Advertisement
ವಚನಗಳಲ್ಲಿ ಮೌಢ್ಯಗಳ ನಿರಾಕರಣೆ: ಜಯಲಕ್ಷ್ಮಿ ಪಾಟೀಲ್ ಅಂಕಣ

ವಚನಗಳಲ್ಲಿ ಮೌಢ್ಯಗಳ ನಿರಾಕರಣೆ: ಜಯಲಕ್ಷ್ಮಿ ಪಾಟೀಲ್ ಅಂಕಣ

ಸಾಕಷ್ಟು ಜನ ಉದಹರಿಸುವ ಜೇಡರ ದಾಸಿಮಯ್ಯನವರ, ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರುʼ, ಅಲ್ಲಮಪ್ರಭುದೇವರ, ‘ಹೊನ್ನು ಮಾಯೆ ಎಂಬರು’ ವಚನಗಳಲ್ಲದೇ ಇನ್ನೂ ಕೆಲವು ವಚನಗಳಿವೆ. ಕೇವಲ ಶರಣರ ವಚನಗಳಲ್ಲಿ ಮಾತ್ರವಲ್ಲ, ಶರಣೆಯರ ವಚನಗಳಲ್ಲೂ ನೋಡಬೇಕಿರುವುದು ಅವಶ್ಯಕ. ಶರಣೆಯರ ಅಂಥ ವಚನಗಳನ್ನು ಓದುತ್ತಿದ್ದರೆ ಅಬ್ಬಾ ಎನಿಸುತ್ತದೆ! ಕ್ರಾಂತಿಯ ದೊಂದಿಯನ್ನು ನಂದಿಸಲು ದುಷ್ಟ ವ್ಯವಸ್ಥೆ ಯಾಕೆ ಹಪಹಪಿಸಿತು ಎನ್ನುವುದು ನಿಚ್ಚಳವಾಗುತ್ತದೆ. ಕೇವಲ ಗಂಡಸರು ಮಾತ್ರ ಬಂಡೇಳಲಿಲ್ಲ ಆಗ, ಹೆಂಗಸರೂ ವ್ಯವಸ್ಥೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದು, ಗಂಡು ಹೆಣ್ಣೆಂಬುದರಾಚೆ ನಿಂತು ಮಾತಾಡಿದ್ದು, ತಮ್ಮ ಅಸ್ಮಿತೆಯನ್ನು ಸ್ಪಷ್ಟಪಡಿಸಿದ್ದು ನುಂಗಲಾರದ ತುತ್ತಾಗಿರಬೇಕು.
ಜಯಲಕ್ಷ್ಮಿ
ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಏಳನೆಯ ಬರಹ

ಕಾಲ ಸದಾ ಆಧುನಿಕ. ಎಲ್ಲ ಕಾಲಕ್ಕೂ ಆಧುನಿಕತೆಯ ಜೊತೆ ಜೊತೆಗೆನೇ ಮೊದಲಿನಿಂದಲೂ ನಡೆದು ಬಂದ ಅನಿಷ್ಟ ಆಚರಣೆಗಳು, ಪದ್ಧತಿ/ಸಂಪ್ರದಾಯದ ಹೆಸರಲ್ಲಿ ಸಾಕಷ್ಟು ಅಸಮಾನತೆ, ದೌರ್ಜನ್ಯಗಳು ತಳುಕು ಹಾಕಿಕೊಂಡೇ ಬರುತ್ತವೆ. ಅದರಿಂದ ಬಿಡಿಸಿಕೊಂಡವರು, ಅದರಿಂದ ಬಿಡುಗಡೆಗೆ ಅನುವು ಮಾಡಿಕೊಡುವವರು ಕ್ರಾಂತಿಕಾರರು. ಅರಿತೋ ಅರಿಯದೆಯೋ ಆರಂಭದಲ್ಲಿ ಎಲ್ಲರೂ ಮೌಢ್ಯಗಳನ್ನು ಆಚರಿಸುವವರೇ ಆಗಿರುತ್ತಾರೆ. ನಂತರ ಕಾಲಕ್ರಮೇಣ ಅರಿವು ವಿಸ್ತಾರಗೊಳ್ಳುತ್ತಾ ಹೋದಂತೆ ಮೌಢ್ಯಗಳನ್ನು ಕೊಡವಿಕೊಂಡು ಆಧುನಿಕರಾಗುತ್ತಾರೆ. ಅವರಲ್ಲಿ ಕೆಲವರು ಇತರರ ಬಾಳಿಗೂ ಬೆಳಕಾಗುತ್ತಾರೆ.

