ಚಿನ್ನದ ಕಳ್ಳರು ಕನ್ನ ಹಾಕಿದ ಮನೆಯ ಗ್ಯಾಜೆಟ್ ಗಳು ಕಣ್ಣೆದುರಿದ್ದರೂ ಮುಟ್ಟುವುದಿಲ್ಲ, ಹಣಕ್ಕಾಗಿ ಹುಡುಕುವುದಿಲ್ಲ. ಅವರು ಚಿನ್ನವನ್ನು ಕದಿಯುವುದಕ್ಕೆ ಮಾತ್ರ ಬದ್ಧರು ನಿಷ್ಠರು. ಅದಕ್ಕೆ ಕಾರಣ ಚಿನ್ನದ ಕಳ್ಳರ ಜಾಲ ತುಸು ಸಮಯದಲ್ಲಿ ಚಿನ್ನ ಕರಗಿಸಿ ಎಲ್ಲೋ ಸಾಗಿಸುವಂತಿರುತ್ತದೆ, ಕಾಲದ ಗ್ಯಾಜೆಟ್ ಗಳನ್ನು ಕದ್ದೊಯ್ದರೂ ಅವುಗಳ ಜಾಡು ಹಿಡಿದು ಪತ್ತೆ ಹಚ್ಚುವುದು ಕಷ್ಟವಲ್ಲ. ಲಕ್ಷಗಟ್ಟಲೆ ಚಿನ್ನ ಕಣ್ಣೆದುರು ಸಿಕ್ಕಿರುವಾಗ ಕಡಿಮೆ ಬೆಲೆಯ, ಕದ್ದುಟ್ರ್ಯಾಕ್ಆಗಿ ಸಿಕ್ಕಿಬೀಳಬಹುದಾದ ಮೊಬೈಲ್ ಐಪ್ಯಾಡ್ ಕಳ್ಳರನ್ನು ಆಕರ್ಷಿಸುವುದಿಲ್ಲ. ಇನ್ನು ಗ್ಯಾಜೆಟ್ ಕಳ್ಳರ ಜಾಲ ತಂಡ ಬೇರೆಯದ್ದೇ ಇರುತ್ತದೆ. ಅವರು ಮನೆಗೆ ನುಗ್ಗಿ ಸರಣಿ ಕಳ್ಳತನ ಮಾಡುವ ಸಾಧ್ಯತೆ ಕಡಿಮೆ.
ಯೋಗೀಂದ್ರ ಮರವಂತೆ ಅಂಕಣ

 

ಭಾರತದ ಸುಮಾರು ಮದುವೆಮನೆಗಳ ಆಸುಪಾಸಿನ ಮಾತುಕತೆಗಳಲ್ಲಿ ಬಂದು ಹೋಗುವ ಪ್ರಶ್ನೆಯೊಂದಿದೆ, “ಚಿನ್ನ ಎಷ್ಟು ಹಾಕಿದ್ದರಂತೆ?”. ಈ ಪ್ರಶ್ನೆಗೆ ದೊರೆಯುವ ಉತ್ತರದ ಆಧಾರದ ಮೇಲೆ ಮದುವೆಗೆ ಬಾರದವರೂ ಮದುವೆಯ ಹೆಣ್ಣಿಗೂ ಗಂಡಿಗೂ ದೂರದೂರದಿಂದಲೂ ಸಂಬಂಧ ಇಲ್ಲದವರೂ ಕೂಡ ಮದುವೆಯ ಮನೆಯ ಬಗೆಗಿನ ಕೆಲವು ತೀರ್ಮಾನಗಳನ್ನು ಸುಲಭವಾಗಿ ಕೈಗೊಳ್ಳುವುದು ಇದೆ. ಬಹಳಷ್ಟು ಭಾರತೀಯ ಮದುವೆಗಳ ಕೇಂದ್ರಸ್ಥಾನದಲ್ಲಿ ಚಿನ್ನದ ಕುರಿತ ಚರ್ಚೆ ಇರುತ್ತದೆ. ಚಿನ್ನದ ವಾದವಿವಾದಗಳಲ್ಲಿ ಸಂಬಂಧ ಕೂಡಿದ್ದು ಕಡಿದದ್ದು ಇದೆ. ಮನಸ್ಸುಗಳು ಮುರಿದದ್ದು ಜೀವಗಳು ಶವವಾದದ್ದು ಇದೆ. ಹೆಣ್ಣು ಮಗುವಿನ ಹೆತ್ತವರು ಆಕೆಯ ಬಾಲ್ಯದಿಂದಲೇ ಸ್ವಲ್ಪ ಸ್ವಲ್ಪ ಚಿನ್ನ ಕೂಡಿಡುವುದು ಆಭರಣ ಮಾಡಿಸಿಡುವುದು ಕೇಳಿದ, ನೋಡಿದ ವಿಷಯಗಳೇ.

