ಈ ಜಗತ್ತಿನ ಅತ್ಯುನ್ನತ ಶಾಂತಿ ಪುರಸ್ಕಾರವನ್ನು 2010ರ ಸಾಲಿನಲ್ಲಿ ಪಡೆದ ಆ ವ್ಯಕ್ತಿಗೆ ಬಹುಶಃ ಆಗ ತನಗೆ ಪ್ರಶಸ್ತಿ ಬಂದಿದೆ ಎಂಬುದು ಸರಿಯಾಗಿ ಗೊತ್ತಾಗಿತ್ತೋ ಇಲ್ಲವೋ?
ಯಾಕೆಂದರೆ ಆ ಶಾಂತಿದೂತ ಇದೀಗ ಜೈಲಿನಲ್ಲಿದ್ದಾನೆ. ಜೈಲು ಸೇರಿ ಆಗಲೇ ವರ್ಷವಾಯಿತು. ಅವನಿಗೆ ನಿಗದಿಪಡಿಸಿರುವ ಶಿಕ್ಷೆ ಪ್ರಕಾರ ಇನ್ನೂ ಹತ್ತು ವರ್ಷ ಆತ ಜೈಲಿನಲ್ಲೇ ಇರಬೇಕಾಗುತ್ತದೆ. ಇದರ ಜೊತೆಗೆ ಈ ಸುದ್ದಿ ಚೀನಾ ರಾಷ್ಟ್ರವನ್ನು ಹಬ್ಬದಿರುವಂತೆ ಮಾಧ್ಯಮಗಳ ಮೇಲೆ ಆ ದೇಶದ ಸರ್ಕಾರ ನಿರ್ಬಂಧ ಬೇರೆ ಹೇರಿದೆ. ಹಾಗಾಗಿ ಜೈಲಿನಲ್ಲಿ ಕುಳಿತ ಆ ಶಾಂತಸಂತನಿಗೆ ಆ ದಿನವೂ ಹಿಂದಿನ ದಿನಗಳಂತೇ ಮತ್ತೊಂದು ಬೆಳಗಾಗಿತ್ತು, ಮಧ್ಯಾಹ್ನವಾಗಿತ್ತು, ರಾತ್ರಿಯಾಗಿದೆ. ಆದರೆ ಆ ಶುಕ್ರವಾರ ಇಡೀ ಚೀನಾಕ್ಕೆ, ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಯಸುವ ಚೀನಾಕ್ಕೆ ಅದೊಂದು ಶುಭ ಶುಕ್ರವಾರ.
-ಆತನ ಹೆಸರು ಲಿಯು ಶಿಯಾಬೋ. ಈ ಸಲದ ನೊಬೆಲ್ ಶಾಂತಿ ಪುರಸ್ಕೃತ. ಐವತ್ತ್ನಾಲ್ಕು ವರ್ಷ ವಯಸ್ಸಿನ ಈ ಶಾಂತಸಂತ, ಚೀನಾದ ಪ್ರತಿ ಮನೆಗಳಿಗೆ ಸ್ವಾತಂತ್ರ್ಯದ ಆಸೆಯನ್ನು ಹೊತ್ತು ತಂದವನು, ಪ್ರತಿ ಮನೆಯ ಭವಿಷ್ಯದ ಬರಹಗಾರನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಭರವಸೆಯನ್ನು ಕೊಟ್ಟವನು. ಆದರೆ ದುರಾದೃಷ್ಟ, ಅವನು ಹೋರಾಟ ಮಾಡಿದಾಗೆಲ್ಲಾ ಜೈಲು ಅವನನ್ನು ಕರೆಯುತ್ತಿತ್ತು. 1989ರಲ್ಲಿ ಮೊತ್ತಮೊದಲಿಗೆ ಲಿಯು ಜೈಲು ಸೇರಿದ್ದು. ಆಗ ಆತನಿಗೆ 34 ವರ್ಷ ವಯಸ್ಸು. ಆಮೇಲೆ ಜೈಲು ವಾಸ ಅಥವಾ ಸರ್ಕಾರದ ತೀವ್ರ ನಿಗಾ ಅಥವಾ ನಿರ್ಬಂಧಗಳು ಈತನ ಮೇಲೆ ಹೇರಲ್ಪಡುತ್ತಲೇ ಇದ್ದವು. ಹಾಗಾಗಿ ಪ್ರಶಸ್ತಿ ದೊರೆಯುವ ಹೊತ್ತಿಗೂ ಲಿಯು ಜೈಲಲ್ಲೇ ಇದ್ದಾನೆ.
