Advertisement
 ಲೋಕೋಭಿನ್ನ ರುಚಿಃ – ಲೋಕೋಭಿನ್ನ ಖುಷಿಃ!: ಎಲ್.ಜಿ. ಮೀರಾ ಅಂಕಣ

 ಲೋಕೋಭಿನ್ನ ರುಚಿಃ – ಲೋಕೋಭಿನ್ನ ಖುಷಿಃ!: ಎಲ್.ಜಿ. ಮೀರಾ ಅಂಕಣ

 ಒಬ್ಬೊಬ್ಬರ ಖುಷಿಯ ನಿರ್ವಚನವೂ ಬೇರೆ ಬೇರೆ. ಒಬ್ಬರಿಗೆ ಮಾತಿನಲ್ಲಿ ಖುಷಿ, ಇನ್ನೊಬ್ಬರಿಗೆ ಮೌನದಲ್ಲಿ. ಒಬ್ಬರ ಖುಷಿ ಹಾಡು ಕೇಳುವುದರಲ್ಲಾದರೆ, ಇನ್ನೊಬ್ಬರ ಖುಷಿ ಪದಬಂಧ ಬಿಡಿಸುವುದರಲ್ಲಿ. ಒಬ್ಬರ ಖುಷಿ ಹೊಸರುಚಿಯ ಅಡುಗೆಗಳನ್ನು ಸವಿಯುವುದರಲ್ಲಾದರೆ ಇನ್ನೊಬ್ಬರ ಖುಷಿ ಹೊಸ ಅಡುಗೆಗಳನ್ನು ಕಲಿತು ಮಾಡುವುದರಲ್ಲಿ. ಒಬ್ಬರಿಗೆ ದೇಶವಿದೇಶ ತಿರುಗುವ ಪ್ರವಾಸ ಇಷ್ಟ, ಇನ್ನೊಬ್ಬರಿಗೆ ಮನೆಯ ಆರಾಮಕುರ್ಚಿಯಲ್ಲಿ ಕುಳಿತು ದೇಶವಿದೇಶಗಳ ಬಗ್ಗೆ ಓದುವುದು ಇಷ್ಟ! ಖುಷಿಗಳು ವೈವಿಧ್ಯಮಯ. ಆದರೆ ಇವೆಲ್ಲದರ ಮೂಲದಲ್ಲಿರುವ ಒಂದು ಪ್ರಧಾನ ಸಂಗತಿಯು ಬಹುತೇಕ ಜನರ ಗಮನಕ್ಕೆ ಬರುವುದಿಲ್ಲ.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ನಾಲ್ಕನೆಯ ಬರಹ

ಸಂತೋಷ, ಖುಷಿ, ಹಿಗ್ಗು, ಹ್ಯಾಪ್ಪಿನೆಸ್…. ಯಾವ ಯಾವ ಹೆಸರಿನಲ್ಲಿ ಕರೆದರೂ ಸರಿ, ಇದನ್ನು ಬೇಡ ಅನ್ನುವವರು ಯಾರಾದರೂ ಇರುವರೇ? ಎಲ್ಲರೂ ಎಲ್ಲವನ್ನೂ ಮಾಡುವುದು `ನಾನು/ನಾವು ಖುಷಿಯಾಗಿರ್ಬೇಕಪ್ಪ’ ಅಂತಲೇ ಅಲ್ಲವೆ? ಆದರೆ ಒಬ್ಬೊಬ್ಬರ ಖುಷಿಯ ನಿರ್ವಚನವೂ ಬೇರೆ ಬೇರೆ. ಒಬ್ಬರಿಗೆ ಮಾತಿನಲ್ಲಿ ಖುಷಿ, ಇನ್ನೊಬ್ಬರಿಗೆ ಮೌನದಲ್ಲಿ. ಒಬ್ಬರ ಖುಷಿ ಹಾಡು ಕೇಳುವುದರಲ್ಲಾದರೆ, ಇನ್ನೊಬ್ಬರ ಖುಷಿ ಪದಬಂಧ ಬಿಡಿಸುವುದರಲ್ಲಿ. ಒಬ್ಬರ ಖುಷಿ ಹೊಸರುಚಿಯ ಅಡುಗೆಗಳನ್ನು ಸವಿಯುವುದರಲ್ಲಾದರೆ ಇನ್ನೊಬ್ಬರ ಖುಷಿ ಹೊಸ ಅಡುಗೆಗಳನ್ನು ಕಲಿತು ಮಾಡುವುದರಲ್ಲಿ. ಒಬ್ಬರಿಗೆ ದೇಶವಿದೇಶ ತಿರುಗುವ ಪ್ರವಾಸ ಇಷ್ಟ, ಇನ್ನೊಬ್ಬರಿಗೆ ಮನೆಯ ಆರಾಮಕುರ್ಚಿಯಲ್ಲಿ ಕುಳಿತು ದೇಶವಿದೇಶಗಳ ಬಗ್ಗೆ ಓದುವುದು ಇಷ್ಟ! ಖುಷಿಗಳು ವೈವಿಧ್ಯಮಯ. ಆದರೆ ಇವೆಲ್ಲದರ ಮೂಲದಲ್ಲಿರುವ ಒಂದು ಪ್ರಧಾನ ಸಂಗತಿಯು ಬಹುತೇಕ ಜನರ ಗಮನಕ್ಕೆ ಬರುವುದಿಲ್ಲ. ಅದೇನೆಂದರೆ ಬದುಕಿನ ನಿಜವಾದ ಖುಷಿಗಳು ಸರಳ ಸಂಗತಿಗಳಲ್ಲಿಯೂ ಇರುತ್ತವೆ, ಕೆಲವೊಮ್ಮೆ ನಾವು ಅದನ್ನು ಬಹಳ ಸಂಕೀರ್ಣ ಎಂದು ಭಾವಿಸಿ ಎಲ್ಲೆಲ್ಲೋ ಹುಡುಕುತ್ತಿರುತ್ತೇವೆ. ಕೆಳಗಿನ ಉದಾಹರಣೆಗಳನ್ನು ಈ ಮಾತಿಗೆ ಸಮರ್ಥನೆಯಾಗಿ ನೋಡಬಹುದು.

