲ್ಲ ಅಂತ ಮೊದಮೊದಲು ಅನಿಸೋದು. ಓದಿನ ವಿಸ್ತಾರ ಆದಂತೆ ಈ ಅನಿಸಿಕೆ ಹುಸಿ ಅನಿಸಿದೆ!
ಭವಾನ್ಸ್ ಜರ್ನಲ್ ಎಂಬ ಮಾಸಿಕ ಪತ್ರಿಕೆಯಲ್ಲಿ ರಾಜಾಜಿ ಅವರ ಆಧ್ಯಾತ್ಮ ವಿಷಯಗಳು ಹೆಚ್ಚು ಪ್ರಕಟವಾಗುತ್ತಿತ್ತು. ಈ ಪತ್ರಿಕೆ ಅವರಿಗಾಗಿಯೇ ಇದೆಯೋ ಅನಿಸುತ್ತಿತ್ತು. ಅವರು ಅದರಲ್ಲಿ ಭಾರತದ ಸಂಸ್ಕೃತಿಯ ಹಲವಾರು ಗ್ರಂಥಗಳನ್ನು ಜನ ಸಾಮಾನ್ಯರಿಗೆ ಅರ್ಥ ಆಗುವ ಹಾಗೇ ಪುನಃ ಸೃಷ್ಟಿ ಮಾಡಿದ್ದರು ಮತ್ತು ಈಗಲೂ ಸಹ ಅವರದೇ ಆದ ಒಂದು ಓದುಗರ ಬಳಗ ಅವರಿಗಿದೆ.
ಇವರು ಮೂಲ ಕಾಂಗ್ರೆಸ್ಸಿಗ, ನಂತರ ಸ್ವತಂತ್ರ ಪಾರ್ಟಿ ಕಟ್ಟಿದರು. ತಮಿಳುನಾಡಿನ (ಆಗಿನ ಮದ್ರಾಸು) ರಾಜಕೀಯ ನಾಯಕ. ನಮ್ಮ ಡಿ ವಿ ಜಿ ಅವರಿಗೆ ಆಪ್ತ ಸ್ನೇಹಿತರು ಮತ್ತು ದಿ. ಶ್ರೀ ನವರತ್ನ ರಾಮರಾವ್ (ಕೆಲವು ನೆನಪುಗಳು ಕೃತಿ ಬರೆದವರು. ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದು ಈಗಲೂ ತನ್ನ ಹೆಗ್ಗಳಿಕೆ ಹೊಂದಿದೆ. ಇವರಿಗೆ ಅವಳಿ ಗಂಡು ಮಕ್ಕಳು. ಒಬ್ಬರು ಖ್ಯಾತ ಸಾಹಿತಿ ಶ್ರೀ ನವರತ್ನ ರಾಮ್. ಮತ್ತೊಬ್ಬರು ಸಹ ಖ್ಯಾತ ಇಂಗ್ಲಿಷ್ ಸಾಹಿತಿ ಶ್ರಿ ನವರತ್ನ ಲಕ್ಷ್ಮಣ್. ನವರತ್ನ ರಾಮ್ ಅವರ ಪತ್ನಿ ಕನ್ನಡದ ಹೆಸರಾಂತ ಮಹಿಳಾ ಲೇಖಕಿ ಉಷಾ ನವರತ್ನ ರಾಮ್ ಅವರು. ನವರತ್ನ ರಾಮ್ ದಂಪತಿಗಳು ಈಗಿಲ್ಲ) ಅವರ ಸಹಪಾಠಿ. ಶ್ರೀಮತಿ ಎಂ ಎಸ್ ಸುಬ್ಬುಲಕ್ಷ್ಮಿ ಅವರು ರಾಜಾಜಿ ಅವರಿಗೆ ತುಂಬಾ ಗೌರವ ಕೊಡುತ್ತಿದ್ದರು. ಅವರ ಮನೆಗೇ ಹೋಗಿ ಸಂಗೀತ ಹಾಡುತ್ತಿದ್ದರು. ಅದೇ ರೀತಿ ನಮ್ಮ ನವರತ್ನ ರಾಮರಾವ್ ಅವರನ್ನೂ ಗೌರವಿಸುತ್ತಾ ಇದ್ದರು. ಬೆಂಗಳೂರಿನ ರಾಮೋತ್ಸವ ಸಮಯದಲ್ಲಿ ಎಂ ಎಸ್ ಎಸ್ ಅವರು ಸಂಗೀತ ಕಚೇರಿ ನೀಡಲು ಬರುತ್ತಿದ್ದರು. ಆಗ ಶ್ರೀ ನವರತ್ನ ರಾಮರಾವ್ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿದರೆ, ನೇರ ಅವರ ಮನೆಗೆ ಹೋಗಿ ಕಚೇರಿಯಲ್ಲಿ ಹಾಡಿದಂತೆ ಹಾಡಿ ಅವರ ಮನಸ್ಸು ಪ್ರಫುಲ್ಲ ಆಗುವ ಹಾಗೆ ಮಾಡುತ್ತಿದ್ದರು. ಎಂ ಎಸ್ ಸುಬ್ಬುಲಕ್ಷ್ಮಿ ಅವರ ಸಂಗೀತ ಎಂದರೆ ಎಂತಹವರಿಗೂ ಅಚ್ಚು ಮೆಚ್ಚು. ಈಚೆಗೆ ಈ ನೆನಪುಗಳು ಮತ್ತೆ ಮತ್ತೆ ಬಂದು ಸುಬ್ಬುಲಕ್ಷ್ಮಿ ಅವರನ್ನು ಕುರಿತ ಮೆಚ್ಚುಗೆ ಹಾಗೂ ಗೌರವ ಇಮ್ಮಡಿಸಿದೆ.
ರಾಜಾಜಿ ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ತಪ್ಪದೇ ನವರತ್ನ ರಾಮರಾಯರ ಭೇಟಿ ಮಾಡುತ್ತಿದ್ದರು. ಆಗ ರಾಜಾಜಿ ಅವರನ್ನು ಆಗಿನ ತಮಿಳು ರಾಜಕೀಯ ನಾಯಕರು ಹಾಗೂ ಅಲ್ಲಿನ ಪತ್ರಿಕೆಗಳು Cunning Old Fox ಕುಯುಕ್ತಿಯ ಮುದಿ ನರಿ ಅಂತ ಕೂಗುತ್ತಿದ್ದರು. ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಇವರನ್ನು ತರಲೆ ಬ್ರಾಹ್ಮಣ ಎನ್ನುತ್ತಿದ್ದರಂತೆ. ಪೆರಿಯಾರ್ ಬೆಂಗಳೂರಿನ ಒಂದು ಸಭೆಯಲ್ಲಿ ಭಾಗವಹಿಸಿದ್ದು ಅದನ್ನು ನೋಡಿದ ಅನುಭವ ನನ್ನದು. ಮುಂದೆ ಇದನ್ನು ತಿಳಿಸುತ್ತೇನೆ. ರಾಜಾಜಿ ಅವರು ರಾಜಕೀಯದಲ್ಲಿ ಚಾಣಾಕ್ಷ ನಡೆ ಹಾಕುತ್ತಿದ್ದರಿಂದ ಅವರಿಗೆ ಈ ಮೆಚ್ಚುಗೆಯ ಕೊಂಕು ನುಡಿ ನಮನ, ತಮಿಳು ಬಾಂಧವರಿಂದ.