ಈ ಬಾರಿ ಆತನಿಗೆ ಶಾಂತಿ ಪ್ರಶಸ್ತಿ ಬಂದೇಬರುತ್ತದೆ ಎಂದು ಇಡೀ ಚೀನಾ ನಂಬಿತ್ತು. ಅದಕ್ಕೆ ಒತ್ತಾಸೆಯಾಗಿ ದಲೈಲಾಮಾನಂಥ ಜಗತ್ತಿನ ಶಾಂತಿ ಪ್ರತಿಪಾದಕರೆಲ್ಲಾ ನಿಂತಿದ್ದರು. ಆದರೆ ಶಾಂತಿ ಪುರಸ್ಕಾರಕ್ಕೆ ಯಾವ ಕಾರಣಕ್ಕೂ ಲಿಯುವನ್ನು ಆಯ್ಕೆ ಮಾಡದಿರುವಂತೆ ಚೀನಾ ಸರ್ಕಾರ, ನೊಬೆಲ್ ಆಯ್ಕೆ ಸಮಿತಿಗೆ ತಾಕೀತು ಮಾಡಿತ್ತು. ಕೊಟ್ಟರೆ ಚೀನಾ- ನಾರ್ವೆ ರಾಜಕೀಯ ಸಂಬಂಧಕ್ಕೆ ತೊಂದರೆ ಆಗಬಹುದು ಎಂದೂ ಧಮಕಿ ಹಾಕಿತ್ತು. ಆದರೆ ಕೊನೆಗೂ ಶಾಂತಿ ಗೆದ್ದಿದೆ, ಶಾಂತಿದೂತನ ಶ್ರಮವನ್ನು ಸಮಿತಿ ಪುರಸ್ಕರಿಸಿದೆ.
ಲಿಯು ಎಂಬ ದಿಟ್ಟ ಮೂರ್ತಿ
ಲಿಯು ಶಿಯಾಬೋ ಚೀನಾದ ಮಣ್ಣಲ್ಲಿ ಹುಟ್ಟಿದ ಹೋರಾಟಗಾರ, ಬರಹಗಾರ, ಮಾನವ ಹಕ್ಕುಗಳ ಪ್ರತಿಪಾದಕ, ಉಪನ್ಯಾಸಕ, ಅಭಿವ್ಯಕ್ತಿ ಸ್ವಾತಂತ್ರ್ಯದ ಕನಸುಗಾರ. ಹುಟ್ಟಿನಿಂದ ಹೋರಾಟಗಾರ. ಚಿಂತಕರ ಕುಟುಂಬಮೂಲದಿಂದಲೇ ಹುಟ್ಟಿ ಬಂದಿದ್ದಕ್ಕೋ ಏನೋ ಅವನೊಳಗೂ ಒಬ್ಬ ಬರಹಗಾರ ಇದ್ದ, ಕ್ರಾಂತಿಕಾರಿ ವಿಚಾರಗಳು ತಲೆಯೊಳಗೆ ಮೊಳಕೆಯೊಡೆಯುತ್ತಿದ್ದವು. ಓದಿ ಬೀಜಿಂಗ್ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದಲ್ಲಿ ಎಂಎ ಪದವಿ ಪಡೆದ. ಅದೇ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾದ. ಆ ಸಂದರ್ಭದಲ್ಲೇ ದೇಶದ ಪ್ರಸಿದ್ಧ ಇತಿಹಾಸಕಾರರನ್ನೇ ಟೀಕಿಸಿ ಲೇಖನ ಮಾಲೆಯನ್ನೇ ಪ್ರಕಟಿಸಿ ಗಮನ ಸೆಳೆಯತೊಡಗಿದ. ಅದರಿಂದಾಗಿ ಅಪಾರ ಹೆಸರು ಗಳಿಸುತ್ತಲೇ ಲಿಯು ಚೀನಾದಲ್ಲಷ್ಟೇ ಅಲ್ಲ, ಹೊರ ರಾಷ್ಟ್ರಗಳಿಗೂ ಹೋಗಿ ಉಪನ್ಯಾಸ ನೀಡತೊಡಗಿದ. ಅವನಿಗೆ, ಅವನ ಚಿಂತನೆಗಳಿಗೆ ಅಭಿಮಾನಿಗಳ ವರ್ಗವೇ ಬೆಳೆಯತೊಡಗಿತ್ತು. ದೇಶ, ವಿದೇಶಗಳ ಹುಬ್ಬುಗಳು ಅವನ ಪ್ರತಿ ಸಾಧನೆಗೆ ಮೇಲೇರುತ್ತಲೇ ಹೋದವು. ಆ ಹಂತದಲ್ಲೇ ಚೀನಾ ಸಾಮಾಜಿಕ ಇತಿಹಾಸದಲ್ಲೇ ಮಹತ್ತರವಾದ ಥಿಯಾನಾನ್ಮನ್ ಎಂಬ ಪ್ರಮುಖ ಚಳುವಳಿ ಶುರುವಾಗಿತ್ತು. ಅದು ದೊಡ್ಡ ಮಟ್ಟದ ಹೋರಾಟವಾಗುವ ಲಕ್ಷಣ ಕಾಣಿಸುತ್ತಲೇ ಹೊರರಾಷ್ಟ್ರದಲ್ಲಿದ್ದ ಲಿಯು, ತವರಿಗೆ ಮರಳಿದ, ಚಳುವಳಿಯ ನೇತೃತ್ವ ವಹಿಸಿದ. ಅಷ್ಟೇ ಸಾಕಾಯಿತು, ಲಿಯುನನ್ನು ಸರ್ಕಾರ ಬಂಧಿಸಿ ಸೆರೆಗೆ ತಳ್ಳಿತು.