ಸಾಮಾಜಿಕ ಅಸಮಾನತೆಯಲ್ಲಿ ಸದಾ ಲಿಂಗಬೇಧ, ಜಾತಿ ವರ್ಗಗಳ ಬೇಧ, ಆರ್ಥಿಕ ಬೇಧಗಳು, ವಿಚಾರ ಬೇಧಗಳು ಮುಖ್ಯವಾಗಿ ಕೆಲಸ ಮಾಡುತ್ತಿರುತ್ತವೆ. ಹೆಣ್ಣುಮಕ್ಕಳ ವಿಷಯದಲ್ಲಂತೂ ಜಗತ್ತಿನಾದ್ಯಂತ ನಾವು ಇವತ್ತಿಗೂ ಸಮಾನತೆ ಹಾಗೂ ಹಕ್ಕುಗಳಿಗಾಗಿ ಹೋರಾಡುತ್ತಲೇ ಇದ್ದೇವೆ. ‘ಸ್ತ್ರೀ ಸಂವೇದನೆ’ ಎಂಬುದು ಮಹಿಳೆಯರ ಭಾವನೆಗಳು, ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಆಧರಿಸಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಕಲ್ಪನೆ. ಇದು ಕೇವಲ ಲೈಂಗಿಕ ಸಂವೇದನೆಗೆ ಮಾತ್ರ ಸೀಮಿತವಾಗದೇ. ಶಿಕ್ಷಣ, ಸ್ವಾವಲಂಬನೆ ಮತ್ತು ಸಾಮಾಜಿಕ ಸಮಾನತೆಗಾಗಿಯೂ ಹೋರಾಟದ ಮೂಲಕ ಮಹಿಳೆಯರ ಸಂವೇದನೆಗಳು ಬದಲಾಗುತ್ತಿವೆ ಮತ್ತು ತಮ್ಮದೇ ಆದ ಪ್ರತ್ಯೇಕತೆಯನ್ನು ಕಂಡುಕೊಳ್ಳುತ್ತಿವೆ. ಹೆಣ್ಣುಮಕ್ಕಳ ವೈಚಾರಿಕ ಪ್ರಖರತೆ ಯಾವುದೇ ವಿಧದಲ್ಲೂ ಗಂಡಸರ ವೈಚಾರಿಕತೆಗಿಂತ ಎಳ್ಳಷ್ಟೂ ಕಡಿಮೆ ಇಲ್ಲ. ಆದರೆ ಪುರುಷಾಳ್ವಿಕೆಯ ವ್ಯವಸ್ಥೆ ಏನಿದೆ ಅದು, ಸದಾ ಆ ಪ್ರಖರತೆಯನ್ನು ಅನೇಕ ವಿಧದಲ್ಲಿ ಪ್ರಚುರಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತ ನಡೆದಿದೆ.