ತಮಿಳು ನಾಯಕರ ಹೆಸರು ಇಲ್ಲೇಕೆ ಅದೂ ವಿಶಾಲ ಮೈಸೂರು ರಾಜ್ಯದ ರಾಜಧಾನಿಯ ಬಡಾವಣೆಗೆ ಇಟ್ಟರು ಅಂತ ಆಶ್ಚರ್ಯ ಪಟ್ಟಿದ್ದೆ. ನಮ್ಮ ಕನ್ನಡದವರ ಹೆಸರು ತಮಿಳುನಾಡಿನಲ್ಲಿ ಎಲ್ಲಾದರೂ ಇಟ್ಟಿರುವ ಉದಾಹರಣೆ ಇದೆಯಾ ಅಂತ ಸುಮಾರು ವರ್ಷ ಹುಡುಕಿದ್ದೆ, ಎಲ್ಲೂ ಕಾಣಿಸಲಿಲ್ಲ. ನಮ್ಮಲ್ಲೂ ರಾಷ್ಟ್ರ ಮಟ್ಟದ ನಾಯಕರು ಇದ್ದರು, ಸ್ವಾತಂತ್ರಕ್ಕಾಗಿ ಹೋರಾಡಿದ್ದರು ಮತ್ತು ಶ್ರೇಷ್ಠ ಕವಿಗಳೂ, ಪುರಂದರ ದಾಸರಂತಹ ಕರ್ನಾಟಕ ಸಂಗೀತ ಪಿತಾಮಹರೂ, ವಾಗ್ಗೇಯಕಾರರೂ ಸಹ ಇದ್ದರು. ಆದರೆ ಅವರ ಯಾರ ಹೆಸರೂ ತಮಿಳುನಾಡಿನಲ್ಲಿ ಒಂದೇ ಒಂದು ರಸ್ತೆಗೂ ಇಟ್ಟಿಲ್ಲ! ಸ್ವಾತಂತ್ರ್ಯ ಬಂದಾಗ ಇಡೀ ದೇಶ ಕಾಂಗ್ರೆಸ್ ಕಾಂಗ್ರೆಸ್ ಅಂತ ಇತ್ತು, ಅದು ಮಾಡಿದ್ದೆಲ್ಲವೂ ಸರಿ ಅನ್ನುವ ನಂಬಿಕೆ ಜನರಲ್ಲಿ ಇತ್ತು. ಅದರಿಂದ ಈ ಹೆಸರಿಗೆ ಯಾರೂ ಕೇತೇ ತೆಗೆದಿರಲಾರರು ಅಂತ ಅರ್ಥೈಸಿಕೊಂಡಿದ್ದೆ. ಅಲ್ಲದೆ ಇಲ್ಲಿನ ನಮ್ಮ ಅಂದಿನ ನಾಯಕರು ಇಂದಿನ ಹಾಗೆಯೇ ದೆಹಲಿ ದೊರೆಗಳು ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತಿದ್ದರು. ಅದೇ ರೀತಿ ನಮ್ಮ ರಾಜ್ಯದಲ್ಲಿ ಕಾಮರಾಜ್ ರಸ್ತೆ, ಶೇಷಾದ್ರಿಪುರಂ ಮೊದಲಾದ ತಮಿಳು ನಾಯಕರ ಹೆಸರಿನ ಹೇರಳ ರಸ್ತೆಗಳು ಇದ್ದು ಆ ಹೆಸರುಗಳು ಕಾಂಗ್ರೆಸ್ ಕಾಲದಲ್ಲಿ ಬಂದಿರಬೇಕು. ಆದರೆ ಅದೇ ಸೌಜನ್ಯ ಅಲ್ಲಿನವರಿಗೆ ಇಲ್ಲದೇ ಹೋಯಿತು. ಇದು ನಮ್ಮ ಎಕ್ಸ್‌ಪ್ಲಾಯ್ಟ್ಏಶನ್ (exploitation) ಎಂದು ನನ್ನ ಬಲವಾದ ಅನಿಸಿಕೆ. ಈಗಲೂ ನನ್ನ ಮನಸಿಗೆ ಕಸಿವಿಸಿ ಮಾಡುವ ಒಂದು ಪ್ರಸಂಗ ಅಂದರೆ ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆ ಸ್ಥಾಪಿಸಲು ಅನುಮತಿ ದೊರಕಿಸಿಕೊಳ್ಳ ಬೇಕಾದರೆ ಇಲ್ಲಿನ ತಮಿಳು ಸಂಘದವರು ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಲು ತಳುಕು ಹಾಕಿದ್ದು.