ಶಾಲೆ ಮಕ್ಕಳು ಶಾಲೆ ಬಿಟ್ಟ ಕೂಡಲೇ ಮಾವಿನಕಾಯಿ, ನೆಲ್ಲಿಕಾಯಿ, ಹುಳಿ ಕಿತ್ತಳೆ ಹಣ್ಣು ಮುಂತಾದವಕ್ಕೆ ಉಪ್ಪು ಖಾರ ಹಾಕಿಕೊಂಡು ಜೊತೆಯಾಗಿ ತಿನ್ನುವುದು,

ಸಹೋದ್ಯೋಗಿಗಳು ಕೆಲಸದ ಬಿಡುವಿನಲ್ಲಿ ಹೋಗಿ ಬಿಸಿಬಿಸಿ ಬಜ್ಜಿ ತಿಂದು ಅರ್ಧರ್ಧ ಲೋಟ ಕಾಫಿ ಕುಡಿಯುವುದು,

ನಿವೃತ್ತರು ತಮ್ಮ ಸ್ನೇಹಿತರೊಂದಿಗೆ ಎಳೆಬಿಸಿಲಲ್ಲಿ ಮನೆ ಹತ್ತಿರದ ಉದ್ಯಾನವನದಲ್ಲಿ ವಾಯುಸಂಚಾರಕ್ಕೆ ಹೋಗುವುದು,

ಯಾವುದೇ ವಯಸ್ಸಿನವರಾದರೂ ಇಷ್ಟಮಿತ್ರರೊಡನೆ ಗಡಿಯಾರ ನೋಡುವ ಚಿಂತೆ ಇಲ್ಲದೆ ಹೊಡೆಯುವ ಹರಟೆ

ಜನರು ತಮ್ಮ ಮನೆಮಂದಿಯೊಂದಿಗೆ ನೋಡುವ ಸಿನಿಮಾ, ತಿನ್ನುವ ಬೇಯಿಸಿದ ಕಡಲೆಕಾಯಿ

ಗಾನಪ್ರಿಯರು ಹಳೆಯ ಸಿನಿಮಾ ಹಾಡುಗಳನ್ನು ನೆನಪಿಸಿಕೊಂಡು ಹಾಡಿಕೊಳ್ಳುತ್ತಾ ಖುಷಿ ಪಡುವುದು

ಪುಸ್ತಕಪ್ರಿಯರು ಬೆಳಗಿನ ಶಾಂತತೆಯಲ್ಲಿ ಇಷ್ಟದ ಪುಸ್ತಕ ಓದುವುದು… ಇಂಥವು. ಇವೆಲ್ಲ ಎಷ್ಟು ಸರಳ ಸಂಗತಿಗಳಾದರೂ ಅದೆಷ್ಟು ಖುಷಿ ಕೊಡುತ್ತವಲ್ಲ!

ತೀರಾ ದುಬಾರಿ, ಸೀರೆ, ಒಡವೆ ಧರಿಸಿ ಒದ್ದಾಡುವಾಗ ಸರಳ ಬಟ್ಟೆಯಲ್ಲಿ ಇರಬಹುದಾದ ನೆಮ್ಮದಿ ನೆನಪಾಗುತ್ತದಲ್ಲ ನಮಗೆ!?