ಬಂಡವಾಳ ಹೂಡಿಕೆಗೆಂದು ಚಿನ್ನ ಖರೀದಿ ಮಾಡಿ ಇಡುವವರೂ ಇದ್ದಾರೆ. ತನ್ನ ಅಪ್ಪಟತೆ ವಿನ್ಯಾಸಗಳಿಂದ “ಭಾರತೀಯ ಚಿನ್ನ” ಎನ್ನುವ ಬ್ರಾಂಡ್ ಕೂಡ ಸೃಷ್ಟಿ ಆಗಿದೆ. ಒಂದಾನೊಂದು ಕಾಲದಲ್ಲಿ ಭೂಗತ ಜಗತ್ತಿನ ದೊರೆಯಾಗಿದ್ದ ದಾವೂದ್ ಮತ್ತವನ ಗ್ಯಾಂಗಿನ ಬೆನ್ನ ಹಿಂದೆ ಭಾರತದ ಪೊಲೀಸ್ ಪಡೆ ಬಿದ್ದಿದ್ದಾಗ, ತಮಗೆ ನಿರಾಳವಾಗಿ ಚಿನ್ನದ ಕಳ್ಳ ಸಾಗಣೆ ಮಾಡುವುದಕ್ಕೆ ಬಿಟ್ಟರೆ ಭಾರತದ ಆಗಿನ ಅಷ್ಟೂ ಸಾಲವನ್ನು ತೀರಿಸಿಕೊಡುತ್ತೇನೆ ಎಂದು ದಾವೂದ್ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಹೇಳಿದ್ದನಂತೆ. ಆ ಕಾಲಕ್ಕೆ ಚಿನ್ನದ ಕಳ್ಳಸಾಗಣೆ ವ್ಯವಹಾರದ ಮಾರುಕಟ್ಟೆಯ ಗಾತ್ರ ಹಾಗು ಆ ವ್ಯಾಪಾರದಲ್ಲಿ ಇದ್ದ ಲಾಭ ಅಷ್ಟು.

ಜಾಗತೀಕರಣ, ಮುಕ್ತ ಮಾರುಕಟ್ಟೆ, ಆಮದು ರಫ್ತುಗಳಲ್ಲಾದ ಬದಲಾವಣೆಗಳಿಂದ ಚಿನ್ನದ ಕಳ್ಳಸಾಗಣೆಯ ಸ್ವರೂಪ ಇದೀಗ ಬದಲಾಗಿದೆ. ಕಾಲ ಬದಲಾದರೂ ಭಾರತದಲ್ಲಿ ರಾಜ್ಯ ಭಾಷೆ ಜಾತಿ ಧರ್ಮ ಪಂಥಗಳನ್ನು ಮೀರಿದ ಹೊನ್ನಿನ ಆಕರ್ಷಣೆ ಬದಲಾಗಿಲ್ಲ. ಇದು ಭಾರತಕ್ಕೆ ಮಾತ್ರ ಸೀಮಿತವಾದ ಮನೋಸ್ಥಿತಿಯಲ್ಲ, ಏಷ್ಯಾ ಉಪಖಂಡದ ಇತರ ದೇಶಗಳಾದ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿಯೂ ಉಳಿತಾಯ, ಬಂಡವಾಳ ಹೂಡಿಕೆ, ಪ್ರತಿಷ್ಠೆ, ಆಕರ್ಷಣೆಗಳ ಹೆಸರಲ್ಲಿ ಚಿನ್ನ ಅಪಾರ ಬೇಡಿಕೆಯನ್ನು ಹೊಂದಿದೆ.

ದಿನ ಬೆಳಗೆದ್ದು ಚಿನ್ನದ ದರವನ್ನು ಗಮನಿಸುವವರು ಎಷ್ಟು ಜನ ಬೇಡ. ತಮ್ಮ ಬದುಕಿನಲ್ಲಿ ಅಮೂಲ್ಯವಾದುದಕ್ಕೆ ಚಿನ್ನದ ಉಪಮೆ ಉದಾಹರಣೆ ಕೊಟ್ಟು ಮಾತಾಡುವವರು ಎಷ್ಟು ಜನ ಇಲ್ಲ. ಇಂತಹ ಆಕರ್ಷಣೆ ಏಷ್ಯಾದ ಮಣ್ಣಿನಲ್ಲಷ್ಟೇ ಅಲ್ಲದೆ ಆ ಮಣ್ಣಿನವರು ವಲಸೆ ಹೊದಲ್ಲೆಲ್ಲವೂ ಹೋದವರ ಜೊತೆಯೂ ಚಿನ್ನದ ಬಗೆಗಿನ ಸೆಳೆತ ಎಳೆತ ಜೀವಂತವಾಗಿದೆ. ಜಗತ್ತಿನಲ್ಲಿ ಏಷ್ಯಾದವರು ಎಲ್ಲೇ ಇರಲಿ ಅವರ ಹುಟ್ಟೂರಿನ ಚಿನ್ನದ ಸಂಪ್ರದಾಯ ಪರಂಪರೆಗಳು ಅವರೊಡನೆ ಇರುವ ಸಾಧ್ಯತೆ ಹೆಚ್ಚು. ಹೊನ್ನಿನ ಆಸೆ ಮೋಹ ಪರಂಪರೆಗಳನ್ನು ತಪ್ಪಿಸಿಕೊಂಡು ಬದುಕುವ ಏಷ್ಯಾದ ಜನರು ಕಡಿಮೆ. ತಂದೆ ತಾಯಿಯರಿಂದ ಮಕ್ಕಳಿಗೆ ಅತ್ತೆಯಿಂದ ಸೊಸೆಗೆ ಅಜ್ಜ ಅಜ್ಜಿಯಂದಿರಿಂದ ಮೊಮ್ಮಕ್ಕಳಿಗೆ ಉಡುಗೊರೆಯಾಗಿ ತಲೆತಲಾಂತರಗಳಿಂದ ಧಾರೆಯಾಗಿ ಆಸ್ತಿಯಾಗಿ ಚಿನ್ನ ಸಾಗುತ್ತಲೇ ಇದೆ. ವಿಮಾನ ಹಡಗು ಹತ್ತಿ ವಿಶ್ವವಲಸಿಗರಾಗಿರುವ ಏಷ್ಯಾದ ಜನರಂತೆ ಚಿನ್ನವೂ ಅವರೊಂದಿಗೆ ಲೋಕಸಂಚಾರಿಯೂ ಲೋಕಜೀವಿಯೂ ಆಗಿದೆ.

