ಬಾಪೂ ಎಂಬ ಕವಿತೆ
ಪದಕ್ಕೆ ಸಿಕ್ಕದ
ಅರ್ಥಕ್ಕೆ ದಕ್ಕದ
ಕವಿತೆ ಏಕಾದೆ ಬಾಪು?
ಇಷ್ಟೇ ಎಂದು
ಚೌಕಟ್ಟು ತೊಡಿಸಿಟ್ಟಿದ್ದನ್ನೆಲ್ಲಾ
ಮುರಿದು ತುಂಡರಿಸಿ
ಹಕ್ಕಿಯಂತೆ ಪುರ್ರನೆ ಹಾರಿ
ಬೊಚ್ಚು ಬಾಯಿಯ ಮಗುವಿನ
ನಗು ಅರಳಿಸುವಿಯಲ್ಲಾ!
ನಿನ್ನ ದೇಹವನ್ನರ್ಧವಷ್ಟೇ ಮುಚ್ಚುವ
ತುಂಡುಡುಗೆಯಂತೆ ನೀನೂ
ಅರ್ಥವಾದಷ್ಟೇ ಅರ್ಥವಾಗದ್ದೂ…
ಬಿಚ್ಚಿಕೊಂಡಷ್ಟೇ ಮುಚ್ಚಿಕೊಂಡದ್ದೂ…
ಕೂಡಿಸಿ, ಗುಣಿಸಿ, ಭಾಗಿಸಿ…
ಎಷ್ಟು ಅಳೆದರೂ
ಮಸಿ ಬಳಿದರೂ
ಆಕಾಶದಾಚೆಯ ಪರದೆ ಸರಿಸಿ
ಒಂದಿಷ್ಟೇ ಮುಖ ತೋರಿಸಿ
ಅದೇ ನಿಷ್ಕಲ್ಮಶ ನಗು
ಬಾಪೂ ಎಂಬ ಮಗು!

ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಒಂದು ಕಿರುಪದ್ಯಗಳ ಸಂಕಲನವೂ ಸೇರಿ ಐದು ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೂಲತಃ ಮೈಸೂರಿನವರು, ಸದ್ಯದ ನೆಲೆ ಹಾಸನ.

ಚೆಂದ