ಪಂಚತಾರಾ ಹೋಟಲುಗಳಲ್ಲಿ ಒಂದಕ್ಕೆ ಹತ್ತು ಬೆಲೆ ಕೊಟ್ಟು ಊಟ ಮಾಡುವುದಕ್ಕಿಂತ ರಸ್ತೆ ಬದಿಯ ಚಿಕ್ಕ ಹೋಟಲಿನಲ್ಲಿ ತಿನ್ನುವುದು ಹೆಚ್ಚು ಖುಷಿ ಅನ್ನಿಸಬಹುದುಲ್ಲ? ಮನೆಯಲ್ಲಿನ ಸರಳ ಗಂಜಿ ಊಟ- ಉಪ್ಪಿನಕಾಯಿಯ ಸುಖ, ಮನೆಯ ಅಂಗಳದಲ್ಲಿ ಕುಳಿತು ಕತೆಯನ್ನೋ ಕಾದಂಬರಿಯನ್ನೋ ಓದುವ ಸಂತೋಷ ಇವು ಬದುಕಿನ ನಿಜ ಸಂತೋಷಗಳು ಅಂದರೆ ತಪ್ಪಲ್ಲ. ಅಲ್ಲವೆ? “ವ್ಹೆನ್ ದ ಆನ್ಸರ್ ಈಸ್ ಸಿಂಪ್‌ಲ್, ಗಾಡ್ ಈಸ್ ಆನ್ಸರಿಂಗ್” (ಉತ್ತರ ಸರಳವಾಗಿದ್ದಾಗ ದೇವರು ಉತ್ತರಿಸಿರುತ್ತಾನೆ) ಎಂಬ ಐನ್‌ಸ್ಟೈನ್‌ರ ಪ್ರಸಿದ್ಧ ಹೇಳಿಕೆ ಇಲ್ಲಿ ಪ್ರಸ್ತುತ ಅನ್ನಿಸುತ್ತದೆ.

*****

 ಕನ್ನಡದ ಪ್ರಸಿದ್ಧ ಕಥೆಗಾರ್ತಿ ತ್ರಿವೇಣಿಯವರ `ತುಂಬಿದ ಕೊಡ’ ಕಥೆ ನೆನಪಾಗುತ್ತದೆ. ರಾಣಿ, ರಂಗಪ್ಪ ಎಂಬ ಎರಡು ಮುಖ್ಯ ಪಾತ್ರಗಳು ರ‍್ತವೆ ಅದರಲ್ಲಿ. ರಾಣಿ ತುಂಬ ಶ್ರೀಮಂತಳಾದ ಗೃಹಿಣಿ, ಬಡವ ರಂಗಪ್ಪ ಅವಳ ಮನೆಯ ಮಾಲಿ. ದೊಡ್ಡ ಬಂಗಲೆಯಲ್ಲಿ ಬದುಕುವ ರಾಣಿಗೆ ಭೌತಿಕ ಅರ್ಥದಲ್ಲಿ ಯಾವುದೇ ಕೊರತೆ ಇಲ್ಲ. ಬಂಗಲೆ, ಆಳುಕಾಳು, ಓಡಾಡಲು ಕಾರು, ಬೇಕಾದ ಸೀರೆ-ಒಡವೆ ಎಲ್ಲವೂ ಇವೆ. ಆದರೆ ಅವಳಿಗೆ ಮನಸ್ಸಿಗೆ ಖುಷಿ ಇಲ್ಲ. ಏನೋ ಬೇಸರ, ಯಾಕೋ ಎಲ್ಲದರಲ್ಲೂ ನಿರಾಸಕ್ತಿ. ಮನೆಯಲ್ಲಿ ಬೇಸರವೆಂದು ರಾಣಿ ಒಂದು ಸಿನಿಮಾಗೆ ಹೋದಾಗ ಅಲ್ಲಿಗೆ ಅವಳ ಮಾಲಿ ರಂಗಪ್ಪ ಮಳೆಯಲ್ಲಿ ನೆನೆದುಕೊಂಡು ತನ್ನ ಕುಟುಂಬದವರೊಂದಿಗೆ ಬಂದಿರುತ್ತಾನೆ. ಕಡಿಮೆ ಬೆಲೆಯ `ಗಾಂಧಿ ಕ್ಲಾಸ್’ನಲ್ಲಿ ಕುಳಿತರೂ ಸಿನಿಮಾ ನೋಡುವಾಗ ಅವರ ತಲ್ಲೀನತೆ – ಸಂತೋಷ, ಹತ್ತು ಪೈಸೆ ಕಡಲೆಕಾಯಿ ತಿನ್ನುವುದರಲ್ಲಿ ಅವರಿಗಿರುವ ಖುಷಿಯನ್ನು ನೋಡಿ ರಾಣಿಯ ಮನಸ್ಸು ಬೆರಗಾಗುತ್ತದೆ. `ತನಗೇಕೆ ಈ ಖುಷಿ ಇಲ್ಲ?’ ಅನ್ನಿಸುತ್ತದೆ. ರಾಣಿಯ ಪ್ರಶ್ನೆ ಅನೇಕ ಶ್ರೀಮಂತರ ಮನಸ್ಸಿನ ಪ್ರಶ್ನೆಯೂ ಆಗಿರಬಹುದಲ್ಲವೆ?