ಚಿನ್ನದ ಪೀಠಿಕೆಗೆ ಇಷ್ಟು ಸಾಕೇನೋ. ಎಲ್ಲೆಲ್ಲಿನ ಕತೆ ಬಿಟ್ಟು ಇದೀಗ ಇಲ್ಲಿನ ಅಂದರೆ ಸಂಯುಕ್ತ ಸಂಸ್ಥಾನದ ಅಥವಾ ಯು.ಕೆ ಯ ವಿಷಯಕ್ಕೆ ಬರುವ. ಆರು ಕೋಟಿ ಜನರಿರುವ ಯುನೈಟೆಡ್ ಕಿಂಗ್ಡಮ್ ಅಲ್ಲಿ ಮೂವತ್ತು ಲಕ್ಷಕ್ಕಿಂತ ಹೆಚ್ಚು ದಕ್ಷಿಣ ಏಷ್ಯಾದವರಿದ್ದಾರೆ. ಇಲ್ಲಿ ದಕ್ಷಿಣ ಏಷ್ಯಾದವರು ಎಷ್ಟು ಇದ್ದಾರೆ ಎನ್ನುವುದು ಇಲ್ಲಿಗೆ ವಲಸೆ ಬಂದ ಅಥವಾ ಇಲ್ಲೇ ಹುಟ್ಟಿದ ಆ ಮೂಲದವರಿಗೇ ಬೇಕೋ ಬೇಡವೋ ತಿಳಿದಿಲ್ಲ, ನಮ್ಮನ್ನೆಲ್ಲ ಒಳಸೇರಿಸಿಕೊಂಡ ಆಂಗ್ಲರಿಗೆ ಆ ಬಗ್ಗೆ ಅಸೂಯೆ ಆಕ್ರೋಶ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ದೇಶದ ಒಂದು ಬಗೆಯ ಜನರಿಗೆ ಮಾತ್ರ ನಮ್ಮ, ಅಂದರೆ ಏಷ್ಯಾ ಮೂಲದ ಜನಸಂಖ್ಯೆಯ ಕುರಿತು ವಿಶೇಷ ಆಸಕ್ತಿ ಮತ್ತು ಎಚ್ಚರ ಇದೆ. ನೇರವಾಗಿ ಹೇಳುವುದಾದರೆ ಇಲ್ಲಿನ ಕಳ್ಳರಿಗೆ!

ದಕ್ಷಿಣ ಏಷ್ಯಾದವರ ಮನೆಗೆ ಕನ್ನ ಬಿದ್ದು ಚಿನ್ನ ಕಳವಾಗುವುದು ಯುನೈಟೆಡ್ ಕಿಂಗ್ಡಮ್ ನ ಜನಪ್ರಿಯ ಕುಖ್ಯಾತ ಕಠೋರ ಅನವರತ ಸತ್ಯ. ಬಿಬಿಸಿ ಸುದ್ದಿ ಮಾಧ್ಯಮ ಮೊನ್ನೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಿದ ತನಿಖಾವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಯುನೈಟೆಡ್ ಕಿಂಗ್ಡಮ್ ಅಲ್ಲಿ 1200 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಚಿನ್ನ ಏಷಿಯಾದವರ ಮನೆಗಳಿಂದ ಕಳವಾಗಿದೆ (140 ಮಿಲಿಯನ್ ಪೌಂಡ್ ಗಿಂತ ಹೆಚ್ಚು). ಇದು ಪೂರ್ತಿ ಲೆಕ್ಕ ಅಲ್ಲದಿದ್ದರೂ, ಗಮನಕ್ಕೆ ಬಂದ, ಪೋಲೀಸರ ಬಳಿ ದೂರು ಹೋದದಷ್ಟದರ ಲೆಕ್ಕ ಮಾತ್ರ. ೨೦೧೩ರಿಂದ ಈಚೆಗೆ ಸುಮಾರು 28000 ಕಳವಿನ ಪ್ರಕರಣಗಳನ್ನು ಏಷ್ಯಾ ಜನರು ಇಲ್ಲಿ ದಾಖಲಿಸಿದ್ದಾರೆ. ಲಂಡನ್ ಆಸುಪಾಸಿನಲ್ಲಿ ಅತಿ ಹೆಚ್ಚು ಚಿನ್ನದ ಕಳ್ಳತನ ದಾಖಲಾಗಿದ್ದರೂ ಏಷ್ಯಾ ದವರು ಇದ್ದ ಊರಲ್ಲೆಲ್ಲ ಇಂತಹ ಕಳ್ಳತನಗಳು ನಡೆಯುತ್ತಲೇ ಇರುತ್ತವೆ ಎನ್ನುವುದು ಇಲ್ಲಿ ಎಲ್ಲರಿಗೂ ತಿಳಿದ ವಿಚಾರ. ಇಲ್ಲಿ ಯಾಕೆ ಹೀಗೆ ಎಂದು ಇಲ್ಲಿನ ಆರಕ್ಷಕ ಇಲಾಖೆಯವರನ್ನು ಕೇಳಿದರೆ ಅವರ ಸಿದ್ಧಾಂತ ಸಿದ್ಧವಿದೆ.