ಇದಕ್ಕೆ ಅಪವಾದವೆಂಬಂತೆ ೧೨ನೇ ಶತಮಾನದ ಶರಣರ ಕ್ರಾಂತಿ ಅಥವಾ ವಚನ ಕ್ರಾಂತಿಯ ಒಂದು ಭಾಗ ಸ್ತ್ರೀ ವಿಮೋಚನೆಯೂ ಆಗಿದ್ದು ಅದು ಕೆಲವು ವಚನಕಾರರ ವಚನಗಳಿಂದ ಸ್ಪಷ್ಟವಾಗುತ್ತದೆ. ಸಾಮಾಜಿಕ ಸ್ಥಾನಮಾನ, ಅಕ್ಷರಾಭ್ಯಾಸ, ಸ್ವಾವಲಂಬನೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲದಕ್ಕೂ ಮಹಿಳೆಯರಿಗೆ ಕುಮ್ಮಕ್ಕು ಸಿಕ್ಕಿದ್ದು ಈ ವೇಳೆಯಲ್ಲಿಯೇ. ಇದಕ್ಕೆ ನಿದರ್ಶನವಾಗಿ ಶರಣರ ಅನೇಕ ವಚನಗಳನ್ನು ನಾವು ಕಾಣಬಹುದು. ಈ ವಿಷಯಕ್ಕೆ ಉದಾಹರಣೆಯಾಗಿ ಸಾಕಷ್ಟು ಜನ ಉದಹರಿಸುವ ಜೇಡರ ದಾಸಿಮಯ್ಯನವರ, ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರುʼ, ಅಲ್ಲಮಪ್ರಭುದೇವರ, ‘ಹೊನ್ನು ಮಾಯೆ ಎಂಬರು’ ವಚನಗಳಲ್ಲದೇ ಇನ್ನೂ ಕೆಲವು ವಚನಗಳಿವೆ. ಕೇವಲ ಶರಣರ ವಚನಗಳಲ್ಲಿ ಮಾತ್ರವಲ್ಲ, ಶರಣೆಯರ ವಚನಗಳಲ್ಲೂ ನೋಡಬೇಕಿರುವುದು ಅವಶ್ಯಕ. ಶರಣೆಯರ ಅಂಥ ವಚನಗಳನ್ನು ಓದುತ್ತಿದ್ದರೆ ಅಬ್ಬಾ ಎನಿಸುತ್ತದೆ! ಕ್ರಾಂತಿಯ ದೊಂದಿಯನ್ನು ನಂದಿಸಲು ದುಷ್ಟ ವ್ಯವಸ್ಥೆ ಯಾಕೆ ಹಪಹಪಿಸಿತು ಎನ್ನುವುದು ನಿಚ್ಚಳವಾಗುತ್ತದೆ. ಕೇವಲ ಗಂಡಸರು ಮಾತ್ರ ಬಂಡೇಳಲಿಲ್ಲ ಆಗ, ಹೆಂಗಸರೂ ವ್ಯವಸ್ಥೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದು, ಗಂಡು ಹೆಣ್ಣೆಂಬುದರಾಚೆ ನಿಂತು ಮಾತಾಡಿದ್ದು, ತಮ್ಮ ಅಸ್ಮಿತೆಯನ್ನು ಸ್ಪಷ್ಟಪಡಿಸಿದ್ದು ನುಂಗಲಾರದ ತುತ್ತಾಗಿರಬೇಕು.

ಜೇಡರ ದಾಸಿಮಯ್ಯನವರು ತಮ್ಮ, ‘ಮೊಲೆ ಮೂಡಿ ಬಂದರೆ’ ವಚನದದಲ್ಲಿ ‘ನಡುವೆ ಸುಳಿವಾತ್ಮಾ ಗಂಡೂ ಅಲ್ಲ, ಹೆಣ್ಣೂ ಅಲ್ಲ’ ಎಂದರೆ, ಗೊಗ್ಗವ್ವೆ ಅದೇ ವಚನದ ಮೊದಲಾರ್ಧವನ್ನು ತೆಗೆದುಕೊಂಡು ಮುಂದುವರೆದು, ‘ಈ ಉಭಯದ ಜ್ಞಾನ ಹೆಣ್ಣೋ ಗಂಡೋ?’ ಎಂದು ಪ್ರಶ್ನಿಸುತ್ತಾರೆ!

ಹಾಗೆಯೇ, ‘ಗಂಡು ಮೋಹಿಸಿ ಹೆಣ್ಣ ಹಿಡಿದಡೆ / ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾಗುವುದೆಂದರಿಯಬೇಕು’ ಎಂದು ಹೆಣ್ಣನ್ನು ಸ್ವತ್ತೆಂದು ಭಾವಿಸುವವರ ಎದೆಗೆ ಒದ್ದಂತೆಯೂ ಆಕೆ ಕೇಳುತ್ತಾರೆ.