ಇಲ್ಲಿ ಇನ್ನೊಂದು ಸೂಕ್ಷ್ಮ ಇದೆ. ನಾವು ಇನ್ನೊಬ್ಬರನ್ನು ಅವರು ಖುಷಿಯಾಗಿದ್ದಾರೆ ಅಂದುಕೊಳ್ಳುತ್ತೇವಲ್ಲ, ಅದು ವಾಸ್ತವಿಕವಾಗಿ ಹೌದೇ? ಹಿಂದಿಯಲ್ಲಿ `ಅಪ್‌ನಾ ದುಃಖ್ ಔರ್ ದೂಸ್ರೋಂ ಕಾ ಸುಖ್ ಹಮೇಶಾ ಬಡಾ ಲಗ್ತಾ ಹೈ’ (ನಮ್ಮ ದುಃಖ ಮತ್ತು ಮತ್ತು ಬೇರೆಯವರ ಸುಖ ಯಾವಾಗಲೂ ದೊಡ್ಡದಾಗಿ ಕಾಣುತ್ತದೆ) ಅನ್ನುವ ನಾಣ್ಣುಡಿ ಇದೆ. ಹೀಗೂ ಇರಬಹುದಲ್ಲವೆ? ಅಥವಾ ನಮ್ಮ ಅತೃಪ್ತಿಗೆ ಕಾರಣ `ದ ಗ್ರಾಸ್ ಈಸ್ ಗ್ರೀನರ್ ಆನ್ ದ ಅದರ್ ಸೈಡ್’ (ಇನ್ನೊಂದು ಬದಿಯ/ಇನ್ನೊಬ್ಬರ ಮನೆಯ ಅಂಗಳದ – ಹುಲ್ಲು ಹೆಚ್ಚು ಹಸುರಾಗಿರುತ್ತದೆ) ಎಂಬ ಇಂಗ್ಲಿಷ್ ನಾಣ್ನುಡಿಯು ಮೂಡಿಸುವ ಭಾವನೆಯೂ ಆಗಿರಬಹುದೇ? ಅಥವಾ ಬೇರೆಯವರ ಜೀವನ ನೋಡಿ ನಾವೇ ಅವರು ತುಂಬ ಖುಷಿಯಾಗಿದ್ದಾರೆ ಎಂದು ಊಹಿಸಿಕೊಂಡು ಸದಾ ಕೊರಗುತ್ತಾ ಇರುವ ಮನೋಜಾಡ್ಯವೇ ಇದು? ಮನೆಯ ದೇಖರೇಖಿ ಮಾಡಿಕೊಂಡು ಹೊರಗೆ ಕೆಲಸಕ್ಕೆ ಹೋಗದ ಗೃಹಿಣಿಯರು ಮತ್ತು ಮನೆಯ ಕೆಲಸಕ್ಕೆ ಏನೋ ವ್ಯವಸ್ಥೆ ಮಾಡಿಕೊಂಡು ಹೊರಗೆ ಕೆಲಸಕ್ಕೆ ಹೋಗುವ ಉದ್ಯೋಗಸ್ಥ ಮಹಿಳೆಯರು ಪರಸ್ಪರರ ಬಗ್ಗೆ “ಅಯ್ಯೋ ಆಕೆಯ ಖುಷಿ ನನಗಿಲ್ಲವಲ್ಲಾ, ಛೆ” ಎಂದು ಅಸೂಯೆ ಪಟ್ಟುಕೊಂಡು ಕೊರಗುತ್ತಾರಲ್ಲ ಹಾಗೆ. ತ್ರಿವೇಣಿಯವರ ಕಥೆಯ ರಾಣಿಯೇನೋ ರಂಗಪ್ಪನ ಕುಟುಂಬ ಖುಷಿಯಾಗಿದೆ ಅಂದುಕೊಂಡಳು, ಆದರೆ ರಂಗಪ್ಪನನ್ನು ಕೇಳಿದರೆ ತಾನು ರಾಣಿಗಿಂತ ಖುಷಿಯಾಗಿದ್ದೇನೆ ಎಂದು ಅವನು ಒಪ್ಪುತ್ತಾನಾ!?

 ಇನ್ನು ಕೆಲವು ಸಲ ನಮ್ಮ ಬಳಿ ಒಂದು ವಸ್ತು ಇದ್ದಾಗ ಅದರ ಬೆಲೆ ಗೊತ್ತಾಗದೆ ಅದನ್ನು ಕಳೆದುಕೊಂಡ ಮೇಲೆ “ಅಯ್ಯೋ, ಅದು ನನಗೆ ಎಷ್ಟು ಖುಷಿ ಕೊಡುತ್ತಿತ್ತು! ಹೊರಟುಹೋಯಿತೇ .. ಅಯ್ಯೋ ..!” ಎಂದು ಮನುಷ್ಯನ ಮನಸ್ಸು ಕೊರಗುತ್ತದೆ. `ಚಿಕನ್ ಸೂಪ್ ಫಾರ್ ದ ಸೌಲ್’ ಎಂಬ ಇಂಗ್ಲಿಷಿನ ಪ್ರಸಿದ್ಧ ಪುಸ್ತಕ ಸರಣಿಯೊಂದಿದೆ. ಅದರಲ್ಲಿನ ಒಂದು ಪುಸ್ತಕದ ಒಂದು ಲೇಖನದಲ್ಲಿ ಯಾವುದೋ ಕಾರಣಕ್ಕಾಗಿ ಸೆರೆಮನೆಯಲ್ಲಿದ್ದ ಖೈದಿಯೊಬ್ಬಳ ಆಸೆ, ಹಂಬಲಗಳನ್ನು ದಾಖಲಿಸಲಾಗಿದೆ. ಅವಳ ಆಸೆಗಳ ಪಟ್ಟಿ ನೋಡಿದರೆ ಓದುಗರಿಗೆ ಅಚ್ಚರಿಯಾಗುವುದು ಖಂಡಿತ.

