ಭಾವಚಿತ್ರ

ಅವನೊಬ್ಬನಿದ್ದ ‘ಲೋಗನ್’ ಅಂತ
ಚೆನ್ನಾಗಿಯೇ ತೆಗೆಯುತ್ತಿದ್ದ
ಫೋಟೋ! ನೋಡಿದ ತಕ್ಷಣ
ವಾರೆವ್ಹಾ ಎನ್ನುತ್ತಿದ್ದ ಅಸೂಯೆಯ
ಗೆಳೆಯನೂ ಕೂಡ ‘ಸಖತ್ತಾಗಿದೆ’ ಎಂದು
ಷರಾ ಬರೆಯುತ್ತಿದ್ದ!

ಒಮ್ಮೊಮ್ಮೆ ಪರೀಕ್ಷಿಸುತ್ತಿದ್ದ ತಾಳ್ಮೆ!
‘ಎರಡೂ ಮೊಣಕಾಲುಗಳ
ಮೇಲೆ ಹಸ್ತವಿಟ್ಟು, ತಲೆ
ತುಸು ಎಡಕ್ಕೆ ತಿರುಗಿಸಿ,
ಕೊಂಚ ಕೆಳಕ್ಕೆ ಬಗ್ಗಿಸಿ ಎಂದು.

ನಿಜ ಲೋಗನ್ ತೆಗೆದ ಫೋಟೋ
ಗಳು ಅಗಣಿತ. ಅರ್ಜಿಯ ಜೊತೆ
ಬಸ್ ಪಾಸ್‌ಗೆ, ಐಡಿ ಕಾರ್ಡ್‌ಗೆ
ಸುಮ್ಮನೇ ಖುಷಿಗೆ ಜೊತೆಗೆ
ಮೆಚ್ಚಿದ್ದ ಹುಡುಗಿಗೆ ಕಳಿಸಲು
ಗುಪ್ತ ವಿಳಾಸಕ್ಕೆ

ಈಗೇನು ಬಿಡಿ, ತರಹೇವಾರಿ
ಕ್ಯಾಮರಾಗಳು, ಅದೆಷ್ಟೋ ಪಿಕ್ಸೆಲ್‌ನ
ಮೊಬೈಲ್ ಫೋನ್‌ಗಳು, ಬುಲೆಟ್ ಏರಿ
ಹೆಗಲೇರಿಸಿ ಕೊಂಡೊಯ್ಯುವ AK 47
ನಂತಹುಗಳು

ಆದರೂ ಲೋಗನ್ ನೆನಪಾಗುತ್ತಾನೆ
ಮೊನ್ನೆ ಅಕಸ್ಮಾತ್ ನನ್ನ ಹಳೆಯ
ಊರಿಗೆ ಹೋಗಿದ್ದೆ – ಲೋಗನ್
ನಗುತ್ತಾ, ಗಡ್ಡ ಬಿಟ್ಟುಕೊಂಡಿದ್ದ
ಫ್ಲೆಕ್ಸ್ ಒಂದು ಮರದಲ್ಲಿ
ತೂಗಾಡುತ್ತಿತ್ತು
ನನ್ನ ನೋಡಿ ಕಣ್ಮಿಟುಕಿಸಿ
‘ಹೆಂಗೆ ನಾವು’ ಎಂದ ಹಾಗಾಯಿತು.