ಬೆಂಗಳೂರಿನ ರಾಮೋತ್ಸವ ಸಮಯದಲ್ಲಿ ಎಂ ಎಸ್ ಎಸ್ ಅವರು ಸಂಗೀತ ಕಚೇರಿ ನೀಡಲು ಬರುತ್ತಿದ್ದರು. ಆಗ ಶ್ರೀ ನವರತ್ನ ರಾಮರಾವ್ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿದರೆ, ನೇರ ಅವರ ಮನೆಗೆ ಹೋಗಿ ಕಚೇರಿಯಲ್ಲಿ ಹಾಡಿದಂತೆ ಹಾಡಿ ಅವರ ಮನಸ್ಸು ಪ್ರಫುಲ್ಲ ಆಗುವ ಹಾಗೆ ಮಾಡುತ್ತಿದ್ದರು. ಎಂ ಎಸ್ ಸುಬ್ಬುಲಕ್ಷ್ಮಿ ಅವರ ಸಂಗೀತ ಎಂದರೆ ಎಂತಹವರಿಗೂ ಅಚ್ಚು ಮೆಚ್ಚು.
ಈಗ ಯಾರಾದರೂ ಕರ್ನಾಟಕದಲ್ಲಿ ಒಂದು ಊರಿಗೋ ಬಡಾವಣೆಗೊ ತಿರುವಳ್ಳವರ್, ಭಾರತೀ ದಾಸನ್, ಪೆರಿಯಾರ್, ಕರುಣಾನಿಧಿ, ಪನ್ನೀರ್ ಸೆಲ್ವ ಅಥವಾ ಎಂ ಜಿ ಆರ್ ಯಾ ಸ್ಟಾಲಿನ್ ಹೆಸರು ಇಡಲು ಆಗುತ್ತಾ ಅಂತ ಯೋಚಿಸಿದರೆ……. ಆಗೋಲ್ಲ ಅಂತ ಭಾರೀ ಖುಷಿ ಪಟ್ಟಿದ್ದೇನೆ, ಅಂತ ಹೇಳಿದರೆ ಬುದ್ಧಿಜೀವಿಗಳು ನನ್ನನ್ನು ನ್ಯಾಷನಲ್ ಮೈಂಡ್ ಇಲ್ಲದವನು, ಸಂಕುಚಿತ ಮನೋಭಾವವನ್ನು ಎನ್ನಬಹುದು! ಇಡೀ ರಾಜ್ಯ ಹೊತ್ತಿ ಉರಿದು ಹೋಗಬಹುದು ಅಷ್ಟು ಮಾತಿನ ಪೆಟ್ರೋಲು ಸುರಿವ ಸಹಸ್ರ ಸಹಸ್ರ ದೊಡ್ಡ ಬಾಯಿಯ ನಾಯಕರು ಈಗ ಇಲ್ಲಿದ್ದಾರೆ.
ಈ ರಾಜಾಜಿ ನಗರಕ್ಕೂ ಹೆಸರು ಬದಲಾಗಬೇಕು ಅಂತ ಒಂದು ಪುಟ್ಟ ಚಳವಳಿ ನಡೆದಿತ್ತು. ಕೊಂಚ ಸಮಯ ಪ್ರಚಾರವನ್ನೂ ಪಡೆದಿತ್ತು. ಅದು ಈಗ ಯಾರಿಗೂ ನೆನಪು ಇರುವ ಹಾಗೆ ಕಾಣೆ. ಅದು ಯಾವಾಗ ಅಂದಿರಾ….? ಅದಕ್ಕೇ ಬಂದೆ.