“ನನ್ನದೇ ಕಾಫಿ ಲೋಟದಲ್ಲಿ ನನ್ನದೇ ಕುರ್ಚಿಯಲ್ಲಿ ಕುಳಿತು ಕಾಫಿ ಕುಡಿಯಬೇಕು”,

“ನನ್ನದೇ ಹಾಸಿಗೆಯ ಮೇಲೆ ನನ್ನದೇ ಕಂಬಳಿ ಹೊದ್ದು ಮಲಗಬೇಕು”,

“ನನ್ನದೇ ಪೈಜಾಮವನ್ನು ತೊಟ್ಟು ನನ್ನ ಮನೆತುಂಬ ಓಡಾಡಿಕೊಂಡಿರಬೇಕು”….. ಇಂಥವು. ನಾವು `ಅಯ್ಯೋ, ಇರುತ್ತೆ ಬಿಡು, ಅದರಲ್ಲೇನು ವಿಶೇಷ ಇದೆʼ ಎಂದು (ಇಂಗ್ಲಿಷ್‌ನಲ್ಲಿ `ಟೇಕನ್ ಫಾರ್ ಗ್ರ್ಯಾಂಟೆಡ್’ ಎನ್ನುತ್ತಾರಲ್ಲ ಹಾಗೆ) ಭಾವಿಸಿ ನಿರ್ಲಕ್ಷ್ಯ ಮಾಡುವ ಸಂಗತಿಗಳಲ್ಲವೇ ಇವು!? ನಾವು ದಿನಾ ಮಾಡುವುದರಿಂದಾಗಿ, ಅವು ನಮಗೆ ದಿನಾ ಲಭ್ಯವಿರುವುದರಿಂದಾಗಿ ಈ ಚಟುವಟಿಕೆ/ವಸ್ತುಗಳ ಮಹತ್ವ ನಮಗೆ ಗೊತ್ತಾಗುವುದಿಲ್ಲವೋ ಏನೊ! ತಮ್ಮ ಅಪಾರ ಜನಪ್ರಿಯತೆಯಿಂದಾಗಿ ಬೀದಿಗಳಲ್ಲಿ ಅನಾಮಿಕವಾಗಿ, ಆರಾಮವಾಗಿ ಓಡಾಡಲಾರದ ಪ್ರಸಿದ್ಧ ಸಿನಿಮಾ ತಾರೆಯರು “ನಿಮಗೆ ಏನು ತುಂಬ ಇಷ್ಟ?” ಎಂದು ಕೇಳಿದಾಗ “ನನಗೆ ರಸ್ತೆ ಬದಿಯಲ್ಲಿ ಬಿಡುಬೀಸಾಗಿ ನನ್ನ ಸ್ನೇಹಿತರೊಂದಿಗೆ ಪಾನಿಪೂರಿ ತಿನ್ನುವುದು ಇಷ್ಟ, ಆದರೆ ಹಾಗೆ ಮಾಡಲು ಸಾಧ್ಯವೇ ಆಗಲ್ಲ ನೋಡಿ” ಎಂದು ಹೇಳುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಈ `ರಸ್ತೆಬದಿ ಪಾನಿಪೂರಿ’ಯ ಖುಷಿಯು ತಮ್ಮ ಕೈಯಲ್ಲಿಯೇ ಇರುವ ಜನರು ಸಿನಿಮಾ ನಟರ `ರಂಗುರಂಗಿನ, ಐಷಾರಾಮಿ’ ಜೀವನ ನೋಡಿ “ಅಹಾ, ಎಂಥ ಖುಷಿಯ ಜೀವನ ಈ ಸಿನಿಮಾ ನಟರದ್ದು. ಅಕಟಕಟಾ ನನಗಿಲ್ಲವೇ …….” ಎಂದು ಅಲವತ್ತುಕೊಳ್ಳುತ್ತಾರೆ!