ತಳ್ಳಿದಷ್ಟೂ ಪುಟಿಯುವ ಚಂಡಿನಂತೆ ಲಿಯು ಒಳಗೆ ಕ್ರಾಂತಿಯ ಊಟೆಯೇ ಇತ್ತೋ ಏನೋ? ಜೈಲಿನಿಂದ ವಾಪಸಾದಾಗಲೂ ಅವನೊಳಗೆ ಕ್ರಾಂತಿಯ ಕಿಡಿ ಜ್ವಲಿಸುತ್ತಲೇ ಹೋಯಿತು. 1991, 1996, 2007 ಹೀಗೆ ಒಂದೊಂದು ಸಲವೂ ಲಿಯುವಿನ ಮೇಲೆ ಮೊಕದ್ದಮೆಗಳು ದಾಖಲಾಗುತ್ತಲೇ ಇದ್ದವು, ಪ್ರತಿ ಸಲ ಹೊಸ ಕೇಸುಗಳು ಬಿದ್ದರೂ ಅವನ ವಿರುದ್ಧ ಇದ್ದ ದೂರುಗಳೆಲ್ಲಾ ಒಂದೇ. ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುವುದು, ಸರ್ಕಾರವನ್ನು ಕೆಣಕುವ, ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸುವ ಲೇಖನಗಳನ್ನು ಬರೆಯುವುದು ಇತ್ಯಾದಿ. ಜೈಲು ಲಿಯುಗೆ ಮನೆಯಂತೇ ಆಗತೊಡಗಿತು. ಜೈಲು ಅವನ ಹೊಸ ಹೊಸ ಚಿಂತನೆಗೆ, ಆಲೋಚನೆಗಳಿಗೆ ಮೊಗಸಾಲೆಯಾಯಿತು. ಗಾಂಧೀಜಿಯ ತತ್ತ್ವದಂತೇ, ಅವರ ಹಠದಂತೇ, ಅವರ ಚಿಂತನೆಗಳಂತೆ ಲಿಯು ಬೆಳೆಯುತ್ತಾ ಹೋದ, ಚೀನಾದ ಪಾಲಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ತಂದುಕೊಡುವ ಗಾಂಧಿಯೇ ಆದ.
