ಬಯಲ ಬದುಕು ….
ಹಚ್ಚಲು ದೀಪವಿಲ್ಲ
ಹೊದ್ದು ಮಲಗಲು ಹಚ್ಚಡವಿಲ್ಲ
ನೆಲದ ಬುತ್ತಿ ಉಂಡು
ಮೈಯ ಉಸಿರ ಬಸಿದು
ದಣಿವರಿದು ಮರೆವ ಎಲ್ಲ
ಇಹ ಪರದ ನಾಕವ
ಊರು ಯಾವುದಾದರೇನು ?
ದಾರಿ ಹೇಗಿದ್ದರೇನು?
ಅಂಜು -ಅಳುಕಿಗೆ
ಇಲ್ಲಿ ತಾವಿಲ್ಲಾ ….
ಒಲೆ ಉರಿದಷ್ಟೇ ತಾಪ
ಬದುಕಿಗೂ ಇದ್ದರು
ಕ್ಷೀಣಿಸದ ಭರವಸೆ ಚಿಂತೆಗಳಿಗೆ ಇಲ್ಲಿ
ಜಾಗವಿಲ್ಲ ಹೋಗುವ ಹಾದಿಗೆ
ಜೊತೆಯಿಲ್ಲ…..
ಹಸಿದು ಉಣ್ಣುವದು ಗೊತ್ತು
ಬಯಲ ರುಚಿಗೆ ಸಮಯಾವುದಿತ್ತು ?
ಬಟ್ಟೆ ಹರಿದರು ಹೃದಯ ಒಡೆದಿಲ್ಲ
ಯಾಕೆಂದರೆ ಅದು
ನಂಜಿನ ತಾಣವಲ್ಲ ….
ಬಯಲ ಬಾಳಿಗೆ
ಒಲುಮೆ ಜೋಳಿಗೆ
ಹರಿಯುತಿಹುದು ಜೀವನ
ಪಾತ್ರಗಳ ಬದಲಿಸುತ ನಿಂತ
ನೀರಾಗದೆ ನಿರಾಳವಾಗಿ …..
ರೇಶ್ಮಾಗುಳೇದಗುಡ್ಡಾಕರ್ ಬಳ್ಳಾರಿ ಜಿಲ್ಲೆಯ, ಕೊಟ್ಟೂರು ಪಟ್ಟಣದವರು
ಓದುವುದು ಇವರ ಹವ್ಯಾಸ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