ಬ್ರಿಟನ್ನಿನ ಜನರು ಆಂಗ್ಲರು ಬಳಸುವ ಚಿನ್ನಗಳು ಅಪ್ಪಟವೂ ಅಲ್ಲ ಅಪರಂಜಿಯೂ ಅಲ್ಲ. ಅವು ಎಂಟೋ ಹತ್ತೋ ಕ್ಯಾರೆಟ್ ನ ಚಿನ್ನಗಳು. ಭಾರತ ಅಥವಾ ಏಷ್ಯಾ ಮೂಲದವರು ತಮ್ಮ ಊರುಗಳಿಂದ ತರುವ ಅಥವಾ ಅವರು ಇಲ್ಲೇ ಖರೀದಿಸುವ ಹೊನ್ನು ಇಪ್ಪತ್ತರಿಂದ ಇಪ್ಪತ್ತೆರಡು ಕ್ಯಾರೆಟ್ಟಿನದ್ದಾಗಿರುತ್ತದೆ. ಭಾರತೀಯ ಅಥವಾ ಏಷ್ಯಾದವರ ಮನೆಗಳಲ್ಲಿ ಇಂತಹ ಶುದ್ಧ ಬೆಲೆಬಾಳುವ ಚಿನ್ನದ ಆಭರಣಗಳು ಇರಬಹುದು ಎನ್ನುವ ವಿಷಯ ಬೇರೆ ಯಾರ ಗಮನಕ್ಕೆ ಬರಲಿ ಬಾರದಿರಲಿ ಈ ದೇಶದ ಕಳ್ಳರಿಗೆ ಮಾತ್ರ ತಿಳಿದಿದೆ.

ಪ್ರತಿ ವರ್ಷದ ಚಳಿಗಾಲದ ಸಮಯದಲ್ಲಿ ಚಿನ್ನದ ಕಳವಿನ ಪ್ರಕರಣಗಳು ಇಲ್ಲಿ ಹೆಚ್ಚುತ್ತವೆ. ಇಲ್ಲಿನ ಚಳಿಗಾಲ ಎಂದರೆ ತಡವಾಗಿ ಬೆಳಗಾಗುವುದು ಬೇಗ ಕತ್ತಲಾಗುವುದು. ರಾತ್ರಿಯ ಅವಧಿ ಉದ್ದ ದಿನದ ಗಾತ್ರ ಸಣ್ಣ. ಏಷ್ಯಾ ಮೂಲದವರು ಇಂತಹ ಮನೆಯೊಂದರಲ್ಲಿ ಇದ್ದಾರೆಂದು ದೃಢಪಡಿಸಿಕೊಂಡು, ಅವರ ಚಲನವಲಗಳನ್ನು ನೋಡಿಟ್ಟುಕೊಂಡು, ಪರಾರಿ ಆಗಲು ಅನುಕೂಲ ಆಗುವ ಸ್ಥಿತಿಗತಿ ನೆರೆಹೊರೆಯಲ್ಲಿ ಇದೆ ಎಂದೆಲ್ಲ ಖಾತ್ರಿ ಮಾಡಿಕೊಂಡು ಮನೆಯವರು ಇಲ್ಲದ ಸಮಯ ಸಾಧಿಸಿ ನುಗ್ಗಿ ಚಿನ್ನಕ್ಕಾಗಿ ಹುಡುಕಿ, ಇದ್ದರೆ ತೆಗೆದುಕೊಂಡು ಪರಾರಿಯಾಗುತ್ತಾರೆ. ಕೆಲವು ಮನೆಗಳ ಕಳ್ಳತನವನ್ನು ಕೇವಲ ಇಪ್ಪತ್ತು ನಿಮಿಷಗಳಲ್ಲಿ ಮುಗಿಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ಸರಳುಗಳಿಲ್ಲದ ಗಾಜಿನ ದೊಡ್ಡ ಕಿಟಕಿಗಳು ಅಷ್ಟೇನೂ ಭದ್ರವಲ್ಲದ ಬಾಗಿಲುಗಳು, ಎಲ್ಲರೂ ಕೆಲಸಕ್ಕೆ ಹೋಗುವ ನೆರೆಹೊರೆ, ಅತ್ಯಾಧುನಿಕ ಲೋಹ ಶೋಧಕಗಳು, ಅಪರಾಧ ವಿಜ್ಞಾನದ ಕುರಿತಾದ ಆಳವಾದ ಮಾಹಿತಿ, ಕದ್ದ ಚಿನ್ನವನ್ನು ಕೆಲವು ಕ್ಷಣಗಳಲ್ಲಿ ಕೈಬದಲಾಯಿಸಿ ಅವನ್ನು ತಕ್ಷಣ ಕರಗಿಸಿ ಬೇರೆ ರೂಪಕ್ಕೆ ಮಾರ್ಪಡಿಸುವ ತಂಡದ ಸಹಕಾರ ಇವೆಲ್ಲ ಸೇರಿ ಇಲ್ಲಿನ ಕಳ್ಳರು ಸುಮಾರು ವರ್ಷಗಳಿಂದ ಅವ್ಯಾಹತವಾಗಿ “ದಿ ಗ್ರೇಟ್ ಬ್ರಿಟಿಷ್ ಗೋಲ್ಡನ್ ಬರ್ಗ್ಲರಿ” ಯನ್ನು ಮುಂದುವರೆಸುತ್ತಲೇ ಇದ್ದಾರೆ. ಅವರಿಗೆ ಅನುಕೂಲ ಆಗುವಂತೆ ಇಲ್ಲಿನ ಕಾನೂನು ವ್ಯವಸ್ಥೆಯಲ್ಲಿ ಇಂತಹ ಕಳ್ಳತನಗಳನ್ನು ಯಾರೋ ಮಾಡಿದಾಗ ಅನುಮಾನದ ಮೇಲೆ ಹಿಡಿಯುವ ಅವಕಾಶ ಇಲ್ಲ. ಭಾರತದ ಕೆಲ ಊರುಗಳಲ್ಲಿ ಕಳ್ಳತನ ನಡೆದಾಗ ಪೋಲೀಸರ ಪಟ್ಟಿಯಲ್ಲಿರುವ ಖಾಯಂ ಕಳ್ಳರನ್ನು ಹುಡುಕಿ ತಂದು ತದಕಿ ಕಳ್ಳತನ ಮಾಡದವರೂ ಠಾಣೆಯ ರೌರವದಲ್ಲಿ ಅಯ್ಯೋ ತಾನೇ ಮಾಡಿದ್ದು ಎಂದು ಹೇಳುವ ಸಾಧ್ಯತೆಯೂ ಇಲ್ಲಿಲ್ಲ. ಆಧಾರ ಇದ್ದಲ್ಲಿ ಮಾತ್ರ ಹಿಡಿಯಬಹುದು ಇಲ್ಲದಿದ್ದರೆ ಹಿಡಿದ ಪೊಲೀಸರೇ ಕಂಬಿ ಎಣಿಸಬೇಕಾದೀತು.