ಲಿಯು ಎಂಬ ಕ್ರಾಂತಿ
ಲಿಯುವಿನ ಚಿಂತನೆಗಳು, ಚಟುವಟಿಕೆಗಳು ಚೀನಾ ಸರ್ಕಾರಕ್ಕೆ ಅಂದಿನಿಂದಲೂ ತಲೆನೋವಾಗಿಯೇ ನಡೆದುಬಂತು. ಲಿಯು ಕಡೆಯಬಾರಿ 1999ರಲ್ಲಿ ಜೈಲಿನಿಂದ ಹಿಂದಿರುಗಿದ ಮೇಲೆ ಅವನ ಮೇಲೆ ಸರ್ಕಾರದ ಒಂದು ಕಣ್ಣು ನೆಟ್ಟೇ ಇತ್ತು. ಆದರೆ ಸರಿಯಾದ ಕಾರಣಗಳಿಗಾಗಿ ಕಾಯುತ್ತಿತ್ತು. ಈ ನಡುವೆ 2003ರಲ್ಲಿ ಲಿಯು ‘ಪೆನ್’ ಸಂಘಟನೆಗೆ ಅಧ್ಯಕ್ಷನಾಗಿ ಆಯ್ಕೆಯಾದ. ‘ಪೆನ್’ ಬರಹಗಾರರ ಹಕ್ಕುಗಳನ್ನು ಕಾಯುವ ಸಂಘಟನೆ. ಅದರಡಿ ಅನೇಕ ಕೆಲಸಗಳು, ಹೊಸ ಹೋರಾಟಕ್ಕೆ ರೂಪುರೇಷೆಗಳು ಸಿದ್ಧವಾಗತೊಡಗಿದವು. ಆಗ ಹುಟ್ಟಿಕೊಂಡಿದ್ದೇ ‘ಸನ್ನದು 08’ (ಚಾರ್ಟರ್ 08). ಇದು ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರ. ಆ ಮೂಲಕ ಇಡೀ ರಾಷ್ಟ್ರಕ್ಕೆ ಚೀನಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಸ್ಥಿತಿಯನ್ನು ತಿಳಿಸಿ, ಅದರ ವಿರುದ್ಧ ತಾವು ಧ್ವನಿ ಎತ್ತುತ್ತಿದ್ದೇವೆ ಎಂದು ಹೇಳುವ ತಂತ್ರ. ಇದಕ್ಕೂ ಒಂದು ಹಿನ್ನೆಲೆ ಇತ್ತು. ಈ ಹಿಂದೆ ಝಕೆಸ್ಲೋವಾಕಿಯಾದಲ್ಲಿ ‘ಸನ್ನದು 77’ ಮನವಿ ಪತ್ರ ಸಾಕಷ್ಟು ಹೆಸರು ಮಾಡಿತ್ತು. ಅಲ್ಲಿ ದೇಶದ ಪ್ರಜಾಪ್ರಭುತ್ವಕ್ಕಾಗಿ, ಚುನಾವಣೆಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಮಾನವ ಹಕ್ಕುಗಳ ಉಳಿವಿಗಾಗಿ ಈ ಮನವಿ ಅಭಿಯಾನ ನಡೆದಿತ್ತಲ್ಲದೇ ಅದು ಅಲ್ಲಿನ ದೊಡ್ಡ ಕ್ರಾಂತಿಗೂ ಕಾರಣವಾಯಿತು. (ಅದನ್ನು ಪ್ರಾರಂಭಿಸಿದ ಮಹಾತ್ಮನೇ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಈ ಸಲ ಲಿಯುನ ಹೆಸರನ್ನು ಅನುಮೋದಿಸಿದ್ದು). ಅದೇ ಮಾದರಿಯಲ್ಲಿ ಚೀನಾದಲ್ಲಿ ‘ಸನ್ನದು 08’ 2008ರಲ್ಲಿ ಶುರುವಾಯಿತು. ಅದು ಪ್ರಾರಂಭವಾದಾಗ ದೊಡ್ಡ ಇಂಟರ್ ನೆಟ್ ಕ್ರಾಂತಿಯೇ ಆಯಿತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ ಸರ್ಕಾರವನ್ನು ಒತ್ತಾಯಿಸಲಾಯಿತು. ಅದರಲ್ಲಿದ್ದ ಪ್ರಮುಖ ಬೇಡಿಕೆಯೆಂದರೆ ಕಮ್ಯೂನಿಸ್ಟ್ ಪಕ್ಷ ಜನರನ್ನು ನಿಯಂತ್ರಿಸುವುದನ್ನು ಬಿಟ್ಟು ಕಾನೂನು ರೂಪಿತವಾಗಬೇಕು, ಶಾಂತಿಯುತ ಚುನಾವಣೆ ನಡೆಯಬೇಕು, ಸಂಘಟನಾ ಸ್ವಾತಂತ್ರ್ಯ ದೊರೆಯಬೇಕು, ಮಾನವ ಹಕ್ಕು, ಧಾರ್ಮಿಕ ಹಕ್ಕುಗಳೆಲ್ಲಾ ಸಾಧ್ಯವಾಗಬೇಕು ಇತ್ಯಾದಿ. ಅದಕ್ಕೆ ದೊಡ್ಡ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನ ಕಾರ್ಯವೂ ಶುರುವಾಯಿತು. ಇದನ್ನು ಸರ್ಕಾರ ಸಹಿಸೀತೇ? ಲಿಯುವನ್ನು ಬಂಧಿಸಿತು, 2009ರಲ್ಲಿ ಈತನನ್ನು ಬಂಧಿಸಿದ್ದು ಒಟ್ಟು ಹನ್ನೊಂದು ವರ್ಷಗಳ ಕಾಲ ಜೈಲಿನಲ್ಲೇ ಇಡುವ ತೀರ್ಪು ನೀಡಿದೆ. ಅಂದರೆ 2020ರವರೆಗೂ ಲಿಯು ಕಂಬಿಗಳ ಹಿಂದೆ ಇರಬೇಕು. ಅನಂತರವೂ ಅವನನ್ನು ಯಾವ ಪ್ರಕಾರ ನಿಯಂತ್ರಿಸಬೇಕೆಂಬ ಆಲೋಚನೆಯನ್ನೂ ಸರ್ಕಾರ ಮಾಡುತ್ತಿದೆ.