‘ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ, ಅರಿವಿಂಗೆ ಬೇರೊಂದೊಡಲುಂಟೆ?ʼ ಎಂದು ಪ್ರಶ್ನಿಸುವ ಆಯ್ದಕ್ಕಿ ಲಕ್ಕಮ್ಮ,

‘ಹಿರಿಯತನಕ್ಕೆ ಹೆಣ್ಣೆಂದು ಕರೆದರೆ ಆ ಹೆಣ್ಣುರೂಪಾದ ನಾಮವು ನಿರ್ನಾಮವಯ್ಯ
ಅರಿವನರಿದು ಅಪ್ರತಿಮ ಘನವ ಕಂಡುಳಿದು ಹೆಣ್ಣುತನದ ಮಾತನಳಿದು’ ಎನ್ನುವ ನೀಲಾಂಬಿಕೆ,
‘ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ ಚೆನ್ನಮಲ್ಲಿಕಾರ್ಜುನ’ ಎಂಬ ಆತ್ಮವಿಶ್ವಾಸದ ಮಾತನಾಡುವ ಅಕ್ಕ ಮಹಾದೇವಿ,

ಇವರೆಲ್ಲ ತಮ್ಮ ವಿಚಾರ ಮತ್ತು ಆಚಾರಗಳಲ್ಲಿ ಅದೆಷ್ಟು ಎತ್ತರದಲ್ಲಿದ್ದಾರೆ! ಇದೂ ತಿಳಿದೂ ಹೆಣ್ಣು ಗಂಡೆಂಬ ವೇಷಕ್ಕೇನೇ ನಾವು ಜೋತು ಬಿದ್ದು ಅಹಂಕಾರದ ಮಾತಾಡಿದರೆ, ಅಮುಗೆ ರಾಯಮ್ಮನವರ ಒಂದು ವಚನ ಅಂಥವರ ಕಣ್ತೆರಿಸುವಂತಿದೆ. ಇದು ನನ್ನಿಷ್ಟದ ವಚನಗಳಲ್ಲೊಂದು. ಈ ವಚನದ ಉತ್ತರಾರ್ಧದ,

ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ ನಾನೆ ಕಳೆಯಬೇಕು

ಎಂಬ ಸಾಲುಗಳು ಎಂಥಾ ದರ್ಶನವನ್ನು ನೀಡುವಂಥವು! ಈ ನಾಲ್ಕು ಸಾಲುಗಳಲ್ಲಿನ ಮೊದಲೆರೆಡು ಸಾಲುಗಳಿವೆಯಲ್ಲ ಅವಂತೂ ವ್ಯವಸ್ಥೆಯಡಿಯಲ್ಲಿ, ಸಂಪ್ರದಾಯದ ಹೇರಿಕೆಯಲ್ಲಿ ನಲುಗುತ್ತಿರುವಂಥ ಸ್ತ್ರೀ ಸಮೂಹಕ್ಕೆ ದಿವ್ಯ ಮಂತ್ರಗಳಾಗಬೇಕಾಗಿವೆ.

ಪೂರ್ಣ ವಚನ ಹೀಗಿದೆ.

ಎನ್ನ ಕಣ್ಣೊಳಗಣ ಕಟ್ಟಿಗೆಯ / ಮುರಿವವರನಾರನೂ ಕಾಣೆ
ಎನ್ನ ಕಾಲೊಳಗಣ ಮುಳ್ಳ / ತೆಗೆವವರನಾರನೂ ಕಾಣೆ
ಎನ್ನ ಅಂಗದಲ್ಲಿದ್ದ ಅಹಂಕಾರವ / ಸುಡುವವರನಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ / ಕೆಡಿಸುವವರನಾರನೂ ಕಾಣೆನಯ್ಯಾ
ಆದ್ಯರ ವೇದ್ಯರ ವಚನಂಗಳಿಂದ / ಅರಿದೆವೆಂಬವರು ಅರಿಯಲಾರರು ನೋಡಾ
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ ನಾನೆ ಕಳೆಯಬೇಕು
ಅಮುಗೇಶ್ವರಲಿಂಗವ ನಾನೆ ಅರಿಯಬೇಕು