ಚಿನ್ನವನ್ನು ಕದ್ದ ಕೆಲವೇ ಸಮಯದಲ್ಲಿ ಲೋಹವನ್ನು ಕರಗಿಸಿ ಅದರ ರೂಪ ಬದಲಾಯಿಸುವ ಜಾಲಕ್ಕೆ ಚಿನ್ನವನ್ನು ಹಸ್ತಾಂತರಿಸುವ ಇಲ್ಲಿನ ಕಳ್ಳರು ಒಂದೊಮ್ಮೆ ಕಳ್ಳತನ ಮಾಡಿ ಸ್ವಲ್ಪ ಸಮಯದ ನಂತರ ಸಿಕ್ಕಿಬಿದ್ದರೂ ಅವರು ಕದ್ದದ್ದು ಹೌದೇ ಆದರೂ, ಕದ್ದದ್ದು ಎಲ್ಲಿನ ಯಾರ ಚಿನ್ನ ಎಂದು ಗುರುತು ಹಿಡಿಯುವುದು ದುಸ್ಸಾಧ್ಯ. ಎರಡು ವರ್ಷಗಳ ಹಿಂದೆ ನಾನಿರುವ ಊರಾದ ಬ್ರಿಸ್ಟಲ್ ಅಲ್ಲಿ ಸರಣಿ ಕಳ್ಳತನಗಳು ನಡೆದಿದ್ದವು. ಬ್ರಿಸ್ಟಲ್ ಅಲ್ಲಿ ಭಾರತೀಯರೇ ಹೆಚ್ಚಾಗಿ ವಾಸಿಸುವ ಪ್ರದೇಶವೊಂದರಲ್ಲಿ ದಿನಕ್ಕೊಬ್ಬರ ಮನೆ ಎನ್ನುವಂತೆ ಹೊಂಚು ಹಾಕಿ ನುಗ್ಗಿ ಚಿನ್ನದ ಬೇಟೆಯಾಗುತ್ತಿತ್ತು. ಇಂತಹ ಹಲವು ಪ್ರಕರಣಗಳನ್ನು ಕಂಡು ಕೇಳಿದ ಈ ದೇಶದ ಪೊಲೀಸ್ ಪಡೆ ಏಷ್ಯಾದವರ ಮನೆಯ ಚಿನ್ನದ ಕಳ್ಳತನ ಬಗ್ಗೆ ಅಹಿಂಸಾವಾದಿ ವಿರಾಗಿ ಸಾಧುಸಂತರಂತೆ ಸಂದೇಶ ನೀಡುತ್ತಾರೆ. ಚಿನ್ನದ ಕಳ್ಳತನ ಎಲ್ಲೇ ಆದರೂ ಅವರ ಉತ್ತರ ಅದೇ ಆಗಿರುತ್ತದೆ. ನೀವು ಚಿನ್ನವನ್ನು ಮನೆಯಲ್ಲಿ ಯಾಕೆ ಇಟ್ಟುಕೊಳ್ಳುತ್ತೀರಿ, ಸುರಕ್ಷಿತ ಲಾಕರ ಅಲ್ಲಿ ಇಡುವುದಲ್ಲವೇ, ಚಿನ್ನಕ್ಕೆ ಇನ್ಶೂರೆನ್ಸ್ ಮಾಡಿಸಿಕೊಂಡಿದ್ದೀರಾ ಎನ್ನುವ ಪ್ರಶೆಗಳನ್ನು ಕೇಳಿ ಅದಕ್ಕೆ ದೊರೆಯುವ ಅವೇ ಅವೇ ಉತ್ತರಗಳನ್ನು ತಮ್ಮ ಫಾರಂ ಗಳಲ್ಲಿ ತುಂಬಿಸಿಕೊಂಡು ಮನೆಯ ತಪಾಸಣೆ ಮಾಡಿ ಹೋಗುತ್ತಾರೆ.

ದಕ್ಷಿಣ ಏಷ್ಯಾದವರ ಮನೆಗೆ ಕನ್ನ ಬಿದ್ದು ಚಿನ್ನ ಕಳವಾಗುವುದು ಯುನೈಟೆಡ್ ಕಿಂಗ್ಡಮ್ ನ ಜನಪ್ರಿಯ ಕುಖ್ಯಾತ ಕಠೋರ ಅನವರತ ಸತ್ಯ. ಬಿಬಿಸಿ ಸುದ್ದಿ ಮಾಧ್ಯಮ ಮೊನ್ನೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಿದ ತನಿಖಾವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಯುನೈಟೆಡ್ ಕಿಂಗ್ಡಮ್ ಅಲ್ಲಿ 1200 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಚಿನ್ನ ಏಷಿಯಾದವರ ಮನೆಗಳಿಂದ ಕಳವಾಗಿದೆ.

ಲಾಕರ್ ಗಳು ದುಬಾರಿ, ದಿನಬಳಕೆಯ ಎಷ್ಟೋ ಚಿನ್ನದ ಆಭರಣಗಳು ಲಾಕರ್ ಒಳ ಹೊರಗೆ ಮಾಡುತ್ತಿರುವುದು ಅನಾನುಕೂಲ ಎನ್ನುವುದು ಕಳಕೊಂಡವರ ಸಮಜಾಯಿಷಿಯಾದರೂ, ಇದು ಪೊಲೀಸರು ಒಪ್ಪುವ ಅಥವಾ ಪೊಲೀಸರಲ್ಲಿ ಅನುಕಂಪ ಹುಟ್ಟಿಸುವ ತರ್ಕವಲ್ಲ. “ಬಜೆಟ್ ಕಟ್” ನೆಪದಲ್ಲಿ ವರ್ಷದಿಂದ ವರ್ಷಕ್ಕೆ ಸಣ್ಣದಾಗುತ್ತಿರುವ ಈ ದೇಶದ ಚೋರ ನಿಗ್ರಹ ಪೊಲೀಸ್ ಪಡೆ ಚಿನ್ನದ ಕಳ್ಳರನ್ನು ಹಿಡಿದದ್ದು ಕಡಿಮೆ, ಕಳವಾದ ಮನೆಯವರ ವಿವರಗಳ ಫಾರಂ ತುಂಬಿದ್ದು ಹೆಚ್ಚು. ಇದೊಂದು ಸಮಯದಲ್ಲಿ ಇಲ್ಲಿನ ಭಾರತೀಯರು ಭಾರತೀಯ ಪೊಲೀಸರನ್ನು ಬಹಳ ಮಿಸ್ ಮಾಡುವುದಿದೆ. ಎಲ್ಲಾದರೂ ಭಾರತೀಯ ಪೊಲೀಸರು ಇಲ್ಲಿದ್ದಿದ್ದರೆ ಇಷ್ಟರೊಳಗೆ ಕಳ್ಳರನ್ನು ಅಥವಾ ತಾನೇ ಕಳ್ಳ ಎಂದು ಒಪ್ಪಿಕೊಳ್ಳುವ ಯಾರನ್ನಾದರೂ ಹಿಡಿದು ತೋರಿಸುತ್ತಿದ್ದರೇನೋ ಎಂದೆನ್ನಿಸುವುದಿದೆ.

ಬ್ರಿಸ್ಟಲ್ ಅಲ್ಲಿ ಎರಡು ವರ್ಷಗಳ ಹಿಂದೆ ಏಷ್ಯಾದ ಜನರ ಒತ್ತಾಯದ ಮೇರೆಗೆ ಪೊಲೀಸರೊಟ್ಟಿಗೆ ಸಂವಾದ ಏರ್ಪಟ್ಟಿತ್ತು. ಪರಂಪರೆ, ಸಂಪ್ರದಾಯ, ಶಕುನ, ಪ್ರತಿಷ್ಠೆ ಎಂದು ಚಿನ್ನ ಧರಿಸುವ, ಆಭರಣಗಳನ್ನು ಮನೆಯಲ್ಲಿ ಇಟ್ಟಿರುವ ನೂರಾರು ಜನರ ಮುಂದೆ ಪೊಲೀಸ್ ಇಲಾಖೆಯ ಚೋರ ವಿಭಾಗದ ಮುಖ್ಯಸ್ಥ ಮಾಹಿತಿ ನೀಡಿದ್ದ, ಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದ. ಆತನ ಭಾಷಣದ ಮೊದಲ ಸಾಲಿನಲ್ಲಿಯೇ ಕೆಲವು ವರ್ಷದ ಹಿಂದೆ ತನ್ನ ಮನೆಯಲ್ಲಿ ಹೇಗೆ ಕಳವಾಯಿತು ಮತ್ತೆ ಆ ಕಳ್ಳ ಇನ್ನೂ ಸಿಗದಿರುವ ವಿಷಯ ಪ್ರಸ್ತಾಪವಾಗಿತ್ತು. ಅವನ ಮನೆಗೆ ಬಂದವರು ಚಿನ್ನ ಕದಿಯಲು ಬಂದ ಕಳ್ಳರಲ್ಲವಾಗಿದ್ದರೂ ಅಭಿವೃದ್ಧಿ ಹೊಂದಿದ ದೇಶಗಳ ಮುಂದುವರಿದ ಕಳ್ಳರ ಪರಿಚಯವಂತೂ ಮಾಡಿಸಿದ್ದ. ಕೆಲವು ಚುರುಕು ಪರಿಣಿತ ಕಳ್ಳರೆದುರು ತಮ್ಮ ವ್ಯವಸ್ಥೆ ಹೇಗೆ ಹತಾಶ ಎಂದೂ ವಿವರಿಸಿದ್ದ .