೭೦ ರ ದಶಕದಲ್ಲಿ ಯಾವುದೋ ಸಭೆಯಲ್ಲಿ ಅಂದು ಮಂತ್ರಿಗಳಾಗಿದ್ದ ಬಸವಲಿಂಗಪ್ಪ ಅನ್ನುವವರು ಕನ್ನಡ ಸಾಹಿತ್ಯವನ್ನು ಬೂಸಾ ಸಾಹಿತ್ಯ ಎಂದು ಕರೆದರು. ಬಸವಲಿಂಗಪ್ಪ ಅವರು ತಳ ವರ್ಗದ ನಾಯಕರು ಎಂದು ಗುರುತಿಸಿಕೊಂಡಿದ್ದರು. ದೇಶದಲ್ಲೇ ಮೊದಲ ಬಾರಿಗೆ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ಕ್ರಾಂತಿಕಾರಿ ಎಂದು ಹೆಸರು ಪಡೆದಿದ್ದರು. ಬೂಸಾ ಸಾಹಿತ್ಯ ಎನ್ನುವ ಹೇಳಿಕೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಒಂದು ದೊಡ್ಡ ಕಿಚ್ಚು ಹತ್ತಿಸಿ ಪರ ಹಾಗೂ ವಿರೋಧ ಬಣಗಳು ಹುಟ್ಟಿದವು. ಇಲ್ಲಿ ಪರ ವಿರೋಧ ಹೇಳಿಕೆಗಳು ಉತ್ತುಂಗದಲ್ಲಿ ಇರಬೇಕಾದರೆ ಮದ್ರಾಸಿನಲ್ಲಿ ರಾಜಾಜಿ ಯಾವುದೋ ಸಭೆಯಲ್ಲಿ ಮಾತನಾಡುತ್ತಾ ಬಸವಲಿಂಗಪ್ಪ ಅವರ ಹೇಳಿಕೆಯನ್ನು ಬೆಂಬಲಿಸಿದರು ಎಂದು ಸುದ್ದಿ ಆಯಿತು. ಕನ್ನಡ ಭಾಷೆಯನ್ನು ಕುರಿತು ಇಂತಹ ಭಾವನೆ ಹೊಂದಿರುವವರ ಹೆಸರು ನಮ್ಮ ರಾಜಧಾನಿಯಲ್ಲಿ ಒಂದು ಬಡಾವಣೆಗೆ ಇದೆ ಅಂದರೆ ಏನು? ಅಂತಹ ಕನ್ನಡ ವಿರೋಧಿ ಹೆಸರು ಬಡಾವಣೆಗೆ ಬೇಡ ಎನ್ನುವ ಒಂದು ಸಣ್ಣ ದನಿಯ ಕೂಗು ಹುಟ್ಟಿತು. ಆಗಿನ್ನೂ ಹೋರಾಟಗಾರರು ಈಗಿನಷ್ಟು ಉಗ್ರ ಆಗಿರಲಿಲ್ಲ. ಕೆಲವೇ ದಿನಗಳಲ್ಲಿ ಅದು ತಣ್ಣಗಾಯಿತು. ಮರೆತೂ ಹೋಯಿತು! ಬೂಸಾ ಚಳವಳಿ ಎನ್ನುವ ಒಂದು ಮೂವ್ಮೆಂಟ್ ಸಹ ನಡೆಯಿತು. ಇದರ ಫಲಶ್ರುತಿ ಎನ್ನುವ ಹಾಗೆ ದಲಿತ ಸಾಹಿತಿಗಳು ಒಗ್ಗೂಡಿದರು. (ಲಂಕೇಶ್ ಅವರು ಸಂಪಾದಿಸಿದ ಪಾಂಚಾಲಿ ಹೆಸರಿನ ಪತ್ರಿಕೆಯ ಒಂದು ಲೇಖನ ಇದರ ಬಗ್ಗೆಯೇ ಇದೆ. ಬೂಸಾ ಪ್ರಕರಣ ಅಂತ ಇದು ಹೆಸರು ಮಾಡಿತ್ತು. ಗೂಗಲ್ ಸರ್ಚ್ ಮಾಡಿದರೆ ಇದರ ಪೂರ್ಣ ಲೇಖನ ಸಿಗುತ್ತೆ). ನೋಡಿ ರಾಜಾಜಿನಗರ ನಿಮ್ಮನ್ನು ಎಲ್ಲೆಲ್ಲಿಗೆ ಎಳೆದುಕೊಂಡು ಹೋಗ್ತಾ ಇದೆ ಅಂತ..