ಲಿಯು ಎಂಬ ನಿಜದ ಕ್ರಾಂತಿ
ಹೇಳಿಕೇಳಿ ಇದು ಪ್ರಚಾರ ಕಾಲ. ಪ್ರತಿಯೊಂದನ್ನೂ ಪ್ರಚಾರಕ್ಕಾಗಿಯೇ ಮಾಡಿ ಅದೊಂದೊಂದನ್ನೂ ತನ್ನ ರಾಜಕೀಯ. ಸಾಮಾಜಿಕ ಇಮೇಜ್ ನಿರ್ಮಾಣಕ್ಕೆ ಕಲ್ಲಾಗಿ ಬಳಸಿಕೊಳ್ಳಲು ಲಿಯು ಪ್ರಯತ್ನಿಸಿದನೇ? ಇದು ಅನೇಕರನ್ನು ಕಾಡಿದ ಪ್ರಶ್ನೆ. ಮೊನ್ನೆ ನೊಬೆಲ್ ಬಂದಾಗಲೂ ಈ ಅನುಮಾನವನ್ನು ಕೆಲವರು ಹೇಳಿದ್ದೂ ಉಂಟು. ‘ಅವನು ಇದಕ್ಕೆ ಅರ್ಹನಲ್ಲ’ ಎಂದು ಸರ್ಕಾರ ಹೇಳಿದ್ದು ಹೋಗಲಿ, ಅವನಂಥ ‘ಭಿನ್ನಮತೀಯ’ ಬರಹಗಾರರೂ ಸಹ ನೊಬೆಲ್ ಪುರಸ್ಕಾರ ಬಂದಿದ್ದಕ್ಕೆ ಅಸಮಾಧಾನಗೊಂಡಿದ್ದೂ ಆಯಿತು. ಆದರೆ ನಿಜಕ್ಕೂ ಲಿಯು ಎಷ್ಟು ನಿಸ್ವಾರ್ಥ ಸೇವೆ ಸಲ್ಲಿಸಿದವನು?
ಅದಕ್ಕೆ ಉತ್ತರ ಅವನನ್ನು ಹತ್ತಿರದಿಂದ ಕಂಡವರ ಮಾತುಗಳಲ್ಲೇ ಇವೆ. ‘ಅವನ ಸಾಧನೆ ನೋಡಿದ ಮೇಲೂ ಈ ರೀತಿ ಹೇಳುವುದನ್ನು ಕಂಡರೆ ನನಗೆ ತುಂಬ ವಿಚಿತ್ರ ಎನಿಸುತ್ತದೆ. ಲಿಯು 21 ವರ್ಷಗಳ ಕಾಲ ಪ್ರಜಾಪ್ರಭುತ್ವದ ಕನಸು ಕಂಡವನು, ಅದಕ್ಕಾಗಿ 11 ವರ್ಷಗಳ ಶಿಕ್ಷೆಯ ಗತಿ ತಂದುಕೊಂಡವನು. ಕಮ್ಯೂನಿಸ್ಟ್ ಮನಸ್ಸುಗಳು ಮತ್ತು ನಾಯಕರು ಸುತ್ತಮುತ್ತ ಇದ್ದಾಗಲೂ ಆತ ಅದನ್ನೆಲ್ಲಾ ಎದುರಿಸಿ, ಅದಕ್ಕೆ ತನ್ನ ತಾನು ಅರ್ಪಿಸಿಕೊಳ್ಳದೇ ಹೋರಾಡಿದ. ಹೋರಾಟದ ಮನಸ್ಥಿತಿ, ಧೈರ್ಯ ಮತ್ತು ಪ್ರಾಮಾಣಿಕ ಕಾಳಜಿಗಳೆಲ್ಲಾ ಸೇರಿ ಆದ ಮನುಷ್ಯ ಲಿಯು’ ಎಂದು ಪ್ರತಿಕ್ರಿಯಿಸಿದವನು ಪತ್ರಕರ್ತ ನಿಕೊಲಸ್ ಡಿ. ಕ್ರಿಸ್ಟಾಫ್. ಆತ ಒಂದು ಘಟನೆಯನ್ನೂ ತನ್ನ ಬರಹವೊಂದರಲ್ಲಿ ಹೇಳಿಕೊಂಡಿರುವ ಪ್ರಕಾರ, ಸಂದರ್ಶನವೊಂದಕ್ಕಾಗಿ ಈತ ಲಿಯುನ ಜೊತೆ ದೂರವಾಣಿಯಲ್ಲಿ ಮಾತಾಡಿದನಂತೆ. ಅದು 2008ರ ಹೊತ್ತು. ಆಗಿನ್ನೂ ಲಿಯು ಅರೆಸ್ಟ್ ಆಗಿರಲಿಲ್ಲ. ಆತನಿಗೆ ಬರುವ ಫೋನ್ ಕರೆಗಳನ್ನೆಲ್ಲಾ ಕದ್ದಾಲಿಸುವ ವ್ಯವಸ್ಥೆ ಮಾಡಿಕೊಂಡಿದ್ದ ಸರ್ಕಾರಿ ರಕ್ಷಣಾ ಇಲಾಖೆ, ಅರ್ಧದಲ್ಲೇ ಫೋನ್ ಕಟ್ ಮಾಡಿತ್ತಂತೆ. ಅಂದರೆ ಆ ವ್ಯಕ್ತಿಯ ಹೆಜ್ಜೆ ಹಜ್ಜೆಗಳ ಮೇಲೂ ಕಣ್ಣಿಟ್ಟು, ಮಾನಸಿಕವಾಗಿ ಕಿರುಕುಳಗಳನ್ನು ನೀಡುತ್ತಲೇ ಬಂದರೂ ಲಿಯು, ಅದನ್ನೆಲ್ಲಾ ಸಹಿಸಿಕೊಂಡಿದ್ದು ತನ್ನ ದೂರಗಾಮಿ ಕನಸಿನ ನನಸಿಗಾಗಿ. ನಿಸ್ವಾರ್ಥ ಉದ್ದೇಶಕ್ಕಾಗಿ.
1989ರಲ್ಲಿ ಲಿಯು ಮೊದಲ ಬಾರಿ ಅರೆಸ್ಟ್ ಆದಾಗಲಿಂದ ಗಮನಿಸುತ್ತಾ ಬಂದಿದ್ದನ್ನು ನೆನಪಿಸಿಕೊಂಡಿರುವ ಪತ್ರಕರ್ತ ನಿಕೋಲಸ್, ಆ ಕಾಲಕ್ಕೆ ಥಿಯಾನಾನ್ಮನ್ ಚಳುವಳಿಯಲ್ಲಿ ಪಾಲ್ಗೊಂಡವರಲ್ಲಿ ಕೆಲವರು ಸರ್ಕಾರಕ್ಕೆ ಹೆದರಿ ದೇಶವನ್ನೇ ಬಿಟ್ಟು ಹೋಗಿದ್ದು, ಕೆಲವರು ಚಳುವಳಿಯಿಂದಲೇ ಹಿಂದೆ ಸರಿದಿದ್ದನ್ನು ಸ್ಮರಿಸುತ್ತಾರೆ. ಲಿಯು ಮಾತ್ರ ಪ್ರತಿ ಚಳುವಳಿಗೂ ಗಟ್ಟಿಯಾದರು, ಹದವಾದರು, ದೃಢವಾದರು, ಅವರ ಚಿಂತನೆಗಳು ಹರಳುಗಟ್ಟಿದವು, ನಿರ್ಧಾರದಿಂದ ಹೆಚ್ಚು ಹೆಚ್ಚು ಶಕ್ತಿವಂತರಾದರು ಎಂದು ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಹೇಳಿಕೊಂಡಿದ್ದಾರೆ.