*****

ಹೌದು, ನಾವು ಮನುಷ್ಯರು ಸರಳತೆಯಿಂದ, ಸರಳ ಖುಷಿಗಳಿಂದ ದೂರ ಸರಿದದ್ದು ಏಕೆ?\ಇದಕ್ಕೆ ಆಧುನಿಕತೆ, ಸುಲಭತೆ, ಪ್ರತಿಷ್ಠೆ, ಅತಿ ಆಲೋಚನೆ ……. ಇಂತಹ ಅನೇಕ ಉತ್ತರಗಳು ಲಭ್ಯ ಇವೆ. ವಿಚಿತ್ರ ಅಂದರೆ ನಾವು ಈಗಾಗಲೇ ಗಮನಿಸಿದಂತೆ ನಾವು ಬಯಸಿದ್ದು ನಮಗೆ ಸಿಕ್ಕಿಬಿಟ್ಟಿತು ಅಂದರೆ ಆ ವಸ್ತುವಿನ ಬಗೆಗೆ ನಮಗಿದ್ದ ಖುಷಿ ಹೊರಟುಹೋಗುತ್ತದೆಯೇ? ಇದಕ್ಕೆ ಕಾರಣ ಏನು?

ಈ ಬಗ್ಗೆ ಇನ್ನೊಂದು ರೀತಿಯಲ್ಲಿ ಆಲೋಚನೆ ಮಾಡುವವರಿದ್ದಾರೆ. ಉದಾಹರಣೆಗೆ “ದ ಹ್ಯಾಪಿನೆಸ್ ಆಫ್ ಪರ್ಸ್ಯೂಟ್’’ – ಕ್ರಿಸ್ ಗಿಲ್ಲಿಬ್ಯೂ ಅವರು ಬರೆದು 2014ರಲ್ಲಿ ಪ್ರಕಟಿಸಿದ ಒಂದು ಪುಸ್ತಕದಲ್ಲಿನ ಚಿಂತನೆ. ಇದರಲ್ಲಿ ಸಂತೋಷವು ವಸ್ತುಗಳನ್ನು ಪಡೆದುಕೊಳ್ಳುವುದರಿಂದ ಸಿಗುತ್ತದೆ ಎಂದು ಭಾಷಿವುದುದಿಲ್ಲ, ಬದಲಾಗಿ, ಜೀವನದಲ್ಲಿ ಒಂದು ಅರ್ಥಪೂರ್ಣ ಸಾಹಸಯಾತ್ರೆಯೊಂದನ್ನು ಅಥವಾ ಸವಾಲೊಂದನ್ನು ಆಯ್ದುಕೊಂಡು ನಿರಂತರವಾಗಿ ಅದನ್ನು ಮಾಡುತ್ತಾ ಅದರಿಂದ ಕಲಿಯುತ್ತಾ ಹೋಗುವುದು ಎಂದು ಭಾವಿಸಲಾಗಿದೆ. “ದ ಪರ್ಪಸ್ ಆಫ್ ಲೈಫ್ ಈಸ್ ಎ ಲೈಫ್ ಆಫ್ ಪರ್ಪಸ್ – ಜೀವನದ ಉದ್ದೇಶ ಅಂದರೆ ಉದ್ದೇಶವುಳ್ಳ ಜೀವನ” ಎಂಬ ಒಳನೋಟ ಇಲ್ಲಿದೆ. ತುಂಬ ಆಸಕ್ತಿ ಹುಟ್ಟಿಸುವ ಪುಸ್ತಕ ಇದು. ಇದರಲ್ಲಿ ಲೇಖಕರು ಸ್ವತಃ ಒಂದು ಸಾಹಸಮಯ ಜೀವನೋದ್ದೇಶ ಹೊಂದಿರುತ್ತಾರೆ, ಅದೇನೆಂದರೆ `ಪ್ರಪಂಚದಲ್ಲಿರುವ ಪ್ರತಿಯೊಂದು ದೇಶಕ್ಕೂ ತಾನು ಒಮ್ಮೆ ಭೇಟಿ ಕೊಡಬೇಕು’ ಎಂಬುದು. ಈ ಸಾಹಸ ಸಂಕಲ್ಪ ಇವರಲ್ಲಿ ಎಷ್ಟು ಉತ್ಸಾಹ ಹುಟ್ಟಿಸುತ್ತದೆಂದರೆ ಅವರ ಸಕಲ ಶಕ್ತಿ, ಸ್ಫೂರ್ತಿಸೆಲೆಗಳನ್ನೂ ಉದ್ದೀಪಿಸಿ ಜೀವನದಲ್ಲಿ ಒಂದೇ ಒಂದು ಬೇಸರದ ಕ್ಷಣ ಇಲ್ಲದಂತೆ ಮಾಡುತ್ತದೆ! ಬೇರೆ ಬೇರೆ ದೇಶಗಳ ಬಗ್ಗೆ ತಿಳಿದುಕೊಳ್ಳುವುದು, ಪ್ರಯಾಣ, ಅಲ್ಲಿನ ಊಟ, ಉಡುಗೆ, ಭೌಗೋಳಿಕತೆ, ಜೀವನಮೌಲ್ಯ, ಅಭ್ಯಾಸ, ವಿಶೇಷಗಳ ಬಗ್ಗೆ ಅರಿಯುವುದು, ಈ ಯಾತ್ರೆಯಲ್ಲಿನ ಕಷ್ಟಸುಖ, ಸವಾಲು, ಏಳುಬೀಳುಗಳು ಪ್ರತಿದಿನವನ್ನೂ ಹೊಸದಾಗಿಸುತ್ತವೆ. ಕೊನೆಯಲ್ಲಿ ತಾನು ಇಂತಹ ಸಾಹಸವನ್ನು ತೃಪ್ತಿಕರವಾಗಿ ಪೂರೈಸಿದೆನೆಂಬ ಸಂತೃಪ್ತಿ ಅವರಿಗೆ ಅಪಾರವಾದ ಸಂತೋಷ ಕೊಡುತ್ತದೆ. ಇದೇ ಕೃತಿಯಲ್ಲಿ ಇನ್ನೊಬ್ಬ ಮಹಿಳೆ ತನ್ನ ಜೀವನದ ಬೇಸರ, ಏಕತಾನತೆಗಳನ್ನು ಹೋಗಲಾಡಿಸುವುದಕ್ಕಾಗಿ ಇಂಗ್ಲಿಷ್ ವರ್ಣಮಾಲೆ ಎ ಯಿಂದ ಝೆಡ್ ವರೆಗೆ ಯಾವ ಯಾವ ದೇಶಗಳಿವೆಯೋ ಅವುಗಳಲ್ಲಿರುವ ವಿಶೇಷ ಅಡುಗೆಗಳನ್ನು ವಾರಕ್ಕೊಂದರಂತೆ ಮಾಡುವುದನ್ನು ತಮ್ಮ ಜೀವನೋದ್ದೇಶವನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಇವರಲ್ಲಿ ಮಾತ್ರವಲ್ಲ, ಇವರ ಮನೆಮಂದಿಯಲ್ಲಿ, ಅಕ್ಕಪಕ್ಕದವರಲ್ಲಿ ಹಾಗೂ ಪರಿಚಿತರಲ್ಲಿ ಸಹ ತುಂಬ ಉತ್ಸಾಹವನ್ನು ಹುಟ್ಟಿಸುತ್ತದೆ! ಒಂದೊಂದೇ ವಾರ ಕಳೆದಂತೆ ಬೇರೆ ಬೇರೆ ದೇಶಗಳ ಹೊಸ ಹೊಸ ಅಡುಗೆ ಮಾಡುತ್ತಾ ಹೋದಂತೆ ಇವರ ಬೇಸರ, ಏಕತಾನತೆ ಹೇಳಹೆಸರಿಲ್ಲದಂತೆ ಮಾಯವಾಗುತ್ತವೆ. ಉತ್ಸಾಹಕ್ಕೆ ಸಾಂಕ್ರಾಮಿಕವಾಗಿ ಹರಡುವ ಗುಣ ಇರುತ್ತದಂತೆ! ಈ ನೂತನಸಾಹಸದಲ್ಲಿ ಇವರಿಗೆ ಮನೆಮಂದಿ, ಪರಿಚಿತರು ಮತ್ತು ಅಂಚೆಯಲ್ಲಿ ವಸ್ತು ತಂದು ಕೊಡುವವರು ಸಹ ಬೆಂಬಲ ಕೊಟ್ಟು ಗುರಿ ತಲುಪುವಲ್ಲಿ ನೆರವಾಗುತ್ತಾರೆ. ಎಷ್ಟು ಸುಂದರ ಸಂಗತಿ ಅಲ್ಲವೆ ಇದು?