ರಾಜಾಜಿನಗರದಲ್ಲಿ ಮೊದಲಿಗೆ ಆರು ಬ್ಲಾಕ್‌ಗಳು ಇದ್ದವು. ಬ್ಲಾಕ್‌ಗಳು ಬಹುಶಃ ಮೊದಲು ಹೆಸರಿಸಿದ್ದು ಈ ಬಡಾವಣೆಗೆ. ಬ್ಲಾಕ್ ಸಹ ಬೇರೆ ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು, ಅದರ ಹತ್ತಿರದ ಯಾವುದಾದರೂ ಲ್ಯಾಂಡ್ ಮಾರ್ಕ್ ಮೂಲಕ. ರಾಜಾಜಿನಗರದಲ್ಲಿ ಆಗ ಇದ್ದ ಕೆಲವು ಲ್ಯಾಂಡ್ ಮಾರ್ಕ್ ಅಂದರೆ ಗುಡ್ಡದ ಆಸ್ಪತ್ರೆ, ಗುಡ್ಡದ ಆಸ್ಪತ್ರೆಗೆ ಇನ್ನೊಂದು ಹೆಸರು ಸೈಂಟ್ ಥೆರೇಸಾ ಆಸ್ಪತ್ರೆ, ಸಿದ್ಧರಾಮನ ದಿಣ್ಣೆ, ಎದ್ದಲೂರು ದಿಣ್ಣೆ, ಪವರ್ ಹೌಸ್… ಹೀಗೆ.
ರಾಜಾಜಿನಗರದ ಮೊದಲನೇ ಬ್ಲಾಕಿಗೆ ಕೇತ ಮಾರನಹಳ್ಳಿ ಅಂತ ಆಗಿನ ಹೆಸರು. ಅಲ್ಲಿನ ಶಾನುಭೋಗರ ಮನೆಯವರು ಒಂದು ಶಾಲೆ ತೆರೆದಿದ್ದರು. ನಂತರ ಅದು ಚೆನ್ನಾಗಿ ಬೆಳೆದು ಹೆಸರೂ ಮಾಡಿತು. ಈಗ ಎಷ್ಟು ಜನಕ್ಕೆ ಕೇತಮಾರನ ಹಳ್ಳಿ ಗೊತ್ತಿದೆಯೋ ತಿಳಿಯದು. ಕಾಲಗರ್ಭದಲ್ಲಿ ಈ ಹೆಸರೂ ಸಹ ಕೊಚ್ಚಿ ಹೋಗಿದೆ. ಈ ಹಳ್ಳಿಯ ಎಡಭಾಗಕ್ಕೆ ಮಹಾಲಕ್ಷ್ಮಿ ಬಡಾವಣೆ, ಬಲಭಾಗಕ್ಕೆ ಮೊದಲನೇ ಆರ್ ಬ್ಲಾಕ್.