ಚಿನ್ನದ ಕಳ್ಳರು ಕನ್ನ ಹಾಕಿದ ಮನೆಯ ಗ್ಯಾಜೆಟ್ ಗಳು ಕಣ್ಣೆದುರಿದ್ದರೂ ಮುಟ್ಟುವುದಿಲ್ಲ, ಹಣಕ್ಕಾಗಿ ಹುಡುಕುವುದಿಲ್ಲ. ಅವರು ಚಿನ್ನವನ್ನು ಕದಿಯುವುದಕ್ಕೆ ಮಾತ್ರ ಬದ್ಧರು ನಿಷ್ಠರು. ಅದಕ್ಕೆ ಕಾರಣ ಚಿನ್ನದ ಕಳ್ಳರ ಜಾಲ ತುಸು ಸಮಯದಲ್ಲಿ ಚಿನ್ನ ಕರಗಿಸಿ ಎಲ್ಲೋ ಸಾಗಿಸುವಂತಿರುತ್ತದೆ, ಈ ಕಾಲದ ಗ್ಯಾಜೆಟ್ ಗಳನ್ನು ಕದ್ದೊಯ್ದರೂ ಅವುಗಳ ಜಾಡು ಹಿಡಿದು ಪತ್ತೆ ಹಚ್ಚುವುದು ಕಷ್ಟವಲ್ಲ. ಲಕ್ಷಗಟ್ಟಲೆ ಚಿನ್ನ ಕಣ್ಣೆದುರು ಸಿಕ್ಕಿರುವಾಗ ಕಡಿಮೆ ಬೆಲೆಯ, ಕದ್ದು “ಟ್ರ್ಯಾಕ್” ಆಗಿ ಸಿಕ್ಕಿಬೀಳಬಹುದಾದ ಮೊಬೈಲ್ ಐಪ್ಯಾಡ್ ಕಳ್ಳರನ್ನು ಆಕರ್ಷಿಸುವುದಿಲ್ಲ. ಇನ್ನು ಗ್ಯಾಜೆಟ್ ಕಳ್ಳರ ಜಾಲ ತಂಡ ಬೇರೆಯದ್ದೇ ಇರುತ್ತದೆ. ಅವರು ಮನೆಗೆ ನುಗ್ಗಿ ಸರಣಿ ಕಳ್ಳತನ ಮಾಡುವ ಸಾಧ್ಯತೆ ಕಡಿಮೆ. ಯಾರಾದರೂ ಬಾಗಿಲು ತೆರೆದು ಇಟ್ಟರೆ ಬಂದು ಲಪಟಾಯಿಸಿ ಹೋಗುವ ಪುಡಿಗಳ್ಳರವರು.

ಕಳ್ಳತನದ ಹಿಂದೆ ಯಾವ ಉದ್ದೇಶವೇ ಇರಲಿ ಮನೆಯವರು ಇರುವಾಗಲೇ ಚೋರರು ಒಳ ನುಗ್ಗಿದರೆ ಯಾವ ಕಾರಣಕ್ಕೂ ಅವರ ಮೈ ಮುಟ್ಟಬಾರದು, ಅವರ ಮೇಲೆ ಬಲಪ್ರಯೋಗ ಮಾಡಬಾರದು ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದ . ಹಾಗೆಲ್ಲೋ ಆದರೆ ಆ ಮನೆಯವರದೇ ತಪ್ಪು ಎಂದಾಗುತ್ತದೆ, ಮನೆಯವರ ಮೇಲೆಯೇ ಕಾನೂನುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಹೆದರಿಸಿದ್ದರು. ಚಿನ್ನದ ಕಳ್ಳತನವನ್ನು ಕಡಿಮೆ ಮಾಡುವುದೆಂದರೆ ಮನೆಯಲ್ಲಿ ಚಿನ್ನವನ್ನು ಇಡದೆ ಇರುವುದು ಅಥವಾ ಚಿನ್ನದ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಎಂದೂ ಉಪದೇಶ ಮಾಡಿದ್ದರು. ಚಿನ್ನಕ್ಕಾಗಿ ಮನೆ ಮನೆ ಕನ್ನ ಹಾಕಿ ಎಲ್ಲೂ ಚಿನ್ನ ಸಿಗದೇ ಇದ್ದರೆ ಆಗ ಇಂತಹ ಕಳ್ಳತನ ಕಡಿಮೆ ಆದೀತು ಅಥವಾ ನಿಂತೇ ಹೋದೀತು ಎಂದು ಆಶಾಭಾವ ವ್ಯಕ್ತಪಡಿಸಿದ್ದ.

ಅಂದಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲ, ಇಲ್ಲಿ ಪೊಲೀಸ್ ಸಂವಾದ ಕಾರ್ಯಕ್ರಮ ನಡೆಯುತ್ತಿರುವಾಗ ಅಲ್ಲಿ ತಮ್ಮ ಮನೆಗೊಂದು ದೇವರ ದಯದಿಂದ ಕನ್ನ ಬೀಳದಿದ್ದರೆ ಸಾಕೆಂದು ಹಾರೈಸಿದವರೇ ಹೆಚ್ಚು.