ನನ್ನೊಳಗೆ ಬೇಡಿಕೆ ಹುಟ್ಟದೆ, ಅದನ್ನು ನಾನು ಪ್ರಕಟಿಸದೇಹೋದರೆ ಎದುರಿನವರು ಅದನ್ನು ಅರಿತಾರಾದರೂ ಹೇಗೆ? ಅದು ಈಡೆರಲು ಅನುಕೂಲಗಳು ಒದಗಿ ಬರುವುದಾದರೂ ಹೇಗೆ? ಎಲ್ಲರೂ ತಮ್ಮ ಸಾಕಷ್ಟು ಅಗತ್ಯಗಳನ್ನು ಸ್ವತಃ ಈಡೇರಿಸಿಕೊಳ್ಳುವಷ್ಟು ಶಕ್ತರಾಗಿರುವುದಿಲ್ಲ, ಇಲ್ಲವೇ ಈಡೇರಿಸಿಕೊಳ್ಳಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣಗೊಂಡು ಅದೊಂದು ಸಾಮಾಜಿಕ ಕಟ್ಟಳೆಯೇ ಆಗಿಬಿಟ್ಟಿರುತ್ತದೆ. ಹೋರಾಡಿ ತಮ್ಮ ಹಕ್ಕುಗಳನ್ನು ಹೊಂದುವವರಿಗಿಂತ ಸಾಮಾಜಿಕ ಕಟ್ಟಳೆಗೆ ಜೋತುಬಿದ್ದು ನರಳುವವರ ಸಂಖ್ಯೆ ಇವತ್ತಿಗೂ ಹೆಚ್ಚಿಗೆ ಇದೆ ಅನ್ನುವುದು ಬೇಸರದ ಸಂಗತಿ.

ಅಂಥಾ ಕಟ್ಟಳೆಗಳ ಚೌಕಟ್ಟಿನಲ್ಲಿಯೂ ದಿಟ್ಟತನದಿಂದ, ತನ್ನ ವೃತ್ತಿ ನಿಷ್ಠೆಯ ಕುರಿತು,

‘ಒತ್ತೆಯ ಹಿಡಿದು ಮುತ್ತೊತ್ತೆಯ ಹಿಡಿಯೆ
ಹಿಡಿದೆಡೆ ಬತ್ತಲೆ ನಿಲಿಸಿ ಕೊಲ್ಲುವರಯ್ಯಾ
ವ್ರತಹೀನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈಕಿವಿ ಮೂಗ
ಕೊಯ್ವರಯ್ಯಾ ಒಲ್ಲೆನೊಲ್ಲೆ ಬಲ್ಲೆನಾಗಿ
ನಿಮ್ಮಾಣೆ ನಿರ್ಲಜ್ಜೇಶ್ವರಾ’ ನುಡಿವ, ನುಡಿದಂತೆ ನಡೆದ ಸಂಕವ್ವೆ ಅವರ ಮನೋಸ್ಥೈರ್ಯ, ನಿರ್ಭಿಡೆ ತಮ್ಮ ತಮ್ಮ ವೃತ್ತಿಯಲ್ಲಿ ಅದೆಷ್ಟು ಜನಕ್ಕಿದ್ದೀತು!

‘ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?’
ಎಂದು ಕೇಳುವ ಉರಿಲಿಂಗಪೆದ್ದಿ ಪುಣ್ಯಸ್ತ್ರೀ ಕಾಳವ್ವೆಯವರ ಎಲ್ಲ ವಚನಗಳೂ ಜಾತಿ ಬೇಧದಿಂದ ಕೂಡಿದ ಸಮಾಜದ ಅಸಮತೋಲನವನ್ನು ಧಿಕ್ಕರಿಸುವಂಥವೇ ಆಗಿವೆ.

ಹೀಗೆ ಹುಡುಕುತ್ತಾ ಹೋದರೆ ಇನ್ನಷ್ಟು ನುಡಿದಂತೆ ನಡೆದವರ ಅರ್ಥಪೂರ್ಣ ವಚನಗಳು ಸಿಕ್ಕಾವು ನಮಗೆ.