*****

ಖುಷಿಯ ಬಗ್ಗೆ ಆಲೋಚಿಸುವಾಗ ಬಹುಶಃ ಎರಡು ವಿಷಯಗಳು ತುಂಬ ಮುಖ್ಯ ಅನ್ನಿಸುತ್ತವೆ.

  1. ತನಗೆ ಏನು ಖುಷಿ ಕೊಡುತ್ತದೆ ಎಂಬುದನ್ನು ವ್ಯಕ್ತಿಯು ಕಂಡುಕೊಳ್ಳುವುದು, ಇದರಲ್ಲಿ ಇನ್ನೊಬ್ಬರ ಅನುಕರಣೆಯು ಉಪಯೋಗಕ್ಕೆ ಬರುವುದಿಲ್ಲ.
  2. ಮನುಷ್ಯನ ಮನಸ್ಸು ಮಂಗನಂಥದ್ದು. ಇರುವುದನ್ನೆಲ್ಲ ಬಿಟ್ಟು ಇರುದುದರೆಡೆಗೆ ತುಡಿಯುವ ಹುಚ್ಚು ಇರುತ್ತದೆ ಅದಕ್ಕೆ. ಉತ್ತಮವಾದ ಆರೋಗ್ಯ, ಶಾಂತಿ-ನೆಮ್ಮದಿಗಳಿರುವ ಮನೆ, ಆರ್ಥಿಕ ಸ್ವಾವಲಂಬನೆ, ದುಡಿಯುವ ಕೈಗಳಿಗೆ ಇರುವ ಕೆಲಸ….. ಇವೆಲ್ಲ ನಿಜಕ್ಕೂ ಖುಷಿ ಪಡಬೇಕಾದ ವಿಷಯಗಳು. ನಮ್ಮ ಬಳಿ ಇರುವುದಕ್ಕಾಗಿ ಕೃತಜ್ಞತಾ ಭಾವನೆಯೊಂದಿಗೆ ಬದುಕಬೇಕು ಅನ್ನಿಸುತ್ತೆ.