ಪೊಲೀಸರ ಉಪದೇಶ ಏನಿದ್ದರೂ ಅದಕ್ಕೆ ಏಷಿಯಾ ಜನರ ಪ್ರತಿಕ್ರಿಯೆ ಹೇಗಿದ್ದರೂ ಚಿನ್ನದ ಕಳ್ಳತನದ ಘಟನೆಗಳು ಬ್ರಿಟನ್ ಅಲ್ಲಿ ಪ್ರತಿ ವರ್ಷವೂ ನಡೆಯುತ್ತಲೇ ಇವೆ ಸುದ್ದಿ ಆಗುತ್ತಲೇ ಇವೆ. ಕೆಲವರು ಮನೆಯಲ್ಲಿ ಸಿಸಿಟಿವಿ ಹಾಕಿಸಿಕೊಂಡರೆ ಕೆಲವರು ಕಿಟಕಿ ಬಾಗಿಲುಗಳನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಇನ್ನು ಚಿನ್ನ ಧರಿಸದವರು ಮನೆಯಲ್ಲಿ ಚಿನ್ನವನ್ನೇ ಇಡದವರು ಕಳ್ಳರು ತಮ್ಮ ಮನೆ ಹೊಕ್ಕರೆ ಏನೂ ಸಿಗುವುದಿಲ್ಲ ಎನ್ನುವುದು ಕಳ್ಳರಿಗೆ ಮೊದಲೇ ತಿಳಿದಿದ್ದರೆ ಚೆನ್ನಾಗಿತ್ತು ಹೇಗೆ ಎನ್ನುವ ಯೋಚನೆಯಲ್ಲಿದ್ದಾರೆ. ಇದ್ಯಾವುದರ ಗೊಡವೆ ಇಲ್ಲದೆ ಏಷಿಯಾದ ಅಪ್ಪಟ ಚಿನ್ನವನ್ನು, ಚಿನ್ನ ಇರಬಹುದಾದ ಮನೆಗಳನ್ನು ಕಳ್ಳರು ಹುಡುಕುತ್ತಲೇ ಇದ್ದಾರೆ ಇರುತ್ತಾರೆ.

ಸರಕಾರದ ವಾರ್ಷಿಕ ವೆಚ್ಚದಲ್ಲಿ ಕಳ್ಳತನದಂತಹ ಅಪರಾಧಗಳನ್ನು ನಿಗ್ರಹಿಸುವ ಪೊಲೀಸ್ ದಳಕ್ಕೆ ಕಡಿಮೆ ಹಣ ಮೀಸಲಿಟ್ಟಿರುವುದು, ತೀರಾ ಸಣ್ಣದಾದ ಪೊಲೀಸ್ ತಂಡ, ಸಣ್ಣ ಅಪರಾಧಗಳನ್ನು ನಿಭಾಯಿಸುವಲ್ಲಿ ಕಾನೂನಿನ ಪುಸ್ತಕದಲ್ಲಿರುವ ಸಡಿಲ ಸಾಲುಗಳು ಎಲ್ಲ ಸೇರಿ ಇಂತಹ ಕಳ್ಳತನಗಳು ಅವ್ಯಾಹತವಾಗಿ ನಡೆಯುವುದಕ್ಕೆ ಕಾರಣ ಎಂದು ಇಲ್ಲಿನ ಏಷ್ಯಾ ಮೂಲದ ಜನರು ನಂಬುತ್ತಾರೆ. ತಾವು ಅರ್ಥೈಸಿಕೊಳ್ಳಲಾಗದ ಈ ವಲಸಿಗರ ಚಿನ್ನದ ಮೋಹ ಹಾಗು ಬುದ್ಧಿವಂತರಾದ ಸಮಕಾಲೀನ ಕಳ್ಳರು ನಡುವೆ ತಮ್ಮಿಂದ ಇದಕ್ಕಿಂತ ಹೆಚ್ಚೇನೂ ಮಾಡಲಾಗದು ಎಂದು ಪೊಲೀಸರು ತಿಳಿಯುತ್ತಾರೆ. ತಮ್ಮ ಪಾರಂಪರಿಕ ಚಿನ್ನದ ಆಕರ್ಷಣೆಗಳಿಂದ ಪದ್ಧತಿಗಳಿಂದ ಹೊರಬರಲಾಗದಿರುವುದು, ಸರಕಾರದ ಅಸಡ್ಡೆ, ಇಲ್ಲಿನ ಪೊಲೀಸ್ ವ್ಯವಸ್ಥೆಯ ಅಸಹಾಯಕತೆಗಳು ಸೇರಿ ಚಿನ್ನದ ಕಳ್ಳತನಗಳನ್ನು ಜೀವಂತವಾಗಿಟ್ಟಿವೆ.

ಮನೆಯಲ್ಲಿ ಚಿನ್ನ ಇಟ್ಟುಕೊಂಡವರನ್ನು ಭಯ ಕಾಡುವಾಗ , ಕಳ್ಳತನವಾದ ಮನೆಗಳಲ್ಲಿ ಹತಾಶೆ ಶೋಕಗಳು ತುಂಬುವಾಗ ಇಲ್ಲಿನ ಚಿನ್ನದ ಚೋರರ ಬದುಕು ಮಾತ್ರ ಸದ್ಯಕ್ಕೆ ಸುವರ್ಣಮಯವಾಗಿದೆ.