ಆರ್ ಎನ್ನುವ ವಿಶೇಷಣ ಯಾಕೆ ಅಂದರೆ ಅಲ್ಲಿ ಒಂದು ರಿಸರ್ವಾಯರ್ ಇದ್ದದ್ದರಿಂದ. ಇದೇ ರೀತಿ ಬಸವನಗುಡಿ ಪ್ರದೇಶದಲ್ಲಿ ರಿಸರ್ವಾಯಾರ್ ಸ್ಟ್ರೀಟ್ ಹೆಸರಿನ ಒಂದು ರಸ್ತೆ ಇದೆ. ಅಲ್ಲಿ ಸರ್ವೇಯರ್ ರಸ್ತೆ ಸಹ ಇದೆ. ನಾಲ್ಕನೇ ಬ್ಲಾಕಿನ ಒಂದು ತುಂಡು ಸಿದ್ಧರಾಮನ ದಿಣ್ಣೆ, ಅದರ ಪಕ್ಕ ಇದ್ದದ್ದು ಎದ್ದಲೂರು ದಿಣ್ಣೆ. ಈಗ ಅವುಗಳ ನೆನಪೂ ಇಲ್ಲ. ಕೇತಮಾರನ ಹಳ್ಳಿ ನಂತರ ಒಡ್ಡರ ಪಾಳ್ಯ ಅಂತ ಇತ್ತು. ಇನ್ನೂ ಮುಂದೆ ಕೊಂಚ ಎಡಕ್ಕೆ ಬಂದರೆ ಗುಡ್ಡದ ಆಸ್ಪತ್ರೆ. ಅದೂ ದಾಟಿ ಎಡಕ್ಕೆ ಹೋದರೆ ನಲವತ್ತು ಕಣ್ಣಿನ ಬ್ರಿಡ್ಜ್. ಗುಡ್ಡದ ಆಸ್ಪತ್ರೆ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿದ್ದ ಆಸ್ಪತ್ರೆ ಅದು. ಈಗ ಅದು ಹೈ ಫೈ ಆಗಿದೆ. ಹೈ ಟೆಕ್ ಆಸ್ಪತ್ರೆ ಆಗಿ ಬದಲಾಗಿದೆ.
ಒಂದು ಭಾನುವಾರ ಬೆಳಿಗ್ಗೆ ಇಡೀ ರಾಜಾಜಿನಗರ ಬೆಚ್ಚಿ ಬೀಳುವ ಹಾಗೇ ದೊಡ್ಡ ಶಬ್ದ ಕೇಳಿಸಿತು. ಎಲ್ಲರೂ ಧಾವಂತದಿಂದ ಅವರವರ ಮನೆಗಳಿಂದ ಆಚೆ ಬಂದರು. ಏನು ಏನು ಅಂದುಕೊಂಡು ಅವರವರಲ್ಲೇ ಮಾತಾಡಿ ಕೊಂಡರು. ಸ್ವಲ್ಪ ಹೊತ್ತಿಗೆ ಮೊದಲು ವಿಮಾನ ಹೋಯಿತು, ಅದೇ ಸಿಡಿದು ಹೋಗಿರಬೇಕು ಎಂದು ತರ್ಕಿಸಿದರು. ಮನೆಗೆ ಬೀಗ ಜಡಿದು ಬಿದ್ದಿರುವ ವಿಮಾನದ ಅವಶೇಷ ನೋಡಲು ಸಾಲು ಸಾಲಾಗಿ ಇಡೀ ಸಂಸಾರ ಹೊರಟಿತು. ನಾನೂ ಈ ಗುಂಪಿನಲ್ಲಿದ್ದೆ. ಸುಮಾರು ದೂರ ಎರಡು ಮೂರು ಗಂಟೆ ನಡೆದೆವು ಅಂತ ಕಾಣುತ್ತೆ. ಎಲ್ಲೂ ವಿಮಾನದ ಅವಶೇಷ ಕಾಣಿಸಲಿಲ್ಲ. ಇನ್ನೂ ಮುಂದೆ ಬಿದ್ದಿರಬಹುದು ಅಂತ ಕೆಲವರು ಮುಂದುವರೆದರು. ಹಸಿವಾಗಿತ್ತು, ನಾವು ಹಿಂದಕ್ಕೆ ಹೆಜ್ಜೆ ಹಾಕಿದೆವು. ವಿಮಾನ ಆಕ್ಸಿಡೆಂಟ್ ಆಗಲಿಲ್ಲ, ಬದಲಿಗೆ ಅದೇನೋ ಕಾರಣದಿಂದ ಸೌಂಡ್ ಬಂತು ಅಂತ ಕೆಲ ದಿನಗಳ ನಂತರ ಮನೆಯಲ್ಲಿ ದೊಡ್ಡವರು ಮಾತಾಡುತ್ತಿದ್ದರು..!
(ಮುಂದುವರೆಯುವುದು…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.