ಇಲ್ಲಿನ ಇಡೀ ವ್ಯವಸ್ಥೆ ಬಸವತತ್ತ್ವಕ್ಕೆ ವಿರುದ್ಧವಾಗಿದೆ. ಬಸವಧರ್ಮದಲ್ಲಿ ಯಜ್ಞಯಾಗಾದಿಗಳಿಲ್ಲ. ನವಗ್ರಹಗಳ ಪೂಜೆ ಇಲ್ಲ. ಮೂರ್ತಿ ಮಂದಿರಗಳೇ ಇಲ್ಲ. ಕರ್ಮಸಿದ್ಧಾಂತವಿಲ್ಲ. ಸ್ವರ್ಗ ನರಕ ಪುನರ್ಜನ್ಮಗಳಿಲ್ಲ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಜೀವಕಾರುಣ್ಯದ ಮೇಲೆ ಬಸವತತ್ತ್ವ ನಿಂತಿದೆ. ಯೋಗ್ಯ ಉತ್ಪಾದನೆಯ ಕಾಯಕ, ನಿಸರ್ಗ ಮತ್ತು ಮಾನವ ಉತ್ಪನ್ನದ ಯಾವುದೂ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಪ್ರಸಾದ ಪ್ರಜ್ಞೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯ ದಾಸೋಹ ಜ್ಞಾನ ಈ ಮೂರೂ ಬಸವತತ್ತ್ವದಲ್ಲಿ ಪ್ರಮುಖವಾಗಿವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 95ನೇ ಕಂತು ನಿಮ್ಮ ಓದಿಗೆ
ಹತ್ತು ವರ್ಷಗಳ ಹಿಂದೆ ಬೇರೊಂದು ಕಾರ್ಯಕ್ರಮಕ್ಕಾಗಿ ಅಮೆರಿಕಕ್ಕೆ ಹೋದಾಗ, ಇನ್ನಿತರ ಕಾರ್ಯಕ್ರಮಗಳಿಗಾಗಿ ಒಂದೂವರೆ ತಿಂಗಳು ಉಳಿಯಬೇಕಾಯಿತು. ಅಮೆರಿಕದ ಪಶ್ಚಿಮ ಭಾಗದಲ್ಲಿದ್ದ ನಾನು ಆಹ್ವಾನದ ಮೇರೆಗೆ ಪೂರ್ವಭಾಗಕ್ಕೆ ಬರಬೇಕಾಯಿತು. ಅಲ್ಲಿ ಬಸವ ದರ್ಶನದ ಕುರಿತು ಮಾತನಾಡಬೇಕಿತ್ತು. ಆ ಸಭೆಯ ಹಿನ್ನೆಲೆಯ ಕುರಿತು ಚಿಂತಿಸದೆ ಬಂದದ್ದಕ್ಕೆ ಆಶ್ಚರ್ಯ ಕಾದಿತ್ತು. ಆ ಸ್ಥಳ ಲಿಂಗಾಯತ ಯಾನೆ ವೀರಶೈವ, ಯಾನೆ ವೀರಶೈವ ಲಿಂಗಾಯತ, ಯಾನೆ ಹಿಂದೂ ವೀರಶೈವ ಲಿಂಗಾಯತ ಕೇಂದ್ರವಾಗಿತ್ತು ಎಂಬುದನ್ನು ಅಲ್ಲಿಯ ವಾತಾವರಣವೇ ಸೂಚಿಸುತ್ತಿತ್ತು.