 ಈ ಚಿಂತನೆಯ ಸಾರವನ್ನು ತೀರ್ಮಾನ ರೂಪವಾಗಿ ಬಹುಶಃ ಹೀಗೆ ಹೇಳಬಹುದು. `ನಾನು ಖುಷಿಯಾಗಿದ್ದೇನಾ ಇಲ್ಲವಾ?’ ಎಂದು ಪ್ರಶ್ನೆ ಕೇಳುತ್ತಾ ಕುಳಿತರೆ, ತನ್ನ ಬಾಲವನ್ನು ತಾನೇ ಹಿಡಿಯ ಬಯಸುವ ಬೆಕ್ಕಾಗಿಬಿಡುತ್ತೇವೆ! ಇದರಿಂದ ಚಿಂತೆ ಹೆಚ್ಚಾಗುತ್ತದೆಯೇ ಹೊರತು ಖುಷಿ ಹೆಚ್ಚಾಗುವುದಿಲ್ಲ. ಇದರ ಬದಲು ನಮ್ಮನ್ನು ನಾವೇ ಸ್ವತಃ ಪರಿಶೀಲಿಸಿಕೊಂಡು ಏನನ್ನು ಮಾಡುತ್ತಿದ್ದರೆ ಅಥವಾ ಮಾಡಿ ಮುಗಿಸಿದರೆ ನಮ್ಮ ಮನಸ್ಸು ಶಾಂತಿನೆಮ್ಮದಿಯಿಂದ ಇರುತ್ತದೆ ಎಂಬುದನ್ನು ಕಂಡುಕೊಂಡು ಆ ಕೆಲಸದಲ್ಲಿ ಅಥವಾ ಸಾಹಸಪಯಣದಲ್ಲಿ ನಾವು ತೊಡಗಿಬಿಡಬೇಕು ಅಷ್ಟೆ. ಲೋಕೋಭಿನ್ನ ರುಚಿಃ ಎಂದಂತೆ ಲೋಕೋಭಿನ್ನ ಖುಷಿ! ಈಗಾಗಲೇ ನಮ್ಮ ಜೀವನದಲ್ಲಿ ಇರುವ, ದೇವರು ಕರುಣಿಸಿದ ಖುಷಿಗಳನ್ನು ಗುರುತಿಸಿಕೊಂಡು ಅದಕ್ಕೆ ಕೃತಜ್ಞರಾಗಿರುವುದು, ಆ ಬಗ್ಗೆ ನೆಮ್ಮದಿಯಾಗಿರುವುದು, ಇರುವುದನ್ನು ಮರೆತು ಇಲ್ಲದ್ದಕ್ಕಾಗಿ ಹಂಬಲಿಸಿ ಕೊರಗುವ ಮನವೆಂಬ ಮರ್ಕಟನನ್ನು ಆತ್ಮಶಕ್ತಿಯೆಂಬ ಚಾವಟಿ ಬೀಸಿ ಅಂಕೆಯಲ್ಲಿಡುವುದು ಬಹುಶಃ ಈ ದಿಸೆಯಲ್ಲಿ ನಾವಿಡಬಹುದಾದ ಮೊದಲ ಹೆಜ್ಜೆ ಅನ್ನಿಸುತ್ತೆ, ಮುಂದುವರಿದು, ನಮ್ಮ ಅಭಿರುಚಿ, ಆಯ್ಕೆ, ಸ್ವಭಾವಕ್ಕನುಗುಣವಾಗಿ ನಮ್ಮ ಒಳಗನ್ನು ಬೆಳಗುವ `ಕೆಲಸ/ಸಮಯ ತುಂಬುವ ಚಟುವಟಿಕೆ’ಯನ್ನು ಮಾಡುತ್ತಾ ಹೋಗುವುದು ಅಥವಾ ಬದುಕಿನ ಆ ಕ್ಷಣವು ನಮಗೆ ದಯಪಾಲಿಸುವ ಸಂತೋಷವನ್ನು ಹಿಂದುಮುಂದುಗಳ ಚಿಂತೆ ಮಾಡದೆ ಸವಿಯುತ್ತಾ ಸುಮ್ಮನೆ `ಇದ್ದುಬಿಡುವುದು’ ಈ ಖುಷಿಯಾಗಿರುವುದು ಹೇಗೆ? ಎಂಬ ಒಗಟಿಗೆ ಇನ್ನೊಂದು ಉತ್ತರ ಅನ್ನಿಸುತ್ತದೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