ಲಿಯು ಎಂಬ ಚಿಂತನಮೂರ್ತಿ
ಲಿಯು ಚಿಂತನೆಗಳು, ಮಾತುಗಳು ಎಂಥವರನ್ನೂ ಮಂತ್ರಮುಗ್ಧವಾಗಿಸುತ್ತವೆ. ‘ಅಕ್ಷರ, ಪದ, ವಾಕ್ಯಗಳನ್ನು ಅಪರಾಧವೆಂದು ಭಾವಿಸುವುದನ್ನು ಮೊದಲು ನಿಲ್ಲಿಸಬೇಕು’ ಎಂದು ವಿನಂತಿಸಿಕೊಂಡಿದ್ದವನು ಲಿಯು. ಮಾಧ್ಯಮ ಹಕ್ಕು, ಅಭಿವ್ಯಕ್ತಿ ಹಕ್ಕು, ಶೈಕ್ಷಣಿಕ ಹಕ್ಕುಗಳನ್ನು ನಾವು ವಿಶ್ವದ ಹಕ್ಕುಗಳಾಗಿ ಮಾಡೋಣ. ಅದರಿಂದ ನಾಗರಿಕ ಎಲ್ಲವನ್ನೂ ತಿಳಿದುಕೊಂಡು, ಎಲ್ಲದರ ಬಗ್ಗೆಯೂ ಮಾಹಿತಿ ಪಡೆದು, ಎಲ್ಲದರ ಬಗ್ಗೆಯೂ ತನ್ನ ಅಭಿಪ್ರಾಯವನ್ನು ಹೇಳಿ, ರಾಜಕೀಯ ಬೆಳವಣಿಗೆಯನ್ನೂ ವಿಮರ್ಶಿಸುವಂತೆ, ಚಿಂತಿಸುವಂತೆ, ತಾನೂ ಅದರ ಒಂದು ಭಾಗದಂತೆ ಆಗಲು ಸಾಧ್ಯವಾಗುತ್ತದೆ ಆತ ಚೀನಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳಿದ್ದು ಹೀಗೆ: ‘ನಾನು ಎರಡು ವಿಷಯಗಳನ್ನು ಹೇಳಲು ಬಯಸುತ್ತೇನೆ. ಒಂದು, ಜನ ನಮ್ಮನ್ನು ‘ಭಿನ್ನಮತೀಯ’ ಲೇಖಕರೆಂದು ಕರೆಯುತ್ತಾರೆ. ಅಂದರೆ ನಾವು ಸರ್ಕಾರದ ವಿರುದ್ಧ ಮಾತಾಡುವವರು. ಅವರಿಗೆ ನಾನು ಹೇಳಬಯಸುವುದೇನೆಂದರೆ ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದೇ ಬರೆಯುತ್ತಿರುವವರು. ಆದರೆ ನಾವು ಯಾವತ್ತೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಮಾತಾಡುತ್ತೇವೆ, ಬರೆಯುತ್ತೇವೆ, ಹೋರಾಡುತ್ತೇವೆ. ಎಂಥ ವ್ಯವಸ್ಥೆ, ವ್ಯಕ್ತಿಗಳಿಂದ ಇದಕ್ಕೆ ಅಡ್ಡಿ ಬಂದರೂ ನಾವು ಹೆದರುವವರಲ್ಲ. ನಾನು ಹೇಳುವ ಇನ್ನೊಂದು ವಿಷಯ, ಜಗತ್ತಿನ ಬರಹಗಾರರನ್ನುದ್ದೇಶಿಸಿ. ಜಗತ್ತಿನ ಬರಹಗಾರರು, ಅದರಲ್ಲೂ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ರಾಷ್ಟ್ರಗಳ ಬರಹಗಾರರು, ಅಲ್ಲಿನ ಸರ್ಕಾರ, ಅಲ್ಲಿನ ಸರ್ಕಾರೇತರ ಸಂಸ್ಥೆಗಳಿಗೆ ನನ್ನ ವಿನಂತಿ ಏನೆಂದರೆ ದಯವಿಟ್ಟು ಚೀನಾದ ಬರಹಗಾರರ ಕಡೆ ನೋಡಿ, ಅಲ್ಲಿನ ಸ್ಥಿತಿಯ ಬಗ್ಗೆ ಮಾತಾಡಿ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ’.