ವಿಶಾಲವಾದ ಆವರಣದೊಳಗೆ ಆ ಕೇಂದ್ರ ಇನ್ನೂ ದೂರದಿಂದಲೇ ಆಕರ್ಷಕವಾಗಿ ಎದ್ದು ಕಾಣುತ್ತಿತ್ತು. ಜುಲೈ ತಿಂಗಳ ಸಾಯಂಕಾಲದ ಹಿತಕರ ತಂಗಾಳಿಯೊಂದಿಗೆ ಮನೋಹರವಾದ ವಾತಾವರಣದಲ್ಲಿ ಆ ಕೇಂದ್ರದ ಸುಂದರ ಕಟ್ಟಡ ಇನ್ನೂ ಆಕರ್ಷಕವಾಗಿ ಮನಸ್ಸಿಗೆ ಮುದ ನೀಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲಿನ ಬಸವಣ್ಣನವರ ಆ ಸುಂದರ ಸ್ಥಳವನ್ನು ಅದರ ಒಳಗೆ ಹೋಗಿ ಆನಂದಿಸಬೇಕು ಎಂಬ ಬಯಕೆ ನನ್ನದಾಗಿತ್ತು. ಬಾಗಿಲ ಬಳಿ ಕಾರು ಬಂದು ನಿಂತಾಗ ಇಳಿದು ಖುಷಿಯಿಂದ ಒಳಗೆ ಕಾಲಿಡುತ್ತಲೇ ಬೆಚ್ಚಿಬಿದ್ದೆ!
ಎದುರುಗಡೆ ಆಳೆತ್ತರದ ತಿರುಪತಿ ಮೂರ್ತಿ, ಪಕ್ಕದಲ್ಲೇ ಚಾಮುಂಡೇಶ್ವರಿ, ಒಂದು ಕಡೆ ತಮಿಳು ನಾಡಿನಿಂದ ಬಂದ ಎನ್.ಆರ್.ಐಗಳಿಗಾಗಿ ಕಪ್ಪುಶಿಲೆಯ ಗಣಪತಿ, ಇನ್ನೊಂದು ಕಡೆ ಉತ್ತರ ಭಾರತದವರಿಗಾಗಿ ಅಮೃತಶಿಲೆಯ ಗಣಪ, ಎದ್ದು ಕಾಣುವ ಸ್ವಾವರ ಲಿಂಗ, ಸುತ್ತೆಲ್ಲ ದೇವಾನುದೇವತೆಗಳು, ಮೂಲೆಯೊಂದರಲ್ಲಿ ನವಗ್ರಹ ಮೂರ್ತಿಗಳು. ಒಟ್ಟಾರೆ ಭಾರತದ ವಿವಿಧ ಪ್ರಕಾರದ ದೇವಾನುದೇವತೆಗಳ ಮಹಾಲಯದ ಹಾಗೆ ಆ ಕೇಂದ್ರ ಕಾಣತೊಡಗಿತು. ಎದುರುಗಡೆ ಚಂಡಿಕಾ ಹೋಮ!
ಅಮೆರಿಕದಲ್ಲಿ ಅನೇಕ ವರ್ಷಗಳಿಂದ ನೆಲೆಯೂರಿದ ಲಿಂಗಾಯತರನ್ನು, ವೀರಶೈವರನ್ನು ಮತ್ತು ಒಟ್ಟಾರೆ ಹಿಂದುಗಳನ್ನು ಒಂದುಗೂಡಿಸುವ ತಾಣವಿದು ಎಂದು ಆ ಕೇಂದ್ರದವರು ಸಮಜಾಯಿಷಿ ನೀಡಿದರು. ಆದರೆ ಇದಕ್ಕೆ ಯಾವುದೇ ಲಿಂಗಾಯತ ಸಿದ್ಧಾಂತದ ಗಂಧವಿಲ್ಲ ಎಂಬುದರ ಅರಿವಾಗಿ ಖೇದವೆನಿಸಿತು. ಇವೆಲ್ಲವುಗಳ ಮಧ್ಯೆ ಬಸವಣ್ಣನವರ ಮೂರ್ತಿ ಇಲ್ಲದ್ದು ಒಂದಿಷ್ಟು ನೆಮ್ಮದಿಯನ್ನುಂಟುಮಾಡಿತು.