ಇದು ೯೦೦ ವರ್ಷಗಳ ಹಿಂದಿನ ಮಾತಾಯ್ತು. ಎಲ್ಲ ರೀತಿಯ ಅನುಕೂಲಗಳು ಇರುವ ಈ ಕಾಲದಲ್ಲಿಯೂ ಅನೇಕ ಕುಟುಂಬಗಳಲ್ಲಿ ಮೂರು ದಿನ ಯಾರನ್ನೂ ಮುಟ್ಟದೇ ಇರುವ, ಸ್ನಾನ ಮಾಡದೇ ಇರುವ, ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಳ್ಳುವಂಥ ಅನುಕೂಲವಿದ್ದೂ ಬಟ್ಟೆಯನ್ನೇ ಬಳಸುವ ಹೆಣ್ಣುಮಕ್ಕಳಿದ್ದಾರೆ! ಗಂಡನನ್ನು ಕಳೆದುಕೊಂಡ ಮಗಳಿಗೆ ಮರುಮದುವೆಯ ಮಾಡುವುದು ಬಿಡಿ, ಹಣೆಬೊಟ್ಟು ಇಟ್ಟುಕೊಳ್ಳಲು, ಹೂ ಮುಡಿಯಲು ನಿಷೇಧ ಹೇರುವ ಪಾಲಕರು ಪೋಷಕರು ಇದ್ದಾರೆ. ಗಂಡನಿಗೆ ಮನೆಗೆಲಸದಲ್ಲಿ ಸಹಾಯ ಕೋರುವ ಹೆಣ್ಣನ್ನು ಜರಿಯುವವರಿದ್ದಾರೆ, ಹೆಣ್ಣಿನ ಉಡುಗೆ ತೊಡುಗೆ ನಡಿಗೆ ಹೀಗೆಯೇ ಇರಬೇಕು ಎಂದು ಫರ್ಮಾನ್ ಹೊರಡಿಸುವವರಂತೂ ಲೆಕ್ಕವೇ ಇಲ್ಲ! ಮತ್ತು ಇಂಥವನ್ನು ತಮಗೆ ತಾವೇ ಹೇರಿಕೊಳ್ಳುವ ಹೆಣ್ಣುಮಕ್ಕಳೂ ಇದ್ದಾರೆ!

ಕೆಲವೊಮ್ಮೆ ಸುಖದ ರೂಪದಲ್ಲಿ ಮತ್ತೆ ಕೆಲವೊಮ್ಮೆ ಅನುಕೂಲಕರವಾಗಿ, ಇನ್ನೊಮ್ಮೆ ಆರಾಮದಾಯಕದ ಆಮಿಷವಾಗಿ ಬಗೆಬಗೆಯ ವೇಷ ಧರಿಸಿ ಕಣ್ಣಲ್ಲಿ ಬೀಳುವ ಈ ಮೌಢ್ಯದ ಧೂಳು ವ್ಯವಸ್ಥೆಯ ದೊಡ್ಡ ರಾಜಕಾರಣ! ಅದು ಆವರಿಸಿಕೊಳ್ಳದಂತೆ, ನಮ್ಮ ಕಣ್ಣೊಳಗಿನ ಕಟ್ಟಿಗೆಯನು ನಾವೇ ಮುರಿಯಬೇಕು, ನಮ್ಮ ಕಾಲಲ್ಲಿ ನೆಟ್ಟ ಮುಳ್ಳನ್ನು ನಾವೇ ತೆಗೆಯಬೇಕು, ನಮ್ಮಲ್ಲಿ ತುಂಬಿಕೊಂಡ ಅಹಂಕಾರವ ನಾವೇ ಸುಡಬೇಕು. ಬೆಳಕ ಮೀಯಬೇಕು.

About The Author

ಜಯಲಕ್ಷ್ಮಿ ಪಾಟೀಲ್

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು' (ಕವನ ಸಂಕಲನ) ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ 'ಬೇಬಿ' (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. 'ಜನದನಿ' (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ  ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