ಇನ್ನೊಂದು ಸಲ ಆತ ಹೇಳಿದ್ದ: ‘ಪೆನ್ನಿನಿಂದ ಸೃಷ್ಟಿಯಾಗುವ ಸಮಸ್ಯೆಗಳನ್ನು ಪೆನ್ನಿನಿಂದಲೇ ಬಗೆಹರಿಸಿಕೊಳ್ಳಲು ಸಾಧ್ಯ ಅದನ್ನು ಬಿಟ್ಟು ಪೆನ್ನಿನಿಂದ ಆದ ಸಮಸ್ಯೆಯನ್ನು ಗನ್ನಿನಿಂದ ಪರಿಹರಿಸಿಕೊಳ್ಳಲು ನೋಡಿದರೆ ನೀವು ಮಾನವ ಹಕ್ಕುಗಳ ವಿಚಾರದಲ್ಲಿ ದೊಡ್ಡ ದುರಂತವನ್ನೇ ತಂದೊಡ್ಡುತ್ತೀರಿ’.
ಲಿಯು ಎಂಬ ಮಾತು ಸೋತ ಸಂತ
ಈ ಸಲ ಶಾಂತಿ ಪುರಸ್ಕಾರ ಬಂದಿದೆ. ಲಿಯು ಮಾತಿಗೆ ಸಿಕ್ಕಿದ್ದರೆ ಹೇಳಿಕೊಳ್ಳುವುದಕ್ಕೆ ಅಥವಾ ಹೇಳುವುದಕ್ಕೆ ಏನೇನೆಲ್ಲಾ ಇತ್ತೇನೋ? ಅದರೆ ಅವನಿಗೆ ಸಿಕ್ಕ ಪುರಸ್ಕಾರಕ್ಕೂ, ಅವನ ಶಾಂತಿಪ್ರಿಯ ಮನಸ್ಸನ್ನು ಪೂಜಿಸುವ ಕೋಟ್ಯಂತರ ಮನಸ್ಸುಗಳಿಗೂ ಲಿಯುಗೂ ಮಧ್ಯೆ ಅದೆಷ್ಟೋ ಯೋಜನ ಕಂಬಿಗಳಷ್ಟು ಅಂತರ. ಚೀನಾ ಸರ್ಕಾರ ಅವನ ಜೈಲುವಾಸ ಅವಧಿ 2020ರವರೆಗೆ ಎಂದು ಆಗಲೇ ಬರೆದಾಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ, ಲಿಯುವನ್ನು ಬಿಡುಗಡೆ ಮಾಡುವಂತೆ ಈ ಶಾಂತಿ ಪುರಸ್ಕಾರ ಬಂದ ಹೊತ್ತಿನಲ್ಲಿ ಚೀನಾಕ್ಕೆ ಮನವಿ ಮಾಡಿಕೊಂಡಿದ್ದು ವರದಿಯಾಗಿದೆ. ‘ಸೇವ್ ಲಿಯು’ ಅಭಿಯಾನ 2009ರಿಂದಲೂ ಜಾರಿಯಲ್ಲೇ ಇದೆ. ಲಿಯುವನ್ನು ಬಿಡುಗಡೆಗೊಳಿಸುವ ಒತ್ತಡಗಳು ಇನ್ನು ಹೆಚ್ಚಬಹುದು, ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಪ್ರಶಸ್ತಿ ಬಂದ ಸಂತೋಷವನ್ನು ಹಂಚಿಕೊಳ್ಳಲು ಹೆಂಡತಿ ಲಿಯು ಶಿಯಾ ಮಾತ್ರ ಸಿಕ್ಕಿದ್ದಾರೆ. ಪತಿ ಜೈಲಲ್ಲಿರುವ ದುಃಖ, ಪ್ರಶಸ್ತಿ ತಂದ ಸುಖಗಳನ್ನು ಒಟ್ಟೊಟ್ಟಿಗೆ ಅನುಭವಿಸಿ ಕಣ್ತುಂಬಿಕೊಂಡಿದ್ದೂ ಸುದ್ದಿಯಾಗಿದೆ.
ಆದಷ್ಟು ಬೇಗ ಲಿಯು ಜೈಲಿನಿಂದ ಹೊರಬರಲಿ, ಚೀನಾದ ಸ್ವಾತಂತ್ರ್ಯ ಮಾತೆಯೂ ಬಂಧನದಿಂದ ಹೊರಬರಲಿ. ಚೀನಾದ ಬರಹಗಾರರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬರಲಿ. ಈ ಶಾಂತಿಪುರುಷನ ಕನಸು ಚೀನಾ ಮಂದಿಗೆ ಎಂದೆಂದೂ ‘ಶಾಂತಿ’ ಪುರಸ್ಕಾರವಾಗಿ ಪರಿಣಮಿಸಲಿ.
ಕವಿ, ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ. ಊರು ಉಡುಪಿ. ಇರುವುದು ಬೆಂಗಳೂರು.