ನನಗೆ ಕರೆತಂದವರು ಅದು ಇದು ಹೇಳುತ್ತಿದ್ದರು. ಎನ್ನಾರೈಗಳನ್ನು ಒಂದುಗೂಡಿಸುವ ಉದ್ದೇಶದಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಹಾರಾಷ್ಟ್ರದವರಿಗಾಗಿ ಬಿಳಿ ಗಣಪ, ತಮಿಳುನಾಡಿನವರಿಗಾಗಿ ಕಪ್ಪು ಗಣಪ ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.
ಸರಿಯಾದ ಸಮಯಕ್ಕೆ ಸಭೆ ಪ್ರಾರಂಭವಾಯಿತು. ನಾನು ಸಭೆಯಲ್ಲಿ ಮಾತನಾಡುತ್ತ, “ನೀವು ನನಗೆ ಬಸವತತ್ತ್ವದ ಕುರಿತು ಮಾತನಾಡಲು ಕರೆಸಿದ್ದೀರಿ. ನಿಮ್ಮ ಇಲ್ಲಿನ ವ್ಯವಸ್ಥೆಯನ್ನು ಗಮನಿಸಿದೆ. ನಿಮ್ಮ ಬಸವಕೇಂದ್ರ ಹೇಗಿರಬೇಕು ಎಂಬುದು ನಿಮ್ಮ ಆಲೋಚನೆಗಳ ಮೇಲೆ ನಿಂತಿದೆ. ಆ ಕುರಿತು ಮಾತನಾಡಲು ನನಗೆ ಯಾವುದೇ ಹಕ್ಕಿಲ್ಲ. ಆದರೆ ಬಸವತತ್ತ್ವದ ಕುರಿತು ಮಾತನಾಡಲು ತಿಳಿಸಿರುವಿರಿ. ಆ ಪ್ರಕಾರ ಮಾತನಾಡಬೇಕೆಂದರೆ ಇಲ್ಲಿನ ಇಡೀ ವ್ಯವಸ್ಥೆ ಬಸವತತ್ತ್ವಕ್ಕೆ ವಿರುದ್ಧವಾಗಿದೆ. ಬಸವಧರ್ಮದಲ್ಲಿ ಯಜ್ಞಯಾಗಾದಿಗಳಿಲ್ಲ. ನವಗ್ರಹಗಳ ಪೂಜೆ ಇಲ್ಲ. ಮೂರ್ತಿ ಮಂದಿರಗಳೇ ಇಲ್ಲ. ಕರ್ಮಸಿದ್ಧಾಂತವಿಲ್ಲ. ಸ್ವರ್ಗ ನರಕ ಪುನರ್ಜನ್ಮಗಳಿಲ್ಲ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಜೀವಕಾರುಣ್ಯದ ಮೇಲೆ ಬಸವತತ್ತ್ವ ನಿಂತಿದೆ. ಯೋಗ್ಯ ಉತ್ಪಾದನೆಯ ಕಾಯಕ, ನಿಸರ್ಗ ಮತ್ತು ಮಾನವ ಉತ್ಪನ್ನದ ಯಾವುದೂ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಪ್ರಸಾದ ಪ್ರಜ್ಞೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯ ದಾಸೋಹ ಜ್ಞಾನ ಈ ಮೂರೂ ಬಸವತತ್ತ್ವದಲ್ಲಿ ಪ್ರಮುಖವಾಗಿವೆ. ಇಲ್ಲಿ ಅರಿವೇ ಗುರು, ಇಷ್ಟಲಿಂಗವು ಮಾನವ ಏಕತೆಯ ತತ್ತ್ವದ ಸಂಕೇತ, ಸಮಾಜವೇ ಜಂಗಮ. ಅರಿವು, ತತ್ತ್ವ ಮತ್ತು ಸಮಾಜ ಸೇವೆಯೆ ತ್ರಿವಿಧ ದಾಸೋಹ” ಎಂದು ಮುಂತಾಗಿ ವಿವರಿಸಿದೆ.
ಶ್ರೋತೃಗಳು ತದೇಕ ಚಿತ್ತದಿಂದ ಕೇಳಿದರು. ಕೊನೆಗೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತ ಗೌರವ ಸೂಚಿಸಿದರು. ಅವರಲ್ಲಿ ವಿಜ್ಞಾನಿಗಳು, ವೈದ್ಯರು, ವಕೀಲರು, ಪ್ರಾಧ್ಯಾಪಕರು, ಸಾಫ್ಟ್‌ವೇರ್ ಎಂಜಿನಿಯರುಗಳು ಮುಂತಾದವರು ಇದ್ದರು.
ಸಮಾರಂಭದ ನಂತರ ಬಫೆ ವ್ಯವಸ್ಥೆ ಇತ್ತು. ಆಗ ಬಹಳಷ್ಟು ಜನ ಬಂದು ಬಂದು ಮಾತನಾಡಿಸುತ್ತಿದ್ದರು. ಅವರಲ್ಲಿ ಬಸವತತ್ತ್ವದ ಬಗೆಗಿನ ಅಭಿಮಾನ ಎದ್ದು ಕಾಣಿಸುತ್ತಿತ್ತು.
‘ನಮ್ಮ ತಾಯಿ ತಂದೆಗಳು ನಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿವಳಿಕೆ ನೀಡಿಲ್ಲʼ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ‘ನಮ್ಮ ಸ್ವಾಮಿಗಳು ಬಸವತ್ತ್ವದ ಇಂಥ ವಿಚಾರಗಳನ್ನು ತಿಳಿಸಲಿಲ್ಲʼ ಎಂದರು. ‘ಇಲ್ಲಿ ಅನೇಕ ಸ್ವಾಮಿಗಳು ಬಂದು ಪ್ರವಚನ ಮಾಡಿದ್ದಾರೆ. ಆದರೆ ಯಾರೂ ಈ ಕುರಿತು ಮಾತನಾಡಿಲ್ಲʼ ಎಂದು ವಯಸ್ಸಾದ ಗೃಹಿಣಿಯೊಬ್ಬರು ತಿಳಿಸಿದರು.
ಆ ಕೇಂದ್ರ ಸರ್ವಧರ್ಮಗಳ ಕೇಂದ್ರವಾಗಿದ್ದರೆ ಯಾವುದೇ ಬೇಸರವಿರಲಿಲ್ಲ. ಆದರೆ ಲಿಂಗಾಯತದ ಮಹತ್ವವನ್ನು ಅಳಿಸಿ ಹಾಕುತ್ತದೆ ಎಂಬ ಭಾವ ಮೂಡಿತು. ಆಗ Edgar Thurston (೧೮೫೫-೧೯೩೫) ಅವರು ತಮ್ಮ Castes and Tribes of Southern India –Volume IV ಗ್ರಂಥದಲ್ಲಿ ಬರೆದದ್ದು ನೆನಪಾಯಿತು. (ಒಟ್ಟು ೭ ಸಂಪುಟಗಳಲ್ಲಿ ದಕ್ಷಿಣ ಭಾರತದ ಜಾತಿಗಳು ಮತ್ತು ಬುಡಕಟ್ಟುಗಳ ಕುರಿತು ದಾಖಲಿಸಿದ್ದಾರೆ.)
“If Lingayatism was an island thrown up within the boundless sea of Hinduism, it would appear that the waters of the ocean are doing their upmost to undermine the solid foundations.”
(ಹಿಂದೂ ಧರ್ಮ ಎಂಬ ಅನಂತ ಸಾಗರದಲ್ಲಿ ಲಿಂಗಾಯತ ಧರ್ಮವನ್ನು ನಡುಗಡ್ಡೆಯಂತೆ ಎಸೆದರೆ, ಆ ಸಾಗರದ ತೆರೆಗಳು ನಿರಂತರವಾಗಿ ಅದರ ಮೇಲೆ ಅಪ್ಪಳಿಸುತ್ತ, ಕೆಳಗಡೆ ಅದರ ಗಟ್ಟಿಯಾದ ಅಡಿಪಾಯವನ್ನೇ ಹಾಳುಮಾಡುವವು.)

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.